ಬುಧವಾರ, 15 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನ್ಯತೆ ದಾಟುವ ಸವಾಲಿನಲ್ಲಿ...

Last Updated 13 ಜುಲೈ 2013, 19:59 IST
ಅಕ್ಷರ ಗಾತ್ರ

ನಗರಿಕರಣದ ಪ್ರಕ್ರಿಯೆ ಅತ್ಯಂತ ತೀವ್ರಗೊಂಡ ಅವಧಿಯೆಂದರೆ ಕಳೆದ ಎರಡು ದಶಕಗಳು. ಹಾಗೆಯೇ ಒಂದು ಕನ್ನಡ ಡಯಸ್ಪೋರಾ ಕೂಡಾ ರೂಪು ಪಡೆದ ಅವಧಿಯಿದು. ಹಾಗೆಂದು ಇದಕ್ಕೂ ಮೊದಲು ಕನ್ನಡದ ಮಟ್ಟಿಗೆ ನಗರ ಪ್ರಜ್ಞೆಯೆಂದು ಇರಲಿಲ್ಲ. ಅಥವಾ ಡಯಸ್ಪೋರಾ ಬದುಕಿನ ತವಕ-ತಲ್ಲಣಗಳು ಕನ್ನಡದೊಳಕ್ಕೆ ಪ್ರವೇಶ ಪಡೆದಿರಲೇ ಇಲ್ಲ ಎಂದಲ್ಲ. ಈ ಎರಡು ದಶಕಗಳ ಅವಧಿಯಲ್ಲಿ ಕನ್ನಡ ಬದುಕಿನ ಬಹುಭಾಗವನ್ನು ಆವರಿಸಿಕೊಂಡ ಈ ಎರಡೂ ವಿದ್ಯಮಾನಗಳಿಗೆ ಬಂದ ಸೃಜನಶೀಲ ಪ್ರತಿಕ್ರಿಯೆಗಳ ಪ್ರಮಾಣ ಮಾತ್ರ ಆಶ್ಚರ್ಯ ಹುಟ್ಟಿಸುವಷ್ಟು ಕಡಿಮೆ.

ಡಯಸ್ಪೋರಾ ಬದುಕಿನ ಸೃಜನಶೀಲ ಆವಿಷ್ಕಾರಕ್ಕೆ ಬಂದರೆ ಕೇವಲ ಬೆರಳೆಣಿಕೆಯ ಲೇಖಕರಷ್ಟೇ ಅದನ್ನು ಕನ್ನಡದ ಸಹಜತೆಯಲ್ಲಿ ಅಭಿವ್ಯಕ್ತಿಸಿದರು. ಇನ್ನುಳಿದವರು ಡಯಸ್ಪೋರಾವನ್ನು ಅರ್ಥ ಮಾಡಿಸಿದ ಮೇಲಷ್ಟೇ ಕಥೆ ಹೇಳಬಹುದು ಎಂಬ ಪೂರ್ವಗ್ರಹದ ಸುಳಿಗೆ ಸಿಕ್ಕಿ ಕಥನವನ್ನು ಕಳೆದುಕೊಂಡು ಬಿಟ್ಟರು. ಸಾಹಿತ್ಯದೊಳಕ್ಕೆ ನಗರವನ್ನು ತರುವಾಗಲೂ ಇಂಥದ್ದೊಂದು ಅನ್ಯತೆ ಬರೆಯುವವನ ಅರಿವೇ ಇಲ್ಲದೆ ಗೋಚರಿಸಿಬಿಡುತ್ತದೆ. ಬಹುಶಃ ಕನ್ನಡದ ಕಥೆ, ಕಾದಂಬರಿಗಳಲ್ಲಿ ದೂರದ ಮುಂಬೈ ಬಂದಷ್ಟು ಸಹಜವಾಗಿ ಬೆಂಗಳೂರು ಮೈದಳೆಯದೇ ಉಳಿದದ್ದರ ಕಾರಣವೂ ಈ `ಅನ್ಯತೆ'ಯ ಒಳಗೇ ಇರಬಹುದೇನೋ?

ನಗರ ಮತ್ತು ಡಯಸ್ಪೋರ ಬದುಕಿಗೆ ಸಂಬಂಧಿಸಿದ ಬಹುಮುಖ್ಯ ಸೃಜನಶೀಲ ಪ್ರತಿಕ್ರಿಯೆಗಳ ಪಟ್ಟಿಗೆ ವಿಕ್ರಮ ಹತ್ವಾರ ಅವರ `ಝೀರೋ ಮತ್ತು ಒಂದು' ಕಥಾ ಸಂಕಲನವನ್ನೂ ಸೇರಿಸಬಹುದು. ಇಲ್ಲಿಯೂ ನಗರವೆಂಬುದು ಕಥೆಗಾರನ ಮಟ್ಟಿಗೆ ಅನ್ಯವೇ. ಆದರೆ ಅದನ್ನು ಅಭಿವ್ಯಕ್ತಿಸುವ ಹಾದಿಯಲ್ಲಿ ಅವರು ಕಂಡುಕೊಳ್ಳುವ ಆತ್ಮೀಯತೆ ಮಾತ್ರ ವಿಶಿಷ್ಟ. ಕಥೆಗಳ ಜೊತೆಗೆ ಇರುವ ಇಸ್ವಿಗಳನ್ನು ನೋಡುತ್ತಾ ಹೋದರೆ ಇಲ್ಲಿರುವ ಅತ್ಯಂತ ಹಳೆಯ ಕಥೆ ಏಳು ವರ್ಷಗಳ ಹಿಂದೆ ಬರೆದದ್ದು.

ಬರೆವಣಿಗೆಯನ್ನು ಕಾಲದ ಪಟ್ಟಿಯಲ್ಲಿಟ್ಟು ನೋಡಿದರೆ ಕಥೆಗಾರನಾಗಿ ವಿಕ್ರಮ್ ಅವರದ್ದು ತಂತ್ರದಿಂದ ವಸ್ತುವಿನೆಡೆಗಿನ ಪಯಣದಂತೆ ಕಾಣಿಸುತ್ತದೆ. ಬೇಂದ್ರೆ ಗುಂಗಿನಲ್ಲಿ ಕಥೆ ಹೊಸ ಕಾಲದ ಸಂಕಟವೊಂದನ್ನು ನಿರ್ವಹಿಸುತ್ತದೆಯಾದರೂ ಕಥೆಗಾರ ಕಥೆಯೊಳಗೂ ಲೇಖಕನಾಗಿ ಬಿಟ್ಟಿರುವುದರಿಂದಲೋ ಅದೊಂದು ಬಗ್ಗೆಯಲ್ಲಿ ಸ್ಪಷ್ಟತೆಯನ್ನು ಕಳೆದುಕೊಂಡುಬಿಟ್ಟಿದೆ. ಹಾಗೆ ನೋಡಿದರೆ `ಕಥಾವಸ್ತು' ಕೂಡಾ ತಂತ್ರದೊಳಗೇ ಮುಳುಗಿ ಹೋಗಿ ಬಿಡಬಹುದಾಗಿದ್ದ ಕಥನ ಸಂವಹನಕ್ಕೆ ಸಂಬಂಧಿಸಿದ ಎಚ್ಚರವೊಂದು ಇಲ್ಲಿದೆ. ಪರಿಣಾಮವಾಗಿ ಥ್ರಿಲ್ಲರ್‌ನಂತೆ ಓದುಗನನ್ನೂ ಒಳಗೊಂಡು ಮುಂದುವರಿಯುತ್ತಲೇ ಕಥನದ ಮತ್ತೊಂದು ಆಯಾಮವನ್ನು ತೆರೆದುಬಿಡುತ್ತದೆ.

ಬೆಂಗಳೂರಿನಲ್ಲಿ ಬದುಕುತ್ತಿರುವವರ ಮಧ್ಯೆ ಬಹಳ ರೂಢಿಯಾಗಿರುವ ನುಡಿಗಟ್ಟೊಂದಿದೆ- `ಊರಿಗೆ ಹೋಗುವುದು'. ಬೆಂಗಳೂರಿನಿಂದ ಹೊರಗೆಲ್ಲಿ ಹೋಗುವುದಿದ್ದರೂ ಈ ಮಾತು ಬಳಕೆಯಾಗುತ್ತದೆ. ಇದರ ಧ್ವನಿಯಲ್ಲಿ `ಬೆಂಗಳೂರು ಊರಲ್ಲ' ಎಂಬ ಅರ್ಥವೂ ಇದೆ. ಸೃಜನಶೀಲ ಅಭಿವ್ಯಕ್ತಿಯ ವಿಚಾರಕ್ಕೆ ಬಂದಾಗಲೆಲ್ಲಾ ಕನ್ನಡದ ಮಟ್ಟಿಗೆ ನಗರ `ಊರಲ್ಲ'. ಹಾಗಾಗಿ ವಿಕ್ರಮ ಹತ್ವಾರ ಕೂಡಾ `ಊರಿಗೆ ಹೋಗುತ್ತಾರೆ'. ಆದರೆ ಅವರಲ್ಲಿ `ನಾಗರಿಕ'.

ಅವರಿರುವ ನಿತ್ಯದೊಳಗೆ ಹೇಗೆ `ಅನ್ಯ'ನೋ ಹಾಗೆಯೇ ನಾಸ್ಟಾಲ್ಜಿಯಾದಲ್ಲಿ ಅಷ್ಟೇ ಉಳಿದಿರುವ `ಊರಿ'ನಲ್ಲೂ ಅವರು ಅನ್ಯರೇ. ಇನ್ನೇನು ಈ ಅನ್ಯತೆಯನ್ನು ದಾಟುವ ಕ್ಷಣ ಬಂದೇಬಿಟ್ಟಿತು ಎನ್ನಿಸುವಂಥ ಕ್ಷಣಗಳು ಕೆಲವು ಕಥೆಗಳಲ್ಲಿವೆ. `ಪೇಣಿ' ಇದಕ್ಕೊಂದು ಒಳ್ಳೆಯ ಉದಾಹರಣೆ. ಸಾವಿತ್ರಮ್ಮ ಪೇಣಿಯನ್ನು ಮುರಿದು ಬಾಯಿಗಿಡುವ ಬದಲಿಗೆ ನೆಲಕ್ಕೆ ಚೆಲ್ಲಿಬಿಡುವಲ್ಲಿಗೆ ಮತ್ತೆ `ನಾಗರಿಕ' ಅನ್ಯನಾಗಿ ಬಿಡುತ್ತಾನೆ. `ಕನಕಾಭಿಷೇಕ'ವೂ ಹೊಸ ಕಾಲದ ದ್ವಿಮುಖಿ ಅನ್ಯತೆಯನ್ನು ಬಹಳ ಶಕ್ತವಾಗಿ ಅಭಿವ್ಯಕ್ತಿಸುವ ಕಥೆ.

`ಸೀಮೋಲ್ಲಂಘನ'ದ ಚಾಂದ್ ಅಥವಾ ಚಂದ್ರಕಾಂತ್‌ಗೆ ಒಂದು ಬಗೆಯಲ್ಲಿ ಲಂಕೇಶರ `ಉಮಾಪತಿ'ಗಿದ್ದ ಎಲ್ಲಾ ಕೀಳರಿಮೆಗಳೂ ಇವೆ. ಆದರೆ ಅವನಿಗಿದ್ದ ಸಿಟ್ಟು ಮಾತ್ರ ಇವನ ಯಾತ್ರೆಯಲ್ಲಿ ಇಲ್ಲ. ಇಡ್ಲಿ ಚಿತ್ರಾನ್ನ ಮಾರುವ ಚಿಕ್ಕಪ್ಪನಿಗೆ ಸಹಾಯ ಮಾಡುತ್ತಲೇ ಬೆಳೆದ ಚಾಂದ್‌ಗೆ ವೃತ್ತಿಯ ಮೆಟ್ಟಿಲುಗಳನ್ನೇರುವುದಕ್ಕೆ ಬೇಕಿರುವ `ಚಾಲೂ'ತನ ಅವನಿಗೆ ಅರಿವಿಲ್ಲದಂತೆಯೇ ಬಂದಿದೆ.

ಬ್ರಾಹ್ಮಣರು ಬಂದರೆ ಬದಿಗೆ ಸರಿದು ನಿಲ್ಲುವ ಚಾಂದ್‌ಗೆ ಅಮೆರಿಕಕ್ಕೆ ಹೋದರೆ ಹೆಬ್ಬಾರರ ಮನೆಯ ಸುಧೀಂದ್ರನ ಜೊತೆಗೇ ಇರಬಹುದೆಂಬ ಧೈರ್ಯವೂ ಇದೆ. ಅವನ ನಿಜವಾದ ಪರೀಕ್ಷೆ ಎದುರಾಗುವುದು ಅಮೆರಿಕಕ್ಕೆ ಬೇಕಾದ ವೀಸಾ ಸಂದರ್ಶನದಲ್ಲಿ. ಬಾಯಿಪಾಠ ಮಾಡಿ ಇಂಗ್ಲಿಷ್‌ನಲ್ಲಿ ಓದಿನುದ್ದಕ್ಕೂ ಜಯಿಸಿದಂತೆ ಇಲ್ಲಿಯೂ ಚಾಂದ್ ಜಯಿಸಿಬಿಡುತ್ತಾನೆ. ಬಹುಶಃ ಇದು ಉಮಾಪತಿ ಸೋತು ಬಿಡಬಹುದಾಗಿದ್ದ ಸಂದರ್ಶನ. ಈ ಕಥೆ ತನ್ನ ಸೀಮೆಗಳನ್ನು ಉಲ್ಲಂಘಿಸುವುದೇ ಈ ಹೊಳಹಿನಿಂದ.

`ಅನಾಮಿಕ' ಮತ್ತು `ವಿಮುಖ' ಎಂಬ ಎರಡೂ ಕಥೆಗಳೂ ವರ್ಚುವಲ್ ಜಗತ್ತಿನೊಂದಿಗೆ ಸಂಬಂಧ ಹೊಂದಿರುವವು. ಅನಾಮಿಕ ಒಂದು ಬಗೆಯಲ್ಲಿ ಡಯಸ್ಪೋರಾ ಬದುಕಿನ ತಲ್ಲಣವೊಂದನ್ನು ವರ್ಚುವಲ್ ಜಗತ್ತಿನ ಸಂವಹನದ ಜೊತೆಗೆ ಬೆಸೆದು ಹೇಳಿದ ಕಥೆ. ಹಾಗೆಯೇ `ವಿಮುಖ' ಒಂದು ಫೇಸ್‌ಬುಕ್ ಚರ್ಚೆ ಸಣ್ಣದೊಂದು ಊರಿನಲ್ಲಿ ಸೃಷ್ಟಿಸಿಬಿಡಬಹುದಾದ ಸಂಘರ್ಷವೊಂದನ್ನು ಸುಲಲಿತವಾಗಿ ಹೇಳುವ ಕಥೆ. ಈ ಎರಡರಲ್ಲಿಯೂ ಲೇಖಕರು `ಊರಿಗೆ ಮರಳುವ' ಕ್ರಿಯೆಯ ಮತ್ತೊಂದು ಆಯಾಮವಿದೆ. ಆದರೆ ಇದನ್ನು ನಾಸ್ಟಾಲ್ಜಿಯಾದ ಹಳಹಳಿಕೆಯಾಗಿಸಿ ಮೌಲ್ಯಗಳನ್ನು ಮಥಿಸುವುದರ ಬದಲಿಗೆ ನಿತ್ಯವನ್ನು ತಣ್ಣಗೆ ಹೇಳುವಲ್ಲಿ ಕಥೆಗಾರನ ಗೆಲುವಿದೆ.

ಸಂಕಲನದ ಎಲ್ಲಾ ಕಥೆಗಳೂ ಒಂದಲ್ಲ ಒಂದು ಬಗೆಯಲ್ಲಿ ಹೊಸ ದಾರಿಯೊಂದರಲ್ಲಿ ಸಾಗುವ ಉತ್ಸಾಹವನ್ನು ತೋರುತ್ತವೆಯಾದರೂ ಆ ಹಾದಿ ಸಂಪೂರ್ಣವಾಗಿ ಹೊಸತಲ್ಲ ಎಂಬುದನ್ನೂ ನೆನಪಿಸುತ್ತವೆ. ತಂತ್ರ ಮತ್ತು ಭಾಷೆಯ ಮಟ್ಟಿಗೂ ಈ ಮಿತಿಗಳಿವೆ. ಈ ಸೀಮೋಲ್ಲಂಘನ ವಿಕ್ರಮ್ ಹತ್ವಾರ್‌ಗೆ ಬಹಳ ಕಷ್ಟದ್ದೇನೂ ಅಲ್ಲ ಎಂಬ ಭರವಸೆಯನ್ನಂತೂ ಈ ಸಂಕಲನ ಹುಟ್ಟಿಸುತ್ತಿದೆ.

ಝೀರೋ ಮತ್ತು ಒಂದು
ಲೇ: ವಿಕ್ರಮ ಹತ್ವಾರ್
ಪು: 178; ಬೆ: ರೂ. 90
ಪ್ರ: ಸಾಗರ ಪ್ರಕಾಶನ, ನಂ. 695, 10ನೇ ಮುಖ್ಯರಸ್ತೆ, 80 ಅಡಿರಸ್ತೆ, ವಿನಾಯಬಡಾವಣೆ, ನಾಗರಬಾವಿ 2ನೇ ಹಂತ, ಬೆಂಗಳೂರು:72

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT