ಸೋಮವಾರ, 13 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡ ಕನ್ನಡಿಯಲ್ಲಿ ವಿಶ್ವಕವಿಯ ಬಿಂಬ

Last Updated 23 ಜೂನ್ 2012, 19:30 IST
ಅಕ್ಷರ ಗಾತ್ರ

ಕವಿ ರವೀಂದ್ರನಾಥ ಟ್ಯಾಗೋರರು ಹುಟ್ಟಿ 150 ವರ್ಷಗಳು ಮುಗಿದ ಈ ಸಂದರ್ಭದಲ್ಲಿ ಕನ್ನಡದಲ್ಲಿ ಟ್ಯಾಗೋರರನ್ನು ಕುರಿತಾಗಿ ಹಲವಾರು ಪುಸ್ತಕಗಳು ಈಗ ಬರುತ್ತಿವೆ. ಹಿಂದೆ ಟ್ಯಾಗೋರರನ್ನು ಭಾಷಾಂತರ ಮಾಡಿದವರನ್ನು ನೆನಪಿಸಿಕೊಳ್ಳುತ್ತಿದ್ದಾರೆ ಮತ್ತು ಅಂಥವರ ಭಾಷಾಂತರಗಳಿಗೆ ಈಗ ಮರು ಪ್ರಕಟಣೆಯ ಭಾಗ್ಯ ಒದಗಿಬರುತ್ತಿದೆ.

ಈ ಪುಸ್ತಕದ ಪ್ರಾರಂಭದಲ್ಲಿ ಇದರ ಸಂಪಾದಕರಾದ ಹರಿಹರಪ್ರಿಯರು ಕೆಲವು ಮೌಲಿಕ ಮಾತುಗಳನ್ನು ಹೇಳಿದ್ದಾರೆ. ಬಂಗಾಳದ ಸಾಹಿತ್ಯ ಚರಿತ್ರೆಯನ್ನು ಸಂಕ್ಷಿಪ್ತವಾಗಿ ಹೇಳುತ್ತಾ ಅವರು ಈ ಪ್ರಶ್ನೆಗಳನ್ನು ಕೇಳುತ್ತಾರೆ: “....ಸಾಮಾಜಿಕ, ಸಾಂಸ್ಕೃತಿಕ ಇತ್ಯಾದಿ ಯಾವುದೇ ರಂಗಗಳಲ್ಲಿ ಕಾಣಿಸಿಕೊಂಡ ಪ್ರತಿಭೆ, ತತ್ವ, ಹೋರಾಟ ತನ್ನ ಸ್ಥಾಪಿತ ಚಟುವಟಿಕೆ ಪೂರೈಸಿದ ನಂತರ, ಅದರೊಳಗಿನಿಂದಲೇ ನುಗ್ಗಿಬರುವಂತಹುದು, ಶತ್ರು ಪಕ್ಷವೊ? ವಿರೋಧಿ ಶಕ್ತಿಯೊ? ಅದೇ ಕಾಲನ ಅವಶ್ಯಕತೆ, ಪರಿಸ್ಥಿತಿಯ ಅನಿವಾರ್ಯತೆ, ಸಾಮಾಜಿಕ ಆಯ್ಕೆ.” ಟ್ಯಾಗೋರರು ಉದಯಿಸಿದ್ದು ಕೂಡ ಹೀಗೆಯೇ.
 
ಕನ್ನಡದಲ್ಲಿಯೂ ಇದು ಹೇಗಾಯಿತು ಎಂದು ಹರಿಹರ ಪ್ರಿಯರು ವಿವರಿಸುತ್ತಾರೆ. ಟ್ಯಾಗೋರರ ಪ್ರಸಿದ್ಧ ಪ್ರಾರ್ಥನೆ ಬಂಗಾಲಿಯಲ್ಲಿದೆ. ಅದರ ಬಂಗಾಲಿ ಹೆಸರು `ಕೊರೊ ಜಾಗರಿತ~. ಇದನ್ನು ಟ್ಯಾಗೋರರೇ ಇಂಗ್ಲಿಷಿಗೆ ಭಾಷಾಂತರಿಸಿದರು. ಅದರ ಮೊದಲ ಸಾಲು ‘Where the mind is without fear’ ಎಂದಿದ್ದು ಅದೇ ಆ ಪದ್ಯದ ಶಿರೋನಾಮೆಯೂ ಆಗಿದೆ. ಈ ಪದ್ಯದ ಒಟ್ಟು ಇಪ್ಪತ್ತೇಳು ಭಾಷಾಂತರಗಳು ಈ ಪುಸ್ತಕದಲ್ಲಿವೆ.

ಇದರಲ್ಲಿ ನಮ್ಮ ಹಿಂದಿನ ತಲೆಮಾರಿನವರಿಂದ ಹಿಡಿದು ಇಂದಿನ ತಲೆಮಾರಿನವರೆಗಿನವರ ಭಾಷಾಂತರಗಳಿದ್ದು ಭಾಷೆಯ ಪ್ರಯೋಗವು ಕನ್ನಡದಲ್ಲಿ ಕಾಲಕಾಲಕ್ಕೆ ಹೇಗೆ ಬದಲಾಗಿದೆ ಎಂಬುದನ್ನು ಕೂಡ ಈ ಭಾಷಾಂತರಗಳು ತೋರಿಸುತ್ತವೆ. ಟ್ಯಾಗೋರರ ಒಂದೇ ಕವನದ ಇಷ್ಟೊಂದು ಭಾಷಾಂತರಗಳು ಒಂದೇ ಕವನವನ್ನು ಬೇರೆ ಬೇರೆ ಸಂವೇದನೆಯವರು ಬೇರೆ ಬೇರೆ ರೀತಿಯಾಗಿ ನೋಡಿರುವ ಸಾಧ್ಯತೆಗಳೂ ಇಲ್ಲಿ ವಿಫುಲವಾಗಿ ದೊರೆಯುತ್ತವೆ. ಅರ್ಥ ಒಂದೇ, ಆದರೆ ನೋಡಿರುವ ದೃಷ್ಟಿ ವಿಭಿನ್ನ.

ನವೋದಯ, ನವ್ಯ ಮತ್ತು ನವ್ಯೋತ್ತರ ಸಾಹಿತಿಗಳ ಈ ಭಾಷಾಂತರಗಳಲ್ಲಿ ಆಯಾ ಕಾಲದಲ್ಲಿ ಪ್ರಚಲಿತವಿದ್ದ ಕಾವ್ಯ ಭಾಷೆಯ ಪ್ರಯೋಗವೇ ಇದೆ. ಆದರೆ ಆಯಾ ಕಾಲದ ಕನ್ನಡದ ಕವಿಗಳು ಮಾಡಿದ ಭಾಷಾಂತರಗಳಲ್ಲಿ ಸಹಜವಾಗಿ ಗೇಯತೆ ಇದೆ. ಹೀಗಾಗಿ ಗೋವಿಂದ ಪೈ, ಮಾಸ್ತಿ, ಪ್ರಹ್ಲಾದ ನೆರೇಗಲ, ಚಂದ್ರಶೇಖರ ಪಾಟೀಲ, ವಿ.ಕೃ. ಗೋಕಾಕ, ಸಿಪಿಕೆ ಮತ್ತು ಎನ್.ಎಸ್. ಲಕ್ಷ್ಮೀನಾರಾಯಣಭಟ್ಟರ ಅನುವಾದಗಳು ಕನ್ನಡ ಕಾವ್ಯಲೋಕಕ್ಕೆ ಹೆಚ್ಚು ಸಮೀಪವಾದ ಅನುವಾದಗಳಾಗಿವೆ.

ಈ ಪುಸ್ತಕದ ಗದ್ಯಭಾಗದಲ್ಲಿ ಕುವೆಂಪು, ಮಾಸ್ತಿ ಶಿವರುದ್ರಪ್ಪ, ಕೆ.ಬಿ. ಪ್ರಭುಪ್ರಸಾದ, ಬಿ.ದಾಮೋದರರಾವ್ ಮತ್ತು ಡಿ.ಎಸ್. ಕರ್ಕಿಯವರು ಟ್ಯಾಗೋರರನ್ನು ಕುರಿತಾಗಿ ಬರೆದ ಮೌಲಿಕ ಲೇಖನಗಳಿವೆ. ಇದಲ್ಲದೆ ಲೀಲಾ ಮುಜುಂದಾರ್ ಟ್ಯಾಗೋರರ ಜೀವನವನ್ನು ತಾವು ಸ್ವತಃ ಕಂಡಂತೆ ಬರೆದ ಲೇಖನ, ಮಾರ್ಜರಿ ನೈಕ್ಸ್ ಟ್ಯಾಗೋರರ ಅಂತಿಮ ದಿನಗಳನ್ನು ಕುರಿತಾಗಿ ಬರೆದ ಲೇಖನ, ಡಬ್ಲ್ಯು.ಬಿ. ಯೇಟ್ಸ್ `ಗೀತಾಂಜಲಿ~ಗೆ ಬರೆದ ಜಗತ್ಪ್ರಸಿದ್ಧ ಮುನ್ನುಡಿ ಮತ್ತು ಟ್ಯಾಗೋರರು ನೊಬೆಲ್ ಪ್ರಶಸ್ತಿ ಸ್ವೀಕರಿಸಿದಾಗ ಮಾಡಿದ ಭಾಷಣ- ಇವುಗಳು ಸಹ ಇಲ್ಲಿವೆ. ಟ್ಯಾಗೋರರ ಒಂದು ಪದ್ಯದ ಅನುವಾದಗಳಂತೆ ಈ ಲೇಖನಗಳೂ ಟ್ಯಾಗೋರರ ಜೀವನ ಮತ್ತು ಸಾಹಿತ್ಯದ ಮೇಲೆ ಒಳನೋಟಗಳನ್ನು ನೀಡುತ್ತವೆ.

ಯೇಟ್ಸ್‌ನ ಮೂಲ ಮುನ್ನುಡಿಯಲ್ಲಿ ಇಂಗ್ಲಿಷ್ ಭಾಷೆಯ ಅದ್ಭುತ ಓಘವಿದೆ. ಜಿ. ರಾಮನಾಥ ಭಟ್‌ರು ಮಾಡಿದ ಆ ಮುನ್ನುಡಿಯ ಭಾಷಾಂತರದಲ್ಲಿ ಮೂಲದ ಆ ಓಘ ಕನ್ನಡದಲ್ಲಿ ಇಳಿದು ಬಂದಿಲ್ಲ. ಆದರೆ ಈ ಭಾಷಾಂತರದ ಕೊನೆಯಲ್ಲಿ ಕೊಟ್ಟ ಮಾಹಿತಿಯಲ್ಲಿಯ ಕೆಲವು ವಿಷಯಗಳು ಆಶ್ಚರ್ಯವನ್ನುಂಟು ಮಾಡುತ್ತವೆ.

ಈ ವಿಷಯವನ್ನು ಗಮನಿಸಿರಿ: `ಡಬ್ಲ್ಯು.ಬಿ. ಯೇಟ್ಸ್‌ಗೆ ಹತ್ತೊಂಬತ್ತನೆಯ ಶತಮಾನದ ಕೊನೆಯ ದಶಕದಲ್ಲಿ ಮಾಟ ಮಂತ್ರ, ತಂತ್ರವಿದ್ಯೆ, ಮಾಯಾವಿದ್ಯೆ, ಅತೀಂದ್ರಿಯ ಯೋಗ ಇತ್ಯಾದಿಗಳಲ್ಲಿ ವಿಶೇಷವಾದ ಆಸಕ್ತಿ ಬೆಳೆಯತೊಡಗಿತು. ಹೀಗಾಗಿ ಹಿಂದೂ ಧರ್ಮದಲ್ಲೂ ಅವನು ವಿಶೇಷ ಆಸಕ್ತಿ ವಹಿಸಲು ಪ್ರಾರಂಭಿಸಿದನು. ರವೀಂದ್ರನಾಥ ಠಾಕೂರರ ಗೀತಾಂಜಲಿಯನ್ನೋದಿದ ಮೇಲೆ ಈ ಎಲ್ಲ ವಿಷಯಗಳ ಬಗ್ಗೆ ಅವರಿಂದ ಹೆಚ್ಚಿನ ಜ್ಞಾನವನ್ನು ಪಡೆಯಬಹುದೆಂದು ನಿರೀಕ್ಷಿಸಿದ್ದನು.

ಆದರೆ ರವೀಂದ್ರನಾಥ ಠಾಕೂರರು ಇವೆಲ್ಲ ತಾಮಸೀ ವೃತ್ತಿಗಳೆಂದು ಅವುಗಳ ಬಗ್ಗೆ ತಾತ್ಸಾರ ಭಾವನೆಯನ್ನು ತಳೆದಿದ್ದರೆಂದು ಕ್ರಮೇಣ ತಿಳಿದು ಯೇಟ್ಸ್‌ಗೆ ನಿರಾಶೆಯಾಯಿತು. ಇದರೊಂದಿಗೆ ತನ್ನ ಮುನ್ನುಡಿಯಿಂದಲೇ ಠಾಕೂರರಿಗೆ ನೊಬೆಲ್ ಪ್ರಶಸ್ತಿ ದೊರೆಯಿತೆಂಬ ಅಹಂಭಾವ ಅವನಲ್ಲಿ ಮೂಡಿ ತನಗೆ ಈ ಪ್ರಶಸ್ತಿ ಸಿಗಲಿಲ್ಲವೆಂಬ ನಿರಾಸೆಯೂ ಬೆಳೆಯತೊಡಗಿತು~.

ಈ ಮಾಹಿತಿಯು ಏಕೆ ವಿಶೇಷ ಮಹತ್ವ ಪಡೆಯುತ್ತದೆಂದರೆ, ಟ್ಯಾಗೋರರಿಗೆ ಶುದ್ಧ ಪ್ರೇಮವೆಂದರೇನು ಮತ್ತು ತಾಮಸಿ ವೃತ್ತಿ ಎಂದರೇನು ಎಂಬುದರ ಬಗ್ಗೆ ಸ್ಪಷ್ಟ ಅರಿವಿತ್ತು ಎಂಬುದನ್ನು ಇದು ಓದುಗರ ಗಮನಕ್ಕೆ ತರುತ್ತದೆ.

ಈ ಪುಸ್ತಕದ ಸಂಪಾದಕರಾದ ಹರಿಹರಪ್ರಿಯರು ಪ್ರಾರಂಭದಲ್ಲಿ ಬರೆದ ಮಾತುಗಳಲ್ಲಿ ಹಲವಾರು ಮಹತ್ವದ ವಿಷಯಗಳಿವೆ. ಅಲ್ಲದೆ ಇಂಥ ಒಂದು ಗ್ರಂಥವನ್ನು ಸಿದ್ಧಪಡಿಸುವಾಗ ಇರಬೇಕಾದ ಸದಭಿರುಚಿ ಮತ್ತು ಆಯ್ಕೆಯಲ್ಲಿಯ ವಿಚಕ್ಷಣೆ ಇವೆರಡೂ ಅವರಲ್ಲಿವೆ. 

ವಿಶ್ವಕವಿ `ಗೀತಾಂಜಲಿ~: ಕನ್ನಡಗಳ ಸಂವೇದನೆ
ಸಂ:
`ಪುಸ್ತಕಮನೆ~ ಹರಿಹರಪ್ರಿಯ
ಪು: 204; ಬೆ: ರೂ. 160
ಪ್ರ: ಅಕ್ಷರ ಪ್ರಿಂಟರ್ಸ್ ಪಬ್ಲಿಷರ್ಸ್‌, ಗೋವಿಂದರಾಜನಗರ, ಬೆಂಗಳೂರು-40.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT