ಭಾನುವಾರ, 12 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪದ್ಯ ಸರಳ, ಚಿಂತನೆ ವಿಶಾಲ

Last Updated 27 ಆಗಸ್ಟ್ 2011, 19:30 IST
ಅಕ್ಷರ ಗಾತ್ರ

ಸುಚೇತನ ಸ್ವರೂಪರ `ಚಂದ್ರನಿಗೊಂದು ಟಿಕೆಟ್ ಪ್ಲೀಸ್~ ಸಂಕಲನದಲ್ಲಿ ಒಟ್ಟು ಅರವತ್ಮೂರು ಕವನಗಳಿವೆ. ತಮ್ಮ ಮೊದಲ ಸಂಕಲನ `ಮೋಹಿನಿ ಕನಸು~ ಪ್ರಕಟಿಸಿದ ಹತ್ತು-ಹನ್ನೆರಡು ವರ್ಷಗಳ ನಂತರ ಈ ಸಂಕಲನ ಹೊರತರುತ್ತಿರುವುದಾಗಿ ಕವಿ ತಿಳಿಸಿದ್ದಾರೆ.
 
ಸಂಕಲನಕ್ಕೆ `ಒಂದು ಮಾತು~ ಎಂದು ಪ್ರೊ. ಸಿ.ಎನ್. ರಾಮಚಂದ್ರನ್, `ಎರಡು ಮಾತು~ ಎಂದು ಡಿ.ವಿ.ರಾಜಶೇಖರ್ ಮತ್ತು `ಚಂದ್ರಮಂಡಲಕ್ಕೊಂದು ಪ್ರವೇಶ~ ಎಂದು ಸಿ.ನಾಗಣ್ಣ ದೀರ್ಘವಾದ ಮುನ್ನುಡಿ ಬರೆದಿದ್ದಾರೆ.

ಇದಲ್ಲದೆ ಕವನ ಸಂಕಲನದ ಕೊನೆಯಲ್ಲಿ ಕವಿಯೇ `ಮಾತಲ್ಲದ ಮಾತು~ ಎಂಬ ಶೀರ್ಷಿಕೆಯಡಿ, ಇಂದಿನ ಕನ್ನಡ ಕಾವ್ಯ ಎದುರಿಸುತ್ತಿರುವ ಬಿಕ್ಕಟ್ಟುಗಳನ್ನು ಕುರಿತು ದೀರ್ಘವಾದ ಲೇಖನವನ್ನೂ ಬರೆದಿದ್ದಾರೆ. ಇಷ್ಟು ಗದ್ಯವನ್ನು ಓದಿಕೊಂಡು ಇಲ್ಲಿಯ ಕವನಗಳನ್ನು ಪ್ರವೇಶಿಸುವಾಗ ಓದುಗನಲ್ಲಿ ಹಲವಾರು ನಿರೀಕ್ಷೆಗಳು ಸಹಜವಾಗಿ ಹುಟ್ಟುತ್ತವೆ.

ಸಂಕಲನದ ಶೀರ್ಷಿಕೆಯಾಗಿರುವ `ಚಂದ್ರನಿಗೊಂದು ಟಿಕೆಟ್ ಪ್ಲೀಸ್~ ಕವನವನ್ನೇ ಮೊದಲು ಪರೀಕ್ಷಿಸಬಹುದು. ಈಗ ಜಗತ್ತಿನಲ್ಲಿ ಏನೆಲ್ಲ ಕೆಟ್ಟಿದೆಯೋ ಅದನ್ನು ಮತ್ತೆ ಚಂದ್ರನ ಮೇಲೆಯೂ ಸ್ಥಾಪಿಸುವುದಕ್ಕಾಗಿ ಜನರು ಚಂದ್ರನಿಗೊಂದು ಟಿಕೆಟ್ ಬುಕ್ ಮಾಡುತ್ತಿದ್ದಾರೆ ಎಂಬ ಭಾವವು ಈ ಕವನದ ಕೇಂದ್ರದಲ್ಲಿದೆ.
 
ಅಂದರೆ ಇಲ್ಲಿಯ ಸ್ಥಾಯಿ ಭಾವ ವ್ಯಂಗ್ಯವೇ. ನವ್ಯರ ಕಾಲದಲ್ಲಿ ಮೂದಲಿಕೆ ಮತ್ತು ವ್ಯಂಗ್ಯ ಇವು ಬಹಳ ಮುಖ್ಯವಾದ ಸ್ಥಾನವನ್ನು ಪಡೆದುಕೊಂಡವು. ನಂತರ ಕನ್ನಡ ಕಾವ್ಯಲೋಕಕ್ಕೆ ವ್ಯಂಗ್ಯದ ಸೀಮಿತತೆಯ ಅರಿವು ಉಂಟಾಗಿ ಅದು ಬೇರೆ ದಿಕ್ಕನ್ನು ಹಿಡಿಯಿತು.
 
ಅಸಮಾಧಾನವನ್ನು ವ್ಯಕ್ತಪಡಿಸಲು ಕಾವ್ಯವು ಹೇಳಿದ್ದಕ್ಕಿಂತ, ಹೇಳದಿರುವುದರ ಮೂಲಕವೇ ಮತ್ತೆ ತನ್ನ ಧ್ವನಿಗುಣವನ್ನು ಪಡೆಯಿತು. ಸುಚೇತನ ಸ್ವರೂಪರ ಎಲ್ಲ ಕವನಗಳನ್ನು ಓದಿದ ನಂತರ ಧ್ವನಿಗುಣದ ಕೊರತೆ ಎದ್ದು ಕಾಣುತ್ತದೆ. ಇದನ್ನು ಸಿ.ಎನ್.ರಾಮಚಂದ್ರನ್ ಮತ್ತು ಸಿ.ನಾಗಣ್ಣನವರು ತಮ್ಮ ಮಾತುಗಳಲ್ಲಿ ಸೂಚ್ಯವಾಗಿ ತಿಳಿಸಿದ್ದಾರೆ.

ಇಲ್ಲಿಯ ಕವನಗಳಲ್ಲಿ ಸಾಮಾಜಿಕತೆ, ನಿಸರ್ಗ ಪ್ರೀತಿ ಮತ್ತು ಜೀವನದಲ್ಲಿ ಕಾಮದ ಸ್ಥಾನ ಇವು ಮೂರೂ ವಿಷಯಗಳು ಪದೇ ಪದೇ ಕಾಣಿಸಿಕೊಳ್ಳುತ್ತವೆ. ಆದರೆ ಈ ಮೂರೂ ಗುಣಗಳು ಏಕತ್ರಗೊಂಡ ಕವನಗಳ ಸಂಖ್ಯೆ ಕಡಿಮೆ. `ಲಿಬರ್ಟಿ ದೇವಿಗೆ ಬೆತ್ತಲೆ ಸೇವೆ~ ಎಂಬ ಪದ್ಯದಲ್ಲಿ ಬರುವ ಈ ಪ್ರಾರಂಭದ ಸಾಲುಗಳನ್ನು ಗಮನಿಸಬೇಕು:

ಪದ್ಯ ಗದ್ಯ ಅಂತ ಕೆದಕದಿರಲು
ನಿರ್ಧರಿಸಿ ವರ್ಷಗಳಿಗೆ ಮಂಕು
ಹಿಡಿಸಿದ್ದೇನೆ; ದುಃಖ ಕಿಂಚಿತ್ತೂ ಇಲ್ಲ.

ಗದ್ಯ ಮತ್ತು ಪದ್ಯದ ಮಧ್ಯದ ವ್ಯತ್ಯಾಸವೇನು ಎಂಬ ಪ್ರಶ್ನೆ ಈ ಕವಿಯನ್ನು ಬಹುವಾಗಿ ಕಾಡಿದೆ. ಅವರು ಸಂಕಲನದ ಕೊನೆಯಲ್ಲಿ ಬರೆದ ಲೇಖನದಲ್ಲಿಯೂ ಈ ವಿಷಯವನ್ನು ಕುರಿತು ಚಿಂತಿಸಿದ್ದಾರೆ. ಸರಳವಾಗುವುದೂ ಒಂದು ಸಂಕೀರ್ಣ ಪ್ರಕ್ರಿಯೆ ಎಂಬ ಅರಿವು ಈ ಕವಿಗಿದೆ.
 
ಪ್ರಾಯಶಃ ಈ ಕಾರಣಕ್ಕಾಗಿಯೇ ಕೆಲವು ಕವನಗಳು ಎಷ್ಟು ಸರಳವಾಗಿವೆಯೆಂದರೆ ಅವು ಯಾವುದೇ ವ್ಯಾಖ್ಯೆಯನ್ನು ಬಯಸುವುದಿಲ್ಲ.
`ಬಾ ಪ್ಲೇಟೊ~ ಎಂಬ ಪದ್ಯ ಬಹಳ ಶಕ್ತಿಯುತವಾಗಿದೆ. ಕವಿಯು ಪ್ಲೇಟೊಗೆ ಈ ಪ್ರಶ್ನೆ ಕೇಳುತ್ತಾರೆ:

ನಿನ್ನ ಫಿಲಾಸಫರ್ ಕಿಂಗ್
ಗಣರಾಜ್ಯದಲಿ ಸ್ಥಾನವಿಲ್ಲದ
ಕವಿಗಳು ಗಣರಾಜರ
ರಾಜ್ಯ ಮಹಾರಾಜ್ಯಗಳಲಿ
ಮಾರಾಟಗಾರರಾದ ಅದ್ಭುತ
ಕಾಣಲು ಬಂದೆ ಏನು?

ಸಂವೇದನಾಶೀಲತೆ ಕೂಡ ಮಾರಾಟದ ಸರಕಾಗಿರುವುದನ್ನು ಕುರಿತು ಇಲ್ಲಿಯ ಕವನಗಳು ಚಿಂತಿಸುತ್ತವೆ. ಗಂಡು ಮತ್ತು ಹೆಣ್ಣಿನ ಮಧ್ಯೆ ಉಂಟಾಗುವ ದೈಹಿಕ ಆಕರ್ಷಣೆ, ಭೂಮಿಯೇ ಒಂದು ಹೆರುವ ಹೆಣ್ಣಾಗಿ ಕಾಣುವುದು, ಹೆಣ್ಣು ಸಮುದ್ರವಾಗಿ ಮತ್ತು ಗಂಡು ನದಿಯಾಗಿ ಕಾಣುವುದು ಇಲ್ಲಿಯ ಹಲವಾರು ಕವನಗಳ ವಿಶೇಷತೆಯಾಗಿದೆ.
 
ಇಲ್ಲಿಯ ಪದ್ಯಗಳಲ್ಲಿ ಹೊಸ ಕಾವ್ಯಭಾಷೆಯೊಂದರ ಹುಡುಕಾಟವಿರುವುದು ನಿಚ್ಚಳವಾಗಿ ಎದ್ದು ಕಾಣುತ್ತದೆ. ಆದರೆ ಭಾವದ ಲಯವನ್ನು ಹಿಡಿಯುವಲ್ಲಿ ಭಾಷೆಯು ಕವಿಯ ಅನುಕೂಲಕ್ಕೆ ಒದಗಿಬರುವುದಿಲ್ಲ. ಹೀಗಾಗಿ ಹೇಳಬೇಕಾಗಿರುವ ಕಾವ್ಯ ವಸ್ತುವಿನ ತೀವ್ರತೆ ಓದುಗನ ಹೃದಯವನ್ನು ತಟ್ಟುವುದಿಲ್ಲ.
 
ತತ್ವಜ್ಞಾನಿಗಳು, ಕವಿಗಳು ಮತ್ತು ಚಿಂತಕರು ಅವರವರ ಹೆಸರು ಸಹಿತ ಅನೇಕ ಪದ್ಯಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಅಂದರೆ, ಇಂಥ ಪದ್ಯಗಳಲ್ಲಿ ಹೃದಯಕ್ಕಿಂತ ಮಿದುಳಿನ ಕೆಲಸವೇ ಹೆಚ್ಚಾಗಿ ಕಾಣಸಿಗುತ್ತದೆ.

ಸುಚೇತನ ಸ್ವರೂಪರಲ್ಲಿ ಒಳ್ಳೆಯ ಕವಿಯಾಗುವ ಲಕ್ಷಣಗಳಿವೆ. ಆದರೆ ಹೊಸದೇನನ್ನಾದರೂ ಬರೆಯಬೇಕೆಂಬ ಉದ್ದೇಶವನ್ನೇ ಹೊಂದಿರುವುದರಿಂದ ಉದ್ದೇಶವೇ ಭಾವಕ್ಕೆ ಮತ್ತು ಭಾವದ ಓಘಕ್ಕೆ ಅಡೆತಡೆ ಒಡ್ಡುತ್ತದೆ. ಅವರು ಸರಳ ವಸ್ತುಗಳನ್ನು ಆಯ್ದುಕೊಂಡಾಗ ಹೆಚ್ಚು ಯಶಸ್ವಿ ಕವನಗಳನ್ನು ರಚಿಸಿದ್ದಾರೆ.

ಉದಾಹರಣೆಗೆ `ಮಲ್ಲಿಗೆಯಮ್ಮ~ ಕವನವನ್ನು ನೋಡಬಹುದು. ಮಲ್ಲಿಗೆ ಬೆಳೆದವರು, ಅದನ್ನು ಮಾರಿದವರು, ಅದನ್ನು ಕೊಂಡು ಉಪಯೋಗಿಸಿದವರ ಭಾವಗಳ ಬೆಸುಗೆ ಉತ್ತಮವಾಗಿ ಮೂಡಿದೆ.
 
ಹಾಗೆಯೇ ಆಧುನಿಕ ಜಗತ್ತಿನಲ್ಲಿ ಎಲ್ಲ ವಸ್ತುಗಳ ಉಪಯೋಗವೇ ದೊಡ್ಡ ಮೌಲ್ಯವಾಗಿರುವಾಗ ಮಲ್ಲಿಗೆಯ ಹಿಂದಿರುವ ಭಾವನೆಯು ನಾಶವಾಗಿ ಬಿಡುತ್ತದೆ. `ಸೂರ್ಯನ ಟೊಂಕಕ್ಕೊಂದು ಪೊರಕೆ~ ಎಂಬ ಪದ್ಯ ಸರಳವಾಗಿ ಪ್ರಾರಂಭವಾದರೂ ವಿಶಾಲ ಚಿಂತನೆಯೊಂದಿಗೆ ಕೊನೆಗೊಳ್ಳುತ್ತದೆ.

ಕವನಗಳಿಗೆ ಮಿಂಚಿ ಮಾಯವಾಗುವ ಕ್ಷಣಗಳ ಸ್ಫೂರ್ತಿ ಇನ್ನೂ ಬೇಕಾಗಿದೆ. ಅತಿಯಾದ ಚಿಂತನ ಪರತೆಯು ಇಂಥ ಸ್ಫೂರ್ತಿಗೆ ಮಾರಕವಾಗುತ್ತದೆ. ಸ್ವರೂಪರು ಕಾವ್ಯಲೋಕದಲ್ಲಿ ಮುಂದುವರಿದಂತೆ ಈ ಸತ್ಯವನ್ನು ಮನಗಾಣುತ್ತಾರೆಂಬ ಆಶಾಭಾವನೆ ನನ್ನಲ್ಲಿದೆ.

ಚಂದ್ರನಿಗೊಂದು ಟಿಕೆಟ್ ಪ್ಲೀಸ್
ಲೇ: ಸುಚೇತನ ಸ್ವರೂಪ
ಪು: 90; ಬೆ: ರೂ. 60
ಪ್ರ: ನವಭಾರತೀ ಪ್ರಕಾಶನ, ಸರಸ್ವತಿಪುರಂ, ಮೈಸೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT