ಭಾನುವಾರ, 12 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಗೆ ಬಗೆಯ ಡಿಸೈನುಗಳ ಕಥೆಯ ನೇಯ್ಗೆ

ವಿಮರ್ಶೆ
Last Updated 2 ಜನವರಿ 2016, 19:30 IST
ಅಕ್ಷರ ಗಾತ್ರ

ಕನ್ನಡದಲ್ಲಿ ಕಾದಂಬರಿ ಅಪರೂಪವಾಗುತ್ತಿದೆ. ಈ ಶತಮಾನದ ಮೊದಲ ಹದಿನೈದು ವರ್ಷಗಳಲ್ಲಿ ವರ್ಷಕ್ಕೆ ಒಂದಾದರೂ ಒಳ್ಳೆಯ ಕಾದಂಬರಿ ಓದಿದ ನೆನಪಿಲ್ಲ. ಕಾದಂಬರಿಯ ಓದಿನ ಸುಖ ಬಲ್ಲವರಿಗೆ ಚಂದ್ರಶೇಖರ ಕಂಬಾರರ ‘ಶಿವನ ಡಂಗುರ’ದಲ್ಲಿ ಓದಿನ ಸುಖದ ಸಮೃದ್ಧಿಯೇ ಇದೆ. ಸುಮ್ಮನೆ ಓದಿದರೂ ದೃಢವಾದ ಕಥೆ ಮನಸ್ಸನ್ನು ಸೆಳೆಯುತ್ತದೆ. ಸ್ವಲ್ಪ ಗಮನವಿತ್ತರೆ ‘ಆಹಾ, ಇದು ಕಾವ್ಯ’ ಅನ್ನಿಸುವಂಥ ಮಿಂಚು ಪುಟಕ್ಕೆ ಒಮ್ಮೆಯಾದರೂ ಮಿನುಗುತ್ತದೆ.

ಕಂಬಾರರ ಇತರ ಕೃತಿಗಳನ್ನು ಓದಿದ್ದವರಿಗೆ ‘ಚಕೋರಿ’ಯ ನಂತರ ಅವರ ನುಡಿ ಮನಸ್ಸು ಬರೆದ ಉತ್ತಮ ಕಾದಂಬರಿ ಇದು, ‘ಕರಿಮಾಯಿ’ಯ ಇನ್ನೊಂದು ಮಗ್ಗುಲು, ‘ಸಿಂಗಾರೆವ್ವ ಮತ್ತು ಅರಮನೆ’ಯ ಕಳ್ಳು ಬಳ್ಳಿಯ ಸಂಬಂಧಿ, ‘ಶಿಖರ ಸೂರ್ಯ’ನಿಗಿಂತ ಹೆಚ್ಚು ಸಹಜರೂಪ ಅನ್ನಿಸುತ್ತದೆ. ಕನ್ನಡದ ಇತರ ಕಾದಂಬರಿಗಳ ನೆನಪು ಉಳಿಸಿಕೊಂಡಿರುವವರಿಗೆ ರಾವ್‌ಬಹದ್ದೂರರ ‘ಗ್ರಾಮಾಯಣ’, ಲಂಕೇಶರ ‘ಮುಸ್ಸಂಜೆಯ ಕಥಾಪ್ರಸಂಗ’ಗಳ ಹಾಗೆ ಇದೂ ಗ್ರಾಮೀಣ ಬದುಕಿನ ದುರಂತದ, ಕೇಡಿನ, ಭರವಸೆಯ ಆಶಯಗಳ ಹೆಣಿಗೆಯಾಗಿ ಕಾಣುತ್ತದೆ.

ಇನ್ನೂ ಸೂಕ್ಷ್ಮವಾಗಿ ನೋಡಲು ಬಯಸುವವರಿಗೆ ಮೌಖಿಕ ಸಂಪ್ರದಾಯದ ಕಲಾವಿದರು ಕೆಲವು ನುಡಿಗಟ್ಟು ವರ್ಣನೆಗಳನ್ನು ಸಲೀಸಾಗಿ ಮತ್ತೆ ಮತ್ತೆ ತಾಜಾ ಅನ್ನುವ ಹಾಗೆ ಬಳಸುತ್ತಾರಲ್ಲ ಹಾಗೇ ಕಂಬಾರರೂ ಇಲ್ಲಿ ತಮ್ಮ ಇತರ ಕವಿತೆ, ಕಥೆ, ಕಾದಂಬರಿಗಳ ನುಡಿಬಗೆಯನ್ನು ಹೊಸ ರೀತಿಯಲ್ಲಿ ಕೂರಿಸಿರುವುದು ಕಾಣುತ್ತದೆ. ಕಾದಂಬರಿಯನ್ನುಇನ್ನೇನೋ ಆಗಿ ನೋಡುತ್ತ ತತ್ವ, ಸಿದ್ಧಾಂತಗಳ ಅಂಗಿ ತೊಡಿಸಲು ಬಯಸುವವರಿಗೆ ಕೂಡ ಇಲ್ಲಿ ಉತ್ಸಾಹ ಹುಟ್ಟಿಸುವಂಥ ಸಾಮಗ್ರಿ ಇದೆ.

ಘಟಪ್ರಭಾ ನದಿಯ ‘ದಕ್ಷಿಣದ ದಂಡೆಯ ಮೇಲೆ ನೀರಲ್ಲಿ ಕಾಲಿಳಿಬಿಟ್ಟು ಕೂತಂತೆ’ ಇರುವ ಶಿವಾಪುರ; ಆ ಊರಿನ ಒಡೆತನ ಬರಮೇಗೌಡನದ್ದು. ಹೆಂಡತಿ ಪಾರೋತಿಯನ್ನು ನಿರ್ಲಕ್ಷ ಮಾಡಿ ದೇವದಾಸಿ ತುಂಗಿಯನ್ನು ತನ್ನವಳು ಮಾಡಿಕೊಳ್ಳುತ್ತಾನೆ. ಬರಮೇಗೌಡನ ತಮ್ಮ ಇಂಗ್ಲಿಷರ ವಿರುದ್ಧ ಹೋರಾಡಲು ಹೋಗಿ ತೀರಿಕೊಂಡ ಮೇಲೆ ಅವನ ಮಗ ಚಂಬಸನನ್ನೂ ಬರಮೇಗೌಡನಿಂದ ಹುಟ್ಟಿದ ತನ್ನ ಮಗ ಲಸಮನನ್ನೂ ತುಂಗಿಯೇ ಸಾಕುತ್ತಾಳೆ. ಬರಮೇಗೌಡನ ಹೆಂಡತಿ ಪಾರೋತಿ ಗಂಡನಿಂದ ಬೇಸತ್ತು ತನ್ನ ಮಗಳು ಬಾಗೀರ್ತಿಗೆ ತನ್ನ ತಮ್ಮ ಕುಂಟೀರಪನನ್ನೇ ತಂದುಕೊಂಡು ಮನೆಯಳಿಯನನ್ನಾಗಿ ಮಾಡಿಕೊಳ್ಳುವ ಅಪೇಕ್ಷೆ. ಲಸಮನ ಸೋದರ ಮಾವನ ಮಗಳು, ಚಿಕ್ಕಂದಿನಲ್ಲೇ ಎಲ್ಲಮ್ಮನಿಗೆ ಬಿಟ್ಟಿರುವ ಶಾರಿ ಮತ್ತು ಚಂಬಸರ ನಡುವೆ ಪ್ರೇಮ ಹುಟ್ಟಿ ಮದುವೆಯಾಗುತ್ತದೆ.

ಕುಂಟೀರಪನ ದುಷ್ಟತನ ದುರಾಸೆಗಳ ಮೂಲಕ ಬರಮೇಗೌಡನಿಗಿರುವ ಊರಿಗೆ ಒಳಿತಾಗಬೇಕೆಂಬ ಅಭಿವೃದ್ಧಿ ಆಸೆಯ ಮೂಲಕ ಅಮೆರಿಕದ ಕಂಪನಿ ಶಿವಾಪುರಕ್ಕೆ ಕಾಲಿಟ್ಟು ಊರು ಹಾಳಾಗುತ್ತದೆ; ಜೊತೆಗೆ ರಾಜಕೀಯವೂ ಸೇರುತ್ತದೆ. ಊರಾಚೆಯ ನಮಶ್ಶಿವಾಯ ಸ್ವಾಮಿ ಅವಲಂಬನೆಯ ಮೂಲಕ ಚಂಬಸ ನಿಜವಾದ ನಾಯಕನಾಗಿ ಬೆಳೆಯುತ್ತ, ತನ್ನ ಹೆಂಡತಿಯ ಮಾನ ಕಳೆದ ಪೊಲೀಸರನ್ನು ಕೊಂದು ಜೈಲು ಸೇರಿ ಸುತ್ತಲ ಕೆಡುಕನ್ನೂ ತನ್ನೊಳಗಿನ ಕೆಡುಕನ್ನೂ ಗೆಲ್ಲುತ್ತ ಕ್ರಮೇಣ ಹೊಸ ಶಿವಾಪುರದ ಕನಸನ್ನು ನಿಜಮಾಡುವವನಾಗಿ ಬೆಳೆದಾನೆಂಬ ಸೂಚನೆಯೊಂದಿಗೆ ಕಥೆ ನಿಲುಗಡೆಗೆ ಬರುತ್ತದೆ.

ಹೀಗೆ ನೂರಿಪ್ಪತ್ತು ಪದಗಳಲ್ಲಿ ಹೇಳಿದ ಕಥೆ ಕಥೆಯೇ ಅಲ್ಲ. ಕಥೆಯ ಅನುಭವವೂ ಅಲ್ಲ. ಸೃಷ್ಟಿಯ ಆರಂಭದ ಆದಿಯ ಪುರಾಣದಿಂದ ತೊಡಗಿ, ಹೆಳವರ ಕತೆ, ಜಾನಪದಕತೆ, ಬ್ರಿಟಿಷರ ಚರಿತ್ರೆ, ಬಾಯಿಮಾತಿನ ಕಥನ ಎಲ್ಲವನ್ನೂ ಒಳಗೊಳ್ಳುತ್ತ ಕಥೆಯ ಪ್ರವಾಹ ಓದುಗರನ್ನು ಸೆಳೆದುಕೊಂಡು ಹೋಗುತ್ತದೆ. ಆರಂಭದಲ್ಲೇ ಬರುವ ಈ ಬಗೆಬಗೆಯ ಕಥನಗಳು ಶಿವಾಪುರದ ಪುರಾಣ, ಚರಿತ್ರೆ, ವರ್ತಮಾನ, ಭವಿಷ್ಯದ ಸಾಧ್ಯತೆಗಳನ್ನು ಸೂಚಿಸುವ ಮಹತ್ವಾಕಾಂಕ್ಷೆ ಕಂಬಾರರದ್ದು ಅನ್ನುವುದನ್ನು ಸೂಚಿಸುತ್ತದೆ. ಹಾಗಾಗಿ ಕಥೆಯ ನೇಯ್ಗೆಯಲ್ಲಿ ಬಗೆ ಬಗೆಯ ಡಿಸೈನುಗಳು ಮೂಡುತ್ತವೆ. ಶಿವಾಪುರ ಬರಿಯ ಕಲ್ಪಿತವಾದ ಊರು ಮಾತ್ರವಾಗದೆ ನಮ್ಮ ಯಾವುದೇ ಹಳ್ಳಿ, ನಮ್ಮ ಇಡೀ ದೇಶದ ವರ್ತಮಾನದ ಪರಿಶೀಲನೆಯಾಗಿ ಕಾಣುತ್ತದೆ.

ಹಾಗೆ ತೀರ ಬುದ್ಧಿಮುಖ್ಯವಾದ ಪ್ರತಿಪಾದನೆಯಾಗದಂತೆ ಈ ಕಾದಂಬರಿಯನ್ನು ಕಾಪಾಡಿರುವುದು ಇದರಲ್ಲಿರುವ ಕಾವ್ಯಗುಣ. ‘ಉಕ್ಕಿನ ಮುಳ್ಳಿನಂಥ ಹನಿ’, ಅನ್ನುವಂಥ ಹೇರಳ ನುಡಿನಾಣ್ಯಗಳು, ‘ಹೊರೆ ಹೊತ್ತ ಹಾಗೆ ಎದೆಯಲ್ಲಿ ಹೊತ್ತಿದ್ದ ಅವಳ ರೂಪವನ್ನು ಎದೆಯಿಂದ ಹೊರತೆಗೆದು ಮುದ್ದಿಸಿ ಮಗ್ಗಲು ಬದಲಿಸಿದ’ ಅನ್ನುವಂಥ ಪಾತ್ರಗಳ ಮನಸ್ಥಿತಿಯನ್ನು ಚಿತ್ರಿಸುವ ವಾಕ್ಯಗಳು, ‘ಸ್ವಂತದ ಜೊಲ್ಲನ್ನೇ ಮೆಲುಕಾಡಿಸುವ ಮುದಿ ಎತ್ತಿನಂತೆ’ ಆಗಿದ್ದ ಗೌಡ ‘ಪಡ್ಡೆ ಹುಡುಗೀರನ್ನ ಪಳಗಿಸೋದರಲ್ಲಿ ಮೊದಲಿನಂತೆ ಸುಖ ಕಾಣದೆ’, ‘ಸಹಜ ಪ್ರಾಣಿಗಳ ಥರದ ಭಯಸ್ಥ ದೇಹಭಾವಗಳನ್ನ ಪಳಗಿಸಿ ಮುಗುಳ್ನಗೆ ಮೂಡಿಸಿ ಸಿಕ್ಕುವ ಬೇಟೆಗಾರ ಸುಖಕ್ಕಿಂತ ಅಭಿನಯದ ವಿಧೇಯತೆಯಿಂದ ಸಿಕ್ಕುವ ಮಾಗಿದ ಸುಖವೇ ಲೇಸು’ ಎಂದುಕೊಳ್ಳುವ ಗೌಡ, ‘ಹಕ್ಕಿಯ ಹಿಂಡಿನ ಸೊಕ್ಕಿನ ಗಾಳಿಗೀಡಾದ ಅಸ್ತವ್ಯಸ್ತ ಹೊಲದಂತೆ’ ಕಾಣುವ ಶಾರಿ, ‘ನದೀ ನೀರಿನಂತೆ ಸರಳವಾದ, ಕಾಡಿನ ಹಸಿರಿನಂತೆ ಶುಭ್ರವಾದ, ಬೆಟ್ಟದ ಬಂಡೆಯಂತೆ ಬಿರುಸಾದ ಮನಸ್ಸಿನವಳು’ ತುಂಗವ್ವ. ಇಂಥ ಹೋಲಿಕೆ, ಉಪಮೆ, ವರ್ಣನೆ ಇವು ಕಥೆಯನ್ನು ಹಿಂಬಾಲಿಸುವ ಧಾವಂತವನ್ನು ತಡೆಹಿಡಿದು ಪಾತ್ರದ, ಸನ್ನಿವೇಶದ ಮನಸ್ಥಿತಿಯ ವಿವರಗಳನ್ನು ಗಮನಿಸುವಂತೆ ಮಾಡುತ್ತವೆ. ಇಂಥ ಸಾವಕಾಶ ಗಮನವೇ ಕಾದಂಬರಿಯ ಓದಿನ ಸುಖದ ಮುಖ್ಯ ಲಕ್ಷಣ.

ಈ ಕಾದಂಬರಿಯ ಗೌಡ, ಕಂಬಾರರು ತಮ್ಮ ಇತರ ಕೃತಿಗಳಲ್ಲಿ ಚಿತ್ರಿಸಿರುವಂಥ ಗೌಡರ ಅನೇಕ ಲಕ್ಷಣಗಳನ್ನು ತಾನೂ ಹೊಂದಿದ್ದಾನೆ. ‘ಕೊಳಕ, ಸುಳ್ಳ, ಮೃಗೀಯವಾದ ಭೋಗಲಾಲಸೆಯೊಂದೇ’ ಇರುವವನು. ಅವನೊಡನೆ ಕುಂಟೀರಪ ಸೇರಿಕೊಂಡದ್ದು ಕೆಡುಕಿನ ಕಾಳಕೂಟದ ಮಿಶ್ರಣದಂತೆ ಆಗುತ್ತದೆ. ಬರಮಗೌಡನ ದುಷ್ಟತನ ಆ ಊರಿನ ನೆಲದಲ್ಲೇ ಬೇರು ಬಿಟ್ಟು, ಅಲ್ಲಿನ ಗಾಳಿ ನೀರುಕುಡಿದು ಪುಷ್ಟವಾದದ್ದು. ಜನ ಅದನ್ನು ತಡಕೊಂಡಿದ್ದರು. ಆದರೆ ‘ಶಿವಾಪುರದವನಲ್ಲದ ಒಬ್ಬ ಖಳನ ದುರಾಸೆಯ ಕಾರಣವಾಗಿ’ ಜನ, ಊರು, ನೀರು, ಪರಿಸರ, ಮನಸ್ಸು ಎಲ್ಲ ಕೊಳಕು ರಾಡಿಯಾಗುತ್ತವೆ. ‘ಶಿವಾಪುರದವನಲ್ಲದ’ ಅನ್ನುವಾಗ ಕಾದಂಬರಿಕಾರರು ಸ್ವಲ್ಪ ಮಟ್ಟಿಗೆ ಕುಂಟೀರಪನನ್ನೂ, ಬಲುಮಟ್ಟಿಗೆ ಅಮೆರಿಕದ ಕಂಪನಿಯ ಮುಖಂಡನನ್ನೂ ಸೂಚಿಸುವಂತೆ ತೋರುತ್ತದೆ.

ಆದರೆ ಶಿವಾಪುರ ಹೀಗೆ ಅವನತಿ ಕಾಣಲು ಕೇವಲ ಹೊರಗಿನ ಕೆಡುಕು ಮಾತ್ರವೇ ಕಾರಣ ಅನ್ನುವುದು ಅಷ್ಟು ಸರಿಯಲ್ಲವೇನೋ. ಕಾದಂಬರಿಯ ಅರ್ಥವನ್ನು ವಿಸ್ತರಿಸುತ್ತ ನಮ್ಮ ದೇಶದ ಈ ಹೊತ್ತಿನ ಸ್ಥಿತಿಗೆ ಇದು ರೂಪಕ ಅನ್ನುವುದು ಸಾಧ್ಯ; ಹಾಗೆ ವಿಸ್ತರಿಸಿಕೊಳ್ಳುವಾಗ ಕೆಡುಕಿನ ಮೂಲವನ್ನು ಈ ನೆಲದ ಹೊರಗಿನ ಮೂಲದ್ದು ಎನ್ನುವುದು ಅಷ್ಟು ಸರಿಯಲ್ಲ ಅನ್ನಿಸೀತು. ಹಾಗೆ ಕಾದಂಬರಿ ಕೆಡುಕಿನ ಮೂಲವನ್ನು ಶಿವಾಪುರದಲ್ಲೂ ಚಂಬಸನದಂಥ ಚಂಬಸನ ಮನಸ್ಸಿನ ಆಳದಲ್ಲೂ ಗುರುತಿಸುತ್ತದೆ. ಕಾದಂಬರಿಯ ಪರಿಸರದ ಮುಖ್ಯ ಅಂಶವಾದ ಮಲ್ಲೀ ಮಡು ಅನ್ನುವುದೇ ಶಿವಾಪುರದ ಗೌಡನೊಬ್ಬನ ದೌರ್ಜನ್ಯಕ್ಕೆ ಪ್ರಾಣ ಕಳೆದುಕೊಂಡ ಹೆಂಗಸಿನ ಸ್ಮರಣೆಯಾಗಿ ಉಳಿದಿದೆ. ಊರಿನ ಹುಡುಗನಾಗಿದ್ದು ಆಮೇಲೆ ದೊಡ್ಡ ಪುಂಡ ಪೋಕರಿಯಾಗುವ ರಮೇಶನೂ ಇದ್ದಾನೆ.

ಅಷ್ಟೇ ಯಾಕೆ ಸ್ವತಃ ಚಂಬಸ ನ್ಯಾಯಾಧೀಶರ ಮುಂದೆ ಹೇಳಿಕೆ ನೀಡುತ್ತ ‘ಒಬ್ಬ ಮನುಷ್ಯ ರಾಕ್ಷಸನಾಗಬೇಕೆಂದು ಮನಸ್ಸು ಮಾಡಿದರೆ ಕೊಂಚ ಸಾಧನೆಯಿಂದ ಆಗಲೂ ಬಲ್ಲ... ನನ್ನ ಹೃದಯ ತಂತುಗಳನ್ನು ಹಿಡಿದೆಳೆಯುತ್ತಿರುವ ಕುಂಟೀರಪನೆಂಬ ಭೂತ ನನ್ನೊಳಗೈತಿ. ಅವನ ಬಗ್ಗೆ ಕೋಪವುಕ್ಕಿ ಅವನನ್ನು ಕೊಂದೆ. ನೀರಿನೊಳಗಿನ ಬಿಂಬದ ಹಾಂಗೆ ಮತ್ತೆ ಮತ್ತೆ ಮೂಡಿಬಂದ... ಇವನೊಬ್ಬನನ್ನ ಕೊಂದರ ಶಿವಾಪುರ ಶುದ್ಧವಾಗತದಂತ ಕೊಂದೆ, ಮತ್ತೆ ಬಂದಿ ಅಂತ ಐದೂ ಸಲ ಕೊಂದೆ’ ಅನ್ನುತ್ತಾನೆ. ಕೆಡುಕು ಅನ್ನುವುದು ಮನುಷ್ಯ ಮಾತ್ರರೆಲ್ಲರಲ್ಲೂ ಇರುವ, ಇದ್ದೇ ಇರುವ, ಪಳಗಿಸಬೇಕಾದದ್ದು ಬದುಕಿನ ಕರ್ತವ್ಯ, ವಿಧಿ ಅನ್ನುವ ಸೂಚನೆಯೂ ಇದೆ.

ವ್ಯಕ್ತಿಯ ಒಳಗಿನ ಕೆಡುಕು ನೀಗದೆ ವ್ಯಕ್ತಿಯ ಪರಿಸರವೂ ಊರೂ ದೇಶವೂ ಹೇಗೆ ಸ್ವಚ್ಛವೂ ಶುದ್ಧವೂ ಆಗಬಲ್ಲದು? ಈ ಬಗ್ಗೆ ಕಾದಂಬರಿ ಎರಡು ಮುಖ್ಯ ಪ್ರಸ್ತಾಪಗಳನ್ನು ಮುಂದಿಡುತ್ತದೆ– ಒಂದು, ಅಂತಃಕರಣಪೂರಿತವಾದ ಮನುಷ್ಯ ಸಂಬಂಧ, ಇನ್ನೊಂದು ಲೋಕೋತ್ತರವಾದ ಶಕ್ತಿಮೂಲದಿಂದ ಒಳ್ಳೆಯತನದ ಸ್ಫೂರ್ತಿಪಡೆದು ಅದನ್ನು ದಿನದ ವರ್ತನೆಯಲ್ಲಿ ನಿಜಮಾಡಿಕೊಳ್ಳುವ ಹಟ. ಹಾಗೆ ನೋಡಿದರೆ ಇಡೀ ಕಾದಂಬರಿಯಲ್ಲಿ ಅಂತಃಕರಣವು ಹೆಣ್ಣಿನ ಶಕ್ತಿ ಅನ್ನುವ ಹಾಗೆ ವ್ಯಕ್ತವಾಗಿದೆ.

ಊರಿನ, ಲೋಕದ, ಲೋಕದಾಚೆಯ ಕಲ್ಪನೆಗಳನ್ನು ಕಥೆಗಳನ್ನೂ ಬದುಕುತ್ತಿರುವ, ದೇವಿಯ ಆಶೀರ್ವಾದವನ್ನೂ ಪಡೆದ ತುಂಗವ್ವ, ಅಣ್ಣನ ಬಗ್ಗೆ ಅಕ್ಕರೆ ತೋರುವ ಗಂಡನ ಕೆಡುಕನ್ನು ವಿರೋಧಿಸಿ ನಿಲ್ಲುವ ಬಾಗೀರ್ತಿ, ಕಾದಂಬರಿಯ ಬಹಳಷ್ಟು ಕ್ರಿಯೆಗಳಿಗೆ ಪ್ರಚೋದನೆ ಒದಗಿಸುವ ಶಕ್ತಿಯಾಗಿರುವ ಶಾರಿ, ಅನಾಥಾಲಯವನ್ನು ನಡೆಸುವ ಮಾಣಿಕಮ್ಮ, ಪುಟ್ಟ ಮಾದೇವಿ ಹೀಗೆ. ಇನ್ನು ಲೋಕೋತ್ತರ ಶಕ್ತಿಮೂಲದೊಡನೆ ಸಂಪರ್ಕ ಕಲ್ಪಿಸುವ ನಮಶ್ಶಿವಾಯ ಇದ್ದಾನೆ, ಚಂಬಸ ಶಿವಲಿಂಗಕ್ಕೆ ಕಲ್ಲೆಸೆಯುವ, ಆಮೇಲೆ ನಮಶ್ಶಿವಾಯನ ಸಜ್ಜನಿಕೆಯಿಂದ ಪಶ್ಚಾತ್ತಾಪಪಡುವ, ಕನಸಿನಲ್ಲೂ ನಮಶ್ಶಿವಾಯನಿಂದ ಸ್ಫೂರ್ತಿ ಪಡೆದು ಬೆಟ್ಟವನ್ನೇರುವ ದರ್ಶನ ಪಡೆಯುವ ಪ್ರಸಂಗಗಳಿವೆ.

ದೇವಲೋಕದ, ಮಿರಿಲೋಕದ ಕಥೆಗಳಿವೆ. ‘ತನ್ನ ಸುತ್ತ ತಾನರಿಯದ ಚೈತನ್ಯವೊಂದು ಸುತ್ತುತ್ತಿರುವಂತೆ ಅನ್ನಿಸಿ ಅದನ್ನು ಶಬ್ದಗಳಲ್ಲಿ ಯೋಚಿಸಿದ್ದೇ ತಡ ಮೈ ರೋಮಾಂಚನವಾಯ್ತು’. ಈ ವಾಕ್ಯವು ಕಾದಂಬರಿಯ ಕೊನೆಕೊನೆಗೆ ‘ಅಮ್ಮನ ಬೆಟ್ಟದಲ್ಲಿ’ ಎಂಬ ಅಧ್ಯಾಯದಲ್ಲಿ ಕಾಣುತ್ತದೆ. ಅಲ್ಲೇ ಚಂಬಸನಿಗೆ ಬೀಳುವ ಕನಸಿನ ವರ್ಣನೆಯೂ ಇದೆ. ಕನಸಾಗಿ, ಕಥೆಯಾಗಿ, ಕಲ್ಪನೆಯಾಗಿ ‘ಅರಿಯದ ಚೈತನ್ಯವು’ ಮನುಷ್ಯರೊಡನೆ ಒಡನಾಡುವ ಕಥೆ ಈ ಕಾದಂಬರಿಯ ಲೋಕದಲ್ಲಿ ತೀರ ಸಹಜ ಅನ್ನುವ ಹಾಗೆ ಕಂಬಾರರು ನಿರ್ವಹಿಸುತ್ತಾರೆ.

‘ಚಕೋರಿ’ ಕಾದಂಬರಿಯನ್ನು ಓದಿರುವವರಿಗೆ ಕಂಬಾರರ ಈ ಶಕ್ತಿಯ ಪರಿಚಯ ಇದ್ದೇ ಇರುತ್ತದೆ. ‘ಅರಿಯಲಾಗದ ಚೈತನ್ಯ’ದೊಡನೆ ಕಿಂಚಿತ್ತಾದರೂ ಸಂಪರ್ಕ ಸಾಧಿಸಿದವರು ಸತ್ಯದ ಶಿಷ್ಯರು; ಸತ್ಯದ ಶಿಷ್ಯರಿಗೆ ಬೇರೆ ಸತ್ಯವಿಲ್ಲ; ಸತ್ಯವಲ್ಲದೆ ಇನ್ನೊಂದನ್ನು ಆಡಬಾರದು, ನಂಬಬಾರದು, ನಡೆಯಬಾರದು; ಸತ್ಯದ ನಾಮವನ್ನು ನೆನೆದಲ್ಲಿ ಸಾನ್ನಿಧ್ಯವಾಗುತ್ತದೆ, ಸಾನ್ನಿಧ್ಯದಲ್ಲಿ ಸಕಲ ಪರಿಣಾಮವಿದೆ, ನಿಂತಲ್ಲಿ ಹೊಸ ಶಿವಾಪುರವನ್ನು ರಚಿಸು ಅನ್ನುವ ಶಿವನ ಡಂಗುರ ಚಂಬಸನಿಗೆ ಕೇಳುತ್ತದೆ.

ಮಾಡಿದವನು ನಾನು ಅನ್ನುವುದು ಮನಸ್ಸಿನಲ್ಲಿ ಹೊಳೆದರೂ ಸಾಕು ಅಣಕಿಸಿ ಕಾಡುವ, ಊರೆಲ್ಲಕ್ಕೂ ಸಾರಿ ನಾಚುವ ಹಾಗೆ ಮಾಡುವ ಶಿವನ ಡಂಗುರ ಬಸವಣ್ಣನ ವಚನದಲ್ಲಿ ಕೇಳುತ್ತದೆ. ಹೊಸ ಶಿವಾಪುರವನ್ನು ರಚಿಸುವ ಜವಾಬ್ದಾರಿ ಮನುಷ್ಯನದ್ದೇ ಅನ್ನುವ ಹೊಣೆಗಾರಿಕೆಯನ್ನು ಕಾದಂಬರಿಯ ಶಿವನ ಡಂಗುರ ಸಾರುತ್ತಿದೆ. ಹಣ, ಅಧಿಕಾರ, ಭೋಗ ಇವಕ್ಕೆ ಮಿತಿ ಇಲ್ಲ, ಇರಬಾರದು; ಅಂತಃಕರಣ, ಸತ್ಯ, ವಿನಯ, ಸಹನೆ, ತಾಳ್ಮೆ ಇವು ‘ಗೆಲ್ಲುವ’ ಬದುಕಿಗೆ ಸಲ್ಲವು– ಈ ಗಲಭೆ ಕೂಸಿನ ಕಿವಿಯನ್ನೂ ತುಂಬುತ್ತಿರುವ ಹೊತ್ತು ಇದು.

ಋತುಮಾನದಲ್ಲಿ ಸಹಜವಾಗಿ ಬೆಳೆವ ಮರದಂತೆ ಬೆಳೆದ ಘಟನೆಗಳನ್ನುಳ್ಳ ಈ ಕಾದಂಬರಿಯು ಕಂಬಾರರು ‘ನನ್ನ ಮಾತು’ ಎಂಬ ಶೀರ್ಷಿಕೆಯಡಿ ಅರ್ಥಶಾಸ್ತ್ರದ ಬಗ್ಗೆ ಪ್ರಾಸಂಗಿಕವಾಗಿ ಹೇಳಿರುವ ಮಾತುಗಳ ಕಾರಣದಿಂದಲೇ ಅತಿ ಸುಲಭವಾದ ಅತಿವ್ಯಾಖ್ಯಾನಗಳಿಗೆ ಗುರಿಯಾಗಿ, ಗ್ಲೋಬೀಕರಣ, ದೇಸೀಯತೆ ಇತ್ಯಾದಿ ಇತ್ಯಾದಿ ಈ–ಕರಣ, ಈ–ಯತೆಗಳ ಭಾರದಲ್ಲಿ ನಲುಗುವ ಅಪಾಯವಿದೆ. ಬದುಕಿನ ಸಹಜ ಘಟನೆಗಳ ಸಹಜ ಕಾವ್ಯರೂಪದ ಅನುಭವ ಪಡೆಯುತ್ತಿರುವಾಗ ಕಾದಂಬರಿ ‘ಇನ್ನೇನೋ’ ಆಗುವ, ಆಗಿರುವ ಸಾಧ್ಯತೆಗಳು ಕಿರುಗಂಟೆಗಳ ಕಿಣಿಕಿಣಿಯಾಗಷ್ಟೇ ಕೇಳುತ್ತವೆ. ಅತಿವ್ಯಾಖ್ಯಾನದ ಡಂಗುರ ಕಾದಂಬರಿಯ ಓದಿನ ಸುಖಕ್ಕೆ, ಆ ಸುಖದ ಮೂಲಕ ದೊರೆವ ಅರಿವಿಗೆ ಅಡ್ಡಿಯಾಗದಿರಲೆಂದು ಹಾರೈಸುತ್ತೇನೆ.
*
ಶಿವನ ಡಂಗುರ
ಲೇ:
ಚಂದ್ರಶೇಖರ ಕಂಬಾರ
ಪುಟ: 272
ರೂ. 225
ಪ್ರ: ಅಂಕಿತ ಪುಸ್ತಕ, ನಂ. 53, ಶ್ಯಾಮ್‌ಸಿಂಗ್‌ ಕಾಂಪ್ಲೆಕ್ಸ್‌, ಗಾಂಧಿಬಜಾರ್‌ ಮುಖ್ಯರಸ್ತೆ, ಬಸವನಗುಡಿ, ಬೆಂಗಳೂರು–560 004.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT