ಭಾನುವಾರ, 12 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಸ್ಕೃತಿ ವ್ಯಾಖ್ಯಾನಕ್ಕೆ ಹೊಸ ನಕ್ಷೆಯ ಅಪೇಕ್ಷೆ

Last Updated 16 ನವೆಂಬರ್ 2013, 19:30 IST
ಅಕ್ಷರ ಗಾತ್ರ

ಮೈಯೆ ಸೂರು ಮನವೆ ಮಾತು
ಲೇ: ಬಸವರಾಜ ಕಲ್ಗುಡಿ
ಪು: 370; ಬೆ: ರೂ. 275
ಪ್ರ: ಅಭಿನವ, 7/18--–2, ಮೊದಲನೇ ಮುಖ್ಯರಸ್ತೆ, ಮಾರೇನಹಳ್ಳಿ, ವಿಜಯನಗರ, ಬೆಂಗಳೂರು–40

ಬಸವರಾಜ ಕಲ್ಗುಡಿ ಅವರ ‘ಮೈಯೆ ಸೂರು ಮನವೆ ಮಾತು’ ಐದು ಭಾಗಗಳಲ್ಲಿ ವಿನ್ಯಾಸಗೊಂಡಿರುವ ಮೂವತ್ತೆರಡು ಲೇಖನಗಳ ಸಂಗ್ರಹ. ಇದರಲ್ಲಿ ದೀರ್ಘವಾದ ಅಧ್ಯಯನ, ಮುನ್ನುಡಿ, ವ್ಯಕ್ತಿಚಿತ್ರಗಳು ಸೇರಿವೆ. ಈ ಎಲ್ಲ ಲೇಖನಗಳ ಹಿಂದೆಯೂ ಸಂಸ್ಕೃತಿ ಚಿಂತನೆಯ ಸಾಮಾನ್ಯ ಸೂತ್ರವೊಂದನ್ನು ಓದುಗರು ಗುರುತಿಸಬಹುದು.

ಮೈ ಅನ್ನುವುದು ಪರಿಮಿತಿಯೂ ಆಗಿರುವ ಮೂರ್ತ ಸಂಗತಿ; ಅದನ್ನು ವಿವರಿಸುವ, ಮೀರುವ ಆಸೆ ಮನಸ್ಸಿನದು, ಮನಸಿನಿಂದ ಹುಟ್ಟಿದ ಮಾತಿನದ್ದು. ಮೈ ಮನಸು ಅರಿವುಗಳ ಸಂಬಂಧವನ್ನು ತಡಕಿ ನೋಡುವ, ಇಂಥ ಸಂಬಂಧವನ್ನು ವಿವರಿಸುವ ವ್ಯಾಖ್ಯಾನ ರೂಪದ ಮಾತುಗಳನ್ನು ವಿಶ್ಲೇಷಿಸುವ, ಹೊಸ ವ್ಯಾಖ್ಯಾನದ ದಾರಿಯನ್ನು ಹುಡುಕುವ ಕೆಲಸ ಈ ಪ್ರಬಂಧಗಳಲ್ಲಿ ನಡೆದಿದೆ. ಕಲ್ಗುಡಿಯವರ ಹಿಂದಿನ ಪುಸ್ತಕದ ಶೀರ್ಷಿಕೆಯಾಗಿದ್ದ ‘ನಕ್ಷೆ-ನಕ್ಷತ್ರ’ಎಂಬ ರೂಪಕವನ್ನೇ ವಿಸ್ತರಿಸಿ ಹೇಳುವುದಾದರೆ ಸಂಸ್ಕೃತಿ ವ್ಯಾಖ್ಯಾನವೆಂಬ ನಕ್ಷತ್ರ ಲೋಕಕ್ಕೆ ಹೊಸ ನಕ್ಷೆಯೊಂದನ್ನು ರೇಖಿಸಿಕೊಳ್ಳುವ ಅಪೇಕ್ಷೆ ಕಲ್ಗುಡಿಯವರ ಈ ಬರಹಗಳ ಹಿಂದೆ ಕೆಲಸಮಾಡಿದೆ.

‘ಮೈಮನದ ಮಾತು’ ಎಂಬ ಮೊದಲ ಭಾಗದಲ್ಲಿ ಆರು ಲೇಖನಗಳಿವೆ. ಮಧ್ಯಕಾಲೀನ ಸಾಹಿತ್ಯ, ಸಂಸ್ಕೃತಿಯ ಮರುನೋಟ ಈ ಲೇಖನಗಳ ವಸ್ತು. ಕನ್ನಡ ಮತ್ತು ತಮಿಳು ಒಡನಾಟ, ಭಾರತೀಯ ಜ್ಞಾನಶಾಖೆಗಳೊಡನೆ ಕನ್ನಡದ ಚಿಂತನೆ ನಡೆಸಿದ ಸಂವಾದ- ಇವು ಈ ಲೇಖನಗಳಲ್ಲಿ ಪರಿಶೀಲನೆಗೊಂಡಿವೆ. ಸಂಪ್ರದಾಯ ಅನ್ನುವುದಕ್ಕೆ ಒಂದು ಚರಿತ್ರೆ ಇರುವಂತೆಯೇ ಸಂಪ್ರದಾಯವಿರೋಧ ಮತ್ತು ಸಾಮಾಜಿಕ ಹೋರಾಟಗಳಿಗೂ ಒಂದು ಚರಿತ್ರೆ ಇರುತ್ತದೆ.

ಕನ್ನಡದ ವಚನ ಸಾಹಿತ್ಯದ ಸಾಮಾಜಿಕ ಮುಖ, ಪ್ರತಿಭಟನೆಯ ಆಯಾಮ ಇವುಗಳಿಗೆ ತಮಿಳಿನ ಸಿದ್ಧರ ಪ್ರಪಂಚ, ನಾಥ ಸಂಪ್ರದಾಯ, ಶ್ರಮಣ ಧಾರೆಗಳಾದ ಬೌದ್ಧ ಮತ್ತು ಜೈನ ಪರಂಪರೆಗಳಲ್ಲಿ ದೇಹ-ಲೋಕ-ಪ್ರಜ್ಞಾಗಳ ಚಿಂತನೆ ಇವೆಲ್ಲ ಹೇಗೆ ಒದಗಿಬಂದಿರಬಹುದು ಅನ್ನುವ ಸೂಚನೆ ‘ಸಿದ್ಧರ ಪ್ರಪಂಚ’, ‘ನಾಥ ಸಂಪ್ರದಾಯ’ ಮತ್ತು ‘ಆಡು ಹಾವೇ’ ಲೇಖನಗಳಲ್ಲಿ ದೊರೆಯುತ್ತದೆ. ಸಿದ್ಧಸಾಹಿತ್ಯವನ್ನು ಕುರಿತು ಮಸು ಕೃಷ್ಣಮೂರ್ತಿಯವರು ನಡೆಸಿರುವ ಚಿಂತನೆ, ಶಂಕರಮೊಕಾಶಿ ಪುಣೇಕರ್ ಅವರ ‘ಅಂತ್ಯಜರ ತತ್ವಚಿಂತನೆ’ ಬರಹಗಳ ಇನ್ನೊಂದು ಮಗ್ಗುಲು ಎಂಬಂತಿರುವ ಈ ಲೇಖನಗಳು ಹೊಸ ಸಾಂಸ್ಕೃತಿಕ ಚರ್ಚೆಗಳಿಗೆ ದಾರಿ ಮಾಡಿಕೊಡುವಷ್ಟು ಸಶಕ್ತವಾಗಿವೆ.

ಈ ಎರಡು ಲೇಖನಗಳಿಗೆ ಹಿನ್ನೆಲೆಯ ಭಿತ್ತಿ ಎಂಬಂತೆ ನಾಗಾರ್ಜುನನ ಪ್ರಕ್ರಿಯಾ ಮೀಮಾಂಸೆಯನ್ನು ಕುರಿತು ನಟರಾಜ ಬೂದಾಳು ಅವರ ಪುಸ್ತಕವನ್ನು ಪರಿಶೀಲಿಸುವ ಲೇಖನವಿದೆ. ದೇಹ ಮನಸ್ಸುಗಳ ಶಕ್ತಿಯನ್ನು ಬದುಕಿನ ಭಾಗವಾಗಿಸಿದ್ದ ಪರಂಪರೆಗಳು ಶೂದ್ರರೆಂದು ಕರೆಯಲಾಗುವ ಕಾಯಕ ಜೀವಿಗಳ ನೆಲೆಯಿಂದ ಮೂಡಿಬಂದವು; ಮತ್ತು ಅವನ್ನು ಗ್ರಹಿಸುವುದಕ್ಕೆ ತಕ್ಕ ತಾತ್ವಿಕತೆ ಪ್ರಕ್ರಿಯಾಮೀಮಾಸೆಯಲ್ಲಿ ದೊರೆಯುತ್ತದೆ ಅನ್ನುವುದು ಕಲ್ಗುಡಿಯವರ ಚಿಂತನೆಯಾಗಿ ತೋರುತ್ತದೆ.

ಇಂಥ ಚಿಂತನೆಗಳ ಮುಂದುವರಿಕೆಯಾಗಿ ವಚನಗಳಲ್ಲಿ ದೇಹ-ಮನಸ್ಸು-ಅರಿವುಗಳ ಸಂಬಂಧ ಕುರಿತ ವಿವೇಚನೆ ಇದೆ, ಅದು ತನ್ನ ಹಿಂದಿನ ಚಿಂತನೆಗಳಿಂದ ಪುಷ್ಟಿ ಪಡೆದೂ ಭಿನ್ನವಾಗಿದೆ; ಆನಂತರದ ಕಾಲದಲ್ಲಿ ಈ ಚಿಂತನೆ ಸ್ವರವಚನ, ಕೊಡೆಕಲ್ ಬಸವಣ್ಣನ ಪರಂಪರೆ, ನಿರ್ವಾಣಸ್ವಾಮಿ, ಮಂಟೇಸ್ವಾಮಿ ಪರಂಪರೆಗಳ ಮೂಲಕ ಕರ್ನಾಟಕದಾತ್ಯಂತ ಹರಡಿತು ಅನ್ನುವ ನಕ್ಷೆಯೊಂದನ್ನು ರೂಪಿಸುವ ಕಲ್ಗುಡಿಯವರು ಮಧ್ಯಕಾಲೀನ ಕನ್ನಡ ಚಿಂತನೆಗಳನ್ನು ಪರಿಶೀಲಿಸಲು ಹೊಸ ಸಾಧ್ಯತೆಯೊಂದನ್ನು ಸೂಚಿಸಿದ್ದಾರೆ.

ಎರಡನೆಯ ಭಾಗದಲ್ಲಿ ಆಧುನಿಕತೆಯನ್ನು ಕನ್ನಡ ಕಾವ್ಯ ಎದುರುಗೊಂಡ, ವ್ಯಾಖ್ಯಾನಿಸಿಕೊಂಡ ರೀತಿಯನ್ನು ಪರಿಶೀಲಿಸುವ ಸುದೀರ್ಘವಾದ ಲೇಖನವೊಂದಿದೆ. ಮೊದಲ ಭಾಗದ ಲೇಖನಗಳಲ್ಲಿ ಕನ್ನಡ ಸಂಸ್ಕೃತಿಯು ನಡೆಸಿದ ಮೈ-ಮಾತು-ಅರಿವುಗಳ ಸಂಬಂಧದ ಹುಡುಕಾಟವು ಇಂಗ್ಲಿಷರ ಮೂಲಕ ಪರಿಚಯಗೊಂಡ ಆಧುನಿಕತೆಯನ್ನು ಕನ್ನಡ ಕಾವ್ಯ ಯಾವೆಲ್ಲ ರೀತಿಯಲ್ಲಿ ಅರಗಿಸಿಕೊಳ್ಳಲು ಯತ್ನಿಸಿದೆ ಎಂಬುದನ್ನು ಸ್ವರವಚನಕಾರರಿಂದ ಆರಂಭಿಸಿ ಇಪ್ಪತ್ತನೆಯ ಶತಮಾನದ ಮಧ್ಯಭಾಗದವರೆಗೂ ಸೃಷ್ಟಿಯಾದ ಕಾವ್ಯದ ಪರಿಶೀಲನೆಯ ಮುಖಾಂತರ ಕಲ್ಗುಡಿ ಸೂಚಿಸಿದ್ದಾರೆ.

ನವ್ಯ, ನವೋದಯ ಇತ್ಯಾದಿ ಪರಿಚಿತ ಮಾದರಿಗಳಲ್ಲೇ ಕನ್ನಡ ಕಾವ್ಯವನ್ನು ಪರಿಶೀಲಿಸುವ ಬದಲಾಗಿ ಆಧುನಿಕತೆ ಎಂಬ ಪರಿಕಲ್ಪನೆಯನ್ನು ಕನ್ನಡ ಕಾವ್ಯ ಹೇಗೆ ಎದುರಿಸಿದೆ ಅನ್ನುವ ಅನ್ವೇಷಣೆ ನಡೆಸಿದ್ದಾರೆ. ಡಿ.ಆರ್. ನಾಗರಾಜ್ ಅವರು ಪ್ರಮುಖ ಆಶಯಗಳ ಮೂಲಕ ಕನ್ನಡ ಕಾವ್ಯದ ಪರಿಶೀಲನೆ ನಡೆಸಿದ ನಿದರ್ಶನ ನಮ್ಮ ಮುಂದಿದೆ. ಇಲ್ಲಿ ಕಲ್ಗುಡಿಯವರು ಅದಕ್ಕಿಂತ ಬೇರೆಯ ದಾರಿಯಲ್ಲಿ ಆಧುನಿಕತೆ ಎಂಬ ವ್ಯಾಪಕವಾದ ಕಲ್ಪನೆಯ ಮೂಲಕ ಕನ್ನಡ ಕಾವ್ಯದ ಸಾಂಸ್ಕೃತಿಕ, ಸಾಮಾಜಿಕ ವಿಶ್ಲೇಷಣೆಗೆ ನಕ್ಷೆಯೊಂದನ್ನು ರೂಪಿಸುವ ಪ್ರಯತ್ನದಲ್ಲಿ ತೊಡಗಿದ್ದಾರೆ ಅನ್ನಿಸುತ್ತದೆ.

‘ಕನ್ನಡ ಕಣ್ಮಣಿಗಳು’ ಎಂಬ ಮೂರನೆಯ ಭಾಗದಲ್ಲಿ ಸಮಕಾಲೀನ ಸಾಹಿತ್ಯಕ, ಸಾಂಸ್ಕೃತಿಕ ವ್ಯಕ್ತಿತ್ವಗಳಾದ ಜಿ.ಎಸ್.ಎಸ್, ಕಿರಂ, ಮತ್ತು ಶ್ರೀನಿವಾಸರಾಜು ಅವರ ವ್ಯಕ್ತಿ ಚಿತ್ರಣಗಳಿವೆ. ಆಧುನಿಕ ಕನ್ನಡದ ಸಾಂಸ್ಕೃತಿಕ ವಲಯದ ಭಿನ್ನ ವ್ಯಕ್ತಿತ್ವ ಮಾದರಿಗಳು ಇವರು ಅನ್ನುವುದನ್ನು ಮನಗಾಣಿಸುವಂತಿವೆ.

ನಾಲ್ಕನೆಯ ಭಾಗದ ಐದು ಲೇಖನಗಳಲ್ಲಿ ‘ಕನ್ನಡದ ಆಚೆಗಿನ ಲೋಕಜ್ಞಾನವನ್ನು ನನ್ನೊಳಗು ಮಾಡಿಕೊಂಡ ಬಗೆ’ ಎಂದು ಕಲ್ಗುಡಿಯವರು ವಿವರಿಸಿಕೊಂಡಿದ್ದಾರೆ. ಎರಿಕ್ ಫ್ರಾಮ್, ಮಾರ್ಕ್ಸ್, ಗಾಂಧಿ, ಟ್ಯಾಗೋರ್, ಚಾಮ್ಸ್‌ಕಿ, ನೆರೂಡ ಇಂಥವರ ಚಿಂತನೆಗಳು ಕನ್ನಡದ ಒಂದು ತಲೆಮಾರಿನ ಪ್ರಜ್ಞೆಯೊಳಗೆ ಸೇರಿ ಹೋದ ಬಗೆಯ ನಿದರ್ಶನಗಳೆಂದು ಈ ಬರವಣಿಗೆಗಳನ್ನು ನೋಡಬಹುದು. ಅತಿಯಾದ ದೇಸೀಯತೆ ನಮ್ಮನ್ನು ಕುಬ್ಜಗೊಳಿಸುವ ಅಪಾಯ ಎದ್ದು ಕಾಣುತ್ತಿರುವ ಈ ಹೊತ್ತಿನಲ್ಲಿ ಕನ್ನಡದ ಆಚೆಗಿನ ತಿಳಿವಳಿಕೆಯನ್ನು ಒಳಗುಮಾಡಿಕೊಳ್ಳುವ ಅಗತ್ಯವನ್ನು ಇವು ಮನದಟ್ಟುಮಾಡುವಂತಿವೆ.

ಐದನೆಯ ಭಾಗವಾದ ‘ಕಾಲಜ್ಞಾನ’ದಲ್ಲಿರುವ ಲೇಖನಗಳು ವಿವಿಧ ಪರಾಮರ್ಶನ ಗ್ರಂಥ, ನಿಯತಕಾಲಿಕೆಗಳಿಗೆಂದು ಬರೆದವು ಅಥವಾ ವಿದ್ವತ್ ಪತ್ರಿಕೆಗಳಲ್ಲಿ ಪ್ರಕಟಗೊಂಡವು. ಇಲ್ಲಿಯೂ ಸಂಸ್ಕೃತಿ, ಸಾಮಾಜಿಕ ಆಚರಣೆ, ಶಾಸನ, ಇಂಥ ವಿಚಾರಗಳನ್ನು ಕುರಿತ ಬರವಣಿಗೆಯೇ ಹೆಚ್ಚಿನ ಪ್ರಮಾಣದಲ್ಲಿದೆ. ಶಾಸನ ಮೊದಲಾದ ಆಕರಗಳನ್ನು ಸತ್ಯದ ನಿಕ್ಷೇಪಗಳೆಂದು ಭಾವಿಸಿ ಅಧ್ಯಯನದಲ್ಲಿ ತೊಡಗುವ ಎಂಪೆರಿಕಲ್ ಮಾದರಿ ಎಂದು ಕರೆಯಲಾಗುವ ವಿಧಾನವನ್ನು ಈ ಬರಹಗಳು, ಮತ್ತು ಪುಸ್ತಕದ ಎಲ್ಲ ಬರಹಗಳೂ ಪ್ರಶ್ನಿಸುತ್ತವೆ. ಜಾನಪದ ಅಭಿವ್ಯಕ್ತಿ, ಶಾಸನ, ಆಚರಣೆ ಇಂಥವನ್ನೆಲ್ಲ ಸೃಜನಶೀಲತೆ, ವ್ಯುತ್ಪತ್ತಿಗಳೊಡನೆ, ಅವು ಹೇಳುವುದಕ್ಕಿಂತ ಹೇಳದಿರುವ, ಹೇಳಲಾಗದ ಸಂಗತಿಗಳ ಹಿನ್ನೆಲೆಯಲ್ಲಿ ಅಧ್ಯಯನ ಮಾಡುವ ಅಗತ್ಯವಿದೆ ಅನ್ನುವುದನ್ನು, ಕನ್ನಡದ ಸಾಂಸ್ಕೃತಿಕ ಅಧ್ಯಯನ ಹಿಡಿಯಬೇಕಾದ ದಾರಿಯ ಸೂಚನೆಗಳನ್ನು ಈ ಲೇಖನಗಳು ಒಳಗೊಂಡಿವೆ.

ಇತ್ತೀಚಿನ ವರ್ಷಗಳಲ್ಲಿ ಬಂದ ಮುಖ್ಯ ಪುಸ್ತಕಗಳಲ್ಲಿ ಇದೊಂದು ಎಂದು ಹೆಮ್ಮೆ ಪಡುತ್ತಿರುವಾಗಲೇ ಕಲ್ಗುಡಿಯವರ ಬರವಣಿಗೆ ಇನ್ನೊಂದಷ್ಟು ಲವಲವಿಕೆಯಿಂದ ಕೂಡಿ, ಪುನರುಕ್ತಿಗಳು ಕಡಮೆಯಾಗಿದ್ದರೆ ಚೆನ್ನಾಗಿರುತಿತ್ತು ಅನ್ನುವ ಭಾವ ಕೂಡ ಮನಸ್ಸಿನಲ್ಲಿ ಸುಳಿದು ಹೋಗುತ್ತದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT