ಬುಧವಾರ, 15 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೀಗೂ ಒಂದು ಸಂಶೋಧನೆ...

Last Updated 30 ಮಾರ್ಚ್ 2013, 19:59 IST
ಅಕ್ಷರ ಗಾತ್ರ

ವಿಮರ್ಶೆ

ಕನ್ನಡ ಚಲನಚಿತ್ರಗೀತೆಗಳು: ಒಂದು ಸಮಗ್ರ ಅಧ್ಯಯನ
ಲೇ: ಡಾ. ಡಿ. ಭರತ್
ಪು: 360; ಬೆ: ರೂ. 300
ಪ್ರ: ಸಾಹಿತ್ಯ ಸುಗ್ಗಿ, ನಂ.40, 1ನೇ ಮುಖ್ಯ ರಸ್ತೆ, 2ನೇ ಹಂತ, 3ನೇ ಬ್ಲಾಕ್, ನಾಗರಭಾವಿ, ಬೆಂಗಳೂರು-560072

ವಿಶ್ವವಿದ್ಯಾಲಯಗಳಲ್ಲಿ ನಡೆಯುತ್ತಿರುವ ಸಂಶೋಧನೆಗಳ ಗುಣಮಟ್ಟ, ಅದರಲ್ಲೂ ವಿಶೇಷವಾಗಿ ಸಾಹಿತ್ಯ ಮತ್ತಿತರ ಮಾನವಿಕ ವಿಭಾಗಗಳಲ್ಲಿ ನಡೆಯುತ್ತಿರುವ ಸಂಶೋಧನೆಗಳ ಬಗ್ಗೆ ಹಲವು ಟೀಕೆಗಳು ಆಗಾಗ ಕೇಳಿ ಬರುತ್ತಲೇ ಇರುತ್ತವೆ. ಈ ದೂರುಗಳ ಭಾರದಿಂದಲೋ ಎಂಬಂತೆ ಯುಜಿಸಿ ಹತ್ತು ಹಲವು ಆಡಳಿತಾತ್ಮಕ ಕ್ರಮಗಳ ಮೂಲಕ ಪಿಎಚ್.ಡಿ ಸಂಶೋಧನೆಯ ಗುಣಮಟ್ಟವನ್ನು ಹೆಚ್ಚಿಸುವ ಪ್ರಯತ್ನದಲ್ಲಿಯೂ ತೊಡಗಿಕೊಂಡಿದೆ. ಆದರೆ ಇದು ಬಹಳ ದೊಡ್ಡ ಪರಿಣಾಮವನ್ನೇನೂ ಬೀರಿಲ್ಲ ಎಂಬುದಕ್ಕೆ ಆಗಾಗ ಸಾಕ್ಷಿಗಳು ದೊರೆಯುತ್ತಲೇ ಇರುತ್ತವೆ. ಈ ಪಟ್ಟಿಗೆ ಹೊಸ ಸೇರ್ಪಡೆ  ಡಿ. ಭರತ್ ಅವರ `ಕನ್ನಡ ಚಲನಚಿತ್ರಗೀತೆಗಳು: ಒಂದು ಸಮಗ್ರ ಅಧ್ಯಯನ'.

1934ರಿಂದ 2009ರವರೆಗಿನ ಕನ್ನಡ ಚಲನಚಿತ್ರ ಗೀತೆಗಳ ಸಮಗ್ರ ಅಧ್ಯಯನ ಇದೆಂದು ಸಂಶೋಧಕರು ಹೇಳಿಕೊಂಡಿದ್ದಾರೆ. ಏಳೂವರೆ ದಶಕಗಳ ಅವಧಿಯ ಚಲನಚಿತ್ರಗೀತೆಗಳ ಸಮಗ್ರ ಅಧ್ಯಯನ ಎಂಬುದು ಒಂದು ಪಿಎಚ್.ಡಿ ಪ್ರಬಂಧವಷ್ಟೇ ಆಗಿಬಿಡಲು ಸಾಧ್ಯವೇ ಎಂಬ ತಾರ್ಕಿಕ ಪ್ರಶ್ನೆಯನ್ನಿಲ್ಲಿ ಎತ್ತಬಹುದು.

ಸಮಗ್ರ ಎಂದರೆ ಸಹಜವಾಗಿಯೇ ಈ ಅವಧಿಯಲ್ಲಿ ಬಂದ ಎಲ್ಲಾ ಚಲನಚಿತ್ರ ಗೀತೆಗಳನ್ನು ಅಧ್ಯಯನಕ್ಕೆ ಪರಿಗಣಿಸಬೇಕಾಗುತ್ತದೆ. ಜೊತೆಗೆ ಚಲನಚಿತ್ರ ಸಂಗೀತದ ಎಲ್ಲಾ ಆಯಾಮಗಳನ್ನು ಪರಿಗಣಿಸಿಯೇ ಅಧ್ಯಯನವನ್ನು ನಡೆಸಬೇಕಾಗುತ್ತದೆ. ಡಿ. ಭರತ್ ಅವರ ಸಂಶೋಧನೆಯಲ್ಲಿ ಅಂಥದ್ದೇನೂ ಇಲ್ಲದಿರುವುದು ಸಂಶೋಧನಾ ಮಹಾಪ್ರಬಂಧದ ಮೌಲ್ಯಮಾಪಕರಿಗೆ ಒಂದು ಕೊರತೆ ಎಂಬಂತೆ ಕಂಡಿಲ್ಲ. ಬಹುಶಃ `ಸಮಗ್ರ' ಎಂಬುದಕ್ಕೆ ವಿಶ್ವವಿದ್ಯಾಲಯಗಳ ವಿದ್ವಾಂಸರ ದೃಷ್ಟಿಯಲ್ಲಿ ಬೇರೆಯೇ ಅರ್ಥವಿರಬಹುದೇನೋ. ಹಾಗಿದ್ದರೆ ಅದನ್ನು ಸಂಶೋಧನೆಯನ್ನು ನಡೆಸಿದವರು, ಅದಕ್ಕೆ ಮಾರ್ಗದರ್ಶನ ಮಾಡಿದವರು ಅಥವಾ ಮೌಲ್ಯಮಾಪಕರಾದರೂ ಇದನ್ನು ಸ್ಪಷ್ಟವಾಗಿ ಹೇಳಿಬಿಟ್ಟಿದ್ದರೆ ಈ ಗ್ರಂಥವನ್ನು ಓದಲು ಅಥವಾ ಪರಾಮರ್ಶೆಗೆ ಎತ್ತಿಕೊಳ್ಳುವವರಿಗೆ `ಸಮಗ್ರ'ತೆಯ ಮಿತಿ ಅರ್ಥವಾಗುತ್ತಿತ್ತು.

ಪಿಎಚ್‌ಡಿ ಮಹಾಪ್ರಬಂಧಗಳ ಮೌಲ್ಯಮಾಪನದ ಗುಣಮಟ್ಟವನ್ನು ಸೂಚಿಸುವಂಥ ಮೌಲ್ಯಮಾಪಕರ ಟಿಪ್ಪಣಿಯೊಂದೂ ಈ ಪುಸ್ತಕದಲ್ಲಿದೆ. ಮೂರು ಖಂಡಿಕೆಗಳ ಈ ಟಿಪ್ಪಣಿಯಲ್ಲಿ ಮೊದಲನೆಯದ್ದು ಅಧ್ಯಯನದ ಶೀರ್ಷಿಕೆ ಮತ್ತು ಸಂಶೋಧಕರ ಹೆಸರು ಇತ್ಯಾದಿಗಳನ್ನು ಹೇಳುತ್ತದೆ. ಉಳಿದರೆಡು ಖಂಡಿಕೆಗಳು ಈ ಕೆಳಗಿನಂತಿವೆ.

`ಮೊದಲ ಅಧ್ಯಾಯದಲ್ಲಿಯೇ ಸಂಶೋಧಕರು ಚಿತ್ರಗೀತೆಗಳಿಗೆ ಸಂಬಂಧಿಸಿದ ಪರಂಪರೆಯನ್ನು ಕಟ್ಟಿಕೊಟ್ಟಿದ್ದಾರೆ. ಈ ಮಹಾಪ್ರಬಂಧದ ಉದ್ದೇಶವನ್ನು ಇದೇ ಅಧ್ಯಾಯದಲ್ಲಿ ಸ್ಪಷ್ಟಪಡಿಸಿದ್ದಾರೆ. ಮಹಾ ಪ್ರಬಂಧದ ವ್ಯಾಪ್ತಿಯನ್ನು ಸೂಚಿಸಿದ್ದಾರೆ. ಎರಡರಿಂದ ಒಂಬತ್ತನೇ ಅಧ್ಯಾಯಗಳವರೆಗೆ ನಡೆದಿರುವ ಅಧ್ಯಯನವು ಅಚ್ಚುಕಟ್ಟಾಗಿ ಮೂಡಿಬಂದಿದೆ. ಹತ್ತನೇ ಅಧ್ಯಾಯವು ಉಪಸಂಹಾರವಾಗಿದೆ. `ಒಟ್ಟಿನಲ್ಲಿ ಇದೊಂದು ಮಹತ್ವದ ಅಧ್ಯಯನವಾಗಿದ್ದು ಸಂಶೋಧಕರು ಹಾಗೂ ಮಾರ್ಗದರ್ಶಕರು ಅಭಿನಂದನಾರ್ಹರಾಗಿದ್ದಾರೆ'.

ಈ ಕೃತಿಯನ್ನು ಓದಿದ ಮೇಲೆ ಮೇಲಿನ ಸಾಲುಗಳು ಬಹಳ ಅರ್ಥಪೂರ್ಣ ಎನಿಸಿಬಿಡುತ್ತದೆ. ಈ ಸಂಶೋಧನೆಗೆ ಪದವಿ ಕೊಡಬೇಕೆಂದು ತೀರ್ಮಾನಿಸಿದ ಮೇಲೆ ಇದಕ್ಕಿಂತ ಹೆಚ್ಚಿನದ್ದನ್ನು ಬರೆಯಲು ಹೇಗೆ ಸಾಧ್ಯವಿತ್ತು? ಸಮಸ್ಯೆ ಇರುವುದು ಮೌಲ್ಯಮಾಪಕರ `ಮಹತ್ವದ ಅಧ್ಯಯನ' ಎಂಬ ತೀರ್ಮಾನದಲ್ಲಿ ಮಾತ್ರ. ಬಹುಶಃ `ಸಮಗ್ರ' ಎಂಬ ಪದಕ್ಕೆ ವಿಶ್ವವಿದ್ಯಾಲಯದಲ್ಲಿ ವಿದ್ವಾಂಸರ ಬಳಿ ಅವರಿಗೆ ಮಾತ್ರ ತಿಳಿದಿರುವಂತೆ ವಿಶೇಷಾರ್ಥವಿರುವಂತೆ `ಮಹತ್ವದ ಅಧ್ಯಯನ' ಎಂಬುದಕ್ಕೂ ವಿಶೇಷಾರ್ಥವಿರಬಹುದೆಂದು ನಾವು ಸಮಾಧಾನ ಪಟ್ಟುಕೊಳ್ಳಬೇಕೇನೋ?
ಹಾಡುಗಳು ಭಾರತೀಯ ಸಿನಿಮಾಕ್ಕೆ ವಿಶಿಷ್ಟವಾದವು.

ಈ ಕುರಿತ ಸಂಶೋಧನೆಯೊಂದು ಕುತೂಹಲ ಹುಟ್ಟಿಸುವುದರಲ್ಲಿ ಯಾವ ಸಂಶಯವೂ ಇಲ್ಲ. ಡಿ. ಭರತ್ ಅವರ ಪುಸ್ತಕದ ಶೀರ್ಷಿಕೆ ಇದೇ ಕಾರಣಕ್ಕೆ ಕುತೂಹಲ ಹುಟ್ಟಿಸುತ್ತದೆ. ಆದರೆ ಓದುತ್ತಾ ಹೋದಂತೆ ಸಂಶೋಧಕರಿಗೆ ಈ ವಿಚಾರದಲ್ಲಿ ಕುತೂಹಲವಾಗಲೀ ಪ್ರಶ್ನೆಗಳಾಗಲೀ ಇಲ್ಲ ಎಂಬುದು ಅನಾವರಣಗೊಳ್ಳುತ್ತಾ ಹೋಗುತ್ತದೆ. ಯಾಂತ್ರಿಕವಾಗಿ ಹಾಡುಗಳ ಕೆಲವು ಸಾಲುಗಳನ್ನು ಉಲ್ಲೇಖಿಸುತ್ತಾ ಪ್ರಾಥಮಿಕ ಶಾಲೆಗಳ ಮಕ್ಕಳಿಗೆ ಪದ್ಯಗಳ ತಾತ್ಪರ್ಯವನ್ನು ಗದ್ಯದಲ್ಲಿ ವಿವರಿಸುವಂಥ ಸಾಲುಗಳನ್ನು ಬರೆಯಲಾಗಿದೆ. ಇದರಲ್ಲಿ ಮಹತ್ವದ ಅಧ್ಯಯನವನ್ನು ಹುಡುಕಲು ಮೌಲ್ಯಮಾಪಕರಿಗೆ ಸಾಧ್ಯವಾಗಿರುವುದು ನಿಜಕ್ಕೂ ಮಹತ್ವದ ವಿಚಾರವೇ ಸರಿ.

ಹಾಡುಗಳಿಲ್ಲದಿದ್ದರೆ ಸಿನಿಮಾ ಸಂಪೂರ್ಣವಲ್ಲ ಎಂಬಷ್ಟರ ಮಟ್ಟಿಗೆ ಭಾರತೀಯ ಸಿನಿಮಾಗಳನ್ನು ಹಾಡುಗಳು ಆವರಿಸಿಕೊಂಡಿವೆ. ಅದೇ ಕನ್ನಡದ ಕನ್ನಡಿಯಲ್ಲೂ ಪ್ರತಿಬಿಂಬಿಸಿದೆ. ಆದರೆ ಭರತ್ ಅವರ ಅಧ್ಯಯನ ಇಂಥ ಯಾವ ಅಂಶಗಳನ್ನೂ ಪರಿಗಣಿಸಿದಂತೆ ಕಾಣಿಸುವುದಿಲ್ಲ. ಅವರ ಪರಾಮರ್ಶನ ಗ್ರಂಥಗಳ ಪಟ್ಟಿಯಲ್ಲಿಯೂ ಈ ಹಿಂದೆ ಭಾರತೀಯ ಚಲನಚಿತ್ರಗಳಲ್ಲಿ ಹಾಡಿನ ಮಹತ್ವದ ಕುರಿತಂತೆ ಬಂದ ಒಂದು ಅಧ್ಯಯನವೂ ಕಾಣಿಸುವುದಿಲ್ಲ.

ಕೃತಿಯ ಉದ್ದಕ್ಕೂ ಕೇವಲ ಚಿತ್ರಗೀತೆಗಳ ಕೆಲ ಸಾಲುಗಳು ಮತ್ತು ಅವುಗಳ ಗದ್ಯಾರ್ಥವನ್ನು ನಮೂದಿಸಲಾಗಿದೆ. ಅಲ್ಲಲ್ಲಿ ಗೀತೆಗಳ ಮೌಲ್ಯ ನಿರ್ಣಯಕ್ಕೆ ಮುಂದಾಗುತ್ತಾರೆಯೇ ಹೊರತು ಒಟ್ಟಾರೆಯಾಗಿ ಚಿತ್ರಗೀತೆಗಳನ್ನು ಕನ್ನಡ ಸಾಂಸ್ಕೃತಿಕ ಚರಿತ್ರೆಯೊಳಗೆ ಅರಿಯುವ ಅಥವಾ ಈ ಗೀತೆಗಳದ್ದೊಂದು ಇತಿಹಾಸವನ್ನು ಕಟ್ಟಿಕೊಡುವ ಪ್ರಯತ್ನ ಮಾಡುವುದಿಲ್ಲ.

ಇದಕ್ಕೊಂದು ಉತ್ತಮ ಉದಾಹರಣೆಯೆಂದರೆ 1985ರ ನಂತರದ ಚಿತ್ರ ಸಾಹಿತ್ಯದ ಕುರಿತ ವಿಶ್ಲೇಷಣೆ. ಹಾಗೆ ನೋಡಿದರೆ ಇಲ್ಲಿ ವಿಶ್ಲೇಷಣೆಯೇ ಇಲ್ಲ. ಇದೆ ಎಂದು ಭಾವಿಸಿಕೊಂಡು ಓದಿದರೆ ಸಂಶೋಧಕರು ದ್ವಂದ್ವಾರ್ಥದ ಹಾಡುಗಳನ್ನು ಉಲ್ಲೇಖಿಸಿ ಅವುಗಳು ಕೀಳು ಅಭಿರುಚಿಯವು ಇತ್ಯಾದಿಯಾಗಿ ಬಿಡುಬೀಸಾಗಿ ಟೀಕಿಸುತ್ತಾರೆಯೇ ಹೊರತು ಚಿತ್ರಗೀತೆಗಳ ಚರಿತ್ರೆಯ ಚಕ್ರದಲ್ಲಿ ಅವುಗಳು ಹೇಗೆ ಬಂದವು? ಅವುಗಳ ಸ್ಥಾನವೇನು? ಅದರ ಹಿಂದಿನ ಕಾರಣಗಳೇನು? ಎಂಬುದರ ಕುರಿತಂತೆ ಯಾವ ಒಳನೋಟವನ್ನೂ ಕೊಡುವುದಿಲ್ಲ.

ಈಗ ಪುಸ್ತಕ ರೂಪದಲ್ಲಿ ಪ್ರಕಟವಾಗಿರುವಷ್ಟೇ ಹೂರಣ ಪಿಎಚ್.ಡಿ ಪದವಿಗಾಗಿ ಸಲ್ಲಿಸಿರುವ ಮಹಾಪ್ರಬಂಧದಲ್ಲಿಯೂ ಇದೆಯೆಂದಾದರೆ ಅದು ಸಂಶೋಧಕರ ತಪ್ಪಲ್ಲ. ಇದು ಸಂಶೋಧನಾ ಮಾರ್ಗದರ್ಶಕರು, ಮೌಲ್ಯಮಾಪಕರು ಮತ್ತು ಪದವಿಗಳನ್ನು ನೀಡುವ ವಿಶ್ವವಿದ್ಯಾಲಯ ವ್ಯವಸ್ಥೆಯ ಬೌದ್ಧಿಕ ದಿವಾಳಿತನದ ಪ್ರತೀಕ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT