ಬುಧವಾರ, 24 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ವ್ಯಕ್ತಿತ್ವದ ಕನ್ನಡಿಗೆ ಸಂಮಾನದ ಚೌಕಟ್ಟು

Last Updated 27 ಜುಲೈ 2018, 5:52 IST
ಅಕ್ಷರ ಗಾತ್ರ

ಸುಮಾರು 1987-88 ಇಸವಿ. ಸಂಮಾನ, ಗೌರವ ಪ್ರದಾನಗಳು ತೀರಾ ವಿರಳ. ಹಾರ ಹಾಕಿದರೆ ಸುದ್ದಿ. ಶಾಲು ಹೊದೆಸಿದರಂತೂ ದೊಡ್ಡ ಸುದ್ದಿ. ಸ್ಮರಣಿಕೆ ಸ್ವೀಕರಿಸುವುದು ಪ್ರತಿಷ್ಠೆ. ತೀರಾ ವಿರಳವಾಗಿ ಅಲ್ಲಿಲ್ಲಿ ಗೌರವ ಪ್ರದಾನಗಳು ನಡೆಯುತ್ತಿದ್ದುವಷ್ಟೇ. ಈಗಿನಂತೆ ಕಾರ್ಯಕ್ರಮಗಳಲ್ಲಿ ಸಂಮಾನ ಇರಲೇಬೇಕೆಂಬ ಹಠವಿದ್ದಿರಲಿಲ್ಲ! ಹಿಂದಿನ ಹಿರಿಯ ಕಲಾವಿದರ ಕಲಾಯಾನದಲ್ಲಿ ಕೈಗೆ ಬಂಗಾರದ/ಬೆಳ್ಳಿಯ ಕಡಗ, ನೋಟಿನ ಹಾರ, ಉಂಗುರ, ಚೈನು.. ನೀಡಿ ಗೌರವಿಸಿದ ಸುದ್ದಿಗಳು ಓದಿಗೆ ಸಿಗುತ್ತವೆ. ಅನುಭವಿ, ಪಕ್ವ ಕಲಾವಿದರನ್ನು ಆದರಿಸುವ ಪರಿಪಾಠ ಮೊದಲಿನಿಂದಲೇ ಇತ್ತು. ಆಗ ಅಭಿಮಾನ ವ್ಯಕ್ತಿಗತವಲ್ಲ, ಸಮಗ್ರ ಯಕ್ಷಗಾನದತ್ತ ನೋಟ.

ಈಚೆಗಿನ ವರುಷಗಳತ್ತ ಹೊರಳೋಣ. ಕೀರ್ತಿಶೇಷರ ಕಲಾವಿದರ ‘ಸಂಸ್ಮರಣೆ’ ಮತ್ತು ಅವರ ನೆನಪಿನ ಪ್ರಶಸ್ತಿ, ಸಂಮಾನಗಳು ಅಧಿಕವಾಗುತ್ತಿವೆ. ತೀರಾ ಬದ್ಧತೆಯಿಂದ, ಅಚ್ಚುಕಟ್ಟಾಗಿ ನಡೆಯುವ ಸಂಸ್ಮರಣೆಗಳು ತೆಂಕು, ಬಡಗು ತಿಟ್ಟಿನುದ್ದಕ್ಕೂ ಕಾಣಬಹುದು. ಕಲಾವಿದನೋರ್ವ ತನ್ನ ರಂಗ ಯಶಸ್ಸನ್ನು ಸಮಾಜದಲ್ಲಿ ಊರಿದಾಗ ಸಮಾಜ ಆ ಕಲಾವಿದರನ್ನು ಗುರುತಿಸಿ ಮಾನಿಸುತ್ತದೆ. ಬಳಿಕವೂ ನೆನಪನ್ನು ಕಾಪಿಡುವ ವ್ಯವಸ್ಥೆಗಳನ್ನು ಮಾಡಿಕೊಳ್ಳುತ್ತದೆ. ಜೀವಂತ ಸಂಸ್ಕೃತ ಭೂಯಿಷ್ಠ ಸಮಾಜದ ಲಕ್ಷಣ. ಇಂತಹ ಗುಣಗಳನ್ನು ಹೊಂದಿರುವ ಮನಸ್ಸುಗಳಿರುವುದರಿಂದ ನೂರಾರು ಸಂಸ್ಮರಣೆಗಳು, ನೆನಪಿನ ಗೌರವಗಳು ನಡೆಯುತ್ತಿವೆ.

ಬದುಕಿನ ಯಶಕ್ಕೆ ಹಿರಿಯರು ಹಾಕಿಕೊಟ್ಟ ಮಾದರಿಗಳು ಕೈತಾಂಗು ಇದ್ದಂತೆ. ಮಾದರಿಗಳ ಹಾದಿಯುದ್ದಕ್ಕೂ ಕ್ರಮಿಸಲಾಗದಿದ್ದರೂ ಹೊರಮೈಯನ್ನು ಸ್ಪರ್ಶಿಸುತ್ತೇವಷ್ಟೇ. ಅದು ತೋರಿದ ಪಥದಲ್ಲಿ ಸಾಗುತ್ತೇವೆ. ಯಕ್ಷಗಾನದ ವಿಚಾರಕ್ಕೆ ಬಂದಾಗ ಒಬ್ಬೊಬ್ಬ ಕಲಾವಿದನಲ್ಲೂ ಮಾದರಿಗಳಿವೆ! ಆಯ್ಕೆ ಮಾತ್ರ ನಮ್ಮದು. ಅದರ ನಿಜಪಥ ಕಾಣುವುದು ಕೆಲವೇ ಮಂದಿಗೆ ಮಾತ್ರ! ಅದು ಅಪ್ಪಟವಾಗಿ ಪ್ರಕಟವಾಗುವುದು ರಂಗದ ಯಶದಿಂದ, ಅಭಿವ್ಯಕ್ತಿಯಿಂದ, ವೈಯಕ್ತಿಕವಾದ ನಿಲುವಿನಿಂದ. ಇಂತಹ ಕಲಾನಿಷ್ಠರನ್ನು ಸಮಾಜ ಮರೆಯುವುದಿಲ್ಲ. ಅದು ನೆನಪಿಟ್ಟುಕೊಳ್ಳುವ ಸಾಮರ್ಥ್ಯ ಮತ್ತು ಅಗತ್ಯಗಳನ್ನು ಹೊಂದಿರುತ್ತದೆ. ಈ ವ್ಯಾಪ್ತಿಗೆ ನಿಲುಕದ ಮನಸ್ಸುಗಳನ್ನು ಸಮಾಜ ಸ್ಪರ್ಶಿಸುವುದಿಲ್ಲ.

ಸಂಸ್ಮರಣೆಯಲ್ಲಿ ಎರಡು ವಿಧ. ಒಂದು, ಸಂಸ್ಮರಣಾ ಗ್ರಂಥಗಳ ಪ್ರಕಟಣೆ, ಇನ್ನೊಂದು ವಾರ್ಷಿಕ ನೆನಪಿನ ಕಲಾಪಗಳು. ಈಗಿರುವ ಸಂಸ್ಮರಣ ಕೃತಿಗಳ ಪುಟ ತಿರುವಿದಾಗ ಆ ಕಾಲಘಟ್ಟದ ಸಾಮಾಜಿಕ ಚಿತ್ರಣ, ರಂಗ ಬದುಕು, ಕಲಾಯಾನ ಮತ್ತು ಅವರೆಲ್ಲರ ಬೌದ್ಧಿಕ ಶಕ್ತಿಯ ಗಾಢತೆ ಗೋಚರವಾಗುತ್ತದೆ. ಭೂತಕಾಲದ ಸುದ್ದಿಯಾದರೂ ವರ್ತಮಾನದ ಬದುಕು ಅದನ್ನು ತಿರಸ್ಕರಿಸುವುದಿಲ್ಲ. ಗ್ರಂಥಗಳು ಮರೆಯಾದ ಕಲಾವಿದನ ವ್ಯಕ್ತಿತ್ವದ ಕನ್ನಡಿ. ಅದರ ಆಧಾರದಲ್ಲಿ ವರ್ತಮಾನದಲ್ಲಿ ನಿಂತು ಯಕ್ಷಗಾನದ ಇತಿಹಾಸವನ್ನು ಓದುತ್ತೇವೆ. ಕಳೆದೆರಡು ದಶಕಗಳಿಂದ ನೆನಪು ಗ್ರಂಥಗಳಿಗೆ ಬೀಸು ಹೆಜ್ಜೆ ಬಂದಿದೆ.

ವಾರ್ಷಿಕ ಪ್ರಶಸ್ತಿ, ಗೌರವಗಳತ್ತ ನೋಡೋಣ. ನನ್ನ ಯಕ್ಷಗಾನದ ಆರಂಭ ಕಾಲದಿಂದ - ಅಂದರೆ 1987ರ ಆಚೀಚೆ – ಮಂಗಳೂರಿನಲ್ಲಿ ಬೋಳೂರು ದೋಗ್ರ ಪೂಜಾರಿಯವರ ಸಂಸ್ಮರಣೆ ಮತ್ತು ಅವರ ನೆನಪಿನ ಪ್ರಶಸ್ತಿ ಪ್ರದಾನದಲ್ಲಿ ನಿರಂತರ ಭಾಗವಹಿಸಿದ್ದ ನೆನಪು ಹಸಿಯಾಗಿದೆ. ತಾಳಮದ್ದಳೆ ಯಾ ಆಟದ ಮಧ್ಯೆ ನಡೆಯುವ ಪ್ರಶಸ್ತಿ ಪ್ರದಾನ, ಪ್ರಶಸ್ತಿ ಪುರಸ್ಕೃತರ ಮಾತುಗಳು, ಸಂಸ್ಮರಣಾ ನುಡಿಗಳು ಆಟ-ಕೂಟದ ಹೊರತಾದ ಲೋಕವನ್ನು ಪರಿಚಯಿಸುತ್ತಿತ್ತು. ಇಂತಹ ಹಲವು ಸಂಸ್ಮರಣೆಗಳಿಗೆ ಮಂಗಳೂರು ಪುರಭವನ ಸಾಕ್ಷಿಯಾಗಿದೆ.

ಕೀರ್ತಿಶೇಷ ಕಲಾವಿದರ ಕುಟುಂಬ, ಬಂಧುಗಳು, ಅಭಿಮಾನಿಗಳು ವೇದಿಕೆಯನ್ನೋ, ಪ್ರತಿಷ್ಠಾನವನ್ನೋ ರೂಪಿಸುತ್ತಾರೆ. ಕೆಲವೆಡೆ ಅಭಿಮಾನಿಗಳು ಸಂಘಟಿತರಾಗಿ ಕಾರ್ಯಕ್ರಮಗಳನ್ನು ನಡೆಸುತ್ತಾರೆ. ಬೇಕಾದ ಆರ್ಥಿಕ ಹೊಂದಾಣಿಕೆಯನ್ನೂ ಮಾಡಿಕೊಳ್ಳುತ್ತಾರೆ. ಬೇರೆ ತಂಡಗಳು ನಡೆಸುವ ವರ್ಷಾವಧಿ ಕಲಾಪಗಳ ಮಧ್ಯೆ ಜೋಡಿಸಿಕೊಂಡು ಸಂಸ್ಮರಣೆಯನ್ನು ಮಾಡುವುದುಂಟು. ಇಂತಹ ಸಂದರ್ಭದಲ್ಲಿ ಕೊಡುವ ಗೌರವವು ಕಲಾವಿದರಿಗೆ ಖುಷಿ. ಏನೇ ಇರಲಿ, ಕಳೆದೊಂದು ದಶಕದೀಚೆಗೆ ಕಲಾವಿದರನ್ನು ಗೌರವಿಸುವ ಸು-ಮನಸಿಗರ ಸಂಖ್ಯೆ ವೃದ್ಧಿಸಿದೆ.

ಉಡುಪಿಯ ಕಲಾರಂಗವು ಹತ್ತಕ್ಕೂ ಮಿಕ್ಕಿ ಸಂಸ್ಮರಣಾ ಪ್ರಶಸ್ತಿಯನ್ನು ಪ್ರದಾನಿಸುತ್ತಿದೆ. ಡಾ.ಬಿ.ಬಿ.ಶೆಟ್ಟಿ, ಪ್ರೊ.ಬಿ.ವಿ.ಆಚಾರ್ಯ, ಭಾಗವತ ನಾರ್ಣಪ್ಪ ಉಪ್ಪೂರ, ಶ್ರೀಮತಿ ಮತ್ತು ಶ್ರೀ ಹೆರ್ಗ ರಾಮಕೃಷ್ಣ ಕೆದ್ಲಾಯ, ಪಡಾರು ನರಸಿಂಹ ಶಾಸ್ತ್ರಿ. ದಶಾವತಾರಿ ಮಾರ್ವಿ ರಾಮಕೃಷ್ಣ ಹೆಬ್ಬಾರ್ - ಭಾಗವತ ವಾದಿರಾಜ ಹೆಬ್ಬಾರ, ಕೋಟ ವೈಕುಂಠ, ಐರೋಡಿ ರಾಮ ಗಾಣಿಗ, ನಿಟ್ಟೂರು ಸುಂದರ ಶೆಟ್ಟಿ – ಮಹೇಶ ಡಿ.ಶೆಟ್ಟಿ. ಕಡಿಯಾಳಿ ಸುಬ್ರಾಯ ಉಪಾಧ್ಯಾಯ, ಮಟ್ಟಿ ಮುರಳೀಧರ ರಾವ್.. ಇತ್ಯಾದಿ... ಹೀಗೆ ಒಬ್ಬೊಬ್ಬರ ಹೆಸರಿನ ಪ್ರಶಸ್ತಿಗೆ ಕಲಾರಂಗವು ಅರ್ಹ ಕಲಾವಿದರನ್ನು ಆಯ್ಕೆ ಮಾಡುತ್ತಿದೆ. ಶಿಸ್ತಿನಿಂದ ಪ್ರಶಸ್ತಿ ಪ್ರದಾನ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ಯಾರ ಹೆಸರಿನ ಪ್ರಶಸ್ತಿಯೋ ಅವರ ಕುಟುಂಬದವರು ದತ್ತಿ ನಿಧಿ ಸ್ಥಾಪಿಸಿ ಬಡ್ಡಿಯ ಮೂಲಕ ಕಾರ್ಯಕ್ರಮ ನಡೆಸುವ ಪ್ರಕ್ರಿಯೆಯಿದು.

ಭಾಗವತ ಕಾಳಿಂಗ ನಾವಡ, ಮಲ್ಪೆ ಶಂಕರನಾರಾಯಣ ಸಾಮಗ, ಕೆರೆಮನೆ ಶಂಭು ಹೆಗಡೆ, ಕೀರಿಕ್ಕಾಡು ವಿಷ್ಣು ಮಾಸ್ತರ್, ಬಣ್ಣದ ಮಾಲಿಂಗ, ಪುತ್ತೂರು ಗೋಪಣ್ಣ... ಹೀಗೆ ಹೆಸರಿಸುತ್ತಾ ಹೋದರೆ ಹಲವಾರು ಸಂಸ್ಮರಣಾ ಪ್ರಶಸ್ತಿಗಳ ಮಾಲೆಗಳು ಬಡಗು - ತೆಂಕುತಿಟ್ಟಿನಲ್ಲಿವೆ. ಇನ್ನು ಸಂಸ್ಮರಣೆ ಮತ್ತು ಆ ಕುರಿತ ಪ್ರಶಸ್ತಿ ಸ್ಥಾಪನೆಗೆ ಅರ್ಹರಿದ್ದೂ ಸರಿಯಾದ ಪೋಷಣೆ, ಬೆಂಬಲ ಇಲ್ಲದೆ ನೇಪಥ್ಯದಲ್ಲಿ ಉಳಿದಿರುವವರ ಸಂಖ್ಯೆ ಅಗಣಿತ. ಕೊನೇ ಪಕ್ಷ ಇಂತಹವರನ್ನು ನೆನಪಿಸಲು ಸಾಂಘಿಕ ವ್ಯವಸ್ಥೆ ಇಲ್ಲದಿರಬಹುದು, ನೆನಪಿಸುವ ಬೆರಳೆಣಿಕೆಯ ಮನಸ್ಸುಗಳಿರುವುದರಿಂದ ಸಮಾಜದಲ್ಲಿ ಅವರ ನೆನಪು ಹಸಿಯಾಗಿರುತ್ತದೆ.

ಪ್ರತಿಷ್ಠಿತ ಪಟ್ಲ ಪ್ರಶಸ್ತಿ, ಎರಡು ವರುಷದ ಹಿಂದೆ ಸ್ಥಾಪಿಸಿದ ಪದ್ಯಾಣ ಪುಟ್ಟು ನಾರಾಯಣ ಭಾಗವತರ ಹೆಸರಿನ ‘ಪದ್ಯಾಣ ಪ್ರಶಸ್ತಿ,’ ಅರುವ ಪ್ರಶಸ್ತಿ, ಪಾತಾಳ ವೆಂಕಟ್ರಮಣ ಭಟ್ಟರು ತನ್ನ ಕಲಾ ಸೇವೆಯ ನೆನಪಿಗಾಗಿ ಸ್ಥಾಪಿಸಿದ ‘ಶ್ರೀ ಪಾತಾಳ ಪ್ರಶಸ್ತಿ’; ದೇರಾಜೆ ಸಂಸ್ಮರಣ ಪ್ರಶಸ್ತಿ, ಮುದ್ದಣ ಪ್ರಶಸ್ತಿ, ಶೇಣಿ ಪ್ರಶಸ್ತಿ, ಕುರಿಯ ಪ್ರಶಸ್ತಿ, ಕುಕ್ಕಿಲ ಪ್ರಶಸ್ತಿ, ಕರ್ಗಲ್ಲು ಪ್ರಶಸ್ತಿ, ಅಗರಿ ಪ್ರಶಸ್ತಿ, ವನಜ ರಂಗಮನೆ ಪ್ರಶಸ್ತಿ... ಹೀಗೆ ಒಂದೇ ಎರಡೇ.

ಅಲ್ಲದೆ ಮಠಗಳು, ವಿಶ್ವವಿದ್ಯಾಲಯಗಳು, ಸರಕಾರಗಳು ಮತ್ತು ಅನ್ಯಾನ್ಯ ಸಂಘ-ಸಂಸ್ಥೆಗಳು ನೀಡುವ ಪ್ರಶಸ್ತಿ-ಸಂಮಾನಗಳನ್ನು ಕಲಾವಿದರು ಪಡೆಯುತ್ತಿರುವುದು ಖುಷಿಯ ವಿಚಾರ. ಈ ಮಧ್ಯೆ ಕಾರ್ಯಕ್ರಮಕ್ಕಾಗಿಯೇ ಒಂದು ಸಂಮಾನ, ಸಂಸ್ಮರಣೆಯನ್ನು ಆಯೋಜಿಸುತ್ತಿರುವ ಸಂಘಟನೆಗಳೂ ಇಲ್ಲದಿಲ್ಲ. ಈಚೆಗೆ ಕೆಲವು ವರುಷಗಳಲ್ಲಿ ನೇಪಥ್ಯ ಕಲಾವಿದರನ್ನು ಗೌರವಿಸುವ ಪರಿಪಾಠ ಆರಂಭವಾಗಿದೆ. ವಾಟ್ಸಪ್ ಗುಂಪುಗಳು ಆಯೋಜಸಿವ ಪ್ರದರ್ಶನಗಳಲ್ಲಿ ಕಲಾವಿದರನ್ನು ವಿಶೇಷವಾಗಿ ಗೌರವಿಸುವುದನ್ನು ನೋಡುತ್ತೇವೆ.

ಕಲಾವಿದರ ಕುರಿತಾದ ವಿಶೇಷ ಅಭಿಮಾನವು ಸಮಾಜಕ್ಕಿದೆ. ಅದರ ದ್ಯೋತಕವಾಗಿ ಗೌರವ ಪ್ರದಾನ ನಡೆಯುತ್ತಿದೆ. ಹೀಗಾಗಿ ಕಲಾವಿದನ ಜವಾಬ್ದಾರಿ ಹೆಚ್ಚಿದೆ. ಆತ ಸಮಾಜಕ್ಕೆ ಋಣಿಯಾಗಿರುವುದು ಅವಶ್ಯ. ಕೆಲವೆಡೆ ಸಮಾಜಕ್ಕೆ ಭಾರವಾಗುವ, ಸಮಾಜದ ಜನರೇ ದೂರವಿರಿಸುವ ಅನೇಕ ಪ್ರಕರಣಗಳನ್ನು ಕಂಡಾಗ ಮರುಕವಾಗುತ್ತದೆ. ಇವರ್ಯಾಕೆ ಹೀಗೆ ಎನ್ನುವ ಪ್ರಶ್ನೆ ಪ್ರಶ್ನೆಯಾಗಿಯೇ ಉಳಿಯುತ್ತದೆ. ಏನಿದ್ದರೂ ವ್ಯಕ್ತಿತ್ವದ ಕನ್ನಡಿಗೆ ಸಂಮಾನವು ಚೌಕಟ್ಟು ಇದ್ದಂತೆ. ಚೌಕಟ್ಟಿನಿಂದ ಕನ್ನಡಿಗೆ ಬಲ.

(ಸಾಂದರ್ಭಿಕ ಚಿತ್ರ : ಸಂದೀಪ್ ಬಲ್ಲಾಳ್)
ಹಿಂದಿನ ವರುಷದ ಸರ್ಪಂಗಳ ಸುಬ್ರಹ್ಮಣ್ಯ ಭಟ್ ನೆನಪಿನ ಸಾಧಕ ಪ್ರಶಸ್ತಿ ಪ್ರದಾನ ಚಿತ್ರಗಳು

******

ನಾಳೆ ಉಡುಪಿಯಲ್ಲಿ ಸರ್ಪಂಗಳ:ನೆನಪಿನ ಸಾಧಕ ಪ್ರಶಸ್ತಿ ಪ್ರದಾನ
ಸರ್ಪಂಗಳ ಸುಬ್ರಹ್ಮಣ್ಯ ಭಟ್ (1948-2011) ಕಲಾರಾಧಕರು. ಬದಿಯಡ್ಕ ಸನಿಹದ ಸರ್ಪಂಗಳ ಮನೆತನ. ಕಲಾವಿದರನ್ನು ಪ್ರೀತಿಸಿ, ಅವರಿಗೆ ಆಸರೆಯಾಗುವ ಗುಣ. ಸಾಂಪ್ರದಾಯಿಕ ಯಕ್ಷಗಾನದತ್ತ ಒಲವು ಮತ್ತು ಪ್ರೀತಿ. ವಿಮರ್ಶಕ ಕೂಡಾ. ನಾಟಕ, ಭರತನಾಟ್ಯಗಳತ್ತಲೂ ಆಸಕ್ತರು. ಉಡುಪಿಯ ಕಲಾರಂಗದ ಆಜೀವ ಸದಸ್ಯರು. ಇವರ ನೆನಪಿನಲ್ಲಿ ಕಳೆದ ಏಳು ವರುಷಗಳಿಂದ ಹಿರಿಯ ಕಲಾವಿದರನ್ನು ಅಭಿನಂದಿಸುವ ಮತ್ತು ಉತ್ತಮ ಯಕ್ಷಗಾನದ ಪ್ರದರ್ಶನವನ್ನು ಅವರ ಪತ್ನಿ, ಮಕ್ಕಳು ಆಯೋಜಿಸುತ್ತಿದ್ದಾರೆ.

ಕಳೆದ ಆರು ವರುಷಗಳಲ್ಲಿ - ಪದ್ಯಾಣ ಶಂಕರನಾರಾಯಣ ಭಟ್, ಸಂಪಾಜೆ ಶೀನಪ್ಪ ರೈ, ಪದ್ಯಾಣ ಗಣಪತಿ ಭಟ್, ಬಂಟ್ವಾಳ ಜಯರಾಮ ಆಚಾರ್, ಪೆರುವಾಯಿ ನಾರಾಯಣ ಭಟ್, ಗುಂಡಿಮಜಲು ಗೋಪಾಲ ಭಟ್ಟರಿಗೆ ‘ಸರ್ಪಂಗಳ ಸುಬ್ರಹ್ಮಣ್ಯ ಸ್ಮಾರಕ ಯಕ್ಷಗಾನ ಸಾಧಕ’ ಪ್ರಶಸ್ತಿಯನ್ನು ನೀಡಿ ಗೌರವಿಸಿದ್ದಾರೆ.

ಈ ವರುಷ ಭಾಗವತ, ಪ್ರಸಂಗಕರ್ತ ಬೊಟ್ಟಿಕೆರೆ ಪುರುಷೋತ್ತಮ ಪೂಂಜರಿಗೆ ಪ್ರಶಸ್ತಿ. ಜುಲೈ 28, ಶನಿವಾರದಂದು ಸಂಜೆ 5 ರಿಂದ ರಾತ್ರಿ 10ರ ತನಕ ಉಡುಪಿ ಪೂರ್ಣಪ್ರಜ್ಞ ಸಭಾಂಗಣದಲ್ಲಿ ಪ್ರಶಸ್ತಿ ಪ್ರದಾನ. ‘ಚಕ್ರವ್ಯೂಹ - ಪದ್ಮವ್ಯೂಹ’ ಯಕ್ಷಗಾನ ಪ್ರದರ್ಶನ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT