ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಿನಚರಿಯೇ ಮಹಾಮಂತ್ರ!

Last Updated 26 ಜನವರಿ 2019, 10:11 IST
ಅಕ್ಷರ ಗಾತ್ರ

ಸೃಷ್ಟಿಕಥೆ ಕಟ್ಟುಕಥೆ; ವಿಲಯಕಥೆ ಬರಿಯ ಕಥೆ |
ಹುಟ್ಟುಸಾವುಗಳೊಂದೆ ಪುರುಳಿನೆರಡು ದಶೆ ||
ನಿತ್ಯಪರಿವರ್ತನೆಯೆ ಚೈತನ್ಯನರ್ತನೆಯೆ |
ಸತ್ಯ ಜಗದಲಿ ಕಾಣೊ - ಮಂಕುತಿಮ್ಮ ||

ಡಿವಿಜಿಯವರ ಈ ಸಾಲುಗಳನ್ನು ಪ್ರತಿಬಾರಿ ಗುನಿಗುನಿಸಿದಾಗ ಸಿಕ್ಕಿಹಾಕಿಕೊಳ್ಳೋದು ಆ ಮೂರನೆಯ ಸಾಲಿನಲ್ಲಿ. ಬದಲಾವಣೆ ಜಗದ ನಿಯಮ. ನಿತ್ಯ ಬದಲಾವಣೆಯಲ್ಲಿ ಚೈತನ್ಯದ ಅಮಿರತ ಸರಬರಾಜು ಹೇಗೆ ಸಾಧ್ಯ ! ಅಬ್ಬಾ ! ಅಂದರೆ,‘ ನಾನ್‌ ಸ್ಟಾಪ್‌ ಪವರ್‌ ಸಪ್ಲೈ’ – ’ನಿರಂತರ ಶಕ್ತಿ ಪ್ರವಾಹ’. ಹಳ್ಳಿಗರನ್ನು ಬಿಟ್ಟುಬಿಡಿ, ಸಿಟಿ ಜನರಿಗೂ ಇದು ಕಷ್ಟ ಸಾಧ್ಯವಾದ ಮಾತು.

ಜೀವನದಲ್ಲಿ ಒಂದು ‘ರೊಟೀನ್‌’ (ದಿನಚರಿ) ಅಂತ ಕಂಡುಕೊಳ್ಳೋದೆ ದೊಡ್ಡ ವಿಷಯವಾಗಿರುವಾಗ ಆ ದಿನಚರಿಯನ್ನು ಚಾಚೂ ತಪ್ಪದೇ ನಡೆಸಿಕೊಂಡು ಹೋಗೋದೆ ನಮಗಿರೋ ಸವಾಲು.

ಹಿಂದೆ ಋಷಿಮುನಿಗಳು ಕಾಡಿನಲ್ಲೋ ಹಿಮಾಲಯ
ದಲ್ಲೋ ಕೂತ್ಕೊಂಡು ಸತತವಾಗಿ ಅದೆಷ್ಟೋ ವರ್ಷಗಳ ಕಾಲ ತಪಸ್ಸು ಮಾಡ್ತಿದ್ರು ಭಗವಂತನ ಸಾಕ್ಷಾತ್ಕಾರಕ್ಕೆ ಅಂತ ಕೇಳಿದೀನಿ, ಓದಿದ್ದೀನಿ. ಈ ಭಗವಂತ ಯಾರು? ಅವನ ಸಾಕ್ಷಾತ್ಕಾರ ಯಾಕಾಗ ಬೇಕು? ಅನ್ನೋ ಪ್ರಶ್ನೆಗಳಿಗೆಲ್ಲ ಆಧ್ಯಾತ್ಮದಲ್ಲಿ ಮಾತ್ರ ಉತ್ತರ ಸಿಗತ್ತೆ ಅಂತಾರೆ. ಹೊಟ್ಟೆ ಪಾಡಿ
ಗಾಗಿ ಕಾಯಕ, ನಿತ್ಯ ಕೈಕಂರ್ಯಗಳ ಬಿಟ್ಟು, ಭಗ
ವಂತನ ಸಾಕ್ಷಾತ್ಕಾರಕ್ಕೆ ಹಿಮಾಲಯದಲ್ಲಿ ತಪಸ್ಸಿಗೆ ಕೂತ್ರೆ ನಮ್ಮ ಮನೆಯವರ ಗತಿಯೇನು, ಸ್ವಾಮಿ! ಆ ಭಗವಂತನ ಸಾಕ್ಷಾ
ತ್ಕಾರವಾಗದಿದ್ದರೂ ಚಿಂತೆಯಿಲ್ಲ, ನಮ್ಮ ಜೀವನ ಸುಗಮವಾಗಿ ಸಾಗಿದರೆ ಸಾಕು ಅಂತ ಹೇಳೋ ಮನಃಸ್ಥಿತಿಯಲ್ಲಿ ನಾವಿದ್ದೇವೆ.

ಆದರೆ ಆ ಋಷಿಮುನಿಗಳು ಅವಿರತ ತಪಸ್ಸಿಗೂ, ನಾವು ಮಾಡಿಕೊಳ್ಳೋದಿನಚರಿ ಏನಾದ್ರೂ ಸಾಮ್ಯ ಇದೆಯಾ? ಅಂದರೆ ಖಂಡಿತ ಇದೆ – ಮನನಾತ್ ತ್ರಾಯತೇ ಇತಿ ಮಂತ್ರಃ. ಅಂದರೆ ಒಂದೇ ವಿಷಯವನ್ನು ಮನನ ಮಾಡ್ತಿದ್ರೆ ಅದೇ ಮಂತ್ರವಾಗಿ ಹೋಗತ್ತಂತೆ. ಹಾಗಿದ್ದ ಮೇಲೆ ದಿನನಿತ್ಯದ ಬದುಕಿನ ದಿನಚರಿಯೇ ಒಂದು ಮಂತ್ರ. ದಿನಚರಿಯನ್ನೇ ಅತ್ಯಂತ, ಆಸಕ್ತಿ, ಪ್ರೀತಿ, ಶ್ರದ್ಧೆಯಿಂದ ನೆರವೇರಿಸೋದೆ ಒಂದು ತಪಸ್ಸು.

ಈ ತಪಸ್ಸಿಗೆ ಹಲವಾರು ಆಡ್ಡಿಗಳನ್ನು ಪ್ರಕೃತಿ ಒಡ್ಡಬಹುದು. ಯಾಕೆಂದ್ರೆ ಬದಲಾವಣೆಯೇ ಪ್ರಕೃತಿ. ಆದರೆ ನಿತ್ಯ ಬದಲಾವಣೆಗೆ ನಾವು ಒಗ್ಗಿ ಬದಲಾಗದ ನಮ್ಮ ಆಸಕ್ತಿ, ಶ್ರದ್ಧೆ, ಪ್ರೀತಿಯೇ ಚೈತನ್ಯದ ಅವಿರತ ಸರಬರಾಜು. ಇನ್ನು ಇಂತಹ ತಪಸ್ಸಿಗೆ ಒಲಿಯದ ಭಗವಂತನುಂಟೆ? ಬಹುಶಃ ಅದಕ್ಕೊಲಿಯುವ ಭಗವಂತನ ಹೆಸರು ‘ಸಚ್ಚಿದಾನಂದ’.

ಒಂದು ಬೋರು ದಿನಚರಿ ಎಂದು ತಿಳಿಯದೇ ಅದೊಂದು ವರ, ತಪೋಮಾರ್ಗ ಎಂದು ತಿಳಿದವನೇ ನಿಜವಾದ ಯೋಗಿ. ಅಂಥವನಲ್ಲಿ ಅಮೃತವಾಹಿನಿಯಾಗಿ ಪ್ರಕೃತಿಯು ಚೈತನ್ಯವಾಗಿ ನಿತ್ಯ ಪರಿವರ್ತನೆಗಳನ್ನು ಮೀರಿ ಹರಿಯುತ್ತಿರುತ್ತದೆ. ಆ ಚೈತನ್ಯದ ‘ಪವರ್‌ ಹೌಸ್‌’ ಆಗಿಯೂ ಬೆಳೆಯೋದಕ್ಕೆ ಸಾಧ್ಯವಾಗುತ್ತೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT