ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾವ್ಯಾ ಬದುಕಿನ ಹೆಜ್ಜೆ ಗೆಜ್ಜೆ

Last Updated 26 ಆಗಸ್ಟ್ 2015, 19:44 IST
ಅಕ್ಷರ ಗಾತ್ರ

ಛಲ, ಆಸಕ್ತಿಯುಳ್ಳ ಮನಸ್ಸು ಇದ್ದರೆ ಏನನ್ನೇ ಆದರೂ ಸಾಧಿಸಬಹುದು ಎಂಬುದಕ್ಕೆ ಸಾಕ್ಷಿ  ಕಾವ್ಯಾ. ಮೂಲತಃ ಚಿಕ್ಕಬಳ್ಳಾಪುರದ ನಂದಿಬೆಟ್ಟದವರಾದ ಕಾವ್ಯಾಗೆ ಬಾಲ್ಯದಿಂದಲೂ ನೃತ್ಯದ ಮೇಲೆ ವಿಶೇಷ ಆಸಕ್ತಿ. ಇವರ ಈ ಆಸಕ್ತಿಯನ್ನು ಗುರುತಿಸಿ 5ನೇ ವಯಸ್ಸಿಗೆ ಭರತನಾಟ್ಯದ ಗೆಜ್ಜೆ ಕಟ್ಟುವಂತೆ ಮಾಡಿದ್ದು ಇವರ ತಂದೆ ಟಿ.ಎನ್‌. ನಾಗರಾಜ್‌. ನಂದಿಬೆಟ್ಟದ ಯೋಗನಂದೀಶ್ವರ ದೇವಾಲಯದಲ್ಲಿ ಅರ್ಚಕರಾಗಿರುವ ಅವರು ನಾರು ಬೇರು ಕಲಾವಿದರೂ ಹೌದು.

ತಮ್ಮ ಊರಿನಲ್ಲಿ ಭರತನಾಟ್ಯ ಮೇಷ್ಟ್ರು ಇಲ್ಲದ ಕಾರಣ ಬೆಂಗಳೂರಿನ ಕೆ.ಎನ್‌.ಸಿಂಗ್‌ ಅವರನ್ನು ನಂದಿಬೆಟ್ಟಕ್ಕೆ ಕರೆಸಿ ಕಾವ್ಯಾ ಅವರ ಭರತನಾಟ್ಯ ಕಲೆಗೆ ಪ್ರೋತ್ಸಾಹ ನೀಡಿದರು. ಅಂದಿನಿಂದ ಇಂದಿನವರೆಗೂ ಕಾವ್ಯಾಗೆ ನೃತ್ಯವೇ ಜೀವಾಳ. ಬಾಲ್ಯದಿಂದಲೂ ಭರತನಾಟ್ಯದ ಬಗ್ಗೆ ಈಕೆಗೆ ವಿಶೇಷ ಒಲವು.  ಅದೇ ಇಂದು ಅವರನ್ನು ಭರತನಾಟ್ಯ ಹಾಗೂ ಕಥಕ್‌ ಎರಡರಲ್ಲೂ ಸಹಿ ಎನ್ನಿಸುವಂತೆ ಮಾಡಿದೆ.

ತಮ್ಮ ನೃತ್ಯ ಕಲೆಯನ್ನು  ಬೆಂಗಳೂರು, ಕರ್ನಾಟಕಕ್ಕೆ ಮಾತ್ರ ಸೀಮಿತವಾಗಿರಿಸದೇ ಭಾರತದ ಗಡಿಯಾಚೆಗೂ ನೃತ್ಯದ ಕಂಪನ್ನು ಪಸರಿಸಿದ್ದಾರೆ ಕಾವ್ಯಾ. ಈಕೆ ನರಸಿಂಹ ಮೂರ್ತಿ ಚಿಕ್ಕಬಳ್ಳಾಪುರ, ರೂಪಶ್ರೀ ಅರವಿಂದ, ಸುಪರ್ಣಾ ವೆಂಕಟೇಶ್‌ ಮುಂತಾದವರ ಭರತನಾಟ್ಯ ಕಲಾವಿದರ ಬಳಿಯಲ್ಲಿ  ನಾಟ್ಯಾಭ್ಯಾಸ ಮಾಡಿದ್ದಾರೆ. ನೃತ್ಯವನ್ನೇ ಸರ್ವಸ್ವ ಎಂದುಕೊಂಡಿರುವ ಕಾವ್ಯಾ, ಸಾಧಿಸಿದರೆ ಭರತನಾಟ್ಯದಲ್ಲೇ ಎನ್ನನ್ನಾದರೂ ಸಾಧಿಸಬೇಕು ಎಂಬ ಹಂಬಲ ಉಳ್ಳವರು.

ಈ ಛಲದಿಂದಲೇ ಈಕೆ ಬೆಂಗಳೂರಿನ ‘ನಾಟ್ಯ ಇನ್‌ಸ್ಟಿಟ್ಯೂಟ್‌ ಕಥಕ್‌ ಅಂಡ್‌ ಕೊರಿಯೋಗ್ರಫಿ’ಯಲ್ಲಿ ಬಿ.ಎ ಭರತನಾಟ್ಯ ಹಾಗೂ   ಬೆಂಗಳೂರು ವಿಶ್ವವಿದ್ಯಾಲಯದ ಮೂಲಕ ಎಂ.ಎ ಭರತನಾಟ್ಯವನ್ನು ಪ್ರಥಮ ಶ್ರೇಣಿಯಲ್ಲಿ ಮುಗಿಸಿದ್ದರು. ಭರತನಾಟ್ಯ, ಕಥಕ್ ಮಾತ್ರವಲ್ಲದೇ ನಾಟ್ಯಚಿತ್ರ ಕಲೆ, ವರ್ಣಚಿತ್ರ, ಮೆಹಂದಿ, ಕೇಶಾಲಂಕಾರವನ್ನು ಕೂಡ ಬದುಕಿನಲ್ಲಿ ಹವ್ಯಾಸಕ್ಕಾಗಿ ಅಳವಡಿಸಿಕೊಂಡು ಸಕಲ ಕಲಾವಲ್ಲಭೆ ಎನ್ನುವುದನ್ನು ತೋರಿಸಿದ್ದಾರೆ.

ಈಕೆ 2010ರಲ್ಲಿ ‘ಸುಪರ್ಣಾ ವೆಂಕಟೇಶ್‌’ ಅವರ ನೇತೃತ್ವದಲ್ಲಿ ನಂದಿ ಬೆಟ್ಟದ ದೇವಾಲಯದಲ್ಲಿ ಪುರಾತನ ಗಂಗ, ಚೋಳರ ಕಾಲವನ್ನು ನೆನಪಿಸುವಂತಹ ವೇದಿಕೆ ನಿರ್ಮಿಸಿ ಆ ವೇದಿಕೆ ಮೇಲೆ  ರಂಗಪ್ರವೇಶ ಮಾಡಿದ್ದರು.  ಇದು ಇಂದಿಗೂ ಭರತನಾಟ್ಯ ಕ್ಷೇತ್ರದಲ್ಲಿ ಯಾರೂ ಮಾಡಿರದ ಹಾಗೂ ಚಿಕ್ಕಬಳ್ಳಾಪುರದ ಜನತೆಯ ಮನದಲ್ಲಿ ಸದಾ ಹಸಿರಾಗಿ ಉಳಿದ ಕಾರ್ಯಕ್ರಮ ಎಂಬುದು ಕಾವ್ಯಾ ಅನಿಸಿಕೆ.

ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ 500ಕ್ಕೂ ಹೆಚ್ಚು ಭರತನಾಟ್ಯ ಪ್ರದರ್ಶನ ನೀಡಿದ ಖ್ಯಾತಿ ಕೂಡ ಇವರಿಗೆ ಸಲ್ಲುತ್ತದೆ. ನೃತ್ಯಶ್ರೀ, ನಾಟ್ಯಶ್ರೀ, ಪ್ರತಿಭಾಶ್ರೀ, ಅರಳುಮಲ್ಲಿಗೆ, ಕರ್ನಾಟಕ ಶಿರೋಮಣಿ, ಕರ್ನಾಟಕ ದೃವತಾರೆ, ರಂಗತಾರೆ, ಸುವರ್ಣ ಕನ್ನಡತಿ, ಕಲಾ ಪೋಷಕ ರತ್ನ ಮುಂತಾದ ಪ್ರಶಸ್ತಿಗಳು ಈಕೆಯ ಮುಡಿ ಸೇರಿವೆ.

ಕಾವ್ಯಾ ತಮ್ಮ ಕಲೆಯನ್ನು ಕೇವಲ ಬೆಂಗಳೂರಿಗೆ ಸೀಮಿತವಾಗಿರಿಸಿಕೊಳ್ಳದೇ ಸಿಂಗಪುರ, ಮಲೇಷ್ಯಾ, ದುಬೈ, ಅಬುಧಾಬಿ, ನೇಪಾಳ ಸೇರಿದಂತೆ ಭಾರತದ ಗಡಿಯಾಚೆಗಿನ ಹಲವು ದೇಶಗಳಲ್ಲೂ ತಮ್ಮ  ಕಲಾ ಪ್ರತಿಭೆಯನ್ನು ತೋರಿದ್ದಾರೆ. ಬೆಂಗಳೂರಿನ ಅಂಧ ಭರತನಾಟ್ಯ ಕಲಾವಿದರೊಂದಿಗೆ ಮೂರು ತಿಂಗಳ ಕಾಲ ಅಮೇರಿಕಾದ 40ಕ್ಕೂ ಹೆಚ್ಚು ಕಡೆ ಭರತನಾಟ್ಯ ‍ಪ್ರದರ್ಶನ ನೀಡಿದ ಖ್ಯಾತಿಯೂ ಕೂಡ ಇವರಿಗೆ ಸೇರುತ್ತದೆ.

ಸರ್ಕಾರ ಪ್ರತಿ ವರ್ಷ ನಡೆಸುವ ಪ್ರಮುಖ ಸಾಂಸ್ಕೃತಿಕ ಕಲಾ ಉತ್ಸವಗಳಾದ ಕಿತ್ತೂರು ಉತ್ಸವ, ನಂದಿ ಉತ್ಸವ, ಕನ್ನಡ ಸಾಹಿತ್ಯ ಸಮ್ಮೇಳನ, ಬೆಳಗಾಂ ಗಡಿನಾಡು ಉತ್ಸವ, ಜಾನಪದ ಜಾತ್ರೆ, ದೆಹಲಿಯಲ್ಲಿ ರಾಷ್ಟ್ರ ಮಟ್ಟದಲ್ಲಿ ನಡೆದ ಕನ್ನಡ ಸಾಹಿತ್ಯ ಸಾಂಸ್ಕೃತಿಕ  ಸಮ್ಮೇಳನ,  ಅಂತರರಾಷ್ಟ್ರೀಯ ಮಟ್ಟದಲ್ಲಿ ಬಹರೇನ್, ಅಬೂದಾಬಿ, ನೇಪಾಳದಲ್ಲಿ ಜರುಗಿದ  ಕನ್ನಡ ಸಾಹಿತ್ಯ ಸಂಸ್ಕೃತಿ ಸಮ್ಮೇಳನಗಳಲ್ಲೂ ಭರತನಾಟ್ಯ  ಪ್ರದರ್ಶನ ಮಾಡಿ ಅನಿವಾಸಿ ಭಾರತೀಯರ ಪ್ರಶಂಸೆಗೂ ಕೂಡ  ಪಾತ್ರರಾಗಿದ್ದವರು ನಂದಿಬೆಟ್ಟದ ಈ ಕಾವ್ಯಾ. ಭರತನಾಟ್ಯವೇ ಬದುಕಾಗಿರುವ ಕಾವ್ಯಾಗೇ ಮುಂದೆಯೂ ಕೂಡ ಭರತನಾಟ್ಯದಲ್ಲೇ ಏನಾದರೂ ಹೊಸತನ್ನು ಸಾಧಿಸುವ ಹಂಬಲ.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT