ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅನನ್ಯ’ ಪ್ರತಿಭೆ

Last Updated 26 ಜುಲೈ 2015, 19:30 IST
ಅಕ್ಷರ ಗಾತ್ರ

‘ಮನೆಯೇ ಮೊದಲ ಪಾಠಶಾಲೆ; ಜನನಿ ತಾನೆ ಮೊದಲ ಗುರು’ ಎಂಬ ಮಾತು ಹಳೆಯದಾದರೂ ಅದು ಎಂದಿಗೂ ಪ್ರಸ್ತುತ. ಭರತನಾಟ್ಯದಲ್ಲಿ ಅನನ್ಯ ಪ್ರತಿಭೆಯಾಗಿರುವ ಎಂ. ಅನನ್ಯ ಪಾಲಿಗಂತೂ ಇದು ಸತ್ಯ.

ಎಂಜಿನಿಯರಿಂಗ್‌ ಪದವಿ ಓದುತ್ತಿರುವ ಅನನ್ಯ, ನೃತ್ಯದಲ್ಲಿ ಈಗಾಗಲೇ ಸಾಕಷ್ಟು ಪ್ರಬುದ್ಧಳಾಗಿದ್ದಾಳೆ. ನೂರಾರು ನೃತ್ಯ ಕಛೇರಿಗಳನ್ನು ನಾಡಿನಾದ್ಯಂತ ಅಲ್ಲದೆ ಹೊರರಾಜ್ಯಗಳಲ್ಲೂ ನೀಡಿ ವಿದ್ವಾಂಸರ ಮೆಚ್ಚುಗೆಗೂ ಪಾತ್ರಳಾಗಿದ್ದಾಳೆ.

ನೃತ್ತ, -ನೃತ್ಯ ಎರಡರಲ್ಲೂ ಪರಿಪೂರ್ಣತೆ, ಅಡವುಗಳಲ್ಲಿ ಸ್ಪಷ್ಟತೆ ನೃತ್ಯದ ವೈಶಿಷ್ಟ್ಯ. ಈ ಎಲ್ಲ ಅಂಶಗಳನ್ನು ನೃತ್ಯದಲ್ಲಿ ಅಳವಡಿಸಿಕೊಂಡು ಒಲಿಸಿಕೊಳ್ಳುವುದು ತುಂಬ ಕಷ್ಟ. ನಿರಂತರ ಶ್ರಮ, ಶ್ರದ್ಧೆ, ಕಲಾ ತಪಸ್ಸು ಇದ್ದರೆ ಮಾತ್ರ ನೃತ್ಯಕಲೆ ಬೇಗನೆ ಒಲಿಯುತ್ತದೆ. ಹೀಗೆ ನೃತ್ಯಕಲೆಯನ್ನು ಒಲಿಸಿಕೊಂಡು, ಎಂಜಿನಿಯರಿಂಗ್‌ ಓದುತ್ತಿದ್ದರೂ ನೃತ್ಯವನ್ನೇ ವೃತ್ತಿಯಾಗಿ ಸ್ವೀಕರಿಸುವ ಛಲದಿಂದ ಮುನ್ನುಗ್ಗುತ್ತಿರುವ ಅನನ್ಯ, ಕಲಿಕೆಯಲ್ಲಿ ಎಂದೂ ಹಿಂದೆ ಬಿದ್ದವಳಲ್ಲ.

ಹಾಗೆ ನೋಡಿದರೆ ಅನನ್ಯ ಅವರ ಮನೆತನವೇ ಶ್ರೀಮಂತ ಕಲಾ ಪರಂಪರೆಯದ್ದು. ರಕ್ತಗತವಾಗಿಯೇ ನೃತ್ಯಕಲೆ ಹರಿದು ಬಂದಿದ್ದಲ್ಲದೆ ಅದನ್ನು ನೀರೆರೆದು ಪೋಷಿಸಿದವರು ಸ್ವತಃ ನೃತ್ಯಗಾರ್ತಿಯಾಗಿರುವ ಅನನ್ಯ ಅವರ ತಾಯಿ ವಿದುಷಿ ಬೃಂದಾ. ಅನನ್ಯ ನೃತ್ಯ ಮಾಡಲು ಆರಂಭಿಸಿದಾಗ ಆಕೆ ಇನ್ನೂ ನಾಲ್ಕು ವರ್ಷದ ಎಳೆಯ ಕೂಸು. ವಳುವೂರು ಶೈಲಿಯಲ್ಲಿ ನೃತ್ಯ ಮಾಡುವ ಈ ಉದಯೋನ್ಮುಖ ಪ್ರತಿಭೆಗೆ ನೃತ್ಯ ಕ್ಷೇತ್ರದಲ್ಲಿ ಮಿಂಚಬೇಕೆಂಬ ಅದಮ್ಯ ಬಯಕೆಯಿದೆ, ಕನಸುಗಳಿವೆ. 
 
‘ವಳುವೂರು ಶೈಲಿಯಲ್ಲಿ ನೃತ್ಯ, ನೃತ್ತ, ಅಭಿನಯ ಮೂರಕ್ಕೂ ಸಮಾನ ಪ್ರಾಧಾನ್ಯ ನೀಡಬೇಕಾಗುತ್ತದೆ. ಇದನ್ನು ರೂಢಿಸಿಕೊಳ್ಳುವುದು ಬಹಳ ಕಷ್ಟ. ಭರತನಾಟ್ಯದ ಕಲಾಕ್ಷೇತ್ರ, ಪಂದನಲ್ಲೂರು ಶೈಲಿಗಳಿಗಿಂತ ವಳುವೂರು ಶೈಲಿ ನೃತ್ಯ ಬಹಳ ಭಿನ್ನ. ಸತತ ಅಭ್ಯಾಸದಿಂದ ಇದನ್ನು ಕರಗತ ಮಾಡಿಕೊಂಡೆ’ ಎನ್ನುತ್ತಾಳೆ ಅನನ್ಯ.

‘ಅನನ್ಯ ಬಹಳ ಬೇಗನೆ ನೃತ್ಯ ಕಲಿಯುತ್ತಾ ಇದ್ದಳು. ನಾನು ಡ್ಯಾನ್ಸ್‌ ಮಾಡುವುದನ್ನು ನೋಡಿ ನೋಡಿಯೇ ನೃತ್ಯದ ಅಡವುಗಳನ್ನು ಕಲಿತುಬಿಟ್ಟಳು. ಹೀಗಾಗಿ ಅವಳಿಗೆ ಕ್ರಮವಾಗಿ ಐಟಂಗಳನ್ನೇ ಪಾಠ ಹೇಳಿಕೊಟ್ಟೆ’ ಎಂದು ಹೇಳುತ್ತಾರೆ ಸ್ವತಃ ನೃತ್ಯಗುರುವೂ ಆಗಿರುವ ಅನನ್ಯ ತಾಯಿ ಬೃಂದಾ.

ಕರ್ನಾಟಕ ಪ್ರೌಢಶಿಕ್ಷಣ ಮಂಡಳಿ ನಡೆಸುವ ಭರತನಾಟ್ಯ ಜೂನಿಯರ್‌ ಮತ್ತು ಸೀನಿಯರ್‌ ಗ್ರೇಡ್‌ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕಗಳೊಂದಿಗೆ ಪಾಸಾಗಿರುವ ಅನನ್ಯ, ವಿದ್ವತ್‌ ಪರೀಕ್ಷೆಯಲ್ಲಿ ರಾಜ್ಯಕ್ಕೆ ಮೊದಲ ಸ್ಥಾನ ಗಳಿಸಿದ್ದಾಳೆ. ಪುಣೆಯ ಗಂಧರ್ವ ಮಹಾವಿದ್ಯಾಲಯ ನಡೆಸುವ ಮೂರು ಹಂತದ ಪರೀಕ್ಷೆಯಲ್ಲಿಯೂ ಪ್ರಥಮ ಪಡೆದ ಹೆಗ್ಗಳಿಕೆ ಈಕೆಯದು.

2007ರಲ್ಲಿ ರಂಗಪ್ರವೇಶ ಮುಗಿಸಿದ್ದ ಅನನ್ಯ ಆ ಬಳಿಕ ರಾಜ್ಯದಾದ್ಯಂತ ಅಷ್ಟೇ ಅಲ್ಲ, ಹೊರರಾಜ್ಯಗಳಲ್ಲೂ ನೀಡಿದ ನೃತ್ಯ ಕಛೇರಿಗಳು ಲೆಕ್ಕವಿಲ್ಲದಷ್ಟು. ಮೈಸೂರು ದಸರಾ ಉತ್ಸವ, ನಾದಬ್ರಹ್ಮ ಸಂಗೀತ ಸಭಾ, ಜಗನ್ಮೋಹನ ಅರಮನೆ, ಮೇಲುಕೋಟೆ ವೈರಮುಡಿ ಉತ್ಸವ, ಶಿವಮೊಗ್ಗ ಕೊಡಚಾದ್ರಿ ಉತ್ಸವ, ಬಾಗಲಕೋಟೆ ಖಾದಿ ಉತ್ಸವ, ಧಾರವಾಡ ಪ್ರತಿಭಾ ಕಾರಂಜಿ ಉತ್ಸವ, ಮಂತ್ರಾಲಯ, ಹೊರನಾಡು, ಶೃಂಗೇರಿಗಳಲ್ಲಿ ಈಕೆಯ ನೃತ್ಯ ಪ್ರದರ್ಶನ ಯಶಸ್ಸು ಕಂಡಿದೆ. ಚೆನ್ನೈ, ವೆಲ್ಲೂರು, ಚಿದಂಬರಂ, ಹೈದರಾಬಾದ್‌, ಮುಂಬೈನಲ್ಲಿ ಮಾತ್ರವಲ್ಲ, ಮಲೇಷ್ಯಾ, ದುಬೈನಲ್ಲಿ ನಡೆದ ವಿಶ್ವ ಕನ್ನಡ ಸಮ್ಮೇಳನದಲ್ಲಿ ನೃತ್ಯ ಕಛೇರಿ ನೀಡಿದಳು. ದೂರದರ್ಶನ ಮತ್ತು ಇತರ ಖಾಸಗಿ ವಾಹಿನಿಗಳಲ್ಲೂ ನೃತ್ಯ ಕಾರ್ಯಕ್ರಮ ನಡೆಸಿಕೊಟ್ಟ ಪ್ರತಿಭಾವಂತೆ. ಕೆಲವು ಧಾರಾವಾಹಿಗಳಲ್ಲೂ ನಟಿಸಿದ್ದಾಳೆ.

ತಾಯಿಯ ಬಳಿ ವಿದ್ವತ್‌ ಹಂತದವರೆಗೆ ಕಲಿತ ಅನನ್ಯ, ಇನ್ನೂ ಹೆಚ್ಚಿನ ಅಭ್ಯಾಸವನ್ನು ಮಲೇಷ್ಯಾದ ಟೆಂಪಲ್ ಆರ್ಟ್‌ ಡೈರೆಕ್ಟರ್‌ ಆಗಿರುವ ವಿದ್ವಾನ್‌ ಶಂಕರ್‌ ಕಂದಸ್ವಾಮಿ ಅವರ ಬಳಿ ಮಾಡುತ್ತಿದ್ದಾರೆ. ದೂರದರ್ಶನದ ಬಿ–ಗ್ರೇಡ್‌ ಕಲಾವಿದೆಯಾಗಿರುವ ಈಕೆ ತಾಯಿಯ ಜತೆ ಸೇರಿ ಭರತನಾಟ್ಯ ಆಸಕ್ತ ಮಕ್ಕಳಿಗೆ ನೃತ್ಯವನ್ನೂ ಕಲಿಸುತ್ತಿದ್ದಾಳೆ.

ಅನನ್ಯಳಿಗೆ ಸಂದ ಪ್ರಶಸ್ತಿ ಹಲವಾರು. 2004ರಿಂದ ಇಲ್ಲಿಯವರೆಗೆ ಸುಮಾರು 30ಕ್ಕೂ ಹೆಚ್ಚು ಪ್ರಶಸ್ತಿಗಳು ಈಕೆಯ ಪ್ರತಿಭೆಗೆ ಸಂದಿವೆ. ಬಾಲ ಪ್ರತಿಭೆ, ನಾಟ್ಯ ಯುವಮಣಿ, ನೃತ್ಯ ಭೂಷಣ, ನೃತ್ಯ ಕಾರಂಜಿ, ಯುವ ಚೇತನ, ಬಾಲ ಕಲಾ ಗಂಧರ್ವ, ಆರ್ಯಭಟ ಪ್ರಶಸ್ತಿ, ನಾಟ್ಯ ವರ್ಷಿಣಿ, ಬಾಲ ಸರಸ್ವತಿ ಮುಂತಾದವು ಇದರಲ್ಲಿ ಸೇರಿವೆ. ನಗರದ ಕತ್ತರಿಗುಪ್ಪೆಯಲ್ಲಿರುವ ಅನನ್ಯ, ನೃತ್ಯ ಸಾಧನೆಗೆ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ ನೀಡುವ ವಿದ್ಯಾರ್ಥಿ ವೇತನವನ್ನೂ ಪಡೆದಿದ್ದಾಳೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT