ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗೀತ | ಶುದ್ಧರಾಗಧಾರಿಯ ‘ನಾದದ ನವನೀತ’

Published 18 ಜೂನ್ 2023, 0:00 IST
Last Updated 18 ಜೂನ್ 2023, 0:00 IST
ಅಕ್ಷರ ಗಾತ್ರ

ಶ್ರೀಮತಿ ದೇವಿ

’ಶಾಸ್ತ್ರೀಯ ಸಂಗೀತ ಕೇಳಲು ಜನರು ಬರುತ್ತಿಲ್ಲ ಎಂದು ಗೋಳಾಡುವುದ್ಯಾಕೆ, ವೆಂಕಟೇಶ ಕುಮಾರ ಅವರಂತೆ ಹಾಡಿದರೆ ಜನ ಯಾಕೆ ಬರಲಾರರು’ ಎಂದು ಹಲವಾರು ವರ್ಷಗಳ ಹಿಂದೆಯೇ ನುಡಿದವರು ಭಾರತರತ್ನ ಪಂ.ಭೀಮಸೇನ ಜೋಶಿಯವರು. ವೆಂಕಟೇಶ ಕುಮಾರ್‌ ಅವರ ಹಿರಿಮೆಗೆ ಹಿಡಿದ ಕನ್ನಡಿ ಈ ಮಾತು. ಕರ್ನಾಟಕದಲ್ಲಿನ ಹಿಂದೂಸ್ತಾನಿ ಸಂಗೀತದ ಧಾರೆಯನ್ನು ಜಾಗತಿಕ ಮಟ್ಟದಲ್ಲಿ ಎತ್ತಿಹಿಡಿದು ಕೀರ್ತಿ ಶಿಖರವನ್ನೇರಿದ ನಮ್ಮ ನಡುವಿನ ಅಪ್ಪಟ ದೇಸಿ ಸಂಗೀತಗಾರರೆಂದರೆ ಪದ್ಮಶ್ರೀ ಎಂ.ವೆಂಕಟೇಶ ಕುಮಾರ. ಅವರ ಗಾಯನವೆಂದರೆ ಅದು ಕಿವಿಗೆ ಹಬ್ಬ.

ಬಳ್ಳಾರಿ ಜಿಲ್ಲೆಯ ಲಕ್ಷ್ಮೀಪುರವೆಂಬ ಪುಟ್ಟ ಹಳ್ಳಿಯಲ್ಲಿ ಜನಿಸಿದ ವೆಂಕಟೇಶ ಕುಮಾರ್‌ ಅವರ ತಂದೆ ಜನಪದ ಕಲಾವಿದರಾಗಿದ್ದರೂ, ತಮ್ಮ ಮಗನ ಸಿರಿಕಂಠವನ್ನು ಗುರುತಿಸಿ ಎಳವೆಯಲ್ಲೇ ಗದಗದ ಶ್ರೀ ವೀರೇಶ್ವರ ಪುಣ್ಯಾಶ್ರಮದ ಅನ್ನದಾತ, ವಿದ್ಯಾ ಸಂಪನ್ನ ಪಂ.ಪುಟ್ಟರಾಜ ಗವಾಯಿಯವರ ಉಡಿಯಲ್ಲಿ ಹಾಕಿದರು. 12 ವರ್ಷಗಳ ಕಾಲ ಆಶ್ರಮದ ಶಿಸ್ತು, ಬಿಗಿಯಾದ ನಿಯಮಗಳನ್ನು ಪಾಲಿಸಿಕೊಂಡು ಗುರುಗಳಿಂದ ವಿದ್ಯೆ ಪಡೆದು, ಗುರುನಾಮ ಸ್ಮರಣೆಯೊಂದಿಗೇ ಬೆಳೆದವರು ವೆಂಕಟೇಶ ಕುಮಾರ್‌. ಸಂಗೀತವೊಂದನ್ನೇ ನಂಬಿಕೊಂಡ ಕಾರಣ ಹಲವಾರು ವರ್ಷಗಳ ಕಾಲ ತುಂಬಾ ಕಷ್ಟಪಡಬೇಕಾಗಿ ಬಂದರೂ ನಂತರದಲ್ಲಿ ಗುರುಗಳ ಆಶೀರ್ವಾದದಿಂದ ಅವರು ಹರಸಿದಂತೆಯೇ ನಡೆದು ಜೀವನದ ಭದ್ರತೆ ದೊರಕಿತು ಮಾತ್ರವಲ್ಲ ಗುರುಗಳಿಂದ ಪಡೆದ ವಿದ್ಯೆಗೆ ಮಾನ್ಯತೆ ದೊರಕುತ್ತಾ ಬರುತ್ತಿದೆ ಎನ್ನುವ ವಿನಯಶೀಲರು ವೆಂಕಟೇಶ ಕುಮಾರ.

ಧಾರವಾಡ-ಹುಬ್ಬಳ್ಳಿಯ ಭೂಮಿಯಿಂದ ಬಂದ ಪಂ. ಮಲ್ಲಿಕಾರ್ಜುನ್ ಮನ್ಸೂರ್, ಪಂ.ಬಸವರಾಜ ರಾಜಗುರು, ಪಂ.ಭೀಮಸೇನ ಜೋಶಿ, ಪಂ.ಕುಮಾರ ಗಂಧರ್ವ, ಪಂ.ಸವಾಯಿ ಗಂಧರ್ವ, ವಿ.ಗಂಗೂಬಾಯಿ ಹಾನಗಲ್ ಮುಂತಾದ ದಿಗ್ಗಜ ಸಂಗೀತಗಾರರ ಪರಂಪರೆಯ ಸಮರ್ಥ ಪ್ರತಿನಿಧಿ ಇವರು. ಉತ್ತರ ಕರ್ನಾಟಕದಲ್ಲಿ ಹೆಚ್ಚಾಗಿ ಕೇಳುವ ಕಿರಾನಾ-ಗ್ವಾಲಿಯರ್ ಶೈಲಿಯಲ್ಲಿ ಹಾಡುವ ವೆಂಕಟೇಶ ಕುಮಾರ್‌ ಅವರ ಸಂಗೀತದ ವಿಶೇಷತೆ ಇರುವುದು ಸೋಲರಿಯದ ಮಧುರ ಕಂಠದಲ್ಲಿ. ರಾಗದ ಪ್ರಸ್ತುತಿಯಲ್ಲಿ ಭಾವಾಭಿವ್ಯಕ್ತಿಗೆ ಬೇಕಾದಂತೆ ಗಂಭೀರವೂ, ಮೃದುವೂ ಆಗಬಲ್ಲ ಅವರ ಕಂಠ ಬಹಳ ಶ್ರೀಮಂತವಾದದ್ದು, ಸ್ವರಗಳ ಕಿರೀಟವನ್ನು ಧರಿಸಿ ಮೆರೆದಾಡುತ್ತದೆ. ಯಾವುದೇ ರಾಗವಿರಲಿ-ಬಂದಿಶ್ ಇರಲಿ-ದಾಸರಪದ-ವಚನಗಳಿರಲಿ, ಅವರ ಧ್ವನಿಯಲ್ಲದು ಹೊರಬಂದಾಗ ಹೊಸರೂಪವನ್ನು ಪಡೆದಿರುತ್ತದೆ. ಅಂತಹ ಅದಮ್ಯ ತೇಜಸ್ಸು–ಚೈತನ್ಯ ಆ ಕಂಠದಲ್ಲಿದೆ. ಅವರ ಕಾರ್ಯಕ್ರಮ ಭಾರತದ ಯಾವುದೇ ಮೂಲೆಯಲ್ಲಿರಲಿ, ಪರ ದೇಶದಲ್ಲೇ ಇರಲಿ, ಎಲ್ಲೆಲ್ಲಿಯೂ ಅವರ ಕಾರ್ಯಕ್ರಮಕ್ಕೆ ಕೇಳುಗರು ಕಡಿಮೆಯಾಗುವುದೇ ಇಲ್ಲ.

ತಾವು ಬೆಳೆದ ಪರಿಸರ, ಆಚಾರ-ವಿಚಾರಗಳು ವೆಂಕಟೇಶಕುಮಾರ್‌ ಅವರಿಗೆ ತುಂಬಾ ಅಪರೂಪದ ವ್ಯಕ್ತಿತ್ವವನ್ನು ಕಟ್ಟಿಕೊಟ್ಟಿವೆ. ನೈಜತೆಯನ್ನು ಹಿಂದಿಕ್ಕಿ ಕೃತಕತೆ ಮುಂದಾಗುತ್ತಿರುವ ಈ ಕಾಲದಲ್ಲಿ ಅವರ ಈ ಸರಳ, ಸಹಜ, ಸಜ್ಜನಿಕೆಯ ವ್ಯಕ್ತಿತ್ವ ಆತ್ಮೀಯವೆನಿಸುತ್ತದೆ. ಎಲ್ಲರನ್ನೂ ಒಳಗು ಮಾಡಿಕೊಳ್ಳುತ್ತದೆ. ಅವರ ವ್ಯಕ್ತಿತ್ವ ಮತ್ತು ಸಂಗೀತದಿಂದಾಗಿ ಅವರ ಗಾಯನೆದೆಡೆಗೆ ಆಕರ್ಷಿತರಾದ ಶ್ರೋತೃಗಳಲ್ಲಿ ಸಂಗೀತಜ್ಞರು, ಸಂಗೀತಗಾರರು, ಸಂಗೀತ ವಿದ್ಯಾರ್ಥಿಗಳು ಮಾತ್ರವಲ್ಲ ಬರಿಯ ಆನಂದಕ್ಕಾಗಿ ಸಂಗೀತ ಕೇಳುವ ರಸಿಕರೂ ದೊಡ್ಡ ಸಂಖ್ಯೆಯಲ್ಲಿದ್ದಾರೆ. ಧಾರವಾಡದಲ್ಲಿ ಕಾಲೇಜು ಶಿಕ್ಷಣ ಪಡೆಯುತ್ತಾ ವೆಂಕಟೇಶ ಕುಮಾರ್‌ ಅವರ ಹಿರಿಯ ಗುರುಬಂಧು ಪಂ.ಚಂದ್ರಶೇಖರ ಪುರಾಣಿಕಮಠ ಅವರ ಬಳಿ ನಾನು ಸಂಗೀತಾಭ್ಯಾಸ ನಡೆಸುತ್ತಿದ್ದ ಸಂದರ್ಭದಲ್ಲಿ, ವೆಂಕಟೇಶ ಕುಮಾರ್‌ ಅವರನ್ನು, ಅವರ ಗಾಯನವನ್ನು ಆರಾಧಿಸುತ್ತಿದ್ದ ನಮ್ಮ ಸ್ನೇಹಿತರ ಗುಂಪು ಧಾರವಾಡ-ಹುಬ್ಬಳ್ಳಿಯಲ್ಲಿ ಎಲ್ಲಿ ಅವರ ಕಾರ್ಯಕ್ರಮವಿದ್ದರೂ ತಪ್ಪಿಸುತ್ತಿರಲಿಲ್ಲ. ಇಂತಹ ಹಲವು ಸಂದರ್ಭಗಳಲ್ಲಿ ಕರ್ನಾಟಕದಲ್ಲಿ ಅವರು ಪಡೆದ ಕೀರ್ತಿ, ಆದರಗಳನ್ನು ನೋಡಿ ಅರಿತಿದ್ದೆ. ಆದರೆ, ವೆಂಕಟೇಶ ಕುಮಾರ್‌ ಅವರ ಗಾಯನದ ಬಗೆಗಿನ ಹುಚ್ಚು ಪ್ರೀತಿಯನ್ನು ಕಣ್ಣಾರೆ ನೋಡಿದ್ದು ಸತಾರಾದ ಔಂಧ್‌ನಲ್ಲಿ ನಡೆಯುವ ವಾರ್ಷಿಕ ಕಾರ್ಯಕ್ರಮದಲ್ಲಿ. ಬೆಳಿಗ್ಗೆ 9ರಿಂದ ಮರುದಿನ ಬೆಳಿಗ್ಗೆ 6ರ ವರೆಗೆ ನಡೆಯುವ ಈ ಕಾರ್ಯಕ್ರಮದಲ್ಲಿ ಮಧ್ಯ ರಾತ್ರಿ ಹಾಡಲು ಬಂದ ವೆಂಕಟೇಶ ಕುಮಾರ್‌ ಅವರನ್ನು ಕೇಳಲು ಸಭಾಭವನದ ಒಳಗೆ-ಹೊರಗೆ ಎಲ್ಲಾ ಸಂಗೀತಾಸಕ್ತರು ಮತ್ತು ಆ ಹಳ್ಳಿಯ ರೈತಾಪಿ ಜನ ತುಂಬಿಬಿಟ್ಟಿದ್ದರು. ಅವರ ಗಾಯನದ ಪ್ರತಿಯೊಂದು ಆವರ್ತನವನ್ನೂ‘ವಾಹ್ ವಾಹ್’ ಎನ್ನುತ್ತಾ ಕೇಳಿ ಖುಷಿಪಟ್ಟ ಕೇಳುಗರು, ಅವರು ಮುಗಿಸಿ ಮೇಲೆದ್ದರೂ ಚಪ್ಪಾಳೆಯ ಸುರಿಮಳೆಯನ್ನು ನಿಲ್ಲಿಸಿರಲಿಲ್ಲ. ಅವರು ವೇದಿಕೆಯ ಬಳಿ ಬರುತ್ತಿದ್ದಾಗ ದಾರಿಯಲ್ಲಿ ಕುಳಿತವರೆಲ್ಲಾ ಕಾಲಿಗೇ ಬಿದ್ದು ನಮಸ್ಕರಿಸುತ್ತಿದ್ದರು. ಸಾಮಾನ್ಯ ಜನರನ್ನೂ ಶಾಸ್ತ್ರೀಯ ಸಂಗೀತದೆಡೆಗೆ ಸೆಳೆದು, ಒಳಗು ಮಾಡಿಕೊಳ್ಳುವ ಈ ಶಕ್ತಿಯ ದರ್ಶನವಾಗಿತ್ತು.

ಆಶ್ರಮದಲ್ಲಿ ಸಂಗೀತ ಕಲಿತ ಪ್ರತಿಯೊಬ್ಬ ಗಾಯಕನ ಹಾಡುಗಾರಿಕೆಯಲ್ಲಿ ವೆಂಕಟೇಶ ಕುಮಾರ್‌ ಅವರ ಗಾಯನದ ಪ್ರಭಾವವನ್ನು ಕಾಣಬಹುದು. ವೆಂಕಟೇಶ ಕುಮಾರ್‌ ಅವರು ಮನೆ ಮನೆ ಮಾತಾಗಿದ್ದು ದಾಸರಪದ ಮತ್ತು ವಚನಗಳ ಮೂಲಕ. ಪ್ರಸಿದ್ಧ ಹಾರ್ಮೋನಿಯಂ ವಾದಕರಾಗಿದ್ದ ಪಂ.ವಸಂತ ಕನಕಾಪುರ್‌ ಅವರು ಸ್ವರ ಸಂಯೋಜಿಸಿದ ಅನೇಕ ದಾಸರ ಪದಗಳಿಗೆ ಧ್ವನಿಯಾಗಿ ಜೀವ ನೀಡಿದ ವೆಂಕಟೇಶ ಕುಮಾರ್‌ ಅವರು ತಮ್ಮ ಹೆಸರಿನೊಂದಿಗೇ ಬೆಸೆದುಕೊಂಡ ‘ತೊರೆದು ಜೀವಿಸಬಹುದೇ’, ‘ನಂಬಿದೆ ನಿನ್ನ ಪಾದ’, ‘ಒಂದು ಬಾರಿ ಸ್ಮರಣೆ ಸಾಲದೆ’ ಮುಂತಾದ ಹಾಡುಗಳ ಮೂಲಕ ಅವಿಸ್ಮರಣೀಯರಾಗಿದ್ದಾರೆ. ಪಂ.ಭೀಮಸೇನ ಜೋಶಿಯವರ ದಾಸರಪದಗಳ ನಂತರ ದಾಸರಪದಗಳನ್ನು ಹಾಡುವ ಇನ್ನೊಂದು ಬಗೆಯ ಶೈಲಿಯನ್ನು ರೂಪಿಸಿ, ಪ್ರಸಿದ್ಧಗೊಳಿಸಿದ ಶ್ರೇಯಸ್ಸು ವೆಂಕಟೇಶಕುಮಾರ್‌ ಅವರಿಗೆ ಸಲ್ಲಬೇಕು.

ದೇಶದ ಎಲ್ಲಾ ಪ್ರತಿಷ್ಠಿತ ವೇದಿಕೆಗಳಲ್ಲಿ, ಸಂಗೀತ ಉತ್ಸವಗಳಲ್ಲಿ ಹಾಡಿರುವ ವೆಂಕಟೇಶ ಕುಮಾರ್‌ ಅವರು ಹಿಂದೂಸ್ತಾನಿ ಸಂಗೀತ ಕ್ಷೇತ್ರದ ಅತ್ಯಂತ ಬೇಡಿಕೆಯ ಕಲಾವಿದ. ತಮ್ಮ ಸಾಧನೆಗಾಗಿ ಭಾರತ ಸರ್ಕಾರದ ’ಪದ್ಮಶ್ರೀ’ (2016), ’ಸಂಗೀತ ನಾಟಕ ಅಕಾಡೆಮಿ ಪುರಸ್ಕಾರ’(2012), ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ (1999), ಕಾಲಿದಾಸ ಸಮ್ಮಾನ್ (2017) ಮುಂತಾದ ಹಲವು ಗೌರವಕ್ಕೆ ಪಾತ್ರರಾಗಿದ್ದಾರೆ.
ವೆಂಕಟೇಶ ಕುಮಾರ್‌ ಅವರ ಗಾಯನದಲ್ಲಿ ‘ಶಾಸ್ತ್ರ ಮತ್ತು ದೇಸೀತನ’ಗಳ ಬಹು ಅಪೂರ್ವವಾದ ಸಂಗಮವಿದೆ. ಅಲ್ಲಿ ಶಾಸ್ತ್ರದ ಅತಿಯಾದ ಬಿಗಿಯಿಲ್ಲ, ಬದಲಾಗಿ ಮುಕ್ತತೆ ಇದೆ. ಅವರ ಗಾಯನದಲ್ಲಿರುವ ಶಕ್ತಿ-ರಭಸಗಳು ‘ಧಾರವಾಡದ ನೆಲದಿಂದ ಬಂದವು’ ಎನ್ನುವ ಆದರಕ್ಕೆ ಪಾತ್ರವಾಗಿವೆ. ಗಾಯನದಲ್ಲಿನ ಈ ಗುಣವನ್ನು ಹಿಂದೂಸ್ತಾನಿ ಸಂಗೀತ ಕ್ಷೇತ್ರದ ಬೇರೆ ಯಾವ ಪ್ರದೇಶದಿಂದ ಬಂದ ಕಲಾವಿದರಲ್ಲೂ ಕಾಣಲು ಸಾಧ್ಯವಿಲ್ಲ. ಸ್ಪಷ್ಟವಾದ ರಾಗದ ಮಂಡನೆ, ಪ್ರದರ್ಶನದ ಶೋಕಿ ಇಲ್ಲದ ಶುದ್ಧರಾಗಧಾರಿ, ತಾನ್‌ನ ಹಲವು ಬಗೆಯ ವಿನ್ಯಾಸಗಳು, ಪಾರಂಪರಿಕ ರಚನೆಗಳು, ಸ್ಪಷ್ಟ ಆಕಾರಯುಕ್ತ ಆಲಾಪ ಮತ್ತು ಅವರ ಉಸಿರುಸಿರಿನಲ್ಲೂ ಹೊರಸೂಸುವ ನಮ್ಮ ನಾಡು-ನುಡಿಯ ಸೊಗಡು ಹೊಸದಾದ ‘ವೆಂಕಟೇಶ ಕುಮಾರ್ ಮಾದರಿ’ಯನ್ನು ಹುಟ್ಟಿಸಿದೆ.

ಜುಲೈ 1ಕ್ಕೆ ಸನ್ಮಾನ

ಜುಲೈ 1ರಂದು ಪಂ. ವೆಂಕಟೇಶ ಕುಮಾರ ಅವರಿಗೆ 70 ವರ್ಷ ತುಂಬುತ್ತದೆ. ಧಾರವಾಡದ ಕರ್ನಾಟಕ ಕಾಲೇಜು ಆವರಣದಲ್ಲಿ ಆ ದಿನ ಸಂಜೆ 4ರಿಂದ ಈ ಸಂಗೀತ ಸಾಧಕರಿಗೆ ಜಿ.ಬಿ. ಜೋಶಿ ಮೆಮೋರಿಯಲ್ ಟ್ರಸ್ಟ್‌ ಹಾಗೂ ಹುಬ್ಬಳ್ಳಿಯ ‘ಕ್ಷಮತಾ’ ಸನ್ಮಾನ ಸಮಾರಂಭ ಆಯೋಜಿಸಿವೆ. ಗಿರೀಶ ಕಾಸರವಳ್ಳಿ ನಿರ್ದೇಶಿಸಿರುವ ‘ನಾದದ ನವನೀತ’ ಕಿರುಚಿತ್ರವು ಆ ದಿನ ಪ್ರದರ್ಶಿತವಾಗಲಿದ್ದು ಅಯ್ಯಪ್ಪಯ್ಯ ಹಲಗಲಿಮಠ ಅವರ ಸಂಗೀತ ಕಾರ್ಯಕ್ರಮವೂ ನಡೆಯಲಿದೆ. ವೆಂಕಟೇಶ ಕುಮಾರ ಅವರೊಂದಿಗೆ ಸಂವಾದ ಕಾರ್ಯಕ್ರಮವೂ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT