ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕವನ | ಜಾತ್ರೆ ಪೇಟೆಯ ಚಿತ್ರಗಳು

ಪಿ ಬಿ ಪ್ರಸನ್ನ
Published 19 ಮೇ 2024, 0:10 IST
Last Updated 19 ಮೇ 2024, 0:10 IST
ಅಕ್ಷರ ಗಾತ್ರ

ಎಷ್ಟೊಂದು ಮುಖಗಳು ಜಾತ್ರೆ ಪೇಟೆಯಲ್ಲಿ
ಭಾವ ಗೊತ್ತಾಗುವುದಿಲ್ಲ
ಗುಮ್ಮನಗುಸಕ

ನನಗವರ ಪರಿಚಯ ಸಿಕ್ಕಿದ್ದು ನಿಜ
ತಳ್ಳಾಟದಲಿ ಮಾತಾಡಲೆಂದು
 ಸಾಗಿದರೆ ಮುಖ ತಿರುಗಿಸಿದರು

ಗೂಡೆರಾಶಿ ಹಾಕಿದವನೊಬ್ಬ
ಬೆಳಗಿಂದ
ಸರಕು ತೀರಿಯೇ ಹೋಗಿದೆ
ಎಂದು ಬೊಬ್ಬೆ ಹೊಡೆಯುತ್ತಿದ್ದ
ಹತ್ತಿರ ಹೋಗಿ ನೋಡಿದರೆ
ಎಲ್ಲವೂ ಇದ್ದಂತೆಯೇ ಇದೆ!

ಮುಖವಾಡಗಳ ಕೊಳ್ಳುವವರು
ಅದೆಷ್ಟು ಮಂದಿ
ಎಲ್ಲರಿಗೂ ರಕ್ಕಸನೋ ಭೂತವೋ
ತಪ್ಪಿದರೆ
 ಪಿಶಾಚಿಯೋ ಆಗುವ ಚಪಲ

ಹಳೆದೆಲ್ಲ ಮರೆತು ಹೊಸದಾಗಿ ಇರಬೇಕು ಎಂದು
ಕೈ ಕೈ ಹಿಡಿಯುತ್ತ ಸಾಗುತ್ತಿದ್ದಾರೆ
ದಂಪತಿಗಳು
ದಾರಿ ಸಾಗಿದಂತೆ ಕೈ ಬದಲಾದದ್ದು ತಿಳಿಯುವುದೇ ಇಲ್ಲ.

ತಾಯಿ ಒಬ್ಬಳು
ಎರಡು ಕೈಗಳಲ್ಲೂ ಬೆಳಕು ಮಾರುತ್ತಿದ್ದಾಳೆ
ಎದೆಗವಚಿಕೊಂಡ ಜೋಳಿಗೆಯಲ್ಲಿ
ಗುಟುಕು ಹಾಲಿಗೆ ಬಾಯಿ ಬಿಡುತ್ತಿದೆ ಮಗು
 ಸಿಗದೆ ಕಂಗಾಲು

ಪೇಟೆಯ ತುದಿ ತುದಿಗೆ
ಮಬ್ಬು
ಅಲ್ಲಿ ಅರೆ ಬಿರಿದ
ಮೊಗ್ಗುಗಳಿಗೆ ಪನ್ನೀರು ಚುಮುಕಿಸುತ
ಅತ್ತರನು ಹೊಡೆಯುತ್ತ
ಬಲವಂತವಾಗಿ ಅರಳಿಸಿ
ಎಲ್ಲರಿಗೂ ಸುಗಂಧ ಹರಡಿಸುವ ಸವಾಲು
ಆ ಹೂವುಗಳ
ಕೊಳ್ಳಲು ಎಷ್ಟೊಂದು ಮಂದಿ!

ಜಗದ ಸಿಂಗಾರ ನೋಡಿರಯ್ಯಾ
ಎಲ್ಲೆಲ್ಲೂ ಮಳೆಬಿಲ್ಲ ರಂಗ ಕಾಣಿರಯ್ಯಾ
ಎಂದು ಕುರುಡರೆಲ್ಲ ಒಟ್ಟಾಗಿ
ಹಾಡಿ ನಲಿಯುತ್ತಿದ್ದಾರೆ

ಅಡಿಗಡಿಗೆ ಚೆಂಡೆ ಮದ್ದಳೆ
ಸಕಲ ಅಪಸ್ವರಗಳ ಮೇಳ
ನಡುವೆ ತೇರಿನಲ್ಲಿ ದೇವರು


ಎಲ್ಲ ಕಂಡೂ ಕಾಣದಂತೆ
ಓಕುಳಿಗೆ ಕಾಯುತ್ತ
ಅವ ಶಾಂತ ಅಚಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT