ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾಗ್ಯ ಕೆ.ಯು ಅವರ ಕವಿತೆ: ಕಣ್ಣಬೀದಿಯಲ್ಲಿ ಹನಿದೇರು

ಭಾಗ್ಯ ಕೆ.ಯು.
Published 4 ನವೆಂಬರ್ 2023, 23:30 IST
Last Updated 4 ನವೆಂಬರ್ 2023, 23:30 IST
ಅಕ್ಷರ ಗಾತ್ರ

‘ಪ್ರಜಾವಾಣಿ ದೀಪಾವಳಿ ಕವನ’ ಸ್ಪರ್ಧೆಯಲ್ಲಿ ಮೆಚ್ಚುಗೆ ಪಡೆದ ಕವಿತೆ

ಕಣ್ಣ ಬಟ್ಟಲಲಿ ಜೀಕುತ್ತಿದೆ ಹನಿದೇರು

ಉಟ್ಟ ಸೀರೆ ಸೆರಗ ನಾರು

ಮತ್ತೆ ಮತ್ತೆ ತೂಗುತ್ತಾಳೆ

ಒಳ ಮಾಗಿದ ನಗುವ ದೂರು

ನಾಳೆಗಳ ಹುಡುಕುತ್ತಾ

ಇಂದಿನಲಿ ಬೇಯುತ್ತಾ

ಪಾತ್ರೆಪಗಡೆಗಳ ರಾಗಸಂಗದಲಿ

ಪಾತ್ರ ಅಪಾತ್ರಗಳ ಸಂಧಾನದಲಿ

ಎದೆಯನು ಹಾಸುತ್ತಾಳೆ

ಹೊದಿಕೆ ಮೊಣಕಾಲವರೆಗೆ

ಸುರುಳಿ ಸುತ್ತಿಕೊಂಡ ತನು

ಗಾಳಿಗಿಟ್ಟ ಸೊಡರಂತೆ

ಅರಿವಿನ ತಿಳಿಗೊಳದ ತಳವ ಕದಡಿದೆ

ವ್ಯಾಮೋಹದ ಬೇರು

ಧುತ್ತನೆಂದು ಬಿದ್ದ ಕನಸಬಳ್ಳಿಯ

ಅಪ್ಪಲಾಗದ ದುರ್ದೈವ ವಿಧಿ

ಒಲೆಯ ಕುದಿಯೆಸರು

ತಾಳ ಹಾಕುವ ಒಳಗುದಿಯ ಒಸರು

ಉರಿಗೆಬಿದ್ದ ಕಾರುಣ್ಯದೊಡಲು

ಸಂಯಮವುಟ್ಟ ಪಕಳೆ 

ಉರಿದಾರಿದ ದೀಪದ ನಿಟ್ಟುಸಿರಲಿ ದಿಕ್ಕೆಟ್ಟುನಿಂತ ಬತ್ತಿಯೆಳೆ

ಧಮನಿ ಧಮನಿಯಲಿ ಹೆಪ್ಪುಗಟ್ಟದಂತೆ

ಕಾಪಿಟ್ಟ ಜೀವದೊಲುಮೆಗಳು

ದಾರಿಯುದ್ದಕ್ಕೂ ಬಾಡಿ‌ನಿಂತ ಹೂದೋಟ

ಬೋಡು ಮರದ ನೆರಳಲ್ಲಿ ಕವಲೊಡೆದ ಜೀವದಾರು

ದಣಿದೆರೆಡು ಹನಿ

ಸೋತ ಕವಿತೆಯೊಂದರ ದನಿ

ಮೌನ ಕುತ್ತಿಗೆಯ ಹಿಚುಕುತ್ತಾ

ಮಾತಿನ ಎದೆಗಿಟ್ಟ ಕೊಳ್ಳಿ

ಹಿಂಗಲಾರದ ತೃಷೆ

ಸತ್ತ ಕನಸುಗಳ ಮೂಟೆ ಹೊತ್ತು

ನೆತ್ತರಿನಲಿ ಮೊಳೆವ ನೆನಪುಗಳ ಕಿತ್ತು

ಹರಿಯಗೊಡದ ಚಿತ್ತದಲಿ ಹುತ್ತದ ಬೆಳೆ

ಕಳೆ ಕೀಳದ ನೆಲ ಬತ್ತಿದ ಕೊಳ

ಯಥಾ ನಮೆದ ಹಗಲುಗಳು

ವೃಥಾ ಕತ್ತಲ ಬಯಕೆಗೆ ಬಿದ್ದ ಎದೆ

ಕೊರಕಲುಗಳ ಮೈಸವರಿ ಹರಿದು

ಎಲ್ಲವನೂ ಕರಗಿಸಿಕೊಂಡ ಅಂತರಂಗ

ಬೆತ್ತಲ ಹರಿವು ಕೊತ್ತಲಗಳ ಮುಳುವು

ಎಲ್ಲದರಾಚೆ ಕರೆಗೊಡುವ ನುಡಿಬಯಲು

ಕಳಚಿನಿಂತ ಪೊರೆ ಅದರಾಚೆ ನಗುವ ಕೇಕೆ

ಬಂದಪ್ಪುವ ಸೊಗಡಿಲ್ಲದ ಗಾಳಿ

ರಥಬೀದಿಯಲಿ ಮುರುಟಿದ ಎಲೆಸುರುಳಿ

ಧೂಳು ಧೂಮಗಳ ಹುಡಿ ಹಾಯ್ದ ಎವೆಗಂಬನಿ

ಆಕ್ರಂದನ ಆವೇದನ ಗಡಚ್ಚಿಕ್ಕುವ ಆರ್ತನಾದ

ಪ್ರತಿ ಋತುವ ಸವರಿದ ಪವನ ತೂಗಿಟ್ಟ ಬಟಾಬಯಲು

ಸೋಕುತ್ತಾಳೆ ಗತವ

ಸಾಕುತ್ತಾಳೆ ನಾಳೆಯ

ಗೆದ್ದ ಸಾಕ್ಷಿಗಳಿಲ್ಲ

ಸೋತು ಕುರುಹುಗಳೆ ಎಲ್ಲಾ

ಬಿಕ್ಕಳಿಕೆಗಳಿಗೆ ಮೊಲೆಯೂಡಿ

ದಾಹದಣಿವಿಗೆ ದಾವೆಯೂಡಿ ಮಗ್ಗಲು ಬದಲಿಸಿಯೆದ್ದು

ಮತ್ತೂ ಊರುತ್ತಾಳೆ ಬೇರು ಆಳದ ಗರ್ಭದವರೆಗೆ

ಸವೆಯುತ್ತಾಳೆ ನಾಳೆಗಳ

ಬಂಧಿತ ಸುಖವನು ಕಿಬ್ಬೊಟ್ಟೆಯಲಡಗಿಸಿಟ್ಟು

ಸೋತ ಬದುಕಿಗೆ ಬಣ್ಣ ಪೂಸಿ ಬದುತ್ತಾಳೆ ನಾಳೆಗಳ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT