ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎನ್.ಸಿ. ಮಹೇಶ್ ಅವರ ಕವನ | ಮೈತುಂಬ ಯೋನಿಗಳುಳ್ಳ ಶಾಪಗ್ರಸ್ತಳ ಅಳಲು..

ಪ್ರಜಾವಾಣಿ ದೀಪಾವಳಿ ಕಾವ್ಯಸ್ಪರ್ಧೆ–2023: ತೀರ್ಪುಗಾರರ ಮೆಚ್ಚುಗೆ ಪಡೆದ ಕವನ
Published 11 ನವೆಂಬರ್ 2023, 9:27 IST
Last Updated 11 ನವೆಂಬರ್ 2023, 9:27 IST
ಅಕ್ಷರ ಗಾತ್ರ

ಪುರಂದರನಿಗೆ ಶಾಪ ವಿಮೋಚನೆಯಾದರೂ ಆಯಿತು.

ಅವನ ಮೈತುಂಬ ಪುಟ್ಟಗುಣಿಗಳಂತೆ

ಕಾಣಿಸಿಕೊಂಡ ಯೋನಿಗಳು

ಕಣ್ಗಳಾಗಿ ರೆಪ್ಪೆ ಅಲುಗಿಸಿದವು.

ನಾನಿನ್ನೂ ಶಾಪಗ್ರಸ್ತೆ.

ಅವನಾದರೋ ಲೋಕಪಾಲಕ, ಮಳೆ ಗಾಳಿಗೆ ಒಡೆಯ.

ನನ್ನ ಒಡಲು ಬಹುಪಾಲು ಕಡಲು.

ಕಾದ ನೀರೆಂಬ ವಿಸ್ತಾರ ಕಾವಲಿ ಮೇಲೆ

ಬೀಡುಬೀಸು ಚೆಲ್ಲಿದ ದೋಸೆ ಹಿಟ್ಟು

ಬೇಯುತ್ತ ಗಟ್ಟಿಯಾಗಿ ಹದಗೊಂಡಂತೆ

ನೆಲವಾದ ಖಂಡಗಳು.

ಕ್ರಿಮಿ ಹುಳು ಹುಪ್ಪಟೆಗಳ ಜೊತೆ

ಬುದ್ಧಿ ಚಿಗಿತ ಜೀವ ಪ್ರಭೇದಗಳು ಹುಟ್ಟಿ

ಕಥೆ ಕಟ್ಟಿ ಕಥೆಯಾದವು.

ನನ್ನ ಒಡನಾಡಿಗಳು ದೂರದೂರದಲ್ಲೇ

ನನ್ನ ಚೆಲುವು ಚಿತ್ತಾರ ಫಲವಂತಿಕೆಗೆ ಕರುಬುತ್ತ

ಬೆಂಕಿಪುಂಜವನ್ನು ಸುತ್ತುತ್ತಿರುವ ಉಂಡೆಗಳು.

ಹೋದರೆ ಹೋಗಲಿ ಎಂದು

ಅವುಗಳಿಗೂ ಒಂದೊಂದು

ಸ್ಥಾನ ಮಾನ ಸಮ್ಮಾನ ಕಥೆರೂಪದಲ್ಲಿ

ಕೊಟ್ಟ ಹೆಗ್ಗಳಿಕೆ ನನ್ನ ಒಡಲಿನ ಜೀವಿಗಳದು.

ಯಾರೋ ಹಾಕಿಟ್ಟ ಏಣಿಯ

ತುದಿ ಕಾಯ್ದುಕೊಂಡ ಕೃತ

ನಂತರ ಯುಗಗಳಾಗಿ ಕೆಳಗಿಳಿದಂತೆ

ಒಂದೊಂದರಲ್ಲೂ ಭಗವಂತನದೇ ಗುತ್ತಿಗೆ.

ಅವನ ಲೀಲೆ ಕಾಣುವುದಷ್ಟೇ ನನ್ನ ಕೆಲಸವಾಗಿತ್ತು, ನೆಮ್ಮದಿಯ ದಿನಗಳು.

ಬರಬರುತ್ತ ಒರೆಗೆ ಹಚ್ಚುವ ಕಲ್ಲಿನ ಬಳಕೆ

ಹೆಚ್ಚಾದಂತೆ ಭಗವಂತ ಅದೃಶ್ಯ.

ರಾವಣ ಕುಂಭಕರ್ಣ ಕಂಸಾದಿಗಳು

ಕಲಿಗಾಲದ ಉಡುಗೆ ತೊಡಲು

ಕಲಿತು ವಿಜೃಂಭಣೆ.

ನಾನು ಆ ಹೊತ್ತಿಗೆ ಕನ್ಯೆ.

ಯೋನಿ ಇರಬೇಕಾದ ಜಾಗದಲ್ಲೇ ಇತ್ತು.

ಮಕ್ಕಳು ಪಡೆಯುವ ಹಂಬಲವಿರದ ನಿರ್ಲಿಪ್ತ ಸ್ಥಿತಿ.

ನನ್ನ ಈ ಸ್ನಿಗ್ಧ ಚೆಲವಿಗೆ ಕಾಲ ಮನಸೋತ.

ಥರಾವರಿ ಬಣ್ಣ, ಉಡುಗೆ ತೊಡುಗೆ, ಒಟ್ಟಿನಲಿ ಕಾಮರೂಪಿ.

ಗೊತ್ತುಗುರಿ ಸಾಕ್ಷಿಗಳಿಲ್ಲದ ಮದುವೆ ನಮ್ಮದು.

ತಪಸ್ವೀ ಮಕ್ಕಳನು ಹಡೆಯಬೇಕು ನೀನು ಅಂದ.

ಈಗಲೇ ಏನು ಅವಸರ ಅಂದದ್ದಕ್ಕೆ ಸಿಟ್ಟಾಗಿ

ಖಂಡಗಳಲಿ ದೇಶಗಳು ಚದುರಿ ಹೋಗಿರುವಂತೆ

ನಿನ್ನ ಮೈಯಲ್ಲೂ ಯೋನಿಗಳು ಚದುರಿಕೊಳ್ಳಲಿ ಅಂದ.

ಪುರಂದರ ನಕ್ಕದ್ದು ಕೇಳಿಸಿತು.

ಇದೇನು ನಿನ್ನ ಹುಚ್ಚು ಎನ್ನುವಷ್ಟರಲ್ಲಿ

ಅವನು ರಮಿಸಿದ ಫಲಕ್ಕೆ

ಒಂದೊಂದು ಯೋನಿಯಲ್ಲಿ ಒಬ್ಬೊಬ್ಬ ತಪಸ್ವಿ ಹುಟ್ಟಿದ.

ಗೌರಿ ಶಿಖರದಿಂದ ಗಂಗೆ ಇಳಿದಂತೆ

ಒಬ್ಬೊಬ್ಬರು ಹುಟ್ಟುತ್ತಿದ್ದರೆ

ಕ್ರಿಸ್ತ ಕವಲಾಗಿ ಹುಟ್ಟಿದ, ಪೈಗಂಬರ್‌ ಅರಳಿದರು.

ನಾನಕರು, ಜರಾತುಷ್ಟ್ರ, ಅವರ ಕವಲುಗಳು

ಹುಟ್ಟುತ್ತಲೇ ಹೋದವು.

ನನ್ನ ಗಂಡನದು ರಾಜಠೀವಿ. ಧಿಮಾಕು.

ಮಕ್ಕಳು ಪಾತ್ರ ಮುಗಿಸಿ ಹೊರಡುತ್ತಿದ್ದಂತೆ

ಮತ್ತೆ ಕಂಸಾದಿಗಳ ಹಾವಳಿ.

ಹಡೆದ ಸುಸ್ತಿನ ಬಗ್ಗೆ ವಿಚಾರಿಸದೆ

ಮತ್ತೆ ಬಲವಂತದ ಪ್ರತೀಕಾರದ ಮಿಲನ.

ಹಿಂಜಿದ ಮೈ, ಹೂಗಳಂತೆ ಅರಳಿಕೊಂಡ ಯೋನಿಗಳು.

ನನ್ನ ಗಂಡನ ಉಮೇದಿಗೆ ಸರ್ವಾಧಿಕಾರಿಗಳೂ

ಪ್ರತೀಕಾರಕ್ಕೆ ಹುಟ್ಟಲು

ಕಾಲ ಕಟುವಾದ, ಕಹಿಯಾದ.

ಅವನು ಮತ್ತೆ ತಪಸ್ಸಿಗೆ ಕೂತರೆ ನನಗೆ ಭಯ.

ಕಣ್ಗಗಳಿರುವ ಕಡೆಯೂ ಯೋನಿಗಳೇ ಇದ್ದು

ಬರೀ ಹೆರುವ ಕೆಲಸಕ್ಕೆ ಈಗೀಗ ವಾಕರಿಕೆ.

ಅಷ್ಟಕ್ಕೇ ಗಂಡನದು ವ್ಯರ್ಥ ಸಂಭ್ರಮ.

ಸೀಮಂತದ ಸಂಭ್ರಮವೂ ಇಲ್ಲದ ಬೇನೆ, ಹೆರಿಗೆಗಳು.

ನನಗಿನ್ನು ಮಕ್ಕಳು ಬೇಡ.

ತಪಸ್ಸಿಗೂ ಕೂರಬೇಡ ಅಂದಿದ್ದೇನೆ ಅವನಿಗೆ.

ಹಾಳಾದದ್ದು ಜರೆ ಮುಪ್ಪು ಸಾವುಗಳಿದ್ದಿದ್ದರೆ

ನಾನೂ ನಿಜವಾದ ಹೆಣ್ಣಿನ ಹೆಣ್ತನ ಅನುಭವಿಸಿ ಕಣ್ಮುಚ್ಚಬಹುದಿತ್ತು..

ಶಾಪ ವಿಮೋಚನೆಗೆ ಕಾದು ಕೂತವಳು

ಮತ್ತೆ ಗರ್ಭ ಧರಿಸದಿದ್ದರೆ ಅಷ್ಟೇ ಸಾಕು..

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT