ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕವನ: ಪವಡಿಸಿಹರು ಕವಿ ಜನರು

Last Updated 26 ಸೆಪ್ಟೆಂಬರ್ 2020, 19:30 IST
ಅಕ್ಷರ ಗಾತ್ರ

ಕಾರ್ತೀಕದಮಾವಾಸ್ಯೆ ಸೂರ್ಯ ಕರಗಿದ ಮೇಲೆ

ಬಾ ಬಾಪು ಮಹದೇವರ ಆಶ್ರಮಕೆ ಕಾಲಿಟ್ಟೆ

ದುಧಾ ದಾನಿ ಮಗನರು ನೆಟ್ಟ ನೆರಳಡಿ ಕೂತೆ

ಜನದೇವರ ಹೆಜ್ಜೆಗುರುತು ಕದ್ದಿಂಗಳಲು ಕಂಡೆ

ಅದೇನದೇನು ಚಂದವೋ, ಅದೇನು ಹರಿತ ನೋಟವೋ!

ಇರುಳ ಮೌನ ಸೀಳುತ್ತ ಗೂಬೆ ಕವಿ ಹಾರಿ ಬಂತು

ಗುಹಾ ನಿಯೋಗಿ ಜೀವವದು ವಿರಾಮವಿರದ ಒಳಗಣ್ಣು

ಸುತ್ತಮುತ್ತ ಗಸ್ತುನೋಟ ಹರಿಸಿ ಗತ್ತು ಇಳಿಸಿಕೊಂಡು

ಕಳೆದ ಬಂಧು ದೊರೆತ ಖುಷಿಗೆ ಮಾತಿನವರೆ ಸುಲಿಯಿತು:

`ಬರಗಾಲವಿಲ್ಲಿ ಹೊಸದಲ್ಲ, ಕೇಳಿಲ್ಲಿ, ಕನಸುಗಣ್ಣೇ

ನೂರಕಿಪ್ಪತ್ತೇ ವರುಷ ಮಳೆಯ ವರವೀ ನಾಡಿಗೆ

ಮಳೆಯಿರದೆ ಜಲಕಣ್ಣು ಒಣಗಿ ಇಂಗಿ ನೀರಿರದೆ

ಡೌಗಿ ಬರ ಆಗಲೀಗ ಮೇಲೆರಗುವುದೂ ಇದೆ

ಬರಕೆ ಬೆದರಿದವರಲ್ಲ ಭೂಕಂಪಕಂಜಿದವರಲ್ಲ

ನೀರ ಜಾಣಜಾಣೆಯರು ರಣ ನೆಲದ ಕಚ್ಛರು

ನೆಲದಾಳದ ಒರತೆಗಣ್ಣು ಬೆಂಕಿಯನ್ನುಗುಳುತಿರಲು

ಕೃಷ್ಣ ಕ್ರಿಸ್ತ ನಬಿ ಜಿನರೆ ಜೀವಕೆ ತಂಪೆರೆವರು

ಕವಿಯೇ ನೀನು? ಎಚ್ಚರ! ಕವಿ ಹೆಣ್ಣೇ? ಎಚ್ಚರ!

ಕಂಡು, ಕೇಳಿ, ಅತ್ತರಾಗಲಿಲ್ಲ ಇರಲಿ ಎಚ್ಚರ

ಲೆಕ್ಕವಿಲ್ಲ ಹಸಿದವರ ಸಾವುನೋವು ದುಗುಡ ದುಃಖ

ಕಣ್ಣು ತಿವಿವ ಉರಿಸಂಕಟ ಕಾಣದೆಂದರಾಶ್ಚರ್ಯ!

ನಿನ್ನ ಮೌನ ನಿನ್ನ ನೆತ್ತರಿಂದ ನಾಳೆ ಮೀಯುವುದು

ಉಂಡುತಿಂದು ಗೆಂಡೆ ರೋಗ, ಕವಿಗೆ ಬಂದಿತೇಕಿಂದು?

ಬೆಲ್ಲ ಬಂತು ಕೇರಿಗೆ ಜೊತೆಗೆ ವಿಷವೂ ನುಸುಳಿದೆ

ವಿಷವಾವುದು ಕಹಿ ಯಾವುದು ಜಿಹ್ವೆ ರುಚಿಯ ಮರೆತಿದೆ

ಬಾಯಲಿಹುದು ಬೆಲ್ಲವಲ್ಲ ಸಿಹಿ ಸವರಿದ ಕಲ್ಲಷ್ಟೇ

ಸವಿ ಕರಗಿ ಇಳಿದ ಮೇಲೆ ಸುಲಿಯಲಿದೆ ನಾಲಿಗೆ

ಎದ್ದೇಳು ಕವಿ ಎಚ್ಚರ, ಎಬ್ಬಿಸು ಮೈ ಮರೆತವರ

ಪ್ರಾಣ ಹೋದರೂನು ಮಾತು ಅಡವಿಡದಿರು, ಎಚ್ಚರ

ಎವೆಯಿಕ್ಕುವುದರಲ್ಲಿ ಸಗ್ಗಕೆ ಕವಿ ಒಯ್ಯುವರು

ಹೂವರಳಿಸಲಾರರು ಮನ ಅರಳಿಸಬಲ್ಲರು

ಸುಖ ಶವಾಸನದಿ ಕವಿಗಳೇಕೆ ಪವಡಿಸಿರುವರು?

ಎದೆ ಕವಿತೆ ಕಷ್ಟದಲ್ಲಿದೆ, ಕವಿ ಜನರ ಎಚ್ಚರಿಸು

ಕವಿತೆ ಕದನಪ್ರೇಮಿಯಲ್ಲ, ನೆತ್ತರಲಿ ತೊಯ್ದು ಬರುವುದಿಲ್ಲ

ಪ್ರೇಮಗಂಧ ಬೆವರ ಗಂಧ ಮೈತ್ರಿ ಗಂಧ ಕವಿತೆಗೆ

ಸೇಡಿನಿಂದ ಹೊಸತೆಂದೂ ಹುಟ್ಟಲಾರದು ಕವಿಯೆ

ಹಾಡು ಹಾಡಿ ಅರುಹು ನಿಜವ ಕುರುಡ ಜನ ಸಮೂಹಕೆ

ಎಚ್ಚರ ಕವಿ ಎಚ್ಚರ! ಎದೆ ನುಡಿಯು ಕಷ್ಟದಲ್ಲಿದೆ

ಕಂಡೂ ಸುಮ್ಮಗಿರುವೆಯೇಕೆ? ಬಳಗ ಕಷ್ಟದಲ್ಲಿದೆ

ಒರೆಯ ಕತ್ತಿಯಲ್ಲ ಮಾತು ಎದೆಗುರಾಣಿಯಲ್ಲ ಮಾತು

ಎದೆಯಲರಳಿದಂಥ ಸಹಜ ಹೂವಿನಂತೆ ಕವಿ ಮಾತು

ಮಾತು ದುಃಖ ಅರಿವ ದಾರಿ, ದುಃಖವೇ ಶಕ್ತಿ ನೆನಪಿಡು

ದುಃಖ ಸಹಿಸು, ಎಂದಿಗೂ ಉಂಡ ದುಃಖ ಮರೆಯದಿರು

ದುಃಖವನೆ ಬದುಕಿ ಬಿಡು, ಸುಮ್ಮನೆಂದು ಇರದಿರು

ಕವಿತೆಯೇ ನಿತ್ಯ ಸತ್ಯ, ದುಃಖ ನುಂಗಿ ಬರೆದುಬಿಡು’

ಬಿರುಗಣ್ಣ ಚೆಲುವ ಗೂಬೆಯೇ, ನಿನ್ನ ಕಾಲಗ್ಯಾನಕೆ ಶರಣು

ಇರುಳು ಕಾಂಬ ಹಕ್ಕಿಯೇ, ನಿನ್ನ ಕಣ್ಣ ಶಕುತಿಗೆ ಶರಣು

ಸಬರಮತಿಯ ಸಾಕ್ಷಿಯಾಗಿ, ಕೊಡುವೆನು ನಿನಗೀ ಮಾತು

ಇಂದಿನಿಂದ ಕಂಡುದನ್ನು ಹೇಳದೆ ಇರಲಾರೆನು..

(ಸದ್ಯವೇ ಬಿಡುಗಡೆಯಾಗಲಿರುವ ಎಚ್.ಎಸ್. ಅನುಪಮಾ ಅವರ ‘ಸಬರಮತಿ’ ನೀಳ್ಗವಿತೆಯ ಒಂದು ಭಾಗ)

ರೇಖಾ ಚಿತ್ರ: ಡಾ. ಕೃಷ್ಣ ಗಿಳಿಯಾರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT