ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಶ್ರುತಿ ಬಿ.ಆರ್ ಅವರ ಕವನ: ತಾಯಿಯಾಗಿದ್ದೇನೆ..

ಶ್ರುತಿ ಬಿ.ಆರ್ ಅವರ ಕವನ
ಶ್ರುತಿ ಬಿ.ಆರ್.
Published 25 ನವೆಂಬರ್ 2023, 20:52 IST
Last Updated 25 ನವೆಂಬರ್ 2023, 20:52 IST
ಅಕ್ಷರ ಗಾತ್ರ

ದೀಪಾವಳಿ ಕಾವ್ಯಸ್ಪರ್ಧೆ–2023ರಲ್ಲಿ ಮೆಚ್ಚುಗೆ ಪಡೆದ ಕವನ

ನಾನು ತಾಯಿಯಾಗಿದ್ದೇನೆ

ಪ್ರೀತಿ, ಮಮತೆ ತುಂಬಿದ

ಹೃದಯ ನನ್ನದಾಗಿದೆ ಈಗ

ಕರುಣೆ, ವಾತ್ಸಲ್ಯಕ್ಕೆ ಕೊರತೆಯಿಲ್ಲ

ಮಗು, ನನ್ನ ಮಗುವಿನದೇ ಧ್ಯಾನ…

ತಿಂಗಳು ತಪ್ಪಿದ ದಿನವೇ

ಟೆಸ್ಟ್ ಕಿಟ್ ಹಿಡಿದು ಜೀವ ಕೈಲಿಡಿದು,

ರೆಪ್ಪೆ ಬಡಿಯದೇ, ಚಡಪಡಿಸುತ್ತಾ,

ಹಿಡಿತಕ್ಕೆ ಸಿಕ್ಕದ ಎದೆ ಬಡಿತಕ್ಕೆ

ಆಶಾವಾದದ ಸಾವಧಾನ ಹೇಳುತ್ತಾ

ಒಂದೇ ಒಂದು ಗುಲಾಬಿ ಗೆರೆ ಕಂಡು

ಅಡಿಗಡಿಗೆ ಹತಾಶೆಯ ನಿಟ್ಟುಸಿರು…


ಅದೇಕಿಷ್ಟು ಬಗೆಹರಿಯದ ಹಂಬಲ?

ಉತ್ತರವಿಲ್ಲ, ಮಕ್ಕಳೆಷ್ಟೆನ್ನುವವರಿಗೆ

ಹುಸಿ ನಗುವಿನ ಮೊಗವಾಡ

ಮಗುವಿದ್ದರಷ್ಟೇ ತಾಯಿಯೇ?

ತಾಯಾಗಬೇಕೆಂದುಕೊಂಡರೆ ಸಾಲದೇ

ಇನ್ನೂ ಮೊಳೆಯದ ಫಲವ

ಕನಸಲ್ಲಿ ಕಂಡು ಸುಖಿಸಬಾರದೇ ಮರ?


ಹಾ! ನಾನು ಸಹ ಇನ್ನೂ ಗರ್ಭಕ್ಕೆ

ಕಾಲಿಡದ ಕೂಸ ಕಲ್ಪಿಸುತ್ತಾ, ಸ್ಪರ್ಶ- ಗಂಧಗಳ

ಆಸ್ವಾದಿಸುತ್ತಾ ತಾಯಿಯಾಗಿದ್ದೇನೆ!

ಪ್ರೆಗ್ನೆನ್ಸಿ ಟೆಸ್ಟ್ ಕಿಟ್ಟಿನ

ಎರಡೇ ಎರಡು ಗುಲಾಬಿ ಗೆರೆಗಳ,

ಮತ್ತೆರಡು ಗುಲಾಬಿ ಪಾದಗಳ

ಕಾಣಲು ಕಾಯುತ್ತಾ ತಾಯಿಯಾಗಿದ್ದೇನೆ…


ಅಗಾಧ ಅನಂತ ವಿಶ್ವದೊಳಗೆಲ್ಲೋ

ಅಣುವಾಗಿ, ತೃಣವಾಗಿ, ಕಲೆತಿರಬಹುದಾದ

ಕಾಣದ ಕಣವೇ ಒಳಗಿಳಿದುಬಿಡು,

ನಿನಗೆಂದೇ ಎಂದೋ ತಯಾರಿದೆ

ಗರ್ಭಕೋಶದೊಂದೊಂದು ಭಿತ್ತಿ…


ನಿನ್ನ ಹಲವು ರೂಪಗಳ ಆಸ್ವಾದಿಸಲು

ಅಕ್ಕರೆ ತುಂಬಿ ಅನುರಣಿಸುವ ಈ ಕರೆ

ಕಿವಿಗಳಿನ್ನೂ ಮೂಡದ ನಿನ್ನ ತಲುಪುವ

ಮಾರ್ಗವಾದರೂ ಯಾವುದೆಂಬ ಅರಿವಿಲ್ಲ,

ಆದರೂ ನಾನಂತೂ ನಿನ್ನ ನಂಬುತ್ತೇನೆ

ಅಮೂರ್ತವಾದ ನೀನು ನನ್ನೊಳಗೇ

ಮೂರ್ತವಾಗುವ ಘಳಿಗೆಗಾಗಿ

ನೀನೂ ಕಾಯುತ್ತಿರುವೆಯೆಂದು!!!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT