ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ: ₹2.64ಕೋಟಿ ಹೆಚ್ಚುವರಿ ಹಣಕ್ಕೆ ಬೇಡಿಕೆ

Last Updated 3 ಜನವರಿ 2019, 9:59 IST
ಅಕ್ಷರ ಗಾತ್ರ

ಧಾರವಾಡ: 84ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸರ್ಕಾರ ಈಗಾಗಲೇ ₹8 ಕೋಟಿ ನೀಡುವುದಾಗಿ ಹೇಳಿದ್ದು, ಹೆಚ್ಚುವರಿಯಾಗಿ ₹2.64 ಕೋಟಿಗೆ ಜಿಲ್ಲಾಡಳಿತ ಬೇಡಿಕೆ ಸಲ್ಲಿಸಿದೆ.

ಸಾಹಿತ್ಯ ಸಮ್ಮೇಳನಕ್ಕೆ ರಚಿಸಿರುವ 20 ಸಮಿತಿಗಳು ತಮ್ಮ ವ್ಯಾಪ್ತಿಯ ಅಂದಾಜು ₹15 ಕೋಟಿ ವೆಚ್ಚದ ಪಟ್ಟಿಯನ್ನು ನೀಡಿದ್ದವು. ಅದನ್ನು ಪರಿಷ್ಕರಿಸಿ ₹12.13 ಕೋಟಿ ಇಳಿಸಲಾಗಿತ್ತು. ಆದರೆ, ಹಣಕಾಸು ಸಮಿತಿಯ ಕಾರ್ಯಾಧ್ಯಕ್ಷರಾಗಿರುವ ಜಿಲ್ಲಾ ಪಂಚಾಯ್ತಿ ಸಿಇಒ ಡಾ.ಬಿ.ಸಿ.ಸತೀಶ ಅವರು ಸಮಿತಿಗಳೊಂದಿಗೆ ಹಲವು ಸುತ್ತಿನ ಮಾತುಕತೆ ನಡೆಸಿ, ವೆಚ್ಚವನ್ನು ₹10.64 ಕೋಟಿಗೆ ಇಳಿಸಿದ್ದಾರೆ. ಹಲವೆಡೆ ಅನಗತ್ಯ ಖರ್ಚಿಗೆ ಕಡಿವಾಣ ಹಾಕಿದ್ದಾರೆ. ಹೀಗಾಗಿ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ನಿಗದಿಯಾಗಿದ್ದ ಮೊತ್ತದಲ್ಲಿ ಅರ್ಧದಷ್ಟು ಕಡಿತಗೊಳಿಸಲಾಗಿದೆ. ಸ್ವಚ್ಛತೆ ಮತ್ತು ನೈರ್ಮಲ್ಯ, ಸ್ವಯಂ ಸೇವಕರ ಉಸ್ತುವಾರಿ ಸಮಿತಿ ಬೇಡಿಕೆ ಸಲ್ಲಿಸಿದ್ದ ಮೊತ್ತದಲ್ಲಿಯೂ ಸಾಕಷ್ಟು ಕಡಿತಗೊಳಿಸಲಾಗಿದೆ. ಅಲಂಕಾರದ ಉಸ್ತುವಾರಿ ಸಮಿತಿಗೆ ₹18 ಲಕ್ಷ ನಿಗದಿಯಾಗಿತ್ತು. ಆದರೆ, ಅದರ ವೆಚ್ಚವನ್ನು ₹78 ಲಕ್ಷಕ್ಕೆ ಹೆಚ್ಚಿಸಲಾಗಿದೆ.

ಕನ್ನಡ ಸಾಹಿತ್ಯ ಪರಿಷತ್ತು ಸರ್ಕಾರದಿಂದ ಅಂದಾಜು ₹10 ಕೋಟಿ ನಿರೀಕ್ಷಿಸಿತ್ತು. ಸಮ್ಮೇಳನಕ್ಕೆ ಮೀಸಲಿಟ್ಟಿರುವ ₹2 ಕೋಟಿ ಜತೆಗೆ ಹೆಚ್ಚುವರಿಯಾಗಿ ಸರ್ಕಾರ ₹6 ಕೋಟಿ ನೀಡುವುದಾಗಿ ಈಗಾಗಲೇ ತಿಳಿಸಿದೆ. ಸದ್ಯಪರಿಷ್ಕೃತ ವೆಚ್ಚಕ್ಕೂ, ಸರ್ಕಾರ ನೀಡುವುದಾಗಿ ಹೇಳಿರುವ ಮೊತ್ತಕ್ಕೂ ಇರುವ ₹2.64 ಕೋಟಿ ಅಂತರಕ್ಕೆ ಜಿಲ್ಲಾಡಳಿತ ಹೆಚ್ಚುವರಿ ಬೇಡಿಕೆ ಸಲ್ಲಿಸಿದೆ.

ಈ ನಡುವೆ ಜಿಲ್ಲಾಡಳಿತ ತೆರೆದಿರುವ ಸಿಎಸ್‌ಆರ್ ಖಾತೆಗೆ, ವಿವಿಧ ಕಂಪನಿಗಳು ಹಾಗೂ ಸಂಘ ಸಂಸ್ಥೆಗಳು ಸುಮಾರು ₹30 ಲಕ್ಷದಷ್ಟು ಹಣ ಸಂದಾಯ ಮಾಡಿವೆ. ನಗರವನ್ನು ಅಂದಗೊಳಿಸಲು ವಿವಿಧ ಬ್ಯಾಂಕ್‌ಗಳು ಬಣ್ಣ ಹಾಗೂ ಮತ್ತಿತರ ವಸ್ತುಗಳನ್ನು ಕೊಡಿಸಿವೆ. ಹೆಸ್ಕಾಂ, ಸಮ್ಮೇಳನದ ಮೆರವಣಿಗೆಯಲ್ಲಿ ಪಾಲ್ಗೊಳ್ಳುವ ಮಕ್ಕಳಿಗೆ ಹಾಗೂ ಸಮ್ಮೇಳನದಲ್ಲಿ ಸ್ವಚ್ಛತಾ ಕಾರ್ಯ ನಿರ್ವಹಿಸುವವರಿಗೆ ಟಿ–ಶರ್ಟ್‌ಗಳನ್ನು ಪ್ರಾಯೋಜಿಸಿದೆ. ಹೀಗೆ, ವಿವಿಧ ಮೂಲಗಳಿಂದಲೂ ಜಿಲ್ಲಾಡಳಿತ ಹಣ ಕ್ರೋಡೀಕರಿಸಿದೆ.‌

ಈ ಕುರಿತು ಪ್ರತಿಕ್ರಿಯಿಸಿದ ಡಾ.ಬಿ.ಸಿ.ಸತೀಶ, ‘ಸಮ್ಮೇಳನದಲ್ಲಿ ಅನಗತ್ಯ ಖರ್ಚುಗಳಿಗೆ ಕಡಿವಾಣ ಹಾಕಲು ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗಿದೆ. ಗುಣಮಟ್ಟದಲ್ಲೂ ರಾಜಿ ಮಾಡಿಕೊಂಡಿಲ್ಲ. ಉಳಿದ ಹಣಕ್ಕೆ ಜಿಲ್ಲಾಧಿಕಾರಿ ಅವರು ಸರ್ಕಾರಕ್ಕೆ ಬೇಡಿಕೆ ಸಲ್ಲಿಸಿದ್ದಾರೆ’ ಎಂದು ತಿಳಿಸಿದರು.

ಸಾಹಿತ್ಯ ಸಮ್ಮೇಳನದ ಖರ್ಚು ವೆಚ್ಚ (₹ ಲಕ್ಷಗಳಲ್ಲಿ)

ಸಮಿತಿ ಹೆಸರು; ಮೂಲ ಅಂದಾಜು ವೆಚ್ಚ; ಪರಿಷ್ಕೃತ ಅಂದಾಜು ವೆಚ್ಚ

ಮೆರವಣಿಗೆ; 50; 40.35

ನೋಂದಣಿ; 45; 39.98

ಸ್ವಯಂ ಸೇವಕರು; 14; 7.87

ಪುಸ್ತಕ ಪ್ರದರ್ಶನ ಮತ್ತು ಮಾರಾಟ ಮಳಿಗೆ; 0.05; 0.05

ವಾಣಿಜ್ಯ ಮಳಿಗೆ; 0.02; 0.02

ಮಹಿಳಾ ಸಮಿತಿ; 0.15; 0.17

ಸಾಂಸ್ಕೃತಿಕ; 70; 34.25

ವಸತಿ ಮತ್ತು ಸಾರಿಗೆ ಸಮಿತಿ; 2.07 ಕೋಟಿ; 1.79 ಕೋಟಿ

ಅಲಂಕಾರ; 18.88; 78.56

ಆಹಾರ; 2.5 ಕೋಟಿ; 2.34 ಕೋಟಿ

ಪ್ರಚಾರ; 59.75; 44.50

ಸ್ವಚ್ಛತೆ; 95; 58

ವೇದಿಕೆ; 3.66 ಕೋಟಿ; 3.04 ಕೋಟಿ

ಆರೋಗ್ಯ; 1.04; 0.8

ಚಿತ್ರಕಲಾ; 10.32; 10.32

ಸ್ಮರಣ ಸಂಚಿಕೆ; 13.85; 19.56

ಜಿಲ್ಲಾ ದರ್ಶನ, ಸ್ಮರಣ ಸಂಚಿಕೆ, ನೆನಪಿನ ಕಾಣಿಕೆ; 10.74; 10.74

ಗುರುತಿನ ಚೀಟಿ; 0.78; 1.95

ಒಟ್ಟು; 12.13 ಕೋಟಿ; 10.64 ಕೋಟಿ

*ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಅವರು ಮಂಗಳವಾರ ನಗರಕ್ಕೆ ಬರಲಿದ್ದಾರೆ. ಅವರೊಂದಿಗೆ ಈ ಕುರಿತು ಮತ್ತೊಮ್ಮೆ ಮನವಿ ಮಾಡಿಕೊಳ್ಳಲಾಗುವುದು.

-ದೀಪಾ ಚೋಳನ್‌, ಜಿಲ್ಲಾಧಿಕಾರಿ

* ಸರ್ಕಾರಿ ನೌಕರರು ಒಂದು ದಿನದ ವೇತನವನ್ನು ಸಮ್ಮೇಳನಕ್ಕೆ ನೀಡುತ್ತಿದ್ದು, ಇದರಿಂದ ₹60 ಲಕ್ಷ ನಿರೀಕ್ಷಿಸಲಾಗುತ್ತಿದೆ

-ಡಾ. ಬಿ.ಸಿ.ಸತೀಶ, ಸಿಇಒ, ಜಿಲ್ಲಾ ಪಂಚಾಯ್ತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT