ಹೆಣ್ಣು ಪಾರಿವಾಳವೊಂದು ದಿನಸಿ ವ್ಯಾಪಾರಿಯ ಮನೆಯಲ್ಲಿ ಗೂಡು ಕಟ್ಟಿತ್ತು. ಅದು ಒಂಟಿಯಾಗಿತ್ತು. ಆ ಪಾರಿವಾಳವು ತನಗೆ ಬೇಕಾದ ಆಹಾರಕ್ಕಾಗಿ ದಿನಸಿ ವ್ಯಾಪಾರಿಯ ಅಂಗಡಿಗೆ ಹೋಗಿ ಹೆಕ್ಕಿ, ಗೂಡಿಗೆ ತಂದು, ತನ್ನ ದಿನದ ಅಡುಗೆ ತಯಾರಿಸಿ ತಿನ್ನುತ್ತಿತ್ತು. ಹೀಗಿರುವಾಗ ಒಂದು ದಿನ ಎಲ್ಲಿಂದಲೋ ಆ ದಿನಸಿ ಅಂಗಡಿಗೆ ಹಾರಿ ಬಂದ ಗಂಡು ಪಾರಿವಾಳದ ಸ್ನೇಹ ಬೆಳೆಸಿ ತನ್ನ ಗೂಡಿನಲ್ಲಿ ವಾಸಿಸಲು ಸ್ಥಳವನ್ನು ಕೊಟ್ಟಿತು. ಗಂಡು ಪಾರಿವಾಳವೂ ಒಂಟಿಯಾಗಿದ್ದರಿಂದ ಅದು ಸಹ ಸಂತೋಷದಿಂದ ಹೆಣ್ಣು ಪಾರಿವಾಳದೊಂದಿಗೆ ವಾಸಿಸುತ್ತಿತ್ತು.

ದಿನನಿತ್ಯ ಎರಡೂ ಪಾರಿವಾಳಗಳು ಸೇರಿ ಅಕ್ಕಿ ಮತ್ತು ಬೇಳೆಗಳನ್ನು ತಂದು ಅಡುಗೆ ಮಾಡುತ್ತಿದ್ದವು. ಆದರೆ ಗಂಡು ಪಾರಿವಾಳವು ಸೋಮಾರಿಯಾಗಿತ್ತು. ಅದು ಬರೀ ಕಾಳುಗಳನ್ನು ತಂದು ಗೂಡಿನಲ್ಲಿ ಸಂಗ್ರಹಿಸಿ ಇಡುತ್ತಿತ್ತೇ ವಿನಾ ಹೆಣ್ಣು ಪಾರಿವಾಳಕ್ಕೆ ಅಡುಗೆ ತಯಾರಿಸಲು ಸಹಾಯ ಮಾಡುತ್ತಿರಲಿಲ್ಲ. ಅದು ಹೆಣ್ಣು ಪಾರಿವಾಳವು ತಯಾರಿಸಿದ ಅಡುಗೆಯನ್ನು ಚಪ್ಪರಿಸಿ ಚಪ್ಪರಿಸಿ ತಿನ್ನುತ್ತಿತ್ತು.

ಒಂದು ದಿನ ಹೆಣ್ಣು ಪಾರಿವಾಳವು ಅಡುಗೆ ಮಾಡಿ ಮುಗಿಸಿದ ನಂತರ ಕುಡಿಯುವ ನೀರು ಖಾಲಿ ಆಗಿರುವುದನ್ನು ಗಮನಿಸಿತು. ಅದು ನೀರನ್ನು ತರಲು ಹೊರಗೆ ಹೋಯಿತು. ಹೆಣ್ಣು ಪಾರಿವಾಳವು ನೀರನ್ನು ತೆಗೆದುಕೊಂಡು ವಾಪಸ್ಸು ಗೂಡಿಗೆ ಮರಳಿದಾಗ ಅಲ್ಲಿ ತಾನು ತಯಾರಿಸಿದ ಅಡುಗೆ ಖಾಲಿಯಾಗಿದ್ದನ್ನು ನೋಡಿತು.

ಆಗ ಹೆಣ್ಣು ಪಾರಿವಾಳವು ‘ನಾನು ತಯಾರಿಸಿದ ಅಡುಗೆಯನ್ನೆಲ್ಲ ನೀನೊಬ್ಬನೇ ತಿಂದು ಬಿಟ್ಟಿಯಾ’ ಎಂದು ಗಂಡು ಪಾರಿವಾಳದ ಬಳಿ ಕೇಳಿತು. ಅದಕ್ಕೆ ಅದು ‘ನನಗೇನೂ ಗೊತ್ತಿಲ್ಲ. ನಾನು ಸಹ ಹೊರಗೆ ಹೋಗಿದ್ದೆ. ಈಗ ಗೂಡಿಗೆ ಮರಳಿ ಬಂದೆ. ನಾವಿಬ್ಬರೂ ಇಲ್ಲದ ಸಮಯದಲ್ಲಿ ಯಾರೋ ಬಂದು ನೀನು ತಯಾರಿಸಿದ ಅಡುಗೆಯನ್ನು ತಿಂದಿರಬೇಕು’ ಎಂದಿತು.

ಆದರೆ, ಹೆಣ್ಣು ಪಾರಿವಾಳವು ಗಂಡು ಪಾರಿವಾಳದ ಮಾತನ್ನು ನಂಬಲಿಲ್ಲ. ‘ನೀನೇ ಅಡುಗೆಯನ್ನು ತಿಂದು ಪೂರೈಸಿರುವೆ. ಸುಳ್ಳನ್ನು ಹೇಳುತ್ತಿರುವೆ’ ಎಂಬುದಾಗಿ ವಾದ ಮಾಡಿತು. ಹೆಣ್ಣು ಪಾರಿವಾಳದ ಮಾತಿಗೆ ಪ್ರತಿಯಾಗಿ ಗಂಡು ಪಾರಿವಾಳವು ಕೋಪಗೊಂಡ ರೀತಿಯಲ್ಲಿ ನಟನೆ ಮಾಡಿತು. ಆಗ ಅದು ‘ನಾವಿಬ್ಬರೂ ಒಂದು ಪಂದ್ಯವಿಡೋಣ. ಅದರಿಂದ ತಿಳಿಯುತ್ತದೆ ಯಾರು ಅಡುಗೆಯನ್ನು ತಿಂದವರೆಂದು’ ಎಂದಿತು.

ಹೆಣ್ಣು ಪಾರಿವಾಳವು ಒಪ್ಪಿಗೆ ಸೂಚಿಸಿತು. ಎರಡೂ ಪಾರಿವಾಳಗಳು ಸೇರಿ ಒಂದು ತೆಳುವಾದ ದಾರದಿಂದ ಉಯ್ಯಾಲೆ ತಯಾರಿಸಿ ಅಲ್ಲಿಯೇ ಇದ್ದ ಬಾವಿಗೆ ಅದನ್ನು ಇಳಿಬಿಟ್ಟವು. ಇಬ್ಬರೂ ಆ ಉಯ್ಯಾಲೆಯಲ್ಲಿ ಆಡಬೇಕು. ಯಾರು ಅಡುಗೆ ತಿಂದಿದ್ದಾರೆ ಅವರು ಬಾವಿಯಲ್ಲಿ ಬೀಳುತ್ತಾರೆ ಎಂಬ ಒಪ್ಪಂದಕ್ಕೆ ಬಂದವು.

ಉಯ್ಯಾಲೆಯನ್ನು ಬಾವಿಯಲ್ಲಿ ಬಿಟ್ಟ ನಂತರ ಹೆಣ್ಣು ಪಾರಿವಾಳವು ‘ನೀನೇ ಮೊದಲು ಉಯ್ಯಾಲೆ ಆಡು’ ಎಂದು ಗಂಡು ಪಾರಿವಾಳಕ್ಕೆ ಹೇಳಿತು.

ಗಂಡು ಪಾರಿವಾಳವು ಆಗಷ್ಟೇ ಅಡುಗೆ ತಿಂದ ಪರಿಣಾಮವಾಗಿ ಹೊಟ್ಟೆ ಭಾರವಾಗಿತ್ತು. ಇದರಿಂದ ಎಲ್ಲಿ ದಾರವು ತುಂಡರಿಸಿ ತಾನು ಬಾವಿಗೆ ಬೀಳುವೆನೋ ಎಂಬ ಭಯದಿಂದ ‘ಬೇಡ ನೀನೇ ಮೊದಲು ಆಡು’ ಎಂದು ಹೆಣ್ಣು ಪಾರಿವಾಳಕ್ಕೆ ಹೇಳಿತು. ಹೆಣ್ಣು ಪಾರಿವಾಳವು ಜೋರಾಗಿ ಉಯ್ಯಾಲೆ ಆಡುತ್ತಾ ಅದರ ಸರತಿಯನ್ನು ಪೂರ್ಣಗೊಳಿಸಿತು. ನಂತರ ಗಂಡು ಪಾರಿವಾಳವು ಉಯ್ಯಾಲೆಯಲ್ಲಿ ಕುಳಿತು ಆಡಲು ಪ್ರಾರಂಭ ಮಾಡಿತು. ಅದರೆ, ಅದರ ಭಾರಕ್ಕೆ ದಾರವು ತುಂಡಾಗಿ ಬಾವಿಯೊಳಗೆ ಬಿದ್ದಿತು.

ಹೆಣ್ಣು ಪಾರಿವಾಳವು ತನ್ನ ಜೊತೆಗಾರನ ಪ್ರಾಣವನ್ನು ಹೇಗಾದರೂ ಮಾಡಿ ಉಳಿಸಬೇಕೆಂದು ಯೋಚಿಸಿತು. ಆ ಸಮಯಕ್ಕೆ ಸರಿಯಾಗಿ ಅಲ್ಲಿಗೆ ಬೆಕ್ಕೊಂದು ಬಂತು. ಆಗ ಹೆಣ್ಣು ಪಾರಿವಾಳವು ಬೆಕ್ಕಿನ ಸಹಾಯ ಕೇಳಿತು. ಸಹಾಯ ಮಾಡಲು ಬೆಕ್ಕು ಒಪ್ಪಿಗೆ ಸೂಚಿಸಿತು. ಆದರೆ ಅದು ಒಂದು ಷರತ್ತನ್ನು ಹೆಣ್ಣು ಪಾರಿವಾಳದ ಮುಂದೆ ಇರಿಸಿತು. ‘ನಾನು ನಿನ್ನ ಜೊತೆಗಾರನನ್ನು ಕಾಪಾಡುತ್ತೇನೆ. ನಂತರ ಅವನನ್ನು ನಾನೇ ತಿನ್ನುತ್ತೇನೆ’ ಎಂದಿತು.

ಅದಕ್ಕೆ ಹೆಣ್ಣು ಪಾರಿವಾಳವು ‘ನಿನ್ನ ಒಪ್ಪಂದಕ್ಕೆ ನನ್ನ ಸಮ್ಮತಿಯಿದೆ. ಆಗಬಹುದು. ಮೊದಲು ಅವನನ್ನು ಹೊರಗೆ ತಂದು ಬಿಡು. ನಾನೊಮ್ಮೆ ಅವನನ್ನು ಮಾತನಾಡಿಸಿ, ಕಣ್ತುಂಬ ನೋಡಿದ ಬಳಿಕ ನೀನು ತಿನ್ನುವಿಯಂತೆ’ ಎಂದಿತು. ಹೆಣ್ಣು ಪಾರಿವಾಳದ ಮಾತಿಗೆ ಬೆಕ್ಕು ಒಪ್ಪಿಗೆ ಸೂಚಿಸಿ ಬಾವಿಯಿಂದ ಗಂಡು ಪಾರಿವಾಳವನ್ನು ಮೇಲಕ್ಕೆ ತಂದಿತು.

ಇನ್ನೇನು ಆ ಬೆಕ್ಕು ಗಂಡು ಪಾರಿವಾಳವನ್ನು ತಿನ್ನಬೇಕು ಎನ್ನುವಾಗ ಹೆಣ್ಣು ಪಾರಿವಾಳವು ‘ಬೆಕ್ಕೇ, ಸ್ವಲ್ಪ ತಾಳು. ಅವನ ಮೈಯಿ ತುಂಬಾ ಒದ್ದೆಯಾಗಿದೆ. ಒದ್ದೆಯಿರುವಾಗ ತಿನ್ನಲು ರುಚಿಯಾಗಿರುವುದಿಲ್ಲ. ನೀರು ಪೂರ್ತಿ ಅವನ ಮೈಯಿಂದ ಆರಲು ಬಿಡು. ನಂತರ ತಿನ್ನು’ ಎಂದಿತು. ಅದಕ್ಕೆ ಬೆಕ್ಕು ಒಪ್ಪಿಗೆ ಸೂಚಿಸಿ ತಾಳ್ಮೆಯಿಂದ ಕಾಯುತ್ತಾ ಕುಳಿತು ಕೊಂಡಿತು.

ಸ್ವಲ್ಪ ಸಮಯದ ನಂತರ ಬೆಕ್ಕು ‘ನಾನೀಗ ಗಂಡು ಪಾರಿವಾಳವನ್ನು ತಿನ್ನಲೇ’ ಎಂದು ಕೇಳಿತು. ಅದಕ್ಕೆ ಹೆಣ್ಣು ಪಾರಿವಾವು ‘ಏಕೆ ಅಷ್ಟೊಂದು ಆತುರ ಪಡುವೆ? ಸ್ವಲ್ಪ ತಾಳ್ಮೆಯಿಂದ ಇರು’ ಎಂದಿತು. ಸ್ವಲ್ಪ ಸಮಯದ ನಂತರ ಗಂಡು ಪಾರಿವಾಳದ ಮೈ ಪೂರ್ತಿ ಒಣಗಿತು. ಹೆಣ್ಣು ಪಾರಿವಾಳವು ಗಂಡು ಪಾರಿವಾಳಕ್ಕೆ ಕಣ್ಸನ್ನೆ ಮಾಡಿತು. ಬೆಕ್ಕು ಇನ್ನೇನು ಗಂಡು ಪಾರಿವಾಳವನ್ನು ತಿನ್ನಬೇಕು ಎನ್ನುವಾಗ ಅಲ್ಲಿಂದ ಎರಡೂ ಪಾರಿವಾಳಗಳು ಹಾರಿ ಹೋದವು. ಹೆಣ್ಣು ಪಾರಿವಾಳವು ಜೊತೆಗಾರನ ಪ್ರಾಣವನ್ನು ಉಳಿಸುವುದರ ಜೊತೆಗೆ ತನ್ನ ಸ್ನೇಹಿತನೇ ತಾನು ತಯಾರಿಸಿದ ಅಡುಗೆ ತಿಂದಿರುವುದು ಎನ್ನುವುದನ್ನು ಕಂಡುಕೊಂಡಿತು. ಆದರೂ ಜೊತೆಗಾರನನ್ನು ಕಷ್ಟಕಾಲದಲ್ಲಿ ಕಾಪಾಡಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.