ತೆಲುಗು ಮೂಲ: ಡಾ. ವೇಂಪಲ್ಲಿ ಗಂಗಾಧರ್ ಕನ್ನಡಕ್ಕೆ: ಶಿವಕುಮಾರ್ ಕಂಪ್ಲಿ

ಇನ್ನೊಂದು ಚಾವೊತ್ತಿನ್ಯಾಗ ದೊರೆ ಟಾಂಗಾ ಆ ದಾರಿಗುಂಟಾನೇ ಹೊಕ್ಕಾತಿ ಅನ್ನಾದರಾಗ, ಕುದುರೆಗಳ ಮೇಲೆ ಬಂದ ಐದಾರು ಜನ ಸೈನಿಕರು ದಾರಿಯ ಆಚೆಕಡೆಗೆ ಈಚೆಕಡೆಗೆ ಕುಂತು ಉದ್ರಿ ಮಾತುಗಳ ತೌಡು ಕುಟ್ಟುತಿದ್ದವರನ್ನ, ಹುರ್ …ಹುರ್.. ಎಂದು ಚದುರುಗೊಟ್ಟಿಸುತ್ತಾ… ಹತ್ತಿರ ಬಂದವರನ್ನ ಓಡಿಸುತ್ತಾ ಹಾದಿಯೆಲ್ಲಾ… ಕೆಂದೂಳು ಎಬ್ಬಿಸುತ್ತಾ ಹ್ವಾದರು. ಅವರು ಅತ್ಲಕಡಿಗೆ ಹ್ವಾದೇಟಿಗೆ ಆ ದಾರಿಗುಂಟಾ ದೊರೆ ಟಾಂಗಾ ರೆವ್ವನೆ ಹೊಂಟೋಯಿತು!

ಕೋಟು, ಬೂಟು, ಕರಿ ಟೋಪಿ, ರೂಲು ದೊಣ್ಣೆ, ಹೊಗೆ ಬಿಡುವ ಕೊಳಬಿ ಇಟಗೊಂಡಿರುವ ಆಳೆತ್ತರದ ದೊರೆಯ ಹೊರ ರೂಪ ಇದು.

“ನೋಡಿದೇನಾ… ಶಿವನಾಯಕಾ… ನಮ್ ಮನಿಯಾಗ , ನಮ್ ಊರಾಗ, ನಾವು ನಿಂದ್ರಾಕೂ.. ಕುಂದ್ರಾಕೂ ಆಗದಂಗ ಅಗೇತಿ. ಅವ್ನು ಎಲ್ಲಿಂದನೋ.. ಯಾ ದೇಶದಿಂದನೋ ಬಂದು ನಮ್ಮ ಊರಾಗ ನಮ್ಮನ್ನಾ ಆಳಕತ್ಯಾನ! ಆತನ ಮೀಸಿ ಮುಂದೆ ತೊಡಿತಟ್ಟಾ ಗಣಮಗ ಯಾರದರೇಳು!?” ಅಂತಾ ಮಾತಿನ ಈಟಿಯನ್ನ ಎಸೆದ ಮುನಿಯಪ್ಪ.

“ಯಪ್ಪಾ… ಸುಮ್ಕಿರೋ ಯಜಮಾನ.. ಆ ದೊರಿ ಸುದ್ಧಿ ನಮಗ್ಯಾಕ? ಆಳೋ ದೊರಿ ಹಿಡಕಂಡು ಅವನು.. ಇವನು ಅಂದ್ರ ಆ.. ಸೈನಿಕರು ಕರ್ದು ಕುಂಡಿಗೆ ಬೆಂಕಿ ಕೊಳ್ಳಿ ಇಕ್ಕತಾರ… ರೆಕ್ಕಿ ಮುರುದು ಬೂಟನ್ಯಾಗ ತಿಕ್ಕಿಬಿಡತಾರ! ಕುತಿಗಿ ಹಿಡದು ಏಳು ಕಂದೀಲುಗಳ ಕಂಬಕ್ಕ ನೇಣಿಗೇರಿಸಿ ತೂಗಿ ಬಿಡತಾರ ನೋಡ್ ಹುಷಾರ್!” ಎನ್ನುತ್ತಾ ಕಟ್ಟಿ ಮ್ಯಾಲ ಕುಂತಗಂಡ ಅಂದಾನಪ್ಪ.

''ಮನ್ನೆ ದೊರಿ ಎದುರು ನಿಂತಗಂಡು, 'ನೀವು ನಿಮ್ಮ ದೇಶಕ್ಕಾ ಹೊಂಡ್ರೀ… ನಮ್ಮ ಬಾಳೇವು ನಾವ್ ಮಾಡ್ಕ್ಯಾಂತೀವಿ… ಇಲ್ಲಿ ಇರಾಕ ನೀವಾ ನಮಿಗೆ ಜಕಾತಿ ಕಟ್ರೀ…' ಅಂತಾ ಕುಡುದು ವದರಾಡಿದ್ದ ಭದ್ರಪ್ಪನ್ನ ಏನ್ ಮಾಡಿದರು? ಗುರ್ತಿಲ್ಲೇನು… ಹಾಡು ಹಗಲೇ ಏಳ ಕಂದೀಲ್ ಕಂಬಕ್ಕ ಉರುಲಾಕಿದರು! ಅವ್ನ ಕಥಿ ಕೇಳಿದ್ರಾ, ದುಃಖ ಅಕ್ಕಾತಿ” ಎಂದು ನಿಟ್ಟುಸಿರು ಬಿಡುತ್ತಾ ಬೋಳು ಗಲ್ಲಿನ ಮ್ಯಾಗ ತಡವರಿಸಿ ಕುಂತ ಅನಂತಯ್ಯ ಶಾಸ್ತ್ರಿ.

“ಓ… ಎಲ್ಲಾರು ಒತ್ತಟಿಗೇ ಕಲತೀರಿ!, ಆ… ಕಬರಿಲ್ಲೇನು ನಿಮಗ.. ಆ ಸೈನಿಕರು ನೋಡಿದರ.. ಏನೋ ಸಂಚು ನಡೆಸ್ಯಾರ ಅಂದಕಂತಾರ!, ಅತ್ಲಾಗ ಮಳಿ ಇಲ್ಲ… ಇತ್ಲಾಗ ಬೆಳಿ ಇಲ್ಲ. ಯಾದನ್ನ ದೊರಿ ನೀಡೋ ಕೆಲಸ ಹಿಡಕಂಡು ಬಾಳೆ ಮಾಡೋದು ನೋಡ್ಕಳ್ರಪ್ಪಾ ಅಂದ್ರೆ… ಸತ್ತು ಹದ್ದು, ಕಾಗಿಗೆ ಪಾಲಕ್ಕೆವಿ ಅಂತೀರಲ್ಲೋ… ನಿಮ್ಮಾಪ್ನಿ! ಇಲ್ಲಿ ಗ್ವಾಡಿ ಗ್ವಾಡಿಗೂ ಕಿವಿ ಇರ್ತಾವು. ಸುಮ್ಮನಾ… ಹೆಂಡ್ರ ಮಕ್ಕಳ ಬಾಯಿಗೆ ಯಾಕ್ ಮಣ್ಣ ಹಾಕತೀರಿ? ಹೋಗ್ ಹೋಗ್ರೀ.. ನಾಕ್ ಚಂದದ ಬಾಳೇವು ನೋಡ್ಕಾರ್ರೀ…” ಅಂತಾ ಹೊಟ್ಯಾಗಿನ ಕಳ್ಳನ್ನ ಹೊರಾಕ್ ಚಲ್ಲಿದಳು ಉಪ್ಪಾರ ಗೀತಕ್ಕ.

ಆ ದೊರಿ ಮುಂದೆ ತೊಡಿ ತಟ್ಟಬೇಕಂದ್ರ ನಮ್ ಹಳ್ಳಿ ಪೈಲ್ವಾನ ಶಿವನಾಯಕನೇ ಆಗಬೇಕು. ಅದೇನು ನಮ್ ಕೈಲಾಗೋ ಕೆಲಸೇನು? ಆ ಕುದುರಿಗಳು ನಮ್ ಮಾತ್ ಕೇಳ್ತಾವೇನ್, ಹಿಡಕನಾಕ ಹ್ವಾದರ.. ನೆಲಕ ಒಗದು ಕೆನದು ಬಿಡ್ತಾವು! ನಮ್ಮಂತೋರ್ ಗೇನ್ ದೊರಿ ಕೆಲಸ ಕೊಡ್ತಾನ? ಅವನಂತಾ ಗಣಮಕ್ಕಳು ಬೇಕು ಅತಗ” ಎಂದು ಹೊಸ ಉಸಿರ ಬಿಟ್ಟ ಗುರುದೇವಪ್ಪ.

ದಿಕ್ಕಿರದ ನೆಲದೊಳಗೆ ಎಲ್ಲಾ ಕುಂತು ತೋಚಿದ್ದನ್ನ ಮಾತಾಡಿಕೊಂತ ಕುಂತರು. ಆದ್ರೆ ಶಿವನಾಯಕ ಮಾತ್ರ … ನಿಶ್ಯಬ್ದವಾಗಿ.. ದೊರೆ ಟಾಂಗಾ ಹ್ವಾದ ಕಡಿಗೇ ಕೆಂಪು ಕಣ್ ಬಿಟಗಂಡು ನೋಡುತ್ತಾ ಕುಂತ.

ಅದು ದೊರೆ ಕೋಟೆ! ಅಡ್ಡ ಗೋಡೆಗಳನ್ನ ಒಡೆದು ಹಾಕಿ ಒಬ್ಬ ಸಾಮಾನ್ಯ ಮನುಷ್ಯ ಹೊರಾಗ ಬರಾಕಂದ್ರ ಸಾಮಾನ್ಯ ಮಾತಲ್ಲ. ಯಾವ ಮೂಲ್ಯಾಗ ಸಿಟ್ಟು ಸಿಡಿದು ಬೆಂಕಿ ಅಕ್ಕತೋ… ಪ್ರಚಂಡ ಪ್ರಳಯಾಂತಕ ಚಂಡ ಮಾರುತವನ್ನ ಯಾರಿಗೂ ತಿಳಿಯದಂಗೆ ಎದೆಯ ಒಳಗೇ ಬಚ್ಚಿಟ್ಟುಕೊಂಡು ನಿಲ್ಲೋದೆಂದರೆ ಎಲ್ಲರಿಗೂ ಸಾಧ್ಯವಾಗೋ ಸಾಹಸವೇ ಅಲ್ಲ.

ಈಗ ಅಂತಹ ಸಾಹಸವೇ ಶಿವನಾಯಕನ ರೂಪದೊಳಗೆ ಕಾಣುತ್ತಿದೆ. ದೊರೆ ಟಾಂಗ ಬಳ್ಳಾರಿ ಕಡಿಗೆ ಹೋಗಿದೆ. ಇನ್ನು ಸ್ವಲ್ಪತ್ತಿನೊಳಗೇ ಮತ್ತೆ ಸಂಡೂರು ಕಣಿವೆಯ ಮೂಲಕ ಬರುತ್ತದೆ. ಅದಾ ದಾರಿ ನಡುವೆ ದಂಡಿ ಮಾರಮ್ಮನ ದಿನ್ನಿ ಹತ್ರ ಕಾದು ಕುಂತು ದೊರೆಗೇ ಬಲಿ ಹೆಣದರೆ..!?

ಮಾಡಾ ಸಂಚು ಮೂರನೇ ಕಣ್ಣಿಗೆ ಕಾಣಬಾರದು…. ಗೊತ್ತಾದರೆ ಮುಗೀತು… ದಂಡಿ ಮಾರಮ್ಮನ ಹೊಸಲಿಗೆ… ನರಬಲಿ ನೆಡಿತೈತಿ!

ಆದಾಗದಿದ್ದರ ಭದ್ರಪ್ಪನನ್ನ ಹಾಡ ಹಗಲೇ ಏಳು ಕಂದೀಲು ಕಂಬಕ್ಕ ಉರುಲಾಕಿದಾಂಗ ಉರುಲಾಕುತಾರ….

ಅದೂ ಬ್ಯಾಡಂದ್ರ ದೊರೆಯ ತುಪಾಕಿ, ಗುಂಡಿಗೇನ ಎಲ್ಡ್ ಹೋಳು ಮಾಡತೈತಿ..

ಮತ್ತೆ… ನಾನು… ಮಾಡಿದ್ರೆ.. ಸಾಮಾನ್ಯವಾಗಿ ಎಡವಟ್ಟು ಆಗದು. ಒಂದು ವ್ಯಾಳೆ ಸೈನಿಕರ ಕೈಗೆ ಸಿಕ್ಕರೆ? ನನ್ನನ್ನೇ ನಂಬಿಕೊಂಡ ತಾಯಿ, ತಂದಿ, ಮದಿವಿ ಮಾಡಬೇಕಾದ ತಂಗಿನ ಯಾರು ನೋಡಿಕ್ಯಂತಾರ!?

ಆಲೋಚನೆಗಳು ಸುತ್ತಿಕೊಂಡು ಸುತ್ತಾಕುತ್ತಿರುವಾಗಲೇ… ಸೈನಿಕರು ಧೂಳೆಬ್ಬಿಸಿಗೋಂತ ಕೆಮಣ್ಣ ಹಾದಿ ಮ್ಯಾಗ ಹೊಂಟೋದರು. ಮತ್ತೆ ಚಾವೊತ್ತಿನ್ಯಾಗಾ ದೊರೆ ಟಾಂಗಾ ಬರ್ತತೈತಿ. ನಾನೀಗ ದಿನ್ನಿ ಮ್ಯಾಗ ಅದಾನಿ. ದೊರೆ ಟಾಂಗಾ ಬರೋ ಹೊತ್ನಾಗ ಮ್ಯಾಲಿಂದ ಒಂದು ದೊಡ್ಡ ಕಲ್ ಗುಂಡನ್ನ ಉಲ್ಡಿಸಿಬಿಟ್ಟರೆ ಸಾಕು…

ʼದೊರೆ ಟಾಂಗಾ ಅಪ್ಪಚ್ಚಿ! ಕಲ್ ಗುಂಡಿನ ಕೆಳಗ ದೊರೆ ರಕ್ತ ಕಾರಿಕೊಂಡು ಸಾಯಲೇ ಬೇಕು!ʼ

ದೂರದಲ್ಲಿ ದೊರೆ ಟಾಂಗಾ ಕುದುರಿ ಕಾಲ್ ಸಪ್ಪಳ ಕೇಳುತ್ತಿದೆ.

ಬರಾಕತ್ತೇತಿ…
ಹತ್ರ …
ಹತ್ರ …

ಕೆಮ್ಮಣ್ಣು ಧೂಳು ಏರುತ್ತಿದೆ… ಶಿವನಾಯಕನಿಗ್ಯಾಕೋ ಧೈರ್ಯ ಸಾಲಲಿಲ್ಲ. ದೊರೆ ಟಾಂಗ ರೆವ್ವನೆ ಹೊಂಟೇ ಹೋಯಿತು. ಶಿವನಾಯಕ ತನ್ನ ಹಣೆಯಿಂದ ಬೆವರನ್ನು ವರೆಸಿಕೊಂಡು ಹೊಂಗೆ ಮರದ ನೆರಳಿಗೆ ಕುಂತ.

ಎರಡು ದಿನಗಳ ನಂತರ ದೊರೆ ಬಂಗ್ಲೆಯಿಂದ ಕೆಲವರಿಗೆ ಕೆಲಸದ ಕರೆ ಬಂತು. ಅದರೊಳಗೆ ಶಿವನಾಯಕನೂ ಒಬ್ಬ. ಮನೆಯಲ್ಲಿ ಎಲ್ಲಾ ಖುಷಿಪಟ್ಟರು. ಯಂಗಾನ ದೊರೆಯನ್ನು ಮೆಚ್ಚಿಸಿ ಅರಮನಿ ಕೆಲಸ ಗಳಸಬೇಕಂತ ಅವ್ವ ಆಸೆಪಟ್ಟಳು.

“ಬಂಗ್ಲೆಯೊಳಗಿನ ಕೆಲಸ ಸಿಕ್ಕರೆ ಅಣ್ಣಯ್ಯ ಗುಡಾ ದೊರಿಯೇ!” ಸಂಭ್ರಮಿಸಿದಳು ತಂಗಿ.

“ನನ್ ಮಗನಿಗೆ ದೊರಿ ಬಂಗ್ಲಾ ಕಡ್ಯಾಗಿಂದ ಕೆಲಸ ಕೊಡತಾರಂತೋ ರಾಮಣ್ಣಾ" ಗೊತ್ತೇನು? ಸೋಮಶೇಖರಪ್ಪಾ…ಗೊತ್ತೇನಪ್ಪೋ..” ಅಪ್ಪನ ಹಾರಾಟ ಶುರುವಾಯಿತು.

ಶಿವನಾಯಕನಿಗೆ ದೊರೆ ಹತ್ರ ಕೆಲಸ ಮಾಡೋಕೆ ಸ್ವಲ್ಪನೂ ಇಷ್ಟವಿಲ್ಲ. ಆದ್ರೆ ಮನೆಯೋರೆಲ್ಲಾ ಆತನು ಬಂಗ್ಲಾದೊಳಗಾ ಕೆಲಸ ಮಾಡಬೇಕು ಅಂತ ಕುಣಿದಾಡುತ್ತಿದ್ದಾರೆ.

ಹೇಳಿ ಕಳಿಸಿದ್ದಕ್ಕೆ ಊರೆಲ್ಲಾ ತಿರುಗಾಡುತ್ತಿರುವ ಅಪ್ಪನ ಉತ್ಸಾಹವೇ ಶಿವನಾಯಕನನ್ನು ಬಂಗ್ಲೆಯ ಕಡೆಗೆ ನಡೆಸಿದವು.

“ಕುದುರೆ ಸವಾರಿ ಗೊತ್ತಿರಬೇಕು, ಕುದುರೆಯನ್ನ ನೋಡಿಕೊಳ್ಳುವುದೂ ಗೊತ್ತಿರಬೇಕು. ಸಮಯಕ್ಕೆ ಸರಿಯಾಗಿ ಮೇವು ಹಾಕಬೇಕು. ರಜೆ ಗಿಜೆ ನಡೆಯೋದೇ ಇಲ್ಲ. ಬಂಗ್ಲೆ ಒಳಗೆ ಕಾಲಿಟ್ಟೊಡನೆ ಸೆಲ್ಲೆಯನ್ನ ಸೊಂಟಕ್ಕೆ ಕಟ್ಟಿಕೊಳ್ಳಬೇಕು. ಕಮ್ಮಿ ಮಾತಾಡಬೇಕು. ರೀತಿ ರಿವಾಜಿನ ಹಾಗೆಯೇ ಇರಬೇಕು. ಹೇಳಿದ ಕೆಲಸ ಹೇಳಿದಂತೆಯೇ ಆಗಬೇಕು. ಅಪಡಾ ತುಪಡಾ ಆಯಿತೋ… ಏಳು ಕಂದೀಲ ವೃತ್ತದ ಹತ್ರ ನಿಮ್ಮ ಕರ್ಮವೇ ಹರಿಯುತ್ತದೆ” ನಿಷ್ಟೂರವಾಗಿ ಕೆಲಸದ ವಿವರರಣೆಯನ್ನು ತಿಳಿಸಿದ ಬಂಗಲೆ ಮೇಸ್ತ್ರಿ.

ಇಬ್ಬರು ಮೂರು ಜನ “ನಮ್ ಕೈಲೆ ಆಗಲ್ಲ ಬುಡ್ರಿ” ಅಂತ ಕೀರಲ ದನಿಲೀ ಉಸಿರಿ, ಬೆಂಕಿ ಮೇಲೆ ನಿಂತೋರಂಗ ಓಟಕಿತ್ತರು!

ಇನ್ನಿಬ್ಬರು “ನಮಗೆ ಕುದುರಿ ಬಗ್ಗೆ ತಟಗೂ ಗೊತ್ತಿಲ್ರೀ…” ಅಂತ ರಾಗ ಎಳೆದು ಅಲ್ಲಿಂದ ಜಾರಿಕೊಂಡರು.

“ನಿನ್ನ ವಿಚಾರ ಏನಪ್ಪಾ” ಶಿವನಾಯಕನನ್ನ ನೋಡುತ್ತಾ ಬಂಗಲೆಯ ಮೇಸ್ತ್ರಿ ಕಣ್ಣಗಲಿಸಿದನು.

“ನಾನಿವಾಗ ಕೊತ್ಲಯ್ಯನ ಗುಡಿಯೊಳಗ ಪಲ್ಲಕ್ಕಿ ಕೆಲಸಕ್ಕ ಹೋಗಕತ್ತೇನ್ರಿ. ಎಲ್ಡ್ ಮೂರು ವಾರದಾಗ ಆ ಕೆಲಸ ಅಕ್ಕಾತಿ. ಆ ಮ್ಯಾಕ್ ಬಂದು ಕೆಲಸಕ್ಕ ಸೇರಿಕ್ಯಂತನ್ರೀ.” ಅಂತ ಮೇಸ್ತ್ರಿಯ ಕಣ್ಣನ್ನೇ ನೇರವಾಗಿ ನೋಡುತ್ತಾ ಉತ್ತರಿಸಿದ ಶಿವನಾಯಕ.

“ಈ ಊರೊಳಗಾ ದೊರೆಗಿಂತ ದೇವರು ದೊಡ್ಡೋನಲ್ಲ… ನಾಳೆಯಿಂದ ಕೆಲಸಕ್ಕ ಬಾ… ಸರಿಹೋಗುತ್ತೆ. ನಿನ್ ಒಳ್ಳೇದಕ್ಕೇ ಹೇಳ್ತೀನಿ.” ಅಂತ ಭುಜ ತಟ್ಟಿದ ಮೇಸ್ತ್ರಿ.

ಮನೆಯೊಳಗಿನ ಪರಿಸ್ಥಿತಿ ಮತ್ತೊಂದು ಬಾರಿ ನೆನಪಾದವು. ಏನು ಉತ್ತರ ನೀಡಬೇಕೋ ಅರ್ಥವಾಗದೇ, “ಸರಿ” ಎಂದು ತಲೆ ಆಡಿಸಿ ಮನೆ ದಾರಿ ಹಿಡಿದ ಶಿವನಾಯಕ.

ಸುತ್ತಾ.. ನೂರಾ ಹದಿನಾರು ಹಳ್ಳಿಗಳೊಳಗೂ, ಹನ್ನೆರಡು ತಾಲೂಕುಗಳೊಳಗೂ ಪಾಳೇಗಾರರದೇ ಅಟ್ಟಹಾಸ ಹೆಚ್ಚಾಗಿದೆ. ಮತ್ತೊಂದು ಕಡೆಗೆ ದರೋಡೆಕೋರರ ದಬ್ಬಾಳಿಕೆ! ಜನರನ್ನು ಭಯ, ಬೆದರಿಕೆಗಳಿಗೆ ಗುರಿಮಾಡಿದೆ. ಜನರು ರಾತ್ರಿಯೆಲ್ಲಾ ತಮ್ ತಮ್ಮ ಹಳ್ಳಿಗಳನ್ನ ಸರದಿ ಪ್ರಕಾರ ಕಾವಲು ಕಾಯುತಿದ್ದಾರೆ.

ಮನೆಯಲ್ಲಿ ಬಚ್ಚಿಟ್ಟ ಆಭರಣಗಳನ್ನು ದೋಚುವುದರ ಜೊತೆಗೆ ಗಾಡಿಯೊಳಗೆ ಧಾನ್ಯಗಳನ್ನು ತರುತಿದ್ದವರ ಮೇಲೆ ಮತ್ತೊಂದು ಕಡೆ ದಾಳಿಮಾಡಿದ ಪಾಳೆಗಾರರು ಎಲ್ಲಾ ದೋಚಿಕೊಳ್ಳುತ್ತಾ ಅರಾಜಕತೆ ಸೃಷ್ಟಿಸುತ್ತಿದ್ದಾರೆ.

ಪಾಳೆಗಾರ ತಿಮ್ಮಪ್ಪ ನಾಯಕ, ದೊರೆಯ ಗುಂಡಿಗೆಯಲ್ಲಿ ನಡುಕ ಹುಟ್ಟಿಸಲು ನೋಡುತಿದ್ದಾನೆ. ದೇವಗಿರಿಯಲ್ಲಿ ಕುಂತು ನಲವತ್ತು ಹಳ್ಳಿಗಳ ಸರಹದ್ದುಗಳನ್ನು ಆಳುತಿದ್ದಾನೆ. ರಾತ್ರಿಯೆಲ್ಲಾ ಊರುಗಳ ದೋಚಿ ಹರೆಯದ ಹುಡುಗಿಯರ ಕೂಡ ಕೋಟೆಯೊಳಗೆ ಮೋಜು ಮಾಡುತಿದ್ದಾನೆ.

ದೊರೆ ಕೂಡ ತಿಮ್ಮಪ್ಪ ನಾಯಕನನ್ನು ಬಗ್ಗಿಸಿ ದೇವಗಿರಿಯನ್ನು ತನ್ನ ತೆಕ್ಕೆಯೊಳಕ್ಕೇ ತಂದುಕೊಳ್ಳಬೇಕೆಂದು ಸಂಚು ಮಾಡುತಿದ್ದಾನೆ.

ದೊರೆಯು “ಪಾಳೆಗಾರರನ್ನು ಬಗ್ಗಿಸಲಾರದೇ ತನ್ನ ಸಾಮ್ರಾಜ್ಯ ವಿಸ್ತಾರವಾಗದೆಂದು, ಅದಕ್ಕೆ ಬೇಕಾದ ಬಲವನ್ನು, ಮದ್ದು, ಗುಂಡು ಸೇನಾ ಸಾಮಾಗ್ರಿಗಳನ್ನು ತನ್ನ ಮಂಡಲಕ್ಕೆ ಕಳಿಸಬೇಕೆಂದು” ಕಂಪನಿಯವರಿಗೆ ಸುದ್ಧಿ ಕಳಿಸಿದ.

ಪತ್ರ ಹೋಯಿತಾದರೂ.. ಕಂಪನಿ ಬೇಗನೇ ಸ್ಪಂದಿಸಲಿಲ್ಲ.

ಪರಿಣಾಮವಾಗಿ ದೊರೆಯು ಪ್ರಸ್ತುತ ತನ್ನಲ್ಲಿರುವ ಬಲವನ್ನೇ ದೇವಗಿರಿಗೆ ಕಳಿಸಬೇಕೆಂದು ನಿರ್ಣಯ ತೆಗೆದುಕೊಂಡ.

ಅಂದುಕೊಂಡಷ್ಟೇ ವೇಗವಾಗಿ ಸೈನ್ಯ ಹೊರಟು ಹೋಯಿತು. ಬರಲಿರುವ ದಾಳಿಯನ್ನು ಮೊದಲೇ ಊಹಿಸಿದ್ದ ತಿಮ್ಮಪ್ಪ ನಾಯಕ ತನ್ನ ಜನರ ಕೂಡಿ ಕೋಟೆಯ ಮೇಲಿನಿಂದ ಈಟಿಗಳೊಂದಿಗೆ, ಬಾಣಗಳೊಂದಿಗೆ, ದಾಳಿಮಾಡಿದ.

ಎರಡೂ ಗುಂಪುಗಳ ನಡುವೆ ಹೋರಾಟವು ವಾರಗಳ ತನಕ ಸಾಗಿತು. ಅಷ್ಟರೊಳಗೆ ಮದ್ರಾಸಿನಿಂದ ಕಂಪನಿಯ ಬಲಗಳೂ ಬಂದಿಳಿದವು. ದೇವಗಿರಿಯನ್ನು ಸುತ್ತಿಕೊಂಡು ತಮ್ಮ ಶಕ್ತಿಯೇನೋ ತೋರಿದವು. ತಿಮ್ಮಪ್ಪ ನಾಯಕ ಶರಣಾಗತಿ ಆಗಲೇ ಬೇಕಾದ ಪರಿಸ್ಥಿತಿ ಏರ್ಪಟ್ಟಿತು..

“ತನ್ನನ್ನು ಪ್ರಾಣಸಹಿತ ಬಿಟ್ಟು ಬಿಟ್ಟರೆ ನಂದಿಹಳ್ಳಿ ಅಡವ್ಯಾಗ ಹೋಗಿ ಕಾಲ ಕಳೆದು ಬಿಡುವೆ” ಎಂದು ರಾಯಬಾರಿಯನ್ನ ಕಳಿಸಿದ.

“ಮೊದಲು ಬಂಧಿಯಾಗಿ ಶರಣಾಗು… ಕ್ಷಮೆಯ ವಿಷಯ ಆನಂತರ ಆಲೋಚಿಸೋಣ” ಎಂದು ದೊರೆ ಮರುಸಂದೇಶ ಕಳಿಸಿದ.

ಏಟು ತಿಂದ ಹುಲಿಯಂತೆ ತಿಮ್ಮಪ್ಪ ನಾಯಕ ದೊರೆಗೆ ಶರಣಾದ. ಸರಪಳಿ ಕಟ್ಟಿ ದೇವಗಿರಿಯಿಂದ ಬಂಗ್ಲಾಕ್ಕೆ ಕರೆತಂದು ದೊರೆ ಮುಂದೆ ನಿಲ್ಲಿಸಿದರು.

ದೊರೆ ತಿಮ್ಮಪ್ಪ ನಾಯಕನನ್ನ ನೋಡಿದ… ಅದರೆ ಮತ್ತೇನನ್ನೂ ಮಾತಾಡಲಿಲ್ಲ.

“ಇಲ್ಲಲ್ಲ.. ಇವನನ್ನ ಏಳು ಕಂದೀಲ ವೃತ್ತದ ಬಳಿಗೆ ಕರೆದೊಯ್ಯಿರಿ. ನಾನೂ ಕೂಡಾ ಬರುತ್ತೇನೆ” ಅಂತ ಹೇಳಿ ದೊರೆ ಮತ್ತೆ ಬಂಗ್ಲೆಯೊಳಕ್ಕೆ ಹೊರಟು ಹೋದರು.

ಸ್ವಲ್ಪ ಹೊತ್ತಿಗೆ ಗಾಡಿ ಸಿದ್ಧಗೊಳಿಸಿರೆಂದು ಒಳಗಿನಿಂದ ಸುದ್ಧಿ ಬಂತು.

ಓಡುತ್ತಾ ಹೋದ ಶಿವನಾಯಕ.

ದೊರೆ ಓಡಾಡುವ ಗಾಡಿ ಕೆಲಸಕ್ಕೆ ಸೇರಿರುವುದು ಇದೇ ಮೊದಲ ಸಾರಿ. ಇಲ್ಲಿಯ ತನಕ ದೊರೆಸಾನಮ್ಮನ ಗಾಡಿ ಕಟ್ಟುವುದು. ಮಹಾರಾಣಿಯನ್ನು ಊರುಗಳ ತಿರುಗಿಸುವುದೇ ವಿನಃ ದೊರೆ ಕೆಲಸಕ್ಕೆ ಬಂದಿರಲಿಲ್ಲ. ಯಾವಾಗಲೂ ದೊರೆ ಗಾಡಿ ನಡೆಸೋ ಸಿದ್ಧಣ್ಣನಿಗೆ ಅನಾರೋಗ್ಯವಾದ್ದರಿಂದ ಶಿವನಾಯಕನನ್ನು ಕರೆಸಿದ್ಧರು.

ದೊರೆಗಳ ಟಾಂಗ ಕದಲಿತು.

ಮುಂದೆ ಸೈನಿಕರು ಕೆಂಪು ಧೂಳು ಎಬ್ಬಿಸುತ್ತಾ ಹೋಗುತಿದ್ದಾರೆ. ಶಿವನಾಯಕನ ಕೈಯ್ಯಲ್ಲಿ ಕುದುರೆಯ ಹಗ್ಗ. ಗಾಡಿ ರೆವ್ವನೆ ಮುಂದಕ್ಕೆ ಸಾಗಿ ಹೋಗುತ್ತಿದೆ. ಸ್ವಲ್ಪ ಹೊತ್ತಿನ ನಂತರ ಏಳು ಕಂದೀಲುಗಳ ವೃತ್ತದ ಬಳಿಗೆ ಸೇರಿಕೊಳ್ಳುತ್ತದೆ.

ಒಂದು ಕಡೆಗೆ ಕಬ್ಬಿಣದ ಸರಪಳಿಗಳಿಂದ ಬಂಧಿಸಲ್ಪಟ್ಟ ತಿಮ್ಮಪ್ಪ ನಾಯಕ. ಮತ್ತೊಂದು ಕಡೆಗೆ ಸಿದ್ಧಯ್ಯನ ಗುಡ್ಡದಿಂದ ಬಂದು ಘೀಳಿಡುತ್ತಿರುವ ಆನೆ.

ದೊರೆ ಟಾಂಗ ಇಳಿದ.

ತಿಮ್ಮಪ್ಪ ನಾಯಕನನ್ನು ಉದ್ದಕ್ಕೆ ಮಲಗಿಸಿದರು. ಆಮೇಲೆ ಆ ಕಡೆಯಿಂದ ಈ ಕಡೆಗೆ… ಈ ಕಡೆಯಿಂದ ಆ ಕಡೆಗೆ ಎರಡು ಸಲ ಆನೆ ಓಡಾಡಿಸಿದರು. ಅಷ್ಟೇ… ತಿಮ್ಮಪ್ಪ ನಾಯಕನ ಹೊಟ್ಟೆಯೊಳಗಿನ ಕರುಳು ಹೊರಕ್ಕೆ ಬಂದವು! ರಕ್ತ ಕಾರಿಕೊಂಡು ಆರ್ತನಾದ ಮಾಡುತ್ತಾ ಸತ್ತ.

“ಈಗ ಇವನ ಶವವನ್ನು ನಂದಿಹಳ್ಳಿ ಅಡವಿಯೊಳಗೇ ಎಸೆದು ಬನ್ನಿ. ಈತನ ಕೊನೆ ಆಸೆ ನಾವು ನೆರವೇರಿಸಿದಂತೆಯೂ ಆಗುತ್ತದೆ” ಅಂತ ಹೇಳಿ ದೊರೆ ಗಾಡಿ ಏರಿದ.

ಕೆಂಪು ಧೂಳನ್ನ ಎಬ್ಬಿಸುತ್ತಾ ಗಾಡಿ ಮುಂದಕ್ಕೆ ಕದಲಿತು.

ಶಿವನಾಯಕ ಆಲೋಚನೆಯೊಳಕ್ಕೆ ಬಿದ್ದ. ದೊರೆಯನ್ನ ಎದುರಿಸೋದೆಂದರೆ ಬರೀ ಬಾಯಿ ಮಾತಲ್ಲ. ಮೊದಲೇ ಗುಲಾಮ ಬದುಕು. ಹೊರಗೆ ತಿಳಿಯದಂತೆ ಬದುಕಬೇಕು. ಯುದ್ಧ ಭೂಮಿಗಳಲ್ಲಿ, ಹೋರಾಡೋ ಧೈರ್ಯ ಆಯುಧಗಳಂತೆ. ಪರಮಾಣುಗಳೊಗಿನ ಬ್ರಹ್ಮಾಂಡ ವಿಸ್ಫೋಟಕ ಶಕ್ತಿಯ ಹಾಗೆ, ಯುದ್ಧ ನೌಕೆಯ ಹಾಗೆ ನಿರ್ಮಾಣಗೊಳ್ಳಬೇಕು. ಏಳೇಳು ಸಮುದ್ರಗಳ ಕಾಯುವ ಬಲವಾದ ಆಲದ ಮರದ ಪೊಟರೆಯೊಳಗಿನ ಹಸಿರು ಗಿಣಿಯೊಳಗೆ ಪ್ರಾಣವನ್ನು ಅಡಗಿಸಿ ನಿಗೂಢವಾಗಿ ಇರಿಸಬಲ್ಲಂತಹ ಪಂಜರ ಬೇಕಾಗಿದೆ. ಆದರೂ ಕೊನೆಯ ತನಕ ಒಂದು ನೆನಪಿಟ್ಟುಕೊಳ್ಳಬೇಕು. ಮಾಂಸ ಮುದ್ದೆಯ ಕಾಯದೊಳಗೆ, ಮುಷ್ಟಿ ಹೃದಯದ ಜೊತೆಗೆ, ಒಂದು ಮಹಾಸಮುದ್ರವನ್ನು ಹೊರುವ ಶಕ್ತಿಯೊಂದಿಗೆ ಜೀವಿಸಬೇಕು.

ಅತ್ತ ಇತ್ತ ಆದರೇ…
ಏನಾದರೂ ನಡೆದರೇ..
ಪಂಜರ ಒಡೆದರೆ, ಒಂದು ಸಮುದ್ರವೇ ಸ್ಫೋಟಗೊಳ್ಳುತ್ತದೆ.
ನೆನಪಿಟ್ಟುಕೊಳ್ಳಬೇಕು..!

ಹೀಗೆ ಶಿವನಾಯಕ ಬಗೆ ಬಗೆಯಾಗಿ ಆಲೋಚಿಸುತಿದ್ದಾನೆ. ಬಿಡದ ಅಂತರ್ ಮಥನ!

ದೊರೆಯನ್ನು ಬಂಗಲೆಯೊಳಗೆ ಬಿಟ್ಟು ಬಾವಿಕಟ್ಟೆಯ ಮೇಲೆ ಕುಳಿತು ಇನ್ನೂ ದೀರ್ಘವಾಗಿ ಅಲೋಚಿಸುತ್ತಲೇ ಇದ್ದ. ನೀರಿಗೆ ಬಂದ ಗೀತಕ್ಕ ಬಾವಿ ಹಗ್ಗಕ್ಕೆ ಬಿಂದಿಗೆ ಹಚ್ಚಿ ಡುಬುಕ್ ಎಂದು ಬಾವಿಯೊಳಗೆ ಬಿಟ್ಟಳು. ಶಿವನಾಯಕನನ್ನು ನೋಡುತ್ತಾ ಹಾಡತೊಡಗಿದಳು.

“ನಿಂಬಿಯಾ ಬನಾದ ಮ್ಯಾಗಳ
ಚಂದ್ರಾಮ ಚೆಂಡಾಡಿದ
ಎದ್ದೋನೇ ನಿಮಗ್ಯಾನ
ಏಳುತಲಿ ನಿಮಗ್ಯಾನ
ಸಿದ್ಧಾರ ಗ್ಯಾನ ಶಿವುಗ್ಯಾನ…”

ಹಾಡ ಹಾಡುತ್ತಾ ಗೀತಕ್ಕ ನೀರು ಸೇದ ತೊಡಗಿದಳು! ಆಯಮ್ಮನ ಕೀರಲು ದನಿಗೆ ಶಿವನಾಯಕನಿಗೆ ನಗು ತಡೆಯಲಾಗಲಿಲ್ಲ.

“ಏನಾ ತಮ್ಮಾ! ಆಟ್ ಆಲೋಚಿನಿ ಮಾಡಾ ಕತ್ತೀದಿ? ತಂಗಿ ಮದುವಿ ಮಾಡಕಂತೀಯೇನು? ಒಳ್ಳೇನ್ ನೋಡಿ ಮಾಡು ” ಅಂತ ಹುಡುಗಾಟಿಕೆ ಮಾಡುತ್ತಾ, ಬಿಂದಿಗೆಯೊಳಗಿನ ನೀರ ಮುಖಕ್ಕೆ ಎರಚಿ ಹೋದಳು.

ದೊರೆಯ ಕೆಲಸದೊಳಗಿನ ಜನರೆಲ್ಲಾ ನರಕಯಾತನೆ ಅನುಭವಿಸುತಿದ್ದಾರೆ. ಭಯಂಕರವಾದ ದೌರ್ಜನ್ಯಗಳು ಎಷ್ಟೋ ನಡೆಯುತ್ತಿವೆ. ಲೂಟಿಕೋರರ ಹಾಗೆ ಹೊರಲಾರದ ತೆರಿಗೆಭಾರ ಹೊರಿಸುತಿದ್ದಾರೆ, ಸುಂಕವು ಹೊಳೆಯಂತೆ, ನದಿಯಂತೆ ಏರುತ್ತಿದೆ. ಬಡ್ಡಿಗೆ ಬಡ್ಡಿ ಚಕ್ರಬಡ್ಡಿಗಳ ಸೇರಿಸುತ್ತಾ ಪೀಡಿಸುತ್ತಿರುವ ವ್ಯಾಪಾರಿಗಳು. ಕಂಪನಿ ಆಡಳಿತವು ಊರನ್ನೇ ಅಲ್ಲೋಲ ಕಲ್ಲೋಲ ಗೊಳಿಸಿ ಅಸ್ತವ್ಯಸ್ತ ಮಾಡಿಬಿಟ್ಟಿದೆ.

ಕೋಟೆಯ ಉತ್ತರದಲ್ಲಿರುವ ರಾಮದುರ್ಗ ಅಡವಿಯ ಸುತ್ತಾ ನಿತ್ಯವೂ ಹಳ್ಳಿಗಳ ಮೇಲೆ ದರೋಡೆಕೋರರ ದಾಳಿ, ಲೂಟಿ ನಡೆಯುತ್ತಿವೆಯೆಂಬ ಸುದ್ಧಿ ಬಂದಿದೆ. ನಡುರಾತ್ರಿಯಲ್ಲಿ ಮುಸುಕುದಾರಿಗಳನ್ನ ಹಳ್ಳಿಯೊಳಗೇ ಕುಳಿತು ಪ್ರತಿತಂತ್ರ ರೂಪಿಸಿಯೇ ಹಿಡಿಯಬೇಕೆಂದು ದೊರೆ ಭಾವಿಸಿದ. ತನ್ನ ದಳಗಳನ್ನು ರಾಮದುರ್ಗ ಅಡವಿಗೆ ಕಳಿಸಿದ. ಅಡವಿ ಜಾಲಾಡಿ ಹುಡುಕಿಸಿದ. ಈ ವಾಸನೆ ಹಿಡಿದ ದರೋಡೆಕೋರರು ಗುಡೇಕೋಟೆ ಕಡೆಗೆ ಹೊರಟು ಜರ್ಮಲಿ ಗುಹೆಯೊಳಗೆ ಅವಿತುಕೊಂಡರು.

ಸೈನ್ಯಕ್ಕೆ ಅನುಮಾನ ಬಂದಿತು. ಗುಡೆಕೋಟೆ ಅಡವಿ ಎಷ್ಟು ಜಾಲಾಡಿದರೂ ಸಿಗಲಿಲ್ಲ. ಹೇಗೆ ಅಂತ ಆಲೋಚಿಸಿ ಕೊನೆಗೆ ಬೇಟೆ ನಾಯಿಗಳನ್ನು ಬಿಟ್ಟರು. ಬೇಟೆ ನಾಯಿಗಳು ದೊರೆ ಸೈನ್ಯವನ್ನು ಎರಡು ರಾತ್ರಿ, ಎರಡು ಹಗಲು ತಿರುಗಿಸಿದವು. ಐದನೇ ದಿನ ಜರ್ಮಲಿ ಗುಡ್ಡದ ಕಡೆಗೆ ಹೋದವು. ವಾಸನೆ ಹಿಡಿದವು.

ಸುದ್ಧಿ ತಿಳಿದ ದರೋಡೆಕೋರರು ಜರ್ಮಲಿ ಗುಹೆಯೊಳಗೇ ಅವಿತುಕೊಂಡರು.

ಗುಹೆ ಎಂದರೆ ಅಂತಹ ಸಣ್ಣದೇನೂ ಅಲ್ಲ. ಅದರೊಳಗೆ ಸ್ವಲ್ಪವೂ ಬೆಳಕುಬಾರದು. ಹಾವಸೆ ಬೆಳೆದಿದೆ. ಯಾಮಾರಿ ನಡೆದರೆ ಜಾರಿ ಬೀಳಿಸುವುದು. ಗುಹೆಯ ತುಂಬಾ ಬಾವಲಿಗಳ ವಾಸನೆ. ಗುಹೆಯ ಹೊರಗಡೆ ಕಾಡುಗಲ್ಲುಗಳ ಮಣ್ಣಿನ ರಸ್ತೆ. ಬೇಟೆ ನಾಯಿಗಳು ಪಾಳೆಗಾರರ ಸಮಾಧಿ ಸುತ್ತಿ ವಜ್ರಮುಷ್ಟಿ ಹನುಮಪ್ಪನ ಕೋಟೆ ಮುಂದಕ್ಕೆ ಬಂದು ಗುಹೆಯನ್ನು ಮುತ್ತಿಕೊಂಡವು.

ಸೈನ್ಯಕ್ಕೆ “ದರೋಡೆಕೋರರು ಒಳಗೆಲ್ಲೋ ಇದ್ದಾರೆ” ಎಂಬ ಬಲವಾದ ನಂಬಿಕೆಯಾಯಿತು.

“ಗುಹೆಯ ಒಳಗೆ ಹೋಗುವ ಸಾಹಸ ಯಾರು ಮಾಡುತ್ತಾರೆ?” ಸೈನಿಕರು ಬಂಗಲೆಗೆ ಸುದ್ಧಿ ಕಳಿಸಿದರು.

ದೊರೆ ಸುದ್ಧಿಯ ಬೆನ್ನು ಹಿಡಿದೇ ಹೊರಟ. ಶಿವನಾಯಕ ಟಾಂಗ ಕಟ್ಟಿ ದೊರೆ ಜೊತೆ ಹೊರಟ.

ದೊರೆ ಟಾಂಗ ಕಲ್ಲು ಹಾದಿಗುಂಟಾ ಜರ್ಮಲಿ ಹನಮಪ್ಪನ ಕೋಟೆಯ ತನಕ ಹೋಯಿತು. ಅಲ್ಲಿಂದ ಗುಹೆಯ ತನಕ ಕಾಲು ನಡಿಗೆ. ದೊರೆ ಮುಂದೆ ಮುಂದೆ ಸಾಗಿದ. ಹಿಂದೆ ಜನ, ಎಲ್ಲರಿಗೂ ಮೊದಲು ಖಾಸಾ ಸೈನಿಕರ ದಳ.

ದೊರೆ ಕತ್ತಲನ್ನೇ ಕಕ್ಕುವಂತಿದ್ದ ಗುಹೆಯನ್ನು ಇಣುಕಿನೋಡಿದ. ಗುಹೆಯ ಒಳಗಿನ ಬಾವಲಿಗಳ ಕಮಟು ವಾಸನೆ ಸಹಿಸಲಾರದೇ ಮೂಗು ಮುಚ್ಚಿಕೊಂಡ. ಸ್ವಲ್ಪೊತ್ತು ಕಾಡ ಬಂಡೆಯ ಮೇಲೆಯೇ ಕುಳಿತು ಆಲೋಚಿಸಿದ. ಏನಾಗುತ್ತೋ ಅದು ಆಗುತ್ತದೆ. ಹಗ್ಗ ಕಟ್ಟಿ ನಾಯಿಗಳ ಬಿಟ್ಟು ನೋಡೋಣ ಎಂದು ಗುಹೆಯೊಳಕ್ಕೆ ಬಿಟ್ಟರು.

ಬೇಟೆ ನಾಯಿಗಳು ಓ… ಎಂದು ಮೊಳಗುತ್ತಲೇ ಗುಹೆಯ ಒಳ ಹೊಕ್ಕವು. ಅರ್ಧಗಂಟೆಯಲ್ಲೇ ನಿಶ್ಯಬ್ದತೆ ಆವರಿಸಿತು.

ಸೈನಿಕರು ನಾಯಿಗಳಿಗೆ ಕಟ್ಟಿದ ಹಗ್ಗವನ್ನು ಹಿಂದಕ್ಕೆ ಎಳೆದರು. ಬಿಸಿ ನೆತ್ತರು ಕಾರುತ್ತಾ ನಾಯಿಗಳ ತಲೆ ಇಲ್ಲದ ದೇಹಗಳು ಹೊರಕ್ಕೆ ಬಂದವು!

ದೊರೆಗೆ ಪರಿಸ್ಥಿತಿಯ ಅರಿವಾಯಿತು. ಠಾಣೆಯಿಂದ ಫಿರಂಗಿ ತರಿಸಿದ.

ಉಡಾಯಿಸಿದ.

ಒಂದೇ ಒಂದು ಸಲಕ್ಕೇ, ಗುಹೆಯೆಲ್ಲಾ ಕಂಪಿಸಿ ದೊಡ್ಡ ಸ್ಫೋಟವಾಯಿತು. ಅಷ್ಟೇ… ಜರ್ಮಲಿ ಗುಹೆಯ ತುಂಬಾ ಕೆಂಪು ಹೊಗೆ ಹೊತ್ತಿ ದಿಗ್ಗನೆದ್ದಿತು ಬೆಂಕಿ! ಅದೇ ಕೊನೆ. ಮತ್ತೆ ದರೋಡೆ ಕೋರರ ಸುದ್ಧಿ ಕೇಳಲಿಲ್ಲ. ದೊರೆ ಮೀಸೆತಿರುವುತ್ತಾ ಹೊರಟ.

ನಂದನ ಸಂವತ್ಸರದೊಳಗೆ ಭಯಂಕರವಾದ ಬರಗಾಲ ಬಂತು. ಮಳೆ ಬೀಳಲಿಲ್ಲ. ಬೆಳೆ ಬೆಳೆಯಲಿಲ್ಲ. ಮೋಡ ಗುಂಪು ಗೂಡಲಿಲ್ಲ. ಎಷ್ಟು ದೇವರು ಮಾಡಿದರೂ, ಎಷ್ಟು ಗಂಗೆ ಪೂಜೆ ಮಾಡಿದರೂ, ಭಜನೆ, ಹೋಮ, ಶಾಂತಿ ಎನೆಲ್ಲಾ ಮಾಡಿದರೂ… ಗುರ್ಚಿ ಹೊತ್ತು ಹೊಂಟರೂ… ಕತ್ತೆ ಮೆರವಣಿಗೆ, ಕಪ್ಪೆ ಮದುವೆ ಏನೆಲ್ಲಾ ಮಾಡಿದರೂ… ಬಳ್ಳಾರಿಯ ಕನಕದುರ್ಗಮ್ಮನ ಬಳಿಗೆ ಹೋಗಿ ಸಿಡಿ ಅಡಿದರೂ… ಊರಿಗೆ ಮಳೆದೇವ ಕನಿಕರಿಸಲಿಲ್ಲ. ಮೋಡಗಳು ಕೂಡುವ ಜಾಗದಲ್ಲಿ ಹದ್ದುಗಳು ಹಾರಾಡುತ್ತಿವೆ. ಒಂದು ಸಮಾಧಿಗೆ ಒಂಬತ್ತು ಹೆಣ ಬಿದ್ದು, ಊರೇ.. ಸ್ಮಶಾನವಾಗುತ್ತಿದೆ!

ಜನರು ಸುಡುವ ಗಂಟಲನ್ನು ತಣ್ಣಗೆ ಮಾಡಿಕೊಳ್ಳೋಣವೆಂದರೂ ಕುಡಿವ ನೀರಿಗೆ ತತ್ವಾರ. ಜನಕ್ಕೆ ಕುಡಿವ ನೀರು ನೀಡುತಿದ್ದ ನಾರಯಣಪ್ಪನ ಬಾವಿಕೂಡಾ ಒಣಗಿ ಹೋಗಿದೆ. ಬೆಲೆಗಳು ಗಗನ ಮುಟ್ಟಿವೆ. ಕಷ್ಟಗಳ ಕೇಳುವವರಿಲ್ಲದೇ ಜನ ಪಡಬಾರದ ಕಷ್ಟ ಪಡುತಿದ್ದಾರೆ. ಹಿರೀಕರು ಹಸಿವು, ದುಃಖಗಳನ್ನು ನೋಡಲಾಗದೇ ದೊರೆಗಳಿಗೆ ರಕ್ಷಿಸಬೇಕೆಂದು ವಿನಂತಿ ಪತ್ರಗಳನ್ನು ಬರೆಯುತಿದ್ದಾರೆ. ಅಂತದ್ದರೊಳಗೆ ಒಂದು..

“ಮಹಾ ರಾಜಶ್ರೀ ಮನ್ರಪ್ಪ ದೊರೆಗಳ ಸಮ್ಮುಖಕ್ಕೆ ತಮ್ಮ ಆಜ್ಞಾನುಧಾರಕರಾದ ಜರಿಮಲೆ ಸಂಸ್ಥಾನದ ರಾಜ ವೀರ ಕದಿರೇ ನಾಯಕನು ಅನಂತ ಪ್ರಣಾಮಗಳ ಸಲ್ಲಿಸುತ್ತಾ… ಮಾಡುವ ವಿನಂತಿಗಳು…

ತಮ್ಮ ಸಂಸ್ಥಾನದ ಕುದಿರೆಡವು, ಸೊಕ್ಕೆ, ಸೋವೇನಹಳ್ಳಿ ಹಾಗೂ ಜರ್ಮಲಿಯ ಜನರು ಬರದ ಹೊಡೆತಕ್ಕೆ ಸಿಕ್ಕಿ ವಿಲವಿಲಗುಟ್ಟುತಿದ್ದಾರೆ. ತಾವು ಅನುಮತಿಸಿದರೆ ಒಂದು ಗಂಜಿಯ ಕೇಂದ್ರವನ್ನು ಏಳು ಕಂದೀಲುಗಳ ವೃತ್ತದಲ್ಲಿ ಏರ್ಪಾಡು ಮಾಡಿಸೋಣ. ತಮ್ಮಗಳ ಆಜ್ಞೆಗೆ ಈ ವಿಜ್ಞಾಪನೆಗಳನ್ನು ಮಾಡಿಕೊಳ್ಳುತಿದ್ದೇವೆ.

ಇಂತಿ ಅನಂತ ಪ್ರಣಾಮಗಳು
ತಮ್ಮ ಚಿತ್ತೈಕೆಯ ಕರ್ತರು
ರಾಜವೀರ ಕದಿರೇ ನಾಯಕ

ಗುದ್ದಿನ ಬರಗಾಲವನ್ನು ನೋಡಿ ದೊರೆ ಆಲೋಚನೆಗೆ ಬಿದ್ದ. ಮದ್ರಾಸು ಕಂಪನಿಯವರಿಗೆ ವರ್ತಮಾನ ಮುಟ್ಟಿಸಿದರೂ, ಅವರ ಹೃದಯ ಕರಗಲಿಲ್ಲ. ಗಂಜಿ ಕೇಂದ್ರದ ನಿರ್ಮಾಣಕ್ಕೆ ಮೇಲಿನಿಂದ ಅನುಮತಿ ಸಿಗಲಿಲ್ಲ.

ದೊರೆ ಕೂಡಾ ಮತ್ತೆ ಈ ವಿಚಾರದ ಮೇಲೆ ಕಂಪನಿಯವರಿಗೆ ಉತ್ತರ ಪ್ರತ್ಯುತ್ತರ ನಡೆಸಲಿಲ್ಲ.

ಜನ ಹಸಿವಿನ ಬಾಧೆಗಾಗಿ ಪಡುತ್ತಿರುವ ಸಂಕಟ ನೋಡಿ ಊರ ಹಿರಿಯರು, ಜಮೀನ್ದಾರರು, ದೊಡ್ಡ ವ್ಯಾಪಾರಿಗಳು ತಮಗೆ ತಾವೇ ತಮ್ಮ ಕೈಲಾದಷ್ಟು ಚಂದಾಗಳನ್ನು ಹಾಕಿಕೊಂಡು ಏಳು ಕಂದೀಲುಗಳ ವೃತ್ತದಲ್ಲಿ ಗಂಜೀ ಕೇಂದ್ರ ಏರ್ಪಾಡು ಮಾಡಿದರು.

ಶಿವನಾಯಕ “ತನ್ನ ಮೈಯೊಳಗೆ ಹುಷಾರಿಲ್ಲ” ಎಂದು ಹೇಳಿ ಟಾಂಗಾ ಕೆಲಸ ಬಿಟ್ಟು ರಹಸ್ಯವಾಗಿ ಗಂಜಿ ಕೇಂದ್ರ ಸೇರಿಕೊಂಡ. ಆ ಕಾರ್ಯಕ್ರಮದಲ್ಲಿ ಭಾಗಿಯಾದ. ಗಂಜಿ ಕೇಂದ್ರವನ್ನು ನಡೆಸುತಿದ್ದ ಅಂದಾನಪ್ಪನಿಗೆ ಸಹಾಯಕನಾಗಿ ಕೆಲಸ ಮಾಡತೊಡಗಿದ.

ಸುತ್ತು ಮುತ್ತಲ ನೂರಾ ಹದಿನಾರು ಹಳ್ಳಿಗಳಿಂದ ಬರುತಿದ್ದ ಬಡವರ ಕುಡಿಕೆಗಳಿಗೆ ಗಂಜಿ ಹಾಕಿ ಹಸಿವಿನ ಬಾಧೆ ನೀಗಿಸುತಿದ್ದರು. ಏಳು ಕಂದೀಲು ವೃತ್ತದ ಹತ್ತಿರ ಎಲ್ಲಿ ನೋಡಿದರೂ ಜನವೇ…

ಈ ಘಟನೆಯಿಂದ ಬರ ಎಷ್ಟು ದೊಡ್ಡದೆಂದು ಕಂಪನಿಯವರಿಗೆ ತಿಳಿಯಿತು. ತೆರಿಗೆಯನ್ನು ಇಳಿಸುತ್ತೇವೆಂದು ಆಶ್ವಾಸನೆ ನೀಡಿದರು. ಆದರೆ ಅದು ಆಚರಣೆಗೆ ಬರಲಿಲ್ಲ.

ಜನರೊಳಗೆ ಪ್ರತಿರೋಧ ಹುಟ್ಟಿತು. ಕಾಲ ಕಳೆದಂತೆ ಕಂಪನಿ ಮೇಲಿನ ನಂಬಿಕೆ ನಾಶವಾಯಿತು. ಹೋರಾಟಗಳು ಶುರುವಾದವು. ಚಳವಳಿಗಳು ಹುಟ್ಟಿಕೊಂಡವು.

ಆಗಲೇ.. ರಾಷ್ಟ್ರಪಿತ ಮಹಾತ್ಮಾ ಗಾಂಧಿಯವರ ಅಸಹಕಾರ ಚಳವಳಿ ದೇಶವ್ಯಾಪಿಯಾಗಿ ಸಂಚಲನ ಸೃಷ್ಟಿಸಿತ್ತು. ಗಾಂಧೀಜಿಯವರ ದಕ್ಷಿಣ ಭಾರತದ ಯಾತ್ರೆಯ ಭಾಗವಾಗಿ ಸಂಡೂರು, ಕೂಡ್ಲಿಗಿ ದಾರಿ ಕೂಡಾ ನಿಖರಗೊಂಡಿತು.

“ಗಾಂಧಿಯವರು ಬರುತ್ತಾರೆ!” ಎನ್ನೋ ವಾರ್ತೆಯೇ ದೊಡ್ಡ ಸಂಚಲನ ಮೂಡಿಸಿದೆ. ಹಳ್ಳಿ ಹಳ್ಳಿಗಳೂ ಸುದ್ಧಿ ತಿಳಿದು ಕುಣಿದಾಡುತ್ತಿವೆ. ವಾರದಿಂದಲೇ ಮಹಾತ್ಮರನ್ನು ನೋಡಬೇಕೆಂದು ಊರು - ವಾಡೆ ಒಂದಾಗಿ, ಬಂಡಿಗಳ ಕಟ್ಟಿಕೊಂಡು ತಂಡ ತಂಡೋಪವಾಗಿ, ಏಳು ಕಂದೀಲುಗಳ ವೃತ್ತದ ಕಡೆಗೆ ಸಾಗಿ ಬಂದವು.

ಗಾಂಧೀಜಿಯವರು ಬರುವ ಸುದ್ಧಿಯೇ ಕಂಪನಿಯ ಗುಂಡಿಗೆಯು ಕಂಪಿಸುವಂತೆ ಮಾಡಿದೆ. ಕಂಪನಿಯವರು ಜನರ ಯಾತ್ರೆಗೆ ಕೆಲವು ಕಡೆಗೆ ಅನುಮತಿಸುತಿದ್ದಾರೆ. ಇನ್ನೂ ಕೆಲವು ಕಡೆಗೆ ನಿರಾಕರಿಸುತಿದ್ದಾರೆ. ಲಾಟಿ ಚಾರ್ಜುಗಳು ಜರುಗುತ್ತಿವೆ. ಬಂದ ಜನರನ್ನು ಹಿಂದಕ್ಕೆ ತಳ್ಳುತಿದ್ದಾರೆ.

ಶಿವನಾಯಕ ಈ ವೇಳೆಯೊಳಗೇ ನಡುರಾತ್ರಿಯೆಲ್ಲಾ ಏಳು ಕಂದೀಲು ವೃತ್ತದ ಹತ್ತಿರ ಸೇರಿದ ಜನಕ್ಕೆ ಕರಪತ್ರಗಳನ್ನು ಹಂಚುವ ಕಾರ್ಯಕ್ರಮದೊಳಗೆ ಪಾಲ್ಗೊಂಡ. ಗಾಂಧೀಜಿಯವರ ಆಗಮನಕ್ಕೆ ದೊಡ್ಡ ಪ್ರಚಾರ ದೊರೆಯಿತು. ಗಾಂಧೀಜಿಯವರನ್ನು ನೋಡಲಿಕ್ಕೆ , ಆ ಮಹಾತ್ಮನ ಮಾತುಗಳನ್ನು ಕೇಳಲಿಕ್ಕೆ ಸಾವಿರಾರು ಜನ ಬಂದರು. ವಾರಕ್ಕೂ ಮೊದಲೇ ಏಳು ಕಂದೀಲ ವೃತ್ತ ಜನಗಳಿಂದ ಗಿಜಗುಡತೊಡಗಿತು.

ಆ ದಿನವೂ ಬಂದೇ ಬಿಟ್ಟಿತು. ರಾಷ್ಟ್ರಪಿತರನ್ನು ನೋಡಿದ ಜನರು ಉದ್ವಿಗಕ್ಕೆ ಒಳಗಾದರು. ಗಾಂಧೀಜಿಯವರ ಭಾಷಣ ಪ್ರಾರಂಭವಾಯಿತು.

“ಬಾಗಿಲು ತೆರೆದೇ ಇರಿ
ಬೆಳಕಾದರೂ ಬರಲಿ.
ಕತ್ತಲೆ ಮಾಯವಾಗಿ ಹೋಗಲಿ
ಬರುವುದೇನೋ ಬರದೇ ಇರದು!
ಕಿಟಕಿಗಳನ್ನು ಕೂಡಾ ತೆರೆದೇ ಇಡಿ.
ಪಕ್ಷಿಗಳಾಗಲಿ, ಮಳೆಯಾಗಲಿ,
ಗಾಳಿಯಾಗಲೀ ಬೀಸಲಿ
ಏನೋ ಒಂದು ನಡೆಯದೇ ಇರದು!
ಹೃದಯ ದ್ವಾರಗಳನ್ನ ಕೂಡಾ ತೆರೆಯಿರಿ
ದುಃಖವಾಗಲಿ.. ಸಂತೋಷವಾಗಲಿ
ಯಾವುದೋ ಒಂದು ಬಂದೇ ತೀರುತ್ತದೆ!"

ಎಂದಿಗೂ ಬೆಳಕಿನೊಡನೆ ಕಾಣಿಸುವ ಬೆಳದಿಂಗಳನ್ನ ಕನ್ನಡಿಯಲ್ಲಿ ಕಾಣುವ ಹಾಗೆ ನಮ್ಮನ್ನ ನಾವು ಒಡೆದು ಹಾಕಿಕೊಂಡು ಅಮೃತ ಶಿಲೆಯಾಗಿ ಬದಲಾಗೋಣ ಬನ್ನಿ. ಮನಸ್ಸಿನ ಪದರಗಳನ್ನು ಹರಿದುಕೊಂಡು ಸೂಜಿಯ ಮೊನೆಯಿಂದ ಅತ್ಮವನ್ನು ಹುಡುಕೋಣ ಬನ್ನಿ. ಅಡೆತಡೆಗಳನ್ನ ಮುರಿದು ಕನ್ನಡಿಯ ಹಾಗೆ ಕಾಣಿಸೋಣ ಬನ್ನಿ.. ನಿಮ್ಮೊಳಗಿನ ಬಾಗಿಲು ತೆರೆದು ಒಂದು ರಾಷ್ಟ್ರದ ನದಿಯ ತೋರಿಸಿರಿ..

ಮುಷ್ಟಿಯನ್ನು ಬಿಗಿ ಹಿಡಿದು ಕೊರಳೆತ್ತಿ ಜೋರಾಗಿ ಕೂಗಿ..

”ಕ್ವಿಟ್ ಇಂಡಿಯಾ..”

ಹೂಮಳೆಯಂತೆ ಪ್ರಾರಂಭವಾದ ಮಹಾತ್ಮರ ಭಾಷಣ ಚಂಡಮಾರುತವಾಗಿ ಬದಲಾಯಿತು. ರಪ್ಪನೆ ಬಿದ್ದ ಬೆಂಕಿಯ ತುಂಡಿನಂತೆ ಪ್ರಾರಂಭವಾದ ಆವೇಶ ದಾವಾಗ್ನಿಯ ಜ್ವಾಲೆಯಂತೆ ಉರಿಯತೊಡಗಿತು!

“ಕ್ವಿಟ್ ಇಂಡಿಯಾ!”

ಎಲ್ಲರ ಕೊರಳು ಒಂದೇ ಒಂದು ಬಾರಿಗೆ ಆಸ್ಫೋಟಿಸಿದವು! ಆ ಧ್ವನಿಗೆ ಏಳು ಕಂದೀಲುಗಳ ವೃತ್ತವೇ ಪ್ರತಿಧ್ವನಿಸಿತು. ಗಾಂಧೀಜಿಯವರು ಹೊರಟು ಹೋದರೇ ವಿನಃ ಅವರು ನೀಡಿದ ಚೈತನ್ಯ , ಸ್ಫೂರ್ತಿ ಶಿವನಾಯಕನೊಳಗೆ ಪ್ರಜ್ವಲಿಸುತ್ತಲೇ ಇತ್ತು.

ಮಣ್ಣ ಪದರಿನೊಳಗೆ ಅಡಗಿದ ಬೀಜ ಎಂದಿಗೂ ನಿದ್ರೆ ಹೋಗದು. ಒಂದು ಸಣ್ಣ ಹನಿಯ ಸಹಾಯ ಸಿಕ್ಕರೆ ಸಾಕು ಮಣ್ಣ ಪದರನ್ನೇ ಸೀಳಿಕೊಂಡು ಹಸಿರ ವಿಶ್ವರೂಪ ತೋರಿಸುತ್ತದೆ. ಅದೇ ಆಶಯ ಅದೇ ಕಾಂತಿ ಶಿವನಾಯಕನ ಕಣ್ಣೊಳಗೂ ಕಾಣಿಸಿತು!

ಮದ್ರಾಸು ಕಂಪನಿಯ ಆದೇಶದ ಮೇರೆಗೆ ಭೂಮಿಯ ಸರ್ವೆ ಕಾರ್ಯವು ಪ್ರಾರಂಭವಾಯಿತು.

ಮುವತ್ಮೂರು ಅಡಿಗಳ ಕಬ್ಬಿಣದ ಸರಪಳಿಯಿಂದ ಭೂಮಿಯನ್ನು ಅಳೆಯುತಿದ್ದಾರೆ. ಬೆಟ್ಟಗಳು, ದಿನ್ನೆಗಳು, ಊರುಗಳನ್ನು ಬಿಟ್ಟು ಭೂಮಿಗಳನ್ನೆಲ್ಲಾ ಅಳೆದು, ಹೊಲಗಳಿಗೆ ನಂಬರ್ ಗಳನ್ನು ನೆಡುತ್ತಾ ಬರುತಿದ್ದಾರೆ. ಸಾಗುವಳಿ ಮಾಡುತ್ತಿರುವ ಭೂಮಿಗಳನ್ನು ಮಗಾಣಿ, ಗದ್ದೆ, ಬೆದ್ದಲು ಭೂಮಿಗಳೆಂದು ಬಗೆ ಬಗೆಯಲ್ಲಿ ವರ್ಗೀಕರಿಸುತ್ತಾ ಹೋಗುತಿದ್ದಾರೆ. ಕಂಪನಿ ನಂಬರುಗಳ ಆಧಾರದ ಮೇಲೆಯೇ, ಭೂಮಿಗಳಿಗೆ ತೆರಿಗೆ ನಿರ್ಣಯಿಸುತ್ತಾ ರೈತ್ವಾರಿ ಪದ್ಧತಿ ತಂದಿತು.

"ನೋಡಾ… ಶಿವನಾಯಕ… ನೀನು ಕೆಲಸ ಮಾಡೋ ದೊರೆ… ನೀನು ಟಾಂಗಾ ಕಟ್ಟೋ ದೊರೆ.. ರೈತರ ಬೆವರನ್ನ, ಅನ್ನವನ್ನ ತನ್ನ ಖಜಾನೆಗೆ ಹೆಂಗ ದೋಚುತದಾನ ನೋಡಾ… ಮೀಸೆ ಮೇಲೆ ಕೈ ಹಾಕಿ ತಿರುವೋ ಶ್ರೀಮಂತರೂ ಸೈತ ಈ ತೆರಿಗೆ ಕಟ್ಟಲಾರರು. ಈ ಜನರನ್ನ ದೇವರೇ ಕಾಪಾಡಬೇಕು” ಎಂದ ಅಂದಾನಪ್ಪನ ಮಾತು ರಾತ್ರಿಯೆಲ್ಲಾ ನಿದ್ದೆ ಮಾಡಲೂ ಬಿಡದೆ ಬಂದು ಬಂದೂ.. ಶಿವನಾಯಕನನ್ನು ತಿವಿಯುತಿತ್ತು.

ಜೈನರ ಕೇರಿಬಳಿ “ಬೆತ್ತಲೆ ಸೇವೆ” ನಡೆಯುತ್ತದೆ ಎಂದು ದೊರೆಗೆ ಸುದ್ಧಿ ಬಂತು.

ಭಕ್ತರು ತಮ್ಮ ಕೋರಿಕೆ ನೆರವೇರಿಸಿಕೊಳ್ಳಬೇಕೆಂದು ಜೈನ ತೀರ್ಥಂಕರ ಪಾರ್ಶ್ವನಾಥನ ವಿಗ್ರಹಕ್ಕೆ ಪೂಜೆಗಳನ್ನು ಮಾಡುತ್ತಾರೆ. ಮಕ್ಕಳಾಗದ ಬಂಜೆಯರು ಸಂತಾನಕ್ಕಾಗಿ ಅರ್ಧರಾತ್ರಿಯಲ್ಲಿ ದಿಗಂಬರರಾಗಿ ಪೂಜೆಗಳನ್ನು, ನಾಟ್ಯಗಳನ್ನು ಮಾಡುತ್ತಾ ಪಾರ್ಶ್ವನಾಥನನ್ನು ಆಲಿಂಗನ ಮಾಡುತ್ತಾರೆ. ಇಂತಹ ನೃತ್ಯಗಳನ್ನು ನಿಷೇಧಿಸಲಾಗಿದೆಯೆಂದು ದೊರೆ ಕಾಯಿದೆ ಕೂಡಾ ಜಾರಿ ಮಾಡಿದ್ದಾನೆ. ಆದರೆ ಅದೇ ಜಾತ್ರೆ ಜರುಗುತ್ತಿದೆಯೆಂದು ತಿಳಿದೊಡನೆಯೇ ಪ್ರಯಾಣಕ್ಕೆ ಸಿದ್ಧವಾದ.

ಟಾಂಗಾ ಹೊರಟಿತು….

ಶಿವನಾಯಕನ ಕೈಯಲ್ಲಿ ಕುದುರೆಯ ಹಗ್ಗ. ಕತ್ತಲೊಳಗೆ ಟಾಂಗಾ ಮಿಂಚಿನಂತೆ ಸಾಗಿತು. ಸಣ್ಣಗೆ ಬೀಸುವ ತಣ್ಣನೆಯ ಗಾಳಿಗೆ ದೊರೆಗೆ ಮಬ್ಬು ಆವರಿಸಿತು. ಟಾಂಗ, ಬಂಡ್ರಿ ಕಡೆಯಿಂದ ಕಣಿವಿ ಹಳ್ಳಿಯ ದಿಬ್ಬ ಇಳಿದು ಬಲಕ್ಕೆ ತಿರುಗಿದರೆ ಸಿಗುವ ಆ ಜಾಲಿ ತೋಪಿನಲ್ಲಿ ಕಾಣಿಸುವುದೇ ಹಾಳುಬಿದ್ದ ಜೈನರ ಕೇರಿ. ಆ ದಾರಿ ಕೂಡಾ ಈಗ ಸರಿಯಾಗಿಲ್ಲ. ಟಾಂಗಾಕ್ಕೆ ಕಟ್ಟಿದ ದೀಪಗಳು ಕೂಡಾ ಮಿನಕು ಮಿನುಕು ಅಂತಾ ತೇಲುಗಣ್ಣು ಮೇಲಗಣ್ಣು ಬಿಡುತಿದ್ದವು.

ಟಾಂಗಾ ಜೈನರ ಕೇರಿಯ ಹತ್ತಿರ ಬರುತ್ತಿದೆ.. ದೂರದಲ್ಲಿ ಯಾರದೋ ಹಾಡು ಕೇಳುತ್ತಿದೆ…

“ಹುಲಿಯು ಹುಟ್ಟಿತೋ ನಾಡಾಗ
ಬಂಟ ರಾಯಣ್ಣ ಸಂಗೊಳ್ಳಿ ಊರಾಗ
ಹುಲಿಯು ಹುಟ್ಟಿತೋ ಕಿತ್ತೂರ ನಾಡಾ…”

ದೊರೆಗಿನ್ನೂ ನಿದ್ದೆ ಮುತ್ತುತಿತ್ತು. ಕಣ್ಣು ರೆಪ್ಪೆಗಳ ಬಿಡಿಸಿ ದೊರೆ ಹಗೂರಕ್ಕೆ ತಿರುಗಿದ. ಮುಂದೆ ಹೋದ ಸೈನಿಕರು ಜನರನ್ನೆಲ್ಲಾ ಚದುರಿಸಿದರು. ನಾರಿ ಹಳ್ಳದ ಮರುಳು ದಿನ್ನೆ ಕಡೆಗೆ ಕೆಲವರು ಓಡಿದರು. ದೊರೆ ಆ ಪ್ರದೇಶವನ್ನೆಲ್ಲಾ ಒಂದು ಸುತ್ತು ನೋಡಿ ಪರಿಶೀಲನೆ ಮಾಡಿದ.

“ಪಾರ್ಶ್ವನಾಥನ ವಿಗ್ರಹದ ಸುತ್ತಾ ಇರುವ ಮುಳ್ಳು ಜಾಲಿಯನ್ನೆಲ್ಲಾ ಕಡಿದು, ಆ ಬಯಲಿಗೆ ಬೇಲಿ ಹಾಕಿ” ಎಂದು ಆಜ್ಞೆಮಾಡಿ ಹೊರಟ.

ಟಾಂಗ ಮತ್ತೆ ಬಂಗ್ಲೆಯ ಕಡೆಗೆ ಹೊರಟಿತು. ಹೊರಟಿದ್ದ ದಾರಿಯಲ್ಲಿ ಹಿಂದಕ್ಕೆ ಬರುತ್ತಿದೆ.

ಶಿವನಾಯಕನ ಗುಂಡಿಗೆಯೊಳಗೆ ಗಾಂಧೀಜಿಯವರು ಹೇಳಿದ ಮಾತು…

“ಕ್ವಿಟ್ ಇಂಡಿಯಾ”
ಎಂಬ ಮಾತೇ ಮಾರ್ಮೊಳಗುತ್ತಿದೆ.

ಹಾದಿ ಕರಗಿದಂತೆಲ್ಲಾ… ಬಂಡಿಯೊಳಗೆ ದೊರೆ ಸಣ್ಣಗೆ ತೂಕಡಿಕೆಗೆ ಬಿದ್ದನು. ತುಂಬಾ ಹೊತ್ತಿನ ಪ್ರಯಾಣದ ನಂತರ ಟಾಂಗ ಕೋಟೆಯ ಸರಹದ್ದು ಸೇರಿತು. ಗೊಲ್ಲರ ಹಟ್ಟಿಗೆ ಮಾರು ದೂರದಲ್ಲೇ ಏಳು ಕಂದೀಲುಗಳ ಬೆಳಕು ಎದ್ದು ಕಾಣುತ್ತಿದೆ.

ಹೌದು.. ಏಳು ಕಂದೀಲುಗಳ ವೃತ್ತ ಹತ್ತಿರವೇ ಬರುತ್ತಿದೆ. ಬರುತ್ತಿದೆ...

ಗಾಂಧೀಜಿಯವರು ಸಂದೇಶ ನೀಡಿದ್ದು ಇಲ್ಲಿಯೇ…
ಈ ನೆಲದ ಮೇಲೆಯೇ..
ಈ ದಿನ್ನೆಯ ಕಟ್ಟೆ ಮೇಲೆಯೇ…
ಈ ವೃತದ ಮುಂದೆಯೇ…

ಶಿವನಾಯಕನ ಕೈಯೊಳಗಿನ ಹಗ್ಗ, ವೃತ್ತ ಬರುತ್ತಲೇ ಬಿಗಿಯಾಯಿತು. ಟಾಂಗಾದ ವೇಗ ತಗ್ಗಿತು. ಸುತ್ತೂ ನೋಡಿದ. ನಾಲ್ಕೂ ದಿಕ್ಕಿಗೂ ದಾರಿಗಳು. ಮಧ್ಯದಲ್ಲಿ ಎತ್ತರದ ಉಕ್ಕಿನ ಕಂಬ. ಅದಕ್ಕೆ ಏಳು ಬೆಳಕಿನ ಕಂದೀಲುಗಳು. ಕಂಬಕ್ಕೆ ಸ್ವಲ್ಪ ಹತ್ತಿರದಲ್ಲೇ ಹುಣಸೇ ಮರ…

ಅದರ ಅಡಿಯೇ ನಮಗೇನೂ ಸಂಬಂಧವಿಲ್ಲವೆಂಬಂತೆ ಮೇವನ್ನು ಮೆಲುಕಾಡುತ್ತಾ ಮಲಗಿರುವ ದನಗಳ ಹಿಂಡು. ದೂರದಲ್ಲಿ ಮುಂದೆ ಸಾಗುತ್ತಿರುವ ಖಾಸಾ ಸೈನಿಕ ದಳ. ಈ ನಡುರಾತ್ರಿ ದೊರೆ ಒಬ್ಬಂಟಿಯಾಗಿ ಸಿಕ್ಕಿದ್ದಾನೆ.

“ನೋಡಿದೇನಾ ಶಿವನಾಯಕ..! ನಮ್ಮ ಮನಿಯಾಗಾ… ನಮ್ಮ ಊರಾಗಾ… ನಾವು ನಿಲ್ಲಾಕ ಆಗದಂತ ಕಾಲ ಬಂದುಬಿಟ್ಟೈತೆ.
ಈ ದೊರೆ ಎಲ್ಲಿಂದನೋ ಯಾ ದೇಶದಿಂದನೋ ಬಂದು ನಮ್ ಊರಾಗ ಎಂಗದಾನ್ ನೋಡು, ಆತನ ಮೀಸಿ ಎದುರು ನಿಂದ್ರ ಗಣಮಗ ಯಾರದನಪ್ಪಾ…?!“ ಅಂತಾ ಆ ದಿನ ಮುನಿಯಪ್ಪನು ಹೇಳಿದ ಮಾತುಗಳು ನೆನಪಿಗೆ ಬಂದವು.

ಶಿವನಾಯಕ ತಡ ಮಾಡಲೇ ಇಲ್ಲ. ಏಳು ಕಂದೀಲು ವೃತ್ತದ ಬಳಿ ಟಾಂಗಾ ನಿಂತುಬಿಟ್ಟಿತು!

ದೊರೆ ಏನೂ ಅರ್ಥವಾಗದೆ ತಡಬಡಿಸಿ ಎದ್ದ..

“ಹೇ… ವಾಟ್ ಆರ್ ಯೂ ಡೂಯಿಂಗ್ !” ಅಂದ.

ಶಿವನಾಯಕ ಛಂಗನೇ ಜಿಗಿದು ಉಕ್ಕಿನ ಕಂಬ ಏರಿಬಿಟ್ಟ. ಏಳು ಕಂದೀಲುಗಳ ದೀಪಗಳನ್ನು ದಾಟಿ, ದೊರೆ ನೋಡ ನೋಡುತಿದ್ದ ಹಾಗೆಯೇ ಬ್ರಿಟೀಷರ ಧ್ವಜವನ್ನು ಕಿತ್ತು ಹಾಕಿ ನಮ್ಮ ದೇಶದ ಧ್ವಜವನ್ನು ಹಾರಿಸಿಬಿಟ್ಟ!

ಹಾರಿಸಿದ್ದೇ.. ಜೋರಾಗಿ..

“ಕ್ವಿಟ್ ಇಂಡಿಯಾ…” ಎಂದು ಘರ್ಜಿಸಿದ.

ದೇಶದ ಬಾವುಟವು ತಂಗಾಳಿಯಲ್ಲಿ ಮುಗಿಲ ತುಂಬಾ ಪಟ ಪಟನೆ ಗರ್ವದಿಂದ ಹೊಡೆದುಕೊಳ್ಳತೊಡಗಿತು.

ದೊರೆಗೆ ನಿದ್ದೆಯ ಮಬ್ಬೇ ಹಾರಿ ಹೋಯಿತು.

ಸೊಂಟದಿಂದ ರಿವಾಲ್ವಾರ್ ತೆಗೆದುಕೊಂಡವನೇ, ಶಿವನಾಯಕನ ಕಡೆಗೆ ಗುರಿಯಿಟ್ಟು ಢಂ ಎನಿಸಿಬಿಟ್ಟ! ಒಂದೇ ಕ್ಷಣದಲ್ಲಿ ಸಿಡಿದ ಗುಂಡು ಶಿವನಾಯಕನ ದೇಹ ಹೊಕ್ಕಿತು, ಅಷ್ಟೇ..

”ಕ್ವಿಟ್ ಇಂಡಿಯಾ!” ಎಂದ ಶಬ್ದವೇ ಆತನ ಕೊನೆಯ ಶಬ್ದವೂ ಆಯಿತು.

ಏಳು ಕಂದೀಲು ಕಂಬದಿಂದ ಶಿವನಾಯಕ ಹಾಗೇ ಕುಸಿದು ಮಣ್ಣಿನ ವೃತ್ತಕ್ಕೆ ಬಿದ್ದ.

ಗುಂಡಿನ ಶಬ್ದ ಕೇಳಿದ ಸೈನಿಕ ದಳ ಯಾವುದೋ ಪ್ರಮಾದ ನಡೆಯಿತೆಂದು ಮಿಂಚಿನಂತೆ ಹಿಂತಿರುಗಿತು.

ಶಿವನಾಯಕ ಆಗಲೇ ರಕ್ತದ ಮಡುವಿನಲ್ಲಿ ಬಿದ್ದಿದ್ದ! ಎಲ್ಲರೂ ಬೆಕ್ಕಸ ಬೆರಗಾದರು.

ಈ ಘಟನೆ ನಡೆದ ಎರಡೇ ದಿನಕ್ಕೆ, ಬಳ್ಳಾರಿಗೆ ಹೋಗಿ ಬ್ರೂಸ್ ಸಾಹೇಬರನ್ನು ಕಂಡು ಬರುವಾಗ, ದಂಡಿ ಮಾರಮ್ಮನ ದಿನ್ನೆಯ ತಿರುವಿನಲ್ಲಿ ದೊರೆ ಟಾಂಗಾ ಉರುಳಿ ಬಿದ್ದು, ನಾರಿ ಹಳ್ಳದ ಬಂಡೆಗೆ ಅಪ್ಪಳಿಸಿತು!

ದೊರೆ ಕಲ್ಲು ಬಂಡೆಗೆ ಬಿದ್ದು ಉಸಿರು ಚಲ್ಲಿದ!

ಎಲ್ಲರೂ.. ದೊರೆಯು ಶಿವನಾಯಕನಿಗೆ ನೀಡಿದ ಶಿಕ್ಷೆಗೆ, ಆ ದೇವರೇ ಕೊಟ್ಟ ತಕ್ಕ ಶಿಕ್ಷೆ ಎಂದರು.

ಕಾಲದ ಪ್ರವಾಹದೊಳಗೆ ಎಷ್ಟೋ ವರ್ಷಗಳು ಕಳೆದು ಹೋದವು. ದೊರೆಗಳೂ ಹೋದರು… ದೊರೆಗಳ ಪೀಡನೆಗಳೂ ಹೋದವು… ಏಳು ಕಂದೀಲು ವೃತ್ತದ ಬಳಿಗೆ ಬಂದಾಗಲೆಲ್ಲಾ ಶಿವನಾಯಕನ ತ್ಯಾಗ ಬಲಿದಾನವೇ ನೆನಪಿಗೆ ಬರುತ್ತದೆ. ಕಣ್ಣು ತುಂಬಿಕೊಳ್ಳುತ್ತದೆ. ಎದೆ ತುಂಬಾ ದೇಶ ಪ್ರೇಮದ ಭಾವ ಆವರಿಸಿ ಕಣ ಕಣಗಳನ್ನೆಲ್ಲಾ ರೋಮಾಂಚನಗೊಳಿಸುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.