ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಥೆ | ಹೊಣೆ

Published 22 ಅಕ್ಟೋಬರ್ 2023, 0:30 IST
Last Updated 22 ಅಕ್ಟೋಬರ್ 2023, 0:30 IST
ಅಕ್ಷರ ಗಾತ್ರ

ಧೋ ಧೋ ಎಂದು ಆಕಾಶವೇ ಕಳಚಿಬಿಳುವ ಹಾಗೆ ಹಿಡಿದ ರಾತ್ರಿಯ ಮಳೆ ಹಗಲು ಹನ್ನೆರಡಾದರೂ ಇನ್ನೂ ನಿಲ್ಲುವ ಸೂಚನೆಯೇ ಕಾಣುತ್ತಿಲ್ಲ. ಬಿಟ್ಟು ಬಿಟ್ಟು ಬರುವ ಮಳೆ ತಲೆಚಿಟ್ಟು ಹಿಡಿಸುವಂತೆ ಇತ್ತು. ಮಳೆಯ ಆಟ ಕಡಿಮೆಯಾಗಿದ್ದರೂ ಸಣ್ಣ ಸಣ್ಣ ಹನಿ ಮಳೆ ಬೇಸರ ತರಿಸುವಂತಿತ್ತು. ಇದು ಸಾಲದೆಂಬಂತೆ ಗೌರಿಗೆ ಬೆಳಗ್ಗೆ ಹನ್ನೊಂದು ಗಂಟೆಗೆ ಶುರುವಾದ ತಲೆ ನೋವಿನಿಂದ ಮೈಯೆಲ್ಲ ಹಿಂಡಿಹೋದಂತಾಗಿತ್ತು. ತಾಳಲಾರದ ನೋವು, ಸಂಕಟ, ಬಾಧೆ, ಅವಳ ಜನ್ಮದಲ್ಲೇ ಅಂಥ ತಲೆನೋವು ಬಂದಿರಲಿಲ್ಲವೆನ್ನಬೇಕು. ಅಪಾರ ನೋವಿನಲ್ಲಿ ಮುಳುಗಿಹೋಗಿದ್ದಳು ಗೌರಿ.

ಎಂದಿನಂತೆ ಅಂದೂ ಮಧ್ಯಾಹ್ನದ ಊಟದ ವೇಳೆಗೆ ರಘು ಆಫೀಸು ಬಿಟ್ಟು ಹೊರಟ, ತನ್ನ ಕಾರಲ್ಲಿ ಬರುವಾಗ ಕಾಲೇಜಿನಿಂದ ಮಗಳು ರಜನಿಯನ್ನು ಕರೆದುಕೊಂಡು ಮನೆಗೆ ಬಂದ ಬಾಗಿಲಲ್ಲಿ ಎಂದಿನಂತೆ ಮಂದಹಾಸ ಬೀರಿ ಗಂಡನನ್ನು ಸ್ವಾಗತಿಸುತ್ತಿದ್ದ ಗೌರಿ, ಅಂದೇಕೋ ಕಾಣಲಿಲ್ಲ, ಕೈತೋಟದಲ್ಲೇನಾದರೂ ಇರಬಹುದೇನೋ ಎಂದು ಅಪ್ಪ ಮಗಳು ಹುಡುಕಿ ಬಂದರು. ಉಹೂಂ ಅಲ್ಲೂ ಇಲ್ಲ, ಹಾಗಾದರೆ ಮತ್ತೇಲ್ಲಿ? ಗೌರಿ ಕಾಣದಾದಾಗ ರಘು ಒಮ್ಮೆ ಕಾಂಪೌಂಡಿನ ಸುತ್ತ ಕಣ್ಣು ಹಾಯಿಸಿದ ಗೌರಿ ಹೊರಗೆಲ್ಲೂ ಕಾಣಲಿಲ್ಲ. ಓ ಮನೆಗೆ ಬೀಗ ಹಾಕಿಕೊಂಡು ಎಲ್ಲೋ ಹೊರಗೆ ಹೋಗಿರಬೇಕೆಂದುಕೊಂಡು ಮತ್ತೆ ಬಾಗಿಲ ಬಳಿ ನೋಡಿದ ಇಲ್ಲ ಬೀಗ ಹಾಕಿಲ್ಲ ಅಂದರೆ ಗೌರಿ ಮನೆಯೊಳಗೇ ಇದ್ದಾಳೆ, ಗೌರಿ ಮನೆಯಲ್ಲಿದ್ದೂ ರೇಡಿಯೋ ಧ್ವನಿ ಕಿವಿಗೆ ಬೀಳದಿದ್ದುದು ರಘು, ರಜನಿಯರಿಗೆ ಆಶ್ಚರ್ಯ ತಂದಿತ್ತು. ಹಗಲಿರುಳುಗಳ ಪರಿವೆಯೂ ಇಲ್ಲದೆ ಹಾಡುತ್ತಿದ್ದ ರೇಡಿಯೋಗೆ ಅಂದು ಮೌನದ ಮುಸುಗು. ಗೌರಿ ರೇಡಿಯೋ ಭಕ್ತಳು, ಟಿ.ವಿ.ಗಿಂತ ಅವಳಿಗೆ ರೇಡಿಯೋನೇ ಇಷ್ಟ ರಜನಿಗೆ ಅಮ್ಮನ ರೇಡಿಯೋ ಹುಚ್ಚು

ಗೊತ್ತಿತ್ತು, ಹಾಗಾಗಿ ರಜನಿಗೆ ಅಂದು ರೇಡಿಯೋ ಧ್ವನಿ ಕೇಳದಿದ್ದುದು ಅರ್ಥವಾಗಲಿಲ್ಲ, ಗೌರಿ ಸದಾ ಏನನ್ನಾದರೂ ಹಾಡುತ್ತಿರಬೇಕು, ಇಲ್ಲ ಅವಳು ಸುಮ್ಮನಿದ್ದಾಗ ರೇಡಿಯೋನಾದರೂ ಹಾಡುತ್ತಿರುಬೇಕು. ಕಥೆ, ಕಾದಂಬರಿ ಓದುವಾಗಲೂ ಕೂಡ ರೇಡಿಯೋ ಹಾಡಿನ ಶೃತಿಗೇ ಎಂದು ಅಪ್ಪ ಮಗಳೂ ಹಾಸ್ಯ ಮಾಡುವಷ್ಟು ರೇಡಿಯೋ ಹುಚ್ಚಿನವಳಾಗಿದ್ದಳು ಗೌರಿ.

"ಅಮ್ಮಾ ಏನಮ್ಮಾ ಯಾವಾಗ ನೋಡಿದ್ರೂ ಹಾಡು, ಸಂಗೀತ ಅಂಥ ರೇಡಿಯೋನ ಬಿಡುವಿಲ್ಲದೆ ಹಾಕೇ ಇರ್ತಿಯಲ್ಲಮ್ಮ ಒಂದಷ್ಟು ನಿಲ್ಲಿಸಬಾರದೇನಮ್ಮ ಸಾಕು ಅಂತ ಯಾವಾಗಲಾದರೂ ಒಂದು ಕ್ಷಣ ಗೌರಿ ಹಾಕಿದ ರೇಡಿಯೋನ ರಜನಿ ಏನಾದ್ರೂ ಅಪ್ಪಿ ತಪ್ಪಿ ಆಫ್ ಮಾಡಿದಲೋ ಮುಗದೇಹೋಯ್ತು.

‘‘ಥೂ ಎನ್ ರಜನಿ ನನ್ನ ಹೊಟ್ಟಲಿ ಹುಟ್ಟಿ ಸಂಗೀತದ ಬಗ್ಗೆ ಇಂಥಾ ಮಾತಾಡ್ತಿಯಾ? ನೀನೆಲ್ಲೋ ಈ ವಿಷಯದಲ್ಲಿ ಔರಂಗಜೇಬನ ವಂಶದವಳು ಅನ್ನಿಸುತ್ತೆ’’ ಎಂದು ನಗೇಚಾಟಿಯನ್ನು ಬೀಸುತ್ತಲೇ ರೇಡಿಯೋನ ಮತ್ತೆ ಆನ್ ಮಾಡೋಳು ಗೌರಿ ಅಂಥಾ ಸಂಗೀತದ ಹುಚ್ಚು ಗೌರಿಗೆ.

ಕೂತರೆ, ನಿಂತರೆ ಸಂಗೀತ ಹಾಡು, ಹಾಡು, ಹಾಡು, ರಘು ಮನೆ ರೇಡಿಯೋಗೆ ಬಿಡುವಿಲ್ಲದ ದುಡಿತ, ಹಾಗಿರೋವಾಗ ಇಂದಿನ ಪರಿಸ್ಥಿತಿ ಅಪ್ಪ ಮಗಳಿಬ್ಬರಿಗೂ ಹೊಸತು. ಗಂಡ, ಮಗಳು ಇಬ್ಬರೂ ಮನೇಗೆ ಬರುವ ಸಮಯಕ್ಕೆ ಅದೇನು ಗೌರಿ ಮುಗಿಕೊಂಡುಬಿಟ್ಟಳೋ, ಪಾಪ ಹುಶಾರಿಲ್ಲವೇನೋ ಎಂದುಕೊಳ್ಳುತ್ತ ರಘು ಮತ್ತೆ ಮತ್ತೆ ಕಾಲಿಂಗ್ ಬೆಲ್ ಒತ್ತಿದ, ಉಹೂಂ ಸದ್ದೇ ಇಲ್ಲ, ಮತ್ತೆ ಇನ್ನೊಂದೆರಡು ಸಾರಿ ಕಾಲಿಂಗ್ ಬೆಲ್ ಒತ್ತಿದರೂ ಒಳಗಿನಿಂದ ಸದ್ದೇ ಬರದಿದ್ದಾಗ ತಂದೆ, ಮಗಳಿಗೆ ಗಾಬರಿಯೇ ಆಯ್ತು, ರಜನಿ "ಅಮ್ಮ ಅಮ್ಮಾ" ಎಂದುಉ ಜೋರಾಗಿ ಕಿರುಚಿ ಬಾಗಿಲು ಬಡಿದಳು ಆದರೂ ಯಾವ ಸದ್ದೂ ಇಲ್ಲ. ರಘುವಿಗೆ ಘಾಬರಿಯಾಗಿ ಮತ್ತೊಮ್ಮೆ ಒಂದೇ ಸಮನೆ ಎಡಬಿಡದೆ ಕಾಲಿಂಗ್ ಬೆಲ್ ಒತ್ತಿದಾಗ "ಬಂದೇ ನಂಗೂ ಕಿವಿಕೇಳಿಸುತ್ತೆ" ಎನ್ನುತ್ತ ಗೌರಿ ಬಾಗಿಲು ತೆರೆದಳು.

ಕೆದರಿದ ಕೂದಲೂ, ಅತ್ತಂತೆ ಕೆಂಪಾಗಿದ್ದ ಕಣ್ಣುಗಳು, ಗೌರಿಯನ್ನು ಈ ಸ್ಥಿತಿಯಲ್ಲಿ ಕಂಡು ರಘು, "ಏನಾಯ್ತು ಗೌರಿ ಏನಾಯ್ತು ಗೌರಿ" ಎನ್ನುತ್ತ ಅವಳ ಕೈಯನ್ನು ಹಿಡಿದುಕೊಳ್ಳು ಬಂದರೆ ಕೈ ಕೊಸರಿಕೊಂಡು "ನನಗೇನಾಗಿದೆ" ಎನ್ನುತ್ತ ಅಡಿಗೆ ಮನೆಯ ಕಡೆಗೆ ನಡೆದೇಎ ಬಿಟ್ಟಳು. ಅಮ್ಮಾ, ಅಮ್ಮಾ" ಎಂಬ ರಜನಿಯ ಕೂಗಿಗೂ ಗೌರಿಯ

ಮೌನ, ರಘುವಿಗಾಗಲೀ, ರಜನಿಗಾಗಲೀ ಅದೊಂದು ಹೊಸ ಅನುಭವ.

ಅಪ್ಪ ಮಗಳಿಬ್ಬರೂ ಎಣು ಅರ್ಥವಾಗದವರಂತೆ ಮುಖ ಮುಖ ನೋಡಿಕೊಂಡರು.

ಬಿಸಿ ಮಾಡಿದ ಅಡಿಗೆಯೆಲ್ಲ ಹತ್ತು ನಿಮಿಷದಲ್ಲಿ ಡೈನಿಂಗ್ ಟೇಬಲ್ ಮೇಲೆ ರೆಡಿಯಾಯ್ತು, ಗೌರಿ ರಜನಿಗೊಂದು, ರಘುವಿಗೊದು ತಟ್ಟೆಯನ್ನಿಟ್ಟಳು ಕೈ ಕಾಲುಗಳನ್ನು ತೊಳೆದು ಬಂದು ಕುರ್ಚಿಯಲ್ಲಿ ಕುಳಿತ ತಂದೆ, ಮಗಳು ಎರಡೇ ತಟ್ಟೆ ನೋಡಿ ಗೌರಿಯ ಕಡೆ ಮುಖ ಮಾಡಿದರು.

"ಏನಮ್ಮಾ ನಿಂದು ಊಟ ಆಯ್ತಾ? ಯಾಕೆ ಎರಡೇ ತಟ್ಟೆ ಹಾಕಿದ್ದಿಯಾ?" ಎಂದಳು ಮಗಳು ರಜನಿ.

ಇಲ್ಲಾಮ್ಮಾ ಹೊಟ್ಟೆ ತುಂಬಿದೆ, ಊಟ ಬೇಡ, ಹಸಿವಾದರೆ ಮತ್ತೆ ಊಟಮಾಡ್ತಿನಿ" ಗೌರಿಯ ಗಂಭೀರ ಉತ್ತರ.

ರಘು ಎದ್ದು ಬಂದು "ಚಿನ್ನಾ ನಿನಗೆನಾಗಿದೆ ಇವತ್ತು? ಹುಶಾರಿಲ್ಲವೇನು ಯಾಕೆ ಅತ್ತಿರುವ ಹಾಗಿದೆಯಲ್ಲ, ತಲೆ ನೋವೇನು? ಎಲ್ಲಿ ಒಂದು ತುತ್ತು ಅನ್ನ ತಿನ್ನೇಳು ರಜನಿ ಹೋಗಮ್ಮ ಪುಟ್ಟಾ, ಆ ರೂಮಿನ ಬೀರುವಿನಲ್ಲಿ ಒಂದುಉ ಸಣ್ಣ ಪ್ಲಾಸ್ಟಿಕ್ ಡಬ್ಬಿ ಇದೆಯಲ್ಲ, ಅದರಲ್ಲಿ ತಲೆನೋವಿನ ಮಾತ್ರೆ ಇದೆ, ತೊಗೊಂಬಾ ಹೋಗು" ಎನ್ನುತ್ತ ಗೌರಿಯ ತಲೆಯನ್ನು ನೆವರಿಸತೊಡಗಿದ.


"ಥೂ ತೆಗೀರಿ ಕೈಯ್ಯಿ, ನೋಡಿದವರು ನಕ್ಕಾರು, ಮದುವೆಯಾಗಿ ಹದಿನಾರು ವರ್ಷವಾದ್ರೂ ಏನ್ ಒಳ್ಳೇ ಎಳೇ ಮಕ್ಕಳ ಹಾಗೆ" ಎನ್ನುತ್ತ ರಘುವಿನ ಕೈಸಿತ್ತುಕಿತ್ತು ಹಾಕಿದಳು ಆಗ ರಘುವಿಗೆ ಅಥವಾಯ್ತು ಗೌರಿಗೆ ದೇಹಕ್ಕಲ್ಲ ಖಾಯಿಲೆ ಮನಸ್ಸಿಗೆ ಅಂತ. ಮದುವೆಯಾದ ಹದಿನಾರು ವರ್ಷಗಳಿಂದಲೂ ರಘುವಿನ ಮುದ್ದು ಮುಚ್ಚಟಿಗಳು ಬೇಕಾಗಿದ್ದ ಗೌರಿಗೆ, ಒಮ್ಮೆಲೆ ಇದ್ದಕ್ಕಿದ್ದ ಹಾಗೆ ಅದು ಎಡವಟ್ಟಾಗಬೇಕಾದರೆ? ರಘುವಿಗೆ ಅದೊಂದು ಅರ್ಥವಾಗದ ಸಮಸ್ಯೆಯಾಯಿತು. ಮಾತು ಬೆಳೆಸುವುದು ಬೇಡವೆಂದು ರಘು ಮೌನವಾಗಿ ತಟ್ಟೆಗೆ ಕೈ ಹಾಕಿದ, ಅಷ್ಟರಲ್ಲಿ ರಜನಿ ಬಂದು ತಲೆನೋವಿನ ಮಾತ್ರೆ ತಂದುಕೊಟ್ಟಳು ತಾಯಿಗೆ, ಅವಳೂ ಮರು ಮಾತಾಡದೆ ಮಾತ್ರೆ ನುಂಗಿ ಬಂದು ಲೋಟ ನೀರು ಬಡಿದಳು, ರಜನಿ ತಾಯಿಗೊಂದು ತಟ್ಟೆಯನ್ನು ಹಾಕಿ ತಾನೇ ಬಡಿಸಿದಳು, ಮೂವರೂ ಮಾತಿಲ್ಲದೆ ಮೌನವಾಗಿ ಊಟ ಮುಗಿಸಿ ಎದ್ದರು, ಉಸಿರುಗಟ್ಟಿಸುವಂಥ ಆ ಮೌನವನ್ನು ತಾಳಿಕೊಳ್ಳುವುದು ಮೂವರಿಗೂ ಭರಿಸಲಾರದಂತೆ ಕಂಡರೂ, ಮಾತಾಡಿ ಇರುವ ವಾತಾವರಣವನ್ನು ಇನ್ನೂ ಹದಗೆಡಿಸುವುದು ಯಾರಿಗೂ ಬೇಡವಾಗಿತ್ತು. ಎಳೇ ಹುಡುಗಿರಜನಿಗಂತೂ ಏನೂ ಮಾಡಲು ತೋರದೆ ಅಪ್ಪನ ಮುಖವನ್ನೊಮ್ಮೆ ಅಮ್ಮನ ಮುಖವನ್ನೊಮ್ಮೆ ನೋಡುತ್ತ ಅರೆಹೊಟ್ಟೆ ತಿಂದಿದ್ದಳು.

ರಜನಿ ಅಂದು ಗೆಳತಿಯೊಂದಿಗೆ ಸಿನಿಮಾಕ್ಕೆ ಹೋಗುವ ಕಾರ್ಯಕ್ರಮವನ್ನು ಹಾಕಿಕೊಂಡಿದ್ದಳು. ಅಮ್ಮನ ಈ ಸ್ಥಿತಿಯಲ್ಲಿ ತನ್ನ ಸಿನಿಮಾ ಪ್ರೋಗ್ರಾಮ್ ಎಲ್ಲಿ ತಪ್ಪಿ ಹೋಗುವುದೋ ಎನ್ನುವ ಆತಂಕ ರಜನಿಗೆ, ರಜನಿಯ ಕಾರ್ಯಕ್ರಮವನ್ನು ಮೊದಲೇ ತಿಳಿದಿದ್ದ ರಘು, ರಜನಿಯ ಬೆನ್ನ ಮೇಲೆ ಕೈಹಾಕಿ, ಎಲ್ಲ ರಜನಿ, ನೀನು ಸಿನಿಮಾಕ್ಕೆ ಹೋಗಮ್ಮ ನಿನಗಾಗಲೇ ಹೊತ್ತಾಗಿರಬೇಕು. ಡ್ರೈವರನ್ನು ಕರೆದುಕೊಂಡು ಕಾರಿನಲ್ಲೇ ಹೋಗು, ನಿನ್ನಿಂದಾಗಿ ನಿನ್ನ ಫ್ರೆಂಡ್ಸ್ಗೆಲ್ಲ ತಡವಾಗಬಾರದು, ಹೋಗು ಅವರೋ ಕಾಯ್ತಾ ಇರ್ತಾರಲ್ಲ ನಿನಗಾಗಿ. ನಾನೂ ಆಫೀಸಿಗೆ, ಫೋನ್ ಮಾಡಿ, ಮಧ್ಯಾಹ್ನ ಬರೋಕ್ಕಾಗಲ್ಲ ಅಂತ ತಿಳಿಸಿ ನಿಮ್ಮಮ್ಮನ್ನ ನೋಡಿಕೊಳ್ತಿನಿ" ಎಂದು ಮಗಳನ್ನು ಕಳುಹಿಸಿಕೊಟ್ಟ ರಘು. "ಅಮ್ಮಾ ಬರ್ತಿನಮ್ಮಾ" ಎಂದು ಹೇಳುತ್ತ ರಜನಿ ಚಿಗರೆ ಮರಿಯಂತೆ ಹೊರಗೆ ಹಾರಿದಳು.


ಊಟವನ್ನು ಮುಗಿಸಿದ ಗೌರಿ ತಲೆಯನ್ನು ಹಿಡಿದುಕೊಂಡು ಅಯ್ಯೋ ನೋವು" ಎಂದುಕೊಳ್ಳುತ್ತ ಹೋಗಿ ಹಾಸಿಗೆಯಲ್ಲಿ ಉರುಳಿಕೊಂಡಳು. ರಘು ಅವಳ ಹಿಂದೆಯೇ ಹೋಗಿ ಮಂಚ ಮೇಲೆ ಅವಳ ಪಕ್ಕದ್ದಲಿ ಕುಳಿತು ಅವಳ ತಲೆಯನ್ನು ಮೃದುವಾಗಿ ನೇವರಿಸತೊಡಗಿದ, ಗೌರಿ ರಘುವಿನ ಕೈಯನ್ನು ಕಿತ್ತು ಹಾಕಿ, ಪಕ್ಕಕ್ಕೆ ಹೊರಳಿ ಮುಸುಗೆಳೆದುಕೊಂಡಳು, ರಘುವಿಗೆ ಅವಳ ಆ ವರ್ತನೆ ವಿಚಿತ್ರವೆನಿಸುವ ಜೊತೆಗೆ ನೋವು ಆಯಿತು.


"ಗೌರಿ ನಿನಗೇನಾಗಿದೆ? ಯಾಕೆ ಹೀಗೆ ಆಡ್ತಿದ್ದೀ?" ಗೌರಿಯ ಮುಸುಗೆಳೆದು, ಅವಳ ಗಲ್ಲವನ್ನು ಸವರುತ್ತ ಕೇಳಿದ ರಘು.


"ನನಗೇನೂ ಆಗಿಲ್ಲ, ಖಾರವಾಗಿ ಉತ್ತಿರಿಸಿದಳು ಗೌರಿ.


ನಿನ್ನನ್ನು ನೀನು ಮೋಸ ಮಾಡಿಕೊಂಡು ನೊಂದುಕೊಳ್ಳುವ ಈ ಪ್ರಯತ್ನ ಏಕೆ? ಹೇಳು ಗೌರಿ ಏನಾಗಿದೆ ನಿನಗೆ?" ಅಕ್ಕರೆಯಿಂದ ಕೇಳಿದ ರಘು, ಏಕೆ ಹೇಳು ಗೌರಿ ಏನಾಗಿದೆ ನಿನಗೆ?" ಅಕ್ಕರೆಯಿಂದ ಕೇಳಿದ ರಘು, "ನಂಗೇನಾಗಿದೆ ನೊಂದುಕೊಳೊಕೆ?" ಎಲ್ಲಾ ಸರಿಯಾಗೇ ಇದೀನಿ" ಒತ್ತರಿಸಿ ಬರುತ್ತಿದ್ದ ದುಃಖವನ್ನು ತಡೆಉ ಹೇಳಿದಳು.

ಇಲ್ನೋಡು ಚಿನ್ನಾ ನನ್ನಿಂದೇನಾದರೂ ಬೇಸರವಾಗಿದೆಯೇನು ನಿನಗೆ?"

ಇವಳಿಗೆ ತನ್ನಿಂದೇನಾದರೂ ಬೇಸರವಾಗಿರಬಹುದೇ ಎಂದು ಒಂದು ಕ್ಷಣ ಯೋಚಿಸುತ್ತ ಕೇಳಿದ ರಘು.


"ಅಯ್ಯೋ ಬಿಡಿ ಇನ್ನೇನು ಆಗೋದು ಉಳಿದಿದೆ?"

"ಯಾಕೆ ಗೌರಿ ಹೀಗೆ ಮಾತಾಡ್ತಿದೀಯಾ?"

"ಹೀಗೂ ಇಲ್ಲ ಹಾಗೂ ಇಲ್ಲ ಸರಿಯಾಗೇ ಇದೀನಿ, ಒಂದಿಷ್ಟು ತಲೆ ನೋವಷ್ಟೆ.

ಅದಕ್ಯಾಕೆ ಬದನೆಕಾಯಿ ಬ್ರಹ್ಮರಾಕ್ಷಸ ಮಾಡ್ತಿದ್ದೀರಾ?"

"ಗೌರಿ ನನ್ನ ಕೈ ಮೇಲೆ ಕೈ ಇಟ್ಟು ಹೇಳು ನಿಂಗೆ ಬರೀ ತಲೆ ನೋವೆನು ಇವತ್ತೇನೋ ಬದಲಾಗಿದ್ದಿ ಅಂತ ಅನ್ನಿಸ್ತಿಲ್ವಾ ನಿಂಗೆ, ಯಾಕೇ? ಏನಾಯ್ತು? ಅದನ್ನಾದ್ರೂ ಹೇಳಬಾರದೇ? ಇವತ್ತು ಬೆಳಗಿನವರೆಗೂ ಸರಿಯಾಗೇ ಇದ್ದೆಯಲ್ಲ ಇದ್ದಕ್ಕಿದ್ದ ಹಾಗೆ ಏನಾಯ್ತು ನಿಂಗೆ ಗೌರಿ? ಹೇಳು ಚಿನ್ನಾ ನನ್ನ ಹತ್ತಿರಾನೂ ಮುಚ್ಚುಮರೆಯೇನು?

ನಿನ್ನ ಕಷ್ಟ ಸುಖ ನನ್ನದೂ ಅಲ್ಲವೇನು? ಸಪ್ತಪದಿಯ ಏಳು ಹೆಜ್ಜೆಯ ಅರ್ಥ ಮರೆತುಹೋಯ್ತೇನು? ಎಲ್ಲಿ ಹೇಳು ಗೌರಿ ನಾ ಬೇರೆ ನೀ ಬೇರೆ ಏನು?"

ಒಮ್ಮೆ ಗೌರಿ ಕತ್ತೆತ್ತಿ ರಘುವಿನ ಕಣ್ಣಲ್ಲಿ ಕಣ್ಣಿಟ್ಟು ನೋಡಿದಳು, ಆ ಕಣ್ಣುಗಳಲ್ಲಿ ಕಾಣುತ್ತಿದ್ದ ಪ್ರೀತಿ, ವಾತ್ಸಲ್ಯವನ್ನು ಕಂಡು, ಒಂದು ಕ್ಷಣ ತಾನು ತಪ್ಪು ಮಾಡುತ್ತಿರುವೆನೇನೋ ಎನ್ನಿಸಿತು ಗೌರಿಗೆ. ಆದರೆ ಬೆಳಗ್ಗೆ ಬಂದ ತನ್ನ ಗೆಳತಿಯ ಪತ್ರ! ಚಿಕ್ಕಂದಿನಿಂದ ಕೂಡಿ ಆಡಿ ಬೆಳೆದ ಗೆಳತಿ ಅವಳಿಗಾದರೂ ತನ್ನ ಸಂಸಾರದಲ್ಲಿ ಒಡಕು ತಂದು ಹಾಕಿ ಏನಾಗಬೇಕಿದೆ. ಏನೋ ಒಂದು ಅನ್ನೊದಕ್ಕೆ ಅವಳಿಗೆ ತಾನೇ ಏನಾಗಿದೆ? ಕೈ ತುಂಬಾ ಸಂಬಳ ತರುವ ಹೆಸರಾಂತ ಡಾಕ್ಟರ್ ಪತಿ ಎರಡು ಮುದ್ದು ಮಕ್ಕಳು, ಹದಿನೈದು ವರ್ಷಗಳಿಂದಲೂ ಅಮೇರಿಕಾದಲ್ಲಿ ವಾಸ, ಎರಡು ಮೂರು ವರ್ಷಕ್ಕೊಮ್ಮೆ ಭಾರತಕ್ಕೆ ಭೇಟಿ, ಬಂದಾಗಲೆಲ್ಲ ಗಂಡನ ಬಗ್ಗೆ ಅಭಿಮಾನದ ಮಾತುಗಳು, ಹೀಗಿರುವಾಗ ತನ್ನ ಸಂಸಾರವನ್ನೊಡೆಯಲು ಅವಳಿಗ್ಯಾವ ಕೊರತೆ ಇದೆ. ತನ್ನ ಬದುಕಿನ ಬಗ್ಗೆ ಎಷ್ಟು ಕಳಕಳಿಯಿಂದ ಬರೆದಿದ್ದಾಳೆ. ಗೆಳತಿಯ ಪತ್ರ ಗೌರಿಯ ಮನಃಪಟಲದ ಮೇಲೆ ಮತ್ತೊಮ್ಮೆ ಮೂಡಿ ಬಂತು.


"ಗೌರಿ ಯಾವುದಕ್ಕೂ ದುಡುಕಬೇಡ, ತಾಳ್ಮೆ ಕಳೆದುಕೊಳ್ಳಬೇಡ, ನಿನ್ನ ಗಂಡನ ಸಮಸ್ಯೆ ಏನೆಂದು ನಿಧಾನವಾಗಿ ತಿಳಿದುಕೊಳ್ಳಲು ಪ್ರಯತ್ನಪಡು, ನಿನ್ನ ಗಂಡ ಯಾಕೆ ಹಾಗೆ ನಡೆದುಕೊಳ್ಳುತ್ತಿದ್ದಾರೆ ಅಂತ ಉಪಾಯವಾಗಿ ಕೇಳು, ಇಂಥ ಕೆಲಸಗಳಲ್ಲಿ ಬುದ್ಧಿವಂಥಿಕೆ ಬೇಕು. ಉಪಾಯವಾಗಿ ಹೆಜ್ಜೆ ಇಡಬೇಕು, ದುಡುಕಿದೆಯೋ ಕೆಲಸ ಕೆಡಬಹುದು ನೀನೇನೋ ನಿನ್ನ ಗಂಡ ಅಷ್ಟು ಒಳ್ಳೆಯವನು, ಇಷ್ಟು ಒಳ್ಳೆಯವನು ಅಂತ ಪ್ರತಿ ಪತ್ರದಲ್ಲೂ ಗಂಡನ ಗುಣಗಾನ ಮಾಡ್ತಿರ್ತಿಯಾ! ಯಾವ ಹುತ್ತದಲ್ಲಿ ಯಾವ ಹಾವೋ ಯಾರು ಬಲ್ಲರು ಗೌರಿ. ನಿನ್ನ ಗಂಡ ಎಷ್ಟು ಚೆನ್ನಾಗಿ ನಾಟಕವಾಡಬಲ್ಲರು ಎನ್ನುವುದಕ್ಕೆ ಮೈಸೂರಿನಲ್ಲಿ ಇನ್ನೊಂದು ಸಂಸಾರವಿದೆ ಎನ್ನುವುದನ್ನು ಮುಚ್ಚಿರುವದೇ ಸಾಕ್ಷಿ ಜೊತೆಗೆ ಅಲ್ಲೊಂದು ಜೀವಂತ ಸಾಕ್ಷಿ ಬೇರೆ ಇದೆ ಪ್ರೇಮದ ಕುರುವಾಗಿ ಗೆಳತಿಯ ಒಂದೊಂದು ಮಾತೂ ಕಣ್ಮುಂದೆ ಬಂದು ಗೌರಿಯನ್ನು ಅಣಕಿಸಿದಂತಾಯ್ತು, ನೆಟ್ಟ ನೋಟದಿಂದ ದಿಟ್ಟಿಸುತ್ತಿರುವ ಗೌರಿಯನ್ನು ಕಂಡು ರಘು ಅವಳನ್ನನಲ್ಲಾಡಿಸುತ್ತ "ಯಾಕೆ ಗೌರಿ ಏನಾಯ್ತು? ಹೀಗೆ ಏನೋ ಭೂತ ಹಿಡಿದವಳ ಹಾಗೆ ಕೂತಿದ್ದೀ" ಎಂದು ರಘು ಕೇಳೀದಾಗಲೇ ಗೌರಿಗೆ ಎಚ್ಚರ. ಗೌರಿ ಮನಸ್ಸಿನಲ್ಲಾಗುತ್ತಿದ್ದ ಒಳತೋಟಿಯನ್ನು ತಹಬಂದಿಗೆ ತಂದುಕೊಂಡು ಮನಸ್ಸನ್ನು ಗಟ್ಟಿಮಾಡಿಕೊಂಡು ಗಂಡನಿಂದ ಸತ್ಯ ಸಂಗತಿಯನ್ನು ಹೊರಡಿಸುವ ನಿರ್ಧಾರಕ್ಕೆ ಬಂದಳು.

"ಬೆಳ್ಳಗಿರೋದೆಲ್ಲ ಹಾಲು ಅಂತ ನಂಬೋದು ತಪ್ಪಲ್ಲವೇ?" ಗೌರಿ ಗಂಟಲನ್ನು ಮೃದುಗೊಳಿಸುತ್ತ ಕೇಳಿದಳು.

"ಈಗ್ಯಾಕೆ ಬೇಕು ಆ ಪ್ರಶ್ನೆ ಹೇಳು? ಅಂಥ ಪ್ರಸಂಗ ಬಂದಾಗ ಉತ್ತರಿಸೋಣವಂತೆ. ಏಳು ಮತ್ತೆ, ಬೇಗ, ಒಮ್ಮೆ ಡಾಕ್ಟರ್ ಹತ್ತಿರ ಹೋಗಿ ಬರೋಣ. ಈ ಕೆಟ್ಟ ತಲೆನೋವಿನಿಂದಾನೇ ಏನೇನೊ ಹುಚ್ಚು ಪ್ರಶ್ನೆಗಳು ಅಂತ ಕಾಣತ್ತೆ. ಹೀಗೆ ಇಂಥಾ ಕೆಟ್ಟ ತಲೆನೋವು ಬರೋದೇನು ಒಳ್ಳೆಯದಲ್ಲ. ಶುರುವಿನಲ್ಲೇ ಅದಕ್ಕೆ ಔಷದೋಪಚಾರ ಮಾಡುವುದು ಒಳ್ಳೆಯದು. ಇಲ್ಲದಿದ್ರೆ ಅದು ಉಲ್ಬಣವಾದ ಮೇಲೆ ತಡೆಯೋದು ಕಷ್ಟವಾದೀತು." ರಘು ಗೌರಿಯ ಗಲ್ಲ ಹಿಡಿದು ರಮಿಸುವ ದನಿಯಲ್ಲಿ ಹೇಳಿದ. "ಅಯ್ಯೋ ಡಾಕ್ಟ್ರು ಗೀಕ್ಟ್ರು ಯಾಕೆ ಬೇಕು ಹೇಳಿ. ಎಲ್ಲಾ ಒಂದೇ ಸಾರಿಗೆ ಮುಗಿದು ಹೋದರೆ ಒಳ್ಳೆಯದೇ ಆಯ್ತು ಬಿಡಿ. ನನ್ನ ಕಾಟವೂ ತಪ್ಪಿತು. ನಿಮ್ಮ ದಾರಿಯೂ ಸುಗಮವಾಯ್ತು."

ರಘುವಿಗೆ ಅವಳ ಮಾತಿನ ತಲೆಬುಡವೇ ಅರ್ಥವಾಗಲಿಲ್ಲ. ಆದರೆ ತಾನು ಬೆಳಗ್ಗೆ ಆಫೀಸಿಗೆ ಹೋದ ಮೇಲೆ ಯಾರೋ ಬಂದು ಅವಳ ತಲೆ ಕೆಡಿಸಿರಬೇಕು ಅನ್ನಿಸಿತು. ಸಿಟ್ಟು ಬಂದರೂ ರಘು ಅದನ್ನು ತಡೆದುಕೊಂಡು ಕೇಳಿದ. "ಗೌರಿ ಎಂಥ ಅಪದ್ಧ ಮಾತಾಡ್ತಿದ್ದೀಯಾ ಅಂತ ನಿನಗೆ ಪ್ರಜ್ಞೆ ಇದೆಯೇನು? ಹೇಳು ಯಾರು ಬಂದಿದ್ರು ಮನೆಗೆ ನಿನ್ನ ತಲೆಕೆಡಿಸೋಕೆ? ಇಲ್ಲಸಲ್ಲದ ಮಾತಾಡಿ ನನ್ನನ್ನು ಕೊಲ್ಲಬೇಕಂತ ಮಾಡಿದ್ದೀಯೇನು? ಇಲ್ಲ ನಿಂಗೆ ಹುಚ್ಚುಗಿಚ್ಚು ಹಿಡಿತೇನು?" ಮಚದಿಂದ ಧಿಗ್ಗನೆದ್ದು ಗೌರಿಯಿಂದ ದೂರ ಸರಿದು ಕುರ್ಚಿಯಲ್ಲಿ ಕುಳಿತ. ಈಗ ರಘುವಿಗೆ ಗೌರಿಯ ವರ್ತನೆಯ ಬಗ್ಗೆ ಅಸಹ್ಯ ಹುಟ್ಟಿತು. ಗೌರಿಗೂ ರಘುವಿನ ಬಗ್ಗೆ ಯಾವ ಆದರದ ಭಾವನೆಯೂ ಉಳಿದಂತೆ ಕಾಣಲಿಲ್ಲ. ಅಂತಲೇ "ಹೌದು ಅದೊಂದು ಉಳಿದಿರೋದು ಬಾಕಿ" ಎಂದು ವ್ಯಂಗ್ಯವಾಗಿ ನಕ್ಕಳು. "ಗೌರಿ ನಿನ್ನ ಈ ಪ್ರವೃತ್ತಿ ನನಗಿ ಹಿಡಿಸೋದಿಲ್ಲ. ಆದದ್ದಾದರೂ ಏನು ಅಂತ ನೇರವಾಗಿ ಹೇಳಿಬಿಡು. ಇಷ್ಟೂ ವರ್ಷಗಳಿಂದ ನಾ ಬೇರೆಯಲ್ಲ, ನೀ ಬೇರೆಯಲ್ಲ ಎಂದು ಭ್ರಮಿಸಿದ್ದೆನಲ್ಲ. ಅದಕ್ಕೆ ಉಡುಗೊರೆ ನಿನ್ನ ಈ ವ್ಯಂಗ್ಯ"

"ನಿಜ, ನಿಜ, ನನ್ನ ವ್ಯಂಗ್ಯ ಮಾತ್ರ ನಿಮ್ಮ ಹೃದಯಕ್ಕೆ ಘಾಸಿಮಾಡ್ತು ನೋಡಿ, ಆದರೆ ನಿಮ್ಮ ಈ ಡಬಲ್ ಗೇಮ್?"

"ಏನಂದೇ, ಏನಂದೆ ಗೌರಿ?"

"ಅಷ್ಟು ಯಾಕೆ ಕೂಗಾಡ್ತೀರಿ? ನಿಮ್ಮ ಗುಟ್ಟು ರಟ್ಟಾಯ್ತೆಂದೇ?"

"ಗೌರೀ..."

"ನೀವು ಕಿರಿಚಿ ಕಣ್ಣು ಬಿಟ್ಟರೆ ಹೆದರೋಕೆ ನಾನೇನು ಬೆಕ್ಕಿನ ಮರಿಯಲ್ಲ ತಿಳಿತೇನು. ನನ್ನನ್ನ ಮದುವೆಯಾದಾಗಿನಿಂದಲೂ ನೀವು ನಾಟಕವನ್ನೇ ಆಡಿಕೊಂಡು ಬಂದಿದ್ದೀರಿ ಅನ್ನೋದು ನನಗೆ ಈ ಬೆಳಗಿನವರೆಗೂ ತಿಳಿದಿರಲಿಲ್ಲ. ಎಂಥ ಅಮಾಯಕತನ, ಎಂಥ ಒಳ್ಳೆಯತನ, ಇದ್ದರೆ ಇಂಥ ಒಳ್ಳೆಯ ಗಂಡ ಇರಬೇಕು ಎಂದು ಬೀಗುತ್ತಿದ್ದುದು ನನ್ನ ಪೆದ್ದುತನ, ಅಮಾಯಕತನವಷ್ಟೆ"

"ಸಾಕು ಸಾಕು, ನಿನ್ನನ್ನ ನೀನು ಪ್ರಶಂಸೆ ಮಾಡಿಕೋಬೇಕಾಗಿಲ್ಲ. ಈಗ ನಾನು ನಿಂಗೇನು ದ್ರೋಹ ಮಾಡಿದ್ದೀನಿ ಅಂತ ಹೇಳು ಮೊದಲು. ಗೌರಿ ನೀನು ಎಲ್ಲ ಹೆಣ್ಣುಗಳಿಗಿಂತ ಭಿನ್ನ ಎಂದು ಹೆಮ್ಮೆಪಟ್ಟುಕೊಳ್ಳುತ್ತಿದ್ದೆ. ಅಂತೂ ಬಿಡಲಿಲ್ಲ ನೀನೂ ಕೂಡ ಹೆಣ್ಣಿನ ಸಂಶಯದ ಬುದ್ಧಿಯನ್ನು ತೋರಿಸೇಬಿಟ್ಟೆ."

"ನಿಜ. ನಾನೇನೋ ನನ್ನ ಹೆಣ್ಣು ಬುದ್ಧಿಯನ್ನು ಬಿಡಲಿಲ್ಲ. ಆದರೆ ನೀವು? ನನಗೆ ಮಾಡ್ತಿರೋ ಈ ವಂಚನೆ ಮಾತ್ರ ಸರಿ ಎನಿಸುತ್ತೇನೋ ನಿಮಗೆ?"

"ಗೌರಿ ಇಲ್ನೋಡು. ನಿನ್ನ ಈ ಒಗಟಿನ ಮಾತುಗಳು ಬೇಕಿಲ್ಲ ನಂಗೆ. ಹೇಳೋದಕ್ಕೆನಾದ್ರೂ ಇದ್ರೆ ನೇರವಾಗಿ ಹೇಳಿಬಿಡು. ವಂಚನೆಯಂತೆ ವಂಚನೆ."

ಗೌರಿ ಒಂದು ಕ್ಷಣ ಕೇಳಲೋ ಬೇಡವೋ ಎಂದುಕೊಳ್ಳುತ್ತ ಕೊನೆಗೆ "ನಿಮಗೆ ಮೊದಲೇ ಒಂದು ಮದುವೆಯಾಗಿತ್ತೇನು? ನಿಮಗೆ ಮೈಸೂರಿನಲ್ಲಿ ಒಬ್ಬ ಮಗನಿದ್ದಾನಂತೆ. ಆ ಸಂಗತಿ ನನ್ನಿಂದ ಮುಚ್ಚಿಟ್ಟಿದ್ದೇಕೆ? ನಿಮ್ಮ ಮಗನನ್ನು ನೋಡಿಕೊಳ್ಳುತ್ತಿರುವ ಆ ಸುಂದರ ವಿಧವೆ ರಾಜಲಕ್ಷ್ಮಿ - ನೀವು ಪ್ರೀತಿಯಿಂದ ಕರೆಯುವ ಆ ರಾಜೀ...ಹೂಂ ಅವಳನ್ನು ನೀವೇ ಮದುವೆ ಮಾಡಿಕೊಳ್ಳಬೇಕಂದಿದ್ದಿರಲ್ಲವೇ? ಆದರೆ ಆಗಲಿಲ್ಲ. ಅವಳ ತಾಯಿ ಪಟ್ಟು ಹಿಡಿದು ತನ್ನ ತಮ್ಮನಿಗೇ ತಂದುಕೊಂಡರು. ಪಾಪ ಮದುವೆಯಾದ ವರ್ಷದಲ್ಲೇ ಅವಳ ಗಂಡ ತೀರಿಕೊಂಡ. ನಿಮಗೂ ಮೊದಲೇ ಮದುವೆಯಾಗಿತ್ತೋ ಅಥವಾ ನಿಮ್ಮ ಆ ಮಗು ರಾಜಿಯದೇ ಆಗಿ, ಅವಳ ಮಾನ ಕಾಪಾಡಲು, ಲೋಕದ ಕಣ್ಣಿಗೆ ಮಣ್ಣೆರಚಲು ನೀವಿಬ್ಬರೂ ನಾಟಕವಾಡುತ್ತಿದ್ದೀರೋ. ಹೆತ್ತತಾಯಿ ಸಾಕುತಾಯಿ ಆಗಿಬಿಟ್ಟಳೇನೊ ಪಾಪ. ಈಗೇನು ಹೇಳ್ತೀರಿ? ಇದು ಗಂಡು ಹೆಣ್ಣಿಗೆ ಮಾಡುವ ವಂಚನೆಯಲ್ಲವೇ? ಹೇಳಿ ನಿಜವಲ್ಲವೇ ಈ ಸಂಗತಿ" ಎಂದು ಮನಸಿನಲ್ಲಿದ್ದುದನ್ನೆಲ್ಲಾ ಕಕ್ಕಿಬಿಟ್ಟು, ಎದ್ದು ಹೋಗಿ ತನ್ನ ಗೆಳತಿಯ ಪತ್ರವನ್ನು ತಂದು ರಘುವಿನ ಮುಂದೆ ಎಸೆದು, ಗೌರಿ ಒಂದು ಕ್ಷಣ ಗಂಡನತ್ತ ಕ್ರೂರವಾಗಿ ನೋಡಿದಳು.


ಗೌರಿಯ ಮಾತಿನಿಂದ ರಘುವಿಗೆ ಸ್ಪಷ್ಟವಾಯ್ತು. ಅವಳಿಂದ ಮುಚ್ಚಿಟ್ಟಿದ್ದ ಅನೇಕ ಸಂಗತಿಗಳು ಈಗವಳಿಗೆ ತಿಳಿದುಹೋಗಿದೆ. ಇನ್ನು ನಿಜದ ಸಂಗತಿಗಳನ್ನು ಮುಚ್ಚಿಟ್ಟು ಫಲವಿಲ್ಲ. ಎಲ್ಲವನ್ನೂ ಹೇಳಿಬಿಡುವುದೇ ಒಳಿತು ಎಂದುಕೊಳ್ಳುತ್ತ ರಘು "ಗೌರಿ ನೀನು ಹೇಳುತ್ತಿರುವ ಮಾತು ಸತ್ಯವೂ ಹೌದು, ಸುಳ್ಳೂ ಹೌದು, ಕಾಲ ಬಂದಾಗ ಎಲ್ಲಾ ವಿಷಯವನ್ನೂ ನಿನಗೆ ತಿಳಿಸೋಣವೆಂದಿದ್ದೆ. ಅದಕ್ಕೆ ಕಾರಣವೂ ಇದೆ. ಆದರೆ ಒಂದು ಮಾತು. ನನ್ನ, ರಾಜಿಯ ವಿಷಯದಲ್ಲಿ ನೀನು ಅಷ್ಟು ಕೀಳಾಗಿ ಮಾತನಾಡಬಹದೆಂದು ನಾನು ತಿಳಿದಿರಲಿಲ್ಲ. ರಾಜಿ ಒಬ್ಬ ದೇವತೆ. ನನ್ನ, ರಾಜಿಯ ವಿಷಯದಲ್ಲಿ ನೀನು ಇಷ್ಟು ಕೀಳಾಗಿ ಮಾತನಾಡಬಹುದೆಂದು ನಾನು ತಿಳಿದಿರಲಿಲ್ಲ. ರಾಜಿ ಒಬ್ಬ ದೇವತೆ. ನನ್ನ ರಾಜಿಯ ಬಾಂಧವ್ಯ ನೀನಗರ್ಥವಾಗಲಾರದು. ಅವಳು ಎಲ್ಲರ ಪ್ರತಿಭಟನೆಯನ್ನೆದುರಿಸಿ ಒಂದು ಮಗುವಿನ ತಾಯಿಯಾಗಿದ್ದಾಳೆ. ಎಷ್ಟು ಹೆಣ್ಣು ಮಕ್ಕಳಿಗೆ ಅಷ್ಟು ಧೈರ್ಯವಿರುತ್ತದೆ ಹೇಳು? ನಿಜ ಹೇಳಬೇಕೆಂದರೆ ನಿನಗೇ ಅಂಥ ಮನಸ್ಸಿಲ್ಲ. ಗೌರಿ ನಿನಗೆ ನೆನಪಿದೆಯೇನು ನಮಗೆ ಮದುವೆಯಾದ ವರ್ಷ - ನಾವು ದೆಹಲಿಯ ಲಕ್ಷ್ಮೀನಾರಾಯಣ ದೇವಸ್ಥಾನವನ್ನು ನೋಡಿ ನಂತರ ಬುದ್ಧದೇವ ಪಾರ್ಕ್ ಗೆ ಬಂದೆವು. ಆ ಪಾರ್ಕ್ ಬಳಿ ಬಂದೆವು. ಆ ಪಾರ್ಕ್ ಬಳಿ ಒಂದು ಮರದ ಕೆಳಗೆ ಆಗ ತಾನೇ ಹುಟ್ಟಿದ್ದ ಒಂದು ಮಗುವನ್ನು ಯಾರೋ ಹಾಕಿ ಹೋಗಿದ್ದರು. "ಪಾಪ ಮಗು ಚಳಿಯಲ್ಲಿ ಹೇಗೆ ನಡುಗುತ್ತಿದೆ ನೋಡು. ಮಗುವನ್ನು ಎತ್ತಿಕೊಂಡು ಹೋಗಿ ನಾವೇ ಸಾಕೋಣವಾ" ಎಂದಿದ್ದಕ್ಕೆ ನೀನೇನೆಂದೆ ಗೌರಿ ನೆನಪಿದೆಯೇನುನಿನಗೆ?


"ಥೂ ಅದೊಂದು ಪೀಡೆ. ಯಾರ ಪಾಪದ ಪಿಂಡವೋ ಏನೋ, ನಾವಂತೂ ಮದುವೆಯಾಗಿ ಒಂದು ವರ್ಷವಷ್ಟೇ ಆಗಿದೆ. ನಮಗೇನು ಮಕ್ಕಳಾಗೋ ವಯಸ್ಸು ಮೀರಿ ಹೋಯ್ತೇನು? ಎಂದು ಹೇಳಿ ನನ್ನ ಕೈ ಹಿಡಿದು ಎಳೆದುಕೊಳ್ಳಲಿಲ್ಲವೇ? ಆ ವೇಳೆಗೆ ಯಾರೋ ಪುಣ್ಯಾತ್ಮರು ಬಂದು, ಆ ಮಗುವನ್ನು ಕಂಡು ಎತ್ತಿಕೊಂಡು ಹೋದರು. ನನ್ನ ಮನಸ್ಸಿಗೆ ಸಮಾಧಾನವಾಯ್ತು. ಆ ಘಟನೆ ನೆನಪಾಯ್ತು ಹೇಳಿದೆ ಅಷ್ಟೆ"


ಸರಿ ಸರಿ ಆದಕ್ಕೂ ನಿಮಗೆ ಮದುವೆಯಾಗಿದ್ದ ವಿಷಯಕ್ಕೂ , ಮಗನಿರುವ ವಿಷಯಕ್ಕೂ ಏನ್ ಸಂಬಂಧವಿದೆ ಹೇಳಿ? ಮಹಾ ಕರುಣಾಳು. ನಾನು ಈಗ ಕೇಳ್ತಿರೋದು ಅದರ ನಿಜವಾದ ತಾಯಿ ನಿಮ್ಮ ಸತ್ತ ಹೆಂಡತಿಯೋ ಅಥವಾ _ _ _ _

"ಏನು ಅಥವಾ? ಗೌರಿ ನೀನು ಮತ್ತೆ ಮತ್ತೆ ರಾಜೀ ಸುದ್ಧಿ ತಂದರೆ ನಾನು ಸುಮ್ಮನಿರೋಲ್ಲ. ಅವಳ ಬಗ್ಗೆ ಹೊಲಸು ಮಾತಾಡೋದನ್ನು ನಾನು ಸಹಿಸೋಲ್ಲ"

"ಸರಿ ಬಿಡಿ ನಿಮ್ಮಾ, ರಾಜಿಯ ಬಾಂಧವ್ಯದ ಸತ್ಯಾಸತ್ಯತೆ ಏನೋ ಆ ಭಗವಂತನೇ ಬಲ್ಲ. ಆದರೂ ಈಗ ಒಂದು ಮಾತನ್ನಂತೂ ಕೇಳಲೇಬೇಕಾಗಿದೆ ನನ್ನ ಮನಸ್ಸಮಾಧಾನಕ್ಕಾಗಿ. ಇಲ್ಲದಿದ್ದರೆ ನನಗೆ ನಿಜವಾಗಿ ಹುಚ್ಚೇ ಹಿಡಿದೀತು. ನೀವು ಯಾವ ಮಾತನ್ನು ಮುಚ್ಚಿಟ್ಟಿದ್ದೀರೋ ಅದನ್ನೇ ನಾನೀಗ ತಿಳಿಯಬೇಕಿದೆ. ನಿಜ ಹೇಳಿ ನಿಮಗೆ ಮದುವೆಯಾಗಿದ್ದ ಮಾತು ನಿಜವೇ? ಅಥವಾ ನಿಮ್ಮಾ,ರಾಜಿಯ ಬಾಂಧವ್ಯವನ್ನು ಮುಚ್ಚಿಡುವ ಸಲುವಾಗಿ ಆಡಿದ ನಾಟಕವೋ? ಒಳ್ಳೆಯತನದ ಸೋಗಿನಲ್ಲಿ ನೀವು ಇಷ್ಟು ಮೋಸ ಮಾಡಬಹುದೆಂದು ನಾನು ಕನಸು ಮನಸ್ಸಿನಲ್ಲೂ ಎಣಿಸಿರಲಿಲ್ಲ. ಅಬ್ಬಬ್ಬಬ್ಬಬ್ಬಾ ಎಂಥಾ ಕಪಟ ನಾಟಕ. ಯಾವ ಹುತ್ತದಲ್ಲಿ ಯಾವ ಹಾವೋ?" ಎನ್ನುತ್ತಲೇ ಬಿಕ್ಕತೊಡಗಿದಳು ಗೌರಿ.


"ಗೌರಿ ಸತ್ಯ ಸಂಗತಿ ತಿಳಿಯದೆ, ನಿನ್ನ ಗೆಳತಿ ಬರೆದ ಪತ್ರದ ಆಧಾರದ ಮೇಲೆ ನೀನೇನೇನೋ ತೀರ್ಮಾನ ಮಾಡಿಕೊಂಡರೆ ನಾನೇನೂ ಮಾಡುವಂತಿಲ್ಲ. ಇಷ್ಟರಲ್ಲೇ ನಿನಗೆ ಸತ್ಯ ಸಂಗತಿ ತಿಳಿಯುತ್ತದೆ. ಇನ್ನೊಂದಷ್ಟು ದಿನ ತಡೆದುಕೋ ಮೈಸೂರಿಗೆ ಹೋಗೋ ಏರ್ಪಾಡು ಮಾಡ್ತೀನಿ. ನಿನ್ನ ಸಂಶಯ ಪಿಶಾಚಿಗೆ ಅಲ್ಲಿ ಉತ್ತರ ಸಿಗುತ್ತೆ. ನಿನ್ನಿಂದಾಗಿ ಮಗಳ ಮುಖ ನೋಡು ಹೇಗಾಗಿದೆ" ಎಂದ ಬೇಸರದಿಂದ.


ಗೌರಿ ಅಷ್ಟಕ್ಕೂ ಬಿಡದೆ "ಅಂದ್ರೆ ಆ ಹುಡುಗ ನಿಮ್ಮ ಮಗನೇ ತಾನೇ?"

"ಹೌದು ಗೌರಿ ಅವನು ನನ್ನ ಮಗ, ನನ್ನ ಮಗ" ರಘುವಿಗೆ ತಲೆ ಚಿಟ್ಟುಹಿಡಿಯುತ್ತಿತ್ತು.

"ಅವನ ಎಲ್ಲಾ ಖರ್ಚು ನಿಮ್ಮದೇ ತಾನೇ"

"ಅವನು ನನ್ನ ಮಗ ಎಂದ ಮೇಲೆ. ಆ ಪ್ರಶ್ನೆಯನ್ನು ಕೇಳುವ ಅವಶ್ಯಕತೆಯೇ ಇಲ್ಲ"

"ನೀವು ಸದಾ ಟೂರ್, ಟೂರ್ ಅಂತ ಹೋಗ್ತಿದ್ದಿದ್ದು ಅವನನ್ನ, ರಾಜೀನ ನೋಡೋದಕ್ಕೆ ತಾನೇ?"

"ಹೌದು, ಹೌದು, ಹೌದು" ರಘುವಿಗೆ ರೇಗಿಹೋಗಿತ್ತು ಕೆದಕಿ ಕೇಳುವ ಪ್ರಶ್ನೆಗಳಿಗೆ.

"ಆ ಮಗುವನ್ನು ಇಲ್ಲೇ ಬೆಳೆಸಬಹುದಿತ್ತಲ್ಲ, ಒಂದು ವೇಳೆ ನೀವು ಹೇಳುವ ಮಾತೇ ಸತ್ಯವಾಗಿ ರಾಜಿಯ ಮಗುವಲ್ಲದಿದ್ದರೆ."

"ಇಲ್ಲೇ ಬೆಳೆಸಬಹುದಾಗಿತ್ತು. ಆದರೆ ನನಗೊಂದು ಮಗುವಿದೆ ಎಂದು ತಿಳಿದಿದ್ದರೆ ನೀನು ನನ್ನನ್ನು ಮದುವೆಯೇ ಆಗ್ತಿರಲಿಲ್ಲ. ಸಂಸಾರದಲ್ಲಿ ವಿರಸ ತಂದುಕೊಳ್ಳುವ ಇಚ್ಛೆ ನನಗಿರಲಿಲ್ಲ, ಅದಕ್ಕೆ ಹೇಳಲಿಲ್ಲ."

"ಈಗೇನಾದದ್ದು ನಿಮ್ಮ ಗುಟ್ಟೆಲ್ಲ ರಟ್ಟಾಯ್ತಲ್ಲ. ನಿಮ್ಮ ಯೋಗ್ಯತೆ ಏನಂತ ತಿಳೀತಲ್ಲ. ನನ್ನನ್ನ ಮೋಸ ಮಾಡಿಯಾದರೂ ಮದುವೆಯಾಗುವ ಅವಶ್ಯಕತೆ ಏನಿತ್ತು?"

"ನಾನು ನಿನಗೆ ಮೋಸ ಮಾಡಿಲ್ಲ."

"ಹೌದು ನೀವು ಸತ್ಯ ಹರಿಶ್ಚಂದ್ರ" ಎನ್ನುತ್ತ ಗೌರಿ ಕೋಣೆಯಿಂದೆದ್ದು ಹೊರಟು ಹೋದಳು.


ಅಂದಿನಿಂದ ಗೌರಿಗೆ ಗಂಡನ ಬಗ್ಗೆ ಎಲ್ಲಿಲ್ಲದ ತಿರಸ್ಕಾರ ಮೂಡಿತು. ಗಂಡ ಮನೆಯಲ್ಲಿಲ್ಲದ ಸಮಯವನ್ನು ಸಾಧಿಸಿ ಅವನ ಬೀರುಗಳನ್ನೆಲ್ಲ ಶೋಧಿಸಿದಳು. ಡ್ರಾಯರಲ್ಲಿದ್ದ ರಾಜಿಯ ಪತ್ರಗಳು, ಅವನ ಮಗನ ಪತ್ರಗಳು, ಫೋಟೋಗಳು (ಎಲ್ಲಾ ಅವನ ಆಫೀಸ್ ವಿಳಾಸಕ್ಕೆ ಬಂದದ್ದು) ಎಲ್ಲಾ ದೊರತವು. ರಘು ತನ್ನ ಮಗನೊಂದಿಗೆ ತೆಗೆಸಿಕೊಂಡಿದ್ದ ಫೊಟೋಗಳೇ ಅವೆಲ್ಲ. ಗಂಡ ಯಾಕಿಂಥ ಮೋಸ ಮಾಡಿದ ಎಂಬುದಂತೂ ಗೌರಿಗೆ ಅರ್ಥವಾಗದ ಬಿಡಿಸಲಾಗದ ಒಗಟಾಯ್ತು.

ಗೌರಿ ಮೈಸೂರಿಗೆ ಹೋಗಲು ಮೆಟ್ಟಿಂಗಾಲಿನಲ್ಲೇ ನಿಂತಿದ್ದಳು. ಗಂಡನದು ಹೇಗೂ ಸ್ವಂತ ಉದ್ಯಮ. ಆರಾಮವಾಗಿ ರಜೆ ತೆಗೆದುಕೊಳ್ಳಹುದೆಂದೇ ಭಾವಿಸಿದ್ದಳು. ಇವರಿಬ್ಬರ ಮೈಮನಸ್ಯದ ನಡುವೆ ರಜನಿಗೆ ಮಂಕು ಕವಿದಂತಾಗಿತ್ತು. ನಗುನಗುತ್ತಿದ್ದ ನಂದಗೋಕುಲ ಮೌನಕ್ಕೆ ಶರಣಾಗಿತ್ತು.


ಮೈಸೂರಿಗೆ ಹೋಗುವ ದಿನ ಬಂದೇಬಿಟ್ಟಿತು. ಮಗಳು ರಜನಿಯನ್ನು ಬಂಧುಗಳ ಮನೆಯಲ್ಲಿ ಬಿಟ್ಟು ಇಬ್ಬರೂ ಊರಿಗೆ ಹೊರಟರು ಗಂಡನ ಗುಟ್ಟು ಬಯಲಾಗುವುದೆಂಬ ಕೆಟ್ಟ ಕುತೂಹಲ ಗೌರಿಗೆ. ಸಧ್ಯ ಈ ಸಮಸ್ಯೆ ಆದಷ್ಟು ಬೇಗ ಪರಿಹಾರವಾದರೇ ಸಾಕೆಂಬ ಮನಸ್ಥಿತಿ ರಘುವಿಗೆ. ಮೈಸೂರು ಸೇರಿದಾಗ ಇಬ್ಬರಿಗೂ ಒಂದು ರೀತಿಯ ನೆಮ್ಮದಿ. ರಾಜಿಯ ಮನೆಗೇ ನೇರ ಹೋಗಬೇಕೆಂದು ಗೌರಿ ಹಠ ಹಿಡಿದುದರಿಂದ ವಿಧಿ ಇಲ್ಲದೆ ರಘು ಗೌರಿಯ ಜೊತೆ ರಾಜಿಯ ಮನೆಗೆ ಬಂದ.


ರಘು ರಾಜಿಯ ಮನೆಯ ಗೇಟು ತೆಗೆದು ಒಳಗೆ ಹೋಗುವುದಕ್ಕೂ ಮನೆಯ ಒಳಗಿಂದ ಹದಿನೆಂಟರ ಸುಂದರ ಯುವಕ ಟೆನ್ನಿಸ್ ರಾಕೆಟ್ ಹಿಡಿದು ಹೊರಗೆ ಬರುವುದಕ್ಕೂ ಸರಿಹೋಯಿತು. ಅವನನ್ನು ಕಂಡ ರಘುವಿಗೆ ಪ್ರೀತಿ ಉಕ್ಕಿ ಬಂತು.

"ಸತೀಶ ಚೆನ್ನಾಗಿದ್ದೀಯ" ಎನ್ನುವುದಕ್ಕೂ ಆ ಹುಡುಗ "ಅಪ್ಪಾ" ಎನ್ನುತ್ತ ರಘುವನ್ನು ತಬ್ಬುವುದಕ್ಕೂ ಸರಿಹೋಯ್ತು. ಗೌರಿ ಯಾವುದೋ ಅನಿಷ್ಟವನ್ನು ಕಂಡಂತೆ ಆ ಹುಡುಗನ ಕಡೆ ಕೆಕ್ಕರಿಸಿ ನೋಡಿದಳು. ಸತೀಶ ಗೌರಿಯನ್ನು ಕಂಡು "ಆಂಟೀ ಅಲ್ವಾ ಅಪ್ಪಾ" ಎನ್ನುತ್ತ "ಆಂಟೀ ಚೆನ್ನಾಗಿದ್ದೀರಾ? ಅಪ್ಪ ಹೇಳ್ತಾ ಇದ್ರು ನಿಮ್ಮನ್ನು ಕರೆದುಕೊಂಡು ಬರ್ತೀನಿ ಅಂತ. ಅಮ್ಮ ಒಳಗಿದ್ದಾಳೆ ಬನ್ನಿ" ಎನ್ನುತ್ತ ಗೌರಿಯ ಪಾದಮುಟ್ಟಿ ನಮಸ್ಕರಿಸಿ, ಮನೆಯ ಒಳಗೆ ಹಾರಿಹೋದ ಸತೀಶ.


ಮಗನ ಸಂಭ್ರಮದ ಕೂಗನ್ನು ಕೇಳಿ ರಾಜಿ ಹೊರಗೆ ಬಂದಳು. ರಘು ಹಾಗೂ ಅವನ ಪತ್ನಿಯನ್ನು ಕಂಡು ರಾಜಿಗೆ ಸಂತೋಷ, ಜೊತೆಗೆ ಆಶ್ಚರ್ಯ ಎರಡೂ ಏಕ ಕಾಲದಲ್ಲಾಯ್ತು. "ಅಲ್ಲಾ ರಘೂ ನೀನು, ನಿನ್ನ ಹೆಂಡತಿ ಬರ್ತೀರ ಅಂತ ಮೊದಲೇ ನಂಗೆ ತಿಳಿಸಬಾರದಿತ್ತೇನು?"

"ಓಹೋ ದಂಪತಿಗಳನ್ನು ಆನೆ ಮೇಲೆ ಮೆರವಣಿಗೆ ಮಾಡಿಸ್ತಿದ್ದೆಯೇನೋ" ಎಂದು ನಗೆಯಾಡಿದನು ರಘು, ಗೌರಿ ಗಂಭೀರವಾಗಿದ್ದಳು.

ರಾಜಿ ಗೌರಿಯನ್ನು ಕಂಡಿದುದ್ದು ರಘು, ಗೌರಿ ಮದುವೆಯಾದಾಗಲಷ್ಟೇ. ಆಗ ಗೌರಿ ಇಪ್ಪತ್ನಾಲ್ಕರ ಚೆಲುವೆ. ತೆಳ್ಳಗೆ, ಬೆಳ್ಳಗೆ ಮುದ್ದಾಗಿದ್ದಳು. ಹೆಸರಿಗೆ ತಕ್ಕಂತೆ ಗೌರಿಯೇ ಎಂದುಕೊಂಡಿದ್ದಳು. ಈಗ ಗೌರಿ ಸ್ವಲ್ಪ ದಪ್ಪಗಾಗಿದ್ದರೂ, ಈ ನಡು ವಯಸ್ಸಿನಲ್ಲೂ ಎಂಥಾ ಲಕ್ಷಣವಾದ ಹೆಂಗಸು" ಎಂದು ಮನಸಿನಲ್ಲೇ ಅಂದುಕೊಂಡಳು ರಾಜಿ.

"ರಘು ಹೇಗಿದ್ದೀ? ಈ ಸಾರಿ ನೀನು ಬರದೆ ಬಹಳ ದಿನಗಳೇ ಆಯ್ತಲ್ಲ ಯಾಕೆ? ಹೋಗಲಿ ಬಿಡು, ಅಂತೂ ನಿನ್ನ ಹೆಂಡತಿಯನ್ನು ಕರೆದುಕೊಂಡು ಬಂದೆಯಲ್ಲ. ನನಗೆ ತುಂಬಾ ಸಂತೋಷವಾಯ್ತು. ಗೌರಿ ಬನ್ನಿ ಒಳಗೆ" ಎಂದು ಕರೆದ ರಾಜಿಯ ಮಾತಿನಲ್ಲೂ ತಪ್ಪು ಹುಡುಕಲು ಹೊರಟ ಗೌರಿಗೆ, ರಾಜಿಯ ನಡವಳಿಕೆ ಸರಳವಾಗೇ ಕಂಡಿತು. ಸತೀಶ ಇವರುಗಳ ಮಾತುಗಳನ್ನು ಕೇಳುತ್ತಾ ಅಪ್ಪನನ್ನು ತಬ್ಬಿಕೊಂಡೇ ನಗುತ್ತಾ ನಿಂತಿದ್ದ.


ಎಲ್ಲರೂ ಮನೆಯ ಹಜಾರಕ್ಕೆ ಹೋಗುತ್ತಿದ್ದ ಹಾಗೇ ಪ್ರಯಾಣದ ಆಯಾಸದಿಂದ ಬಳಲಿದ್ದ ಗೌರಿ, ಕುರ್ಚಿಯಲ್ಲಿ ದೊಪ್ಪೆಂದು ಕುಳಿತುಕೊಂಡಳು. ಸತೀಶನಂತೂ ಸೋಫಾದಲ್ಲಿ ಅಪ್ಪನಿಗೆ ಅಂಟಿಕೊಂಡೇ ಕೂತಿದ್ದ. ಅಡಿಗೆ ಮನೆಗೆ ಹೋದ ರಾಜಿ ಎಲ್ಲರಿಗೂ ಬಿಸಿ ಬಿಸಿ ಕಾಫಿ ಮಾಡಿ ತಂದುಕೊಟ್ಟಳು. ರಾಜಿಯ ಸರಳತನವನ್ನು ಕಂಡೂ ಗೌರಿಗೆ ಮಾತ್ರ ಸಂಶಯದ ಕುಟ್ಟೀಹುಳು ಕೊರೆಯವುದು ಬಿಡಲಿಲ್ಲ. ಅಂತಹ ತಿಳಿ ವಾತಾವರಣದ ನಡುವೆ ಗೌರಿ ದಪ್ಪ ಮುಖವನ್ನು ಹಾಕಿ ಕೂತುಕೊಂಡದ್ದು ರಘುವಿಗೆ ಬೇಸರವಾಯ್ತು. ರಾಜಿಯೊಡನೆ ಜಗಳವಾಡಲು ಬಂದ ಗೌರಿಗೆ ಅಲ್ಲಿ ಸತೀಶ ಇರುವುದು ಮುಜುಗರವಾಯ್ತು. ರಘು ಗೌರಿಯ ಇಂಗಿತವನ್ನರಿತವನಂತೆ "ಸತೀಶ್ ನೀನು ಆಟವಾಡಿ ಬಾ, ಹೇಗೂ ನಾವಿನ್ನೂ ಇಲ್ಲೇ ನಾಲ್ಕು ದಿನ ಇದ್ದು ಹೋಗಲು ಬಂದಿದ್ದೇನೆ" ಎಂದು ಸತೀಶನ ಬೆನ್ನುತಟ್ಟುತ್ತ ಕಳುಹಿಸಿದ. ಆದರೆ ಮುಖ ದಪ್ಪಗೆ ಮಾಡಿಕೊಂಡು ಕುಳಿತ ಗೌರಿ, ಮೌನದ ಮೊರೆಹೊಕ್ಕ ರಘುವನ್ನು ಕಂಡು ರಾಜಿಗೆ ಏನೋ ಇಬ್ಬರ ನಡುವೆ ತೀವ್ರ ಮನಃಸ್ತಾಪವಾಗಿರಬೇಕೆಂದೂಹಿಸಿದಳು.


ಅವರಿಬ್ಬರನ್ನೂ ಮಾತಿಗೆಳೆಯುವ ಸಲುವಾಗಿ ರಾಜಿ "ಗೌರಿ ನೀವು K.R.S, ಚಾಮುಂಡಿಬೆಟ್ಟ ಎಲ್ಲಾ ನೋಡಿ ಬಹಳ ವರ್ಷಗಳಾಗಿರಬೇಕಲ್ಲವೇ? ಈ ಸಾರಿ ಎಲ್ಲರೂ ಕೂಡಿ ಹೋಗಿ ಬರೋಣ" ಎಂದಳು.

"ಎರಡೂ ಯಾಕೆ ಹೇಳಿ? ಯಾವುದಾದರೂ ಒಂದು ಸಾಲದೆ"

"ಹಾಗೆಂದರೆ" ಎಂದು ಅರ್ಥವಾಗದವಳಂತೆ ರಾಜಿ. ಗೌರಿಯತ್ತ ನೋಡಿದಳು.

"K.R.S ಆದರೆ ಕಾವೇರಿಯಲ್ಲಿ ಮುಳುಗಬಹುದು. ಚಾಮುಂಡಿ ಬೆಟ್ಟವಾದರೆ ಮೇಲಿಂದ ಉರುಳಬಹುದು" ಎಂದಳು ಗೌರಿ ವ್ಯಂಗ್ಯವಾಗಿ ರಾಜಿಯನ್ನೇ ನಿಟ್ಟಿಸುತ್ತ. ಇಂಥ ಉತ್ತರವನ್ನು ನಿರೀಕ್ಷಿಸದಿದ್ದ ರಾಜಿ ತಬ್ಬಿಬ್ಬಾದಳು. ರಘುವಿಗೆ ರೇಗಿಹೋಯಿತು.


"ನಿನ್ನ ಸಂಶಯ ಪಿಶಾಚಿಯನ್ನು ಕಳೆಯೋದಕ್ಕೇ ನಾನಿಲ್ಲಿ ನಿನ್ನನ್ನು ಕರೆತಂದಿರೋದು, ನಿನ್ನ ಮನಸ್ಸಿನಲ್ಲೇನಿದೆ ಅಂತ ನನಗೆ ನೀನೇ ತಿಳಿಸಿದ್ದೀಯಲ್ಲ. ಇವತ್ತು ಅದು ಬಗೆಹರಿಯಲೇಬೇಕು. ಅದಕ್ಕೋಸ್ಕರಾನೇ ನನ್ನ ಗೆಳೆಯ ಚೇತನನಿಗೂ ಪತ್ರ ಬರೆದು, ಫೋನ್ ಮಾಡಿ ಇಲ್ಲಿ ಬರೋದಕ್ಕೆ ತಿಳಿಸಿದ್ದೀನಿ. ಇನ್ನೇನು ಅವನೂ ಬರ್ತಾನೆ. ಅದುವರೆಗೂ ನೀನು ಸ್ವಲ್ಪ ಬಾಯ್ಮುಚ್ಕೊಂಡು ಕೂತರೆ ಕ್ಷೇಮ. ಸತ್ಯ ಸಂಗತಿಗಳನ್ನು ತಿಳಿಯದೇ ಬಾಯಿಗೆ ಬಂದಂತೆ ಮಾತಾಡದೆ ಬಾಯ್ಮುಚ್ಕೊಂಡಿರು" ಎಂದು ಖಾರವಾಗಿ ಹೇಳಿದ ರಘುವಿನ ಮಾತಿಗೆ ರಾಜಿ, ಗೌರಿ ಇಬ್ಬರೂ ಒಂದು ಕ್ಷಣ ಬೆದರಿದರು. ರಘು ಅಷ್ಟು ಗಟ್ಟಿಯಾಗಿ ಮಾತಾಡಿದ್ದನ್ನು ಅವರಿಬ್ಬರೂ ಆವರೆಗೂ ಕೇಳಿರಲಿಲ್ಲ. ತಿಂಡಿ ತರುವ ನೆಪದಲ್ಲಿ ರಾಜಿ ಅಡಿಗೆ ಮನೆಯತ್ತ ನಡೆದಳು.


ಮತ್ತೆ ಸ್ಮಶಾನ ಮೌನ ಗೌರಿ, ರಘುವಿನ ನಡುವೆ, ರಾಜಿ ತಿಂಡಿ ಜೊತೆ ಸೆಕೆಂಡ್ ಡೋಸ್ ಕಾಫಿಯನ್ನು ತರುವ ವೇಳೆಗೆ, ಗೆಳೆಯ ಚೇತನನೂ ಬಂದ. ರಘು, ಗೌರಿಯನ್ನೊಮ್ಮೆ ನೋಡಿದ ಚೇತನನಿಗೆ, ವಾತಾವರಣ ಏಕೋ ಬಿಗಡಾಯಿಸಿದೆ ಅನ್ನಿಸಿತು. ಆದರೂ ಅದನ್ನು ಸ್ವಲ್ಪವೂ ತೋರಗೊಡದೆ ರಘುವಿನ ಬೆನ್ನ ಮೇಲೆ ಪ್ರೀತಿಯಿಂದ ಕೈಯ್ಯಾಡಿಸುತ್ತ "ಎಷ್ಟು ಹೊತ್ತಾಯ್ತಮ್ಮಾ ರಘು ನೀ ಬಂದು ಒಂದು ಗಂಟೆ? ಎರಡು ಗಂಟೆ? ಎಷ್ಟಾದರೂ ಇರಲಿ ಬಿಡು. ನೋಡು ನಿನ್ನ ಆಜ್ಞಾಪಾಲಕನಾಗಿ ಎಷ್ಟು ಕರೆಕ್ಟ್ ಟೈಮಿಗೆ ನಾನು ಬಂದೆ. ಏನಂತೀಯಮ್ಮಾ ರಘು" ಎನ್ನುತ್ತ ಗೆಳೆಯನ ಮುಖ ನೋಡಿದ ಚೇತನ. ರಘು ಶುಷ್ಕವಾಗಿ ನಕ್ಕ. ಅಷ್ಟರಲ್ಲಿ ಸತೀಶನ ಪೋನ್ ಬಂತು ರಾಜಿಗೆ. "ಅಮ್ಮಾ ಗೆಳೆಯರೊಂದಿಗೆ ಸಿನಿಮಾಕ್ಕೆ ಹೋಗಿ ಬರ್ತೀನಿ. ರಾತ್ರಿ ಬರೋದು ತಡವಾಗತ್ತೆ." ಎಂದ ಸತೀಶನ ಮಾತು, ಆ ಸಂದರ್ಭದಲ್ಲಿ ಎಲ್ಲರಿಗೂ ಅನುಕೂಲವೇ ಆಯಿತು.


ಇಂಥ ಘಳಿಗೆ ಯಾವಾಗಲಾದರೊಮ್ಮೆ ಬರುತ್ತದೆಂಬ ಊಹೆ ರಘು, ಚೇತನ್ ಇಬ್ಬರಿಗೂ ಇದ್ದೇ ಇತ್ತು. ರಘುವಿನ ಪತ್ರದ ಮೇರೆಗೆ, ಅಂಥ ಸಮಸ್ಯೆಯ ಪರಿಹಾರಕ್ಕೆ ಎಲ್ಲ ವಿಷಯಗಳನ್ನೂ ಸಂಗ್ರಹಿಸಿಕೊಂಡು ಬಂದಿದ್ದ. ಚೇತನ ಬಂದದ್ದು ರಘುವಿಗೆ ಜೀವ ಬಂದ ಹಾಗಾಯ್ತು. ಕಾರಣ ಸಮಸ್ಯೆಯ ಉತ್ತರ ಚೇತನನ ಬಳಿ ಇತ್ತು. ರಘು ತನ್ನ ಹಾಗೂ ಗೌರಿಯ ನಡುವೆ ನಡೆದ ವಾಗ್ಯುದ್ಧದ ಬಗ್ಗೆ ಚೇತನನಿಗೆ ವಿಷದವಾಗಿ ಬರೆದು, "ಸಮಸ್ಯೆಗೆ ಸಂಬಂಧಪಟ್ಟ ಎಲ್ಲ ಮಾಹಿತಿಯೊಂದಿಗೆ ಇಂಥ ದಿನ ರಾಜಿ ಮನೆಗೆ ಬಾ, ನಾನೂ ಗೌರಿಯನ್ನು ಕರೆತರುತ್ತೇನೆ" ಎಲ್ಲ ಪ್ರಕಾರವಾಗಿಯೇ ಸಮಯಕ್ಕೆ ಸರಿಯಾಗಿ ಚೇತನ ರಾಜಿಯ ಮನೆಗೆ ಬಂದದ್ದು.


"ಚೇತನ ಸತ್ಯ ಸಂಗತಿ ಹೇಳಿ ಬಿಡು. ಯಾವುದೂ ಸಾಕ್ಷಿ, ಆಧಾರದ ಸಮೇತ ತಿಳಿಹೇಳಿದರೇ ಈ ಹೆಂಗಸರ ತಲೆಗೆ ಹೋಗೋದು. ಒಮ್ಮೆ ಸಂಶಯ ಪಿಶಾಚಿ ಹೊಕ್ಕಿತೆಂದರೆ ಮುಗೀತು. ಬದುಕನ್ನ ನರಕ ಮಾಡಿಬಿಡ್ತಾರೆ. ಸಂಸಾರ ಮಣ್ಣುಪಾಲಾಗತ್ತೆ" ಎನ್ನುತ್ತ ರಘು ಗೌರಿಯ ಕಡೆ ನೋಡಿದ.

ಸಮಾಧಾನವೇ ಮೂರ್ತಿವೆತ್ತಂತಿದ್ದ ರಾಜಿ "ರಘು ಹಾಗೆಲ್ಲ ಅನ್ನಬೇಡ ಗೌರಿಯನ್ನ. ಸಂದರ್ಭ ಹಾಗಿರೋವಾಗ ಗೌರಿ ತಪ್ಪು ತಿಳಿದದ್ದು ಆಶ್ಚರ್ಯವೇನಿಲ್ಲ ಬಿಡು. ತೀರಾ ಹೀಗಾಗತ್ತೆ ಅಂತ ಗೊತ್ತಿದ್ದರೆ ಮೊದಲೇ ಹೇಳಿಬಿಡಬಹುದಿತ್ತೇನೋ. ಸತೀಶನೂ ಕೂಡ ತನ್ನ ಹೆತ್ತ ತಂದೆಯ ಬಳಿಯಾದರೂ ಬೆಳೆಯುತ್ತಿದ್ದ." ಎನ್ನುತ್ತ ಒಮ್ಮೆ ಬಿಕ್ಕಿದಳು. ಸತೀಶನ ಹೆತ್ತ ತಾಯಲ್ಲದಿದ್ದರೂ ಸಾಕಿದ ಮಮತೆ ಅವಳನ್ನು ಬಾಧಿಸಿತು. ಸತೀಶ ಮಗನಾಗಿ ಬಂದು ರಾಜಿಯ ಬಾಳಿಗೊಂದು ಅರ್ಥವನ್ನು ತಂದುಕೊಟ್ಟಿದ್ದ. ಅವಳ ಬಾಳ ಬೆಳಕಾಗಿದ್ದ ಸತೀಶನನ್ನು ಎಲ್ಲಿ ಕಳೆದುಕೊಂಡುಬಿಡುವೆನೋ ಎಂಬ ಆ ಕ್ಷಣದ ಭಯದಿಂದ ವಿಚಲಿತಳಾದಳು. ಸತೀಶನಿಗೂ ತನ್ನ ಹೆತ್ತ ತಾಯಿ ತೀರಿಕೊಂಡಿರುವ ವಿಷಯ ತಿಳಿದಿತ್ತು. ತನ್ನ ತಂದೆ ಬೇರೆ ಮದುವೆಯಾಗಿದ್ದುದರಿಂದ ತನ್ನನ್ನು ರಾಜಿಯೇ ಸಾಕಿದಳೆಂಬುದೂ ತಿಳಿದಿತ್ತು. ಆದರೆ ರಾಜಿ, ಸತೀಶನ ಪಾಲಿಗೆ ಹೆತ್ತ ತಾಯಿಯೇ ಆಗಿದ್ದಳು. ರಾಜಿಯಂಥ ಮಮತಾಮಯಿ ತಾಯಿ, ರಘುವಿನಂಥ ಒಳ್ಳೆಯ ಅಪ್ಪ. ಮತ್ತೇನು ಬೇಕು.


ಚೇತನ ಮಾತನ್ನು ಎಲ್ಲಿಂದ ಪ್ರಾರಂಭ ಮಾಡಬೇಕು ಎಂದು ಒಂದು ಕ್ಷಣ ತಡಕಾಡಿದ. ಕಾರಣ ರಾಜಿ, ಗೌರಿ, ಸತೀಶ ಎಲ್ಲರೂ ತಿಳಿದದ್ದಕ್ಕಿಂತ ವಿಷಯ ಬೇರೆಯೇ ಇತ್ತು. ಆ ಗುಟ್ಟು ರಘು ಮತ್ತು ಚೇತನರ ನಡುವೆ ಭದ್ರವಾಗಿ ಉಳಿದಿತ್ತು. ಆದರೆ ಈಗ ಗುಟ್ಟು ಬಿಚ್ಚಿಕೊಳ್ಳುವ ಕಾಲ ಬಂದಿತ್ತು.


ಚೇತನ ಮೆಲ್ಲಗೆ ಶುರು ಮಾಡಿದ "ರಾಜಿ ಇಲ್ನೋಡು ನಾನು, ನೀನು, ರಘು ಕಾಲೇಜಿನಲ್ಲಿ ಸಹಪಾಠಿಗಳು ನಿಜ. ಯಾವುದೋ ಹಿರಿಯ ಆದರ್ಶಕ್ಕಾಗಿ ಬದುಕಬೇಕೆಂದು ಹೊರಟವರು ನಾವು. ನಮ್ಮ ಮೂವರ ನಡುವೆ ಎಂದೂ ಯಾವ ಗುಟ್ಟೂ ಇರಲಿಲ್ಲ. ಆದರೂ ಈವೊಂದು ಪ್ರಸಂಗದಲ್ಲಿ ಮಾತ್ರ, ನಾನು, ರಘು ಸೇರಿ ನಿನಗೊಂದು ಸುಳ್ಳು ಹೇಳಿರೋದಕ್ಕಾಗಿ ಇಂದು ಈಗ ನಿನ್ನ ಕ್ಷಮಾಪಣೆ ಕೇಳ್ತೀವಿ" ಎಂದಾಗ ರಾಜಿ ನಂಬಲಾರದವಳಂತೆ ಇಬ್ಬರ ಕಡೆಗೂ ನೋಡಿದಳು.


"ಹೌದು ರಾಜಿ ನನಗೆ ಮದುವೆಯಾಗಿರಲಿಲ್ಲ. ನಿನಗೆ ಸುಳ್ಳು ಹೇಳಿದ್ದೆ. ಕಾರಣ ಈ ಮಗು ನನ್ನದೇ ಎಂದು ಹೇಳಿರದಿದ್ದರೆ ನೀನು ಸಾಕುತ್ತಿದ್ದೆಯೋ ಇಲ್ಲವೋ ಎಂಬ ಆಕ್ಷಣದ ಅನುಮಾನದಿಂದ ಹಾಗೆ ಸುಳ್ಳು ಹೇಳಿದೆ. ನಿಜವಾಗಿ ಇದು ಯಾರ ಮಗುವೋ ಗೊತ್ತಿಲ್ಲ" ಎಂದು ಹೇಳುತ್ತ ರಘು ರಾಜಿಯ ಕಡೆಯ ನೋಡಿದ


"ಅಂದರೆ?" ಅರ್ಥವಾಗದವಳಂತೆ ರಾಜಿ ಉದ್ಗರಿಸಿದಳು. ಗೌರಿ ಅಚ್ಚರಿಯಿಂದ ರಘುವಿನೆಡೆಗೆ ನೋಡಿದಳು. ಇದು ಸಾಧ್ಯವೇ ಎಂಬಂತೆ.

"ಅಂದ್ರೆ ಅದು ಒಂದು ಅನಾಥ ಶಿಶುವೆಂದು ಹೇಳಬಹುದು. ಹೆತ್ತ ತಾಯಿಯೇ ಅದನ್ನು ಬೀದಿಪಾಲು ಮಾಡಿದ ಮೇಲೆ ಅನಾಥವಲ್ಲದೆ ಮತ್ತೇನು ಹೇಳು?" ಎಂದಾಗ ರಘುವಿನ ಧ್ವನಿ ಗದ್ಗದಿತವಾಗಿತ್ತು.

"ರಘು ನಿನ್ನ ಮಾತು ಅರ್ಥವಾಗಲಿಲ್ಲ. ನಮ್ಮ ಸತೀಶ ಬೀದಿಯಲ್ಲಿ ಬಿದ್ದಿದ್ದ ಅನಾಥ ಮಗು ಎಂದು ನೀ ಹೇಳುತ್ತಿರುವುದಾ?" ನಂಬಲಾರದಂತೆ ರಾಜಿ ಪ್ರಶ್ನಿಸಿದಳು.

"ಹೌದು ರಾಜಿ. ಗೌರಿ ಸಂಶಯ ಪಿಶಾಚಿಯಿಂದ ನರಳುತ್ತಿರುವ ನೀನೂ ಕೇಳು. ರಾಜಿಯ ಮೇಲೆ ಅಪವಾದ ಹೊರೆಸಿದ ನೀನು ಮೊದಲು ಕೇಳಬೇಕು. ನಿನಗೆ ಮೆಟ್ಟಿಕೊಂಡಿರೋ ಭೂತ ಬಿಡಿಸೋಕೇ ನಿನ್ನನ್ನ ಇಲ್ಲಿ ಕರೆದುಕೊಂಡು ಬಂದಿರೋದು ಅಂತ ಗೊತ್ತಲ್ಲ" ಗೌರಿ ತಲೆ ತಗ್ಗಿಸಿ ಕೂತುಕೊಂಡಳು.


ರಘು ಆ ಮಗುವಿನ ಕಥೆಯನ್ನು ಹೇಳತೊಡಗಿದ.

"ಈಗ ಹದಿನೆಂಟು ವರ್ಷಗಳ ಹಿಂದೆ, ಅಂದರೆ ಗೌರಿ ನಮ್ಮ ಮದುವೆಗೆ ಎರಡು ವರ್ಷಗಳ ಮುಂಚೆ, ಒಂದು ದಿನ, ಅದು ಫೆಬ್ರವರಿ ತಿಂಗಳು ನಾನು ರಾತ್ರಿ ಚೇತನನನ್ನು ನೋಡಲು ಸ್ಕೂಟರಿನಲ್ಲಿ ಹೋಗುತ್ತಿದ್ದೆ. ಮೈಸೂರಿನ ರಮಾವಿಲಾಸ ಅಗ್ರಹಾರದ ರಸ್ತೆಯಲ್ಲಿ ದಾರಿಯ ಮೊದಲು ಒಂದು ಮೆಡಿಕಲ್ ಹಾಸ್ಟೆಲ್ ಇದೆಯಲ್ಲ. ಅದರ ಪಕ್ಕ ಒಂದು ಕಂಬ ಇದೆ. ಆ ಕಂಬದ ಪಕ್ಕ ಆಗತಾನೇ ಹುಟ್ಟಿದ್ದೋ, ಒಂದು ದಿನದ್ದೋ ಮಗು ಸಣ್ಣಗೆ ಅಳ್ತಾ ಮಲಗಿತ್ತು.

ಗೌರಿ ಒಂದು ಕ್ಷಣ ರಘುವನ್ನು ಕತ್ತೆತ್ತಿ ನೋಡಿದಳು.

"ಅಂದಹಾಗೆ ಅದು ಫೆಬ್ರವರಿ 15ನೇ ತಾರೀಖಲ್ಲವೇನೋ ಚೇತನ?"

"ಹೌದು ರಘು, ಅದಕ್ಕೆ ದಾಖಲೇನೇ ಇದೆಯಲ್ಲ. ನೋಡು ರಾಜಿ...."

"ಇರು ಚೇತನ, ನಾನು ಮೊದಲು ಎಲ್ಲಾ ಹೇಳಿ ಬಿಡ್ತೀನಿ. ಮಗುವಿನ ಸುತ್ತ ಜನ ತುಂಬಿಕೊಂಡಿದ್ದರೇ ವಿನಃ ಪಾಪ ಆ ಎಳೇ ಬೊಮ್ಮಟೆಗೆ ಸಹಾಯ ಮಾಡಬೇಕು ಅಂತ ಯಾರಿಗೂ ಅನ್ನಿಸಲಿಲ್ಲವೇನೋ ಅಥವಾ ಹೆತ್ತ ತಾಯಿಯೇ ಬಿಸಾಕಿದ ಮೇಲೆ ನಮಗೇಕೆ ಅದರ ಉಸಾಬರಿ ಎಂದಿರಬೇಕು ಅವರ ತರ್ಕ ಅಥವಾ ಭಯ. ಅದೂ ಸರಿಯೇ ಏನೋ? ಆದರೆ ನನ್ನ ಮನಸ್ಸು ತಡೀಲಿಲ್ಲ. ಅಲ್ಲೇ ಹತ್ತಿರದಲ್ಲೇ ಇದ್ದ ಚೇತನನ ಮನೆಗೆ ಹೋಗಿ ಅವನನ್ನು ಕರೆದು ಬಂದೆ. ಮಗುವಿಗಾಗಿ ನಾಲ್ಕಾರು ಬಟ್ಟೆಗಳನ್ನೂ ತಂದ ಚೇತನ. ಅಲ್ಲಿಂದ ಚೆಲುವಾಂಬ ಆಸ್ಪತ್ರೆಗೆ ಹೋದೆವು. ದಾರಿಯಲ್ಲಿ ಸಿಕ್ಕ ಮಗು ಎನ್ನುತ್ತಿದ್ದ ಹಾಗೇ ಅಲ್ಲಿದ್ದ night duty doctor ಅದಕ್ಕೆ treatment ಕೊಡಕ್ಕಾಗಲ್ಲ ಸಾರ್, ನಮ್ಮ ದೊಡ್ಡ ಡಾಕ್ಟರ್ permission ಬೇಕು. ಮಣ್ಣು ಮಸಿ ಅಂತೆಲ್ಲ ಹೇಳಿದ. ನನಗೆ ರೇಗಿಹೋಯ್ತು. ಈ ಮಗು ನನ್ನದೇ ಕಣಯ್ಯ ಬರೆದುಕೋ ಅಂತ ನನ್ನ ಹೆಸರು, ಅಡ್ರೆಸ್ ಎಲ್ಲಾ ಕೊಟ್ಟ ಮೇಲೆ ಮಗುವನ್ನು ಕೈಗೆತ್ತಿಕೊಂಡು ಟ್ರೀಟ್ ಮಾಡಿದ. "ಮಗು ಚೇತರಿಸಿಕೊಳ್ಳುವವರೆಗೂ ಆಸ್ಪತ್ರೆಯಲ್ಲೇ ಇರಬೇಕು. ಅದನ್ನ admit ಮಾಡಿಕೊಳ್ಳೋದಕ್ಕೆ ಹಣ ಕಟ್ಪಬೇಕು" ಎಂದ. ಅದು ಅವನ ಕೈ ಬೆಚ್ಚಗೆ ಮಾಡೋಕೇನೋ ಗೊತ್ತಿಲ್ಲ. ಅಂತೂ ಆ ಎಳೇ ಬೊಮ್ಮಟೆಯನ್ನ ಆಸ್ಪತ್ರೆಗೆ ಸೇರಿಸಿ ಬಂದೆವು.

"ರಘು ಇನ್ನು ಮುಂದಿನದನ್ನು ನಾನು ಹೇಳ್ತೀನಿ ಇರು" ಎಂದವನೇ ಚೇತನ

"ನೋಡು ರಾಜಿ ಆಮೇಲೆಯಾದರೂ ಯಾವುದಾದರೂ ಜಿದ್ದಿಗೆ ಮಗುವನ್ನು ಕದ್ದು ಬೀದಿಯಲ್ಲಿ ಎಸಿದಿದ್ದು, ಅದರ ವಾರಸುದಾರರು ಬಂದು ಫೋಲೀಸ್ ಕಂಪ್ಲೈಂಟ್ ಕೊಟ್ಟರೆ ಅಂತ ಯೋಚಿಸಿ ನಾವೇ ಲಷ್ಕರ್ ಮೊಹಲ್ಲ ಪೋಲೀಸ್ ಸ್ಟೇಷನ್ ಗೆ ಹೋಗಿ ಕಂಪ್ಲೈಂಟ್ ಕೊಟ್ಟೆವು. ಮಾರನೆಯ ದಿನ ಪತ್ರಿಕೆಯಲ್ಲೂ ಆ ಸುದ್ದಿಯನ್ನು ಪ್ರಕಟಿಸಿದೆವು. ನೋಡು ಇಲ್ಲಿದೆ" ಅನ್ನುತ್ತ ಒಂದು ಹಳೆಯ ದಿನ ಪತ್ರಿಕೆಯಲ್ಲಿ ಪ್ರಕಟವಾದ ಸುದ್ದಿ, ಫೋಲೀಸ್ ಸ್ಪೇಷನ್ ಗೆ ಕೊಟ್ಟ ಕಂಪ್ಲೈಂಟ್ ನ ಕಾಪಿ, ಫೋಲೀಸಿನವರ ರಸೀದಿ, ಆಸ್ಪತ್ರೆಯ ದಾಖಲೆ ಪತ್ರಗಳು ಎಲ್ಲವನ್ನೂ ರಾಜಿಗೆ, ಗೌರಿಗೆ ತೋರಿಸಿದ. ಗೌರಿ ನಿರಾಸಕ್ತಿಯಿಂದ ನೋಡಿ ಕುಳಿತಳು.


"ಕೊಡಬೇಕಾದವರಿಗೆಲ್ಲ ಕೈ ಬೆಚ್ಚಗೆ ಮಾಡಿ ನಾನೇ ಎತ್ತಿಕೊಂಡು ರಾಜಿಯ ಬಳಿಗೆ ಬಂದೆ. ಹೇಗೂ ಅಪ್ಪ ಅಂತ ನನ್ನ ಹೆಸರೇ ಇತ್ತಲ್ಲ" ಎಂದ ರಘು.

"ರಾಜೀ ಇಲ್ಲಿ ಕೇಳು ರಘು ಆಗ ಬೇರೆ ಕಡೆ ಕೆಲಸದಲ್ಲಿದ್ದನಲ್ಲ. ರಜೆಯ ಮೇಲೆ ಮೈಸೂರಿಗೆ ಬಂದಿದ್ದ. ಇದನ್ನ ನಿನ್ನ ಹತ್ತಿರ ಬಿಡೋಕೆ ಒಂದು ಕತೆ ಕಟ್ಟಿದ ಅಷ್ಟೇ" ಮನೆಯವರ ವಿರುದ್ಧವಾಗಿ ಒಂದು ಹುಡುಗಿಯನ್ನು ಮದುವೆಯಾದೆ. ನನ್ನ ಹೆಂಡತಿ ಮಗುವನ್ನು ಬಿಟ್ಟು ತೀರಿಕೊಂಡಳು" ಎಂದಾಗ ನೀನು ನಂಬಿದೆ. ನೀನೂ ಒಂಟಿಯಾಗಿದ್ದೀ, ಬೇರೆ ಮದುವೆ ಬೇಡ ಅಂತ ನೀನೂ ತೀರ್ಮಾನ ಮಾಡಿಕೊಂಡು ಬಿಟ್ಟಿದ್ದೆಯಲ್ಲ, ಹಾಗಾಗಿ ನೀನು ಮಗುವಿಗೆ ದಿಕ್ಕಾಗಬಹುದು ಎಂಬ ನಂಬಿಕೆ ರಘುಗೆ.


ರಘುವಿನ ಬಗ್ಗೆ ನಿನಗೆ ಅಚಲ ವಿಶ್ವಾಸ, ಸ್ನೇಹ, ಪ್ರೀತಿ ಎಲ್ಲಾ ಇದ್ದದ್ದರಿಂದ ರಘುವಿನ ಮಾತನ್ನ ಸ್ವಲ್ಪವೂ ಅನುಮಾನಿಸದೆ ಸಾಕಲು ಒಪ್ಪಿಕೊಂಡೆ. ಆದರೂ ನೀನು ಕೇಳಿದೆ ನೋಡು. "ರಘು ನಿನಗೆ ಮದುವೆಯಾದ ವಿಷಯವೇ ಗೊತ್ತಿಲ್ಲವಲ್ಲೋ" ಅಂತ. ಆಗ ರಘು ಏನು ಹೇಳಿದ್ದ ನೋಡು.

"ಅಯ್ಯೋ ಮಹಾತಾಯಿ ಅದೊಂದು ದೊಡ್ಡ ಪುರಾಣ, ಈಗ ಬೇಡ. ಮತ್ತೆ ಯಾವಾಗಲಾದರೂ ಹೇಳ್ತೀನಿ" ಅಂತ ಜಾರಿಕೊಂಡ ನೋಡು. ರಘುವಿಗೆ ನಿನ್ನ ಮೇಲಿದ್ದಷ್ಟು ವಿಶ್ವಾಸ, ಪ್ರೀತಿ ಬೇರೆ ಯಾರ ಮೇಲೂ ಇರಲಿಲ್ಲ ನೋಡು. ಮಗುವನ್ನು ಅನಾಥಾಶ್ರಮಕ್ಕೆ ಸೇರಿಸಲು ರಘುವಿಗೆ ಮನಸ್ಸಾಗಲಿಲ್ಲ. ಮೊದಲೇ ಕರುಣಾಳು, ಒಂದು ವೇಳೆ ಅದು ಅನಾಥ ಮಗು ಎಂದರೆ ನೀನೆಲ್ಲಿ ಸಾಕಲು ಅನುಮಾನಿಸ್ತೀಯೋ ಅಂತ ಸುಳ್ಳಾಡಿದ. ಆ ಸುಳ್ಳಿನಲ್ಲಿ ನಾನೂ ಭಾಗಿ. ಮಗುವನ್ನು ನಿನ್ನ ಬಳಿ ಬಿಡಲು ನಾವಿಬ್ಬರೂ ಒಟ್ಟಿಗೆ ಬಂದಿದ್ದು ನೆನಪಿದೆ ತಾನೇ ರಾಜಿ.

ರಾಜಿ ಮಗು ಬೀದಿಯಲ್ಲಿ ಸಿಕ್ಕಿದ್ದೇನೊ ನಿಜ. ಆದರೆ ಸತೀಶ ಹೇಗಿದ್ದಾನೆ ನೋಡು. ಒಳ್ಳೆ ರಾಜಕುಮಾರ, ರಾಜಕುಮಾರ ಇದ್ದ ಹಾಗಿದ್ದಾನೆ"

"ಹೂಂ ಮತ್ತೆ ಅವನು ರಾಜಕುಮಾರನೇ ಮತ್ತೆ. ಯಾರ ಮಗ ಹೇಳು? ನನ್ನ ಮಗ ಅಂದ್ರೆ ರಾಜಿಯ ಮಗ. ತೀಳಿತಾ ಚೇತನ" ಎಂದು ನಗೆಯಾಡಿದಳು ರಾಜಿ.

"ರಾಜಿ ಇದು ಸತ್ಯ ಸಂಗತಿ ಆದರೆ ಯಾರೂ ಎಂದೂ ಈ ವಿಷಯಗಳನ್ನು ಬಾಯಿ ತಪ್ಪಿಯಾದರೂ ಸತೀಶನಿಗೆ ಹೇಳಕೂಡದು. ಆಮೇಲೆ ಅನಾಹುತವಾದೀತು. ನಾನೇ ಅವನ ಹೆತ್ತ ಅಪ್ಪ ಅಂತ ನಂಬಿರುವಾಗ ಅವನ ಮನಸ್ಸಿಗೆ ಘಾಸಿ ಮಾಡಬಾರದು" ಎಂದು ರಘು ಹೇಳುತ್ತಿರುವ ವೇಳೆಗೆ ಯಾಕೋ ಏನೋ ಇದ್ದಕ್ಕಿದ್ದಂತೆ "ಅಯ್ಯೋ, ಅಮ್ಮಾ" ಎನ್ನುತ್ತ ಗೌರಿ ಜ್ಞಾನತಪ್ಪಿ ಬಿದ್ದುಬಿಟ್ಟಳು. ರಾಜಿ ಹೋಗಿ ನೀರು ತಂದು ಗೌರಿಯ ಮುಖಕ್ಕೆರಚಿದಳು. ರಘು ಅವಳನ್ನ ತೊಡೆಯಮೇಲೆ ಮಲಗಿಸಿಕೊಂಡು ಗಾಳಿ ಹಾಕತೊಡಗಿದ "ಅಯ್ಯೋ ಗೌರಿ ಏನಾಯ್ತು ನಿಂಗೆ? ನನ್ನ ಮೇಲೆ ಮತ್ತೆ ಅನುಮಾನ ಪಟ್ಟಿದ್ದಕ್ಕೆ ನಿನಗೆ ನೀನೇ ಹೀಗೆ ಶಿಕ್ಷಿಸಿಕೊಂಡೆಯಾ? ಆ ಪರಿಸ್ಥಿತಿಯಿಂದ ತಪ್ಪು ಕಲ್ಪನೆ ಮಾಡಿಕೊಂಡೆ. ಎಲ್ಲಿ ಕಣ್ಣು ಬಿಡು ಚಿನ್ನ, ಗೌರಿ, ಗೌರಿ, ಚೇತನ ಡಾಕ್ಟರನ್ನು ಕರೆದು ತಾ" ಎನ್ನುವಷ್ಟರಲ್ಲಿ ಗೌರಿ ಮೆಲ್ಲಗೆ ಕಣ್ ತೆರೆದಳು.

"ನನ್ನನ್ನು ಕ್ಷಮಿಸಿಬಿಡಿ. ನನ್ನನ್ನು ಕ್ಷಮಿಸಿಬಿಡಿ. ಅಯ್ಯೋ ನಾನೂ ಪಾಪಿ, ನಾನು ಪಾಪಿ, ನಾನು ಬದುಕಿರಬಾರದು, ನಾನು ಬದುಕಿರಬಾರದು" ಎನ್ನುತ್ತ ಗೌರಿ ಗಟ್ಟಿಯಾಗಿ ರೋಧಿಸತೊಡಗಿದಳು.


ರಘು ಅವಳ ತಲೆಯನ್ನು ಸವರುತ್ತ "ಹಾಗೆಲ್ಲ ಮಾತಾಡಬಾರದು. ನೀನು ಪಾಪಿಯಲ್ಲ. ನನ್ನ ದೇವತೆ. ಏನೋ ಸಂಶಯ ಕಾಡಿತು. ನನ್ನನ್ನ, ರಾಜಿಯನ್ನ ತಪ್ಪು ತಿಳಿದೆ. ಎಲ್ಲಿ ಈಗ ಎಲ್ಲಾ ಸರಿಯಾಯಿತಲ್ಲ. ನಿನ್ನ ಸಂಶಯ ಕಳೆಯಿತಲ್ಲ. ಚಿನ್ನಾ ಸಮಾಧಾನ ಮಾಡಿಕೋ. ಏಳು ಕಾಫಿ ಕುಡಿ. ತುಂಬಾ ಯೋಚನೆ ಮಾಡಿ ಬಳಲಿದ್ದೀಯ. ರಾಜಿ ಎಲ್ಲಿ ಒಂದು ಕಪ್ ಬಿಸಿಬಿಸಿಯಾಗಿ ಕಾಫಿ ಮಾಡಿಕೊಂಡು ಬಾ." ಎಂಬ ಗಂಡನ ಮಾತು ಕಿವಿಗೆ ಬೀಳದವಳಂತೆ "ಇಲ್ಲ. ಇಲ್ಲ. ನನ್ನ ಮುಟ್ಟಬೇಡಿ. ನಾನು ಪಾಪಿ. ನಾನು ಪಾಪಿ" ಎನ್ನುತ್ತ ರಘುವಿನ ತೊಡೆಯಿಂದ ತಲೆಯನ್ನೆತ್ತಿ ಇದ್ದಕ್ಕಿದ್ದಂತೆ ಎದ್ದು ನಿಂತು "ಅಯ್ಯೋ ನೀವು ಸಾಯುತ್ತಿದ್ದ ಮಗುವನ್ನು ಬದುಕಿಸಿದ ದೇವರು. ಆದರೆ ನಾನು, ನಾನು" ಎಂದು ತಲೆ ಚಚ್ಚಿಕೊಂಡು, ಕೂದಲೆಳೆದುಕೊಳ್ಳುತ್ತ ಹುಚ್ಚು ಹುಚ್ಚಾಗಿ ಆಡತೊಡಗಿದುದನ್ನು ಕಂಡು ಎಲ್ಲರಿಗೂ ಗಾಬರಿಯಾಯ್ತು.

ರಘು ಅವಳನ್ನು ಸಂತೈಸುತ್ತ "ಏನೇನೋ ಬಡಬಡಿಸಬೇಡ. ನೀನು ನಿನ್ನನ್ನು ಪಾಪಿ ಎಂದು ನಿಂದಿಸಿಕೊಳ್ಳಬೇಡ ಚಿನ್ನಾ. ನೀನೆಂದೆಂದೂ ನನ್ನ ಬಾಳಿನ ಬೆಳಕು. ಹಾಗೆಲ್ಲ ಆಡಬಾರದು. ಆರಾಮ ತೆಗೆದುಕೋ. ಎಲ್ಲಿ ಸ್ವಲ್ಪ ಹೊತ್ತು ಮಲಗಿಕೋ" ಎಂದು ಎಷ್ಟು ಹೇಳಿದರೂ ಗೌರಿಯ ತೊಳಲಾಟ, ಅಳು ಮಾತ್ರ ನಿಲ್ಲಲಿಲ್ಲ. ಅವಳಲ್ಲಿ ಯಾವುದೋ ಪಾಪಪ್ರಜ್ಞೆ ತಲೆ ಎತ್ತಿ ನಿಂತಿತು. ಮರೆತು ಹೋದ ಘಟನೆ ಧುತ್ತೆಂದು ಒಂದೊಂದಾಗಿ ಜ್ಞಾಪಕಕ್ಕೆ ಬಂದು ಅವಳನ್ನು ಹಿಂಡಿ ಹಿಪ್ಪೆ ಮಾಡಿತು. ರಘುವಿನ ಒಳ್ಳೆಯತನದ ಮುಂದೆ ತಾನೆಷ್ಟು ಚಿಕ್ಕವಳು ಎಂಬ ಭಾವನೆ ಮೂಡಿ ಗೌರಿ ರಘುವಿನ ಕಾಲನ್ನು ಹಿಡಿದುಕೊಂಡು "ನನ್ನನ್ನು ಕ್ಷಮಿಸಿ. ನನ್ನನ್ನು ಕ್ಷಮಿಸಿ. ದೇವರಂಥ ನಿಮಗೆ ಎಂಥ ದ್ರೋಹ ಬಗೆದೆ ನಾನು. ಅಯ್ಯೋ ಇಷ್ಟೂ ವರ್ಷ ನಿಮ್ಮೊಡನೆ ಸುಳ್ಳು ಬಾಳುವೆ ಮಾಡಿದ ನಾನು, ನಿಮ್ಮಲ್ಲಿ ತಪ್ಪು ಹುಡುಕಹೊರಟ ಪಾಪಿ ನಾನು. ಇಲ್ಲ ಬದುಕಿರಬಾರದು ನಾನು. ಇಲ್ಲ ನಾನಿರೋಲ್ಲ. ಹೊರಟು ಹೋಗ್ತೀನಿ. ಸತ್ತು ಹೋಗ್ತೀನಿ. ಹೌದು ಈ ಪಾಪಿಗೆ ಅದೇ ಶಿಕ್ಷೆ. ಅಯ್ಯೋ ಪಾಪಿ" ಎಂದು ನಿಲ್ಲಿಸದೆ ಒಂದೇ ಸಮನೆ ಬಡಬಡಿಸತೊಡಗಿದಳು ಯಾರು ಎಷ್ಟು ಸಮಾಧಾನ ಮಾಡಿದರೂ ಗೌರಿಯ ಬಡಬಡಿಕೆ ಹೆಚ್ಚುತ್ತಲೇ ಹೋಯಿತು. ಇದನ್ನು ಸಹಿಸಲಾಗದ ರಘು "ಚೇತನ ಇನ್ನೂ ಇಲ್ಲೇ ಇದ್ದೀಯಲ್ಲ. ಡಾಕ್ಟರನ್ನು ಕರೆದುಕೊಂಡು ಬಾ ಹೋಗು. ನನ್ನ ಗೌರಿಯ ಸಂಕಟವನ್ನು ನೋಡಲಾರೆ. ಬೇಗ ಹೋಗು ಚೇತನ. ಗೌರಿ ಯಾಕೋ ಭ್ರಮೆ ಹಿಡಿದವಳಂತೆ ಆಡ್ತಿದ್ದಾಳೆ. ಅಯ್ಯೋ ಏನೋ ಮಾಡೋಕೆ ಹೋಗಿ ಏನೋ ಆಗ್ಹೋಯ್ತಲ್ಲ" ಎಂದು ರಘು ಪರಿತಪಿಸತೊಡಗಿದ.

ಗೌರಿ ಇದ್ದಕ್ಕಿದ್ದಂತೆ ಕೂದಲನ್ನು ಸರಿಮಾಡಿಕೊಳ್ಳುತ್ತ ಎದ್ದು ಕೂತಳು. "ಡಾಕ್ಟರ್ ಗೀಕ್ಟರ್ ಯಾರೂ ಬೇಡ. ಯಾರು ಬಂದು ಏನೂ ಆಗುವುದಿಲ್ಲ. ನನ್ನ ಪಾಪಕ್ಕೆ ಪ್ರಾಯಶ್ಚಿತ ನನಗಾಗಬೇಕಷ್ಟೆ. ನಿಮ್ಮೆಲ್ಲರಲ್ಲೂ ತಪ್ಪು ಕಂಡು ಹಿಡಿಯಲು ಹೋದ ನಾನೇ ತಪ್ಪಿತಸ್ಥೆ. ನನ್ನನ್ನು ಎಲ್ಲರೂ ಕ್ಷಮಿಸಿಬಿಡಿ. ನೀವೆಲ್ಲ ತುಂಬ ಕರುಣಾಳುಗಳು. ಬೀದಿಯಲ್ಲಿ ಬಿದ್ದಿದ್ದ ಮಗುವನ್ನು ತಂದು ಬೆಳೆಸಿ ಒಬ್ಬ ಸಜ್ಜನನ್ನಾಗಿ ಮಾಡಿದಿರಿ. ಆದರೆ ನಾನು? ನನ್ನ ಕರ್ಮದ ಕತೆಯನ್ನು ಎಲ್ಲರ ಮುಂದೆ ಹೇಳೇ ಬಿಡ್ತೇನೆ.

"ಅಂದು ಹದಿನೆಂಟು ವರ್ಷಗಳ ಹಿಂದೆ ನೀವು ತಂದು ಸಾಕಿದ ಮಗುವನ್ನು ಅಲ್ಲಿ ಎಸೆದು ಹೋದ ಪಾಪಿ ನಾನೇ, ಈ ಗೌರಿ. ನಮ್ಮ ಪಕ್ಕದ ಮನೆಯ ರವಿಯಿಂದ ವಂಚಿತಳಾದೆ. ಮದುವೆಯಾಗುತ್ತೇನೆಂದು ಹೇಳಿ ವಂಚಿಸಿ ಓಡಿಹೋದ. ಸಮಾಜಕ್ಕೆ ಹೆದರಿ ಹುಟ್ಟಿದ ಮಗುವನ್ನು ಬೀದಿಪಾಲು ಮಾಡಿದೆ. ಅದಾದ ಒಂದು [ಎರಡು] ವರ್ಷಗಳ ಬಳಿಕ, ನನ್ನ ತಂದೆ-ತಾಯಿ ನಿಜದ ಸಂಗತಿಯನ್ನು ಮುಚ್ಚಿಟ್ಟು ನನಗೆ ಮದುವೆ ಮಾಡಿದರು. ಇದೆಂಥ ದೈವಲೀಲೆ. ಅದು ನನ್ನವರ ಕೈಗೆ ಸಿಕ್ಕಿದೆ. ಅವರೇ ತಂದೆಯಾಗಿದ್ದಾರೆ. ಹೆರದಿದ್ದರೂ ಸಾಕಿ, ಸಲುಹಿದ ರಾಜಿ ನಿಜವಾಗಿ ತಾಯಿ ಆದರೆ ನಾನು _ _ _ ನಾನು _ _ ಪಾಪಿ. ತಪ್ಪು ಮಾಡಿದ ನಾನು ದೇವರಂಥ ನನ್ನವರ ಮೇಲೆ ಹಗೆ ಸಾಧಿಸಿದೆ. ಇಲ್ಲ ಇಲ್ಲ ನಾನು ಬದುಕಿರಬಾರದು. ಶಿಕ್ಷೆ ಕೊಡಿ. ಶಿಕ್ಷೆ ಕೊಡಿ. ಮಗೂ ಸತೀಶ ನನ್ನನ್ನು ಕ್ಷಮಿಸಿಬಿಡು. ಕಂದ ಕ್ಷಮಿಸು. ಬೇಡ ಮಗು ಬೇಡ ನನ್ನ ಬಗ್ಗೆ ಹೇಸಿಗೆ ಪಡಬೇಡ - ಬೇಡ ಕಣೋ ಸತೀಶ. ನನ್ನ ಹಾಗೆ ನೋಡಬೇಡ. ಬೇಡ ಮಗೂ ಬೇಡ ಬೇಡ. ಮಗೂ ಬೇಡ" ಎನ್ನುತ್ತ ಮತ್ತೆ ಪ್ರಜ್ಞೆ ತಪ್ಪಿ ಬಿದ್ದಳು.

ಅರ್ಧ ಗಂಟೆಯಲ್ಲಿ ಡಾಕ್ಟರ್ ಬಂದು ಗೌರಿಗೊಂಡು ಇಂಜೆಕ್ಷನ್ ಕೊಟ್ಟು ಹೋದರು.

ಮಾರನೇಯ ದಿನ ಬೆಳಗ್ಗೆ ನಿದ್ದೆಯಿಂದೆಚ್ಚೆತ್ತ ಗೌರಿ ಮೆಲ್ಲನೆ ಕಣ್ ತೆರೆದಾಗ ಕಿಟಕಿಯಿಂದಾಚೆ ಕಾಣುತ್ತಿದ್ದ ಮಾವಿನ ಮರದ ಮೇಲೆ ಕೋಗಿಲೆಯೊಂದು 'ಕುಹೂ' ಎಂದು ಹಾಡುತ್ತಿತ್ತು. ಮಂಚದ ಹತ್ತಿರ ಕುರ್ಚಿಯಲ್ಲಿ ಕುಳಿತ ರಘು ಗೌರಿಯ ತಲೆಯನ್ನು ನೇವರಿಸುತ್ತಿದ್ದ. ಗೌರಿ ಕಣ್ಣು ಬಿಡುತ್ತಿದ್ದಂತೆಯೇ "ನಿದ್ದೆ ಆಯ್ತಾ ಚಿನ್ನಾ" ಎಂದು ಕಕ್ಕುಲತೆಯಿಂದ ಕೇಳಿದ ರಘು.

"ಅಪ್ಪಾ ಕಾಫಿ, ಆಂಟೀ ಕಾಫಿ" ಎನ್ನುತ್ತ ಕೈಯ್ಯಲ್ಲಿ ಕಾಫಿಯ ಬಟ್ಟಲನ್ನು ಹಿಡಿದು ಒಳಗೆ ಬಂದ ಸತೀಶನನ್ನು ಕಂಡ ಕೂಡಲೆ ಗೌರಿಯ ಕಣ್ಣಲ್ಲಿ ನೀರಾಡಿತು. ಎವೆ ಇಕ್ಕದೆ ಅವನ್ನೇ ನೋಡುತ್ತಿದ್ದಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT