ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸ ವರ್ಷದ ಮೊದಲನೆಯ ದಿನ

Last Updated 23 ಮಾರ್ಚ್ 2019, 19:45 IST
ಅಕ್ಷರ ಗಾತ್ರ

ವ ರ್ಷದ ಮೊದಲನೆಯ ದಿನ ಬೆಳಬೆಳಗ್ಗೆ ಒಳ್ಳೆಯ ಬಾಡಿಗೆ ಸಿಗಲಿ, ಇಡೀ ವರ್ಷವೆಲ್ಲ ಒಳ್ಳೆಯದಾಗಲೆಂದು ಮನದಲ್ಲಿ ದೇವರನ್ನು ನೆನೆಯುತ್ತಾ ಮನೆ ಮುಂದೆ ನಿಂತಿರುವ ಆಟೊ ಹತ್ತಿದ ರವಿ. ಆಟೊ ಸ್ಟಾರ್ಟ್ ಮಾಡುತ್ತ ಬಾಗಿಲಿನಲ್ಲಿ ನಿಂತಿರುವ ಹೆಂಡತಿ ಮತ್ತು ಮಗುವಿನ ಕಡೆ ನಗು ಬೀರಿದ.

ಮೈಸೂರಿನ – ಬನ್ನೂರು ರಸ್ತೆಯಲ್ಲಿರುವ ವಿದ್ಯಾವಿಕಾಸ್ ಹಿಂದೆ ಅವನ ಮನೆಯಿತ್ತು. ಬೆಳಗಿನ ತಿಂಡಿ ಮುಗಿಸಿಕೊಂಡು ಹೊರಟರೆ, ಸಮಯ ಸಿಕ್ಕಿದಾಗ ಮಧ್ಯಾಹ್ನದೂಟ ಮನೆಗೆ ಬಂದು ಮಾಡುತ್ತಿದ್ದ. ದೂರದ್ದೇನಾದರೂ ಬಾಡಿಗೆ ಸಿಕ್ಕಿದರೆ ರಸ್ತೆಬದಿಯಲ್ಲಿ ಸಿಗುವ ಹೋಟೆಲ್‌ನಲ್ಲಿ ಮಧ್ಯಾಹ್ನದೂಟ ಮಾಡುತ್ತಿದ್ದ.

ಆದರೆ, ಸಂಜೆ ಮಾತ್ರ ಎಂಟರೊಳಗೆ ಮನೆ ಸೇರಿ ಬಿಡುತ್ತಿದ್ದ. ಅವನಿಗೀಗ ವಯಸ್ಸು ನಲವತ್ತರ ಸಮೀಪ. ಅಷ್ಟೇನೂ ಓದಿರಲಿಲ್ಲ. ಕೂಲಿ ಮಾಡಿಕೊಂಡಿದ್ದ. ಈಗಿತ್ತಲಾಗಿ ಆರು ವರ್ಷದಿಂದ ಆಟೊ ಓಡಿಸಲು ತೊಡಗಿದ್ದ. ಹೊಸ ಆಟೊವನ್ನು ಕೊಂಡು ಇನ್ನೂ ಸರಿಯಾಗಿ ಆರು ತಿಂಗಳಾಗಿರಲಿಲ್ಲ.

ಆಟೊ ಮತ್ತು ಜೀವನ ಎರಡು ಒಂದೇಯೆಂದು ಅವನ ನಂಬಿಕೆಯಾಗಿತ್ತು. ಜೀವನದಲ್ಲಿ ಯಾವ ಕ್ಷಣದಲ್ಲಿ ಯಾವ ರೀತಿ ಬದಲಾವಣೆಯಾಗುತ್ತೆಂದು ಹೇಳಲಾಗದು. ಜೀವನದಲ್ಲಿ ಸುಖವೂ ಬರುತ್ತೆ, ದುಃಖವೂ ಬರುತ್ತೆ.

ಆದೇ ರೀತಿ ಆಟೊದಲ್ಲಿ ಒಳ್ಳೆಯವರುಬರುತ್ತಾರೆ, ಕೆಟ್ಟವರು ಬರುತ್ತಾರೆ.

ಕಳೆದ ವರ್ಷ ಮೊದಲನೆಯ ದಿನದಂದು, ಮಧ್ಯಾಹ್ನದಲ್ಲಿ ದೇವರಾಜ ರಸ್ತೆಯಲ್ಲಿ ಒಬ್ಬ ಆಟೊ ಹತ್ತಿ ಸಂಗಮ್ ಥಿಯೇಟರ್ ಹಿಂದೆ ಒಂದು ಗಲ್ಲಿಯ ವಿಳಾಸ ಹೇಳಿದ. ಅವನು ಆಟೊ ಹತ್ತಿದ ಮೇಲೆಯೇ ಗೊತ್ತಾಗಿದ್ದು ಆಸಾಮಿ ಎಣ್ಣೆಪಾರ್ಟಿ ಎಂದು. ಸ್ವಲ್ಪ ಎತ್ತರವಿದ್ದ, ಮೀಸೆ ಬಿಟ್ಟಿದ್ದ, ರೌಡಿಯಂತೆ ಕಾಣುತ್ತಿದ್ದ.

ಅವನು ಹೇಳಿದ ವಿಳಾಸಕ್ಕೆ ತಲುಪಿದ ಬಳಿಕ ಆಸಾಮಿ ದುಡ್ಡು ಕೊಡದೆ, ಆಟೊದಿಂದ ಇಳಿದು ಸರಸರನೇ ನಡೆದುಕೊಂಡು ಹೋಗುತ್ತಿರುವಾಗ ರವಿ ಅವನನ್ನು ಅಡ್ಡಗಟ್ಟಿದ ಅವನು ಯಾವ ಮಾತನಾಡದೆ ರವಿಯ ಕೆನ್ನೆಗೆ ಜೋರಾಗಿ ಹೊಡೆದೇಬಿಟ್ಟ– ಇಂಥವರೊಂದಿಗೆ ಮಾತಿಗೆ ಮಾತು ಬೆಳೆಸಬಾರದೆಂದು ರವಿ ಸಮಾಧಾನಪಟ್ಟುಕೊಂಡು ಬೇರೆ ದಾರಿ ನೋಡಿದ.

ಈ ಘಟನೆಯಿಂದ ತಾನು ಪಡೆದ ಯಾತನೆ ಸಾಕೆಂದು ಮನೆಯಲ್ಲೂ ಹೇಳಿರಲಿಲ್ಲ. ಆದರೆ, ಅವನು ಆ ಎಣ್ಣೆ ಪಾರ್ಟಿಯ ಮುಖವನ್ನು ಮರೆತಿರಲಿಲ್ಲ.

ಹೊಸವರ್ಷದ ಮೊದಲನೆಯ ದಿನ ನಾನು ಆ ದುಷ್ಟನನ್ನು ಯಾಕೆ ನೆನೆಯಬೇಕು. ಆಟೊದಲ್ಲಿ ಒಳ್ಳೆಯವರು ಸಹ ಪ್ರಯಾಣ ಮಾಡಿದ್ದಾರಲ್ಲ, ಅವರನ್ನು ನೆನೆಯಬೇಕು. ಸ್ವಲ್ಪ ಸಂತೋಷ ಆದರೂ ಆಗುತ್ತೆ.

ಹಳೆಗಾಲದ ಹಿರಿಯ ನಟರೊಬ್ಬರು, ತನ್ನ ಆಟೊದಲ್ಲಿ ಪ್ರಯಾಣ ಮಾಡಿ, ಮನೆಗೆ ಕರೆದುಕೊಂಡು ಹೋಗಿ ಊಟ ಹಾಕಿಸಲಿಲ್ಲವೇನು? ಸರಿಯಾದ ಸಮಯಕ್ಕೆ ರೈಲ್ವೆ ನಿಲ್ದಾಣಕ್ಕೆ ತಲುಪಿಸಿದಾಗ ಕನ್ನಡ ಬಾರದ ದಂಪತಿ ಅವನಿಗೆ ಬಾಡಿಗೆಗಿಂತ ನಲವತ್ತು ರೂಪಾಯಿ ಜಾಸ್ತಿ ಕೊಡಲಿಲ್ಲವೇನು? ಆಮೇಲೆ ತನ್ನ ವಿದ್ಯಾಭ್ಯಾಸದ ದಾಖಲೆಗಳನ್ನು ಮರೆತು ಹೋಗಿದ್ದವನೊಬ್ಬನ ವಿಳಾಸಕ್ಕೆ ಹೋದಾಗ ಅವನು ಬೇಡ ಬೇಡವೆಂದರೂ ಇನ್ನೂರು ರೂಪಾಯಿ ಕೊಡಲಿಲ್ಲವೇನು.

ಆಟೊದಲ್ಲಿ ಪ್ರಯಾಣ ಮಾಡಿದವರ ಪೈಕಿ ಅನೇಕರು ಮತ್ತೆ ಸಿಗಲಿಲ್ಲ. ಅದೇ ರೀತಿ ಆ ಕುಡುಕ ಸಹ ಮತ್ತೆ ಎದುರಾಗಲಿಲ್ಲ.

ಆಟೊ ಮನೆಯಿಂದ ಹೊರಟು ರಿಂಗ್‌ರೋಡ್ ಬಳಿ ಬಂದಾಗ ಅಲ್ಲಿ ಮೂರು ಮಂದಿ ಮಹಿಳೆಯರು ಆಟೊ ನಿಲ್ಲಿಸಿದರು. ಅವರೆಲ್ಲ ಎಲ್ಲೋ ತುರ್ತಾಗಿ ಹೋಗುವುದಕ್ಕೆ ಚಡಪಡಿಸುತ್ತಿರುವಂತೆ ಭಾಸವಾಯಿತು. ಆಟೊ ನಿಲ್ಲಿಸಿದ ಕೂಡಲೇ ಅವರು ಆಟೊ ಹತ್ತಿ ತಮ್ಮನ್ನು ಚಾಮುಂಡಿಬೆಟ್ಟದ ಪಕ್ಕದಲ್ಲಿರುವ ಸ್ಮಶಾನಕ್ಕೆ ತಲುಪಿಸಲು ಹೇಳಿದರು. ಬಾಡಿಗೆ ಎಷ್ಟಾದರೂ ಸರಿ ಬೇಗ ಹೋಗಬೇಕೆಂದರು. ಅವರ ಕಡೆಯವರ ಹೆಣ ಸ್ಮಶಾನಕ್ಕೆ ಕೊಂಡೊಯ್ದಿದಿದ್ದಾರೆ ಎಂದು ವಿವರಿಸಿದರು.

ವರ್ಷದ ಮೊದಲನೆಯ ದಿನವೇ ಸ್ಮಶಾನಕ್ಕೆ ಬಾಡಿಗೆ ಸಿಕ್ಕಿದ್ದಕ್ಕೆ ಕಿರಿಕಿರಿ ಎನಿಸಿತು. ಆಮೇಲೆ ತನಗೆ ತಾನೇ ಸಮಾಧಾನ ಮಾಡಿಕೊಂಡ.

ಹೆಣ ಸ್ಮಶಾನಕ್ಕೆ ಕೊಂಡೊಯ್ಯುವ ಹೊತ್ತಿಗೆ ಆಟೊ ಅಲ್ಲಿಗೆ ತಲುಪಿತು. ಮಹಿಳೆಯರು ಮರು ಮಾತನಾಡದೆ ರವಿ ಕೇಳಿದಷ್ಟು ಹಣ ಕೊಟ್ಟರು.

ರವಿ ಅಲ್ಲಿಂದ ಹಿಂತಿರುಗಿ ಬರುತ್ತಿರುವಾಗ ರಸ್ತೆಯಲ್ಲಿ ದಂಪತಿಯಿಬ್ಬರು ಆಟೊ ಹತ್ತಿ ಡೈರಿ ಹತ್ತಿರವಿರುವ ಕಲ್ಯಾಣ ಮಂಟಪದ ವಿಳಾಸ ಹೇಳಿದರು.

ಕಲ್ಯಾಣ ಮಂಟಪ ತಲುಪಿದಾಗ ಅಲ್ಲಿ ಯಾವ ಸಂಭ್ರಮದ ವಾತಾವರಣವಿರಲಿಲ್ಲ. ಮುಚ್ಚಿದ ಗೇಟಿನ ಬಳಿ, ಗೇಟ್ ಕೀಪರ್ ನಿಂತುಕೊಂಡು ಮದುವೆಗೆಂದು ಬಂದವರಿಗೆಲ್ಲ ಏನೋ ಹೇಳುತ್ತಿದ್ದ. ದಂಪತಿ ಗೇಟ್‌ ಕೀಪರ್‌ನ ಬಳಿ ಹೋಗಿ ವಿಚಾರಿಸಿದಾಗ, ಕಾರಣಾಂತರದಿಂದ ಮದುವೆ ನಿಂತಿದೆ ಎಂದ. ನಿರಾಸೆಯಿಂದ ದಂಪತಿ ಹಿಂತಿರುಗಿ ಬಂದು ಆಟೊ ಹತ್ತಿ ಮನೆಯ ವಿಳಾಸ ಹೇಳಿದರು.

ಜೀವನದಲ್ಲಿ ಎಂತೆಂಥ ಮುಖಗಳೆದುರಾಗುತ್ತವೆ. ಹೊಸ ವರ್ಷದ ಮೊದಲನೆಯ ದಿನ ಹಸೆಮಣೆಯೇರಿ, ಹೊಸ ಜೀವನ ಪ್ರಾರಂಭಿಸಬೇಕಾದ ದಂಪತಿ ಯಾಕೆ ಮದುವೆ ನಿಲ್ಲಿಸಿದರು.

ದಂಪತಿಗೆ ಅವರ ಮನೆಗೆ ತಲುಪಿಸಿ ಹಿಂತಿರುಗುತ್ತಿರುವಾಗ, ಒಬ್ಬ ಯುವಕ ಮತ್ತು ಒಬ್ಬ ಯುವತಿ ಆಟೊ ನಿಲ್ಲಿಸಿದರು. ಆಟೊ ನಿಲ್ಲಿಸಿದ ಕೂಡಲೇ ಅವರಿಬ್ಬರು ಆಟೊ ಹತ್ತಿ ‘ರೈಲ್ವೆ ಸ್ಟೇಷನ್’ ಎಂದರು.

ಅವರಿಬ್ಬರೂ ಗಾಬರಿಗೊಳಗಾಗಿರುವುದನ್ನು ನೋಡಿ, ಅವರು ಮನೆಯಿಂದ ಓಡಿ ಹೋಗುತ್ತಿದ್ದಾರೆಂದೆನಿಸಿತು. ಇಂದು ನಡೆಯಬೇಕಾಗಿದ್ದ ಮದುವೆಯ ಹುಡುಗಿ ಇವಳೇ ಇರಬಹುದೆಂದು ಅನುಮಾನ ಬಂತು.

ಆಟೊ ‘ರೈಲ್ವೆ ಸ್ಟೇಷನ್‌’ ಮುಂದೆ ನಿಂತ ಕೂಡಲೇ ಇವರಿಗಾಗಿ ಕಾದು ಅಲ್ಲಿ ವಯಸ್ಸಾದ ಮೂರು ನಾಲ್ಕು ಮಂದಿ ಮಹಿಳೆಯರು ನಿಂತಿದ್ದರು. ಇವರು ಇಳಿದು ಅವರಿಗೆ ಹಣದ ಪರ್ಸ್ ಕೊಟ್ಟು ಬೇಗ ಒಳಗೆ ಹೋಗಿ ಇನ್ನೇನು ರೈಲು ಬರುತ್ತೆ ಎಂದು, ಅವರನ್ನು ಓಡಿಸಿದರು. ಪರ್ಸೆ ತರುವುದನ್ನು ಮರೆತು ಬಂದಿದ್ದಾರೆಂದು ಆಮೇಲೆ ರವಿಗೆ ತಿಳಿಯಿತು. ರೈಲ್ವೆ ಸ್ಟೇಷನ್‌ನಿಂದ ಅಗ್ರಹಾರಕ್ಕೆ ಒಂದು ಬಾಡಿಗೆ ಸಿಕ್ಕಿತು.

ರವಿಯ ಆಟೊ ಅಗ್ರಹಾರದಲ್ಲಿ ನಿಂತುಕೊಂಡಿರುವಾಗ, ಯುವಕನೊಬ್ಬ ಬಂದು ಪಶ್ಚಿಮವಾಹಿನಿಗೆ ಬರುತ್ತೀಯಾ ಎಂದು ವಿಚಾರಿಸಿದ, ಪಶ್ಚಿಮವಾಹಿನಿಯಲ್ಲಿ ಸ್ವಲ್ಪ ಸಮಯ ಇರಬೇಕು. ಆಸ್ಥಿ ವಿಸರ್ಜನೆ ಮಾಡಬೇಕಾಗಿದೆ ಎಂದ.

ಯಾರೋ ಪುಣ್ಯಾತ್ಮನ ಕೊನೆ ಪಯಣ. ಸ್ವಲ್ಪ ರಿಯಾಯಿತಿ ಬಾಡಿಗೆ ತೆಗೆದುಕೊಂಡರೆ ಅದೊಂದು ಪುಣ್ಯದ ಕೆಲಸಕ್ಕೆ ಸಹಾಯ ಮಾಡಿದಂತಾಗುತ್ತೆ, ವರ್ಷದ ಮೊದಲನೆಯ ದಿನ ತನ್ನಿಂದ ಅವರಿಗಿಷ್ಟು ಸಹಾಯವಾಗುವಂತಾಗಲಿ ಎಂದು ಅವನು ಬಾಡಿಗೆ ಹೇಳಿದ. ಯುವಕ ಒಪ್ಪಿಕೊಂಡು ಇಲ್ಲೆ ಓಣಿಯಲ್ಲಿ ಮನೆಯಿದೆ ಎಂದು ಆಟೊ ಹತ್ತಿ ಮನೆಯ ದಾರಿ ಸೂಚಿಸಿದ. ಅವನು ಹೇಳಿದ ಮಾರ್ಗದಲ್ಲಿ ಆಟೊ ಓಡಿಸಿದ. ಮನೆಯೊಂದರ ಮುಂದೆ ಆಟೊ ನಿಲ್ಲಿಸುತ್ತಿರುವಾಗ ಮನೆ ಮುಂದೆ ನೇತು ಹಾಕಿರುವ ಶ್ರದ್ಧಾಂಜಲಿ ಫ್ಲೆಕ್ಸ್ ನೋಡಿದ ರವಿ. ಭಾವಪೂರ್ಣ ಶ್ರದ್ಧಾಂಜಲಿ ಎಂದು ಬರೆದು ಅದರ ಕೆಳಗೊಂದು ಭಾವಚಿತ್ರವಿತ್ತು. ಭಾವಚಿತ್ರ ನೋಡುತ್ತಿದ್ದಂತೆ ಗಲಿಬಿಲಿಗೊಂಡ ರವಿ. ಅವನೆಯೋ ಅಥವಾ ಇವನು ಬೇರೆಯೋ, ಹೋದ ವರ್ಷ ಮೊದಲನೆಯ ದಿನ ಇವನೇ ಅಲ್ಲವೇನು ತನ್ನ ಕೆನ್ನೆಗೆ ಹೊಡೆದಿದ್ದು, ಅನುಮಾನವೇ ಇಲ್ಲ ಅವನೇ.

‘ಆಟೊ ಬರೊಲ್ಲ, ಬೇರೆ ಆಟೊ ನೋಡಿಕೊಳ್ಳಿ’ ಎಂದು ಹೇಳಿಬಿಡಬೇಕೆಂದು ಗೊಂದಲಕ್ಕೊಳಗಾಗಿರುವಾಗಲೇ ಅರೇಳು ವರ್ಷದ ಹುಡುಗನೊಬ್ಬ ಇಬ್ಬರು ಯುವಕರೊಂದಿಗೆ ಅಸ್ಥಿ ತುಂಬಿರುವ ಮಡಕೆ ಹಿಡಿದುಕೊಂಡು ಮನೆಯಿಂದ ಹೊರಬಂದರು. ಅವರ ಹಿಂದೆಯೇ ನಾಲ್ಕಾರು ಮಹಿಳೆಯರು ಎದೆ ಬಡಿದುಕೊಂಡು ಬಂದು ಅಳತೊಡಗಿದರು. ಈ ದೃಶ್ಯವನ್ನು ರವಿಯಿಂದ ನೋಡಲು ಸಾಧ್ಯವಾಗದೆ, ಅವನು ತಲೆ ಬಗ್ಗಿಸಿಕೊಂಡ, ಅವನ ಕಣ್ಣು ತೇವಗೊಂಡವು.

ಆ ಹುಡುಗ ಮತ್ತು ಇಬ್ಬರು ಬಂದು ಆಟೊದಲ್ಲಿ ಕೂರಿದ ಕೂಡಲೇ, ಆಟೊ ಓಡಿಸಿದ.

ಕುಡಿದ ಅಮಲಿನಲ್ಲಿ ನಾಲ್ಕಾರು ಮಂದಿ ಬಡಿದಾಡಿಕೊಂಡರಂತೆ, ಕೊನೆಗೆ ಒಬ್ಬನ ಪ್ರಾಣ ಹೋಯಿತೆಂದು ಯುವಕರು ವಿವರಿಸಿದರು.

ಅಸ್ಥಿ ಹಿಡಿದುಕೊಂಡಿದ್ದ ಹುಡುಗ ಕಣ್ಣೀರು ಹಾಕುತ್ತಲೇ ಇದ್ದ.

ತನ್ನ ಜೀವನದಲ್ಲಿ ಇಂಥದ್ದೊಂದು ಘಟನೆ ನಡೆಯಬಾರದಿತ್ತು. ಆಟೊ ಓಡಿಸುತ್ತ ಯೋಚಿಸಿದ ರವಿ. ಹಿಂದಿನ ವರ್ಷ ಆ ಕುಡುಕ ನನ್ನ ಆಟೊದಲ್ಲಿ ಕೂರಬಾರದಿತ್ತು. ನನಗೆ ಹೊಡೆಯಲುಬಾರದಿತ್ತು. ಅವನು ಹೊಡೆದರೂ ನಾನು ಅವನ ಮುಖ ನೆನಪಿನಲ್ಲಿಟ್ಟುಕೊಳ್ಳಬಾರದಿತ್ತು.

ನೆನಪಿನಲ್ಲಿಟ್ಟುಕೊಂಡಿದ್ದರೂ ಅವನಿಗೆ ಇಂಥ ದುರಂತದ ಸಾವು ಬರಬಾರದಿತ್ತು, ಅವನು ಸತ್ತರೂ ಅವನ ಅಸ್ಥಿ ನನ್ನ ಆಟೊದಲ್ಲಿಯೇ ಕೊಂಡೊಯ್ಯುವಂಥ ಸಂದರ್ಭ ಬರಬಾರದಿತ್ತು.

ಆದರೆ, ನಾವು ಯೋಚಿಸಿದಂತೆಯೇ ಜೀವನದಲ್ಲಿ ಎಲ್ಲವೂ ನಡೆಯುವುದಿಲ್ಲವಲ್ಲ. ಯೋಚಿಸಿದ ರವಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT