ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಥೆ | ಜೀವನ ಪ್ರೇಮ

Published 15 ಅಕ್ಟೋಬರ್ 2023, 4:37 IST
Last Updated 15 ಅಕ್ಟೋಬರ್ 2023, 4:37 IST
ಅಕ್ಷರ ಗಾತ್ರ

ಅಜಯ್ ಕುಮಾರ್ ಎಂ ಗುಂಬಳ್ಳಿ

ರಾತ್ರಿ ಒಂಭತ್ತಕ್ಕೆ ಕೆಲಸ ಮುಗಿದು, ಜ್ಯೂಸ್ ಸೆಂಟರ್‌ನಿಂದ ರೂಮಿನ ಕಡೆಗೆ ಹೊರಟ ನವೀನ್. ಮೊದಲೆಲ್ಲ ಕಂಡು ‘ಗೊರ್ರ್’ ಎನ್ನುತ್ತಿದ್ದ ನಾಯಿ ಈಗ ತೆಪ್ಪಗಿರುತ್ತಿತ್ತು. ಇಪ್ಪತ್ತು ದಿನಗಳು ನಿರಂತರವಾಗಿ ಅವನನ್ನು ನೋಡಿ ಪರಿಚಿತನೆಂದು ಪರಿಗಣಿಸಿತ್ತು. ‘ಅಬ್ಬಾ’ ಎಂದು ನವೀನ್ ಮೆಟ್ಟಿಲು ಏರಿದ. ಪಕ್ಕದಲ್ಲಿದ್ದ ಮಸೀದಿಯಲ್ಲಿ ಜನರಿದ್ದರು. ಅವನಿದ್ದ ಬೀದಿಯೇ ಎಲ್ಲಾ ಜನಾಂಗದವರ ಗೂಡಾಗಿತ್ತು. ಒಂದು ಪಕ್ಕಕ್ಕೆ ಕನಕದಾಸರ ನಾಮ ಫಲಕ. ಮತ್ತೊಂದು ತಿರುವಲ್ಲಿ ಬಸವಣ್ಣರವರ ಬೀದಿ. ಮತ್ತೊಂದು ರಸ್ತೆಗೆ ‘ಟಿಪ್ಪು ಬಡಾವಣೆ’ ಹೆಸರಿತ್ತು. ದೂರದಲ್ಲಿ ಮಹದೇಶ್ವರ ದೇವಸ್ಥಾನ; ಅದರ ನೂರು ಮೀಟರ್ ಹಿಂದಕ್ಕಿದ್ದುದೇ ದೊಡ್ಡ ಮಸೀದಿ. ಅದರ ಪಕ್ಕದ ಮನೆಯ ಮೇಲಿದ್ದ ಸಣ್ಣ ರೂಮು ನವೀನ್ಗೆ, ಜ್ಯೂಸ್ ಸೆಂಟರ್ ಓನರ್ ಸೂರಿ ಕೊಡಿಸಿದ್ದ. ‘ಒಬ್ಬನಿಗೆ ಸಾಕಾಗಿದ್ದ ಅದಕ್ಕೆ ಇನ್ನೊಬ್ಬ ಬಂದರೂ ಅಡ್ಡಿಯಿಲ್ಲ’ ನವೀನ್ಗಿದ್ದ ಆಸೆ. ಒಬ್ಬನೇ ಇರಲು ಅವನಿಗೆ ಬಲುಕಷ್ಟವೆನಿಸಿತ್ತು. ಬಿ.ಎ ಪದವೀಧರ, ಅನಿವಾರ್ಯತೆಗೆ ಓದಿಗೆ ತಿಲಾಂಜಲಿ ಇಟ್ಟು ಕೆಲಸಕ್ಕೆ ಒಗ್ಗಿಹೋಗಿದ್ದ. ಬೇರೆ ದಾರಿಯೇ ಅವನಿಗಿರಲಿಲ್ಲ. ಇವನಿಗಿಂತ ಸಣ್ಣ ವಯಸ್ಸಿನ ಹುಡುಗರು ಎಂಟು ಒಂಭತ್ತಕ್ಕೆ ಸ್ಕೂಲು ಬಿಟ್ಟು ಕೆಲಸಕ್ಕೆ ಬೆಂಗಳೂರಿಗೆ ಹೋಗಿ, ನಾಲ್ಕಾರು ಕಾಸು ಸಂಪಾದನೆ ಮಾಡಿಕೊಂಡು, ಹೊಸ ಸ್ಟೈಲ್ನಲ್ಲಿ ಊರಿಗೆ ಬಂದು ಮನೆಗೆ ಬೀರು, ಚೇರುಗಳು, ಠೀವಿ ತಂದಿದ್ದರು. ಕೆಲ ಜನರು ನವೀನ್ಗೆ ನೋವಾಗಲೆಂದೆ ‘ಯಾತಿಕ್ಯಾ ನೀನು ಓದದು. ನಿಂಗೆ ಗವರ್ನಮೆಂಟು ಕೆಲ್ಸ ಸಿಕ್ಬುಟ್ಟದಾ. ಆ ಹೈದ ನಿಂಗಿಂತ ಚಿಕ್ಕದು. ನೋಡು ಹೇಗ್ ದುಡೀತವ್ನೆ’ ಎಂದು ಆಗಾಗ ಕುಟುಕುತ್ತಿದ್ದರು. ಇಂಥವೇನು ಹೊಸದೇ? ಅವನು ಕುಗ್ಗದೇ ‘ಹೌದಾ, ಚೆನ್ನಾಗಿರಲಿ’ ಎನ್ನುತ್ತಿದ್ದ. ಅಷ್ಟಕ್ಕೆ ತೃಪ್ತಿ ಹೊಂದದ ಹೊಟ್ಟೆಕಿಚ್ಚಿನವರು ‘ಅದೇನ್ ಕಿಸಿದು ದಬ್ಬಾಕ್ತೀಯ? ನಾವು ನೋಡ್ತೀನಿ’ ಅನ್ನುವದನ್ನ ನಗುವಿನ ಮುಖವಾಡದಲ್ಲಿ ಹೇಳುತ್ತಿದ್ದರು. ಇವ್ಯಾವುದಕ್ಕು ತಲೆಕೆಡಿಸಿಕೊಳ್ಳದ ನವೀನ್ ತನ್ನಪಾಡಿಗಿದ್ದ. ಒಂದಷ್ಟು ಪುಸ್ತಕ ಬಿಟ್ಟರೆ ಅವನ ಬಳಿ ಇನ್ನೇನು ಇರಲಿಲ್ಲ. ಅಪ್ಪ-ಅವ್ವ ಜನರ ಮಾತಿಗೆ ಹೆಚ್ಚಿನ ಮಹತ್ವಕೊಟ್ಟು ಮಗನನ್ನು ಬೈಯಲು ಶುರುಮಾಡಿದಾಗ, ಅದು ಅವನಿಗೆ ಹೆಚ್ಚಿನ ನೋವುಂಟು ಮಾಡಿತು. ಹಲವಾರು ಪ್ರಶ್ನೆಗಳನ್ನು ತನ್ನಲ್ಲೆ ಕೇಳಿಕೊಂಡ. ಇಬ್ಬರು ತಂಗಿಯರಿದ್ದರು. ಅಪ್ಪ-ಅವ್ವನ ಮಾತಿಗೆ ಎದುರಾಡದೇ ಬಿ.ಎ ಕೊನೆಯ ಪರೀಕ್ಷೆ ಮುಗಿದ ಕೂಡಲೇ ಮೈಸೂರಿಗೆ ಬಸ್ಸು ಹತ್ತಿದ್ದ. ಅಣ್ಣ ಸಡನ್ನಾಗಿ ಎತ್ತಗೋ ಹೊರಟಿದ್ದು ತಂಗಿಯರ ಕಂಗಳಲಿ ನೀರು ಉಕ್ಕಿಸಿತು. ಈಗ ಹಳೆಯದೆಲ್ಲ ನೆನಪಾದವು. ಬದಿಗೆ ತಳ್ಳಿ ಊಟದ ಪೊಟ್ಟಣ ಬಿಚ್ಚಿದ. ನೀರಿನ ಬಾಟಲ್ ಲೈಟಿಗೆ ಹೊಳೀತಿತ್ತು.

ನೇರ ಮೈಸೂರಿಗೆ ಬರಲು ಅವನಿಗೆ ಹಿಂಬು ಕೊಟ್ಟಿದ್ದು; ಮೈಸೂರುಮಿತ್ರದ ಜಾಹಿರಾತು. ಪೇಪರ್ ಓದುವ ಅಭ್ಯಾಸ ಕೈಹಿಡಿದಿತ್ತು.

ಊಟ ಮುಗಿಸಿ ಆಚೆಗೆ ಬಂದ. ಮಸೀದಿಯಲ್ಲಿ ಜನರು ವಿರಳವಾಗಿದ್ದರು. ಅದರ ಅಂಚಿನ ಲೈಟ್ಕಂಬದಲಿ ಸೋಡಿಯಂ ದೀಪ ಬೆಳಗುತ್ತಿತ್ತು.

ಎಲ್ಲರಿಗೂ ಹತ್ತಿಕೊಳ್ಳುವ ‘ಪ್ರೇಮ’ ಕಾಯಿಲೆ ಇವನಿಗು ಅಂಟಿತ್ತು. “ಯಾತಕ್ಕೆ? ಹಿಂದಿನದು” ಗಮನ ಬೇರೆಡೆಗೆ ಇಳಿಸಿದ. ಆಗಲಿಲ್ಲ. ತಿರುಗಿ ಚಿತ್ತ ಅದೇ ವಿಷಯ ಎತ್ತಿಕೊಂಡಿತು. ಮನಸ್ಸಲ್ಲಿ ಕಾಲೇಜು ದಿನಗಳು ಮುನ್ನೆಲೆಗೆ ಬಂದವು. ಒಂದಾ-ಎರಡಾ ಅಲ್ಲಿ ಅಸಂಖ್ಯಾತ ನೆನಪುಗಳಿವೆ. ಅವನಿಗೀಗ ಕಾಡುತ್ತಿದ್ದುದು ಸ್ನೇಹಾಳ ಒಡನಾಟ. ಇಬ್ಬರಿಗು ಪರಿಚಯವಾಗಿದ್ದು ಎನ್‍ಎಸ್‍ಎಸ್ ಕ್ಯಾಂಪಿನಲ್ಲಿ. ಒಂದಿನ ನವೀನ್ ಕಾಲೇಜು ಆವರಣದಲ್ಲಿ ಬಿದ್ದಿದ್ದ ಪೇಪರ್ ತುಂಡುಗಳನ್ನು ಹಾಯುತ್ತಿದ್ದ. ಅಚಾನಕ್ಕಾಗಿ ಅದನ್ನು ನೋಡಿದ ಮಹದೇವಸ್ವಾಮಿ ಸರ್ ‘ಒಳ್ಳೆಯ ಕೆಲಸ ಮಾಡ್ತಿದ್ದೆ. ನೀನು ಎನ್‍ಎಸ್‍ಎಸ್ ಕ್ಯಾಂಪ್ಗೆ ಬಾ’ ಎಂದು ಹೇಳಿ ಹೋದರು. ಅದುವರೆಗೂ ಅವನಿಗೆ ಎನ್‍ಎಸ್‍ಎಸ್ ಎಂದರೆ ಏನು ಅಂತಲೇ ಗೊತ್ತಿರಲಿಲ್ಲ. ಪೋಲಿ ಗೆಳೆಯರು ತನ್ನ ಹೆಸರಲ್ಲಿ ಬರೆದಿದ್ದ ಕೆಟ್ಟ ಪತ್ರಕ್ಕಾಗಿ ಅವನು ಪೇಪರ್ ಹಾಯುತ್ತಿದ್ದ.

ಕ್ಯಾಂಪ್‌ನಲ್ಲಿ ನವೀನ್ ಬಹಳ ಉತ್ಸಾಹದಿಂದ ಕೆಲಸ ಮಾಡುತ್ತಿದ್ದ. ಚರ್ಚೆಗಳಲ್ಲಿ ಭಾಗವಹಿಸುತ್ತಿದ್ದ. ಅದನ್ನು ನೋಡಿ ಮಹದೇವಸ್ವಾಮಿ ಸರ್ ‘ವೆರಿ ಗುಡ್’ ಬೆನ್ನು ತಟ್ಟಿದ್ದರು. ಕ್ಯಾಂಪ್ನ ಆರಂಭಿಕ ದಿನಗಳಲ್ಲಿ ಸ್ನೇಹ ನವೀನ್ ಕಣ್ಣಿಗೆ ಬಿದ್ದಿದ್ದಳು. ಆಗಾಗ ಎದುರಿಗೆ ಕಾಣಿಸಿಕೊಳ್ಳುತ್ತಿದ್ದಳು.

ಕ್ಯಾಂಪಿನ ಮೂರನೇ ದಿನ ಬೆಳಿಗ್ಗೆ ಎಲ್ಲರೂ ಪ್ರಾರ್ಥನೆ ಮಾಡುತ್ತಿದ್ದರು. ಮೊಬೈಲ್ ರಿಂಗಣಿಸಿದ್ದೇ ಸಮಸ್ಯೆಗೆ ಕಾರಣವಾಯ್ತು. ಮಹದೇವಸ್ವಾಮಿ ಸರ್ ವಿಪರೀತ ಕೋಪಗೊಂಡು ‘ಯಾರದ್ದು? ಫೋನು ಹೇಳಿ’ ಗುಡುಗಿದರು. ಅವರು ಅಶಿಸ್ತನ್ನು ಎಂದೂ ಒಪ್ಪಿದವರಲ್ಲ. ನವೀನ್ ಸಪ್ಪೆ ಮುಖಹೊತ್ತು ಸಾಲಿನಿಂದ ಎರಡೆಜ್ಜೆ ಮುಂದಕ್ಕೆ ನಿಂತ. ‘ಕ್ಯಾಂಪಿನಲ್ಲಿ ಹೇಗಿರಬೇಕೆಂದು ಮೊದಲೇ ಹೇಳಿಲ್ವಾ? ನೀನೇನು ಜಾಸ್ತಿ ಹೇಳ್ಬೇಡ. ಇವತ್ತು ನೀನು ಈ ಆವರಣವನ್ನು ಒಬ್ಬನೇ ಸ್ವಚ್ಛಗೊಳಿಸಿ, ಭಾರತದ ಭೂಪಟ ಬರಿಬೇಕು. ಅವನ ಸಹಾಯಕ್ಕೆ ಯಾರು ಹೋಗಬಾರದು. ಹೋದರೆ ಅವರಿಗೂ ಶಿಕ್ಷೆ ಅನ್ವಯಿಸುತ್ತೆ’ ಎಂದು ಎಲ್ಲರನ್ನು ಶ್ರಮದಾನಕ್ಕೆ ಕಳಿಸಿದರು.

ನಡೆದ ಘಟನೆಯಿಂದ ನವೀನ್ಗೆ ತೀವ್ರ ಮುಜುಗರವಾಯ್ತು. ಫೋನು ಮಾಡಿದ ಗೆಳೆಯ ಅನೂಪ್ನನ್ನು ಮನಸ್ಸಲ್ಲೇ ಉಗಿದು ಉಪ್ಪಾಕಿದ. ಸ್ನೇಹಾಳ ಮುಖವನ್ನೇ ಹುಡುಕುತ್ತಿದ್ದ ಅವನಿಗೆ ಈಗ ಅವಳಿಲ್ಲಿರುವುದೇ ಬೇಡ ಎನಿಸಿತು. ‘ಇಂದು ತಾನೆದ್ದ ಮಗ್ಗಲು ಸರಿಯಿಲ್ಲ. ಎದ್ದಾಗ ಯಾರ ಮುಖ ನೋಡಿದೇ’ ನೆನೆಸಿದ. ಅವೆಲ್ಲ ಕಾರಣವಲ್ಲ. ‘ಥೂ ನಾನೇಕೆ ಹೀಗೆ ಯೋಚನೆ ಮಾಡ್ತಿದ್ದೀನಿ’ ಎಂದುಕೊಂಡು ಒಬ್ಬನೇ ಶಾಲಾ ಆವರಣವನ್ನು ಸ್ವಚ್ಛಗೊಳಿಸಲು ಮುಂದಾದ. ಅವನಿಗೆ ಒದಗಿದ ಶಿಕ್ಷೆ ಬಗ್ಗೆ ಅನೇಕರಿಗೆ ಅನುಕಂಪವಿತ್ತು. ಲೆಕ್ಚರರ್ ಕಾಣದಂಗೆ ನಿಂತಿಕೊಂಡು ‘ನಾವಿದ್ದೀವಿ ಮಾಡು’ ಧೈರ್ಯ ತುಂಬುತ್ತಿದ್ದರು. ಸ್ನೇಹ ಅವನ ಬಳಿ ಬಂದು ‘ಫೋನು ಸೈಲೆಂಟ್ ಮಾಡ್ಬಾರ್ದಾ, ಚೇ’ ಬೇಸರದಿಂದ ಹೋದಳು. ಅವಳು ಮಾತನಾಡಿಸಿದ್ದು ನವೀನ್ಗೆ ಅತೀವ ನೆಮ್ಮದಿ ನೀಡಿತು. ಹುಮ್ಮಸ್ಸು ತುಂಬಿಕೊಂಡಂತೆ ಕೆಲಸ ಪೂರ್ತಿ ಮಾಡಿ, ಭೂಪಟ ಬಿಡಿಸಲು ಕೂತ. ಸಣ್ಣ ಕಲ್ಲುಗಳನ್ನು ಸ್ನೇಹ, ಸುಪ್ರಿಯ ತಂದು ಮುಂದಿಟ್ಟರು. ‘ಯಾತಕ್ಕಿವು’ ಅಂದ. ‘ಭೂಪಟದ ಮೇಲೆ ಒಂದರಹಿಂದೆ ಒಂದರಂತೆ ಜೋಡಿಸು, ಚೆನ್ನಾಗಿ ಕಾಣುತ್ತೆ’ ಇಬ್ಬರು ನಕ್ಕು ಯಾರಿಗು ಕಾಣದಂತೆ ಮಾಯವಾದರು. ಅದೇಕೋ ಸ್ನೇಹ ಮನಸ್ಸಿಗೆ ಇಳಿಯುತ್ತಿದ್ದಳು.

ಅಡುಗೆ ಮಾಡುತ್ತಿದ್ದ ಭಟ್ಟ ಕಾಂತಣ್ಣ ಬೀಡಿ ಸೇದಲು ತಾವಿದ್ದ ಕಟ್ಟಡದ ಹಿಂದಕ್ಕೆ ಹೋದ. ಮರಗಿಡಗಳು ಹೆಚ್ಚಿದ್ದ ಹಿತ್ತಲಲ್ಲಿ ಹೆಂಗಸೊಬ್ಬಳು ಬಟ್ಟೆ ಹೊಗೆಯುತ್ತಿದ್ದಳು. ಸೀರೆ ಮೊಣಕಾಲಿನವರೆಗಷ್ಟೇ ಇತ್ತು. ಎದೆಯ ಅರ್ಧಬಾಗ ಆಚೆಗೆ ಕಾಣಿಸುತ್ತಿತ್ತು. ಈಗ ಅವನು ಉಚ್ಚೆ ಉಯ್ಯುವವನಂತೆ ನಿಂತಿದ್ದ. ಆ ಹೆಂಗಸು ತನ್ನನ್ನು ನೋಡಲಿ ಎಂಬುದಕ್ಕಾಗಿಯೇ ಇನ್ನೊಂದು ಬೀಡಿ ತುಟಿಗಿರಿಸಿಕೊಂಡು ಅಲ್ಲೇ ನಿಂತಿದ್ದ. ಅವಳು ತನ್ನ ಪಾಡಿಗೆ ಬಟ್ಟೆ ಹೊಗೆಯುತ್ತಿದ್ದಳು. ಮೋಹಗೊಂಡಿದ್ದ ಕಾಂತಣ್ಣ ಫೋನ್ ಎತ್ತಿಕೊಂಡು ಕರೆಮಾಡಿ ‘ಯಾವಾಗ ಸಿಕ್ತೀಯ, ಮನೆಗೆ ಬರ್ಲಾ’ ಎನ್ನುತ್ತ ತೊಡೆಯ ಬಳಿ ಸವರಿಸಕೊಳ್ಳುತ್ತ ಮಾತಿಗಿಳಿದಿದ್ದ. ಬಟ್ಟೆ ಹೊಗೆಯುತ್ತಿದ್ದ ಹೆಂಗಸು ಈಗ ಇವನತ್ತಲೇ ನೋಡುತ್ತಿದ್ದಳು.

ಸಂಜೆಯ ಲಘು ಉಪಹಾರದ ಮೇಲೆ ಎಲ್ಲಾ ವಿದ್ಯಾರ್ಥಿಗಳು ವೃತ್ತಾಕಾರದಲ್ಲಿ ಕೂರುವಂತೆ ಮಹದೇವಸ್ವಾನಿ ಸರ್ ಆದೇಶವಿತ್ತರು. ಅದರಂತೆ ವಿದ್ಯಾರ್ಥಿಗಳಿಂದ ವೃತ್ತ ರಚನೆಗೊಂಡಿತು. ಸರ್ ಎದ್ದು ನಿಂತು ‘ನೀವೆಲ್ಲ ಗ್ರಾಮ ಪಂಚಾಯ್ತಿ ಆವರಣವನ್ನ ಸ್ವಚ್ಛಗೊಳಿಸಿದ್ದೀರಿ. ನಿಮಗೆಲ್ಲ ಅಭಿನಂದನೆಗಳು. ಇದೇ ತರ ನಿಮ್ಮ ಕೆಲಸ ಇನ್ನೂ ನಾಲ್ಕುದಿನ ನಡೆಯಬೇಕು’ ಎಂದು ‘ಈಗ ನವೀನ್ ವಿಷಯಕ್ಕೆ ಬರೋಣ’ ಎಂದಾಗ ಎಲ್ಲರೂ ಗೊಳ್ಳೆಂದರು. ಅವನು ಮತ್ತೆಲ್ಲಿ ಬೈಸಿಕೊಳ್ಳಬೇಕೋ ಎಂಬಂತೆ ಅಳುಕಿನಿಂದಲೇ ಕೂತಿದ್ದ. ಆಗಾಗ ಸ್ನೇಹಳ ಕಡೆಗೆ ನೋಡುವುದು ಅವನಿಗೆ ಅನಿವಾರ್ಯ ಎನಿಸಿ ನೋಡುತ್ತಿದ್ದ. ಅವಳು ಸಹ ಕದ್ದು ಮುಚ್ಚಿ ನೋಟ ಎಸೆಯುತ್ತಿದ್ದಳು.

‘ಎದ್ದೇಳು ನವೀನ್’ ಗ್ರೂಪ್ ಲೀಡರ್ ರುದ್ರೇಶ್ ಹೇಳಿದಾಗ ಗದರುತ್ತಲೇ ‘ನಾನೇನು ತಪ್ಪು ಮಾಡಿಲ್ಲ. ಕೆಲ್ಸಾನ ಅಚ್ಚುಕಟ್ಟಾಗಿ ಮಾಡಿದ್ದೀನಿ’ ಎಂದ.

ಮಹದೇವಸ್ವಾಮಿ ಸರ್ ನಗುತ್ತಾ ‘ಹೌದು ಕಣೋ. ನೀನು ಗುಡ್ ವರ್ಕರ್. ಅದಕ್ಕೆ ನಿಂಗೆ’ ಎನ್ನುತ್ತಿದ್ದಂತೆ ವಿದ್ಯಾರ್ಥಿಗಳೆಲ್ಲರೂ ಚಪ್ಪಾಳೆ ತಟ್ಟಿದರು.

ನವೀನ್ ಮುಗುಳ್ನಕ್ಕ. ಸರ್ ಮುಂದುವರೆದು ‘ಭೂಪಟವನ್ನು ಚೆನ್ನಾಗಿ ಬಿಡಿಸಿದ್ದೀಯ. ಸ್ವಚ್ಛತೆಯನ್ನು ಅಷ್ಟೇ’ ಎಂದು ಬೆನ್ನು ತಟ್ಟಿದಾಗ ನವೀನ್ ಮುಖದಲ್ಲಿ ತೇಜಸ್ಸು ಹೊಳೆಯಿತು. ಸ್ನೇಹಾಳು ಸಹ ಇವನತ್ತ ನೋಡಿ ಕಿರುನಗೆ ಬೀರಿದಳು.

ಎಂದಿನಂತೆ ಸಾಂಸ್ಕøತಿಕ ಚಟುವಟಿಕೆಗಳು ಪ್ರಾರಂಭವಾದವು. ಹಾಸ್ಯ, ನೃತ್ಯ, ನಾಟಕ ಹೀಗೆ ಅಲ್ಲಿ ಉಲ್ಲಾಸ ಉತ್ಸಾಹಗಳೇ ರಾರಾಜಿಸುವಂತಾಯಿತು.

ರಾತ್ರಿ ಊಟ ಮುಗಿಸಿ ಎಲ್ಲರೂ ಮಲಗಲು ತಯಾರಿದ್ದಾಗಲೂ ಕೆಲವರು ಓಡಾಡುತ್ತಿದ್ದರು. ಕಾಂತಣ್ಣ ಹೊಂಗೆಮರದ ಕೆಳಗೆ ಒಬ್ಬನೇ ಮೊಬೈಲ್ ನೋಡುತ್ತ ಕೂತಿದ್ದ. ಶಬ್ದ ಯಾರಿಗು ಕೇಳದಿರಲಿ ಎಂದು ಕಿವಿಗೆ ಹೆಡ್‍ಫೋನ್ ಬಳಿಸಿದ್ದ. ಸ್ನೇಹಾಳು ಸಂಪಿಗೆ ಮರದತ್ತಿರಕ್ಕೆ ಹೋಗುತ್ತಿದ್ದಳು. ಅವಳನ್ನು ನೋಡಿ ನವೀನ್ ಕಳವಳಗೊಂಡ. ಯಾಕೆಂದರೆ ಮೊದಲೇ ಆ ಕಡೆಗೆ ಸಂತೋಷ್ ಹೋಗಿದ್ದ. ಸದ್ಯಕ್ಕೀಗ ಕರೆಂಟು ಹೋಗಿ ಅವನನ್ನು ಗಾಬರಿಗೊಳಿಸಿತು. ವಿಚಲಿತಗೊಂಡು ಟಾರ್ಚ್ ಆನ್ ಮಾಡಿಕೊಂಡು ಸೀದಾ ಅವರ ಬಳಿಯೇ ಹೋದ. ಸಂತೋಷ್ ಸ್ನೇಹಾಳ ಕಾಲು ಹಿಡಕೊಂಡು ಬೇಡಿಕೊಳ್ಳುತ್ತಿದ್ದ. ಅವಳು ಎರಡೇ ಮಾತಿಗೆ ‘ಇನ್ಮುಂದೆ ಮರ್ಯಾದೆಯಿಂದಿರು’ ಎಂದೇಳಿ ಇವನತ್ತ ನೋಡಿ ಪುಳಕಿತಗೊಂಡಳು. ಅಷ್ಟಕ್ಕೆ ಕರೆಂಟು ಬಂತು. ‘ಇದೇನ್ ಇಲ್ಲಿ’ ಅವನೇ ನುಡಿದ. ‘ಅದು’ ಎನ್ನುತ್ತ ಸ್ವಲ್ಪ ತಬ್ಬಿಬ್ಬುಗೊಂಡಳು. ನವೀನ್ ಇನ್ನಷ್ಟು ಘಾಸಿಗೊಂಡು ‘ಇವರಿಬ್ಬರ ಲವ್ ಮ್ಯಾಟರ್ ಆಗದಿರಲಿ’ ದೇವರಲ್ಲಿ ಉಚ್ಛ ಮಟ್ಟದ ಪ್ರಾರ್ಥನೆ ಮಾಡುತ್ತಿದ್ದ. ‘ಲೋಫರ್ ಅವ್ನು. ಕೆಟ್ಟದಾಗಿ ಮಾತಾಡಿದ್ದ’ ಎನ್ನುತ್ತ ಸ್ನೇಹ ಬಗ್ಗೆ ಸಂತೋಷ್ ಬಿರುಸು ನುಡಿಗಳ ಕಕ್ಕುತ್ತ ನವೀನ್ ಜೊತೆ ಹೆಜ್ಜೆ ಹಾಕುತ್ತಿದ್ದಳು. ಟೇಮು ಮೀರುತ್ತಿದ್ದಂತೆ ಮಹದೇವಸ್ವಾಮಿ ಸರ್ ಭಯಕ್ಕೆ ಎಲ್ಲರೂ ರೂಮಿಗೆ ಸೇರಿಕೊಂಡರು.

ಇವನಿಗೆ ನಿದ್ದೆ ಬಾರದೇ ಅವಳದೇ ಗುಂಗಿನಲ್ಲಿದ್ದ. ಪದೇ ಪದೇ ಅವಳ ಮಾತುಗಳನ್ನು ನೆನೆಯುತ್ತ ಖುಷಿಗೊಳ್ಳುತ್ತ ಈಗೀಗ ಅದೇ ಸನ್ನಿವೇಷಕ್ಕೆ ಒಂದಿಷ್ಟು ಇತರೆ ಸೇರಿಸಿಕೊಂಡು ಇನ್ನಷ್ಟು ಆನಂದ ಹೀರುತ್ತಿದ್ದ.

ಸ್ನೇಹಾ ಹುಡುಗರ ರೂಮಿನ ಹತ್ತಿರಕ್ಕೆ ಬಂದಳು. ಒಂದೆರಡು ನಿಮಿಷ ಮೌನದಲ್ಲೇ ಇದ್ದವಳು ‘ನವೀನ್’ ಕರೆದಳು. ಅವಳಿಗೆ ನಡುಕವಿತ್ತು. ಅವಳದೇ ಧ್ಯಾನದಲ್ಲಿದ್ದ ಅವನಿಗೆ ಅವಳದೇ ಧ್ವನಿ ಕರೆಯಲು ಚೆಂಗನೆ ನೆಗೆದು ಆಚೆಗೆ ಬಂದ. ಅವಳನ್ನು ನೋಡಿ ಹೃದಯ ಕಂಪಿಸತೊಡಗಿತು. ‘ಏನು ಹೇಳು’ ಅಂದ. ‘ಬನ್ನಿ ಆಚೆ ಹೋಗೋಣ’ ಎಂದಿದ್ದೇ ನವೀನ್ ‘ಬಾ’ ಎಂದು ಅವಳಿಂದೆ ಹೆಜ್ಜೆ ಹಾಕತೊಡಗಿದ. ಇಬ್ಬರೂ ಇಳಿಜಾರಿನ ಮಂದ ಬೆಳಕಿದ್ದ ಡಾಂಬರು ರಸ್ತೆಗೆ ಇಳಿದರು. ತಂಗಾಳಿ ಮೈಸೋಕುತ್ತಿತ್ತು. ಇಬ್ಬರಿಗು ಹೊಸ ಅನುಭವ. ಕೆಲಹೊತ್ತು ಮೌನ. ಒಮ್ಮೊಮ್ಮೆ ಒಂದೇ ಉಸಿರಿನ ನುಡಿಗಳು. ಒಂದು ಕಿಲೋ ಮೀಟರ್ ದೂರಕ್ಕೆ ಸಾಗಿದ್ದರು. ಅವರಿಗೆ ಅದರ ಪರಿವೇ ಇರಲಿಲ್ಲ. ಲೈಟ್ಕಂಬದ ಕೆಳಗೆ ನಿಂತಿದ್ದರು. ಸ್ನೇಹ ಮುಂದುವರೆದು ‘ನೀನಂದ್ರೆ ನಂಗೆ ಇಷ್ಟ’ ಅಂದಳು. ನವೀನ್ ಒಂದೇ ಮಾತಿಗೆ ‘ಐ ಲವ್ ಯು ಟೂ’ ಅಂದುಬಿಟ್ಟ. ತಕ್ಷಣಕ್ಕೆ ಅವಳು ತಬ್ಬಿಕೊಂಡಳು. ಇಬ್ಬರ ತುಟಿಗಳು ಒಂದಾದವು.

ಮುತ್ತಿನ ಅನುಭವ ಮುಂದುವರೆದಿದ್ದರಿಂದ ಅಡ್ಡಾದಿಡ್ಡಿ ಕೈಕಾಲುಗಳನ್ನು ಅಲ್ಲಾಡಿಸುತ್ತಿದ್ದ ನವೀನ್ ಗೆಳೆಯನ ತಿವಿತದಿಂದ ಎಚ್ಚರಗೊಂಡ. ‘ಅಯ್ಯೋ ಇದು ಕನಸೇ’ ಎನಿಸಿತು. ‘ಕನಸಲ್ಲೆ ಇಷ್ಟು ರೋಮಾಂಚನ. ನಿಜವಾದರೇ ಇನ್ನೇಗೋ’ ಅವನಲ್ಲಿ ಆಸೆಗಳು ಬೆಳೆದವು. ಸ್ನೇಹಾಳ ಪ್ರೀತಿಯಲ್ಲಿ ಮುಳುಗಿಹೋಗಿದ್ದ.

ಬೆಳಗಾಗಿತ್ತು. ಇಸ್ಕೂಲಿನ ಆವರಣದಾಚೆ ಎರಡು ಬೃಹತ್ ಆಲದ ಮರಗಳಿದ್ದವವು. ಆದಕಾರಣ ಹಕ್ಕಿಗಳ ಚಿಲಿಪಿಲಿ ಕಲರವ ಕೇಳುತ್ತಿತ್ತು. ಮಹದೇವಸ್ವಾಮಿ ಸರ್ ಸೂರ್ಯೋದಯಕ್ಕೆ ಮುನ್ನವೇ ಎದ್ದು ಜಾಗಿಂಗ್ ಹೋಗಿದ್ದರು. ಪ್ರತಿನಿತ್ಯವೂ ಅವರ ದಿನಚರಿ ನಡೀತಿತ್ತು. ವಿದ್ಯಾರ್ಥಿಗಳಲ್ಲಿ ಕೆಲವರು ಎದ್ದಿದ್ದರೇ, ಕೆಲವರು ದಬ್ಬಾಕೊಂಡು ಮಲಗಿದ್ದರು. ಎಂದಿನಂತೆ, ಇಂದು ಸಹ ಶ್ರಮಧಾನಕ್ಕೆ ಹೊರಡಬೇಕಿತ್ತು.

ನವೀನ್‍ಗೆ ಪ್ರೇಮದ ನಶೆ ಇಳಿದಿರಲಿಲ್ಲ. ಅವಳನ್ನು ನೋಡಲು ಕಾತುರನಾಗಿದ್ದ. ಅವಳಿನ್ನು ಎದ್ದಿರಲಿಲ್ಲ. ಅಲ್ಲಲ್ಲೇ ಗಿರಕಿ ಹೊಡೆಯುತ್ತ ಕೆಲ ಹುಡುಗಿಯರನ್ನು ಬೇರೆಯ ಕಾರಣಕ್ಕೆ ಮಾತನಾಡಿಸಿದರು, ಅವರಿಗೆ ಇವನ ಉದ್ದೇಶ ಸ್ಪಷ್ಟವಾಗಿ ತಿಳಿದಿತ್ತು. ಅವರೇನು ದಡ್ಡರೇ. ಅವರಿಗೂ ಅಂತಹ ಎಷ್ಟು ಅನುಭವಗಳಾಗಿಲ್ಲ. ಹರೆಯದಲ್ಲಿ ಇವೆಲ್ಲ ಕಾಮನ್ನು, ಮಾಮೂಲು, ನಡೀಲೇಬೇಕು. ಅಲ್ಲವೇ?

ತಿಂಡಿಗೆ ಎಲ್ಲರೂ ಕ್ಯೂ ನಿಂತಿದ್ದರು. ಆಗ ಸ್ನೇಹ ಕಂಡಳು ಅವನಿಗೆ. ಆ ಕ್ಷಣ ನವೀನ್‍ಗೆ ವರ್ಣನಾತೀತ.

ಹೀಗೆ ಒಂದು ವಾರದ ಕ್ಯಾಂಪು ಮುಗಿಯುವ ಹಂತ ತಲುಪಿತ್ತು. ಪ್ರೇಮ ನಿವೇದನೆ ಮಾಡಲು ಅವನು ದೃಢಸಂಕಲ್ಪ ಮಾಡಿದ್ದ. ಹೀಗಾಗಿ ಒಬ್ಬಳೇ ಸಿಗಲಿ ಎಂದು ಬಯಸಿದ್ದ.

ಮುಕ್ತಾಯದ ಕಾರ್ಯಕ್ರಮದಲ್ಲಿ ಎಲ್ಲರೂ ನೃತ್ಯ, ಹಾಡು, ನಾಟಕ ಹೀಗೆ ವಿವಿಧ ಕಲಾ ಪ್ರಕಾರಗಳನ್ನು ಅಭಿವ್ಯಕ್ತಿ ಪಡಿಸುತ್ತಿದ್ದರು. ಮಹದೇವಸ್ವಾಮಿ ಸರ್ ಕೂಡ ಮನಸೋ ಇಚ್ಚೆ ಕುಣಿದರು. ಕ್ಯಾಂಪಿಗೆ ಬಂದಾಗಿನಿಂದ ಬರಿ ಮೌನದಲ್ಲೇ ಇದ್ದ ಶಂಕ್ರಣ್ಣ ಸರ್ ಇಂದು ಪ್ರೇಮಗೀತೆ ಹಾಡಿ ತಮ್ಮೊಳಗಿನ ವೇದನೆ ಹೊರಕ್ಕೆ ಚೆಲ್ಲಿದ್ದರು. ಅವರು ಬ್ರಹ್ಮಚಾರಿ ಆಗಿ ಉಳಿದಿದ್ದಕ್ಕೆ ಎಲ್ಲರಿಗೂ ಕಾರಣವನ್ನು ಹಾಡಿನ ಮೂಲಕ ಹೇಳಿಬಿಟ್ಟಿದ್ದರು. ಅವರದು ವಿಚಿತ್ರ ಪ್ರೇಮಕಥೆ. ಎದುರುಮನೆ ಹುಡುಗಿ ಲಾವಣ್ಯ ಶಂಕ್ರಣ್ಣನನ್ನು ತೀವ್ರವಾಗಿ ಪ್ರೀತಿಸಿದ್ದಳು. ಅದು ನಾಲ್ಕು ವರುಷಗಳ ತನಕ ಸ್ವತಃ ಶಂಕ್ರಣ್ಣನಿಗೆ ತಿಳಿದಿರಲಿಲ್ಲ. ಇಬ್ಬರ ನಡುವಿನ ವಯಸ್ಸಿನ ಅಂತರ ನಾಲ್ಕು ವರ್ಷಗಳೇ. ಅವಳು ಹತ್ತನೇ ಕ್ಲಾಸಿದ್ದಾಗ ಶಂಕ್ರಣ್ಣ ಎರಡನೇ ವರುಷದ ಪದವಿ ವಿದ್ಯಾರ್ಥಿ. ಕಪ್ಪಾಗಿದ್ದರೂ ಲಕ್ಷಣವಾಗಿದ್ದಳು ಲಾವಣ್ಯ. ಅವಳು ತನ್ನನ್ನೇ ನೋಡುತ್ತಿದ್ದಾಳೆಂದು ತಿಳಿದ ಮೇಲೆಯು ಶಂಕ್ರಣ್ಣ ಅವಳ ಬಗ್ಗೆ ಕಿಂಚಿತ್ ತಲೆಕೆಡಿಸಿಕೊಳ್ಳಲಿಲ್ಲ. ಲಾವಣ್ಯಳನ್ನು ತಿರಿಸ್ಕರಿಸಲು ಅವಳು ಕಪ್ಪೆಂಬ ಒಂದೇ ಕಾರಣ ಅವನದು. ಅವಳೇನು ಇವನಿಗೆ ಪ್ರೇಮ ನಿವೇದನೆ ಮಾಡಿರಲಿಲ್ಲ. ಹೋಗುವಾಗ ಬರುವಾಗ ನೋಡುತ್ತಿದ್ದಳು. ಜೊತೆಗೆ ಒಂದು ನಗೆ. ಇದಿಷ್ಟೆ ಅವಳದು. ಅದೇ ಟೇಮಿಗೆ ಇವನಿಗೆ ಬೆಳ್ಳನೆಯ ಶೃತಿ ಎಂಬ ಹುಡುಗಿ ಪರಿಚಯವಾಗಿದ್ದಳು. ಅಷ್ಟೇನು ಹೇಳಿಕೊಳ್ಳವಂತ ಚೆಲುವೆ ಅಲ್ಲ. ಒಂದೇ ವಾರಗೆಯಾದರೂ ಇವನಿಗಿಂತ ವಯಸ್ಸು ಹೆಚ್ಚಾದಂತೆ ಕಾಣುತ್ತಿದ್ದಳು. ಆದರು ಅವಳನ್ನು ಪರಿಚಯಿಸಿಕೊಂಡ. ಮಾತುಗಳು ಆರಂಭವಾಗಿ, ಫೋನ್ ನಂಬರ್ ವಿನಿಮಯದಿಂದ ಲವ್ ಪ್ರಾರಂಭವಾಯ್ತು. ಲಾವಣ್ಯ ಅವನನ್ನು ನೋಡುವುದನ್ನ ಬಿಡಲಿಲ್ಲ. ಅವಳ ನಗು ಶಂಕ್ರಣನನ್ನು ಬೆಳಗಿಸಲು ಕಾದಿತ್ತು.

ಶೃತಿ ತನ್ನ ಬಗ್ಗೆ ತಾನೇ ಹೇಳಿಕೊಂಡಳು. ‘ಯಾಕೆ ಎಲ್ಲವನ್ನು ಹೇಳುತ್ತೀಯ’ ಶಂಕ್ರಣ್ಣ ಕೇಳಿದ್ದಕ್ಕೆ ‘ನಿಂಗೆ ಏನು ಮುಚ್ಚಿಡಬಾರದು ಅಂತ’ ನುಡಿದಳು. ಉಬ್ಬಿಹೋದ ಶಂಕ್ರಣನಿಗೆ ಹೆಮ್ಮೆ ಎನಿಸಿತು. ದಿನೇ ದಿನೇ ತನ್ನ ಬಗ್ಗೆ ಎಲ್ಲವನ್ನೂ ಹೇಳಿದಂತೆ ಹತ್ತಾರು ಕಥೆಗಳನ್ನು ಹೇಳುತ್ತಿದ್ದಳು. ಆ ಕಥೆಗಳಲ್ಲಿ ಅನೇಕ ಹುಡುಗರಿದ್ದರು. ಎಲ್ಲರನ್ನು ನನ್ನ ಗೆಳೆಯರು ‘ನನ್ನ ಅಮ್ಮನಾಣೆ’ ಎಂದಾಗ ನಿಷ್ಠಾವಂತ ಹುಡಗಿ ಕೊಟ್ಟದ್ದಕ್ಕೆ ‘ದೇವರೇ ನಿನಗಿದೋ’ ಎಂದು ಶಂಕ್ರಣ್ಣ ನಮಸ್ಕಾರ ಮಾಡುತ್ತಿದ್ದ. ಹೀಗೆ ಇಬ್ಬರು ಒಟ್ಟೊಟ್ಟಿಗೆ ಸುತ್ತಮುತ್ತಲಿನ ಪ್ರೇಕ್ಷಣೀಯ ಸ್ಥಳಗಳಿಗೆ, ಸಿನಿಮಾ, ಪಾರ್ಕುಗಳಿಗೆ ಓಡಾಡಿದರು. ಸಿನಿಮಾಕ್ಕೆ ಹೋದರೆ ಶಂಕ್ರಣ್ಣ ಎಲ್ಲೆಲ್ಲೋ ಕೈ ಹಾಕುತ್ತ ಬೆಚ್ಚಗೆ ಮಾಡಿಕೊಳ್ಳುತ್ತಿದ್ದ. ಎದೆ, ಸೊಂಟ, ತೊಡೆ, ತೋಳು ಇವೆಲ್ಲವುಗಳ ಸ್ಪರ್ಶ ಅವನಿಗಿತ್ತು. ಅವಳು ಸಹ ತನ್ನನ್ನೆ ಒಪ್ಪಿಸಿಕೊಳ್ಳಲು ತಯಾರಿದ್ದಳು. ಅವಕಾಶಗಳನ್ನು ಉಪಯೋಗಿಸಿಕೊಳ್ಳಲು ಬಾರದಕ್ಕೆ ಬಹುದೊಡ್ಡ ಉದಾಹರಣೆ ಶಂಕ್ರಣ್ಣ ಅಂದರೆ ತಪ್ಪಿಲ್ಲ. ಹೀಗಾಗಿ ಅವನೇನು ಮಾಡಬಾರದ್ದನ್ನು ಮಾಡಲಿಲ್ಲ. ನೀಯತ್ತಾಗಿ ಪ್ರೀತಿಸಿದ.

ಕೊನೆಯ ಸೆಮಿಸ್ಟಾರ್ ಮುಗಿತಾ ಬಂತು. ಶಂಕ್ರಣ್ಣ ಮದುವೆ, ಲೈಫು, ಅದು-ಇದು ಎನ್ನುತ್ತ ಗೋಪುರ ಕಟ್ಟಿಕೊಂಡಿದ್ದ. ಕೆಲಸ ಹಿಡಿಬೇಕೆಂಬ ಛಲ ಇದ್ದೇ ಇತ್ತು. ಶೃತಿಯ ಪ್ರೀತಿ ಅವನಿಗೆ ಅಮೂಲ್ಯವಾಗಿತ್ತು. ಪದವಿ ಮುಗಿದ ಕೊನೆಯ ದಿನದಿಂದ ಅವಳ ನಂಬರು ಸ್ವಿಚ್ ಆಫ್, ಇಲ್ಲವೇ ಇವನ ನಂಬರ್ ಮಾತ್ರ ಬ್ಲಾಕ್ ಮಾಡಿದ್ದಳು. ಇವನಿಗೆ ತಲೆ ಕೆಟ್ಟಂತ ಅನುಭವ. ಅವಳಿಂದ ವ್ಯತಿರಿಕ್ತ ಮಾತುಗಳನ್ನು ಕೇಳಿದ ಶಂಕ್ರಣ್ಣ ಸ್ವಲ್ಪ ದಿನ ಎಣ್ಣಗೆ ಒಗ್ಗಿಕೊಂಡು, ಕೆಲವು ದಿನ ಅವಳನ್ನು ಪೀಡಿಸುತ್ತ, ಲೋಕದ ವೇದನೆ ಎಲ್ಲವೂ ನನ್ನಲ್ಲೆಯಿದೆ ಎಂಬಂತೆ ಸಿಕ್ಕಸಿಕ್ಕವರಿಗೆ ಪ್ರೀತಿಪ್ರೇಮದ ಬಗ್ಗೆ ಪಿಟೀಲು ಕುಯ್ಯುತ್ತ ತಿರುಗಾಡುತ್ತಿದ್ದ. ಅದೂ ಅಭ್ಯಾಸ ಆಗಿ ದಿನಗಳು ಕಳೆಯುತ್ತಿದ್ದಂತೆ ಶೃತಿ ಮದುವೆಯಾಗಿ ಪ್ರಸ್ಥ ಮುಗಿಸಿಕೊಂಡು, ತಾಯಿ ಆಗಿದ್ದಳು. ಅವಳ ಉಬ್ಬುತಗ್ಗುಗಳು ಯತೇಚ್ಛವಾಗಿ ಬೆಳೆದಿದ್ದವು. ಸದ್ಯಕ್ಕೀಗ ಅವಳು ಆಂಟಿ.

ಲಾವಣ್ಯ ಸದಾ ನಗುತ್ತಿದ್ದ, ಮನಸ್ಸಿನ ಸೌಂದರ್ಯ ಹೊಂದಿದ್ದ ಹೆಣ್ಣು. ಆಹಾ! ಅವಳ ಮುಖವೇ ಚೆಲುವು. ಶಂಕ್ರಣ್ಣನ ಮೇಲೆ ಪ್ರೀತಿ ಅವಳಿಗಿತ್ತು; ಇನ್ನೂ.

ಯಾವುದಕ್ಕು? ಯಾರಿಗೂ? ಕಾಲ ಸೊಪ್ಪುಹಾಕಲ್ಲ. ಕೊನೆಯ ಪ್ರಯತ್ನ ಎಂಬಂತೆ ದಿಕ್ಕೆಟ್ಟ ಸಮಯದಲ್ಲಿ ಶಂಕ್ರಣ್ಣನಿಗೆ, ಲಾವಣ್ಯಳ ಬಳಿ ತನ್ನ ನೋವುಗಳನ್ನು ಹೇಳಿಕೊಂಡು ಅಳಬೇಕು ಎನಿಸಿತು. ಅವಳ ಮನಸ್ಸಲ್ಲಿ ಇವನೆಡೆಗೆ ಪ್ರೀತಿಯಿದ್ದದ್ದು ಖಂಡಿತ ನಿಜ. ಆದರೆ ಅವಳ ನಿರ್ಧಾರ ಮನೆಯವರದಾಗಿತ್ತು. ಎಲ್ಲವೂ ಬದಲಾಗುತ್ತಿದ್ದ ಸಮಯದಲ್ಲಿ ಅವಳು ಹಳೆಯದನ್ನು ಕೇಳುವ ಹಾಗಿರಲಿಲ್ಲ. ಮನಸಿದ್ದರೂ ಕೇಳಲಾಗದ ಸ್ಥಿತಿ ಅವಳದು. ಶಂಕ್ರಣ್ಣನ ಲವ್ ಫೈಲ್ಯೂರ್ ವಿಷಯ ಅವಳಿಗೆ ತಿಳಿದಿತ್ತು. ನೊಂದುಕೊಂಡಳು. ಪ್ರಾರ್ಥನೆಗಿಂತ ದೊಡ್ಡ ಕೆಲಸ ಅವಳಿಗೆ ತೋರಲಿಲ್ಲ. ‘ನೀನು ಚೆನ್ನಾಗಿರು ಅಷ್ಟೆ. ನಾನು ದೇವರಲ್ಲಿ ಕೇಳೋದು ಇದಿಷ್ಟೆ’ ಅವಳು ಮಾಡಿದ ಕೋರಿಕೆ ಶಂಕ್ರಣಂಗೆ ತಿಳಿದು ಅವನು ಕುಸಿದು ಕೂತ. ಲಾವಣ್ಯಳ ಪ್ರೀತಿ ಮುಂದೆ ತನ್ನ ಪ್ರೀತಿ ಲೆಕ್ಕಕ್ಕಿಲ್ಲ ಎನಿಸಿತು ಅವನಿಗೆ. ಅವನ ಹೃದಯದಲ್ಲಿ ಲಾವಣ್ಯ ಶಾಶ್ವತವಾಗಿ ಕೂತಳು. ಹೀಗಾಗಿ ಕೆಲಸ ಸಿಕ್ಕಿ, ಮನೆಯವರೆಲ್ಲರು ಮದುವೆಗೆ ಒತ್ತಾಯ ಪಡಿಸಿದರು ಶಂಕ್ರಣ್ಣ ಬ್ರಹ್ಮಚಾರಿಯಾಗಿಯೇ ಉಳಿದದ್ದು ನಿಶ್ವಾರ್ಥವಾಗಿ ತನ್ನನ್ನು ಪ್ರೀತಿಸಿದ ಲಾವಣ್ಯಳಿಗಾಗಿ.

ವಿದ್ಯಾರ್ಥಿಗಳೆಲ್ಲರಿಗು ಮೈರೋಮಾಂಚನ. ಅಬ್ಬಾ ಇಂಥ ಪ್ರೀತಿ ಇರಲು ಸಾಧ್ಯವೇ ಪುಳಕಿತರಾದರು. ನವೀನ್‍ಗೆ ಸ್ನೇಹ, ಲಾವಣ್ಯಳಂತೆ ಕಂಡಳು.

ಬೆಳಿಗ್ಗೆ ಕ್ಯಾಂಪಿಂದ ಹೊರಡುವಾಗ ಎಲ್ಲರಿಗೂ ತುಸು ಬೇಜಾರಿತ್ತು. ಹಾಗಂತ ಮತ್ತೆ ಮುಂದುವರೆಸಲು ಸಾಧ್ಯವಿರಲಿಲ್ಲ. ತಮ್ಮೂರಿನ ಕೆಲವೊಂದಿಷ್ಟು ಜಾಗಗಳನ್ನು ಸ್ವಚ್ಛಮಾಡಿದ್ದ ವಿದ್ಯಾರ್ಥಿಗಳನ್ನು ಕಳುಹಿಸಿಕೊಡಲು ಹಲವು ಜನರು ನೆರೆದಿದ್ದರು. ಬಸ್ ಹತ್ತುವಾಗ ನವೀನ್ ಧೈರ್ಯಮಾಡಿ ‘ಸ್ನೇಹ’ ಕರೆದು ಬರುವಂತೆ ಸನ್ನೆ ಮಾಡಿದ. ಅವಳು ಬಸ್ಸಿಂದ ಇಳಿದಳು. ಅಲ್ಲಿಂದ ಯಾರಿಗು ಕಾಣದಂತೆ ತುಸು ದೂರಕ್ಕೆ ಹೋದರು. ‘ಅದೇನು ಹೇಳು’ ಅಂದಳು.

‘ನೀನಂದ್ರೆ ನಂಗೆ ಇಷ್ಟ’ ಅಂದನು.

‘ಸರಿ, ಅದಕ್ಕೆ’

‘ಐ ಲವ್ ಯು’ ಅಂದ.

‘ನೋಡು ನವೀನ್, ನನಗೆ ನಿನ್ನ ಮೇಲೆ ಆತರ ಭಾವನೆ ಖಂಡಿತ ಇಲ್ಲ. ಎಲ್ಲರನ್ನು ಮಾತನಾಡಿಸುವಂತೆ ನಿನ್ನನ್ನು ಮಾತಾಡಿಸ್ದೆ. ಅದ್ನೇ ನೀನು ಪ್ರೀತಿ ಅಂತ ತಿಳ್ಕೊಂಡ್ರೆ ನಾನೇನ್ ಮಾಡ್ಲಿ. ನಂಗೆ ಅವೆಲ್ಲ ಇಷ್ಟ ಆಗಲ್ಲ. ನನ್ನ ಜೀವನದ ಉದ್ದೇಶನೇ ಬೇರೆ’ ಎಂದು ಒಮ್ಮೆಲೆ ತತ್ವ ಹೇಳಿ ಬಸ್ಸಿಗೆ ಹತ್ತಿದಳು. ನವೀನ್‍ಗೆ ಮಾತುಗಳೇ ಬರದೇ ಸುಮ್ಮನಿದ್ದ. ತೆಪ್ಪಗೆ ಬಸ್ಸು ಹತ್ತಿ, ‘ನಾನೇನು ಮೂರ್ಖನ’ ತನ್ನನ್ನೇ ಕೇಳಿಕೊಂಡ. ‘ಹೌದು; ಇದ್ದರು ಇರಬಹುದು’ ಮನಸ್ಸೇ ಹೇಳಿತು.

“ನಕ್ಕು ಮಾತನಾಡಿ, ನಮ್ಮ ಸಹಾಯಕ್ಕೆ ನಿಂತು ತೀರ ಹತ್ತಿರವಾಗಿ, ಪರಸ್ಪರ ಏನನ್ನೋ ಹಂಚಿಕೊಂಡ ಮಾತ್ರಕ್ಕೆ ಹುಡುಗಿಯೊಬ್ಬಳು ಇದನ್ನೆಲ್ಲ ನನ್ನ ಮೇಲಿನ ಪ್ರೀತಿಯಿಂದಲೇ ಮಾಡಿದ್ದಾಳೆ ಎಂದುಕೊಳ್ಳುವುದು ಖಂಡಿತ ತಪ್ಪು” ಅವನಿಗೆ ತಿಳಿಯಿತು.

ರಾತ್ರಿ ಲಾವಣ್ಯಳ ಪ್ರೀತಿಗೆ ಮನಸೋತಿದ್ದ ನವೀನ್‍ಗೆ ಈಗಷ್ಟೆ ಸ್ವಂತ ಅನುಭವ ಬೆರಗು ಹಿಡಿಸಿತ್ತು. ಶಾಂತವಾಗಿ ಚಲಿಸುತ್ತಿದ್ದ ದೋಣಿ ಮುಳುಗಿದಂತೆ ಅವನು ವ್ಯತೆಪಟ್ಟ. ಮೊದಲನೇ ಪ್ರೀತಿ ಅವನಿಗೆ ಒಂದು ಅಧ್ಯಾಯ ಹೇಳಿಕೊಟ್ಟಿತ್ತು. ‘ನಾನು ಪ್ರೀತ್ಸೋರಿಗಿಂತ ನನ್ನನ್ನು ಪ್ರೀತ್ಸೋರ್ ಬೇಕು’ ಹೀಗೆನಿಸಿತು. ಆದರೂ ಅಷ್ಟೇನು ನೋವು ಅವನಿಗಾಗಲಿಲ್ಲ. ಯಾಕೆಂದರೆ ಅವರಿಬ್ಬರು ಒಟ್ಟಿಗೆ ಸೇರಲೇ ಇಲ್ಲ. ಒಟ್ಟಿಗೆ ಓಡಾಡಲಿಲ್ಲ. ಕೊನೆಗೆ ಒಟ್ಟಿಗೆ ಏನನ್ನೂ ಮಾಡಿಲ್ಲ. ಇವೆಲ್ಲವನ್ನು ಮಾಡಿದ್ದರು ಸಹ ನೋವಾಗುವುದುಂಟು.

***

ನೆನಪಿಂದ ಹೊರಕ್ಕೆ ಬಂದ ನವೀನ್‍ಗೆ ‘ಬದುಕಿಗಿಂತ ದೊಡ್ಡದು ಯಾವುದಿಲ್ಲ’ ಅರಿವಾಗಿತ್ತು. ‘ನೀನಿಲ್ಲದೆ ಬದುಕಲ್ಲ ಎಂದಿದ್ದ’ ಅವನು ಕಂಡಿದ್ದ ಪ್ರೇಮಿಗಳು ಇಂದಿಗೆ ಬೇರೆ ಬೇರೆಯವರ ಜೊತೆ ಬಾಳುತ್ತಿದ್ದರು. ಅಷ್ಟೆ ಏಕೆ ತನಗೆ ತತ್ವ ಹೇಳಿದ ಸ್ನೇಹ ಕೂಡ ಕಂಡಕ್ಟರ್ ಜೊತೆಗೆ ಓಡಿಹೋಗಿದ್ದಳು. ಒಂದು ವೇಳೆ ಸ್ನೇಹ ಒಲಿದಿದ್ದರೂ ಸಹ ಅವಳನ್ನು ಮದುವೆ ಆಗಲು ತನಗೆ ಸಾಧ್ಯವಿತ್ತೇ? ಕೇಳಿಕೊಂಡ. ಇಬ್ಬರು ತಂಗಿಯರಿದ್ದ ನವೀನ್‍ಗೆ ಜವಾಬ್ದಾರಿ ಹೆಚ್ಚೇ ಇತ್ತು. ಅವಳೇ ಓಡಿ ಬಂದಿದ್ದರೂ ಇವನೇ ವಾಪಸ್ಸು ಕಳಿಸಬೇಕಾದ ಪರಿಸ್ಥಿತಿಯಿತ್ತು. ಹೀಗಿದ್ದಲ್ಲಿ ಪ್ರೀತಿ ಸಿಕ್ಕದ್ದಕ್ಕೆ ವ್ಯತೆ ಪಡುವಷ್ಟು ಬುದ್ದಿಹೀನ ನವೀನ್ ಆಗಿರಲಿಲ್ಲ.

ಟೇಮು ಹನ್ನೆರಡಾಗಿತ್ತು. ಒಂದೇ ಸಮನೆ ಓಡುತ್ತಿದ್ದ ಮನಸ್ಸನ್ನು ಹಿಡಿದು ನಿಲ್ಲಿಸಿದ. ಭೂತವನ್ನು ನೆಲಕ್ಕೆ ಊತು, ಭವಿಷ್ಯವನ್ನು ಕಣ್ಮುಂದೆ ಕಾಣಲು ಆರಂಭಿಸಿದ. ಕೆಲಸ, ಸಂಪಾದನೆ, ತಂಗಿಯರ ಮದುವೆ, ಊರಿನಲ್ಲಿ ನಾಲ್ಕು ಜನರ ಸಮಕ್ಕೆ ಬಾಳುವೆ ಮಾಡುವುದು ಅವನಲ್ಲಿ ಕನಸಾಗಿ ರೂಪ ತಳೆದಿತ್ತು. ಉಳಿದಂತೆ ಪ್ರೀತಿ, ಪ್ರೇಮ ಅವನಿಗೆ ಪ್ರಾಮುಖ್ಯ ಅನ್ನಿಸಲಿಲ್ಲ. ಕಪಾಟಿನಲ್ಲಿದ್ದ ಪುಸ್ತಕಗಳು ಅವನನ್ನು ಸೆಳೆದವು. ಅವುಗಳತ್ತ ನವೀನ್ ಅತ್ಯಂತ ಆಸ್ಥೆಯಿಂದ ವಾಲಿಕೊಂಡ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT