ಶನಿವಾರ, 13 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಪ್ರೇಮಕುಮಾರ್‌ ಹರಿಯಬ್ಬೆ ಅವರ ಕಥೆ: ಹರಾಜು..

ಪ್ರೇಮಕುಮಾರ್‌ ಹರಿಯಬ್ಬೆ ಅವರ ಕಥೆ
Published 6 ಜುಲೈ 2024, 18:57 IST
Last Updated 6 ಜುಲೈ 2024, 18:57 IST
ಅಕ್ಷರ ಗಾತ್ರ

ಮುಸ್ಸಂಜೆ ಹೊತ್ತಲ್ಲಿ ತನ್ನೂರಿನ ಹತ್ತನ್ನೆರಡು ಜನ ಮನೆಗೆ ಬಂದದ್ದನ್ನು ನೋಡಿ ಕೃಷ್ಣಪ್ಪನಿಗೆ ಆಶ್ರ‍್ಯವಾಯಿತು. ಒಳಕ್ಕೆ ಬನ್ನಿ ಅಂತ ಕರೆಯೋದನ್ನೂ ಮರೆತು ಏನು ಮ್ಯಾಟ್ರು ಎನ್ನುವಂತೆ ಎಲ್ಲರ ಮುಖ ನೋಡಿದ.
‘ಏನಿಲ್ಲ ಕೃಷ್ಣಪ್ಪಣ್ಣ, ನಿನ್ನತ್ರ ಒಂದೆರಡು ವಿಷಯ ಮಾತಾಡಬೇಕು ಅಮ್ತ ಬಂದ್ವಿ...’ ಎನ್ನುತ್ತ ಮನೆಯೊಳಕ್ಕೆ ಕಾಲಿಟ್ಟರು. ಐದಾರು ನಿಮಿಷ ಕಳೆದಮೇಲೆ ಪಂಚಾಯ್ತಿ ಮಾಜಿ ಮೆಂಬರು ಗೋವಿಂದಪ್ಪ ಎದ್ದು ನಿಂತು ನಿಂಗೆ ಗೊತ್ತಿಲ್ಲದ್ದು ಏನೈತೆ ಕೃಷ್ಣಪ್ಪ. ಊರಲ್ಲಿ ಏನೇನಾಗ್ತಿದೆ ಅಂಬದು ನಿಂಗೂ ಗೊತ್ತಲ್ಲ. ಊರು ನಮ್ಮ ಕೈಬಿಟ್ಟು ಹೋಗ್ತಿದೆ. ಪಂಚಾಯ್ತಿ ಪ್ರೆಸಿಡೆಂಟು, ಮೆಂಬರುಗಳು ದಿನಕ್ಕೊಂದು ಆಟ ಆಡಿದ್ದಾರೆ. ಅವರನ್ನು ಪ್ರಶ್ನೆ ಮಾಡೋರೇ ಇಲ್ದಂಗಾಗಿದೆ. ಗ್ರಾಮಠಾಣದ ಜಾಗಗಳನ್ನು ತಮಗೆ ಬೇಕಾದವರಿಗೆ ನೆಲಬಾಡಿಗೆ ಕರಾರಿನ ಮೇಲೆ ಗುತ್ತಿಗೆ ಕೊಡ್ತಿದ್ದಾರೆ! ಈಗ ನಾವು ಸುಮ್ಮನಿದ್ರೆ ಮುಂದೆ ನಮ್ಮ ಹೆಣಗಳನ್ನು ಹೂಳಕೂ ಜಾಗ ಇರಲ್ಲ...’ ಎನ್ನುತ್ತ ಕೃಷ್ಣಪ್ಪನ ಮುಖ ನೋಡಿದ. ಆಗಲೂ ಕೃಷ್ಣಪ್ಪ ಏನೂ ಹೇಳದೆ ಸುಮ್ಮನಿದ್ದ. ‘ಊರು ಹಾಳಾಗಿದೆ ಅಂತ ಈಗ ನಿಮಗೆ ಜ್ಞಾನೋದಯ ಆದಂಗಿದೆ. ಏಳೆಂಟು ರ‍್ಷಗಳ ಹಿಂದೆ ನಾನು ಇದೇ ಮಾತು ಹೇಳಿದ್ದೆ. ಆಗ ನೀವ್ಯಾರು ನಂಗೆ ಸಪರ‍್ಟ್‌ ಮಾಡಲಿಲ್ಲ. ಕೆಟ್ಟು ಕೆರ ಹಿಡಿದಿರೊ ಊರನ್ನು ರಿಪೇರಿ ಮಾಡಕೆ ನನ್ನಿಂದ ಸಾಧ್ಯವಾ? ನಂಗೇನು ಅಧಿಕಾರ ಐತೆ? ನನ್ನ ಮಾತ್ನ ಯಾರು ಕೇಳ್ತಾರೆ? ನಿಮಗೇ ಗೊತ್ತಲ್ಲ, ಊರಲ್ಲಿ ಒಗ್ಗಟ್ಟಿಲ್ಲ. ಜನ ಬುದ್ದಿವಂತರಾಗಿದ್ದಾರೆ. ಟೀವಿಗಳು ಬಂದ ಮೇಲೆ ಎಲ್ಲರಿಗೂ ಕಾನೂನುಗಳು ಗೊತ್ತಿವೆ. ಬರೆಯೋಕೆ ಬರೋರೆಲ್ಲ ಮೂರ‍್ಜಿ ಬರೆದು ಪ್ರತಿಯೊಂದು ಕೆಲಸಕ್ಕೂ ಕೊಕ್ಕೆ ಹಾಕ್ತಾರೆ. ಇನ್ನು ಊರಿನ ಚಾಕರಿ ಮಾಡಕೆ ಅಂತಲೇ ಬಂದಿರೋ ಗರ‍್ಮೆಂಟ್‌ ನೌಕರರನ್ನು ಮಾತಾಡ್ಸಂಗಿಲ್ಲ! ಪ್ರತಿಯೊಂದಕ್ಕೂ ರೂಲ್ಸು ಹೇಳ್ತಾರೆ. ಯಾರಿಗೂ ಭಯ ಅಂಬದೇ ಇಲ್ಲ. ಇಷ್ಟು ದಿನ ಸುಮ್‌ನಿದ್ದು ಈಗ ರಿಪೇರಿ ಮಾಡು ಅಂದ್ರೆ ನಾನೇನು ಮಾಡಕಾಗುತ್ತೆ? ನಮ್ಮೂರು ಅಂತಲ್ಲ, ಇಡೀ ದೇಶವೇ ಕೆಟ್ಟು ಹಾಳಾಗಿದೆ....’ ನೀವು ಹೇಳಿದ್ರಿ ಅಂತ ನಾನೇನಾದ್ರೂ ಮಾಡದು. ಅದು ಇನ್ನೇನೋ ಆದರೆ ಕಷ್ಟ. ಆಗ ನೀವ್ಯಾರೂ ನನ್ನ ಸಪರ‍್ಟಿಗೆ ಬರಲ್ಲ ಎನ್ನುತ್ತ ಕೃಷ್ಣಪ್ಪ ಹಿಂಜರಿದ.
‘ಅಂಗೇನೂ ಆಗಲ್ಲಪ್ಪ, ನಾವೊಂದು ತರ‍್ಮಾನಕ್ಕೆ ಬಂದಿದ್ದೀವಿ. ಕೆಟ್ಟಿರೋ ಊರನ್ನು ಸರಿ ಮಾಡೋದು ನಿನ್ನಿಂದ ಮಾತ್ರ ಸಾಧ್ಯ. ಮೊದಲು ಪಂಚಾಯ್ತಿ ಕರ‍್ಚಿಗಳ ಮ್ಯಾಲೆ ಕುಂತಿರೋ ತಲೆಮಾಸಿದವರಿಗೆ ಮುಕಳಿ ಮ್ಯಾಲೆ ಒದ್ದು ಬುದ್ದಿ ಕಲಿಸಬೇಕು. ಅದಕ್ಕೆ ನೀನೇ ಸರಿ. ನೀನು ಹೇಳ್ದಂಗೆ ನಾವು ಕೇಳ್ತೀವಿ. ಜೈಲಿಗೆ ಹೋಗಕೂ ರೆಡಿ..’ ಎಂದು ಗೋವಿಂದಪ್ಪ ಹೇಳಿದ. ಆ ಮಾತು ಕೇಳಿದ ಮೇಲೂ ಕೃಷ್ಣಪ್ಪ ಸುಮ್ಮನಿದ್ದ.
‘ಎಲ್ಲದಕ್ಕೂ ಒಂದು ದಾರಿ ಇದ್ದೇ ಇರುತ್ತೆ. ನೋಡನ, ಏನು ಮಾಡಬೌದು ಅಮ್ತ ಯೋಚ್ನೆ ಮಾಡ್ತೀನಿ...’ ಎಂದು ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಹೇಳಿ ಎಲ್ಲರಿಗೂ ಟೀ ಕುಡಿಸಿ ಕಳಿಸಿ ಕೊಟ್ಟ. ಮನೆ ಬಾಗಿಲಿಗೆ ಬಂದವರೆಲ್ಲ ನಮ್ಮವರೇ. ಅವರೇ ನನ್ನ ಲೀಡರ್‌ ಅಂತ ಒಪ್ಪಿಕೊಂಡ ಮೇಲೆ ಊರಿಗಾಗಿ ಏನಾದರೂ ಮಾಡಬೇಕು ಎಂದು ಕೃಷ್ಣಪ್ಪನಿಗೆ ಅನ್ನಿಸಿತು.
ಈ ಕೃಷ್ಣಪ್ಪ ದೇವರಹಳ್ಳಿಯ ಜನರ ಪೈಕಿ ಅನುಕೂಲಸ್ಥ. ಅವನು ಧರ‍್ಯಶಾಲಿ. ಕೈಯಿ, ಬಾಯಿ ಎರಡೂ ಜೋರು. ಯಾರ ಮುಲಾಜೂ ನೋಡದೆ ದಬಾಯಿಸಿ ಕೇಳುವ ಜಾಯಮಾನ ಅವನದು. ಕೆಲವು ರ‍್ಷಗಳ ಹಿಂದೆ ಇಂಥದೇ ವಿಷಯಕ್ಕೆ ಊರು ತನ್ನ ಬೆಂಬಲಕ್ಕೆ ನಿಲ್ಲಲಿಲ್ಲ ಅನ್ನೋ ಕಾರಣಕ್ಕೆ ಸಿಟ್ಟು ಮಾಡಿಕೊಂಡು ಅವನು ಊರ ವಿಷಯಕ್ಕೆ ತಲೆಹಾಕದೆ ಸುಮ್ಮನಿದ್ದ. ಮರ‍್ನಾಲ್ಕು ದಿನಗಳು ಕಳೆದ ಮೇಲೆ ಕೃಷ್ಣಪ್ಪ ಊರೊಳಕ್ಕೆ ಹೋದ. ಓಣಿಗಳಲ್ಲಿ ಕಸ ಎಲ್ಲೆಂದರಲ್ಲಿ ಗುಪ್ಪೆ ಗುಪ್ಪೆ ಬಿದ್ದಿತ್ತು. ಲೈಟ್‌ ಕಂಬಗಳಲ್ಲಿ ಬಲ್ಪುಗಳಿರಲಿಲ್ಲ. ನಲ್ಲಿಗಳಲ್ಲಿ ನೀರು ಬಾರದೆ ಹದಿನೈದು ದಿನಗಳಾಗಿತ್ತು. ಜನ ತಮ್ಮ ಮನೆಗಳ ಮುಂದೆ ಓಡಾಡೋ ಜಾಗದಲ್ಲೇ ಸೌದೆ, ಹೊಂಗೆ,ಹತ್ತಿ ಕಡ್ಡಿ, ತೆಂಗಿನ ಗರಿ ಮತ್ತು ಹುಲ್ಲನ್ನು ಮೆದೆಯಂತೆ ಒಟ್ಟಿದ್ದರು! ಸಲೀಸಾಗಿ ನಡಕೊಂಡು ಓಡಾಡಲೂ ಜಾಗ ಇರಲಿಲ್ಲ. ಊರು ಗಬ್ಬೆದ್ದು ಹೋಗಿದೆ ಅನ್ನಿಸಿ ಕೃಷ್ಣಪ್ಪನಿಗೆ ಸಿಟ್ಟು ಬಂತು.
*
‘ಊರು ತಿಪ್ಪೆ ಆಗಿದೆ. ನಲ್ಲಿಗಳಲ್ಲಿ ನೀರು ರ‍್ತಿಲ್ಲ. ಕರೆಂಟು ಕಂಬಗಳಲ್ಲಿ ಬಲ್ಪುಗಳಿಲ್ಲ. ಅದರ ನಿಗಾ ನೋಡದು ಬಿಟ್ಟು ಇಲ್ಲಿ ಮೀಟಿಂಗ್‌ ಮಾಡ್ಕಂಡ್‌ ಕುಂತಿದ್ದೀರಲ್ಲಯ್ಯ? ನಿಮಗೆ ಮಾನ ರ‍್ಯಾದೆ ಇಲ್ಲವೇನು...’ ಎಂದು ಕೃಷ್ಣಪ್ಪ ಗ್ರಾಮ ಪಂಚಾಯ್ತಿ ಮೀಟಿಂಗ್‌ ನಡೆಯುತ್ತಿರುವಾಗ ಹೋಗಿ ಪ್ರೆಸಿಡೆಂಟರು, ಮೆಂಬರುಗಳನ್ನು ದಬಾಯಿಸ್ತಿದ್ದಾನೆ ಅನ್ನೋದು ಗೊತ್ತಾಗುತ್ತಿದ್ದಂತೆ ದೇವರಳ್ಳಿ ಮೈಕೊಡವಿ ಎದ್ದು ಕುಳಿತುಕೊಂಡಿತು. ‘ಇವತ್ತಿಂದು ಎರ‍್ಜೆನ್ಸಿ ಮೀಟಿಂಗು. ತುಂಬಾ ಇಂಪರ‍್ಟೆಂಟು. ನೆಕ್ಸ್ಟ್ಇಯರ್‌ ನಮ್ಮ ಸ್ಟೇಟ್‌ನಲ್ಲಿ ಆರು ಹೊಸ ತಾಲ್ಲೂಕುಗಳನ್ನು ರ‍್ಕಾರ ಸ್ಟರ‍್ಟ್‌ ಮಾಡುತ್ತಂತೆ. ನಮ್ಮ ದೇವರಳ್ಳಿಯನ್ನೂ ತಾಲ್ಲೂಕು ಮಾಡಿ ಅಂತ ಗರ‍್ಮೆಂಟನ್ನು ಒತ್ತಾಯಿಸಿ ರೆಸಲೂಷನ್‌ ಮಾಡಬೇಕು ಅಂತ ಸ್ಪೆಷಲ್‌ ಮೀಟಿಂಗ್‌ ಕರೆದಿದ್ದೀನಿ ...’ ಎಂದು ಪ್ರೆಸಿಡೆಂಟರು ಹೇಳಿದರೂ ಕೃಷ್ಣಪ್ಪ ಅವರ ಮಾತನ್ನು ಕಿವಿ ಮೇಲೆ ಹಾಕಿಕೊಳ್ಳಲಿಲ್ಲ. ಪ್ರತಿ ವಾಕ್ಯದಲ್ಲೂ ಇಂಗ್ಲಿಷ್‌ ಪದಗಳನ್ನು ಸೇರಿಸಿಕೊಂಡು ಮಾತಾಡುವ ಜಾಯಮಾನದ ಪ್ರೆಸಿಡೆಂಟರಿಗೆ ಕೃಷ್ಣಪ್ಪನ ರ‍್ತನೆಯಿಂದ ಅವಮಾನವಾಯಿತು.
ಹತ್ತದಿನೈದು ನಿಮಿಷ ಕಳೆಯುವಷ್ಟರಲ್ಲಿ ಊರ ಜನ ಮಾಡುತ್ತಿದ್ದ ಕೆಲಸ, ಕರ‍್ಯಗಳನ್ನು ಬಿಟ್ಟು ಪಂಚಾಯ್ತಿ ಆಫೀಸಿನ ಕಡೆಗೆ ಬಂದರು. ಮೀಟಿಂಗ್‌ ಹಾಲ್‌ನಲ್ಲಿ ಕೃಷ್ಣಪ್ಪ ಏರುಧ್ವನಿಯಲ್ಲಿ ಕೂಗಾಡುತ್ತಿದ್ದ. ಜನ ಪಂಚಾಯ್ತಿ ಆಫೀಸಿನ ಅಂಗಳದಲ್ಲಿ ನಿಂತು ಅವನ ಮಾತು ಕೇಳಿಸಿಕೊಂಡರು. ‘ನೋಡ್ರಯ್ಯ, ಕೃಷ್ಣಪ್ಪ ಹೆಂಗ್‌ ಮಾತಾಡ್ತಾನೆ? ದೇವ್ರಳ್ಳಿಯನ್ನ ತಾಲ್ಲೂಕು ಮಾಡಿ ಅಂತ ರ‍್ಕಾರಕ್ಕೆ ಮನವಿ ಕೊಡೋಕೆ ಮೀಟಿಂಗ್‌ ಮಾಡಿದರೆ ಇವನಪ್ಪನ ಗಂಟೇನು ಹೋಗುತ್ತೆ ಎಂದು ಪ್ರೆಸಿಟೆಂಟರ ಬೆಂಬಲಿಗನೊಬ್ಬ ಕೇಳಿದ. ತಮ್ಮವನೇ ಆ ಕರ‍್ಚಿಯಲ್ಲಿ ಕುಂತಿದ್ದರೆ ಕೃಷ್ಣಪ್ಪ ಹಿಂಗೆ ಮಾತಾಡ್ತಿದ್ನ? ಎಂದು ಕೇಳುವ ಮೂಲಕ ಕೃಷ್ಣಪ್ಪನ ಕೂಗಾಟಕ್ಕೆ ಬೇರೊಂದು ಆಯಾಮ ಕೊಟ್ಟ.
‘ದೇವರಳ್ಳಿಯನ್ನು ತಾಲ್ಲೂಕು ಮಾಡಿ ಅಂತ ಬಾಯಿಮಾತಲ್ಲಿ ಕೇಳಿದ್ರೆ ಸಾಲದು. ನಿಮ್ಮ ಪಂಚಾಯ್ತಿ ಕಡೆಯಿಂದ ರ‍್ವಾನುಮತದ ರೆಸಲೂಷನ್‌ ಮಾಡಿಸಿ ಅದನ್ನು ರ‍್ಜಿ ಜತೆ ಕೊಡಬೇಕು ಎಂದು ಜಿಲ್ಲಾ ಮಂತ್ರಿಗಳೇ ಹೇಳಿದ್ದಾರೆ. ನಮ್ಮೂರಿಗೆ ಪೊಲೀಸ್‌ ಸ್ಟೇಷನ್ನು ಮಂಜೂರಾಗಿದೆ. ಮೇನ್‌ ರೋಡಲ್ಲಿ ಜಾಗ ಕೊಟ್ಟರೆ ಪೆಟ್ರೋಲ್‌ ಬಂಕಿಗೆ ಲೈಸನ್ಸ್‌ ಕೊಡಿಸ್ತಾರಂತೆ. ಊರಲ್ಲಿ ಒಂದು ಬಾರ್‌ ಇರಬೇಕು ಅಂತನೂ ಹೇಳಿದ್ದಾರೆ. ತಾಲ್ಲೂಕಾಗಬೇಕು ಅಂದರೆ ಇಷ್ಟಿದ್ದರೆ ಸಾಲದು. ಊರು ಇನ್ನೂ ದೊಡ್ಡದಾಗಿ ಬೆಳೀಬೇಕು. ಅದಕ್ಕೆ ಏನೇನು ಮಾಡಬೇಕು ಅಂಬದನ್ನು ರ‍್ಚೆ ಮಾಡಕೆ ಅಂತಲೇ ಮೀಟಿಂಗು ಕರೆದಿರೋದು ಎಂದು ಕೆಲವು ಮೆಂಬರುಗಳು ಹೇಳಿದರೂ ಕೃಷ್ಣಪ್ಪ ಅವರ ಮಾತುಗಳನ್ನೂ ಕಿವಿ ಮೇಲೆ ಹಾಕಿಕೊಳ್ಳಲಿಲ್ಲ!
‘ಊರಲ್ಲಿರೋ ಗ್ರಾಮ ಠಾಣದ ಜಾಗಗಳನ್ನೆಲ್ಲ ನೆಲಬಾಡಿಗೆ ಕರಾರಿನ ಮೇಲೆ ನಿಮಗೆ ಬೇಕಾದವರಿಗೆ ಗುತ್ತಿಗೆ ಕೊಟ್ಟಿದ್ದೀರಂತೆ! ಊರು ಸತ್ತಿದೆ ಅಂದ್ಕಂಡಿದ್ದೀರೇನು...’ ಎಂದು ಕೃಷ್ಣಪ್ಪ ಅಬ್ಬರಿಸಿ ಕೇಳಿದ. ಆಫೀಸಿನ ಹೊರಗೆ ನಿಂತಿದ್ದ ಕೃಷ್ಣಪ್ಪನ ಬೆಂಬಲಿಗನೊಬ್ಬ ಅದು ಪಾಯಿಂಟು, ಹಂಗೆ ಕೇಳು ಎಂದು ಉದ್ಗಾರ ತೆಗೆದ!. ‘ದೇವ್ರಳ್ಳಿ ತಾಲ್ಲೂಕಾದ್ರೆ ಕರ‍್ಟು, ಜೈಲು, ತಾಲ್ಲೂಕಾಫೀಸು, ಡಿವೈಎಸ್‌ಪಿ ಆಫೀಸು ಸೇರಿದಂಗೆ ಹತ್ತದಿನೈದು ರ‍್ಕಾರಿ ಆಫೀಸುಗಳು, ಬಸ್‌ ಸ್ಟಾಂಡು, ಡಿಪೋ ಶುರುವಾಗ್ತವೆ. ಊರಿನ ಭೂಮಿಗಳಿಗೆ ಒಳ್ಳೇ ಬೆಲೆ ಬರುತ್ತೆ. ನಮ್ಮುಡುಗರಿಗೆ ಕೆಲಸಗಳು ಸಿಗ್ತವೆ. ಜನ ಸಣ್ಣ ಪುಟ್ಟ ವ್ಯಾಪಾರವೋ, ಮತ್ತೊಂದೋ ಮಾಡಿಕೊಂಡು ಜೀವನ ಮಾಡಬೌದು...’ ಎಂದು ಪಿಡಿಒ ನಿರಂಜನಮರ‍್ತಿ ತನ್ನ ಕೀರಲು ಧ್ವನಿಯಲ್ಲಿ ವಿವರಿಸಲು ಮುಂದಾಗುತ್ತಿದ್ದಂತೆ ಕೃಷ್ಣಪ್ಪ, ನೀನ್ಯಾವನಯ್ಯ ನಂಗೆ ಹೇಳೋನು? ನಮ್ಮೂರ ಉಸಾಬರಿ ನಿಂಗ್ಯಾಕಯ್ಯ? ನೀನು ರ‍್ಕಾರಿ ಸಂಬಳ ತಿಂಬೋ ನೌಕರ ಅಷ್ಟೇ. ಉಪದೇಶ ಮಾಡಕೆ ಬರಬೇಡ... ಎಂದು ಗದರಿದ. ಈ ಡಿಸ್ರ‍್ಬ್‌ಡ್‌ ಅಟ್ಮಾಸ್‌ಫಿಯರ್‌ನಲ್ಲಿ ಏನೂ ಡಿಸ್ಕಸ್‌ ಮಾಡಕಾಗಲ್ಲ ಎನ್ನುತ್ತ ಪ್ರೆಸಿಡೆಂಟರು ಮೀಟಿಂಗನ್ನು ಮುಂದೂಡಿದರು!

‘ಬಾರ್‌ ಶುರು ಮಾಡಿದರೆ ನಾನು ಸುಮ್ನಿರಲ್ಲ. ಊರಿನ ಹೆಣ್ಮಕ್ಕಳನ್ನು ಕರಕಂಡ್‌ ಬಂದು ಮೆಟ್ನಲ್ಲಿ ಹೊಡಸ್ತೀನಿ...’ ಎಂದು ಜೋರು ಧ್ವನಿಯಲ್ಲಿ ಹೇಳುತ್ತ ಕೃಷ್ಣಪ್ಪ ಮೀಟಿಂಗ್‌ ಹಾಲ್‌ನಿಂದ ಹೊರಕ್ಕೆ ಬಂದ. ಪಂಚಾಯ್ತಿ ಆಫೀಸಿನ ಮುಂದಿನ ಬಯಲಿನಲ್ಲಿ ಮೆದೆ ಒಟ್ಟಿದಂತೆ ನಿಂತಿದ್ದ ಜನರ ಕಡೆಗೊಮ್ಮೆ ನೋಡಿ ತನ್ನ ಮನೆ ಕಡೆಗೆ ಹೋದ.
‌‌ *
ಈ ದೇವ್ರಳ್ಳಿಯ ಪರ‍್ಣ ಹೆಸರು ತಿರುಮಲ ದೇವರಹಳ್ಳಿ ಅಂತ. ಅದು ಜನರ ಬಾಯಲ್ಲಿ ದೇವ್ರಳ್ಳಿ ಆಗಿತ್ತು. ರ‍್ಕಾರಿ ದಾಖಲೆಗಳಲ್ಲಿ ಅದು ಟಿ.ದೇವರಹಳ್ಳಿ. ಊರ ಜನ ಪ್ರತಿಯೊಂದಕ್ಕೂ ರ‍್ಲೆ,ತಕರಾರು ಮಾಡುತ್ತಿದ್ದರಿಂದ ಹೋಬಳಿಯ ಜನ ಅದನ್ನು ತರಲೆ ದೇವ್ರಳ್ಳಿ ಅಂತಲೂ ಕರೀತಿದ್ದರು. ಎಂಬತ್ತರ ದಶಕದವರೆಗೆ ದೇವ್ರಳ್ಳಿಯಲ್ಲಿ ಒಂದು ಸಣ್ಣ ಹೋಟಲು ಸಹ ಇರಲಿಲ್ಲ! ಹೋಟ್ಲಿಗೆ ಅವಕಾಶ ಕೊಟ್ಟರೆ ಜನ ಟೀ,ಕಾಪಿ ಕುಡಿಯೋದು ಕಲ್ತು ಹಾಳಾಗ್ತಾರೆ.ಸಿನಿಮಾ ಟೆಂಟಿಗೆ ಲೈಸನ್ಸ್‌ ಕೊಟ್ಟರೆ ಕಳ್ತನಗಳು ಜಾಸ್ತಿ ಆಗ್ತವೆ ಎಂದು ಹೇಳುತ್ತ ಊರವರು ಅವನ್ನು ದೂರ ಇಟ್ಟಿದ್ದರು. ಪರಸ್ಥಳದಿಂದ ಚಾಕರಿ ಮಾಡಲು ಬಂದ ರ‍್ಕಾರಿ ನೌಕರರಿಗೆ ಅಂತ ಸಾವಿರದೊಂಬೈನೂರಾ ಎಪ್ಪತ್ತೆಂಟರಲ್ಲಿ ಸಣ್ಣದೊಂದು ಟೀ,ಕಾಫಿ ಹೋಟಲು ತೆರೆಯಲು ಅವಕಾಶಕೊಟ್ಟರು. ಕ್ರಮೇಣ ಊರಲ್ಲಿ ಪೋಸ್ಟಾಫೀಸು, ಹೈಸ್ಕೂಲು, ದನಗಳ ಆಸ್ಪತ್ರೆ, ಕೆಇಬಿ ಸೆಕ್ಷನ್‌ ಆಫೀಸು, ಗ್ರಾಮೀಣ ಬ್ಯಾಂಕು, ಪ್ರೈಮರಿ ಹೆಲ್ತ್‌ ಸೆಂಟರು, ಭೂಸಾರ ಸಂರಕ್ಷಣೆ ಆಫೀಸು, ಜೂನಿಯರ್‌ ಕಾಲೇಜು ಇತ್ಯಾದಿಗಳೆಲ್ಲ ಶುರುವಾದ ಮೇಲೆ ರ‍್ಕಾರಿ ನೌಕರರ ಸಂಖ್ಯೆ ಹೆಚ್ಚಾಯಿತು. ಅವರ ಅನುಕೂಲಕ್ಕೆ ಅಂತ ಮೂರು ಹೋಟಲು ಆರಂಭವಾದದವು. ಆದರೂ ರ‍್ಕಾರಿ ನೌಕರರು ಈ ಸುಡಗಾಡು ಊರಲ್ಲಿ ಒಂದು ಸರಿಯಾದ ಹೋಟಲಿಲ್ಲ. ಇಲ್ಲಿಗೆ ಯಾಕಾದರೂ ಬಂದ್ವೋ. ಮೊದಲು ಇಲ್ಲಿಂದ ರ‍್ಗ ಮಾಡಿಸ್ಕಂಡ್‌ ಹೋದರೆ ಸಾಕಾಗಿದೆ ಎಂದು ಆಗಾಗ ಗೊಣಗುತ್ತಿದ್ದರು. ಊರಲ್ಲಿ ಹೊತ್ತೇ ಹೋಗಲ್ಲ, ಇಲ್ಲೇ ಇದ್ರೆ ಹುಚ್ಚಾಸ್ಪತ್ರೆಗೆ ಸರ‍್ಕಬೇಕಾಗುತ್ತೆ ಎನ್ನುತ್ತ ರಜಾ ದಿನಗಳಂದು ಟೌನಿಗೆ ಹೋಗಿ ಸಿನಿಮಾ ನೋಡಿ, ಕುಡಿದು, ತಿಂದು ರಾತ್ರಿ ಕೊನೇ ಬಸ್ಸಿಗೆ ಬರತೊಡಗಿದರು. ಇದನ್ನೆಲ್ಲ ನೋಡಿದ ಕೃಷ್ಣಪ್ಪ ದೇವರಳ್ಳಿಯ ಮಹಾಜನತೆ ಹೆಸರಿನಲ್ಲಿ ರ‍್ಕಾರಕ್ಕೆ ಮೂರ‍್ಜಿ ಬರೆಸಿದ. ಅದು ಗೊತ್ತಾಗಿ ಕೆಲವು ನೌಕರರು ಊರಿಂದ ರ‍್ಗ ಮಾಡಿಸಿಕೊಂಡು ಹೋಗಿಬಿಟ್ಟರು! ಪ್ರೈಮರಿ ಹೆಲ್ತ್‌ ಸೆಂಟರಿಗೆ ಬಂದ ಡಾಕ್ಟರು,ರ‍್ಸುಗಳು ಹೆಚ್ಚು ದಿನ ಇರುತ್ತಿರಲಿಲ್ಲ. ಮೂರ‍್ಜಿಗಳ ಹಾವಳಿಯಿಂದಾಗಿ ರ‍್ಕಾರಿ ನೌಕರರು ದೇವ್ರಳ್ಳಿಗೆ ಬರಲು ಹಿಂದೇಟು ಹಾಕ ತೊಡಗಿದರು. ಆ ಸಮಯದಲ್ಲೇ ಕೃಷ್ಣಪ್ಪ, ಹಿಂಗೇ ಬಿಟ್ರೆ ಊರು ಗಬ್ಬೆದ್ದು ಹೋಗುತ್ತೆ ಎಂದು ಊರ ಮುಖಂಡರನ್ನು ಎಚ್ಚರಿಸಿದ್ದ. ಆಗ ಯಾರೂ ಅವನ ಮಾತುಗಳನ್ನು ಕೇಳಿಸಿಕೊಳ್ಳಲಿಲ್ಲ.
*

‘ಒಂದೆರಡು ಮಾಪು ಕುಡಿಯಕೆ ಟೌನಿನ ತನಕ ಯಾಕೆ ಹೋಗ್ತೀರಪ್ಪ? ಇಲ್ಲೇ ನಿಮಗೆ ಆ ಅನುಕೂಲ ಮಾಡಿಕೊಟ್ಟರೆ ಆಯ್ತಲ್ಲ...’ ಎನ್ನುತ್ತ ಊರವನೊಬ್ಬ ಗುಟ್ಟಾಗಿ ಲಿಕ್ಕರ್‌ ಬಾಟ್ಲಿಗಳನ್ನು ತಂದು ಕೊಡಲು ಶುರುಮಾಡಿದ. ಆಮೇಲೆ ಅವರ ಅನುಕೂಲಕ್ಕೆ ಅಂತ ಒಂದು ಮಿಲ್ಟ್ರಿಹೋಟ್ಲು ಶುರುವಾಯಿತು. ಮುಂದಿನ ಮೂರೇ ರ‍್ಷಗಳಲ್ಲಿ ಊರಿಗೆ ಲಿಕ್ಕರ್‌ ಶಾಪು ಬಂತು. ಅದರ ಬೆನ್ನಲ್ಲೇ ಇಸ್ಪೀಟ್‌ ಕ್ಲಬ್ಬು ಶುರುವಾಯಿತು. ಆಮೇಲೆ ಮೂರು ಬಟ್ಟೆ ಅಂಗಡಿ ಬಂದವು. ಊರಲ್ಲಿದ್ದ ಇಬ್ಬರು ಟೈಲರುಗಳ ಜತೆಗೆ ಇನ್ನೂ ಮೂವರು ಹೊರಗಿನಿಂದ ಬಂದು ಅಂಗಡಿ ತೆರಕಂಡು ಕೂತರು. ತಾಯಮ್ಮನ ಗುಡಿ ಮುಂದಿನ ಅರಳಿಮರದ ಕೆಳಗೆ ಕುಂತ್ಕಂಡು ದಿನವಿಡೀ ಊರವರಿಗೆ ಕಟಿಂಗು, ಮಕಚೌರ ಮಾಡುತ್ತಿದ್ದ ಗೋವಿಂದಪ್ಪನ ಮಗ ಚಲಪತಿ ಮೇನ್‌ ರೋಡಿಗೆ ಬಂದು ಅಂಗಡಿ ತೆರೆದ. ದರ‍್ಗದಿಂದ ಬಂದವನೊಬ್ಬ ಅಂಥದೇ ಅಂಗಡಿ ತೆರೆದು ಅದಕ್ಕೆ ಆರ್‌ ಕೆ ಸಲೂನ್‌ ಅಂತ ಹೆಸರಿಟ್ಟ. ದೇವ್ರಳ್ಳಿಗೆ ಬರೋ ಮೊದಲು ಅವನು ಚೆನ್ನೈನಲ್ಲಿ ರಜನೀಕಾಂತ್‌, ಕಮಲಹಾಸನ್‌ ಮೊದಲಾದ ಸೂಪರ್‌ ಸ್ಟಾರ್‌ಗಳಿಗೆ ಹೇರ್‌ಕಟ್‌ ಮಾಡ್ತಿದ್ದನಂತೆ ಅಂತ ಪ್ರಚಾರವಾಗಿ ಅವನಿಂದ ಚೌರ ಮಾಡಿಸಿಕೊಳ್ಳಲು ಅಕ್ಕಪಕ್ಕದ ಊರುಗಳ ಹುಡುಗರು ದೇವ್ರಳ್ಳಿಗೆ ಬರತೊಡಗಿದರು. ಆಮೇಲೆ ಕಬ್ಬಿಣದಂಗಡಿ, ಸಿಮೆಂಟು, ಗೊಬ್ಬರ, ಕೀಟನಾಶಕಗಳ ಅಂಗಡಿಗಳು, ಫೋಟೊ ಸ್ಟುಡಿಯೊ, ಮೆಡಿಕಲ್‌ ಸ್ಟೋರು, ಬೇಕರಿ, ಟಿವಿ ಅಂಗಡಿ, ಮೊಬೈಲುಗಳ ರಿಪೇರಿ, ಜೆರಾಕ್ಸು ಲೊಟ್ಟೆ ಲೊಸಕು ಅಂತ ಸಕಲೆಂಟು ಕಸುಬುದಾರರು ದೇವ್ರಳ್ಳಿಗೆ ಬಂದು ಅಂಗಡಿಗಳನ್ನು ತೆರಕಂಡು ಕೂತರು. ಅಧಿಕಾರ ವಿಕೇಂದ್ರೀಕರಣದ ಪಂಚಾಯತ್‌ ರಾಜ್‌ ಕಾನೂನು ಬಂದ ಮೇಲೆ ದೇವ್ರಳ್ಳಿ ದೊಡ್ಡ ಬದಲಾವಣೆಗೆ ತೆರೆದುಕೊಂಡಿತು. ಇಷ್ಟೆಲ್ಲ ಬೆಳವಣಿಗೆಗಳು ಆಗುವವರೆಗೆ ಊರವರು ಚಕಾರ ಎತ್ತದೆ ಸುಮ್ಮನಿದ್ದರು. ತೀರಾ ಈಚೆಗೆ ಊರು ನಮ್ಮ ಕೈತಪ್ಪಿ ಹೋಗ್ತಿದೆ ಎನ್ನುತ್ತ ಅದರ ಮೇಲೆ ನಮಗೆ ಕಂಟ್ರೋಲ್‌ ಇರಬೇಕು ಎನ್ನತೊಡಗಿದರು. ಅದರ ಮುಂದುವರಿದ ಭಾಗ ಎನ್ನುವಂತೆ ಕೃಷ್ಣಪ್ಪ ಪಂಚಾಯ್ತಿ ಆಫೀಸಿಗೆ ನುಗ್ಗಿ ಪ್ರೆಸಿಡೆಂಟು ಮತ್ತು ಮೆಂಬರುಗಳನ್ನು ತರಾಟೆಗೆ ತೆಗೆದುಕೊಂಡದ್ದು.
‘ಮೀಸಲಾತಿ ಸಿಸ್ಟಮ್ಮು ಬಂದ ಮೇಲೆ ನಮ್ಮೂರು ಹಾಳಾಗೋಯ್ತು. ಊರಲ್ಲಿ ನಮ್ಮದೇ ಮೆಜಾರಿಟಿ. ಆದರೆ ನಮ್ಮವರಲ್ಲಿ ಒಗ್ಗಟ್ಟಿಲ್ಲ. ಅದರಿಂದಾಗಿ ತಲೆ ಮಾಸಿದವರಿಗೆ ಪಂಚಾಯ್ತಿಯಲ್ಲಿ ದಿವಾನಿಕೆ ಮಾಡೋ ಚಾನ್ಸು ಸಿಕ್ತಿದೆ...’ ಎಂದು ಕೆಲವರು ಬಹಿರಂಗವಾಗಿ ಹೇಳಲು ಶುರು ಮಾಡಿದರು. ಮೀಸಲಾತಿ ಪ್ರಯೋಜನ ಪಡೆದು ಆರಿಸಿಬಂದ ಮೆಂಬರುಗಳು, ಪ್ರೆಸಿಡೆಂಟು,ವೈಸ್‌ ಪ್ರೆಸಿಡೆಂಟರನ್ನು ಹೀಯಾಳಿಸಲು ಶುರು ಮಾಡಿದರು. ಈಗಲೂ ನಾವು ಒಂದಾಗದಿದ್ರೆ ಮುಂದೆ ನಮ್ಮ ಮಕ್ಕಳಿಗೆ ಉಳಿಗಾಲ ಇಲ್ಲ ಎಂದು ಹೇಳತೊಡಗಿದರು. ನಮ್ಮ ಸಂಬಳದಾಳುಗಳನ್ನು ಎಲೆಕ್ಷನ್ನಿಗೆ ನಿಲ್ಸಿ ಪಂಚಾಯ್ತಿಯನ್ನು ನಮ್ಮ ಕಂಟ್ರೋಲಿಗೆ ತಗಳ್ತೀವಿ, ನೋಡ್ತಾ ಇರಿ ಎನ್ನತೊಡಗಿದರು.
*
ಊರನ್ನು ರಿಪೇರಿ ಮಾಡಬೇಕು ಅಂದರೆ ಅಧಿಕಾರ ಬೇಕು. ಇಲ್ಲದಿದ್ರೆ ಜನ ನಿಮ್ಮ ಮಾತು ಕೇಳಲ್ಲ ಎಂದು ಕೃಷ್ಣಪ್ಪನ ಬೆಂಗಲಿಗರು ಹೇಳಿದರು. ಕೃಷ್ಣಪ್ಪನಿಗೂ ಯಾವುದಾದರೂ ರಾಜಕೀಯ ಪಕ್ಷಕ್ಕೆ ಸೇರಿಕೊಳ್ಳಬೇಕು ಅನ್ನಿಸಿತು. ಸಾಕಷ್ಟು ಯೋಚನೆ ಮಾಡಿ ಅವನು ರೂಲಿಂಗ್‌ ಪರ‍್ಟಿಗೆ ಸೇರಿದ. ಪರ‍್ಟಿಯ ಮುಖಂಡರು ಅವನನ್ನು ಸಂತೋಷದಿಂದ ಬರ ಮಾಡಿಕೊಂಡರು.ಆರು ತಿಂಗಳು ಕಳೆಯುವಷ್ಟರಲ್ಲಿ ಕೃಷ್ಣಪ್ಪ ಪಕ್ಷದ ಜಿಲ್ಲಾ ಮುಖಂಡರಿಗೆ ಬೇಕಾದವನಾದ. ಅವನ ಮಾತುಗಳಿಗೆ ನಾಡ ಕಚೇರಿ, ತಾಲ್ಲೂಕಿನ ರ‍್ಕಾರಿ ಕಚೇರಿಗಳಲ್ಲಿ ಬೆಲೆ ಸಿಗತೊಡಗಿತು. ಪಕ್ಷದ ರಾಜ್ಯಾಧ್ಯಕ್ಷರು ಕೃಷ್ಣಪ್ಪನನ್ನು ಬೆಂಗಳೂರಿಗೆ ಕರೆಸಿಕೊಂಡು, ನೋಡಿ ಮಿ. ಕೃಷ್ಣಪ್ಪ, ನಿಮ್ಮ ತಾಲ್ಲೂಕಿನಲ್ಲಿ ನಮ್ಮ ಪಕ್ಷಕ್ಕೆ ಸರಿಯಾದ ಬೇಸ್‌ಇಲ್ಲ. ನೀವೇ ಲೀಡರ್‌ಶಿಪ್‌ ತಗಂಡು ಪಕ್ಷವನ್ನು ಬೆಳೆಸಬೇಕು ಎಂದು ವಿನಂತಿಸಿಕೊಂಡರು. ಮುಂದಿನ ಅಸೆಂಬ್ಲಿ ಎಲೆಕ್ಷನ್‌ ಹೊತ್ತಿಗೆ ನಿಮ್ಮ ನಾಲ್ಕೂ ಹೋಬಳಿಗಳ ಪ್ರತಿ ಊರಲ್ಲೂ ಪಕ್ಷದ ಗ್ರಾಮ ಸಮಿತಿಗಳು ರಚನೆ ಆಗಬೇಕು. ಪ್ರತಿ ಸಮಿತಿಗೂ ಪಕ್ಷ ಐದೈದು ಸಾವಿರ ಕೊಡುತ್ತೆ. ನಿಮ್ಮ ಓಡಾಟಕ್ಕೆ ಒಂದು ಕಾರು ಕೊಡಿಸ್ತೀವಿ. ಇನ್ಮುಂದೆ ನೀವು ಅದರಲ್ಲೇ ಓಡಾಡಬೇಕು ಎಂದರು. ಕೃಷ್ಣಪ್ಪನ ಓಡಾಟಕ್ಕೆ ಒಂದು ಸೆಕೆಂಡ್‌ಹ್ಯಾಂಡ್‌ ಕಾರನ್ನೂ ಕೊಡಿಸಿದರು. ಪಕ್ಷ ಸಂಘಟನೆಗೆ ಅಂತ ಐದು ಲಕ್ಷ ರೂಪಾಯಿ ಕೊಟ್ಟರು!. ಈ ಬೆಳವಣಿಗೆಯನ್ನು ಕೃಷ್ಣಪ್ಪ ನಿರೀಕ್ಷಿಸಿರಲಿಲ್ಲ. ಮೂರು ತಿಂಗಳು ಕಳೆಯುವಷ್ಟರಲ್ಲಿ ಕೃಷ್ಣಪ್ಪ ಪಕ್ಷದ ತಾಲ್ಲೂಕು ಸಮಿತಿ ಅಧ್ಯಕ್ಷನಾದ!
ಕೃಷ್ಣಪ್ಪನ ಅಮಿತೋತ್ಸಾಹದ ಓಡಾಟ ಕಂಡು ಪಕ್ಷದ ಅಧ್ಯಕ್ಷರು ಅವನನ್ನು ಮತ್ತೆ ಬೆಂಗಳೂರಿಗೆ ಕರೆಸಿಕೊಂಡರು. ಕೃಷ್ಣಪ್ಪರೇ ನಿಮ್ಮ ಹೋಬಳಿಯಲ್ಲಿ ಮತಾಂತರಕ್ಕೆ ಪ್ರಯತ್ನಗಳು ನಡೀತಿವೆ ಅಂತ ನಮಗೆ ಮಾಹಿತಿ ಬಂದಿದೆ. ನಿಮ್ಮೂರಲ್ಲೇ ಮೂರು ಮತಾಂತರಗಳಾಗಿವೆ! ಮತ್ತೊಂದು ಆಗದಂತೆ ನೀವು ನಿಗಾ ತಗಬೇಕು ಅಂದರು. ನಂಗೆ ಗೊತ್ತೇ ಆಗ್ದಂತೆ ಊರಲ್ಲಿ ಏನೇನೋ ನಡೀತಿದೆ ಎಂದು ಕೃಷ್ಣಪ್ಪನಿಗೆ ಅನ್ನಿಸಿತು. ಆಮೇಲೆ ಅವನ ಮಾತಿನ ವರಸೆ ಬದಲಾಯಿತು. ಮೊದಲು ಮತಾಂತರ ಆಗಿರೋರನ್ನು ಪತ್ತೆ ಮಾಡಬೇಕು ಎಂದು ತರ‍್ಮಾನಿಸಿದ. ಕೇರಿಯ ಹುಡುಗರ ಮೇಲೆ ಕಣ್ಣಿಟ್ಟ. ಕೃಷ್ಣಪ್ಪನ ರ‍್ತನೆಯಿಂದ ಪಂಚಾಯ್ತಿ ಪ್ರೆಸಿಡೆಂಟರು ಎಚ್ಚೆತ್ತುಕೊಂಡರು. ಕೃಷ್ಣಪ್ಪನಾಗಲಿ ಅಥವಾ ಅವನ ಕಡೆಯವರಾಗಲಿ ಆಫೀಸಿಗೆ ಬಂದು ಏನೇ ಕೇಳಿದರೂ ಸಮಾಧಾನದಿಂದ ಉತ್ತರ ಕೊಡಬೇಕು ಎಂದು ತಮ್ಮ ಸಿಬ್ಬಂದಿಗೆ ತಾಕೀತು ಮಾಡಿದರು. ಕೃಷ್ಣಪ್ಪನಿಗೆ ನೀವು ಹೆದರಬೇಕಿಲ್ಲ. ಅವನು ಏನು ಮಾಡ್ತಾನೆ ಅಂಬದನ್ನು ತಿಳಕಂಡು ತಿರುಮಂತ್ರ ಹಾಕಿ ಅವನನ್ನು ಬಗ್ಗು ಬಡೀಯಬೇಕು. ಅದಕ್ಕೆ ಸರಿಯಾದ ಟೈಮು ಬರಬೇಕು ಎಂದು ಕೆಲವು ಮೆಂಬರುಗಳು ಹೇಳಿದರು.
ತನ್ನ ಪಕ್ಷದ ವತಿಯಿಂದ ಊರಲ್ಲಿ ರ‍್ಥಿಕ ಸಮೀಕ್ಷೆ ಮಾಡಿಸಿದರೆ ಮತಾಂತರ ಆದವರನ್ನು ಪತ್ತೆ ಮಾಡಬಹುದು ಎಂದು ಕೃಷ್ಣಪ್ಪನಿಗೆ ಅನ್ನಿಸಿತು. ನಮ್ಮ ಪಕ್ಷದ ಕಡೆಯಿಂದ ಊರ ಜನರ ರ‍್ಥಿಕ ಪರಿಸ್ಥಿತಿಯ ಸಮೀಕ್ಷೆ ಮಾಡಬೇಕು ಅಂತ ತರ‍್ಮಾನ ಆಗಿದೆ. ಸಮೀಕ್ಷಾ ವರದಿ ಆಧಾರದ ಮೇಲೆ ಮನೆ ಇಲ್ಲದ ಬಡವರಿಗೆ ಮನೆ, ವ್ಯಾಪಾರ, ವ್ಯವಹಾರ ಮಾಡೋರಿಗೆ ಬ್ಯಾಂಕುಗಳಿಂದ ಜೀರೋ ಬಡ್ಡಿ ದರದಲ್ಲಿ ಸಾಲ ಕೊಡುವ ಯೋಜನೆ ಇದೆ ಎಂದು ಕೃಷ್ಣಪ್ಪ ಡಂಗೂರ ಹೊಡೆಸಿದ. ಹದಿನೈದು ದಿನಗಳು ಕಳೆಯುವಷ್ಟರಲ್ಲಿ ಏಳೆಂಟು ಯುವಕರು ಊರಿಗೆ ಬಂದರು. ನಾವು ರ‍್ಕಾರೇತರ ಸಂಸ್ಥೆಯ ಸ್ವಯಂಸೇವಕರು, ರ‍್ಥಿಕ ಸಮೀಕ್ಷೆ ಮಾಡೋಕೆ ಬಂದಿದ್ದೀವಿ ಎನ್ನುತ್ತ ಊರಿನ ಮನೆ ಮನೆಗೆ ಹೋಗಿ ನೀವು ಏನು ಕೆಲಸ ಮಾಡ್ತೀರ? ನಿಮ್ಮ ವರಮಾನ ಎಷ್ಟು? ಎಷ್ಟು ಉಳಿತಾಯ ಮಾಡ್ತೀರ ಇತ್ಯಾದಿ ಪ್ರಶ್ನೆಗಳನ್ನು ಕೇಳಿ ಉತ್ತರಗಳನ್ನು ಬರೆದುಕೊಂಡರು. ಐದಾರು ದಿನ ಕಳೆದ ಮೇಲೆ ಪ್ರಶ್ನೆಗಳ ಧಾಟಿ ಬದಲಾಯಿತು. ನಿಮ್ಮ ರ‍್ಮ, ಜಾತಿ ಯಾವುದು? ಯಾವ ಹಬ್ಬಗಳನ್ನು ಮಾಡ್ತೀರಿ. ಅದಕ್ಕೆ ಎಷ್ಟು ರ‍್ಚು ಮಾಡ್ತೀರಿ ಇತ್ಯಾದಿ ಪ್ರಶ್ನೆಗಳನ್ನು ಕೇಳ ತೊಡಗಿದರು.
ನಮ್ಮ ತಾಲ್ಲೂಕಿನ ಯಾವ ಊರಲ್ಲೂ ಸಮೀಕ್ಷೆ ನಡೆಯುತ್ತಿಲ್ಲ.! ನಮ್ಮೂರಲ್ಲೇ ಯಾಕೆ ನಡೀತಿದೆ? ಇದರಲ್ಲೇನೋ ಹಿಕ್ಮತ್ತಿನ ರಾಜಕೀಯ ಇದೆ ಎಂದು ಕೆಲವರು ಊಹಿಸಿದರು. ಸಮೀಕ್ಷೆಗೆ ಬಂದವರು ಏನು ಕೇಳಿದರೂ ಉತ್ತರ ಹೇಳಬೇಡಿ ಎಂದು ಜನರಿಗೆ ಹೇಳಿದರು. ಆದರೂ ಕೆಲವರು ನಾವು ಉಗಾದಿ, ಪರ‍್ಲಬ್ಬ, ಕ್ರಿಸ್ಮಸ್ಸು ಸೇರಿದಂಗೆ ಎಲ್ಲಾ ಹಬ್ಬಗಳನ್ನೂ ಮಾಡ್ತೀವಿ ಎಂದರು! ಊರಿನ ಅನೇಕರಿಗೆ ನಮ್ಮ ರ‍್ಮ ಯಾವುದು ಎನ್ನುವ ಬಗ್ಗೆ ಹೆಚ್ಚಿನ ತಿಳುವಳಿಕೆ ಇರಲಿಲ್ಲ. ಇಂಥ ಸಮೀಕ್ಷೆಗಳಿಂದ ಮೂರುಕಾಸಿನ ಪ್ರಯೋಜನ ಇಲ್ಲ ಎಂದು ಕೃಷ್ಣಪ್ಪನಿಗೆ ಅನ್ನಿಸಿತು. ಮರು ದಿನವೇ ಸಮೀಕ್ಷೆ ನಿಂತು ಹೋಯಿತು.
*
ಕೃಷ್ಣಪ್ಪನ ಅದೃಷ್ಟ ಖುಲಾಯಿಸಿತು. ಅವನು ಊರಿನ ಕೃಷಿ ಸಹಕಾರ ಸಂಘದ ಅಧ್ಯಕ್ಷನಾಗಿ ಆಯ್ಕೆಯಾದ. ಜನ ಅದನ್ನು ಅಕ್ಕಿ ಸೊಸೈಟಿ ಎಂದು ಕರೆಯುತ್ತಿದ್ದರು. ಈ ಸೊಸೈಟಿ ಪಕ್ಕದಲ್ಲಿ ಒಂದು ಎಕರೆಯಷ್ಟು ಖಾಲಿ ಜಾಗವಿತ್ತು. ಅದು ನಮ್ಮ ಸೊಸೈಟಿಗೆ ಸೇರಿದ ಜಾಗ. ಅಲ್ಲಿ ಒಂದು ಗೋಡೌನ್‌ ಕಟ್ಟಿಸ್ತೀನಿ ಎಂದು ಕೃಷ್ಣಪ್ಪ ಹೇಳಲು ಶುರುಮಾಡಿದ. ಅದು ಗೊತ್ತಾಗಿದ್ದೇ ತಡ, ಆ ಜಾಗ ನಮ್ಮ ಪಂಚಾಯ್ತಿಗೆ ಸೇರಿದ್ದು ಎಂದು ಮೆಂಬರುಗಳು ತಕರಾರು ಎತ್ತಿದರು. ಸೊಸೈಟಿ ಪಕ್ಷದಲ್ಲಿರೊ ಜಾಗ ನಂದು. ಅದು ನನ್ನೆಸರಲ್ಲಿದೆ. ನಾನು ಕಂದಾಯವನ್ನೂ ಕಟ್ತಿದ್ದೀನಿ ಎಂದು ಗೌಸ್‌ಸಾಬರ ಹಿರೀಮಗ ಸುಲೇಮಾನ್‌ ಹೇಳತೊಡಗಿದ. ನೆಲಬಾಡಿಗೆ ಕರಾರಿನ ಮೇಲೆ ಜಾಗವನ್ನು ಪಂಚಾಯ್ತಿಯವರೇ ಸುಲೇಮಾನನಿಗೆ ಗುತ್ತಿಗೆ ಕೊಟ್ಟಿದ್ದರು. ಅದರ ಒಂದು ಮೂಲೆಯಲ್ಲಿ ಅವನು ಕಣ ಕಟ್ಟಿಕೊಂಡಿದ್ದ. ಸುಗ್ಗಿ ಕಾಲದಲ್ಲಿ ಸುತ್ತಲಿನ ಊರುಗಳಿಗೆ ಹೋಗಿ ನೆಲ್ಲು, ಕಡಲೆಕಾಯಿ, ಮೆಣಸಿನಕಾಯಿ, ಹುಣಸೆಹಣ್ಣು, ಹೊಂಗೆ, ಬೇವಿನ ಬೀಜಗಳನ್ನು ಖರೀದಿಸಿ ತಂದು ಕಣದಲ್ಲಿ ಒಣಗಿಸಿ ದರ‍್ಗದ ಮಂಡಿಗಳಿಗೆ ಮಾರುತ್ತಿದ್ದುದು ಊರವರಿಗೆ ಗೊತ್ತಿತ್ತು. ಹತ್ತು ರ‍್ಷಗಳ ಬಾಡಿಗೆ ಕರಾರನ್ನು ಅವನು ಗುಟ್ಟಾಗಿ ಮೂವತ್ತು ರ‍್ಷಕ್ಕೆ ವಿಸ್ತರಿಸಿಕೊಂಡಿದ್ದ ಅನ್ನೋದು ಯಾರಿಗೂ ಗೊತ್ತಿರಲಿಲ್ಲ. ಚರ‍್ಮನ್ನರಿಗೂ ಸಹ!
ಜಾಗ ಸೊಸೈಟಿಯದು ಎಂದು ಕೃಷ್ಣಪ್ಪ ಹೇಳಿದ್ದೇ ತಡ ಸುಲೇಮಾನ್‌ ಅದನ್ನು ಒತ್ತೆ ಇಟ್ಟು ಇಪ್ಪತ್ತು ಲಕ್ಷ ರುಪಾಯಿ ಲೋನು ಎತ್ತಲು ಪ್ಲಾನು ಮಾಡಿದ! ಗುಟ್ಟಾಗಿ ದರ‍್ಗದ ಸಹಕಾರಿ ಬ್ಯಾಂಕಿನಲ್ಲಿ ರ‍್ಜಿ ಹಾಕಿದ. ಸ್ಥಳ ಪರಿಶೀಲನೆ ಮಾಡದೇ ಲೋನು ಮಂಜೂರಾಗುವಂತೆ ನೋಡಿಕೊಂಡ. ಇನ್ನೇನು ಚೆಕ್ಕು ಕೊಡಬೇಕು ಅನ್ನೋಹೊತ್ತಲ್ಲಿ ಕೃಷ್ಣಪ್ಪನಿಗೆ ವಿಷಯ ಗೊತ್ತಾಯಿತು. ಚೆಕ್‌ ವಿಲೇ ಆಗಲಿಲ್ಲ. ಈ ಬೆಳವಣಿಗೆ ನಂತರ ಊರ ಜನರಿಗೆ ಕೃಷ್ಣಪ್ಪನ ಮೇಲೆ ವಿಶ್ವಾಸ ಹೆಚ್ಚಾಯಿತು. ಸುಲೇಮಾನು ಹಿಂದಿನ ಪಿಡಿಒಗೆ ಲಂಚ ಕೊಟ್ಟು ಜಾಗದ ಖಾತೆಯನ್ನು ತನ್ನೆಸರಿಗೆ ಮಾಡಿಸಿಕೊಂಡಿದ್ದಾನೆ ಎಂದು ಹೇಳಿ ಪ್ರೆಸಿಡೆಂಟರು ಅವನ ಬಾಡಿಗೆ ಕರಾರನ್ನು ರದ್ದು ಮಾಡಿದರು! ಪಂಚಾಯ್ತಿ ತರ‍್ಮಾನದ ವಿರುದ್ಧ ಸುಲೇಮಾನು ಕರ‍್ಟಿಗೆ ಹೋಗ್ತಾನೆ ಅನ್ನೋದು ಗೊತ್ತಾಗುತ್ತಿದ್ದಂತೆ ಕೃಷ್ಣಪ್ಪ ಅವನನ್ನು ಮನೆಗೆ ಕರೆಸಿಕೊಂಡು ನಿಂಗೆ ಟೆರರಿಸ್ಟುಗಳ ಜತೆ ಲಿಂಕ್‌ ಐತೆ ಅಂತ ಪೊಲೀಸರಿಗೆ ಸೂರು ಕೊಟ್ಟು ನಿನ್ನ ಜೈಲಿಗೆ ಕಳಿಸ್ತೀನಿ ಎಂದು ಹೆದರಿಸಿ ಬಾಯಿ ಮುಚ್ಚಿಸಿದ.
*
‘ದೇವರಹಳ್ಳಿ ಬೆಳೀತಿದೆ. ನಿಮ್ಮೂರಲ್ಲಿ ಒಂದು ಬಾರ್‌ ಇರಬೇಕು ಅಂತ ನಾನೇ ಲೈಸನ್ಸ್‌ ಮಾಡಿಸಿದ್ದೆ. ನಿಮ್ಮ ಪಂಚಾಯ್ತಿಯವರು ಅದಕ್ಕೆ ಎನ್‌ಒಸಿ ಕೊಡ್ತಿಲ್ಲ. ಅದನ್ನು ನಿಮ್ಮ ಹೆಸರಿಗೆ ಮಾಡಿಸಿಕೊಡ್ತೀನಿ. ಬಾರ್‌ ಇದ್ದರೆ ಚುನಾವಣೆ ಸಮಯದಲ್ಲಿ ಉಪಯೋಗಕ್ಕೆ ಬರುತ್ತೆ...’ ಎಂದು ಜಿಲ್ಲಾ ಮಂತ್ರಿಗಳು ಕೃಷ್ಣಪ್ಪನಿಗೆ ಫೋನ್‌ ಮಾಡಿ ವಿನಂತಿ ಮಾಡಿಕೊಂಡರು. ಬೆಂಗಳೂರಿಗೆ ಬನ್ನಿ, ನಿಮ್ಮ ಜತೆ ಮಾತಾಡಬೇಕು ಅಂದರು. ಇದೊಳ್ಳೆ ಫಜೀತಿ ಆಯ್ತಲ್ಲ ಎಂದು ಕೃಷ್ಣಪ್ಪ ಮಜುಗರ ಪಟ್ಟುಕೊಂಡ. ಬಾರ್‌ಗೆ ಅನುಮತಿ ಕೊಟ್ಟರೆ ಊರ ಹೆಂಗಸರಿಂದ ಗಲಾಟೆ ಮಾಡಿಸ್ತೀನಿ ಅಂತ ನಾನೇ ಹೇಳಿದ್ದೆ. ಈಗ ನಾನೇ ಬಾರ್‌ ಶುರು ಮಾಡ್ತೀನಿ ಅಂದರೆ ಜನ ಏನು ಹೇಳಭೌದು ಅನ್ನೋ ಗೊಂದಲದಲ್ಲೇ ಬೆಂಗಳೂರಿಗೆ ಹೋಗಿ ಜಿಲ್ಲಾ ಮಂತ್ರಿಗಳನ್ನು ಭೇಟಿ ಮಾಡಿದ.
‘ರಾಜಕೀಯದಲ್ಲಿ ಇರೋರು ಇಷ್ಟು ಸೂಕ್ಷ್ಮ ಆದ್ರೆ ಹೆಂಗ್ರಿ ಕೃಷ್ಣಪ್ಪ?ಎಂದು ಕೇಳಿದ ಮಂತ್ರಿಗಳು ಊರಲ್ಲಿ ಬಾರ್‌ ಇದ್ದರೆ ಎಲೆಕ್ಷನ್‌ ಟೈಮಲ್ಲಿ ಉಪಯೋಗಕ್ಕೆ ಬರುತ್ತೆ. ಅದರಿಂದ ಹೆಚ್ಚು ಪ್ರಯೋಜನ ಆಗೋದು ನಿಮಗೇ. ಬರೋ ಎಂಎಲ್ಲೆ ಎಲೆಕ್ಷನ್‌ನಲ್ಲಿ ನಿಮಗೆ ಪಕ್ಷದ ಟಿಕೆಟ್‌ ಕೊಡಬೇಕು ಅಂತ ಪರ‍್ಟಿಯಲ್ಲಿ ತರ‍್ಮಾನ ಆಗಿದೆ! ಈ ಕಾಲದಲ್ಲಿ ಯಾರೂ ಮನೆ ದುಡ್ಡಲ್ಲಿ ಎಲೆಕ್ಷನ್‌ ಮಾಡಲ್ಲ. ಅನಾಯಾಸವಾಗಿ ದುಡ್ಡು ಬರೋ ದಾರಿಗಳನ್ನು ನಾವೇ ಹುಡುಕಿಕೊಳ್ಳಬೇಕು. ಬಾರ್‌ ಲೈಸನ್ಸ್‌ ನಿಮ್ಮ ಹೆಸರಿಗೆ ಬೇಡ ಅಂದರೆ ನಿಮ್ಮ ತಮ್ಮನೋ, ಹೆಂಡ್ತಿ ತಮ್ಮನ ಹೆಸರಿಗೋ ಮಾಡಿಸಿಕೊಳ್ಳಿ. ನನ್ನ ತಮ್ಮನ ಮಗನಿಗೆ ಬಾರು ನಡೆಸೋ ಅನುಭವ ಇದೆ. ಬಂಡವಾಳ ಅವನೇ ಹಾಕ್ತಾನೆ. ನಿಮಗೆ ಫಿಫ್ಟಿ ರ‍್ಸೆಂಟ್‌ ಲಾಭ ಕೊಡ್ತಾನೆ. ಊರವರು ತಕರಾರು ಮಾಡದಂಗೆ ನೀವು ನೋಡಿಕೊಂಡರೆ ಸಾಕು...’ ಎಂದರು. ಕೃಷ್ಣಪ್ಪನಿಗೆ ಡೀಲ್‌ ಚೆನ್ನಾಗಿದೆ ಅನ್ನಿಸಿ, ಅರೆ ಮನಸ್ಸಿನಿಂದ ಒಪ್ಪಿಕೊಂಡ.
*
ಕೃಷ್ಣಪ್ಪ ಊರಿಗೆ ಬರುಷ್ಟರಲ್ಲಿ ಸೊಸೈಟಿ ಪಕ್ಕದ ಜಾಗವನ್ನು ಹರಾಜು ಹಾಕಲು ಗ್ರಾಮ ಪಂಚಾಯ್ತಿ ನರ‍್ಣಯ ಅಂಗೀಕರಿಸಿತ್ತು!. ಹರಾಜಿಂದ ಬರೋ ದುಡ್ಡಲ್ಲಿ ಪಂಚಾಯ್ತಿಗೆ ಹೊಸ ಆಫೀಸು, ಪಿಡಿಒಗೆ ಕ್ವರ‍್ಟರ‍್ಸ್‌ ಕಟ್ಟಬೇಕು ಎಂದು ಪ್ರೆಸಿಡೆಂಟರು ತರ‍್ಮಾನಿಸಿದ್ದರು. ಈ ಬೆಳವಣಿಗೆಯಿಂದ ಕೃಷ್ಣಪ್ಪನ ತಲೆ ಕೆಟ್ಟುಹೋಯಿತು. ಸೊಸೈಟಿ ಜಾಗಾನ ಹರಾಜು ಹಾಕಿದ್ರೆ ನಾನು ಸುಮ್ಮನಿರಲ್ಲ ಎಂದ ಕೃಷ್ಣಪ್ಪ ತನ್ನ ಬೆಂಬಲಿಗರ ಜತೆ ಹೋಗಿ ಪ್ರೆಸಿಡೆಂಟರ ಜತೆ ಜಗಳ ಆಡಿದ.
‘ಈಗ ದೇಶದಲ್ಲಿ ಏರ್‌ಪರ‍್ಟ್‌ಗಳು, ಬ್ಯಾಂಕುಗಳು, ರೈಲ್ವೆ ಸ್ಟೇಷನ್‌ಗಳನ್ನು ಮಾರಾಟ ಮಾಡಿ ಬಂದ ದುಡ್ಡಲ್ಲಿ ದೇಶ ನಡಸ್ತಿಲ್ಲವೇನ್ರಿ? ಹಂಗೇ ನಾವು ನಮ್ಮ ಜಾಗ ಹರಾಜು ಹಾಕಿ, ಬಂದ ದುಡ್ಡಲ್ಲಿ ಪಂಚಾಯ್ತಿ ಆಫೀಸು ಕಟ್ಟಿದ್ದರೆ ತಪ್ಪೇನಿದೆ? ನೀವು ಪ್ರತಿಯೊಂದಕ್ಕೂ ಅಡ್ಡಗಾಲು ಆಕ್ಕಂಡು ಬರಬೇಡಿ ಮಿ.ಕೃಷ್ಣಪ್ಪ...’ ಎಂದು ಪ್ರೆಸಿಡೆಂಟರು ಹೇಳಿದರು. ಕೆಲವು ಮೆಂಬರುಗಳು ಕೃಷ್ಣಪ್ಪನ ಜತೆ ವಾದಕ್ಕಿಳಿದು ಹರಾಜು ನರ‍್ಧಾರವನ್ನು ಸರ‍್ಥಿಸಿಕೊಂಡರು.
ಗ್ರಾಮಠಾಣದ ಜಾಗದ ಹರಾಜಿಗೆ ಅವಕಾಶ ಕೊಡಬಾರದು ಎಂದು ಕೃಷ್ಣಪ್ಪ ರ‍್ಜಿ ಬರೆದು ಡೀಸಿ ಸಾಹೇಬರಿಗೆ ಕೊಟ್ಟು ಬಂದ. ಗ್ರಾಮದ ಅಭಿವೃದ್ಧಿಗೆ ಸ್ಥಳೀಯವಾಗಿ ಸಂಪನ್ಮೂಲ ರೂಢಿಸಿಕೊಳ್ಳುವ ಕೆಲಸಕ್ಕೆ ಯಾರೂ ಅಡ್ಡಿ ಮಾಡಬಾರದು ಅಂತ ರ‍್ಕಾರದ ಗೈಡ್‌ಲೈನ್‌ ಇದೆ ಎಂದು ಹೇಳಿ ಡೀಸಿ ಸಾಹೇಬರು ರ‍್ಜಿ ತಿರಸ್ಕರಿಸಿದರು. ಅದೇ ವಾರದಲ್ಲಿ ಹರಾಜಿನ ನೊಟೀಸ್‌ ಒಂದೆರಡು ಪತ್ರಿಕೆಗಳಲ್ಲಿ ಪ್ರಕಟವಾಯಿತು.
ಒಂದಲ್ಲ ಒಂದು ದಿನ ದೇವರಳ್ಳಿ ತಾಲ್ಲೂಕಾಗೋದು ಗ್ಯಾರಂಟಿ. ಅಲ್ಲೊಂದು ಜಾಗ ಇದ್ದರೆ ಮುಂದೆ ಉಪಯೋಗಕ್ಕೆ ಬರುತ್ತೆ. ಮಾರಾಟ ಮಾಡಿದರೂ ಕೋಟ್ಯಂತರ ರುಪಾಯಿ ಸಿಗುತ್ತೆ ಎಂದು ಜಾಹೀರಾತು ನೋಡಿದ ಹಣವಂತರು ಲೆಕ್ಕ ಹಾಕಿದರು. ಆ ಜಾಗ ತಗಂಡು ಅಲ್ಲಿ ಪೆಟ್ರೋಲ್‌ ಬಂಕ್‌ ಹಾಕಬೇಕು ಎಂದು ಹಿಂದೂಪುರದವನೊಬ್ಬ ಪ್ಲಾನು ಮಾಡಿದ್ದಾನಂತೆ! ಅಲ್ಲಿ ಸಿನಿಮಾ ಥೇಟರು ಕಟ್ಟಬೇಕು ಅಂತ ದರ‍್ಗದ ಎಕ್ಸೈಸ್‌ ಕಂಟ್ರಾಕ್ಟರು ವೇಣುಗೋಪಾಲ ನಾಯ್ಡು ತರ‍್ಮಾನ ಮಾಡಿದ್ದಾನೆ ಎಂದು ಸುದ್ದಿ ಹಬ್ಬಿತು. ಹರಾಜು ನಡೆಯದಂತೆ ಏನಾದರೂ ಮಾಡಬೇಕು ಎಂದು ಕೃಷ್ಣಪ್ಪ ಯೋಚಿಸಿದ. ಹರಾಜು ತಡೆಯಲು ಏನಾದರೂ ಉಪಾಯ ಇದ್ದರೆ ತಿಳಿಸಿ ಎಂದು ಪಕ್ಷದ ಜಿಲ್ಲಾಧ್ಯಕ್ಷರನ್ನು ಕೇಳಿದ.
.
*
ಹರಾಜಿಗೆ ಹದಿನೈದು ದಿನಗಳು ಬಾಕಿ ಇರುವಾಗ ಊರಲ್ಲಿ ಒಂದು ಸುದ್ದಿ ದೊಡ್ಡದಾಗಿ ಕೇಳಿ ಬಂತು. ದೇವ್ರಳ್ಳಿಯ ಜನತಾ ಕಾಲೋನಿಯ ಸಣ್ರಾಮಪ್ಪನ ಮಗ ಆನಂದಮರ‍್ತಿ ತನ್ನ ಹೆಂಡ್ತಿ, ಮಕ್ಕಳ ಜತೆ ಮತಾಂತರ ಆಗಿದ್ದಾನಂತೆ ಅನ್ನೋದೇ ಆ ಸುದ್ದಿ!
ಸುದ್ದಿ ಹಬ್ಬಿಸಿದ್ದು ಕೃಷ್ಣಪ್ಪನ ಹುಡುಗರು. ಆನಂದ ಟೀವಿ ರಿಪೇರಿ ಕಲಿತು, ದರ‍್ಗದ ಅಂಗಡಿಯೊಂದರ ಕೆಲಸ ಮಾಡುತ್ತಿದ್ದ. ಮಗ ಮತಾಂತರ ಆಗಿರುವ ಸುದ್ದಿ ಕೇಳಿ ಹೆದರಿದ್ದು ಆನಂದನ ಅಪ್ಪ ಸಣ್ಣರಾಮಪ್ಪ. ಅವತ್ತೇ ಅವನು ಹೈಸ್ಕೂಲು ಮೇಷ್ಟರೊಬ್ಬರ ಮನೆಗೆ ಹೋಗಿ ಮತಾಂತರ ಅಂದರೇನು ಎಂದು ವಿಚಾರಿಸಿದ. ಅವರು ಹೇಳಿದ್ದನ್ನು ಕೇಳಿ ಸಣ್ರಾಮಪ್ಪನಿಗೆ ಭಯವಾಯಿತು. ‘ನಮ್ಮ ರಾಜ್ಯದಲ್ಲಿ ಮತಾಂತರ ನಿಷೇಧ ಕಾನೂನಿದೆ ಸಣ್ರಾಮಪ್ಪ. ನಿನ್ಮಗ ಮತಾಂತರ ಆಗಿರೋದು ಸಾಬೀತಾದರೆ ಅವನಿಗೆ ಜೈಲು ಶಿಕ್ಷೆ ಗ್ಯಾರಂಟಿ,..’ ಎಂದು ಮೇಷ್ಟರು ಹೇಳಿದ್ದರು. ಅದು ಹೇಗೋ ಊರ ಜನರಿಗೂ ಗೊತ್ತಾಯಿತು.
ಮಾರನೇ ದಿನವೇ ಸಣ್ರಾಮಪ್ಪ ದರ‍್ಗಕ್ಕೆ ಹೋದ. ಮಗನನ್ನು ಕಂಡು ನೀನು ನಮ್ಮ ರ‍್ಮ ಬಿಟ್ಟು ಬೇರೆ ಯಾವುದೋ ರ‍್ಮಕ್ಕೆ ಸೇರಿಕೊಂಡಿದ್ದೀಯ ಅಂತ ಊರವರು ಹೇಳ್ತಿದ್ದಾರೆ ನಿಜವೇ ಎಂದು ಕೇಳಿದ. ಅಪ್ಪನ ಮಾತು ಕೇಳಿ ಆನಂದನಿಗೆ ತಮಾಷೆ ಅನ್ನಿಸಿತು. ನಮ್ಮ ರ‍್ಮ ಯಾವುದು ಎಂದು ಅವನು ಅಪ್ಪನನ್ನೇ ಕೇಳಿದ. ಸಣ್ರಾಮಪ್ಪ, ತಡವರಿಸುತ್ತ ನಮ್ಮದು ರ‍್ನಾಟಕದ ಆದಿರ‍್ಮ ಅಂದ. ನಿಂಗೆ ರ‍್ಮ ಅಂದರೇನು ಅಂಬದೇ ಗೊತ್ತಿಲ್ಲ. ಯಾವನೋ ತಲೆಮಾಸಿದೋನು ಏನೋ ಹೇಳಿದ ಅಂತ ನನ್ನ ಕೇಳಕೆ ಬಸ್‌ ಚರ‍್ಜ್‌ ಇಟ್ಕಂಡು ಇಲ್ಲೀತನಕ ಬಂದಿದ್ದೀಯಲ್ಲ ನಿನ್ನ ಮಂದ ಬುದ್ದಿಗೆ ಏನೇಳಲಿ? ಮುಂದಿನ ವಾರ ನಾನು ಊರಿಗೆ ರ‍್ತೀನಿ. ಅದ್ಯಾವನು ನನ್ನ ಕೇಳ್ತಾನೋ ನೋಡ್ತೀನಿ ಎಂದು ಹೇಳಿ ಅಪ್ಪನನ್ನು ಊರಿನ ಬಸ್ಸು ಹತ್ತಿಸಿದ.

ಆನಂದ ಹೇಳಿದಂತೆ ಊರಿಗೆ ಬಂದ. ಬಸ್ಸಿನಿಂದ ಇಳಿದ ಆನಂದ, ಅವನ ಹೆಂಡ್ತಿ, ಮಕ್ಕಳನ್ನು ಬಸ್‌ಸ್ಟಾಂಡಿನಲ್ಲಿದ್ದವರು ಅನ್ಯಗ್ರಹದ ಜೀವಿಗಳಂತೆ ನೋಡಿದರು. ಅನಂದ ಬಂದ ಸುದ್ದಿ ರ‍್ಧಗಂಟೆಯೊಳಗೆ ಇಡೀ ಊರಿಗೇ ಗೊತ್ತಾಯಿತು. ಅವನು ಕಾಲೋನಿಯ ತನ್ನ ಮನೆ ಬಳಿಗೆ ಬರುತ್ತಿದ್ದಂತೆ ಕೇರಿಯ ಜನರು ನೀನು ಯಾವುದೋ ರ‍್ಮಕ್ಕೆ ಸರ‍್ಕಂಡಿದ್ದಿಯಂತೆ ನಿಜವೇನಯ್ಯ ಎಂದು ಕೇಳಿದರು. ನಿಮಗೆ ಮಾಡಕೆ ಬೇರೆ ಕೆಲ್ಸ ಇಲ್ಲವೇನ್ರಯ್ಯ ಎಂದು ಆನಂದ ಕೇಳಿದನೇ ಹೊರತು ಮತ್ತೇನನ್ನೂ ಹೇಳಲಿಲ್ಲ!
ಮರು ದಿನ ಬೆಳಿಗ್ಗೆ ಏಳರ ಹೊತ್ತಿಗೆ ಹತ್ತನ್ನೆರಡು ಜನ ಸಣ್ರಾಮಪ್ಪನನ್ನು ಹುಡುಕಿಕೊಂಡು ಬಂದರು. ಬಂದವರೆಲ್ಲ ಪರಸ್ಥಳದವರು. ಇಲ್ಲಿ ಸಣ್ರಾಮನ ಮನೆ ಯಾವುದು? ಆನಂದ ಎಲ್ಲಿದ್ದಾನೆ? ಕೇರಿ ಜನರನ್ನ ಮತಾಂತರ ಮಾಡಿಸಕೆ ಅಂತಲೇ ಬಂದಿದ್ದಾನಂತೆ! ಅವನೆಲ್ಲಿದ್ದಾನೆ ತೋರಿಸು ಎಂದು ಆನಂದನನ್ನೇ ಕೇಳಿದರು. ಆನಂದನಿಗೆ ಸಿಟ್ಟುಬಂತು. ಅದನ್ನೆಲ್ಲ ಕೇಳಕೆ ನೀವ್ಯಾರಯ್ಯ ಎಂದ. ಮಾತಿಗೆ ಮಾತು ಬೆಳೆಯಿತು. ಬಂದವರು ಒಟ್ಟಾಗಿ ಆನಂದ ಮೇಲೆ ಬಿದ್ದರು. ಮಗನ ರಕ್ಷಣೆಗೆ ಸಣ್ರಾಮಪ್ಪ ಬಂದ. ಗುಂಪು ಇಬ್ಬರನ್ನೂ ಹಿಡಿದು ಎಳೆದಾಡಿ ತಳ್ಳಿ ನೆಲಕ್ಕೆ ಕೆಡವಿದರು. ಅವರ ರಕ್ಷಣೆಗೆ ಕೇರಿಯ ಜನ ಬಂದರು. ಐದಾರು ನಿಮಿಷ ಕಳೆಯುವಷ್ಟರಲ್ಲಿ ಕೇರಿಯ ಪ್ರಾಯದ ಹುಡುಗರು ದೊಣ್ಣೆಗಳನ್ನು ಹಿಡಿದು ಬಂದರು. ಜಗಳ ಬಿಡಿಸಿದರು. ಹೊರಗಿನಿಂದ ಬಂದವರನ್ನು ಅಟ್ಟಾಡಿಸಿಕೊಂಡು ಹೊಡೆದು ಓಡಿಸಿದರು. ಸ್ವಲ್ಪ ಹೊತ್ತಾದ ಮೇಲೆ ಕೃಷ್ಣಪ್ಪನ ಮಗ ಜಯರಾಮ ಬಂದ.‘ಲೇ ಆನಂದ ನಿಂದು ಅತಿಯಾಯ್ತು. ನೀನು ಮತಾಂತರ ಆಗಿದ್ದೀಯಂತೆ! ನೀನು ಏನಾದ್ರೂ ಮಾಡ್ಕಂಡ್‌ ಹಾಳಾಗೋಗು. ನಿಮ್ಮಪ್ಪ,ಅಮ್ಮ, ಕೇರಿಯವರನ್ನ ಮತಾಂತರ ಮಾಡಿಸಿದರೆ ನಾನು ಸುಮ್ಮನಿರಲ್ಲ...’ ಎನ್ನುತ್ತ ಜಗಳ ಶುರು ಮಾಡಿದ.
‘ನಾನು ಮತಾಂತರ ಆಗಿಲ್ಲ ಜಯಪ್ಪ. ಕಣಿವೆಮಾರಮ್ಮನ ಜಾತ್ರೆಗೆ ಅಂತ ಬಂದವನು ಹಂಗೇ ಊರಿಗೂ ಬಂದೆ. ಯಾಕೆ, ನಾನು ಊರಿಗೆ ಬರಬಾರದೇನು? ನಾವು ಯಾವ ರ‍್ಮದಲ್ಲಿ ಇರಬೇಕು ಅಂಬದನ್ನು ಹೇಳಕೆ ನಿನ್ಯಾವನಯ್ಯ...’ ಎಂದು ದಬಾಯಿಸಿದ. ಮತ್ತೆ ಆನಂದನ ಬೆಂಬಲಕ್ಕೆ ಬಂದ ಕೇರಿಯ ಹುಡುಗರು ‘ಏಯ್‌ ಜಯರಾಮಪ್ಪ, ನಾವ್‌ ಹೇಳದನ್ನ ಸರಿಯಾಗಿ ಕೇಳಿಸ್ಕ. ಆನಂದ ಯಾವ ರ‍್ಮಕ್ಕಾದರೂ ಸರ‍್ತಾನೆ. ಅದನ್ನು ಕೇಳಕೆ ನೀನ್ಯಾವ ದೊಣ್ಣಡ ನಾಯ್ಕ...’ ಎನ್ನುತ್ತ ಅವನ ಮೇಲೆಬಿದ್ದರು. ಅಷ್ಟರಲ್ಲಿ ಜಯರಾಮನ ಜತೆ ಬಂದವನೊಬ್ಬ ಬಾಟಲಿಯಲ್ಲಿ ತಂದಿದ್ದ ಸೀಮೆಣ್ಣೆಯನ್ನು ಸಣ್ರಾಮಪ್ಪನ ಮನೆಯ ಚಪ್ಪರದ ಮೇಲೆ ಎರಚಿ ಬೆಂಕಿ ಹಚ್ಚಿ ಓಡಿ ಹೋದ! ಬೆಂಕಿ ಅಕ್ಕಪಕ್ಕದ ಮನೆಗಳ ಚಪ್ಪರಗಳಿಗೂ ಹೊತ್ತಿ ಕೊಂಡಿತು.ಐದಾರು ನಿಮಿಷ ಕಳೆಯುವಷ್ಟರಲ್ಲಿ ಹುಲ್ಲಿನ ಚಾವಣಿಯ ಒಂದೆರಡು ಮನೆಗಳಿಗೂ ಹೊತ್ತಿಕೊಂಡಿತು. ಕೇರಿಯ ಜನರೆಲ್ಲ ಒಂದಾಗಿ ತಮ್ಮ ಮನೆಗಳಲ್ಲಿದ್ದ ನೀರು, ಬಾನಿಗಳಲ್ಲಿದ್ದ ಮುಸುರೆ, ಮಣ್ಣು, ಮರಳು ತೂರಿ ಬೆಂಕಿಯನ್ನು ತಹಬಂದಿಗೆ ತಂದರು. ಇಷ್ಟಾದ ಮೇಲೂ ನಾವು ಸುಮ್ಮನಿದ್ದರೆ ಕೃಷ್ಣಪ್ಪನೇ ಬಂದು ಗಲಾಟೆ ಮಾಡಬಹುದು ಅನ್ನಿಸಿ ಆನಂದ, ಅಬ್ಬಿನಳ್ಳಿ ಸ್ಟೇಷನ್ನಿಗೆ ಹೋಗಿ ಕಂಪ್ಲೇಂಟು ಬರೆದು ಕೊಟ್ಟು ಬಂದ. ಪೊಲೀಸರು ಬರೋ ಹೊತ್ತಿಗೆ ಮಧ್ಯಾಹ್ನ ಮೂರು ಗಂ,ಟೆ ದಾಟಿತ್ತು.
‘ಮೊದಲು ಯಾರೋ ಹತ್ತದಿನೈದು ಪರಸ್ಥಳದವರು ಬಂದರು. ನೀನು ಮತಾಂತರ ಆಗಿದ್ದೀಯಂತೆ ನಿಜವೇ ಅಂತ ಆನಂದನ್ನು ದಬಾಯಿಸಿದರು. ಅವರೇ ಜಗಳ ತೆಗೆದರು. ಮೊದಲು ಅವರೇ ಆನಂದನಿಗೆ ಹೊಡೆದರು. ಅವನನ್ನು ಬಿಡಿಸ್ಕಳಕೆ ಬಂದ ನಮಗೂ ಹೊಡದ್ರು. ನಮ್ಮ ತಾಯಾಣೆ ನಾವು ಯಾರ್‌ಗೂ ಹೊಡೀಲಿಲ್ಲ. ಅವರೆಲ್ಲ ಹೋದ ಮ್ಯಾಲೆ ನಮ್ಮೂರ ಕೃಷ್ಣಪ್ಪನ ಮಗ ಜಯರಾಮ ಬಂದು ಗಲಾಟೆ ಮಾಡ್ದ. ಅವನ ಜತೆಗೆ ಬಂದಿದ್ದ ನಮ್ಮೂರಿನ ಗಿಡ್ಡನುಮಂತ, ಸಣ್ರಾಮಪ್ಪನ ಮನೆ ಚಪ್ಪರಕ್ಕೆ ಬೆಂಕಿ ಹಚ್ಚಿ ಓಡಿಹೋದ ಎಂದು ಕೇರಿಯ ಜನ ತನಿಖೆಗೆ ಬಂದ ಪೊಲೀಸರಿಗೆ ಹೇಳಿದರು. ದೇವರಳ್ಳಿಯಲ್ಲಿ ನಿಷೇಧಾಜ್ಞೆ ಜಾರಿಯಾಯಿತು. ಮುಸ್ಸಂಜೆ ಹೊತ್ತಿಗೆ ಎಸ್‌ಪಿ ಸಾಹೇಬರು ಬಂದರು. ಕೇರಿಗೆ ಪೊಲೀಸ್‌ ಕಾವಲು ಹಾಕಿಸಿದರು.
ದೇವರಳ್ಳಿ ಕೇರಿಯ ಜನರನ್ನು ಮತಾಂತರ ಮಾಡಿಸಲು ದರ‍್ಗದಿಂದ ಮತ ಪ್ರಚಾರಕನೊಬ್ಬ ಬಂದಿದ್ದನಂತೆ! ಊರವರು ಮತಾಂತರಕ್ಕೆ ಒಪ್ಪಲಿಲ್ಲವಂತೆ. ಅದೇ ಗಲಭೆಗೆ ಮೂಲ ಎಂದು ಮರು ದಿನದ ಪತ್ರಿಕೆಗಳಲ್ಲಿ ವರದಿಯಾಯಿತು. ಟೀವಿಯವರು ದೇವರಳ್ಳಿಗೆ ಬರದೇ ಸುದ್ದಿಯನ್ನಷ್ಟೇ ಪ್ರಸಾರ ಮಾಡಿದರು. ಮಾರನೇ ದಿನ ಆನಂದ ಮತ್ತವನ ಹೆಂಡತಿ ಮಕ್ಕಳನ್ನು ಪೊಲೀಸರು ತಮ್ಮ ವ್ಯಾನಿನಲ್ಲಿ ಕರಕೊಂಡು ಹೋಗಿ ದರ‍್ಗದ ಬಸ್ಸು ಹತ್ತಿಸಿದರು. ದೇವರಳ್ಳಿಯಲ್ಲಿ ಉದ್ವಿಗ್ನ ಪರಿಸ್ಥಿತಿ ಇದೆ ಅನ್ನೋ ಕಾರಣ ಕೊಟ್ಟು ತಾಲ್ಲೂಕು ಆಡಳಿತ ಹರಾಜನ್ನು ಮುಂದೂಡಿತು. ಕೃಷ್ಣಪ್ಪ ನಿಟ್ಟುಸಿರು ಬಿಟ್ಟ.

ತಿಂಗಳು ಕಳೆಯುವಷ್ಟರಲ್ಲಿ ಆನಂದ ಮತಾಂತರ ಆದನೆಂದು ಯಾರೋ ಹೇಳಿದರು. ಊರವರು ಅದನ್ನು ನಂಬಿದರು. ದೇವರಳ್ಳಿಯ ಇನ್ನೂ ಎಂಟ್ಹತ್ತು ಜನ ಮತಾಂತರ ಆಗ್ತಾರೆ ಅಂತಲೂ ಸುದ್ದಿ ಹಬ್ಬಿಸಿದರು. ಈ ಪ್ರಕರಣದ ಬಗ್ಗೆ ರಾಜ್ಯ ಮಟ್ಟದ ಪತ್ರಿಕೆಗಳಲ್ಲಿ ಐದಾರು ಸಲ ಸುದ್ದಿ ಪ್ರಕಟವಾಯಿತು. ದೇವರಳ್ಳಿಯ ಮತಾಂತರ ಪ್ರಕರಣದ ಬಗ್ಗೆ ಸಮಗ್ರ ತನಿಖೆ ಮಾಡಿ ವರದಿ ಕೊಡುವಂತೆ ರ‍್ಕಾರ, ತಹಸೀಲ್ದಾರ್‌ಗೆ ಆದೇಶ ನೀಡಿತು. ಈ ನಡುವೆ ಸೂಗೂರು ಮಠದ ಹಿರಿಯ ಸ್ವಾಮಿಗಳು ರ‍್ಕಾರದ ಪರವಾಗಿ ದೇವ್ರಳ್ಳಿಗೆ ಬಂದರು. ಊರ ಮುಖಂಡರನ್ನು ಒಂದು ಕಡೆ ಸೇರಿಸಿ ಸಭೆ ಮಾಡಿದರು. ದೇವ್ರಳ್ಳಿ ಕೇರಿಯಲ್ಲಿ ಮತಾಂತರದ ಹೆಸರಿನಲ್ಲಿ ನಡೆದ ಗಲಭೆ ಹಿಂದೆ ರಾಜಕೀಯ ಪಕ್ಷವೊಂದರ ಕೈವಾಡ ಇದೆ ಅಂತ ಮುಖ್ಯಮಂತ್ರಿಯವರೇ ಹೇಳಿದ್ದಾರೆ. ನಿಮ್ಮ ದುಡುಕಿನ ಪರಿಣಾಮ ಇಷ್ಟು ಕೆಟ್ಟದಾಗಿರುತ್ತೆ ಅಂತ ನಾವು ಯೋಚಿಸಿರಲಿಲ್ಲ. ದೇಶದ ಪ್ರತಿಯೊಬ್ಬರಿಗೂ ತಮಗೆ ಬೇಕಾದ ರ‍್ಮಕ್ಕೆ ಸೇರಿಕೊಳ್ಳುವ ಅವಕಾಶವನ್ನು ನಮ್ಮ ಸಂವಿಧಾನ ನೀಡಿದೆ. ಆನಂದನನ್ನು ಮತ್ತೆ ನಮ್ಮ ರ‍್ಮಕ್ಕೆ ಕರೆತರಲು ಸಾಧ್ಯವಿತ್ತು. ನಾವೇ ಆ ಕೆಲಸ ಮಾಡ್ತಿದ್ವಿ. ನಿಮ್ಮ ದುಡುಕಿನಿಂದ ಎಲ್ಲವೂ ಹಾಳಾಯ್ತು. ನಮ್ಮ ರ‍್ಮಕ್ಕೆ ಆಪತ್ತು ಬಂತು. ಮುಖ್ಯಮಂತ್ರಿಗಳು ಶಾನೆ ಬೇಸರ ಮಾಡಿಕೊಂಡಿದ್ದಾರೆ. ನೀವೇ ಹೋಗಿ ಊರವರಿಗೆ ಬುದ್ದಿ ಹೇಳಿ ಬನ್ನಿ ಅಂತ ನಮ್ಮನ್ನು ಕಳಿಸಿದರು. ಅದಕ್ಕೆ ನಾವು ಬರಬೇಕಾಯಿತು. ನೀವು ಪರ ರ‍್ಮ ಸಹಿಷ್ಣತೆಯನ್ನು ಬೆಳೆಸಿಕೊಳ್ಳಬೇಕು ಎಂದು ಉಪದೇಶ ಮಾಡಿದರು.
*
ಆರು ತಿಂಗಳು ಕಳೆಯುವಷ್ಟರಲ್ಲಿ ದೇವರಳ್ಳಿ ತನ್ನ ಎಂದಿನ ಲಯಕ್ಕೆ ಹಿಂದಿರುಗಿತು. ಹರಾಜಿಗೆ ದಿನ ನಿಗದಿಯಾಯಿತು. ಪೊಲೀಸರ ಸಮಕ್ಷಮದಲ್ಲಿ ಬಹಿರಂಗ ಹರಾಜು ನಡೆಸಲು ವ್ಯವಸ್ಥೆ ಮಾಡಿಕೊಳ್ಳುವಂತೆ ತಾಲ್ಲೂಕು ಆಡಳಿತ, ಗ್ರಾಮ ಪಂಚಾಯ್ತಿಗೆ ಸೂಚನೆ ನೀಡಿತು! ಊರೊಟ್ಟಿನ ಜಾಗ ಪರಸ್ಥಳದವರ ಪಾಲಾಗಲು ಬಿಡಬಾರದು ಎಂದು ಕೃಷ್ಣಪ್ಪ ತರ‍್ಮಾನಿಸಿದ. ನಾವೇ ಏಳೆಂಟು ಜನ ಸೇರಿ ಹರಾಜು ಕೂಗಿ ಜಾಗವನ್ನು ನಮ್ಮಲ್ಲೇ ಉಳಿಸಿಕೊಳ್ಳಬೇಕು ಎಂದು ನರ‍್ಧರಿಸಿ ತನ್ನ ಬೆಂಬಲಿಗರನ್ನು ಒಪ್ಪಿಸಿದ. ಹರಾಜಿಗೆ ಯಾರೇ ಬಂದರೂ ಎಪ್ಪತ್ತೆಂಬತ್ತು ಲಕ್ಷಕ್ಕಿಂತ ಹೆಚ್ಚು ಕೂಗಲ್ಲ. ಅದಕ್ಕಿಂತ ಹೆಚ್ಚಾದರೂ ಪರವಾಗಿಲ್ಲ. ನಾನೇ ಹರಾಜು ಕೂಗಿ ಜಾಗ ಉಳಿಸಿಕೊಳ್ತೀನಿ ಅಂದ. ಬೆಂಬಲಿಗರು ಒಪ್ಪಿದರು. ಕೃಷ್ಣಪ್ಪನೇ ಹರಾಜು ಕೂಗುವುದೆಂದು ತರ‍್ಮಾನವಾಯಿತು.
ಹರಾಜಿಗೆ ನೆರೆಯ ಮಡಕಶಿರಾ, ಕಲ್ಯಾಣದರ‍್ಗಗಳಿಂದ ಏಳೆಂಟು ಶ್ರೀಮಂತರು ದೊಡ್ಡ ದೊಡ್ಡ ಕಾರುಗಳಲ್ಲಿ ಬಂದರು. ಒಬ್ಬೊಬ್ಬನ ಬೆಂಗಾವಲಿಗೆ ಐದಾರು ಜನ ಬಂದಿದ್ದರು! ಹರಾಜಿನಲ್ಲಿ ದೇವ್ರಳ್ಳಿಯವರೇ ಕಡಿಮೆ ಇದ್ದರು. ಕೃಷ್ಣಪ್ಪನ ಜತೆ ಅವನ ಬೆಂಬಲಿಗರು ಸೇರಿ ಏಳೆಂಟು ಜನರಿದ್ದರು. ಚಳ್ಳಕೆರೆ,ದರ‍್ಗ, ದಾವಣಗೆರೆಗಳಿಂದಲೂ ದುಡ್ಡಿನ ಕುಳಗಳು ಬಂದಿದ್ದವು. ಹರಾಜು ನೋಡಬೇಕು ಅಂತಲೇ ಸುತ್ತ ಮುತ್ತಲಿನ ಏಳೆಂಟು ಊರುಗಳ ನೂರಾರು ಜನ ಬಂದಿದ್ದರು. ಹನ್ನೆರಡು ಗಂಟೆ ಹೊತ್ತಿಗೆ ಹರಾಜು ಶುರುವಾಯಿತು. ಮೊದಲು ಕೂಗಿದವನು ಏಕಾಏಕಿ ಮೂವತ್ತು ಲಕ್ಷ ಅಂದುಬಿಟ್ಟ! ಹತ್ತೇ ನಿಮಿಷಗಳಲ್ಲಿ ಎಪ್ಪತ್ತೈದು ಲಕ್ಷಕ್ಕೆ ಏರಿತು! ಕೃಷ್ಣಪ್ಪ ತೊಂಬತ್ತು ಲಕ್ಷದವರೆಗೆ ಕೂಗಿದ. ಮತ್ತೆ ಕೂಗುವ ಪ್ರಯತ್ನ ಮಾಡಲಿಲ್ಲ. ಹರಾಜಿಗೆ ಬಂದಿರುವ ದುಡ್ಡಿನ ಕುಳಗಳ ಮುಂದೆ ನಾನು ಏನೇನೂ ಅಲ್ಲ ಎಂದು ಅವನಿಗೆ ಅನ್ನಿಸಿತು. ಒಣಗುತ್ತಿದ್ದ ತುಟಿಗಳನ್ನು ಆಗಾಗ ನಾಲಿಗೆಯಿಂದ ಒದ್ದೆ ಮಾಡಿಕೊಳ್ಳುತ್ತ ಹರಾಜು ಕೂಗುತ್ತಿದ್ದವರನ್ನು ನೋಡುತ್ತ ಸ್ವಲ್ಪ ಹೊತ್ತು ಕೂತಿದ್ದ. ರ‍್ಧ ಗಂಟೆ ಕಳೆಯುವಷ್ಟರಲ್ಲಿ ಹಿಂದೂಪುರದ ಎ.ಎಂ. ರಾಜ್‌ ಕಂಪೆನಿಯ ಮ್ಯಾನೇಜರು ಒಂದೂವರೆ ಕೋಟಿಗೆ ಕೂಗಿದ. ದರ‍್ಗದ ವೇಣುಗೋಪಾಲ ನಾಯ್ಡು ಕಡೆಯವನು ಎರಡು ಕೋಟಿ ಅಂದ. ಊರ ಜಾಗ ಪರಸ್ಥಳದವರ ಪಾಲಾಗುವುದನ್ನು ನೋಡಲಾರದೆ ಕೃಷ್ಣಪ್ಪ ಎದ್ದು ಮನೆಗೆ ಹೋದ. ಮೂರು ಗಂಟೆ ಹೊತ್ತಿಗೆ ಹರಾಜು ಮುಗಿಯಿತು. ಎರಡು ಕೋಟಿ ಅರವತ್ತು ಲಕ್ಷಕ್ಕೆ ಪಂಚಾಯ್ತಿ ಒಂದೆಕರೆ ಆಯಕಟ್ಟಿನ ಜಾಗ ಹಿಂದೂಪುರದ ಕಂಪನಿ ಪಾಲಾಯಿತು.

*
ಮುಸ್ಸಂಜೆ ಹೊತ್ತಿಗೆ ಬೆಂಬಲಿಗರೆಲ್ಲ ಕೃಷ್ಣಪ್ಪನ ಮನೆಗೆ ಬಂದರು. ಕೃಷ್ಣಪ್ಪನಿಗೆ ಹೇಗೆ ಸಮಾಧಾನ ಹೇಳಬೇಕು ಅನ್ನೋದು ಗೊತ್ತಾಗದೆ ಸ್ವಲ್ಪ ಹೊತ್ತು ಸುಮ್ಮನೆ ಕುಳಿತಿದ್ದರು. ಆಮೇಲೆ ಒಬ್ಬ ತಡವರಿಸುತ್ತ ಅಣ್ಣಾ, ನೀವು ಸ್ವಲ್ಪ ತಾಳ್ಮೆ ವಹಿಸಿದ್ದರೆ ಪಂಚಾಯ್ತಿ ಜಾಗ ಹರಾಜಿಗೆ ರ‍್ತಿರಲಿಲ್ಲ. ಬಾಡಿಗೆ ಕರಾರಿನ ಹೆಸರಲ್ಲಿ ನೆಲ ಸುಲೇಮಾನನ ಸುರ‍್ದಿಯಲ್ಲೇ ರ‍್ತಿತ್ತು. ಅದನ್ನು ಅವನಿಂದ ಯಾವಾಗ ಬೇಕಾದರೂ ಕಿತ್ಕಬೌದಿತ್ತು ಅಂದ. ಇನ್ನೊಬ್ಬ ಊರ ಜಾಗವನ್ನು ತಗಂಡ ಹಿಂದೂಪುರದ ಕಂಪನಿ ಯಜಮಾನನ ಹೆಸರು ಆಲ್ರ‍್ಟ್‌ ಮನೋರಾಜ್‌ ಅಂತೆ! ಆ ಜಾಗದಲ್ಲಿ ಅವನು ರ‍್ಚು ಕಟ್ಟಿಸೋಕೆ ತರ‍್ಮಾನ ಮಾಡಿದ್ದಾನೆ ಅಂತ ಕೇರಿಯ ಹುಡುಗರು ಹೇಳ್ತಿದ್ದಾರೆ ಎಂದ. ಎಲ್ಲರೂ ಕೃಷ್ಣಪ್ಪನ ಮುಖ ನೋಡಿದರು.
ಮನೆಯ ಅಂಗಳದಲ್ಲಿ ನಿಂತು ಯಾರೊಂದಿಗೋ ಪೋನ್‌ನಲ್ಲಿ ಮಾತಾಡುತ್ತಿದ್ದ ಜಯರಾಮ ಮಾತು ಮುಗಿಸಿ ಮನೆಯೊಳಕ್ಕೆ ಬಂದು ನಮ್ಮ ಸೊಸೈಟಿ ಜಾಗಾನ ಹಿಂದೂಪುರದ ಕಂಪನಿ ಹೆಸರಲ್ಲಿ ತಗಂಡವರು ನಮ್ಮ ಜಿಲ್ಲಾ ಮಂತ್ರಿಗಳಂತೆ’! ಎನ್ನುತ್ತ ಅಪ್ಪನ ಮುಖ ನೋಡಿದ. ಜಯರಾಮ ಹೆಳಿದ ಸುದ್ದಿ ಕೇಳಿ ಎಲ್ಲರೂ ಬೆಚ್ಚಿಬಿದ್ದರು. ಸ್ವಲ್ಪ ಹೊತ್ತು ಅಲ್ಲಿ ಗಾಢ ಮೌನದ ವಾತಾವರಣ ನರ‍್ಮಾಣವಾಯಿತು.
ಆ ಮೇಲೆ ಅಲ್ಲಿದ್ದ ಒಬ್ಬ ಮೌನ ಮುರಿಯುತ್ತ, ಸುಲೇಮಾನ್‌ ಕಡೆಯಿಂದ ಪಂಚಾಯ್ತಿಯವರ ವಿರುದ್ಧ ಸಿವಿಲ್‌ ಕರ‍್ಟಿನಲ್ಲಿ ಕೇಸು ಹಾಕಿಸೋಕೆ ಸಾಧ್ಯವಿದೆಯಲ್ಲ ಕೃಷ್ಣಪ್ಪ ಅಂದ. ಅವನ ಮಾತು ಕೇಳಿದ್ದೇ ತಡ ಬಿಗಿದುಕೊಂಡಿದ್ದ ಕೃಷ್ಣಪ್ಪ ಮುಖದ ನರಗಳು ಸಡಿಲವಾದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT