‘ಬಟ್ಟೆ ಒಗೆದಾಕಿ ಬರ್ತೀವಿʼ.

ಲಕ್ಷ್ಮಿ ಕುಕ್ಕರಗಾಲಲ್ಲಿ ಕೂತು ಕಾಟ್ ಕೆಳಗಿರುವ ಬ್ಯಾಗಿನಿಂದ ಸೀರೆ ಲಂಗ ಶಾಲು ಮುದುರಿಕೊಂಡಳು. ‘ಡಾಕ್ಟ್ರು ಬಂದ್ರೆ ಬಲ್ಗಾಲು ಊದ್ಕೊಂಡಿರೋದು ತೋರ್ಸುʼ ಅಂದ ಶಿವು. ಅದಕ್ಕೆ ಮಂಜಮ್ಮ ‘ಎನ್ನ ಕಾಲೇ ಕಂಬ…’ ಅನ್ನುತ್ತಿದ್ದಂತೆ ‘ಇಲ್ಲೂ ನಿನ್ ವಚನಗಾಯ್ನಾ ನಿಲ್ಲಂಗಿಲ್ಲೇನೊ… ಮರೀಬ್ಯಾಡ ಡಾಕ್ಟ್ರಿಗೇಳು’ ಅಂತ ಲಕ್ಷ್ಮಿಹಿಂದೆ ಹೊರಟ. ಮಂಜಮ್ಮ ‘ಈ ಬಡ್ವಿ ಮೇಲೆ ಹಣೆಗಣ್ಣು ಬಿಡಬೇಡಪ್ಪ ಶಿವಪ್ಪಾ’ ಅಂದಾಗ ಶಿವು ಮುಖ ಒಂಥರ ಮಾಡಿದರೆ ಲಕ್ಷ್ಮಿ ಕಿಸಕ್ಕೆಂದಳು.

ಅವರೋದಮೇಲೆ ಉದ್ದೂಕೆ ಕಾಲುಚಾಚಿದ್ದ ಮಂಜಮ್ಮ ದಿಂಬತ್ತಿರವಿದ್ದ ‘ರಾಮಾಯಣ’ ತೆಗೆದುಕೊಂಡು ಕೂತಲ್ಲೇ ಬಾಯಿಕಚ್ಚಿ ವಲ್ಲೂಕೆ ಕಾಲು ಮಂಚದಿಂದ ಕೆಳಗಿಳಿಬಿಟ್ಟಳು. ‘ಹಾ..ʼ ಎಂದು ಉಸಿರೆಳೆದುಕೊಳ್ಳುತ್ತ ಪುಸ್ತಕ ತೆರೆದು ಕಣ್ಣಾಡಿಸುತ್ತ ಮುಖ ಹಿಗ್ಗಿಸಿದಳು. ನಂತರ ತಲೆಯೆತ್ತಿ ನೋವುತಿನ್ನುತ್ತ ತಂತಮ್ಮ ಕಾಟಿನಮೇಲೆ ಮಲಗಿದ್ದ ಕೂತಿದ್ದ ರತ್ನಕ್ಕ ಸರೋಜ ತಿಪ್ಪಕ್ಕರತ್ತ ತಿರುಗಿ ‘ಎಷ್ಟು ಚೆನ್ನಾಗಿದೆ ಈ ಪಾದುಕಾ ಪಟ್ಟಾಭಿಷೇಕʼ ಅಂದಳು. ಅವರು ಮಂಡಿ ನೀವುತ್ತ ಸೊಂಟ ಹಿಡಿದು ‘ಹಾ ಹ್ಞುಂʼ ಅನ್ನುತ್ತ ಇವಳ ಮಂಚದ ಹತ್ತಿರ ಬಂದರು. ತನ್ನ ಓದುವಿಕೆಗೆ ಹೀಗೆ ಮೂರ್ನಾಕು ಹೆಂಗಸರು ನೆರೆದಿದ್ದೆ ಮಂಡಿನೋವೆಲ್ಲ ಮರೆತು ತನ್ನ ಮಂಚದಲ್ಲೆ ಅವರಿಗೆ ಜಾಗಮಾಡಿಕೊಟ್ಟು ಭರತ ನಂದಿಗ್ರಾಮದಲ್ಲಿ ಶ್ರೀರಾಮನ ಪಾದುಕೆಗಳನ್ನು ಸಿಂಹಾಸನದ ಮೇಲಿಟ್ಟು ರಾಜ್ಯಭಾರ ಮಾಡುತ್ತಿದ್ದನ್ನು ಹೇಳಲಾರಂಭಿಸಿದಳು ಮಂಜಮ್ಮ. ಹುರುಪಿಗೆದ್ದು ಧ್ವನಿ ಏರಿಳಿತದೊಂದಿಗೆ ಮೊದಲಪ್ಯಾರ ಮುಗಿಸುತ್ತಿದ್ದಂತೆ ಏನೋ ಟರ್ರ್ ಅಂತ ಬುಡದ ಕೆಳಗೆ ಸದ್ದು! ಏನಿದು ಸದ್ದು ಅನ್ನುವಷ್ಟರಲ್ಲೆ ನೆಲದಮೇಲೆ ಎಲ್ಲರು ಚೆಲ್ಲಾಪಿಲ್ಲಿ! ರೊಚ್ಚಿಗೆದ್ದು ಓದುತ್ತಿದ್ದ ಮಂಜಮ್ಮಗೆ, ಮೈಮರೆತು ಕೇಳುತ್ತಿದ್ದವರಿಗೆ ಏನಾಯಿತು ಎಂದು ತಿಳಿಯಲೇ ಇಲ್ಲ. ತೂಕವಾಗಿದ್ದ ಐದು ಹೆಂಗಸರು ಒಮ್ಮೆಗೆ ತನ್ನಮೇಲೆ ಬಂದು ಅಡಕಾಯಿಸಿದ್ದಕ್ಕೆ ಪಾಪ ಆ ಬಡಪಾಯಿ ಮಂಚ ವಿಲವಿಲವೆಂದು ಅದರಲ್ಲೂ ಕೆಲಹೊತ್ತು ಉಸಿರಿಡಿದು ಹೋರಾಡಿ ಉಸ್ಸಪ್ಪ ಇನ್ನು ತನ್ನಿಂದಾಗದು ಎಂದು ಕೈಚೆಲ್ಲಿತು.

ಗದ್ದಲ ಕೇಳೋಡಿಬಂದ ನರ್ಸಿಗೆ ಕೈಕಾಲಾಡಲಿಲ್ಲ. ಮಂಚ ದಬೆಹಾಕಿಕೊಂಡು ಬಿದ್ದ ದಢೂತಿ ಹೆಂಗಸರನ್ನು ಎತ್ತುವ ಬಗೆ ಕಾಣದೆ ವಾಚ್ಮ್ಯಾನ್ ತಿಪ್ಪೇಶಿಯನ್ನು ಕೂಗಿದಳು. ಆ ಕೂಗಿಗೆ ನಾಕೈದು ಹುಡುಗರು ತಿಪ್ಪೇಶಿ ಹಿಂದೆಯೆ ಓಡಿಬಂದು ಒಬ್ಬೊಬ್ಬರನ್ನು ಎತ್ತಿ ಅವರವರ ಮಂಚಕ್ಕೊಯ್ದು ಕೂರಿಸಿದರು.

ತಿಪ್ಪಕ್ಕನ ಮಂಚದಮೇಲೆ ಕೂತಿದ್ದ ಮಂಜಮ್ಮ ಈಗೆಲ್ರು ನನ್ನಮೇಲೆ ಮುಗಿಬೀಳುತ್ತಾರೆ ಅಂದುಕೊಂಡು ಒಳಗೇ ಕಂಪಿಸುತ್ತಿದ್ದಳು. ತಿಪ್ಪಕ್ಕನಂತು ತಿನ್ನುವಂತೆ ನೋಡುತ್ತಿದ್ದಳು. ‘ನೀವೆಲ್ಲ ನಿಮ್ನಿಮ್ಮ ಕಾಟು ಬಿಟ್ಟು ಮಂಜಮ್ಮನ ಕಾಟಿಗೇಕೆ ಬಂದ್ರಿ? ಡಾಕ್ಟ್ರು ಬಂದ್ರೆ ನಮಗೀಗ ಉಗೀತಾರೆ, ಸ್ವಲ್ಪನೂ ಕಾಮನ್ಸೆನ್ಸಿಲ್ಲ ನಿಮಗೆ’ ಎಂದು ಉರಿಉರಿ ಹಾಯುತ್ತಿದ್ದಳು ನರ್ಸು. ಮಂಜಮ್ಮ ‘ಅವರ್ದೇನು ತಪ್ಪಿಲ್ಲ ಮೇಡಮ್, ನಾನೇ ರಾಮಾಯಣ ಓದ್ತೀನಿ ಬರ್ರೀ ಅಂದೆ’ ಅಂದಳು. ‘ನಿಂದೊಳ್ಳೆ ರಾಮಾಯಣ…ʼ ಅನ್ನುತ್ತಿದ್ದಂತೆ ಶ್ರೀನಿವಾಸ್ಡಾಕ್ಟ್ರು ಬಂದರು. ಎಲ್ಲರು ಗಪ್ಚುಪ್! ಆಸ್ಪತ್ರೆ ಸಿಬ್ಬಂದಿಯೆಲ್ಲ ಚೆಲ್ಲಾಪಿಲ್ಲಿಯಾಗಿದ್ದ ಮಾತ್ರೆ ಹಾಸಿಗೆ ದಿಂಬುಗಳನ್ನೆಲ್ಲ ಒಪ್ಪಮಾಡುವುದರಲ್ಲಿ ಇನ್ನಿಲ್ಲದಂತೆ ನಿರತರಾದರು. ನರ್ಸು ಏನೇಳೋದು ಎಂದು ‘ಪ್ಯ ಪʼ ಅನ್ನುತ್ತಿರುವಾಗ ಕೂತಲ್ಲಿಂದಲೇ ಡಾಕ್ಟರ್ಗೆ ಕೈಮುಗಿದು ‘ದಯೆಯೆ ಧರ್ಮದ ಮೂಲವಯ್ಯʼ ಎಂಬ ವಚನವೇಳಿ, ‘ನನ್ಮೇಲೆ ದಯೆಯಿರಲಿ ಡಾಕ್ಟ್ರೆʼ ಅಂತ ನಡೆದಿದ್ದನ್ನೆಲ್ಲ ಹೇಳಿದಳು ಮಂಜಮ್ಮ. ಅವಳ ಮಾತಿಗೆ ಸಣ್ಣಗೆ ನಕ್ಕ ಡಾಕ್ಟರು ‘ಅಲ್ಲ ಮಂಜಮ್ಮ ಮಂಚ ಮುರಿದೋದ್ರೆ ಹೋಗಲಿಬಿಡಿ, ಅದಲ್ಲ, ನೀವೆಲ್ಲ ಪೇಶೆಂಟು… ಏನಾದ್ರು ಆದ್ರೆ..?ʼ ಎಂದರು. ಪಕ್ಕದ ವಾರ್ಡಲ್ಲಿದ್ದ ಬೇರೊಂದು ಮಂಚ ತಂದುಹಾಕಲು ತಿಪ್ಪೇಶಿಗೇಳಿ ಹೊರಟರು.

ಅಷ್ಟಾಗಿ ನಗದ ಡಾಕ್ಟರನ್ನೇ ನಗಿಸಿದ ಮಂಜಮ್ಮನನ್ನು ನರ್ಸು ಮಿಕಮಿಕ ನೋಡುತ್ತ ಅವಳ ಕೈಹಿಡಿದುಕೊಂಡು ಹೊಸಮಂಚದ ಮೇಲೆ ಕೂರಿಸುತ್ತಿದ್ದಂತೆ ಮಂಜಮ್ಮ ‘ಪುಸ್ತಕ ಎಲ್ಲೊ ಬಿತ್ತು ಸ್ವಲ್ಪ ಹುಡ್ಕಿಕೊಡಿ ಮೇಡಮ್ʼ ಅಂದದ್ದಕ್ಕೆ ಹುಬ್ಬೇರಿಸಿ ಕದದ ಮೂಲೆಯಲ್ಲಿದ್ದ ಪುಸ್ತಕ ಹುಡುಕಿ, ತೆರೆದು ಕಣ್ಣಾಡಿಸುತ್ತ ತಂದು ಹಾಸಿಗೆ ಮೇಲಿಟ್ಟಳು.

ವಿಷಯ ತಿಳಿದು ಲಕ್ಷ್ಮಿ ಶಿವು ಓಡಿಬಂದರು.

‘ಸಮಾಧಾನ, ಸಮಾಧಾನ, ಸಮಾಧಾನವೇ ಪ್ರಧಾನ…ʼ ಎಂಬ ಮಂಜಮ್ಮನ ಮಾತಿನಿಂದ ಶಿವುಗೆ ಮತ್ತಷ್ಟು ರೇಗಿಹೋಯಿತು. ‘ಎಲ್ಲಾದಕ್ಕೂ ಒಂದೊಂದು ವಚನ ಗಾದೆ ವೇದಾಂತ…ʼ. ವಾರ್ಡೆಲ್ಲ ಇತ್ತ ತಿರುಗಿತು. ದನಿತಗ್ಗಿತು. ಗದರಬಾರದಿತ್ತು ಅನಿಸಿ ‘ನಿನಗೇನಾರ ಪೆಟ್ಟುಗಿಟ್ಟು ಆಯ್ತಾ… ನೀನೋದೋದು ಒತ್ತೊಟ್ಟಿಗಿರ್ಲಿ, ಪಾಪ ಅವರನ್ನು ಕರ್ಕಂದು ಓದೋಕುಂತೀಯಲ್ಲ… ಅವರಿಗೇನಾರಾದ್ರೆ ಏನ್ಮಾಡಬೇಕಿತ್ತುʼ ಅಂದು ತಲೆ ಕೈಕಾಲಿಗೇನಾದರು ಹೊಡೆತ ಬಿದ್ದಿದಿಯೋ ಅಂತೆಲ್ಲ ಮಂಜಮ್ಮನನ್ನು ತಡಕಾಡಿದ…

ಮಂಜಮ್ಮನ ಮಂಡಿ ಮಸಾಜಿಗೆಂದು ಬಟ್ಟಲಿಗೆ ಲಕ್ಷ್ಮಿ ನೋವಿನೆಣ್ಣೆ ಬಗ್ಗಿಸುವಾಗಲೇ ಮೊಬೈಲ್ ರಿಂಗಾಯಿತು. ಶಿವು ‘ಮೇಷ್ಟ್ರುದ್ದು’ ಎಂದು ಮಂಜಮ್ಮಗೆ ಕೊಟ್ಟ.

‘ಆರಾಮಾಗಿದ್ದೇನೆ ಸಾರ್, ಅಮ್ಮು ಹೇಗಿದ್ದಾಳೆ ಸಾರ್? ರಾತ್ರಿ ಏನಾರ ಕಾಟ ಕೊಟ್ಳಾ ಸಾರ್, ಪಾಪ ನಮ್ಮಿಂದ ನಿಮ್ಗೆ ತೊಂದ್ರೆʼ ಅಂತ ಮಂಜಮ್ಮ ಹೆಡ್ಮಾಸ್ಟರ್ ನಾಗರಾಜಪ್ಪಗೆ ಫೋನಲ್ಲಿ ಒಂದೇ ಉಸಿರಲ್ಲಿ ಕೇಳುತ್ತಿರುವಾಗ ಲಕ್ಷ್ಮಿ ಕೈಯಲ್ಲಿ ಬಟ್ಟಲು ಹಿಡಿದವಳು ಅಂತೆಯೆ ನಿಂತು ತನ್ನ ಸಮಸ್ತವನ್ನು ಕಿವಿಯಾಗಿಸಿದಳು. ‘ಧನ್ವಂತರಿ ಆಯುರ್ವೇದ ಚಿಕಿತ್ಸಾಲಯ ಸಾರ್… ಶಿಮೊಗ್ಗ ಸಿಟಿಯೊಳಗಲ್ಲ, ಇಂಜಿನಿಯರ್ ಕಾಲೇಜು ಸ್ಟಾಪಿಗಿಳಿರಿ… ಬಂದು ಫೋನ್ಮಾಡ್ರಿ ಸಾರ್ʼ ಅಂತ ಅವರಿಗೆ ಅಡ್ರೆಸ್ಸೇಳಿ ‘ಅಮ್ಮುನ ಕರ್ಕಂದು ಬರ್ತಾ ಇಲ್ಲಂತೆ, ವಾಪಸ್ಸು ಹೋಗವಾಗ ಹಟಮಾಡ್ತಾಳಂತʼ ಅಂದು ಮಂಜಮ್ಮ ಮಗನ ಕೈಗೆ ಮೊಬೈಲಿಟ್ಟಳು.

‘ಕುಂದಿದ ಲಕ್ಷ್ಮಿ ಮುಖವನ್ನೇ ನೋಡತ್ತ ಮಂಡಿ ನೀವಿಸಿಕೊಳ್ಳುತ್ತಿದ್ದ ಮಂಜಮ್ಮ ‘ಪಾಪ…ಅಮ್ಮುನ ಕರ್ಕಂದು ಬರಕ್ಕೆ ಮೇಷ್ಟ್ರಿಗೆ ಹೇಳಬೇಕಿತ್ತು…ʼ ಅಂದುದ್ದಕ್ಕೆ ತಕ್ಷಣ ಲಕ್ಷ್ಮಿ ‘ಹೇ..ಬ್ಯಾಡ್ರಿ ಆಕಿಬಂದ್ರ ರಗಳೇರಿ… ಇನ್ನೆನ್ರಿ ನಾಡಿದ್ದು ಡಿಸ್ಚಾರ್ಜಲ್ರಿʼ ಅಂತ ಮುಖ ಗೆಲುವಾಗಿಸಿಕೊಂಡಳು.

‘ಪಾಪ! ಮೂರುವರುಷದ ಕೂಸು.... ಮೇಷ್ಟ್ರುಮನೇಲಿ ಒಂದೇ ಹೆಂಗೈತೊ ಏನೊ…ನನ್ಕಂದಾ…. ದೀಪಮ್ಮ ಭಾರಿ ಒಳ್ಳೇರು, ನಮ್ಮ ಅಮ್ಮೂ ಅಂದ್ರೆ ಪ್ರಾಣʼ ಅಂತ ಮಂಜಮ್ಮ ಎದುರಿಗಿದ್ದ ತಿಪ್ಪಕ್ಕನಿಗೆ ದಿನಾ ಹೇಳುತ್ತಿದ್ದಂತೆ ಇವತ್ತೂ ಹೇಳಿದಳು. ಹೊರಡುವಾಗ ‘ಅಜ್ಜಿಗೆ ಪಾಡಿಲ್ಲಾ, ಚೂಜಿ ಚುಚಿಸ್ಕಂದು ಚಂಜೀಕೆ ಬರ್ತಿವೀ, ದೀಪಾ ಆಂಟಿ ಜೋಡಿಯಿರು, ನಿಂಗ ಶಿಮೊಗ್ಗದಿಂದ ಬಣ್ಣಬಣ್ಣದ ಬಾಲು ತರ್ತಿನೀʼ ಎಂದು ಅಮ್ಮುವನ್ನು ಲಕ್ಷ್ಮಿ ಸಮಾಧಾನ ಮಾಡಿಬಂದು ಇವತ್ತಿಗೆ ನಾಕುದಿನ. ನಾಡಿದ್ದು ಮನೆಗೋದುಕುಟ್ಲೆ ಬಾಲ್ ತಂದೀ? ಅಂತಾಳ. ಬ್ಯಾಗ್ನ್ಯಾಗ ಬಾಲಿರದಿದ್ರೆ ಬೀದ್ಯಾಗೆ ಹೊಳ್ಯಾಡಿ ರಂಪ ಗ್ಯಾರಂಟಿ. ದವಾಖಾನೆ ಸನಿಹ ಯಾವ ಅಂಗಡಿನೂ ಇಲ್ಲ. ಸಿಟಿ ಇಲ್ಲಿಂದ ಮೂರ್ನಾಕು ಕಿಲೊಮೀಟರ್ರು. ದಿನಾ ಸಿಟಿಗೆ ಹಣ್ಣುಹಂಪಲಂತ ಹೋಗೊ ಶಿವುಗ ಬಾಲ್ ತರಕಾ ಹೇಳ್ಬೋದು. ಆದ್ರ…

ಲಕ್ಷ್ಮಿ ಶಿವುಗಿಂತ ಮೂರುವರ್ಷ ಹಿರಿಯಳು. ಅವಳದ್ದು ಹಂಸಭಾವಿ. ಎರಡು ತಿಂಗಳ ಹಿಂದೆಯಷ್ಟೆ ನ್ಯಾಮತಿಗೆ ಬಂದ ಲಕ್ಷ್ಮಿಗೆ ಎಲ್ಲವೂ ಹಿಡಿತಿಬಿಡಿತಿ. ನ್ಯಾಮತಿಯನ್ನೆಂದು ನೋಡದ ಲಕ್ಷ್ಮಿಗೆ ಈಮುಂಚೆ ಮಂಜಮ್ಮ ಗೊತ್ತೇ ಇರಲಿಲ್ಲ. ಯಾವಾಗಲೊ ಒಮ್ಮೆ ಹಾವೇರಿಯ ಅಮ್ಮನ ಸಂಬಂಧಿ ಜಯಮ್ಮ ಈ ಮಂಜಮ್ಮನ ವಿಷಯ ಮಾತಿನಮಧ್ಯೆ ತೆಗೆದಂತಿತ್ತು. ಆರು ತಿಂಗಳಹಿಂದೆ ಜಯಮ್ಮನ ಮೊಮ್ಮಗಳ ಮದುವೆಯಲ್ಲಿ ಲಕ್ಷ್ಮಿಯ ಪಡಿಪಾಟಲನ್ನು ಜಯಮ್ಮನಿಂದ ಕೇಳಿದ ಮಂಜಮ್ಮ ಲಕ್ಷ್ಮಿಗೆ ತಮ್ಮೊಂದಿಗೆ ಬಂದಿರು ಎಂದಿದ್ದಳು. ಜಯಮ್ಮನೂ ‘ನೋಡಬೆ, ಮಂಜೀನು ಇಸ್ಕೂಲಿಗೆ ಹೋಗಳಾಕ್ಕಳಾ, ನೀನೋದ್ರ ಆಕಿಗೂ ಒಂದೀಟು ಕೈಬಾಯ್ಗೆ ಆಸ್ರೆ ಆಕತಿ. ನಿಂಗೂ ಒಂದಿಕ್ಕಂತ ಆಕತಿʼ ಅಂತ ಹುರಿದುಂಬಿಸಿದಳು. ‘ನೋಡು ತಾಯಿ, ಒಬ್ಬಂಟಿಯ ಕಷ್ಟ ಏನಂತ ಗೊತ್ತು. ನಿಮ್ಮವರನ್ನೊಂದು ಮಾತ್ಕೇಳಿ ನಿಧಾನಕ್ಕೇಳುʼ ಅಂತ ಫೋನ್ನಂಬರ್ ಕೊಟ್ಟಳು ಮಂಜಮ್ಮ. ‘ಪಾಪ ಅದುಕ್ಯಾರೈದಾರ. ಇದ್ದೋನು ಕುಡ್ದು ಕುಡ್ದು ಮಣ್ಣೋಯ್ಕಂದು ಹೋದ್ನಲ್ಲಾ, ಕೈಗೊಂದು ಕೂಸುಗೊಟ್ಟುʼ ಅಂತ ಜಯಮ್ಮ ಜೋರಾಗಿ ಹೇಳಿದಾಗ ಲಕ್ಷ್ಮಿಗೆ ಜೀವ ಹಿಂಡಿದಂತಾಯಿತು.

ಈ ರಶ್ಲ್ಲಿ ಕೂಸು ಕಟ್ಕಂದು ಊಟಕ್ಕೋಗೋದು ಕಷ್ಟ ಎಂದು ಲಕ್ಷ್ಮಿ ಅಂದುಕೊಳ್ಳುತ್ತಿರುವಾಗ, ‘ಅಮ್ಮ ಇಲ್ಲೆರಡು ಸೀಟೈತಿ ಜಲ್ದಿ ಬಾʼ ಎಂದು ಶಿವು ಕೂಗಿದ. ಮಂಜಮ್ಮ ಲಕ್ಷ್ಮಿಯನ್ನು ಎಳೆದುಕೊಂಡು ಹೊರಟಳು. ಎಲೆಮುಂದೆ ಮಂಜಮ್ಮ ‘ಅವ್ರು ಗೊತ್ತಾ? ಇವ್ರು ಗೊತ್ತಾ? ಅವರೇನಾಗಬೇಕು? ಇವರೇನಾಗಬೇಕು?ʼ ಅಂತೆಲ್ಲ ಕೇಳಿ ಕೊನೆಗೆ ‘ಓ ಹಳ್ದಪ್ಪನ ಕಡೆಯಿಂದ ನಿಮ್ಮವ್ವ ನಂಗೆ ತಂಗಿಯಾಗಬೇಕಾಕತಿ…ʼ ಅಂದು ‘ಬೀರಜ್ಜನ ಕಡೆಯಿಂದ ನಿಮ್ಮಪ್ಪ ನಂಗೆ ಅಣ್ಣ ಆಗಬೇಕಾಕತಿʼ ಅಂತ ದೂರಸಂಬಂಧದ ಚುಂಗುಹಿಡಿದು ನಂಟಿಗೊಂದು ಇಂಬು ಹುಡುಕಿದಳು. ಬೀಳ್ಕೊಳ್ಳುವಾಗ ಪಾಪು ಕೈಗೆ ನೂರುರುಪಾಯಿ ಬೇಡವೆಂದರೂ ತುರುಕಿ ಅದರ ತಲೆ ನೇವರಿಸಿದಳು.

ನಾಗರಾಜಪ್ಪ ಮೇಷ್ಟ್ರನ್ನು ಕರಕೊಂಡುಬಂದ ಶಿವು ಚೇರನ್ನು ತಂದುಹಾಕಿದ. ಲಕ್ಷ್ಮಿ ಮಂಜಮ್ಮನನ್ನು ಎಬ್ಬಿಸಿ ಕೂರಿಸಿದಳು. ‘ಹೆಂಗೈದಿಯಮ್ಮಾ, ಮಂಡಿನೋವು ಹೆಂಗೈತಿ, ಡಾಕ್ಟ್ರು ಏನಂದ್ರು?ʼ ಅಂತ ಮೇಷ್ಟ್ರು ಕೇಳಿ ಕೈಯಲ್ಲಿದ್ದ ಹಣ್ಣನ್ನು ಮಂಚದ ಮೇಲಿಟ್ಟರು. ‘ನಿಮ್ಮಂಥ ಗುರುಹಿರಿಯರ ಆಶೀರ್ವಾದವೆ ಶ್ರೀರಕ್ಷೆʼ ಅಂದು ನಾಕುದಿನದ ಆಸ್ಪತ್ರೆವಾಸದ ಅಷ್ಟೂ ವರದಿಯನ್ನು ಒಪ್ಪಿಸಿ ‘ಇಂಥ ಮಗನನ್ನು ಪಡೆದ ನಾನೇ ಪುಣ್ಯವಂತೆ, ಹಗಲುರಾತ್ರಿ ಅನ್ನದೆ ನನ್ನ ಕಾಪಾಡಿದ… ಈಕೆಯಂತೂ ಯಾವ ಜನ್ಮದ ಮಗಳೊ, ಹೆತ್ತಮಗಳೂ ಇಷ್ಟು ಚೆನ್ನಾಗಿ ಆರೈಕೆ ಮಾಡುತ್ತಿರಲಿಲ್ಲʼ ಅಂತ ಹೃದಯತುಂಬಿ ಹೇಳಿದಳು. ‘ರಕ್ತಸಂಬಂಧಕ್ಕೂ ಮಿಕ್ಕಿದ ಬಾಂಧವ್ಯ ನಿಮ್ಮದು... ಮಹಾತಾಯಿ ದೀಪಮ್ಮ…ʼ ಅಂತ ಕೈಮುಗಿಯುತ್ತ ಅಮ್ಮುವನ್ನು ಮತ್ತೆಮತ್ತೆ ವಿಚಾರಿಸಿದಳು. ಶಾಲೆಯ ಎಲ್ಲರನ್ನೂ ಕೇಳೇಕೇಳಿದಳು.

ಹೀಗೆ ಪುಸ್ತಕಭಾಷೆಯಲ್ಲಿ ನಾನ್ಸ್ಟಾಪಾಗಿ ಮಾತಾಡುತ್ತಿದ್ದ ಮಂಜಮ್ಮ ಇದ್ದಕ್ಕಿದ್ದಂತೆ ಹಳ್ಳಿಭಾಷೆಗೆ ಹೊರಳುತ್ತಿದ್ದದ್ದು ಲಕ್ಷ್ಮಿಗೆ ತಾನ್ಯಾವ ಭಾಷೆಯಲ್ಲಿ ಈ ಹೊಸ ವಾತಾವರಣದಲ್ಲಿ ಒಡನಾಡುವುದು ಎಂದೆನಿಸಿ ಆದಷ್ಟು ಸುಮ್ಮನೆ ಉಳಿಯುತ್ತಿದ್ದಳು. ಪಿಳಪಿಳ ನೋಡುತ್ತಿದ್ದ ಲಕ್ಷ್ಮಿಗೆ ಮೇಷ್ಟ್ರು ‘ಮಗಳಿಂದೇನೂ ತಲೆಕೆಡಿಸ್ಕಬೇಡಮ್ಮ, ದೀಪಾಂತಕೆ ಚೆನ್ನಾಗಿ ಹೊಂದ್ಕಂದೈದಾಳೆʼ ಅಂದರು. ಹೊರಡುವಾಗ ‘ನೀನಿಲ್ದೆ ಸ್ಕೂಲಾಗೆ ಕೈಕಾಲೆ ಆಡದಂಗಾಗೇತಿ. ಎಲ್ರೂ ನಿನ್ನ ನೆನಸೋರೆ… ಆದಷ್ಟು ಜಲ್ದಿ ಹುಷಾರಾಗಿ ಬಾರಮ್ಮʼ ಅಂದ ಮೇಷ್ಟ್ರಿಗೆ ಕೈಮುಗಿದು ‘ನಿಮ್ಮ ಋಣ ಭಾರಿ ದೊಡ್ಡದು ಸಾರ್ʼ ಅಂದು ಮಗನಿಗೆ ಕ್ಯಾಂಟೀನ್ನಲ್ಲಿ ಮೇಷ್ಟ್ರಿಗೆ ಟಿಫನ್ ಕೊಡಿಸಲು ಸನ್ನೆಮಾಡಿದಳು ಮಂಜಮ್ಮ.

ಅವರೋದಮೇಲೆ ‘ನೋಡಿ ಬಂಧಲ್ಲ ಬಳಗಲ್ಲ ಎಷ್ಟೊಂದು ಕನಿಕರ…. ದೇವರಕೃಪೆ… ದೇವರೆಲ್ಲಾ ಕೊಟ್ಟಿದ್ದಾನೆ… ನಮ್ಮ ಶಿವಂದು ಮದುವೆಯೊಂದು ಬಾಕಿ ಐತಿ… ನಮ್ಜಾತಿ ಯಾವುದಾದ್ರು ಹೆಣ್ಣಿದ್ರೆ ಹೇಳ್ರಿ… ನಾವೇ ಮದುವೆ ಖರ್ಚಾಕಿ ಮಾಡ್ಕಂದು ಬರ್ತೀವಿ. ಅದೊಂದು ಕಣ್ಣುಪ್ರೀತಿ ನೋಡಿದ್ರೆ ನನ್ನೆಲ್ಲ ಆಸೆ ಮುಗಿದಂಗೆʼ ಅಂತ ಸಹರೋಗಿಗಳಿಗೆ ಹೇಳಿದಳು.

ನಾಳೆ ಡಿಸ್ಚಾರ್ಜ್. ಲಕ್ಷ್ಮಿಗೆ ಆಸ್ಪತ್ರೆಯಿಂದು ಬೇರೆಯಾಗಿ ಕಾಣಲತ್ತಿತ್ತು. ಎಂದಿನಂತೆ ಕಣಗಿಲ ಕಟ್ಟೆಬಳಿ ಇಂದು ಹೋದಾಗ ಗಿಡದಲ್ಲಿ ಹೊಸ ಲವಲವಿಕೆ ಕಾಣಿಸಿ ಅವಳ ಉಸಿರಾಟದಲ್ಲೂ ಪ್ರತಿಮೂಡಿತು. ಹೊಸಊರು ನ್ಯಾಮ್ತಿಗೆ ಹೊಂದ್ಕಂತಿದ್ದಂಗ ಈ ದವಾಖಾನಿವಾಸ… ಅದೂ ಅಮ್ಮು ಇಲ್ಲುದ್ದು ವಾಸ. ಓದ್ಕಂದಿದ್ದೊಂದೂ ಪ್ರಶ್ನಬಾರದ ಪರೀಕ್ಷಾಖೋಲಿಯಂಗಿತ್ತು. ತನ್ನೆದಿ ಸಂಕಟನಾ ಮಂಜಮ್ಮ ಶಿವನೆದ್ರು ತೋರಗೊಡಂಗಿಲ್ಲ. ಅವರು ತನ್ನನ್ನ ಸೋಂಬೇರಿ ಅಂದುಕೊಂಡ್ರಾ…. ಪರೀಕ್ಷಾ ಮುಗಿದ ನಿರಾಳತೆ ಇಂದು. ನಾನ್ಯಾರೊ ಮಂಜಮ್ಮನ್ಯಾರೊ ದೀಪಮ್ಮನ್ಯಾರೊ… ಹೊಟ್ಟೆಪಾಡಿಗೆ ಯಾರ್ಯಾನ್ನೊ ಓಲೈಸ್ಕಂಬೇಕು… ಭಾಷೆ ವ್ಯಕ್ತಿತ್ವ ಸಂಬಂಧ ನಿಲುವನ್ನು ಬದಲಾಯಿಸ್ಕಂಬೇಕು. ಮಗಳ್ನಾ ಬಿಟ್ಟಿರಬೇಕಾದ ದುಃಖಾನ ಹುಸಿನಗ್ಯಾಗ ಅದುಮಿಡ್ಕಂಬೇಕು…. ಹುಟ್ಟಿಬೆಳೆದೂರು, ಕಳಕಂದ ತನ್ನವ್ರು…. ಕಣ್ಣುದುಂಬಿತು. ಅಮ್ಮುನೂ ಕಳೆದೋಗಕತ್ತಾಳ.... ದಿಗಿಲಾಯಿತು.

ಸಿಟಿಗೋಗಿದ್ದ ಶಿವು ಕೈಯಲ್ಲಿ ಪೊಟ್ಟಣಗಳು. ಜತೆಗೆ ಬಣ್ಣಬಣ್ಣದ ಬಾಲು. ಲಕ್ಷ್ಮಿ ಬಾಯಿಬಿಡದಿದ್ದರೂ ಬಾಲುತಂದಿದ್ದ. ಹೆಮ್ಮೆಮೂಡಿತು ಲಕ್ಷ್ಮಿಗೆ. ಪುಟ್ಟದೊಂದು ಬೂಟಿಗೆ ಅಂಗಲಾಚಿದರೂ ತಂದುಕೊಡದ ಸತ್ತಗಂಡ ಹಾದುಹೋದ. ಮಂಜಮ್ಮ ಜಾಕೀಟು ಪೀಸುಗಳನ್ನು ವಾರ್ಡಲಿದ್ದ ಎಲ್ಲ ರೋಗಿಗಳಿಗು ನರ್ಸುಗಳಿಗು ನೀಡಲು ತರಿಸಿದ್ದಳು. ಎಲ್ಲರ ಕಣ್ಣಂಚಲ್ಲೂ ಹನಿಯಾಡಿತು. ನರ್ಸುಗಳಂತೂ ತಮ್ಮಿಷ್ಟು ಸರ್ವೀಸ್ಸಲ್ಲಿ ಯಾರೂ ಹೀಗೆ ಆದರಿಸಿರಲಿಲ್ಲ ಎಂದು ಬಾಯಿಬಿಟ್ಟೇ ಹೇಳಿದರು. ಡಾಕ್ಟರ್ ದಂಪತಿ ಬಳಿ ಶಿವು ಲಕ್ಷ್ಮಿ ಜತೆ ಮಂಜಮ್ಮ ಹೋಗಿ ಎಂದಿನಂತೆ ‘ವೈದ್ಯೋ ನಾರಾಯಣೋ ಹರಿಃʼ ಎಂದು ಕೈಮುಗಿದು ಹಣ್ಣಿನಬುಟ್ಟಿ ಜಾಕೀಟುಪೀಸು ನೀಡಿದಳು. ಅವರೂ ಕಣ್ಣುದುಂಬಿಕೊಂಡು ಕೈಮುಗಿದರು.

ಶಿವು ತಂದುಕೊಟ್ಟ ಬಾಲನ್ನು ಚಣವೂ ಅಗಲದ ಅಮ್ಮುವಿನ ಹಿಗ್ಗುಕಂಡು ಲಕ್ಷ್ಮಿಗೆ ಸರಿಯಾದ ಜಾಗಕ್ಕೆ ಸೇರಿದ್ದೇನೆ ಅನಿಸಿತು. ಡಬ್ಬದಿಂದ ಅಕ್ಕಿ ಬೇಳೆ ಹಿಟ್ಟು ತೆಗೆದುಕೊಳ್ಳುವಾಗ ತನಗೆ ಪ್ರತಿಸಾರಿ ಅಳತೆ ತೋರಿಸುತ್ತಿದ್ದ ಲಕ್ಷ್ಮಿಗೆ ‘ಮಂಜಮ್ಮ ಇಳೆಯು ನಿಮ್ಮ ದಾನ…ʼ ಎಂದು ‘ಹೆಚ್ಚಾದರೆ ನಾಕುತುತ್ತು ಹೆಚ್ಚೆಗೆ ಉಂಡ್ರಾತು. ಅನ್ನ ಯಾವತ್ತು ಅಪೂರ್ಣ ಆಗಬಾರ್ದು, ಅನ್ನ‘ಪೂರ್ಣʼ ಆಗಬೇಕುʼ ಅನ್ನುತ್ತಿದ್ದಳು. ಟೀವಿ ಹಾಕಲೊ ಬೇಡ ಅಂದುಕೊಳ್ಳುತ್ತಿದ್ದ ಲಕ್ಷ್ಮಿಗೆ ಮಂಜಮ್ಮನೇ ಕರೆದು ಟೀವಿಯೆದುರು ಕೂರಿಸುತ್ತಿದ್ದಳು. ಅಕ್ಕಪಕ್ಕದವರಿಗೆ ಕರೆಕರೆದು ಚಾತಿಂಡಿ ಕೊಡುವ, ವೀಳ್ಯದೆಲೆಗೆ ಸುಣ್ಣಸವರಿ ಅಡಿಕೆಪುಡಿ ಲವಂಗ ಕೊಬ್ಬರಿಪುಡಿ ಸೋಂಪುಕಾಳು ಉದುರಿಸಿ ಸುತ್ತಿಕೊಡುವ, ಕೇರಿಹುಡುಗರನ್ನು ಕೂರಿಸಿಕೊಂಡು ಪುಸ್ತಕದಲ್ಲಿನ ಮಕ್ಕಳಕತೆ ಹೇಳುವ, ಯಾರದೊ ಮನೆಯ ಸತ್ಯನಾರಾಯಣ ಪೂಜೆಯಲ್ಲಿ ‘ಕಾಪಾಡು ಶ್ರೀಸತ್ಯನಾರಾಯಣ…ʼ ಹಾಡೇಳುವ ಮಂಜಮ್ಮ ಲಕ್ಷ್ಮಿಯಲ್ಲೊಂದು ಹೊಸ ಅಂತರಂಗವನ್ನೇ ಸೃಷ್ಟಿಸಿದಳು.

ಒಂದುವಾರ ಮನೆಯಲ್ಲೇ ಆರೋಯ್ಕಂದ ಮಂಜಮ್ಮ ಈಗ ಮಗನ ಬೈಕಲ್ಲಿ ನಿಧಾನಕ್ಕೆ ಶಾಲೆಗೆ ಹೋಗುತ್ತಿದ್ದಾಳೆ. ಮಗ ಒಂಬತ್ತಕ್ಕೇ ಹೋಗಿ ರೂಮುಗಳ ಕೀ ತೆಗೆದು ಕಸಹೊಡೆದು ಬಂದಿರುತ್ತಿದ್ದ. ಮಂಜಮ್ಮನಿಗೆ ಸಂಕಟ. ಬಿಎ ಓದಿದ ಮಗ…. ಲಕ್ಷ್ಮಿ ‘ನಾನ್ಬಂದು ಕೆಲ್ಸ ಮಾಡ್ಕೊಟ್ಟು ಬರ್ತೀನಿʼ ಅಂದ್ರೂ ಅವರಿಬ್ಬರು ಒಪ್ಪುತ್ತಿರಲಿಲ್ಲ. ಮಂಜಮ್ಮನೇ ನಿಧಾನಕ್ಕೆ ನಡೆದೋಗಿ ಪಿರಿಯಡ್ಡು ಬೆಲ್ ಮಾಡುತ್ತಿದ್ದಳು. ಮೇಷ್ಟ್ರುಗಳು ‘ಮಕ್ಕಳು ಹೊಡಿತಾವೆ, ನೀನು ಒಂದ್ಕಡೆ ಕುಂತ್ಕʼ ಅಂದ್ರೂ ಕೇಳುತ್ತಿರಲಿಲ್ಲ. ಮೊದಲಿನಂತೆ ಮೇಷ್ಟ್ರು ಡಬ್ಬಿಗಳನ್ನು ಬಿಚ್ಚಿ ತಟ್ಟೆಗೆ ಎಲ್ಲರ ಬುತ್ತಿಗಳನ್ನು ಮಿಕ್ಸ್ಮಾಡಿ ಬಡಿಸಬೇಕು. ಮೂಲಂಗಿ ಸವತೆಕಾಯಿ ಹೆಚ್ಚಿ ಕೊಡಬೇಕು. ಟೀ ಕಾಸಿಕೊಡಬೇಕು. ಅಡುಗೆಯವರಿಗೆ ಸಹಾಯ ಮಾಡಬೇಕು….

ನಿಧಾನಕ್ಕೆ ಮೊದಲಿನಂತೆ ಶಾಲೆ ತುಂಬಾ ಓಡಾಡತೊಡಗಿದಳು ಮಂಜಮ್ಮ.

ಲಕ್ಷ್ಮಿ ಮಧ್ಯಾಹ್ನ ಒಬ್ಬಳೆ ಮನೆಯಲ್ಲಿ. ಮಗಳು ಅಮೃತ ಎಲ್ಕೆಜಿ ಸೇರಿದ್ದಳು. ಕಳೆದೆರಡ್ಮೂರು ವರ್ಷಗಳಲ್ಲಿ ಮೊಬೈಲಂಗಡಿ, ಜೆರಾಕ್ಸಂಗಡಿಯಂತ ಮಾಡಿ ಕೈಸುಟ್ಟುಕೊಂಡ ಶಿವು ಈಗ ನ್ಯಾಮತಿ ತರಕಾರಿಮಂಡಿಯಲ್ಲಿ ಲೆಕ್ಕ ಬರೆಯಲೋಗುತ್ತಿದ್ದ. ಒಂದು ಮಧ್ಯಾಹ್ನ ಶಿವನ ಬಟ್ಟೆ ಇಸ್ತ್ರಿಮಾಡಿ ಗಾಡ್ರೇಜಿನಲ್ಲಿಡಲು ಹೋದಾಗ ಒಳಖಾನೆ ಓಪನ್ನಾಗಿದ್ದನ್ನು ನೋಡಿದ ಲಕ್ಷ್ಮಿ ಮತ್ತೆ ಹಾಗೆ ಮುಚ್ಚಿದಳು. ತಕ್ಷಣ ಒಳಖಾನೆಯನ್ನು ಯಾಕೊ ತೆಗೆಯಬೇಕೆನಿಸಿತು. ಒಳಗೆ ಕಣ್ಣಾಡಿಸಿದಾಗ ಒಡವೆ ಡಬ್ಬಿ! ಕೊಳಚೈನು ಉಂಗುರ! ಮುಟ್ಟಿ ಮತ್ತೆ ಒಳಗಿಡಲು ಹೋದವಳು ಒಂದೆಜ್ಜೆ ಹಾಕಂದು ನೋಡೋಣು ಅನಿಸಿತು. ಕನ್ನಡಿಯಲ್ಲಿ ತನ್ನನೋಡಿ ತಾನೇ ಬೆರಗಾದಳು. ಜೀವಮಾನದಲ್ಲಿ ಕನಸೂ ಕಾಣದ ಆಭರಣ ತನ್ನ ಮ್ಯಾಲೈತಿ… ಒಳಗೇನೊ ಹೊಸಹಿಗ್ಗು… ತಕ್ಷಣ ಮುಸುರೆ ನೆನಪಾಗಿ ಹಿತ್ತಲಿಗೋಡಿದಳು. ಬಂದು ಹಾಲುಕಾಸಿ ಸಾರು ಬಿಸಿಮಾಡಿದಳು. ಕಸಹೊಡೆದಳು. ಮಂಜಮ್ಮ ಬರುವಸಮಯ… ಇವನ್ನು ತೆಗೆದಿಡೋಣು… ಉಂಗುರ ಇಲ್ಲ…! ಜಲಜಲ ಬೆವರು... ತಲೆಸುತ್ತು… ಕೈಕಾಲು ಎದೆಯೆಲ್ಲ ನಡುಕ. ಹಿತ್ತಲಿಗೋಡಿದಳು. ಮುಸುರೆ ಗುಂಡಿಯಲ್ಲಿಳಿದಳು. ಉಂಗುರ ಸಿಗಲಿಲ್ಲ… ಎಲ್ಲಕಡೆ ಹುಡುಕೇಹುಡುಕಿದಳು. ಸಿಗಲಿಲ್ಲ. ಕಪಾಳಕ್ಕೆ ಹೊಡೆದುಕೊಂಡಳು. ಕೊರಳಿಗಾಕಿದ್ದ ಸರ ಕೈಯಲ್ಲಿಡಿದು ತಲೆ ಚಚ್ಚಿಕೊಂಡಳು… ಬಾಗಿಲಲ್ಲಿ ಸದ್ದಾಯಿತು! ದಢಕ್ಕನೆ ಸರವೊಂದನ್ನೇ ಗಾಡ್ರೇಜಿಗೆ ಸೇರಿಸಿದಳು.

ಮಂಕಾಗಿದ್ದ ಲಕ್ಷ್ಮಿಕಂಡು ಮಂಜಮ್ಮ ಊರುಕಡೆ ನೆನಪಾಗಿರಬಹುದು ಪಾಪ ಅಂದುಕೊಂಡು ಅವಳನ್ನು ಧಾರಾವಾಹಿಯೆದುರು ಕೂರಿಸಿದಳು.

ಎಲ್ಲರಿನ್ನು ಮಲಗಿದ್ದಾಗಲೇ ನಸುಕಿಗೇ ಎದ್ದ ಲಕ್ಷ್ಮಿ ಮೊಬೈಲ್ ಟಾರ್ಚಿಡಿದು ಗಣಗಣ ಹುಡುಕಿದಳು. ಸಿಗಲಿಲ್ಲ.

ಇದಾಗಿ ಒಂದು ವಾರ, ಅಮೃತಾಳ ಹುಟ್ಟುಹಬ್ಬ. ಶಿವು ಬಲೂನುಗಳಿಂದ ಮನೆ ಮುಚ್ಚಿಬಿಟ್ಟಿದ್ದ. ಮಂಜಮ್ಮನೇ ಅಂಗಡಿಗೋಗಿ ಹೊಸಬಟ್ಟೆ ತಂದಿದ್ದಳು. ಹಾಡು ಕುಣಿತ ವಿಶ್ಶು ಗಿಫ್ಟು ಹೋಳಿಗೆ. ಕೇರಿಯೇ ನೆರೆದಿತ್ತು. ಅಮ್ಮುವಿನ ಬೋಳುಕೊರಳು ನೋಡಿ ಮಂಜಮ್ಮ ಗಾಡ್ರೆಜಿಂದ ಲಕ್ಷ್ಮಿಗೆ ಒಡವೆ ತರಲೇಳಿದಳು. ಭೂಮಿಯೇ ಬಾಯ್ಬಿಟ್ಟಂತಾಯಿತು! ನಡುಗುವ ಕೈಯಿಂದ ಸರ ತಂದುಕೊಟ್ಟಳು. ಅದನ್ನು ಅಮ್ಮುವಿಗೆ ಹಾಕಿ ಮಂಜಮ್ಮ ಲಟಿಗೆ ತೆಗೆದಿದ್ದೇ ತೆಗೆದಿದ್ದು. ಶಿವು ಫೋಟೊ ತೆಗೆದಿದ್ದೇ ತೆಗಿದಿದ್ದು. ಲಕ್ಷ್ಮಿಯ ಕಣ್ಣಾಲಿಯಲ್ಲಿ ನೀರು ತುಂಬಿಕೊಂಡಿತು. ಎಲ್ಲರು ಮನೆಗೋದರು. ಉಂಡು ಅಡ್ಡಾಡಲೆಂದು ಶಿವು ಹೊರಗೋದ.

ಲಕ್ಷ್ಮಿ ಬಂದವಳೆ ಮಂಜಮ್ಮನ ಕಾಲುಹಿಡಿದು ಬಿಕ್ಕಿಬಿಕ್ಕಿ ಅತ್ತಳು. ‘ಹೇ ಹುಚ್ಚಿ ಆಕಿ ನಂಗೂ ಮೊಮ್ಮಗಳಲ್ಲೇನೆ… ಆಕಿ ಕಣ್ಣಪ್ರೀತಿ ನಾವ್ ನೋಡಬಾರ್ದೇನೆʼ. ಮತ್ತಷ್ಟು ಕಣ್ಣೀರು ಹರಿಯಿತು. ತಡೆದುಕೊಳ್ಳಲಾಗಲಿಲ್ಲ. ಬಿಕ್ಕಳಿಸುತ್ತಾ ಉಂಗುರ ಕಳೆದಿದ್ದನ್ನೆಲ್ಲ ಹೇಳಿಕೊಂಡಳು. ಮಂಜಮ್ಮ ‘ಅಷ್ಟೇನಾ… ಹೋದ್ರೆ ಹೋತುಬಿಡು. ಅದಕ್ಯಾಕಳ್ತೀ, ಹೆಣ್ಮಕ್ಕಳು ಅಂದ್ರೆ ಒಡವೆಮ್ಯಾಲೆ ಆಸೆ ಇರ್ತತಿ… ನಂಗಾದ್ರು ಯಾವ ಹೆಣ್ಮಕ್ಕಳು ಐದಾವೆ. ಅದರ ಋಣ ಅಷ್ಟಿತು ಕಳೆದೋತುʼ ಅಂದು ಕಣ್ಣೊರೆಸಿದಳು. ಮನೆಗೆಬಂದ ಶಿವು ‘ಹೋದ್ರೋತು ಜೀವೇನೋಗಲಿಲ್ಲ, ಬರ್ರಿ ಇಬ್ರೂ ಊಟಮಾಡ್ರಿʼ ಅಂತ ಲಕ್ಷ್ಮಿಗೆ ಹೋಳಿಗೆ, ಮಂಜಮ್ಮನಿಗೆ ಶುಗರ್ರೆಂದು ಚಪಾತಿ ಬಡಿಸಿಟ್ಟ. ಅಮ್ಮು ನಿದ್ದೆಯೋಗಿದ್ದಳು.

ಬೆಳಗ್ಗೆ ಗಡಿಬಿಡಿಯಿಂದಲೆ ಬಂದ ಹೆಡ್ಮಾಸ್ಟ್ರು ‘ಅಟೆಂಡೆನ್ಸ್ ಕೊಟ್ಟಾದ್ಮೇಲೆ ಬಾರಮ್ಮ ಒಂದ್ವಿಷಯ ಹೇಳದೈತಿʼ ಅಂದರು. ಮಂಜಮ್ಮ ನೂರೆಂಟು ಆಲೋಚನೆಯಲ್ಲೇ ಪ್ರಾರ್ಥನೆ ಬೆಲ್ಲೊಡೆದು ಅಟೆಂಡೆನ್ಸ್ಗಳನ್ನು ಕೊಟ್ಟು ದಡಬಡಿಸಿ ಆಫೀಸ್ರೂಮಿಗೆ ಬಂದಳು. ಯಾರೊ ದಾಖಲಾತಿ ಬರೆಸಿಕೊಂಡು ಹೋಗಲು ಬಂದಿದ್ದರು. ಅವರೋದಮೇಲೆ ಮೇಷ್ಟ್ರು ಎಲ್ಲ ಹೇಳಿ ಕೊನೆಗೆ ‘ಯಾರತ್ರುನೂ ಬಾಯ್ಬಿಡಬೇಡ, ವಿಷಯ ಹಣ್ಣಾದ್ಮೇಲೆ ಹೇಳಂತಿʼ ಅಂದರು. ‘ಅವನ ತಲೆಮ್ಯಾಲೆ ಒಂದೆರಡು ಅಕ್ಕಿಕಾಳು ಹಾಕಂಗೆ ಮಾಡ್ರಿ ಸಾರ್ ಪುಣ್ಯ ಬರ್ತತಿʼ ಅಂದಳು.

ಲ್ಯಾಬ್ ಕಟ್ಟೆಮೇಲೆ ಕೂತ್ಕಂದು ಒಬ್ಬಳೆ ಯೋಚಿಸಿದಳು. ಎಕಡೆರಾಮಪ್ಪನ ಮಂತ್ಯಾನ ಅಂದ್ರೆ ಭಾಳೊಳ್ಳೆ ಮಂತ್ಯಾನ. ಅವರ ಮಗಳು ಕಾವ್ಯನ್ನ ಚಿಕ್ಕಮಗು ಇದ್ದಂಗಿದ್ದ ನೋಡ್ಕಂಬಂದೀವಿ.. ಓದೋದ್ರಾಗು ಮುಂದಿದ್ಲು. ಬಿಎ ಮಾಡಿರ್ಬೇಕು. ಅವರೇ ಶಿವುಗೆ ಕೊಡ್ತೀವಿಯಂತ ಹೇಳಿಕಳಿಸಿದ್ದಾರಂದ್ರೆ ನಮ್ಮ ಬೀರಲಿಂಗೇಶ್ವರನೇ ಕಳಿಸಿರಬೇಕು. ಗುರುವೇ ನಿನ್ನಾಟ ಬಲ್ಲೋರು ಯಾರ್ಯಾರೊ… ಇದೊಂದು ಹೂವೆತ್ತಿದ್ದಂಗೆ ಮಾಡಿಕೊಡಪ್ಪ ನಂದೊಂತಿಂಗ್ಳು ಸಂಬಳ ನಿನ್ ಗುಡಿಗೆ ಕೊಡ್ತೀನಿ…

ಲಕ್ಷ್ಮಿ ಬಂದು ಇಲ್ಲಿಗೆ ಒಂದು ವರ್ಷ. ಹಂಸಭಾವಿಯೆ ಮರೆತಂತಾಗಿತ್ತು. ಶಿವುಗೆ ಲಕ್ಷ್ಮಿಯೊಗೆದ ಬಟ್ಟೆಯ ಪರಿಮಳ ಮೈದುಂಬಿದರೆ, ಮಂಜಮ್ಮಗೆ ಅವಳ ಕೋಳಿಸಾರಿನ ಘಮ ಹೊಟ್ಟೆದುಂಬುತ್ತಿತ್ತು. ಇಲ್ಲಿ ಎಲ್ಲದಕ್ಕೂ ಲಕ್ಷ್ಮಿಯನ್ನೇ ಕೇಳುತ್ತಿದ್ದರು. ಸ್ವಂತಗಂಡ ತನ್ನನ್ನು ಎಲ್ಲದರಿಂದಲೂ ಹೊರಗಿಟ್ಟು ಕೊನೆಗೆ ಸಾವಿನಿಂದಲೂ ಹೊರಗಿಟ್ಟು ಸತ್ತ. ಯಾರೊ ಹೊರಗಿನವರು ನನ್ನನ್ನು ಬದುಕೊಳಗಿಟ್ಟು ತೋರುತ್ತಿರುವ ಮಮಕಾರಕ್ಕೆ ಏನೆನ್ನಬೇಕು…

ನಾಳೆ ಶಾಲೆಯಲ್ಲಿ ಸರಸ್ವತಿಪೂಜೆ. ಇಂದೇ ಲಾಡುಮಾಡಿಸಿ ಆರಿಹಾಕಲಾಗುವುದು. ಎಸ್ಎಸ್ಎಲ್ಸಿ ಮಕ್ಕಳಿಗೆ ಬೀಳ್ಕೊಡುಗೆನೂ ಇರೋದರಿಂದ ಎಂದಿನಂತೆ ಗ್ರ್ಯಾಂಡಾಗಿತ್ತು. ದೊಡ್ಡಮಕ್ಕಳನ್ನು ಕರೆದುಕೊಂಡು ಶಾಲೆಯನ್ನೆಲ್ಲಾ ಕ್ಲೀನುಮಾಡಬೇಕು ಎಂದುಕೊಳ್ಳುತ್ತಲೇ ನಿದ್ದೆಯಿಂದೆದ್ದ ಮಂಜಮ್ಮ ಎಲ್ಲ ಮುಗಿಸಿಕೊಂಡು ನಂತರ ಮಲಗಿಕೊಂಡು ಒಂದುಕಾಲು ಮೇಲೆತ್ತಿ ಮಂಡಿ ವ್ಯಾಯಾಮ ಮಾಡುತ್ತಿದ್ದಳು. ಲಕ್ಷ್ಮಿ ಅಮ್ಮುವಿನಜತೆ ಬೀರಜ್ಜನಗುಡಿಗೆ ಹೋದಳು. ಇತ್ತ ಶಿವು ಮಂಜಮ್ಮನ ಮಂಡಿ ತಿಕ್ಕುತ್ತಾ ‘ಅಮ್ಮ ನೀನು ಬೇಜಾರಾಗಲ್ಲಂದ್ರೆ ಒಂದ್ಮಾತು ಕೇಳ್ಲಾ…ʼ ಅಂದ. ‘ಯಾವತ್ತು ನೀನಂಗೆ ಏನು ಕೇಳಿದ್ರೂ ಇಲ್ಲ ಅಂದಿಲ್ಲ. ನೀನು ಹ್ಞುಂ ಅಂದ್ರೆ ಸರಿ, ಇಲ್ಲಂದ್ರೆ ಆ ವಿಷಯನಾ ಇಲ್ಲಿಗೆ ಬಿಡ್ತೀನಿ… ನಿನ್ನಿಷ್ಟ ಹೆಂಗೊ ಹಂಗೆ ಇರ್ತಿನಿ... ʼ ಅಂದ.

‘ಲಕ್ಷ್ಮೀನ ಮದ್ವೆಯಾಗೋಣ ಅಂತ ಅನ್ಕಂದಿನಿʼ ಅಂದೊಡನೆ ಸಟಕ್ಕಂತ ಎದ್ದುಕೂತ ಮಂಜಮ್ಮ ಗಡಗಡ ಕಂಪಿಸತೊಡಗಿದಳು. ನೂರೆಂಟು ಪ್ರಶ್ನೆಗಳನ್ನು ಕಣ್ಣೇ ಕೇಳುವಂತೆ ನೋಡಿದಳು. ‘ನೀನೊಲ್ಲೆಯಂದ್ರೆ ದೇವರಾಣೆ ಇದನ್ನಿಲ್ಲಿಗೆ ಬಿಟ್ಟುಬಿಡ್ತೀನಿ…ʼ. ‘ನಮ್ಮ ಡಿಗ್ರಿ ಲೆಕ್ಚರರ್ ರಮೇಶ್ ಸರ್ರು ವಿಧೆವೆಯನ್ನ ಮದ್ವೆಯಾಗಿ ಚೆನ್ನಾಗೆ ಐದರಲ್ಲಮ್ಮಾʼ. ಮಂಜಮ್ಮನ ಬಾಯಿ ಒಣಗಿತ್ತು. ಅವಳ ಮುಖವೇ ಅವಳ ಆಂತರ್ಯದ ತುಮಲವನ್ನು ಹೊರಹಾಕುತ್ತಿತ್ತು. ‘ನೀನೇ ಯಾವುದೊ ಪುಸ್ತಕ ಓದಿ ಇಂಥವ್ರಿಗೆ ಬದುಕು ಕೋಡೋದೇ ದೊಡ್ತನ ಅಂದಿದ್ದೆಲ್ಲಮ್ಮಾ… ʼ. ‘ಅಮ್ಮುವಿನ ಬಗ್ಗೆ ಯೋಚಿಸ್ತಿದ್ದೀಯಾ…? ನೀನೇ ಮೊಮ್ಮಗಳು ಅಂತಿದ್ದೆಯಲ್ಲಮ್ಮಾ….ʼ.

‘ಲಕ್ಷ್ಮಿನೂ ಒಪ್ಪಿರಲಿಲ್ಲ. ಒಂದ್ವಾರಗಟ್ಟಲೆ ಯೋಚಿಸಿ, ನಿನ್ನೆ ‘ಅಮ್ಮ ಒಪ್ಪಿದ್ರೆ ಮಾತ್ರ. ಇಲ್ಲಂದ್ರೆ ಬೇಡʼ ಅಂದಳುʼ.

ಮನಮನೆಯೊಳಗಿನ ಗಾಳಿ ನಿಂತಲ್ಲೇ ನಿಂತಿತ್ತು.

ಕೊನೆಗೆ ‘ಮನ್ಸಿಗೆ ಹಚ್ಕಬೇಡ, ನಿನ್ನಾರೋಗ್ಯ ಬೇರೆ ಸರಿಯಿಲ್ಲ, ನೀನು ಬೇಡ ಅಂದ್ರೆ ಬೇಡ, ಹ್ಞಾಂʼ ಅಂತ ಅವಳನ್ನೆಬ್ಬಿಸಿ ಸ್ನಾನಕ್ಕೆ ಕಳಿಸಿದನು.

ಪ್ರತಿವರ್ಷ ಈದಿನ ಮಂಜಮ್ಮನ ಆರ್ಭಟ ಹಿಡಿಯಕ್ಕಾಕ್ತಿರಲಿಲ್ಲ. ‘ಇವತ್ಯಾಕೆ ಸಪ್ಪೆʼ ಅಂತ ಎಲ್ಲರು ಕೇಳಿದ್ರೂನೂ ಮೌನವಾಗಿದ್ದ ಮಂಜಮ್ಮನಿಗೆ ಹೆಡ್ಮೇಷ್ಟ್ರು ‘ಆರಾಮಿರದಿದ್ರೆ ಮನಿಗೋಗಮ್ಮ ನಾವು ಮಾಡ್ಕಂತಿವಿʼ ಅಂದ್ರೂ ಹೋಗಲಿಲ್ಲ. ಅದರಲ್ಲೆ ಎಲ್ಲ ಕೆಲಸಮಾಡಿದಳು. ಸಂಜೆ ಎಲ್ಲರೂ ಹೊರಟುನಿಂತಾಗ ‘ಲಾಡಿನ್ನೂ ಸ್ವಲ್ಪ ಆರ್ಬೇಕು, ಇಲ್ಲಂದ್ರೆ ಮುಗ್ಗು ಬರ್ತತಿ, ಸ್ವಲ್ಪಹೊತ್ತು ನಾನಿದ್ದು ಬಾಕ್ಸಿಗೆ ತುಂಬರ್ತೀನಿʼ ಅಂದ ಪಿ.ಇ. ಟೀಚರ್ರಿಗೆ ‘ಮಂಜಮ್ಮ ಹೋಗ್ರಿಸಾರ್ ನೀವ್ಯಾಕೆ ಕಾಯ್ತೀರಾ, ಬೆಳಗ್ಗಿಂದ ಕೆಲ್ಸಮಾಡಿ ಸುಸ್ತಾಗಿರ. ನಾನೀವಾಗ ಮನಿಗೋಗಿ ಚಾಕುಡಿದು ಮತ್ತೆಬಂದು ತುಂಬಿಡ್ತೀನಿʼ ಅಂದಳು.

ಮನೆಯಲ್ಲಿ ಶಿವು ಇರಲಿಲ್ಲ. ಟೀ ತಂದುಕೊಟ್ಟ ಲಕ್ಷ್ಮಿ ‘ದೀಪಕ್ಕನ ಮನೆಯಿಂದ ಅಮ್ಮುನ ಕರ್ಕಂದು ಬರ್ತೀನಿʼ ಅಂತೇನೊ ಅವಸರಿಸಿದಳು. ಮಂಜಮ್ಮ ಸ್ವಲ್ಪಹೊತ್ತು ಮಂಚದಮೇಲೆ ಅಡ್ಡಾದಳು. ಎಚ್ಚರಾದಾಗ ಅಮ್ಮು ತನ್ನ ಮೊಣಕಾಲಿಗೆ ಅಮೃತಾಂಜನ ಹಚ್ಚುತ್ತಿದ್ದಳು. ಲಕ್ಷ್ಮಿ ಹಿತ್ತಲಲ್ಲಿ ಮುಸರೆ ತಿಕ್ಕುತ್ತಿದ್ದಳು. ಅಮ್ಮುನ ನೋಡಿ ಕಣ್ಣಲ್ಲೇ ನಕ್ಕು ‘ನಾಳೆ ನಮ್ಶಾಲಿಗೆ ಬರಂತೆʼ ಅಂದು ಹಿತ್ಲಿಗೋಗಿ ‘ನಾನೊಂದು ಸ್ವಲ್ಪ ಶಾಲಿಕಡೆ ಹೋಗಿಬರ್ತಿನಮ್ಮʼಅಂತೇಳಿ ಹೊರಟಳು.

ಒಬ್ಬಳೆ ಕುರ್ಚಿಮೇಲೆ ಕೂತ ಮಂಜಮ್ಮನೆದುರಿಗೆ ಮಣಮಣ ಲಾಡು. ಎಷ್ಟೊ ವರ್ಷವಾಗಿತ್ತು ಸಿಹಿಮುಟ್ಟದೆ. ಇವತ್ತು ಮನಸೋಯಿಚ್ಛೆ ತಿಂದ್ಬಿಡಬೇಕು...

ಮದುವೆಯಾಗಿ ಐದುವರ್ಷಕ್ಕೇ ಆಕ್ಸಿಡೆಂಟಲ್ಲಿ ತೀರಿಹೋದ ಗಂಡ. ಅಲ್ಲಿಂದ ಇಲ್ಲಿವರೆಗೆ ಪಟ್ಟ ಯಾವ ಪಾಡನ್ನು ಕಷ್ಟ ಅಂದುಕೊಳ್ಳಲಿಲ್ಲ. ಗಂಡನಮನೆ ತವರುಮನೆಯಿಂದ ಯಾವ ಆಸರೆ ಇರಲಿಲ್ಲ. ಮೊದಲಂದಿಷ್ಟು ವರ್ಷ ಶಾವಿಗೆಮಿಲ್ಲಿನ ಕೆಲಸ. ಆಮೇಲೆ ಐದಾರುವರ್ಷ ಈ ಖಾಸಗಿಸ್ಕೂಲಲ್ಲಿ ಐನೂರು ಸಾವಿರಕ್ಕೆ ಕೆಲಸ. ಹತ್ತುವರ್ಷವಷ್ಟೆ ಈ ಪ್ಯೂನ್ ಪೋಸ್ಟ್ ಗ್ರ್ಯಾಂಟಾಗಿ. ಈ ಪುಟ್ಟಮನೆ ಖರೀದಿಸಕ್ಕೆ ಏನೆಲ್ಲ ಒದ್ದಾಟ. ಆರನೆಕ್ಲಾಸು ಓದಿದ ತನಗೆ ಓದಿನ ಹುಚ್ಚುಹಚ್ಚಿದವರು ಕನ್ನಡಮೇಷ್ಟ್ರು ಮುರಗೇಂದ್ರಯ್ಯ. ಪಾಪ, ಹಾರ್ಟ್ಆಟ್ಯಾಕ್ಕಾಗಿ ತೀರಿಹೋದರು. ಈಗಿರಬೇಕಿತ್ತು….

ಲಕ್ಷ್ಮಿನೊ ವರಸೆಯಲ್ಲಿ ಮಗಳಾಗಬೇಕು. ವಯಸ್ಸಿನಲ್ಲಿ ದೊಡ್ಡವಳು. ಇವನಿಗೆ ಅಕ್ಕನಾಗಬೇಕು… ಅದಿರಲಿ, ಅವಳನ್ನು ನೋಡಿದಾಗಿಂದ ತಾನು ಮಗಳೆಂದೇ ಒಡನಾಡಿರುವುದು. ಈಗ್ಹೇಗೆ ಸೊಸೆಯೆಂದು ಮನಸ್ಸಿಗೊಪ್ಪಿಸುವುದು? ಆಸ್ಪತ್ರೆಯಿಂದ ಬಂದಮೇಲೆ ನೋಡಲು ಬಂದವರಿಗೆ ಸಟಪಟ ಅಂತ ಟೀ ಉಪ್ಪಿಟ್ಟು ಕೊಡ್ಡುತ್ತಿದ್ದ ಲಕ್ಷ್ಮಿ ಕುರಿತು ಕೇಳಿದವರಿಗೆಲ್ಲ ನನ್ನ ಮಗಳು ಕಣವ್ವಾ ಈಕಿ ಅಂತ ಹೇಳುತ್ತಿದ್ದೆ. ಈಗ ಅವರಿಗೆಲ್ಲ ನನ್ನ ಸೊಸೆಯಂತ ಹೆಂಗೇಳಲಿ…? ಇಡೀ ಊರನ್ನೇ ಕರೆದು ಧಾಂಧೂಂ ಎಂದು ಮದುವೆ ಮಾಡಬೇಕೆಂದುಕೊಂಡಿದ್ದೆ. ಈಗ್ಹೇಗೆ ಕರೆಯುವುದು? ಕತ್ತಲು ಸಣ್ಣಗೆ ಆವರಿಸುತ್ತಿದ್ದಂತೆ ಹಳದಿಲಾಡು ಮಂಕಾಗಹತ್ತಿತು. ಮಂಡಿನೋವು ಕೆರಳಿತ್ತು. ಶಿವನನ್ನು ಅಂಕಲ್ ಅನ್ನುತ್ತಿದ್ದ ಅಮ್ಮು ಈಗ ಹೇಗೆ ಅಪ್ಪ ಅನ್ನುವಳು? ಶಿವು ಮಗಳೆಂದು ಎಲ್ಲರೆದುರು ಹೇಗೆ ಹೇಳಿಕೊಳ್ಳುತ್ತಾನೆ? ಯೋಚಿಸೇಯೋಚಿಸಿದಳು… ಎದೆಯೆಲ್ಲ ಹಿಂಡಿದಂತಾಯಿತು. ಲಾಡು ತಿಂದು ಮಲಗಬೇಕು. ಶುಗರ್ ಮಾತ್ರೆಗೀತ್ರೆ ಏನೂ ಬೇಡ… ಲಕ್ಷ್ಮಿಗಾದ್ರೂ ಹೇಗೆ ಆ ಭಾವ ಬಂತು…?

‘ಅವರವರ ಭಾವಕ್ಕೆ ಅವರವರ ಭಕುತಿಗೆ ಅವರವರ ತೆರನಾಗಿ ಇರುತಿಹನು…ʼ

‘ಎನ್ನ ನಡೆಯೊಂದು ಪರಿ, ಎನ್ನ ನುಡಿಯೊಂದು ಪರಿ, ಎನ್ನೊಳಗೇನೂ ಶುದ್ಧವಿಲ್ಲ….ʼ

ಪಕ್ಕದಕೋಣೆಯಿಂದ ಮುರಗೇಂದ್ರಯ್ಯನವರ ಪಾಠ ತೇಲಿಬಂದಂತಾಗಿ ಕಣ್ಣುಮುಚ್ಚಿ ಕೂತಿದ್ದ ಮಂಜಮ್ಮ ದಢಕ್ಕನೆ ಎಚ್ಚರವಾದಳು! ಯಾವ ಸದ್ದೂ ಇಲ್ಲ…..!

ಇದು ಮೇಷ್ಟು ನನಗೆ ಕೊಟ್ಟ ಸೂಚನೆ…

ಕಣ್ಣೊರೆಸಿಕೊಂಡಳು. ಲೈಟಾಕಿದಳು. ಮಗ ಕಣ್ಣಮುಂದೆ ಬಂದ. ತನಗೆಂದೂ ನೋವು ಮಾಡದವನು. ಶುಗರ್ರಿಂದ ತಲೆತಿರುಗಿ ಬಿದ್ದಾಗ ಅಂತ್ರೂಕೆ ಎತ್ತಿಕೊಂಡು ಶಿಮೊಗ್ಗಕ್ಕೆ ಒಯ್ದಿದ್ದ. ಮಂಡಿನೋವಿಗೆ ಏನೆಲ್ಲ ಆರೈಕೆಮಾಡಿದ. ನಾನೊಬ್ಬಳೆ ದುಡಿತೀನಿ ಎಂದು ಅವನೂ ನನ್ನಜತೆ ನಿಂತ್ಗಂದ. ಪಾಪ ಲಕ್ಷ್ಮಿ ಅವಳನ್ನು ನನ್ಯಾಕೆ ಕರೆತರಬೇಕಿತ್ತು…? ನನ್ನ ಸ್ವಾರ್ಥಕ್ಕಾ? ನಮ್ಮನೆ ಅಡುಗೆಮುಸುರೆ ಮಾಡ್ಕಂದಿರಕ್ಕಾ? ಈಗ ಬೇರೆಸೊಸೆ ಬಂದಮೇಲೆ ಇವಳಿಗೆ ಈ ಮನೆಯಲ್ಲಿ ಏನು ಜಾಗ? ನಿಧಾನಕ್ಕೆ ಲಕ್ಷ್ಮಿಯ ನಿಲುವು ಎದುರಿಗೆ ನಿಂತಂಗಾಗಿ ಕೊನೆಗೆ ಅವಳೇ ತಾನಾದಂತಾಯಿತು… ಅವಳ್ಯಾವಾಗ ತಾನಾದಳೊ ತಾನ್ಯಾವಾಗ ಅವಳಾದಳೊ ‘ಎನ್ನೊಳಗೆ ಅವಳುʼ ಎಂಬ ಹೊಸಹುಕಿ ಹುಟ್ಟಿದ್ದೇ ಅರೆ ಇನ್ನೊಂದು ವರಸೆಯಿಂದ ಸೊಸೆಯಾಗಬೇಕೆಂದು ಡಢಕ್ಕನೆದ್ದು ಲಾಡನ್ನು ಬಾಕ್ಸಿಗೆ ತುಂಬಿಟ್ಟು ಕದತೆಗೆದಳು.

ಎಂಟುಗಂಟೆಯಾಗಿತ್ತು. ಅಲ್ಲೆ ಸಮೀಪದಲ್ಲಿ ಬೈಕುನಿಲ್ಲಿಸಿ ಯಾರೊ ಬರುತ್ತಿದ್ದದ್ದು ಕಾಣಿಸಿತು. ಅಮ್ಮು ಶಿವು ಗಾಬರಿಯಿಂದ ಓಡೋಡಿಬಂದು ಮಂಜಮ್ಮನನ್ನು ತಬ್ಬಾಕಿಕೊಂಡು ಗೋಳೊ ಅಂದರು. ಕಾಲುಹಿಡಿದಿದ್ದ ಲಕ್ಷ್ಮಿಯನ್ನೆತ್ತಿ ಮಂಜಮ್ಮ ಕಣ್ಣೀರು ಸುರಿಸುತ್ತಾ ಎಲ್ಲರ ಮೈಸವರಿ ಸಮಾಧಾನಿಸುತ್ತಾ ಅಮ್ಮುವನ್ನೆತ್ತಿಕೊಂಡು ಮುದ್ದಾಡಿ ಲಕ್ಷ್ಮಿಯ ಕೈ ಬಿಗಿಹಿಡಿದುಕೊಂಡು ಹೊರಟಳು.

ಶಿವು ಸ್ಟಾರ್ಟ್ಮಾಡಿದ ಬೈಕಿಂದ ಬೆಳಕುಹುಟ್ಟಿ ಬೈಕುಗುಂಟ ಮುಂದೋಡಲು ಸಿದ್ಧವಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.