ಕಲೆಯೊಳಗೆ ವಿದ್ಯಾ ಕಲೆ

ಬುಧವಾರ, ಜೂನ್ 26, 2019
28 °C

ಕಲೆಯೊಳಗೆ ವಿದ್ಯಾ ಕಲೆ

Published:
Updated:
Prajavani

ಆ ಕಾಫಿ ಎಸ್ಟೇಟ್ ದಾರಿಯಲ್ಲಿ ಸಾಗಿದರೆ, ಎಸ್ಟೇಟ್ ಮಾಲೀಕರ ಮನೆ ಸಿಗುತ್ತದೆ. ವಿಶಾಲವಾದ ಮನೆಯ ಹಜಾರ ಪ್ರವೇಶಿಸಿದರೆ, ಅಂಗಳದ ಪ್ರತಿ ಜಾಗದಲ್ಲೂ ಕಲಾತ್ಮಕ ವಸ್ತುಗಳಿವೆ. ಶೋಕೇಸ್, ಗೋಡೆಗಳ ಮೇಲೆಲ್ಲ ವೈವಿಧ್ಯಮಯ ಕಲಾಕೃತಿಗಳು ಕಾಣುತ್ತವೆ. ಇಡೀ ಮನೆಯೇ ಆರ್ಟ್ ಗ್ಯಾಲರಿ ತರಹ ಕಾಣುತ್ತದೆ.

ಅದು ಹಾಸನ ಜಿಲ್ಲೆ ಆಲೂರು ತಾಲ್ಲೂಕಿನ ಬೆಳಗೋಡು ಗ್ರಾಮದ ಮೇಗಟವಳ್ಳಿ ಕಾಫಿ ಎಸ್ಟೇಟ್ ವಿದ್ಯಾ ಹರೀಶ್ ಅವರ ಮನೆ. ಆ ಮನೆಯೊಳಗಿನ ಕಲಾ ಗ್ಯಾಲರಿಯಲ್ಲಿ  ಕಲಾವಿದೆಯೂ ಇದ್ದಾರೆ. ಅವರೇ ವಿದ್ಯಾ ಹರೀಶ್.

ಮನೆಯಲ್ಲಿ ಸಕಲ ಸೌಲಭ್ಯಗಳೂ ಇದ್ದಾಗ, ಟೈಮ್‌ಪಾಸ್ ಮಾಡುವುದಕ್ಕೆ ಬೇರೆ ಬೇರೆ ವಿಧಾನಗಳಿರುತ್ತವೆ. ಆದರೆ, ವಿದ್ಯಾ ಅವರು, ‘ಕಲಾ ದಾರಿ’ಯನ್ನೇ ಆಯ್ದುಕೊಂಡಿದ್ದಾರೆ. ಕಲೆಯನ್ನು ಕಲಿಯುತ್ತಾ, ಅದನ್ನೇ ಪ್ರೀತಿಸುತ್ತಾ, ತಾನು ಕಲಿತದ್ದನ್ನು ಬೇರೆಯವರಿಗೂ ತರಬೇತಿ ನೀಡುತ್ತಿದ್ದಾರೆ.

ಏನೇನು ಕಲಾಕೃತಿಗಳಿವೆ

ಚೀನಿ ಪಿಂಗಾಣಿಯಲ್ಲಿ ರಚಿಸಿರುವ ಕೃತಕ ಬೋನ್ಸಾಯ್‌, ಅದರಲ್ಲಿನ ಕೊಂಬೆ, ಹೂವು, ಹೂವಿನ ಎಸಳು, ಹೂವಿನ ತೊಟ್ಟು, ಹೂವಿನ ಕುಸುರು, ಎಲೆ ಹೀಗೆ ಕಣ್ಣೆದುರು ಕುಂಡದಲ್ಲಿ ಹೂ ಅರಳಿ ನಿಂತಂತಿದೆ. ಆ ಹೂ ಕುಂಡದ ವಿನ್ಯಾಸ ಮತ್ತು ಅದಕ್ಕೆ ಹೊಂದಿಕೊಳ್ಳುವಂತೆ ಬಣ್ಣ ಲೇಪಿಸಿರುವುದನ್ನು ಕಂಡಾಗ, ಆ ಇಡೀ ಕಲಾಕೃತಿ ವಿದ್ಯಾ ಅವರ ಮನದೊಳಗಿನ ಭಾವದ ಬಿಂಬದಂತೆ ಕಾಣುತ್ತದೆ.

ಮನೆಯ ಅಂಗಳದಲ್ಲಿರುವ ಅಪರೂಪ ಎನಿಸುವ ಈ ಕೃತಕ ಬೋನ್ಸಾಯ್‌ ಕುರುಡು ಮನಸ್ಸನ್ನೂ ಕಣ್ತೆರೆಸುವಂತಿದೆ. ಚೈನೀಸ್ ಸೆರಾಮಿಕ್ ಆರ್ಟ್ ಇನ್ನೊಂದು ಆಕರ್ಷಣೆ. ವಿವಿಧ ನಮೂನೆಯ, ವಿವಿಧ ಗಾತ್ರದ ಮಡಿಕೆಗಳು, ಕುಡಿಕೆಗಳ ಮೇಲೆ ವಿವಿಧ ಸಂದೇಶಗಳನ್ನು ಸಾರುವ ವಿನೂತನ ನಮೂನೆಯಲ್ಲಿ ರಚಿಸಿರುವ ವರ್ಲಿ ಆರ್ಟ್ ಅಂದವನ್ನು ವರ್ಣಿಸಲು ಪದ ಸಾಲದು.


ವಿದ್ಯಾ ಹರೀಶ್

ವೈವಿಧ್ಯಮಯ ಕಲೆ

ವಿದ್ಯಾರವರ ಕೈಯಲ್ಲಿ ಅರಳಿರುವ ಕಲೆಗಳು ಸಿಲ್ವರ್ ಫಾಯಿಲ್ ವಾಲ್ ಆರ್ಟ್, ಕ್ಯಾಂಡಲ್ ಆರ್ಟ್, ಗ್ಲಾಸ್ ಪೇಂಟಿಂಗ್, ಮ್ಯೂರಲ್ ಆರ್ಟ್, ಪಿವಿಸಿ ಪೈಪ್ ಮೇಲೆ ರಚಿಸಿರುವ ಕಲೆ, ಸಿಮೆಂಟ್ ಕ್ಲಾತ್ ಪಾಟ್ಸ್, ಉಲ್ಲನ್ ಬಳಸಿ ಕ್ರೋಶ, ಬೂಟೀಸ್, ಬ್ಯಾಗ್, ಕ್ಯಾಪ್, ಟೆಕ್ಚ್ಸರ್ ವರ್ಕ್, ಕಾಫಿ ಗಿಡದಿಂದ ಕಲೆ, ಮದುವೆ ಸಮಾರಂಭಗಳಿಗೆ ತೆಂಗಿನಕಾಯಿ ಡಿಸೈನ್, ಸೀರೆಗಳಿಗೆ ಕುಚ್ಚು ಹಾಕುವುದು ಹೀಗೆಯೇ ಹತ್ತಾರು ಕಲೆಗಳನ್ನು ಮೈಗೂಡಿಸಿಕೊಂಡಿದ್ದಾರೆ ವಿದ್ಯಾ ಹರೀಶ್.

ಒಂದೊಂದು ತಿಂಗಳು ಬೇಕು

‘ಒಂದು ಬೋನ್ಸಾಯ್‌ ಮಾಡಲು ಕನಿಷ್ಟ ಒಂದು ತಿಂಗಳು ಬೇಕಾಗುತ್ತದೆ. ಪ್ರಾರಂಭದಲ್ಲಿ ಕೊನೆಗಳು ಮುರಿದು ಬೀಳುತ್ತಿದ್ದವು, ಕ್ರಮೇಣ ತಯಾರಿಕೆಯಲ್ಲಿ ಹದವನ್ನು ಕಂಡುಕೊಂಡಿದ್ದರಿಂದ ಈಗ ಸುಲಭವಾಗಿದೆ’ ಎನ್ನುವ ವಿದ್ಯಾ 12 ವರ್ಷಗಳಿಂದ ಈ ಕಲೆಗಳ ರಚನೆಯಲ್ಲಿ ನಿರತರಾಗಿದ್ದಾರೆ.

ಹಿಂದೆ ಖಾಸಗಿ ವಾಹಿನಿಯೊಂದರಲ್ಲಿ ಮೂಡಿಬರುತ್ತಿದ್ದ ಮಹಿಳಾ ಕಾರ್ಯಕ್ರಮ ಈ ಕಲೆಗೆ ಪ್ರೇರಣೆಯಂತೆ. ತಾಯಿ ಪುಷ್ಪ ರಾಜಶೇಖರ್ ಅವರೇ ಇವರಿಗೂ ಮಾರ್ಗದರ್ಶಿಯಾಗಿದ್ದಾರೆ. ಚಿತ್ರ ಕಲೆ, ಕಲಾಕೃತಿಗಳ ರಚನೆಯಲ್ಲಿ ಆಸಕ್ತಿ ಹೊಂದಿದ್ದ ಪುಷ್ಪಾ ಅವರು ಬುಟ್ಟಿ ನೇಯುವುದು, ರಂಗೋಲಿ ಬಿಡಿಸುವಂತಹ ಹವ್ಯಾಸಗಳನ್ನು ರೂಢಿಸಿಕೊಂಡಿದ್ದರು. ತಾಯಿಯಂತೆಯೇ ಮಗಳು ಐದು ಬಾಲ್ಯದಿಂದಲೇ ಚಿತ್ರಕಲೆ ರಚನೆಯ ಹವ್ಯಾಸ ಬೆಳೆಸಿಕೊಂಡಿದ್ದರು. ಈಗ ಅವರು ಎಲ್ಲರನ್ನು ಬೆರಗುಗೊಳಿಸುವಂತಹ ಕಲಾಕೃತಿಗಳನ್ನು ತಯಾರಿಸುತ್ತಿದ್ದಾರೆ.

ಮಹಿಳೆಯರು ಮನೆಕೆಲಸದಲ್ಲಿಯೇ ದಿನ ಕಳೆಯುವುದರ ಬದಲು ಒಂದಿಷ್ಟು ಉಪಯುಕ್ತ ಕಲೆಗಳನ್ನು ಮೈಗೂಡಿಸಿಕೊಂಡು ಹವ್ಯಾಸವಾಗಿಸಿಕೊಳ್ಳಬೇಕು. ಕಲೆ ಹವ್ಯಾಸವೂ ಹೌದು. ಆದಾಯವನ್ನೂ ತಂದುಕೊಡುತ್ತದೆ ಎಂಬುದು ವಿದ್ಯಾ ವಿಶ್ವಾಸ. ಅದಕ್ಕಾಗಿ ಒಂದಿಷ್ಟು ಮಹಿಳೆಯರಿಗೆ ತರಬೇತಿಯನ್ನು ಕೊಡುತ್ತಿದ್ದಾರೆ. ವಿದ್ಯಾ ಹರೀಶ್. ಸಂಪರ್ಕ ಸಂಖ್ಯೆ 9449452971.

‘ಆಂತೋರಿಯಂ’ ಹವ್ಯಾಸ

ಚಿತ್ರಕಲೆ ಜತೆಗೆ ಮನೆಯ ಅಂಗಳದಲ್ಲಿ ವಿವಿಧ ನಮೂನೆಯ ಆಂತೋರಿಯಂ ಗಿಡಗಳನ್ನು ಬೆಳೆಸಿದ್ದಾರೆ. ನೆರಳು ಪರದೆಯಡಿಯಲ್ಲಿ 20ಕ್ಕೂ ಹೆಚ್ಚಿನ ಬಣ್ಣದ ಆಂತೋರಿಯಂ ಬೆಳೆದಿರುವ ಇವರು ಸ್ಥಳೀಯವಾಗಿ ಮಾರುಕಟ್ಟೆಯನ್ನೂ ಕಂಡುಕೊಂಡಿದ್ದಾರೆ. 
ಸಕಲೇಶಪುರ ಆಲೂರು ಸಮೀಪ ಇರುವ ಕಲ್ಯಾಣ ಮಂಟಪಗಳಲ್ಲಿ ಹೂವಿನ ಅಲಂಕಾರಕ್ಕಾಗಿ ಇವರು ತೋಟದ ಆಂತೋರಿಯಂಗಳು ಬಳಕೆಯಾಗುತ್ತವೆ. ಪ್ರತಿ ಹೂವಿಗೆ ₹ 12 ರಂತೆ ಮಾರಾಟ ಮಾಡುತ್ತಾರೆ. ಒಂದು ಬಾರಿಗೆ 200-300 ಹೂಗಳನ್ನು ಮನೆಯ ಬಳಿಗೇ ಬಂದು ಕೊಂಡೊಯ್ಯುತ್ತಾರೆ. ಮಣ್ಣಿಲ್ಲದೇ ಬೆಳೆಯುವ ಬೆಳೆ ಆಂತೋರಿಯಂ ಅನ್ನು, ತೆಂಗಿನ ಸಿಪ್ಪೆ ಬಳಸಿ ಬೆಳೆಯುತ್ತಿದ್ದಾರೆ. ಅಂತೆಯೇ ಇತರೆ ಹೂಗಿಡಗಳನ್ನೂ ಬೆಳೆಸಿದ್ದು, ಸುಂದರ ಹೂತೋಟವನ್ನು ಆಸಕ್ತಿಯಿಂದ ನಿರ್ವಹಿಸುತ್ತಿದ್ದಾರೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !