ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮಿಷ್‌: ಆಮಿಷವಿಲ್ಲದ ಧರ್ಮ

Last Updated 22 ಫೆಬ್ರುವರಿ 2019, 19:46 IST
ಅಕ್ಷರ ಗಾತ್ರ

ಜಗತ್ತಿನಲ್ಲಿ ನೂರೆಂಟು ಧರ್ಮಗಳಿವೆ, ಸಾವಿರಾರು ಜೀವನ ಪದ್ಧತಿಗಳಿವೆ. ಪ್ರತಿಯೊಂದೂ ಒಂದಕ್ಕಿಂತ ಒಂದು ಭಿನ್ನ. ಒಂದೇ ಧರ್ಮಕ್ಕೆ ಸೇರಿದವರಲ್ಲೂ ಹಲವಾರು ವೈವಿಧ್ಯಮಯ ಜೀವನಶೈಲಿಗಳು, ಸೈದ್ಧಾಂತಿಕ ಭಿನ್ನಮತಗಳಿವೆ. ಕ್ರಿಶ್ಚಿಯನ್‌ ಮೂಲ ಹೊಂದಿದ್ದೂ ವಿಭಿನ್ನ ಜೀವನಶೈಲಿಯನ್ನು ರೂಪಿಸಿಕೊಂಡಿರುವ ಅಮಿಷ್‌ ಇಂತಹ ಒಂದು ಸಮುದಾಯ. ಅಮೆರಿಕ ಮತ್ತು ಕೆನಡಾದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಅಮಿಷ್‌ ಸಮುದಾಯ ಸರಳ ಬದುಕಿಗೆ ಹೆಸರಾದವರು. ಸ್ವಿಸ್‌–ಜರ್ಮನ್‌ ಮೂಲ ಸಂಪ್ರದಾಯಗಳನ್ನು ಅನುಸರಿಸುತ್ತಿರುವ ಈ ಸಮುದಾಯದವರುಆಧುನಿಕ ಸಮಾಜದ ಯಾವುದೇ ಸೌಲಭ್ಯಗಳನ್ನು ಬಳಸದೆ ಜೀವಿಸುವುದು ಇವರ ವೈಶಿಷ್ಟ್ಯ.

ಜಾಕೊಬ್‌ ಅಮ್ಮನ್‌ ಎಂಬಾತ 1693ರಲ್ಲಿ ಸ್ವಿಝರ್ಲಂಡ್‌ನಲ್ಲಿ ಮೊದಲ ಅಮಿಷ್‌ ಚರ್ಚ್‌ಅನ್ನು ಸ್ಥಾಪಿಸಿದ ಎನ್ನಲಾಗುತ್ತದೆ. ಅಮ್ಮನ್‌ ಅನುಯಾಯಿಗಳೇ ಅಮಿಷ್‌ ಜನರು. 19ನೇ ಶತಮಾನದ ಉತ್ತರಾರ್ಧದಲ್ಲಿ ಇವರಲ್ಲೂ ಹಳೇ ಪದ್ಧತಿಯ ಅಮಿಷ್‌ ಮತ್ತು ಮೆನ್ನೊನೈಟ್ಸ್‌ಎಂಬ ಎರಡು ಗುಂಪುಗಳಾದವು.

ಮೈಮುರಿದು ದುಡಿಯುವುದೇ ಇವರ ಜೀವನಶೈಲಿ. ಈಗಲೂ ಸಾಂಪ್ರದಾಯಕ ಕೃಷಿಪದ್ಧತಿಯನ್ನೇ ಅನುಸರಿಸುತ್ತಾರೆ. ಯಂತ್ರಗಳನ್ನು ಬಳಸುವುದಿಲ್ಲ. ಇವರ ಒಟ್ಟು ಜನಸಂಖ್ಯೆ 2.5 ಲಕ್ಷ ಮೀರುವುದಿಲ್ಲ. ಆದರೆ ಜನಸಂಖ್ಯೆಯ ಹೆಚ್ಚಳ ಅಮೆರಿಕದ ಸರಾಸರಿ ಜನಸಂಖ್ಯೆ ಹೆಚ್ಚಳಕ್ಕಿಂತ ತುಂಬ ಹೆಚ್ಚಾಗಿದೆ. ಪ್ರತಿ ದಂಪತಿಯೂ 6–7 ಮಕ್ಕಳನ್ನು ಹೊಂದಿರುತ್ತಾರೆ. 20ರಿಂದ 40 ಕುಟುಂಬಗಳಿಗೆ ಒಂದು ಚರ್ಚ್‌ ಇರುತ್ತದೆ. ಒಂದು ವಾರ ಯಾವುದಾದರೊಬ್ಬ ಸದಸ್ಯರ ಮನೆಯಲ್ಲಿ ಸಾಮೂಹಿಕ ಪ್ರಾರ್ಥನೆ ಮಾಡಿದರೆ, ಇನ್ನೊಂದು ವಾರ ಚರ್ಚ್‌ನಲ್ಲಿ ಸೇರುವುದು ಇವರ ಪದ್ಧತಿ. ವಿದ್ಯುತ್‌, ದೂರವಾಣಿ, ಮೋಟಾರ್‌ ವಾಹನಗಳನ್ನು ಬಳಸುವ ಬಗ್ಗೆ ಇವರಲ್ಲಿ ನಿರ್ಬಂಧಗಳಿವೆ. ಎಷ್ಟು ಬೇಕೋ ಅಷ್ಟೇ ಕೃಷಿ ಉತ್ಪಾದನೆ ನಡೆಸುವುದು ಇವರ ವೈಶಿಷ್ಟ್ಯ. ವಿಮಾ ಪಾಲಿಸಿಗಳನ್ನೂ ಇವರು ಖರೀದಿಸುವುದಿಲ್ಲ. ಹಳ್ಳಿ ಬದುಕು, ವಿನಯವಂತಿಕೆ ಮತ್ತು ದೈಹಿಕ ಶ್ರಮ ತಮಗೆ ದೇವರು ಕೊಟ್ಟಿರುವ ಆಜ್ಞೆ ಎಂದು ಇವರು ನಂಬುತ್ತಾರೆ.

ಅಮಿಷ್‌ ಸಮುದಾಯದ ಮಕ್ಕಳು ಉನ್ನತ ಶಿಕ್ಷಣಕ್ಕೆ ಹೋಗುವುದಿಲ್ಲ. ಒಂದು ಕೋಣೆಯ ಪ್ರಾಥಮಿಕ ಶಾಲೆಗಳು ಇವರ ವೈಶಿಷ್ಟ್ಯ. 12–13ನೇ ವಯಸ್ಸಿಗೆ ಶಾಲೆಯ ಓದು ನಿಲ್ಲಿಸುತ್ತಾರೆ. ಕೆಲವು ಮತ್ತೆರಡು ವರ್ಷಗಳ ಕಾಲ ವೃತ್ತಿತರಬೇತಿ ಪಡೆಯುವುದುಂಟು. ಇತ್ತೀಚೆಗೆ ಕೆಲವರು ನರ್ಸಿಂಗ್‌ ಕೋರ್ಸ್‌ ಮಾಡಿ ಸಮುದಾಯದ ಆರೋಗ್ಯಸೇವೆಯಲ್ಲಿ ತೊಡಗಿದ್ದಿದೆ. ಇತರ ಧರ್ಮದವರಿಂದ ಸಾಕಷ್ಟು ಅಂತರ ಕಾಯ್ದುಕೊಂಡು ತಮ್ಮ ಧರ್ಮವನ್ನು ಇವರು ಪಾಲಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT