ಚಿತ್ರಕಲಾ ಪ್ರದರ್ಶನ ನಾಳೆ ಮುಕ್ತಾಯ

7
ಕಲಾಪ

ಚಿತ್ರಕಲಾ ಪ್ರದರ್ಶನ ನಾಳೆ ಮುಕ್ತಾಯ

Published:
Updated:

ಪಶ್ಚಿಮ ಬಂಗಾಲದ ಚಿತ್ರಕಲಾವಿದರ ತಂಡ ನಗರದ ಕರ್ನಾಟಕ ಚಿತ್ರಕಲಾ ಪರಿಷತ್‌ನಲ್ಲಿ ಹಮ್ಮಿಕೊಂಡಿರುವ ಸಮೂಹ ಚಿತ್ರಕಲಾ ಪ್ರದರ್ಶನ ನ. 4ರಂದು (ಭಾನುವಾರ) ಕೊನೆಗೊಳ್ಳಲಿದೆ. ಆನಂದ ಮಂಡಲ್‌, ಅರಿಜಿತ್‌ ದಾಸ್‌, ಐವಿ ಮಂಡಲ್‌ ಮತ್ತು ಪ್ರಸನ್‌ಜಿತ್‌ ಸಾಹ ಅವರ ಕಲಾಕೃತಿಗಳು ಇಲ್ಲಿ ಪ್ರದರ್ಶನಗೊಳ್ಳುತ್ತಿವೆ.

ಇದುವರೆಗೂ ಏಕವ್ಯಕ್ತಿ ಪ್ರದರ್ಶನಗಳನ್ನು ಹಮ್ಮಿಕೊಂಡಿರುವ ಈ ಅನುಭವಿಗಳು ಬೆಂಗಳೂರಿನಲ್ಲಿ ಮೊದಲ ಬಾರಿಗೆ ಸಮೂಹ ಪ್ರದರ್ಶನ ನಡೆಸುತ್ತಿದೆ.

ಆನಂದ ಮಂಡಲ್‌ ಅವರ ಕಲಾಕೃತಿಗಳಲ್ಲಿ ಸ್ತ್ರೀಯ ವಿವಿಧ ಭಾವ ಭಂಗಿಗಳು ಮತ್ತು ವಿವಿಧ ರೂಪಗಳನ್ನು ಕಾಣಬಹುದು. ಹೆಣ್ಣಿನ ಮುಖದ ಎಡಭಾಗದಲ್ಲಿ ಇಳಿಬಿಟ್ಟ ಬಿರುಗೂದಲು ಅರ್ಧನಾರೀಶ್ವರರಲ್ಲಿನ ಪಾರ್ವತಿಯನ್ನು ನೆನಪಿಸುವಂತಿದೆ. ಆದರೆ ಅದಕ್ಕೆ ಅವರಿಟ್ಟ ಶೀರ್ಷಿಕೆ ‘ಭೈರವಿ’. ಆಕ್ರಿಲಿಕ್‌ ಬಣ್ಣಗಳಲ್ಲಿ ಕ್ಯಾನ್ವಾಸ್‌ನಲ್ಲಿ ಮೂಡಿಬಂದಿರುವ ಈ ಕಲಾಕೃತಿ ಇಡೀ ಸಭಾಂಗಣದ ಕಲಾಕೃತಿಗಳಲ್ಲಿ ಎದ್ದುತೋರುತ್ತದೆ.

ಅವರದ್ದೇ ಇನ್ನೊಂದು ಆಕ್ರಿಲಿಕ್‌ ಕಲಾಕೃತಿಯೂ ಇಬ್ಬರು ಹೆಣ್ಣು ಮಕ್ಕಳ ಎರಡು ಭಾವ, ಎರಡು ನೋಟಗಳನ್ನು ಕಟ್ಟಿಕೊಟ್ಟಿದೆ. ಮುನ್ನೆಲೆಯಲ್ಲಿ ಕಾಣುವ ಯುವತಿಯೂ ಹಿಂಬದಿಯವಳಂತೆಯೇ ಸೀರೆ ಇಟ್ಟಿದ್ದರೂ ಇಬ್ಬರ ಸೆರಗು ಮತ್ತು ಮುಖಾಲಂಕಾರ ಭಿನ್ನವಾಗಿದೆ. ಯುವತಿ ತನ್ನ ಸೆರಗನ್ನು ಭುಜದ ಮೇಲಿನಿಂದ ಬೆನ್ನಿನಲ್ಲಿ ಇಳಿಬಿಟ್ಟಿದ್ದರೆ ಹಣೆ ಬೋಳಾಗಿದೆ. ಕೂದಲ ಸುಕ್ಕನ್ನು ಕೈಯಿಂದಲೇ ಬಿಡಿಸುತ್ತಿರುವಂತೆ ಭಾಸವಾದರೂ ಅವಳಲ್ಲಿ ಅಷ್ಟಿಷ್ಟು ಆಧುನಿಕತೆ ಇಣುಕುತ್ತದೆ. ಆದರೆ ಬೋಳು ಹಣೆ, ಅವಳು ವಿಧವೆ ಇರಬಹುದೇ ಎಂಬ ಪ್ರಶ್ನೆಯನ್ನು ನೋಡುಗನ ಮುಂದಿಡುತ್ತದೆ. ಹಿಂಬದಿಯ ಮಹಿಳೆ ಸೆರಗನ್ನು ತಲೆತುಂಬಾ ಹೊದ್ದುಕೊಂಡು ಕಿವಿಯ ಬಳಿ ಹಿಡಿದುಕೊಂಡು ಜಾರದಂತೆ ಎಚ್ಚರ ವಹಿಸಿದ್ದಾಳೆ. ಹಣೆಯಲ್ಲಿ ದೊಡ್ಡ ಕುಂಕುಮದ ಬೊಟ್ಟು ಇದೆ.

ಅರಿಜಿತ್‌ ದಾಸ್‌ ಅವರ ಕಲಾಕೃತಿಯೊಂದು ಗಮನ ಸೆಳೆಯುತ್ತದೆ. ಆಕ್ರಿಲಿಕ್‌ನಲ್ಲಿ ಬಿಡಿಸಲಾಗಿರುವ ಕಲಾಕೃತಿ ಚದುರಂಗದಾಟದ ಕತೆ ಹೇಳುತ್ತದೆ. ಅವನ ತಲೆ ಮೇಲೆ ಚದುರಂಗದ ಕಣ ಕಾಣುತ್ತದೆ. ಕೈಯಲ್ಲಿ ಕುದುರೆ ಇದ್ದು, ಮುಖ ಮತ್ತು ಕೈಯಲ್ಲಿ ರಾಜ, ರಾಣಿ, ಪದಾತಿ, ಆನೆ, ಕುದುರೆಗಳ ನಕ್ಷೆಗಳು ತುಂಬಿಕೊಂಡಿವೆ. ಐವಿ ಮಂಡಲ್‌ ಅವರ ಕಲಾಕೃತಿಯೊಂದರಲ್ಲಿ ಟೋಪಿವಾಲಾನೊಬ್ಬನ ವಯೊಲಿನ್‌ ನುಡಿಸಾಣಿಕೆಯನ್ನು ಒಂದು ಬೆಕ್ಕು ಶ್ರದ್ಧೆಯಿಂದ ಆಲಿಸುತ್ತಿದೆ! ಬೆಕ್ಕು ಎಂದರೆ ಐವಿಗೆ ಇಷ್ಟವಿರಬೇಕು. ಅದಕ್ಕೆ ಸಾಕ್ಷಿಯೆಂಬಂತೆ ಮತ್ತೊಂದು ಕಲಾಕೃತಿಯೂ ಬೆಕ್ಕಿನದ್ದೇ. ಬಾಯಲ್ಲಿ ದೊಡ್ಡ ಮೀನನ್ನು ಕಚ್ಚಿಕೊಂಡು ಗುರಾಯಿಸುತ್ತಿರುವ ಬೆಕ್ಕಿನ ಚಿತ್ರಕ್ಕೆ ‘ಬೇಟೆ’ ಎಂಬ ಶೀರ್ಷಿಕೆ ಕೊಟ್ಟಿದ್ದಾರೆ.

ಪ್ರಸನ್‌ಜಿತ್‌ ಸಾಹ ಕೂಡಾ ಮಹಿಳೆಯನ್ನೇ ವಸ್ತುವಾಗಿಸಿಕೊಂಡಿದ್ದಾರ. ನಾಲ್ಕು ಹಕ್ಕಿಗಳಿಗೆ ಮುತ್ತಿಕ್ಕುವಂತೆ ಕಾಣುವ ಚಿತ್ರವೊಂದು ದಮಯಂತಿಯನ್ನು ನೆನಪಿಸುತ್ತದೆ. ವಾರಾಂತ್ಯಕ್ಕೆ ಮನಸ್ಸು ಉಲ್ಲಸಿತಗೊಳಿಸಲು ಈ ಚಿತ್ರಕಲಾ ಪ್ರದರ್ಶನಕ್ಕೆ ಭೇಟಿ ಕೊಡಬಹುದು. ‘ನಮ್ಮ ಕಲಾಕೃತಿಗಳು ನೋಡುಗರ ಮನಸ್ಸಿನಲ್ಲಿ ವಿಭಿನ್ನ ಕಲ್ಪನೆಗಳನ್ನು ಹುಟ್ಟುಹಾಕಿದರೆ ನಮ್ಮ ಶ್ರಮ ಸಾರ್ಥಕವಾದಂತೆ’ ಎಂಬುದು ಈ ಯುವಕರ ಅಭಿಪ್ರಾಯ.

ಸ್ಥಳ– ಕರ್ನಾಟಕ ಚಿತ್ರಕಲಾ ಪರಿಷತ್‌, ಕುಮಾರಕೃಪಾ ರಸ್ತೆ. ಬೆಳಿಗ್ಗೆ 10.30ರಿಂದ ರಾತ್ರಿ 7.30ರವರೆಗೆ ಪ್ರದರ್ಶನ ಇರುತ್ತದೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !