ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೊಂಬೆ ಹೇಳುತೈತೆ: ನಾನೇ ರಾಜಕುಮಾರ, ಆದ್ರೆ ಆ ಚೀನಾದವನು...

Last Updated 6 ಆಗಸ್ಟ್ 2022, 19:30 IST
ಅಕ್ಷರ ಗಾತ್ರ

ದೇಶದ ಬೊಂಬೆಗಳ ಮಾರುಕಟ್ಟೆಯಲ್ಲಿ ತೀವ್ರ ಸಂಚಲನ ಮೂಡಿದ್ದು, ಬೊಂಬೆಗಳ ರಫ್ತು ವಹಿವಾಟಿನಲ್ಲಿಯೂ ಭಾರಿ ಏರಿಕೆ ಆಗಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ದೇಶದ ಬೊಂಬೆಗಳ ಮಾರುಕಟ್ಟೆಯಲ್ಲಿ ಮಹತ್ವದ ಸ್ಥಾನ ಪಡೆದಿರುವ ರಾಜ್ಯದ ಚನ್ನಪಟ್ಟಣ ಮತ್ತು ಕಿನ್ನಾಳ ಈ ಬೆಳವಣಿಗೆಗೆ ಹೇಗೆ ಸ್ಪಂದಿಸಿವೆ? ಈ ಪ್ರಶ್ನೆಗೆ ಉತ್ತರವಾಗಿ ಬೊಂಬೆಗಳೇ ಹೇಳಿದ ಕಥೆಗಳನ್ನು ಕೇಳೋಣ ಬನ್ನಿ...

ಇನ್ನೂರು ವರ್ಷಗಳಿಂದ ರೂಪರೂಪಗಳನ್ನು ದಾಟಿ ಬಂದಿದ್ದೇನೆ, ನಾಮ ಕೋಟಿಗಳನ್ನು ಮೀಟಿ ಬಂದಿದ್ದೇನೆ. ಮೊದಮೊದಲು ಮಕ್ಕಳ ಕೈಯಲ್ಲಿ ಕೇವಲ ಆಟಿಕೆಯಾಗಿದ್ದೆ, ಜನಪದರ ಬದುಕು ಬಿಂಬಿಸುವ ಸಾಮಗ್ರಿಯಾಗಿದ್ದೆ. ನವರಾತ್ರಿ ಬಂದಾಗ ರಾಜ–ರಾಣಿ, ಆನೆ, ಕುದುರೆ, ಪೇದೆಯಾಗುತ್ತಿದ್ದೆ. ಕೃಷ್ಣ ಜನ್ಮಾಷ್ಟಮಿ ಕಾಲದಲ್ಲಿ ಕೊಳನೂದುವ ಕೃಷ್ಣನಾದೆ, ರಾಧೆ, ರುಕ್ಮಿಣಿಯ ರೂಪ ಪಡೆದೆ.

ಕಾಲಕಳೆದಂತೆ ಬದಲಾವಣೆಗಳ ಪರ್ವ ಕಂಡೆ. ಮಕ್ಕಳ ಕಲಿಕಾ ಉಪಕರಣವಾದೆ, ಗಣಿತ, ವಿಜ್ಞಾನದ ಮಾದರಿಯಾದೆ. ಉಡುಗೊರೆಯ ವಸ್ತುವಾದೆ, ಮನೆಯ ಆಲಂಕಾರಿಕ ಸಾಮಗ್ರಿಯಾದೆ, ಹೆಂಗಳರ ಕಿವಿಯೋಲೆ, ಕೊರಳ ಮಾಲೆಯಾದೆ. ನನ್ನ ಬಹುರೂಪ ಅಷ್ಟಕ್ಕೇ ನಿಲ್ಲುವುದಿಲ್ಲ. ಈಗೀಗ ಇನ್ನಷ್ಟು ಬದಲಾಗಿದ್ದೇನೆ, ವೈದ್ಯಕೀಯ ಉಪಕರಣವಾಗಿದ್ದೇನೆ. ಕ್ಯಾನ್ಸರ್‌ ರೋಗಿಗಳ ಗಂಟಲಲ್ಲಿ ಧ್ವನಿ ಪೆಟ್ಟಿಗೆಯಾಗಿದ್ದೇನೆ. ಮಧುಮೇಹಿಗಳ ಪಾದರಕ್ಷೆಯಾಗಿದ್ದೇನೆ, ಹಸ್ತರಕ್ಷೆಯಾಗಿದ್ದೇನೆ.

ನಾನು ಯಾರು ಎಂದು ಗೊತ್ತಾಯಿತಾ? ನಾನು ಕಲೆ ಸಂಸ್ಕೃತಿಯ ಭಾಗ. ಹೌದು ನಾನು ಬೇರಾರೂ ಅಲ್ಲ, ಚನ್ನಪಟ್ಟಣ ಗೊಂಬೆ...

ನಾನು ಇಲ್ಲಿಯವರೆಗೂ ಮೌನವಾಗಿಯೇ ಇದ್ದೆ, ಈಗ ಮೌನ ಮುರಿಯಬೇಕು ಅಂದುಕೊಂಡಿದ್ದೇನೆ. ನಿವ್ಹೇಳುವಂತಹ ಈ ಆಧುನಿಕ ಕಾಲದಲ್ಲಿ ಒಂದಷ್ಟು ವಿಚಾರ ಹಂಚಿಕೊಳ್ಳಬೇಕಿದೆ. ನಿಮ್ಮಂತೆ ನಾನೂ ಬದಲಾಗಿದ್ದೇನೆ ಎಂಬುದನ್ನು ಹೇಳಲೇಬೇಕಿದೆ. ನನ್ನ ಹಾದಿಯ ಮುಂದಿರುವ ಸವಾಲುಗಳನ್ನು ಬಿಚ್ಚಿಡಬೇಕಿದೆ. ದಯವಿಟ್ಟು ಕಿವಿಗೊಟ್ಟು ಕೇಳಿ.

ನಾನು ಚನ್ನಪಟ್ಟಣಕ್ಕೆ ಬರುವುದಕ್ಕೂ ಮೊದಲು ಪರ್ಷಿಯಾ ಕುಶಲಕರ್ಮಿಗಳ ಕೈಯೊಳಗಿದ್ದೆ. ನನ್ನದು ಜಪಾನಿ ವಿನ್ಯಾಸ ಎನ್ನುತ್ತಾರೆ ಇತಿಹಾಸವನ್ನು ಬರೆದವರು. ನನ್ನನ್ನು ಮನಸಾರೆ ಮೆಚ್ಚಿಕೊಂಡಿದ್ದ ಟಿಪ್ಪು ಸುಲ್ತಾನ್‌ ಪರ್ಷಿಯಾದಿಂದ ಕುಶಲಗಾರರನ್ನು ಕರೆತಂದು ಚನ್ನಪಟ್ಟಣದ ಕುಶಲರ್ಮಿಗಳಿಗೆ ತರಬೇತಿ ಕೊಡಿಸಿದ. ನಂತರ ನಾನು ಚನ್ನಪಟ್ಟಣ, ನೀಲಸಂದ್ರ, ಕರಿಯಪ್ಪನ ದೊಡ್ಡಿ, ಹೊಂಗನೂರು, ಕಲಾನಗರ ಗ್ರಾಮಗಳ ಜನರ ಬದುಕಿನ ಭಾಗವಾಗಿ ಬೆಳೆದೆ. ನಂತರ ಚನ್ನಪಟ್ಟಣವು ನನ್ನ ಹೆಸರಿನಿಂದಲೇ ಗುರುತಿಸಿಕೊಂಡಿದ್ದು ಇತಿಹಾಸ.

ಎಲ್ಲೆಂದರಲ್ಲಿ ಬೆಳೆಯುತ್ತಿದ್ದ ‘ಆಲೆ ಮರ’ ನನಗೆ ರೂಪ ನೀಡಿತು. ಅನ್ಯ ಉದ್ದೇಶಕ್ಕೆ ಬಳಕೆಯಾಗದ ಈ ಮೆದುವಾದ ಮರದ ತುಂಡೇ ನನ್ನ ದೇಹ, ನನ್ನ ಜೀವ. ಮರದಲ್ಲಿ ದೂಳಿನ ಘಾಟಿಲ್ಲ, ಕೆಟ್ಟ ವಾಸನೆಯಿಲ್ಲ, ಹಾಲಿನಂತೆ ಶುದ್ಧ. ನನ್ನ ಮನಸ್ಸಿನಂತೆಯೇ ಪರಿಶುದ್ಧ. ನನ್ನ ಜನ್ಮದಾತರಿಗೆ ನಾನೆಂದೂ ತೊಂದರೆ ಕೊಟ್ಟಿಲ್ಲ. ತಾಳೆ ಗರಿ, ಅರಗು, ತರಕಾರಿಗಳ ನೈಸರ್ಗಿಕ ವರ್ಣವೇ ನನ್ನ ಬಣ್ಣ. ಕಾಮನಬಿಲ್ಲಿಗಿಂತಲೂ ಹೆಚ್ಚು ಬಣ್ಣಗಳಿಂದ ನಾನು ರೂಪಿತ ಎನ್ನುವುದನ್ನು ಮತ್ತೆ ನಿಮಗೆ ಹೇಳವ ಅಗತ್ಯವಿಲ್ಲ ಅಲ್ಲವೇ?

ಕಡುಗೆಂಪು, ತಿಳಿ ನೀಲಿ, ಗಿಳಿ ಹಸಿರು, ನೇರಳೆ, ಹಳದಿ, ಕಿತ್ತಳೆ, ಕಪ್ಪು... ನೀವು ಬಣ್ಣದ ಹೆಸರು ಹೇಳಿ. ಅದೇ ಬಣ್ಣದಲ್ಲಿ ನಾನು ನಿಮ್ಮ ಮುಂದೆ ಇರುತ್ತೇನೆ. ನಿಸರ್ಗದ ಬಣ್ಣಗಳ ಒಡನಾಟ ನನ್ನದು, ಮಕ್ಕಳು ಆಟವಾಡುವಾಗ ನನ್ನನ್ನು ಬಾಯಿಗಿಟ್ಟರೂ ಅವರಿಗೆ ತೊಂದರೆಯಾಗದು. ಅವರೆಲ್ಲ ನನ್ನ ಪ್ರೀತಿಯ ಗೆಳೆಯರಲ್ಲವೇ?

ಮೈಸೂರು ಮಹಾರಾಜರ ಪ್ರಭಾವದಿಂದ ನಾನು ಹೊಸ ರೂಪ ಪಡೆದೆ. ದಸರಾ ಗೊಂಬೆಯಾಗಿ ಅರಮನೆಯ ಸುಖ ಅನುಭವಿಸಿದೆ. ರಾಜ–ರಾಣಿಯಾಗಿ ಸಿಂಹಾಸನವೇರಿದೆ. ಜಂಬೂಸವಾರಿಯ ಪ್ರತಿರೂಪವಾದೆ. ಕೇವಲ ಆಟಿಕೆಯಾಗಿದ್ದ ನನಗೆ ದೊಡ್ಡ ಸ್ಥಾನವೇ ಸಿಕ್ಕಿತು. ಇನ್ನೇನು ನವರಾತ್ರಿ ಬರುತ್ತಿದೆ, ಮನೆಮನೆಯಲ್ಲೂ ನನ್ನ ವೈಭವ ಗರಿಗೆದರುವ ಕಾಲವಿದು.

ಬದಲಾವಣೆ ಜಗದ ನಿಯಮ ಎಂಬಂತೆ ನನ್ನ ಜನನದ ಸ್ವರೂಪವೂ ಬದಲಾಗಿದೆ. ಮೊದಮೊದಲು ಸಹಜ ಹೆರಿಗೆಗಳ ಮೂಲಕ (ಕೈಯಂತ್ರ – ಪಟ್ರಿ) ಜನ್ಮ ಪಡೆಯುತ್ತಿದ್ದ ನಾನೀಗ ಅತ್ಯಾಧುನಿಕ ಲೇತ್‌, ಟರ್ನರ್‌ನಲ್ಲಿ ಅರಳುತ್ತಿದ್ದೇನೆ. ಆದರೂ ನೀಲಸಂದ್ರ ಗ್ರಾಮದ 60 ಕುಟುಂಬಗಳು ಈಗಲೂ ಪಟ್ರಿಯಿಂದಲೇ ನನಗೆ ಜನ್ಮ ಕೊಡುತ್ತಿದ್ದಾರೆ.

ನಾನು 25ಕ್ಕೂ ಹೆಚ್ಚು ದೇಶಗಳಿಗೆ ರಫ್ತಾಗುತ್ತೇನೆ, 15 ಎಕರೆ ಭೂಮಿಯಲ್ಲಿ ಚನ್ನಪಟ್ಟಣ ಕ್ರಾಫ್ಟ್‌ ಪಾರ್ಕ್‌ ಸಹ ತಲೆ ಎತ್ತಿದೆ. ಹತ್ತಾರು ಕರಕುಶಲ ಕಂಪನಿಗಳು ಅಲ್ಲಿ ವಹಿವಾಟು ನಡೆಸುತ್ತಿವೆ. ಬೆಂಗಳೂರಿನಿಂದ ಮೈಸೂರಿನವರೆಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ನನ್ನನ್ನು ಮಾರಾಟಮಾಡುವ ನೂರಾರು ಅಂಗಡಿಗಳಿವೆ, ರೈಲುನಿಲ್ದಾಣ, ವಿಮಾನನಿಲ್ದಾಣದಲ್ಲೂ ನನ್ನನ್ನು ಗಡಿಗಳಾಚೆಗೆ ಕಳಿಸಿಕೊಡುವ ಮಳಿಗೆಗಳಿವೆ. ಆದರೆ, ನನ್ನ ಪ್ರಶ್ನೆಗೆ ಉತ್ತರ ಕೊಡಿ, ಯಾರು, ಯಾರು ಕೇಳುತ್ತಾರೋ ಅವರ ಬಳಿ ಕಳುಹಿಸಿಕೊಡಲು ನನ್ನ ಪ್ರತಿರೂಪರನ್ನು ಸೃಷ್ಟಿಸಿಕೊಡುವ ಜನ ಚನ್ನಪಟ್ಟಣದಲ್ಲಿ ಎಲ್ಲಿದ್ದಾರೆ?

ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ‘ಮನ್‌ ಕಿ ಬಾತ್‌’ನಲ್ಲಿ ನನ್ನನ್ನು ಕೊಂಡಾಡಿದ ನಂತರ ಜನರ ಆಸಕ್ತಿ ನನ್ನತ್ತ ಹೆಚ್ಚು ಹೊರಳಿದೆ. ವೋಕಲ್‌ ಫಾರ್‌ ಲೋಕಲ್‌ ಟಾಯ್‌, ಟೇಕ್‌ ಅಪ್‌ ಫಾರ್‌ ಟಾಯ್ಸ್‌‌, ಲೆಟ್ ಅಸ್‌ ಮೇಕ್‌ ಟಾಯ್ಸ್‌ ಟುಗೆದರ್‌ (ಸ್ಥಳೀಯ ಗೊಂಬೆಗಳಿಗೆ ಧ್ವನಿಯಾಗೋಣ, ಗೊಂಬೆಗಳ ಜೊತೆ ಸಾಗೋಣ, ಒಟ್ಟಾಗಿ ಎಲ್ಲರೂ ಗೊಂಬೆ ತಯಾರಿಸೋಣ) ಎಂದೆಲ್ಲಾ ಪದಪುಂಜ ಉದುರಿಸಿದ್ದಾರೆ ಪ್ರಧಾನಿ. ಆದರೆ ವಾಸ್ತವದ ವಿಚಾರ ಹೇಳ್ತೀನಿ ಕೇಳಿ. ನನ್ನನ್ನು ವಿದೇಶಗಳಿಗೆ ಕಳಿಸುವಷ್ಟು ನನ್ನ ಪ್ರತಿರೂಪಗಳ ಜನನ ಆಗುತ್ತಿಲ್ಲ. ಹೀಗಾಗಿ ಬಹುತೇಕ ಅಂಗಡಿಗಳಲ್ಲಿ ಶೇ 80ರಷ್ಟು ಚೀನಾ ಗೊಂಬೆ, ಆಟಿಕೆಗಳೇ ತುಳುಕುತ್ತಿವೆ. ನನ್ನ ವಿನ್ಯಾಸವನ್ನೇ ಹೋಲುವ, ನನ್ನ ಬಣ್ಣವನ್ನೇ ಮರೆಮಾಚುವ, ನನ್ನಂತೆಯೇ ಕಾಣುವ ಚೀನಿ ಗೊಂಬೆ ನನ್ನನ್ನು ತುಳಿಯುತ್ತಿದೆ.

ಪ್ರಧಾನಿಯವರೇ, ನಿಮ್ಮ ಭಾಷಣ ಖಂಡಿತಾ ಚೆನ್ನಾಗಿದೆ. ನಿಮ್ಮ ಮಾತು ಕೇಳಿ ನಾನೂ ಖುಷಿ ಪಟ್ಟಿದ್ದೇನೆ. ಆದರೆ ನನ್ನ ಉಳಿವಿಗಾಗಿ ಚೀನಿ ಗೊಂಬೆಯನ್ನು ನಿಷೇಧಿಸಲು ನಿಮಗೆ ಸಾಧ್ಯವಿದೆಯೇ? ಚೀನಿ ಗೊಂಬೆಗೆ ನನಗಿಂತಲೂ ಬೆಲೆ ಕಡಿಮೆ ಇದ್ದು ಜನರು ಅದನ್ನೇ ಖರೀದಿಸುತ್ತಿದ್ದಾರೆ. ಅದು ನನ್ನಷ್ಟು ಮೆದುವಾಗಿಲ್ಲ, ಹಿತವಾಗಿಲ್ಲ, ನೈಸರ್ಗಿಕವಾಗಿಲ್ಲ, ಪರಿಸರ ಸ್ನೇಹಿಯಾಗಿಲ್ಲ.

ರಾಸಾಯನಿಕ ಬಣ್ಣವನ್ನೇ ಹೊದ್ದು, ಮೆದ್ದುಕೊಂಡಿದ್ದರೂ ಚೀನಿ ಗೊಂಬೆಯತ್ತ ಏಕಷ್ಟು ಆಕರ್ಷಣೆ? ಪುಟಾಣಿ ಮಕ್ಕಳ ಆರೋಗ್ಯ ಕಾಪಾಡುವವರು ಯಾರು?

ನನಗೆ ಮೋಸ ಮಾಡುವವರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ನನ್ನ ಹೆಸರಿನಲ್ಲಿ ನನ್ನ ಶತ್ರುವನ್ನೇ ಮಾರಾಟ ಮಾಡುತ್ತಿದ್ದಾರೆ. ಹತ್ತು ವರ್ಷಗಳ ಹಿಂದೆ 15 ಸಾವಿರ ಕುಶಲಕರ್ಮಿಗಳು ಚನ್ನಪಟ್ಟಣದಲ್ಲಿ ಇದ್ದರು. 1,500 ತಯಾರಿಕಾ ಘಟಕಗಳಿದ್ದವು. ಆದರೀಗ ಕುಶಲಕರ್ಮಿಗಳ ಸಂಖ್ಯೆ ನಾಲ್ಕು ಸಾವಿರಕ್ಕಿಳಿದಿದೆ. ಘಟಕಗಳ ಸಂಖ್ಯೆ 500ಕ್ಕಿಳಿದಿದೆ. ಅಯ್ಯೋ, ಕೋವಿಡ್‌ ನಂತರ ಕೆಲಸಬಿಟ್ಟವರು ಮತ್ತೆ ಹಿಂದಿರುಗಿ ಬರಲೇ ಇಲ್ಲವಲ್ಲ? ಬೇಡಿಕೆ ಇದೆ, ಲಾಭ ಇದೆ, ಆದರೂ ಏಕಿಷ್ಟು ತಾತ್ಸಾರ? ದಿನಕ್ಕೆ ₹ 1,200 ದುಡಿಯವಷ್ಟು ತಾಕತ್ತು ಒಬ್ಬ ಕುಶಲಕರ್ಮಿಗಿದೆ. ಆದರೂ ಅವರು ಬೆಂಗಳೂರಿನಲ್ಲಿ ಆಟೊ ಓಡಿಸುತ್ತಿರುವುದನ್ನು, ಗಾರ್ಮೆಂಟ್‌ ಕಾರ್ಖಾನೆಯಲ್ಲಿ ಬಟ್ಟೆ ಹೊಲಿಯುತ್ತಿರುವುದನ್ನು ನೋಡಿದರೆ ನನಗೆ ನೋವಾಗುತ್ತದೆ.

ಕರ್ನಾಟಕ ರಾಜ್ಯ ಕರಕುಶಲ ಅಭಿವೃದ್ಧಿ ನಿಗಮದಿಂದ (ಕೆಎಚ್‌ಡಿಸಿ) ನನ್ನೂರಿನ ಕುಶಲಕರ್ಮಿಗಳಿಗೆ ಸಿಕ್ಕಿದ್ದೇನು? ಕಾವೇರಿ ಮಾರಾಟ ಮಳಿಗೆಗಳು ನೆಪಕ್ಕಿವೆ. ಹೆದ್ದಾರಿ ಬದಿಯ ಅಂಗಡಿಗಳಿಗಿಂತಲೂ ಕಡಿಮೆ ಬೆಲೆ ನಿಗದಿ ಮಾಡಿರುವುದು ನನ್ನ ತಯಾರಕಲ್ಲಿ ನೋವುಂಟು ಮಾಡಿದೆ. ಈ ಅಧಿಕಾರಿಗಳು ಮಳಿಗೆಗಳಿಗೆ ನೇರವಾಗಿ ನನ್ನನ್ನು ಖರೀದಿಸುವುದಿಲ್ಲ, ಮಧ್ಯವರ್ತಿಗಳನ್ನು ನೇಮಿಸಿಕೊಂಡಿದ್ದಾರೆ. ಕಮಿಷನ್‌ ದಂಧೆ ಮಾಡಲು ನಿಮಗೆ ನಾಚಿಕೆಯಾಗುವುದಿಲ್ಲವೇ?

ಚನ್ನಪಟ್ಟಣದ ಹೃದಯ ಭಾಗದಲ್ಲಿರುವ ಕರಕುಶಲ ವಸ್ತುಗಳ ತರಬೇತಿ ಕೇಂದ್ರ ಪಾಳು ಬಿದ್ದಿದೆ. ಯಂತ್ರಗಳು ತುಕ್ಕು ಹಿಡಿಯುತ್ತಿವೆ. ಹೀಗಿರುವಾಗ ಹೊಸ ಹುಡುಗರು ಕುಶಲಗಾರಿಕೆಯತ್ತ ಆಸಕ್ತಿ ಬೆಳೆಸಿಕೊಳ್ಳುವುದಾದರೂ ಹೇಗೆ? ಮೊದಲು ನನ್ನ ತಯಾರಿಕೆ ಮನೆಯ ಉದ್ಯೋಗವಾಗಿತ್ತು. ಮನೆ ಮಕ್ಕಳೆಲ್ಲರೂ ನನ್ನ ತಯಾರಿಕೆಯಲ್ಲಿ ತೊಡಗುತ್ತಿದ್ದರು. ಶಾಲೆಯಿಂದ ಬಂದವರೇ ನನ್ನ ಒಡನಾಟ ಬೆಳೆಸಿಕೊಳ್ಳುತ್ತಿದ್ದರು. ಈಗ ಮಕ್ಕಳು ನನ್ನ ತಯಾರಿಸಿದರೆ ಬಾಲಕಾರ್ಮಿಕ ತಡೆ ಕಾನೂನಿನಡಿ ಕೇಸ್‌ ಹಾಕ್ತಾರೆ.

‘ಚನ್ನಪಟ್ಟಣದ ಬೊಂಬೆ ಸಂಸ್ಕೃತಿಗೆ ಪುನಶ್ಚೇತನ ನೀಡಲು ಶಿಕ್ಷಣದಲ್ಲಿ ಕರಕುಶಲ ಕಲೆಯನ್ನು ಪಠ್ಯವಾಗಿ ಅಳವಡಿಸಬೇಕು’ ಎಂದು ನನ್ನ ಪ್ರೀತಿಯ ಕುಶಲಕರ್ಮಿ ಬಿ.ವೆಂಕಟೇಶ್‌ ಹೇಳುತ್ತಲೇ ಇದ್ದಾರೆ. ಆದರೆ, ಸರ್ಕಾರ ಕೇಳಿಸಿಕೊಳ್ಳುತ್ತಲೇ ಇಲ್ಲವಲ್ಲ. ಒಂದಂತೂ ನಿಜ, ನಾನು ಎಂದಿಗೂ ಸಾಯುವುದಿಲ್ಲ. ಸದಾ ನಿಮಗಾಗಿ, ನಿಮ್ಮ ಜೊತೆಯಲ್ಲೇ ಇರುತ್ತೇನೆ. ನಿಮ್ಮ ಸಂಸ್ಕೃತಿಯನ್ನು ಪೊರೆಯುತ್ತೇನೆ. ನಾನು ಡಾ.ರಾಜ್‌ಕುಮಾರ್‌ ಅವರ ಕೈಯೊಳಗಾಡಿದ ‘ಕಸ್ತೂರಿ ನಿವಾಸ’ದ ಗೊಂಬೆ. ನಾನೆಂದಿಗೂ ತಲೆ ಬಾಗಿಸಲಾರೆ. ಆದರೂ ಈ ಹಾಡನ್ನು ನೆನಪಿಸಿಕೊಳ್ಳುತ್ತಾ ನನ್ನ ಗೋಳಿನತ್ತಲೂ ಕೊಂಚ ಗಮನ ಕೊಡಿ, ಪ್ಲೀಸ್‌ ಎಂದು ಬೇಡುತ್ತೇನೆ!

ಏನೇ ಬರಲಿ ಯಾರಿಗೂ ಎಂದು
ತಲೆಯ ಬಾಗದು
ಎಂದಿಗೂ ನಾನು ಹೀಗೆ ಇರುವೆ ಎಂದು ನಗುವುದು,
ಹೀಗೆ ನಗುತಲಿರುವುದು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT