ಗುರುವಾರ , ಡಿಸೆಂಬರ್ 12, 2019
24 °C

ಹದ್ದಿನ ಬಾಯಲ್ಲಿ ಇಲಿ

Published:
Updated:

ಇತ್ತೀಚೆಗೊಂದು ಮುಂಜಾನೆ ಕಪ್ಪು ಭುಜದ ಕೈಟ್  ಆಗಷ್ಟೇ ಬೆಳಗಿನ ಆಹಾರವಾಗಿ ಕಚ್ಚಿ ಹಿಡಿದಿದ್ದ ಇಲಿಯೊಂದಿಗೆ ಕೆಂಗೇರಿ ಬಳಿಯ ಹುಣಿಸೆ ಮರದ ಮೇಲೆ ಹಾರಿ ಬಂದು ಕುಳಿತು ಬೇಟೆಯನ್ನು ‘ಗುಳುಂ’ ಮಾಡುತ್ತಿದ್ದು ಅದರ ಉದ್ದನೆಯ ಬಾಲವಷ್ಟೇ ಇನ್ನೂ ಉಳಿದಿ
ರುವ ದೃಶ್ಯವನ್ನು ಕ್ಯಾಮೆರಾದಲ್ಲಿ ಸೆರೆಹಿಡಿದವರು, ಮಂಜುನಾಥ ನಗರ ವಾಸಿ, ಹನಿವೆಲ್ ಟೆಕ್ನಾಲಜಿ ಸಲ್ಯೂಶನ್ಸ್ ಲ್ಯಾಬ್ ಸಂಸ್ಥೆಯ ಇಂಜಿನಿಯರ್ ಆಗಿರುವ ಆದರ್ಶ್.

ಎಸ್.ಹೆಚ್. ಆರು ವರ್ಷಗಳಿಂದ ವನ್ಯಜೀವಿ,ಪಕ್ಷಿ ಛಾಯಾಗ್ರಹಣದಲ್ಲಿ ಹವ್ಯಾಸವನ್ನು ಬೆಳಸಿಕೊಂಡಿರುವ ಅವರು ಇಲ್ಲಿ ಬಳಸಿದ ಕ್ಯಾಮೆರಾ , ಕೆನಾನ್ 1 ಡಿ, ಮಾರ್ಕ್ III, ಜೊತೆಗೆ 150 – 600 ಎಂ.ಎಂ. ಜೂಮ್ ಲೆನ್ಸ್. ಎಕಪೋಶರ್ ವಿವರ ಇಂತಿವೆ: ಅತಿ ದೂರದ ದೃಶ್ಯವಾದ್ದರಿಂದ, 600 ಎಂ.ಎಂ.ಜೂಮ್ ಫೋಕಲ್ ಲೆಂಗ್ತ್ ಲೆನ್ಸ್ ನಲ್ಲಿ, ಅಪರ್ಚರ್ ಎಫ್ 8, ಶಟರ್ ವೇಗ 1/ 2500 ಸೆಕೆಂಡ್, ಐ.ಎಸ್.ಒ 640. ಟ್ರೈಪಾಡ್, ಪ್ಲಾಶ್ ಬಳಸಿಲ್ಲ.

ಚಿತ್ರದ ತಾಂತ್ರಿಕ, ಕಲಾತ್ಮಕ ಅಂಶಗಳು:

l ಪಕ್ಷಿಗಳು ಚಲನೆಯಲ್ಲಿರುವಾಗ ಹೆಚ್ಚು ಶಟರ್ ವೇಗವನ್ನು ಅಳವಡಿಸಿ ಕೊಳ್ಳುವುದು ಅನಿವಾರ್ಯ. ಎಕ್ಸ್‌ಪೋಷರ್‌ನ ಇನ್ನಿತರ ಮುಖ್ಯ ಅಂಶಗಳಾದ ಅಪಾರ್ಚರ್ ಮತ್ತು ಐ.ಎಸ್.ಒ. ಸೆನ್ಸಿಟಿವಿಟಿಯನ್ನು ಹೊಂದಿಸಿಕೊಳ್ಳುವಾಗ ಮೊದಲು ಅಪರ್ಚರ್ ನ ಕಡೆ ಗಮನವಿಡುವುದು ಕೂಡಾ ಅವಶ್ಯಕ. ಅಂದರೆ, ಮುಖ್ಯವಸ್ತುವಿನ ಫೋಕಸ್ ಆಗಲೇಬೇಕಾದ ಅಂತರ ಎಷ್ಟು ಎಂಬುದು. ದೊಡ್ಡಳತೆಯ ಜೂಮ್ ಅಳವಡಿಸಿಕೊಂಡಾಗ ಅಪರ್ಚರ್ ದೊಡ್ಡದಾದಷ್ಟೂ ( ಅಂದರೆ ಅದರ ಕಿಂಡಿ ಹಿಗ್ಗಿದಷ್ಟೂ) ದೂರದ ವಸ್ತುವಿನ “ಫೋಕಸ್ಸಿಂಗ್ ರೇಂಜ್” ಕ್ಷೀಣಿಸಿ ಕೇವಲ ಮುಖವಷ್ಟೇ ‘ಕ್ರಿಸ್ಪ್’ ಆಗಿ ಇತರ ರೆಕ್ಕೆಯ ಭಾಗ ಔಟ್ ಆಫ್ ಫೋಕಸ್ ಆಗಿಬಿಡುವ ಅಪಾಯ ತಪಿದ್ದಲ್ಲ.

ಬದಲಾಗಿ ಅಪರ್ಚರ್ ಕಿರಿದಾದರೆ, ಎಲ್ಲವೂ ಸಾಕಷ್ಟು ಪೋಕಸ್ ಆಗಬಹುದಾದರೂ ಚಿತ್ರಣದ ಪ್ರಭೆ ಕ್ಷೀಣಿಸಿಬಿಡುವುದಷ್ಟೆ. ಪಕ್ಷಿಯ ಪೂರ್ತಿಭಾಗ, ಕೊಕ್ಕು ಮತ್ತು ಇಲಿಯ ಉಳಿದ ಬಾಲ ಎಲ್ಲವೂ ಫೋಕಸ್ ಆಗಲು ಮಧ್ಯ ಅಳತೆಯ ಅಪರ್ಚರ್ ಎಫ್ 8 ಇಟ್ಟಿರುವುದು ಸರಿಯಾಗಿದೆ.ಮೂರನೆಯ ಅಂಶ, ಐ.ಎಸ್.ಒ. ಒಟ್ಟಾರೆ ಬೆಳಕಿನ ಸಂದರ್ಭಕ್ಕೆ ಸರಿ ತೂಗಿಸಲೇಬೇಕಾದ ‘ಎಕ್ಸ್ ಪೋಷರ್’ ಕಡಿಮೆಯೂ ಆಗಬಾರದು, ಅತಿ ಹೆಚ್ಚೂ ಆಗ
ಬಾರದು. ಈ ಚೌಕಟ್ಟಿನಲ್ಲಿ ಅದೂ ಸರಿಹೊಂದಿರುವುದ
ರಿಂದ, ಮುಖ್ಯವಸ್ತು, ಹಿನ್ನೆಲೆಯ ನೀಲಾಕಾಶ ಮೂಡಿ
ಬಂದಿದೆ. ಛಾಯಾಗ್ರಾಹಕರ ತಾಂತ್ರಿಕ ಪರಿಣಿತಿ ಇಲ್ಲಿ ಪ್ರಶಂಸನೀಯ.

l ರೆಡ್ ಐರಿಷ್ ಈ ಪಕ್ಷಿಯ ವೈಶಿಷ್ಟ್ಯ. ಹದ್ದಿನ ಜಾತಿಗೆ ಸೇರಿದ್ದರೂ ಈ ಪಕ್ಷಿ ಅದರದ್ದೇ ಆದ ಸೌಂದರ್ಯ ಹೊಂದಿದೆ. ನೋಡುಗನ ಕಣ್ಣಿಗೆ ಆಕರ್ಷಕವಾಗಿ ಕಾಣಿಸುವುದೂ, ಒಂದು ವಿಶೇಷವೇ. ಕಾರಣ, ಅದರ ಮೈಬಣ್ಣದ ತಾಜಾತನ, ಉಬ್ಬಿದ ಭುಜದಂತಿರುವ ಕಪ್ಪು ರೆಕ್ಕೆಯ ಮಾಟ, ಗರುಡನನ್ನು ಹೋಲುವ ಕೊಕ್ಕು ಮತ್ತು ಕೆಂಗಣ್ಣು. ಎಲ್ಲ ಅಂಶಗಳನ್ನೂ ಸುಂದರವಾಗಿ ಈ ಚೌಕಟ್ಟಿನಲ್ಲಿ ಸೆರೆಹಿಡಿದು, ಬೇಟೆಯನ್ನು ನುಂಗುತ್ತಿರುವ ಕೊಕ್ಕಿನ ಚಲನೆಯನ್ನೂ ತೋರ್ಪಡಿಸಿರುವುದು, ಚಿತ್ರದ ಭಾವನಾತ್ಮಕ ಗುಣವಾದ ಜೀವಂತಿಕೆಯನ್ನು ಹೆಚ್ಚಿಸಿದೆ.

l ದೂರದಿಂದ ಹಾರಿ ಬಂದು ಮರವೊಂದರ ಎತ್ತರದ ರೆಂಬೆಯ ಮೇಲ್ತುದಿ ಏರಿ, ಹಿಡಿದು ತಂದ ಬೇಟೆಯನ್ನು ಹಾಯಾಗಿ ಸ್ವಾದಿಸುವ ಈ ಹದ್ದಿನ ಸಹಜ ಜೀವನ ಕ್ರಮವನ್ನು ಕಣ್ಮನಗಳಿಗೆ ನಾಟಿಸುವಲ್ಲಿ ಕಲಾತ್ಮಕವಾದ ಮತ್ತೆ ಕೆಲವು ಗುಣಗಳು ಎಂದರೆ, ಚಿತ್ರದ ಪ್ರಭಾವ (ಇಂಪ್ಯಾಕ್ಟ್), ವರ್ಣ ಹಾಗೂ ವಸ್ತುಗಳೆಲ್ಲದರ ಸಮತೋಲ ಮತ್ತು ಚೈತನ್ಯ ಪೂರಿತ (ವೈಟ್ಯಾಲಿಟಿ) ಭಾವ ಸ್ಪಂದನೆ. ಪ್ರಾರಂಭಿಕ ಛಾಯಾಗ್ರಾಹಕರಿಗೆ ಇದೊಂದು ಮಾರ್ಗಸೂಚಿಯೂ (ಗೈಡ್) ಆಗ ಬಲ್ಲದು ಕೂಡ.

ಬೆಂಗಳೂರಿನ ಬದುಕನ್ನು ಬಿಂಬಿಸುವ ಛಾಯಾಚಿತ್ರಗಳನ್ನು ನಿಮ್ಮ ಮೊಬೈಲ್ ನಂಬರ್ ನ್ನೂ ನಮೂದಿಸಿ ‘ಚೌಕಟ್ಟು’ ಅಂಕಣಕ್ಕೆ ನೀವೂ ಕಳುಹಿಸಬಹುದು. ಗುಣಮಟ್ಟದ ಚಿತ್ರವೊಂದನ್ನು ಆಯ್ಕೆ ಮಾಡಿ, ಅನುಭವಿಗಳ ವಿಶ್ಲೇಷಣೆಯೊಂದಿಗೆ ಪ್ರಕಟಿಸಲಾಗುವುದು.
ಇಮೇಲ್: metropv@prajavani.co.in

ಪ್ರತಿಕ್ರಿಯಿಸಿ (+)