ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಾಮಂದಿರ ಕಲಾಶಾಲೆಗೆ 100ರ ಸಂಭ್ರಮ

Last Updated 24 ಆಗಸ್ಟ್ 2019, 19:30 IST
ಅಕ್ಷರ ಗಾತ್ರ

ಅದು 1919ನೇ ಇಸವಿ. ಅ.ನ. ಸುಬ್ಬರಾವ್ ಅವರು ಬೆಂಗಳೂರಿನ ಬಿಷಪ್‌ ಕಾಟನ್‌ ಸ್ಕೂಲ್‍ನಲ್ಲಿ ಚಿತ್ರಕಲಾ ಉಪಾಧ್ಯಾಯರಾಗಿದ್ದ ಸಮಯ. ಅಲ್ಲಿ ವಿದ್ಯಾರ್ಥಿಗಳಿಗೆ ಚಿತ್ರಕಲಾ ಶಿಕ್ಷಣಕ್ಕೆ ಹೆಚ್ಚಿನ ಅವಕಾಶ ಸಿಗುತ್ತಿರಲಿಲ್ಲ. ಇದರಿಂದ ಅವರೊಳಗಿನ ಕಲಾವಿದ ತಳಮಳಗೊಂಡಿದ್ದ.

ಆಗ ಅವರು ನೇರವಾಗಿ ಈ ಅಳಲು ತೋಡಿಕೊಂಡಿದ್ದು ಸರ್‌ ಎಂ. ವಿಶ್ವೇಶ್ವರಯ್ಯ ಅವರ ಬಳಿಯಲ್ಲಿ. ‘ನಿನಗೆ ಇಷ್ಟವಾಗದಿದ್ದಲ್ಲಿ ನಿನ್ನದೇ ಆದ ಒಂದು ಕಲಾಶಾಲೆ ಪ್ರಾರಂಭಿಸು’ ಎಂದು ಸಲಹೆಯಿತ್ತರು. ಸರ್‌ ಎಂ.ವಿ. ಅವರ ಈ ಮಾತು ಅ.ನ.ಸು. ಅವರ ಮೇಲೆ ಪರಿಣಾಮ ಬೀರಿತು. ಇದರಿಂದ ಸ್ಫೂರ್ತಿ ಪಡೆದು ಬೆಂಗಳೂರಿನ ಮೆಜೆಸ್ಟಿಕ್‍ನಲ್ಲಿ ಕಲಾಮಂದಿರ ಕಲಾಶಾಲೆ ಆರಂಭಿಸಿದರು. ಅದಕ್ಕೆ ಈಗ ನೂರು ವಸಂತ ಪೂರೈಸಿದ ಸಂಭ್ರಮ.

ಕಲಾಶಾಲೆ ಶುರುವಾದ ವೇಳೆಯಲ್ಲಿಯೇ ಗಾಂಧೀಜಿ ನೇತೃತ್ವದಡಿ ದೇಶದಲ್ಲಿ ಸ್ವಾತಂತ್ರ್ಯ ಹೋರಾಟ ಉತ್ತುಂಗದ ಸ್ಥಿತಿ ತಲುಪಿತ್ತು. ಬೀದಿ ಬೀದಿಗಳಲ್ಲಿ ವಂದೇ ಮಾತರಂ... ಕೂಗು ಮಾರ್ದನಿಸುತ್ತಿತ್ತು. ಈ ರಾಷ್ಟ್ರಪ್ರೇಮ ಯುವ ಕಲಾವಿದಅ.ನ.ಸು. ಅವರ ಮೇಲೂ ಪ್ರಭಾವ ಬೀರಿತು. ಯುವಜನರಿಗೆ ಕಲಾ ಶಿಕ್ಷಣದ ಮೂಲಕ ಆತ್ಮವಿಶ್ವಾಸ ಹಾಗೂ ಸ್ವಯಂ ಉದ್ಯೋಗದ ಪರಿಕಲ್ಪನೆ ಮೂಡಿಸಲು ಕಲಾಮಂದಿರ ಸಹಕಾರಿಯಾಯಿತು.

ಅ.ನ.ಸು. ಅವರ ಹುಟ್ಟೂರು ಮಂಡ್ಯ ಜಿಲ್ಲೆಯ ಅಕ್ಕಿಹೆಬ್ಬಾಳ. ಬಡತನದಿಂದಾಗಿ ಅವರ ಪ್ರಾಥಮಿಕ ಶಿಕ್ಷಣ ವಾರಾನ್ನದ ಮೂಲಕ ನಡೆಯಿತು. ನಾಗಮಂಗಲದಲ್ಲಿ ವಿದ್ಯಾಭ್ಯಾಸ ಮುಂದುವರಿಸಿದರು. ಆಗಲೇ ಅವರು ಹೊಯ್ಸಳರ ಕಾಲದ ಶಿಲ್ಪಕಲೆಗೆ ಮಾರುಹೋದದ್ದು. ಇದು ಅವರೊಳಗೆ ತಾನೊಬ್ಬ ಕಲಾವಿದನಾಗಬೇಕೆಂಬ ಆಸೆ ಚಿಗುರೊಡೆಯಲು ಕಾರಣವಾಯಿತು. ಕಾರಣಾಂತರಗಳಿಂದ ಅಲ್ಲಿ ವಿದ್ಯಾಭ್ಯಾಸ ಮುಂದುವರಿಸಲು ಅವರಿಗೆ ಸಾಧ್ಯವಾಗಲಿಲ್ಲ. ಕೊನೆಗೆ ಅಕ್ಕಿಹೆಬ್ಬಾಳಕ್ಕೆ ಮರಳಿ ಶಿಕ್ಷಣ ಮುಂದುವರಿಸಿದರು.

ಬಳಿಕ ಮೈಸೂರಿಗೆ ಪ್ರಯಾಣ ಬೆಳೆಸಿ ಹತ್ತನೇ ತರಗತಿಯಲ್ಲಿ ಉತ್ತೀರ್ಣರಾದರು. ಅಲ್ಲಿನ ಜಯಚಾಮರಾಜೇಂದ್ರ ಟೆಕ್ನಿಕಲ್ ಇನ್‍ಸ್ಟಿಟ್ಯೂಟ್‍ನಲ್ಲಿ ಚಿತ್ರಕಲಾ ಡಿಪ್ಲೊಮ ಕೋರ್ಸ್‌ ಪೂರ್ಣಗೊಳಿಸಿದರು. ಅಲ್ಲಿಂದ ಅವರು ಪ್ರಯಾಣ ಬೆಳೆಸಿದ್ದು ಬೆಂಗಳೂರಿಗೆ. ನಂತರದ್ದು ಈಗ ಇತಿಹಾಸ.

ಸೈಕಲ್ ಸುಬ್ಬರಾಯರು

ಬೆಂಗಳೂರಿನಲ್ಲಿ ಕಲಾಮಂದಿರ ಕಟ್ಟುವ ಮೊದಲು ಅವರು ಒಂದು ಸೈಕಲ್‍ ಖರೀದಿಸಿದ್ದರು. ಮುಂದಿನ ದಿನಗಳಲ್ಲಿ ಈ ಸೈಕಲ್ ಅವರ ಅವರ ಸುಖ, ದುಃಖಗಳಿಗೆ ಪಾಲುದಾರನಾಯಿತು. ಜೊತೆ ಜೊತೆಗೆ ಕಲಾಮಂದಿರದ ಬೆಳವಣಿಗೆಗೂ ನೆರವಾಯಿತು.

90ರ ಇಳಿವಯಸ್ಸಿನಲ್ಲೂ ಸೈಕಲ್‌ನಲ್ಲಿಯೇ ಬೆಂಗಳೂರಿನ ಒಂದು ಮೂಲೆಯಿಂದ ಇನ್ನೊಂದು ಮೂಲೆಗೆ ಅವರು ಸಂಚರಿಸುತ್ತಿದ್ದರು. ಕಲೆ, ಸಂಸ್ಕೃತಿಯ ಬೆಳವಣಿಗೆಗೆ ಜೀವನ ಮುಡಿಪಿಟ್ಟಿದ್ದರು. ಸೈಕಲ್ ಅವರ ಶ್ರಮ ಜೀವನದ ಸಂಕೇತವಾಗಿದ್ದು ವಿಶೇಷ. ಕಲೆಗಾಗಿ ಹಗಲಿರುಳು ಶ್ರಮಿಸಿದ ಅವರು 1981ರಲ್ಲಿ ನಿಧನರಾದರು. ಅವರ ನೆನಪಿಗಾಗಿ ಅದೇ ವರ್ಷ ಅಭಿನಯ ತರಂಗ ರಂಗ ಶಾಲೆಯನ್ನು ಅ.ನ.ಸು. ಅವರ ಪುತ್ರ, ರಂಗಕರ್ಮಿ ಎ.ಎಸ್. ಮೂರ್ತಿ ಅವರು ಸ್ಥಾಪಿಸಿದರು.

ಅಖಿಲ ಭಾರತ ಕಲಾ ಪ್ರದರ್ಶನ

ಈ ಕಲಾಮಂದಿರದಲ್ಲಿಯೇ ಅಖಿಲ ಭಾರತ ಚಿತ್ರಕಲಾ, ಛಾಯಾಚಿತ್ರ ಹಾಗೂ ಕರಕುಶಲ ವಸ್ತುಪ್ರದರ್ಶನವು ಪ್ರಪ್ರಥಮ ಬಾರಿಗೆ ಬೆಂಗಳೂರಿನಲ್ಲಿ ನಡೆದಿದ್ದು ವಿಶೇಷ.

1921ರ ಪ್ರದರ್ಶನ ಮೆಜೆಸ್ಟಿಕ್‍ನ ಕಲಾಮಂದಿರದಲ್ಲಿಯೇ ನಡೆಯಿತು. ಒಂದು ಅಂಚೆಪತ್ರದ ಮೂಲಕ ಆಗಿನ ಮೈಸೂರಿನ ದಿವಾನರಾಗಿದ್ದ ಸರ್‌ ಮಿರ್ಜಾ ಇಸ್ಮಾಯಿಲ್ ಅವರಿಗೆ ಅ.ನ.ಸು ಆಮಂತ್ರಣ ನೀಡಿದ್ದರು. ಆ ಪತ್ರದಲ್ಲಿನ ಸುಂದರವಾದ ಕಲಾತ್ಮಕ ಬರವಣಿಗೆಗೆ ಮನಸೋತ ದಿವಾನರು ಪ್ರದರ್ಶನಕ್ಕೆ ಭೇಟಿ ನೀಡಿದ್ದರು. ಪ್ರದರ್ಶನಗೊಂಡ ಕಲಾತ್ಮಕ ಚಿತ್ರಗಳನ್ನು ಕಂಡು ಚಕಿತಗೊಂಡಿದ್ದರು. ಅ.ನ.ಸು. ಅವರಿಗೆ ಅಭಿನಂದನೆ ಸಲ್ಲಿಸುವ ಜೊತೆಗೆ ಕಲಾಮಂದಿರಕ್ಕೆ ಅನುದಾನ ಕಲ್ಪಿಸಲು ನೆರವಾದರು.

1927ರಲ್ಲಿಯೂ ಅಖಿಲ ಭಾರತ ಕಲಾ ಪ್ರದರ್ಶನ ಇಲ್ಲಿಯೇ ನಡೆಯಿತು. ಈ ಪ್ರದರ್ಶನ ಉದ್ಘಾಟಿಸಿದ್ದು ಆಗಿನ ನೇಪಾಳದ ಮಹಾರಾಜ ಜೈ ಬಹದ್ದೂರ್ ಸಿಂಗ್. 1929ರಲ್ಲಿ ನಡೆದ ಕಲಾ ಪ್ರದರ್ಶನವೂ ಯಶಸ್ವಿಯಾಯಿತು. ಇದರ ಉದ್ಘಾಟನೆಗೆ ಹೈದರಾಬಾದ್‌ನ ಮಹಾರಾಣಿ ದುರೇಶಾ ಆಗಮಿಸಿದ್ದರು.

ಭಾರತದ ಹೆಸರಾಂತ ಕಲಾವಿದರಾಗಿದ್ದ ನಂದಲಾಲ್ ಬೋಸ್, ದೇವಿ ಪ್ರಸಾದ್‍ರಾಯ್ ಚೌಧುರಿ, ಎಂ. ಸುಬ್ರಮಣ್ಯರಾಜು, ವೀರಪ್ಪ ಸೇರಿದಂತೆ ಹಲವು ಕಲಾವಿದರು ತಮ್ಮ ಕಲಾಕೃತಿಗಳನ್ನು ಪ್ರದರ್ಶಿಸಿ ಪ್ರದರ್ಶನದ ಹಿರಿಮೆ ಹೆಚ್ಚಿಸಿದ್ದರು.

ಕಲಾಮಂದಿರಕ್ಕೆ ಗಾಂಧಿ ಆಗಮನ

ಅ.ನ. ಸುಬ್ಬರಾಯರು ಹಾಗೂ ಹಿರಿಯ ಸಾಹಿತಿ ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರು ಕಲಾಮಂದಿರದ ಮೂಲಕ ಆಯೋಜಿಸಿದ ಖಾದಿ ಕಲಾ ಪ್ರದರ್ಶನಕ್ಕೆ ಮಹಾತ್ಮ ಗಾಂಧಿ, ಆ್ಯನಿ ಬೆಸೆಂಟ್ ಹಾಗೂ ಸರ್‌ ಎಂ. ವಿಶ್ವೇಶ್ವರಯ್ಯ ಅವರು ಭೇಟಿ ನೀಡಿದ್ದು ವಿಶೇಷ. ಕರ್ನಾಟಕದ ಕಲಾ ಇತಿಹಾಸದಲ್ಲಿ ಇದೊಂದು ಮೈಲಿಗಲ್ಲು.

ಕಲಾವಿದರು, ಕಲಾ ವಿದ್ಯಾರ್ಥಿಗಳು, ಜನಸಾಮಾನ್ಯರಿಗೆ ಕಲೆಯ ಅರಿವು ಮೂಡಿಸಲು ‘ಕಲಾ’ ಮಾಸ ಪತ್ರಿಕೆಯನ್ನೂ ಅ.ನ.ಸು ಅವರ ಸಂಪಾದಕತ್ವದಲ್ಲಿ ಕಲಾಮಂದಿರ ಪ್ರಕಟಿಸಿತ್ತು. ಈ ಪತ್ರಿಕೆಯಲ್ಲಿ ಸಾಹಿತ್ಯ ದಿಗ್ಗಜರ, ಕಲಾ ವಿದ್ವಾಂಸರ ಲೇಖನಗಳು ಪ್ರಕಟಗೊಂಡಿವೆ.

ಕಲಾಮಂದಿರದಲ್ಲಿ ಚಿತ್ರಕಲಾ ಶಿಕ್ಷಣವಲ್ಲದೆ ಕಲಾತ್ಮಕವಾಗಿ ಸೈನ್‍ಬೋರ್ಡ್ ಬರೆಯುವ ವಿಧಾನ, ಕಲ್ಲುಗಳ ಮೇಲೆ ಅಕ್ಷರ ವಿನ್ಯಾಸ, ಫೋಟೊ ಸ್ಟುಡಿಯೊ, ಫೋಟೊ ಫ್ರೇಮ್‌ ತಯಾರಿಕೆ, ಸ್ಕ್ರೀನ್ ಪ್ರಿಂಟಿಂಗ್, ಪೇಪರ್ ಪಲ್ಪ್‌ನಲ್ಲಿ ಶಿಲ್ಪ ತಯಾರಿಕೆ, ಖಾದಿ ಬಟ್ಟೆಯ ಮೇಲೆ ಬ್ಲಾಕ್ ಪ್ರಿಂಟಿಂಗ್, ಬಾಟಿಕ್ ಕಲಾ ತರಬೇತಿ ನೀಡಿ ಸಾವಿರಾರು ವಿದ್ಯಾರ್ಥಿಗಳಿಗೆ ಕಲೆಯ ಮೂಲಕ ಸ್ವಾವಲಂಬನೆಯ ಹಾದಿ ತೋರಿದ ಹೆಗ್ಗಳಿಕೆ ಈ ಕಲಾಮಂದಿರದ್ದು.

ಚಿತ್ರಕಲೆ, ಶಿಲ್ಪಕಲೆಯನ್ನು ಅಭಿವ್ಯಕ್ತಿ ಮಾಧ್ಯಮವನ್ನಾಗಿ ಮಾಡಿದ್ದು ಕಲಾಮಂದಿರದ ಹಿರಿಮೆ. ಸ್ವಾತಂತ್ರ್ಯ ಪೂರ್ವದಲ್ಲೇ ಇದರ ಮೂಲಕ ಉದ್ಯೋಗ ಕಂಡುಕೊಳ್ಳಬಹುದೆಂಬ ಪರಿಕಲ್ಪನೆಯನ್ನೂ ಹುಟ್ಟುಹಾಕಿತು. ರಂಗಭೂಮಿ, ಸಾಹಿತ್ಯ, ಸಂಗೀತ ಪ್ರಕಾರಗಳಿಗೂ ಕೊಡುಗೆ ನೀಡುತ್ತಾ ಬಂದಿದೆ. ಶತಮಾನೋತ್ಸವ ಅಂಗವಾಗಿ ವರ್ಷವಿಡೀ ಕಲೆಗೆ ಸಂಬಂಧಿಸಿದಂತೆ ಅರ್ಥಪೂರ್ಣವಾದ ಕಾರ್ಯಕ್ರಮಗಳನ್ನು ನಡೆಸಲು ಕಲಾಶಾಲೆಯ ಆಡಳಿತ ಮಂಡಳಿ ನಿರ್ಧರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT