ಸೋಮವಾರ, ಡಿಸೆಂಬರ್ 9, 2019
17 °C

ಕ್ಯಾನ್ವಾಸ್ ಮೇಲೆ 3ಡಿ ಕಲಾಕೃತಿ

Published:
Updated:

ಮೈಕ್‌ ಮೇಲೆ ಕೂತ ಹಕ್ಕಿಗಳ ಚಿಲಿಪಿಲಿ, ಕತ್ತಲಾಗಸದ ನಡುವೆ ಬೆಳ್ಳಿಯಂತೆ ಹೊಳೆಯುವ ಸುಂದರ ಮೋಡ, ನೀಲಿ ಆಗಸವೇ ಹಾಸಿಗೆಯಾದ ಚೆಂದದ ದೃಶ್ಯ...

ಈ ಭಾವವು, ಕಲಾವಿದ ರುದ್ರಗೌಡ ಇಂಡಿ ಅವರ ಕಲಾಕೃತಿಗಳನ್ನು ನೋಡುತ್ತಿದ್ದಂತೆ ಅರಿವಿಗೆ ಬರುತ್ತದೆ. 3 ಡಿ ತಂತ್ರಜ್ಞಾನ ಬಳಸಿಕೊಂಡು ಕ್ಯಾನ್ವಾಸ್ ಮೇಲೆ ಸುಂದರವಾಗಿ ಕಲಾಕೃತಿಗಳನ್ನು ರಚಿಸಿದ್ದಾರೆ. ಪ್ರತಿ ಕಲಾಕೃತಿಯೂ ಒಂದಕ್ಕೊಂದು ಭಿನ್ನವಾಗಿದ್ದು, ನೋಡುಗರ ಕಣ್ತಣಿಸುತ್ತದೆ.

ವಿಜಯಪುರದ ಆರ್ಟ್ ಮಾಸ್ಟರ್ ಆ್ಯಂಡ್ ಪೇಂಟಿಂಗ್‌ನಲ್ಲಿ ಡಿಪ್ಲೊಮಾ ಮಾಡಿರುವ ರುದ್ರಗೌಡ ಅವರು, ಎಸ್.ಎಸ್.ಆರ್ಟ್ ಇನ್‌ಸ್ಟಿಟ್ಯೂಟ್‌ನಲ್ಲಿ ಕಲಾ ಶಿಕ್ಷಕರಾಗಿಯೂ ಕೆಲಸ ಮಾಡುತ್ತಿದ್ದಾರೆ. ಬೆಂಗಳೂರಿನ ಯಲಹಂಕದ ಬಳಿ ಕುಟುಂಬದೊಂದಿಗೆ ಅವರು ವಾಸವಿದ್ದಾರೆ.

‘ಐದನೇ ತರಗತಿ ಓದುತ್ತಿದ್ದೆ. ಆಗಷ್ಟೇ ನನಗೆ ಚಿತ್ರ ಬಿಡಿಸುವ ಹವ್ಯಾಸ ಮೈಗಂಟಿಕೊಂಡಿತು. ಮನಸ್ಸಿಗೆ ತೋಚಿದಂತೆ ಚಿತ್ರಗಳನ್ನು ರಚಿಸುತ್ತಿದ್ದೆ. ಅವು ಸುಂದರವಾಗಿ ರೂಪುಗೊಳ್ಳುತ್ತಿದ್ದವು. ಅದನ್ನು ಕಂಡ ಶಾಲೆಯ ಶಿಕ್ಷಕರು ಕೆಲ ಸಲಹೆ ನೀಡಿ ಇನ್ನೂ ಚೆಂದವಾಗಿ ಚಿತ್ರಗಳನ್ನು ರಚಿಸು ಎಂದು ಪ್ರೋತ್ಸಾಹಿಸಿದರು. ಅದು ನನ್ನಲ್ಲಿನ ಕಲಾವಿದನನ್ನು ಜಾಗೃತಗೊಳಿಸಿತು’ ಅಂದರು ರುದ್ರಗೌಡ ಇಂಡಿ.

‘ಶಿಕ್ಷಕರಂತೆಯೇ ನನ್ನ ಪ್ರತಿಭೆ ಗುರುತಿಸಿದ್ದು ನನ್ನ ತಂದೆ. ಪ್ರಾಥಮಿಕ ಶಿಕ್ಷಣ ಪೂರ್ಣಗೊಂಡ ಬಳಿಕ  ಆರ್ಟ್ ಮಾಸ್ಟರ್ ಆ್ಯಂಡ್ ಪೇಂಟಿಂಗ್‌ ಡಿಪ್ಲೊಮಾ ಕೋರ್ಸ್‌ಗೆ ಸೇರಿಸಿದರು. ಚಿತ್ರಕಲೆಯ ಹಲವು ಪ್ರಕಾರಗಳ ಬಗ್ಗೆ ಅಲ್ಲಿ ಪರಿಚಯವಾಯಿತು. ಚಿತ್ರಕಲಾ ಕ್ಷೇತ್ರದಲ್ಲಿಯೇ ಅಸ್ತಿತ್ವ ಉಳಿಸಿಕೊಳ್ಳಬೇಕು ಎಂದು ದೃಢ ನಿರ್ಧಾರ ಮಾಡಿ ಶ್ರದ್ಧೆಯಿಂದ ಚಿತ್ರಕಲೆ ಬಗ್ಗೆ ಅರಿತೆ’ ಎನ್ನುತ್ತಾರೆ ಅವರು. 

‘ಚಿತ್ರಕಲೆ ಬೆಳೆಯಲು ನನ್ನ ತಂದೆಯೇ ಸ್ಪೂರ್ತಿ. ಕಲೆಯ ಮಹತ್ವವನ್ನು ನನಗೆ ತಿಳಿಸಿಕೊ‌ಟ್ಟಿದ್ದೇ ಅವರು. ವೆಸ್ಟರ್ನ್ ಕಲಾವಿದ ಡಾಲಿ ಅವರ ಕಲಾಕೃತಿಗಳನ್ನು ಒಮ್ಮೆ ನೋಡಿದ್ದೆ. ಅದೇ ರೀತಿ ಕ್ಯಾನ್ವಾಸ್ ಮೇಲೆ ಚಿತ್ರಗಳನ್ನು ಬಿಡಿಸಲು ಆಸೆಯಾಯಿತು. ಪ್ರಯತ್ನ ಮಾಡಿದೆ. ಅದು ಯಶಸ್ವಿಯಾಯಿತು’ ಎನ್ನುವ ಅವರು ಸುಮಾರು 15 ವರ್ಷಗಳಿಂದ ಇದೇ ಕ್ಷೇತ್ರವನ್ನು ವೃತ್ತಿಯಾಗಿಸಿಕೊಂಡಿದ್ದಾರೆ.

ರುದ್ರಗೌಡ ಅವರು ತಮ್ಮ ಮನದಲ್ಲಿ ಮೂಡಿದ ಭಾವನೆಗೆ ಕ್ಯಾನ್ವಾಸ್ ಮೇಲೆ ರೂಪ ನೀಡಿದ್ದಾರೆ. ಮನದ ಗೊಂದಲಗಳನ್ನು, ಆಸೆಗಳನ್ನು ಹಾಗೂ ಭವಿಷ್ಯದಲ್ಲಿ ಎದುರಾಗಬಹುದಾದ ಘಟನೆಗಳನ್ನು ಕುಂಚದ ಮೂಲಕ ಸುಂದರವಾಗಿ ಚಿತ್ರಿಸಿದ್ದಾರೆ.

ಈ ಬಾರಿ 22 ಕಲಾಕೃತಿಗಳನ್ನು ಪ್ರದರ್ಶನಕ್ಕೆ ಇಡಲಾಗಿದ್ದು, ಇದು ನನ್ನ ಏಳನೇ ಬಾರಿಯ ಏಕವ್ಯಕ್ತಿ ಕಲಾಕೃತಿಗಳ ಪ್ರದರ್ಶನವಾಗಿದೆ. 40ಕ್ಕೂ ಹೆಚ್ಚು ಬಾರಿ ಹಲವರೊಂದಿಗೆ ನನ್ನ ಕಲಾಕೃತಿಗಳನ್ನು ಪ್ರದರ್ಶಿಸಿದ್ದೇನೆ. ದೇಶದ ಹಲವೆಡೆ ಹಾಗೂ ವಿದೇಶದಲ್ಲೂ ತಮ್ಮ ಕಲಾಕೃತಿಗಳನ್ನು ಪ್ರದರ್ಶನ ಮಾಡಿದ್ದೇನೆ ಎನ್ನುತ್ತಾರೆ ಅವರು. 


ರುದ್ರಗೌಡ ಇಂಡಿ

 

ಪ್ರತಿಕ್ರಿಯಿಸಿ (+)