ಕತ್ತಲ ಹಾಡಿನಲ್ಲಿ ನಾದದ ಅಲೆ !

7
ಸ್ವಸ್ಥ ಸಮಾಜದ ಹಂಬಲ ಹೊತ್ತ ‘ಕತ್ತಲ ಹಾಡು’ ಯಾತ್ರೆ * ಏಕತಾರಿ ಅವಾಹಿಸಿ ‘ನಾದ’ ವಾದ ಭಾಸ್ಕರ !

ಕತ್ತಲ ಹಾಡಿನಲ್ಲಿ ನಾದದ ಅಲೆ !

Published:
Updated:
Deccan Herald

ಅವರ ಪೂರ್ವಾಶ್ರಮದ ಹೆಸರು ಭಾಸ್ಕರ. ಏಕತಾರಿಗೆ ಅವರ ಬೆರಳು ತಾಗಿ ‘ನಾದ’ವಾಗಿದ್ದಾರೆ!

ಈ ನಾದ ‘ಕತ್ತಲ ಹಾಡು’ಗಳನ್ನು ಹುಡುಕಿದ್ದಾರೆ. ಆ ಹಾಡುಗಳನ್ನು ಹಾಡುತ್ತಾ ಕರ್ನಾಟಕ ಯಾತ್ರೆ ಹೊರಟಿದ್ದಾರೆ. ಹಿರಿಯೂರು, ದಾವಣಗೆರೆ, ಚಿತ್ರದುರ್ಗ, ತುಮಕೂರು, ಮೈಸೂರು ಜಿಲ್ಲೆಯ ವಿವಿಧ ಕಡೆ ಹಾಡಿದ್ದಾರೆ. ಅಹ್ವಾನಿಸಿದರೆ, ನಿಮ್ಮೂರು, ಶಾಲೆ, ಕಾಲೇಜು, ಯುವಜನರು, ಸಂಘ ಸಂಸ್ಥೆಗಳಲ್ಲದೆ ಸಾಹಿತ್ಯ, ಸಾಂಸ್ಕಂತಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳಿಗೂ ಬಂದು ಹಾಡುತ್ತಾರೆ.

ಈಗ ನಿಮಗೆ ಭಾಸ್ಕರನ ಬೆರಳು ಏಕತಾರಿಗೆ ತಾಗಿ ‘ನಾದ’ವಾಗಿದ್ದು ಯಕ್ಷ-ಯಕ್ಷಿಯರ ಕತೆಯಲ್ಲವೆಂದು ಅರಿವಾಗಿರಬೇಕು, ಅಲ್ವಾ. ಆದರೆ ಈ ನಾದ ಅವರ ಪೂರ್ವಾಶ್ರಮ ಯಕ್ಷಚೌಕಿಯೇ ಆಗಿದ್ದು ಕಾಕತಾಳಿಯವಷ್ಟೇ!

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲ್ಲೂಕಿನ ಮಣಿನಾಲ್ಕೂರು ಭಾಸ್ಕರರ ಊರು. ಅದು ಹಸಿರು ಮರ ಗಿಡಗಳ ನಡುವಿನ ಕರಾವಳಿಯ ಊರು. ಅವರದು ಬೀಡಿ ಕಟ್ಟುವ ಸಾಮಾನ್ಯ ಕುಟುಂಬ. ಚಿಕ್ಕಂದಿನಲ್ಲಿ ಅಮ್ಮನ ಪಾಡ್ದನಗಳನ್ನು ಕೇಳುತ್ತಾ, ರೇಡಿಯೋದಲ್ಲಿ ಬರುವ ಹಾಡುಗಳನ್ನು ಗುನುಗುತ್ತಲೇ ಬೆಳೆದರು.

ಪಿಯುಸಿ ನಂತರ ಔಪಚಾರಿಕ ಶಿಕ್ಷಣ ಬಿಟ್ಟು ಧರ್ಮಸ್ಥಳ ಯಕ್ಷಗಾನ ಕೇಂದ್ರದಲ್ಲಿ ಭಾಗವತಿಕೆ ಕಲಿತರು. ನಂತರ ಹತ್ತು ವರ್ಷ ಯಕ್ಷಗಾನ ಮೇಳಗಳಲ್ಲಿ ಭಾಗವತರಾಗಿದ್ದರು. ಮನೆಯಲ್ಲಿ ಮಹಿಳೆಯನ್ನು ಕಟ್ಟುಪಾಡುಗಳಿಂದ ಇಟ್ಟುಕೊಳ್ಳಬೇಕೆಂದು ಯಕ್ಷಪಾತ್ರಗಳು ಪ್ರತಿಪಾದಿಸುತ್ತವೆ. ಸಾಮಾಜಿಕ ಮೇಲರಿಮೆ, ಕೀಳರಿಮೆ ಬಿತ್ತರಿಸಲಾಗುತ್ತದೆ. ಕೀಳು ಜಾತಿಯಲ್ಲಿ ಹುಟ್ಟುವುದು, ಬಡವರಾಗಿರುವುದು ವಿಧಿಬರಹ. ಅಂಥವರು ಬದಲಾಗದೆ ಯಥಾಸ್ಥಿತಿಯಲ್ಲಿರಬೇಕೆಂದು ಒಪ್ಪಿಸಲಾಗುತ್ತದೆ. ಇದನ್ನು ಪ್ರಶ್ನಿಸುವ ಯಾರಿಗೂ ಅಲ್ಲಿ ಮಾನ್ಯತೆ ಇಲ್ಲ. ಇದರಿಂದ ರೋಸಿ ಯಕ್ಷಕಲೆಯಿಂದ ಹೊರಬಂದೆ’ ಎನ್ನುತ್ತಾರೆ ಈಗಿನ ನಾದ.

ಯಕ್ಷರಂಗದಲ್ಲಿದ್ದಾಗ ಭಾಸ್ಕರ ತನ್ನ ಬದುಕು ನಾದಮಯವಾಗಿರಲೆಂದು ತಾನು ವಾಸಿಸುವ ರೂಮಿಗೆ ‘ನಾದ’ ಎಂದು ನಾಮಕರಣ ಮಾಡಿದ್ದರು. ಭಾಗವತಿಕೆ ಬಿಟ್ಟ ಅವರು ಕೆಲಕಾಲ ಟೈಲರ್ ಆಗಿದ್ದರು. ಆಗ ತನ್ನ ಸುತ್ತಲಿನ ಸಮಸ್ಯೆಗಳನ್ನು ಕುರಿತು ಪತ್ರಿಕೆಗಳಿಗೆ ಲೇಖನಗಳನ್ನೂ ಬರೆದಿದ್ದರು. ಆದರೆ ಭಾಸ್ಕರನ ಹೆಸರಿನಲ್ಲಿ ಬರೆಯಲು ಧೈರ್ಯ ಸಾಲದೆ ‘ನಾದ’ ಎಂಬ ಗುಪ್ತನಾಮದಲ್ಲಿ ಬರೆದರು. ಇದರಿಂದ ಅಲ್ಲಿಯ ಸಮಸ್ಯೆಗಳೇನೋ ಪರಿಹಾರ ಕಂಡವು. ಆದರೆ ಸಮಸ್ಯೆ ಸೃಷ್ಟಿಸಿದ್ದ ಪಟ್ಟಭದ್ರರಿಗೆ ಸಮಸ್ಯೆ ಶುರುವಾಗಿ ‘ಯಾರೀ ನಾದ?’ ಎಂದು ಹುಡುಕಾಡಿದ್ದರು!

ಈ ಹೊತ್ತಿಗೆ ಬೆಂಗಳೂರಿಗೆ ಬಂದ ಭಾಸ್ಕರರಿಗೆ ಕವಿ ಜನಾರ್ಧನ ಕೆಸರಗದ್ದೆ ಪರಿಚಯವಾಯಿತು. ಇವರು ಹಾಡು ಗುನುಗುತ್ತಿದ್ದನ್ನು ಗಮನಿಸಿದ ಅವರು ತಮ್ಮಲ್ಲಿದ್ದ ಒಂದು ತಂಬೂರಿಯನ್ನು ಕೊಟ್ಟರು. ‘ಆ ತಂಬೂರಿ ಮನೆಗೆ ತಂದೆ. ನನ್ನ ಏಕಾಂತದ, ಜಂಜಡದ ಎಲ್ಲಾ ಕ್ಷಣಗಳನ್ನು ಅದರ ಜೊತೆ ಕಳೆಯತೊಡಗಿದೆ. ಕಾಡು, ನದಿಯ ತಟ, ಗುಡ್ಡ, ಮರ ಗಿಡಗಳ ಬುಡದಲ್ಲಿ ಕುಳಿತು ಅದರ ಜೊತೆ ನನ್ನ ದನಿ ಸೇರಿಸಿದೆ. ಅದರ ತಂತಿಗಳನ್ನು ಮೀಟುತ್ತಾ ಧ್ಯಾನಿಸಿದೆ. ನನಗಿಷ್ಟದ ಭಾವಗೀತೆ, ದಾಸರಪದ, ತತ್ವಪದಗಳನ್ನು ಹಾಡತೊಡಗಿದೆ. ಏಕತಾರಿ ಆಪ್ತವೆನ್ನಿಸಿತು.

ಮೊಟ್ಟಮೊದಲಿಗೆ ದ್ವಿತೀಯ ಪಿಯುಸಿ ಪಠ್ಯದಲ್ಲಿದ್ದ ಡಾ.ಮೂಡ್ನಾಕೂಡು ಚಿನ್ನಸ್ವಾಮಿಯವರ ‘ನಮ್ಮ ಎಲುಬಿನ ಹಂದರದೊಳಗೊಂದು ಮಂದಿರವಿದೆ...’ಎಂಬ ಪದ್ಯಕ್ಕೆ ರಾಗ ಸಂಯೋಜಿಸಿ ಹಾಡಿದೆ. ಹೀಗೆ ಶುರುವಾದ ನನ್ನ ತಂಬೂರಿಯ ಸಂಬಂಧ ಆರನೇ ವರ್ಷದಲ್ಲಿ ಸಾಗಿದೆ..’ ಎನ್ನುತ್ತಾರೆ ನಾದ.

ತಂಬೂರಿ ಸಂತ ಪರಂಪರೆಯ ಒಂದು ಸಂಗೀತ ಸಾಧನ. ಅದು ತತ್ವಪದ, ದಾಸರ ಪದ, ಭಜನೆ, ವಚನಗಳ ಸೃಷ್ಟಿಕಾರ್ಯದಲ್ಲೂ ಪ್ರಮುಖ ಪಾತ್ರ ನಿರ್ವಹಿಸುತ್ತಾ ಬಂದಿದೆ. ಆದರೆ ಅದು ಕಳೆದು ಹೋಗುತ್ತಿರುವ ಈ ಕಾಲಘಟ್ಟದಲ್ಲಿ ನಾದ ಅವರು ಅದನ್ನು ಸಂಗೀತಕ್ಕೆ ಮರುಬಳಸಿ ಆ ಮೂಲಕ ಸಾಮಾಜಿಕ ಪರಿವರ್ತನೆಗೆ ಮುಂದಾಗಿದ್ದಾರೆ. ಜಾತಿ, ಧರ್ಮ, ಆಚಾರ, ಆಹಾರ, ಉಡುಪು, ವೃತ್ತಿಯ ವೈವಿದ್ಯವಿರುವ ಈ ಸಮಾಜದಲ್ಲಿ ತಂಬೂರಿ ಪರಸ್ಪರ ಸೌಹಾರ್ದ ವಾತಾವರಣವನ್ನು, ಸಹಿಷ್ಣುತೆಯ ಪರಂಪರೆಯನ್ನು ಸೃಷ್ಟಿಸಿದೆ ಎಂಬುದನ್ನು ನಾದ ಅರಿತಿದ್ದಾರೆ. ತಂಬೂರಿ ಬಯಲುಸೀಮೆಯ ಸಂಗೀತ ಸಾಧನ. ಕರಾವಳಿಯಲ್ಲಿ ವಿರಳ. ಇದನ್ನು ಬಲ್ಲ ನಾದ ಆರೂಢ, ಅವಧೂತ, ಸಿದ್ಧಾರೂಢ ಪರಂಪರೆಯುಳ್ಳ ಬಯಲುಸೀಮೆಯ ಸ್ಥಳಗಳಿಗೆ ಭೇಟಿ ನೀಡಿ ಬಂದಿದ್ದಾರೆ.

‘ತಂಬೂರಿಗೆ ಏಕತಾರಿ ಅನ್ನುತ್ತಾರೆ. ಆದರೆ ಅದು ಏಕತಾರಿಯಲ್ಲ, ಏಕದಾರಿ. ಅಂದರೆ ಸತ್ಯಕ್ಕೆ ಒಂದೇ ದಾರಿ’ ಎಂದೇಳಿದ ತಂಬೂರಿ ರಾಮಯ್ಯರ ಮಾತನ್ನು ಸ್ಮರಿಸುವ ಅವರು ‘ಏಕತಾರಿ ಕೊಡುವ ಗದ್ದಲವಿಲ್ಲದ ಸಂಗೀತ ಮನಸ್ಸುಗಳನ್ನು ಒಗ್ಗೂಡಿಸುತ್ತದೆ. ನಮ್ಮ ಅಮ್ಮ ಮೈದಡವಿ ಮಾತಾಡಿಸಿದ ಹಾಗೆ, ಮಡಿಲಲ್ಲಿ ಹಾಕಿಕೊಂಡು ಲಾಲಿ ಹಾಡಿದ ಆನಂದ ಕೊಡುತ್ತದೆ. ಇದು ಕಳೆದ ಐದಾರು ವರ್ಷಗಳಿಂದ ತಂಬೂರಿ ಜೊತೆ ಒಡನಾಡಿದ ನನ್ನ ಅನುಭವಕ್ಕೆ ಬಂದ ಸತ್ಯ’ ಎನ್ನುತ್ತಾರೆ.

ಕತ್ತಲ ಹಾಡು:

ಜಗಮಗಿಸುವ ವಿದ್ಯುತ್ ದೀಪಗಳ ಅಲಂಕಾರ, ರಂಗುರಂಗಿನ ವೇಷಭೂಷಣಗಳ ತೊಟ್ಟು ಅಬ್ಬರಿಸುವ ಯಕ್ಷರಂಗದಿಂದ ಸಿಡಿದು ಬಂದ ನಾದರಿಗೆ ‘ಕತ್ತಲ ಹಾಡು’ ಪರಿಕಲ್ಪನೆ ಮೂಡಿದ್ದು ಆಕಸ್ಮಿಕ.

‘ನನ್ನ ತಂಗಿ ಮದುವೆಯ ಒಂದು ರಾತ್ರಿ ಮನೆಯ ಸುತ್ತಲಿನ ಮರಗಳ ಮಧ್ಯೆ ಪುಟ್ಟ ದೀಪಗಳನ್ನು ಹಚ್ಚಿಟ್ಟು ಏಕತಾರಿಯ ಜೊತೆ ಹಾಡಿದೆ. ಅದು ಬೇರೆ ಸಂಗೀತ ಪರಿಕರಗಳಿಗಿಂತ ಭಿನ್ನ ಪರಿಣಾಮ ಬೀರಿತು. ಇದಕ್ಕೆ ಕತ್ತಲು, ಮೌನ ಮತ್ತು ಏಕತಾರಿಯ ನಾದದ ನಿಧಾನ ಗತಿಯೇ ಕಾರಣವಾಗಿತ್ತು. ಬೆಳಕು ಸಂಗೀತ ಅಸ್ವಾದಿಸುವ ಮನುಷ್ಯರ ಏಕಾಗ್ರತೆಯನ್ನು ವಿಚಲಿತಗೊಳಿಸುತ್ತದೆ. ಆದರೆ ಕತ್ತಲು, ಮೌನದ ನಡುವೆ ಏಕತಾರಿಯ ಹಾಡಿನ ಅನುಸಂದಾನ ಸತ್ಯವನ್ನು ಅರಿವಿಗೆ ಧಕ್ಕಿಸುತ್ತದೆ’ ಎಂದು ‘ಕತ್ತಲ ಹಾಡು’ ಪರಿಕಲ್ಪನೆ ಸಕಾರಗೊಂಡಿದ್ದನ್ನು ನಾದ ವಿವರಿಸುತ್ತಾರೆ.

ಸ್ವಸ್ಥ ಸಮಾಜದ ಹಂಬಲ ಹೊತ್ತು ‘ಕತ್ತಲ ಹಾಡು’ ಪರಿಕಲ್ಪನೆಯೊಂದಿಗೆ ನಾದ ಕರ್ನಾಟಕ ಯಾತ್ರೆ ಮಾಡುತ್ತಿದ್ದಾರೆ. ಪ್ರಸ್ತುತ ದಿನಮಾನಗಳ ಕೋಮುವಾದ, ಅಸಹಿಷ್ಣುತೆ, ಹಣದ ವ್ಯಾಮೋಹ, ಸ್ತ್ರೀಶೋಷಣೆ, ಆಹಾರದ ಕಲುಷಿತತೆ, ಅಧುನಿಕ ಬದುಕಿನ ಒತ್ತಡ, ವೈದ್ಯಕೀಯ ಚಿಕಿತ್ಸೆಯ ವೈಭವೀಕರಣ, ಅನಾರೋಗ್ಯಕರ ಸ್ಪರ್ಧೆ, ಪರಿಸರ ನಾಶ, ಮುಂತಾದ ಆತಂಕಗಳನ್ನು ಹಾಡುಗಳ ಮೂಲಕ ಭಾವಾಭಿವ್ಯಕ್ತಪಡಿಸುತ್ತಿದ್ದಾರೆ. ಶಾಂತಿ, ಪ್ರೀತಿ, ಸೌಹಾರ್ದತೆ, ಸಹಿಷ್ಣುತೆ, ತ್ಯಾಗ, ಅಧ್ಯಾತ್ಮದ ಮಹತ್ವಗಳನ್ನು ಪ್ರಚುರಪಡಿಸುತ್ತಿದ್ದಾರೆ.

ಈಗಾಗಲೇ ಸುಮಾರು 45 ದಿನಗಳ ಕಾಲ ಕರ್ನಾಟಕ ಯಾತ್ರೆ ಮಾಡಿರುವ ನಾದ ‘ಐಟಿ-ಬಿಟಿ ಕ್ಷೇತ್ರದವರು, ಡಾಕ್ಟರ್-ಎಂಜಿನಿಯರಗಳು ಮಾತ್ರವಲ್ಲದೆ ಕಲಾ ಪ್ರಕಾರಗಳಿಂದ ದೂರವೇ ಉಳಿದಿರುವ ಬಹುತೇಕ ಮಂದಿ ಏಕತಾರಿ ನಾದಕ್ಕೆ ಮನಸೋತು ‘ಕತ್ತಲ ಹಾಡು’ ಕೇಳಲು ಬರುತ್ತಿದ್ದಾರೆ. ಪ್ರೀತಿ, ಅಭಿಮಾನ ತೋರುತಿದ್ದಾರೆ. ಇದು ಹೊಸ ಅಶಾವಾದವೆನ್ನಿಸಿದೆ’ ಎಂದು ಯಾತ್ರೆಯ ಬಗ್ಗೆ ಆತ್ಮತೃಪ್ತಿ ವ್ಯಕ್ತಪಡಿಸುತ್ತಾರೆ ಅವರು.

ಸಂಗೀತ ಕೇಳುವುದರಿಂದ ನಮ್ಮೊಂದಿಗೆ ನಾವೇ ಅನುಸಂಧಾನ ನಡೆಸಬೇಕು. ಧ್ಯಾನಸ್ಥ ಸ್ಥಿತಿಗೆ ತಲುಪಬೇಕು. ಕೇಳುಗರ ಒಳಗೆ ಅರಿವಿನ ಹುಡುಕಾಟ ನಡೆಯಬೇಕು. ಇದೇ ‘ಕತ್ತಲ ಹಾಡು’ ಉದ್ದೇಶ. ಆದ್ದರಿಂದ ನಾನು ರ್‌್ಯಾಪ್ ಸಾಂಗ್, ಪಾಪ್ ಸಾಂಗ್ ಹಾಡುವುದಿಲ್ಲ. ಸಿನಿಮಾ ಶೈಲಿಯಂತೂ ಇಲ್ಲವೇಇಲ್ಲ. ಏಕೆಂದರೆ ಅವುಗಳನ್ನು ಹಾಡಲು ಬಹಳಷ್ಟು ಜನರಿದ್ದಾರೆ. ನನ್ನದು ನಿಧಾನ ಗತಿಯ ಹಾಡುಗಾರಿಕೆ. ಸದ್ಯಕ್ಕೆ ಸಮಾಜಕ್ಕೆ ಬೇಕಾಗಿರುವುದು ಇದೇ ಆಗಿದೆ ಎಂದು ತಮ್ಮ ನಿಲುವು ಸ್ಪಷ್ಟಪಡಿಸುತ್ತಾರೆ.

‘ನನಗೆ ಮುಖ್ಯವಾಹಿನಿಯ ಸಂಗೀತಗಾರನಾಗಬೇಕೆಂಬ ಹಂಬಲವಿಲ್ಲ. ನಾನೊಬ್ಬ ಜೀವ ಸಂಕುಲ ಪರವಾದ ಹಾಡುಗಾರ. ಅದಕ್ಕಾಗಿಯೇ ಹಾಡುತ್ತೇನೆ. ಅಂಥ ಹಾಡುಗಳ ಮೂಲಕವೇ ಉಳಿಯುತ್ತೇನೆ’ ಎಂದು ವಿಶ್ವಾಸದಿಂದ ನುಡಿಯುತ್ತಾರೆ.

ಹಾಡುಗಳ ಚೀಲ:

ಕತ್ತಲ ಹಾಡು ಪರಿಕಲ್ಪನೆಯಲ್ಲಿ ಸುಮಾರು 50 ಹಾಡುಗಳಿವೆ. ಅವುಗಳಲ್ಲಿ ವೈವಿದ್ಯವಿದೆ. ತತ್ವಪದ, ದಾಸರ ಪದ, ಕಡಕೋಳ ಮಡಿವಾಳಪ್ಪರ ವಚನ, ಅಬ್ರಹಾಂ ಲಿಂಕನ್ ಬರೆದ ಪತ್ರ, ಜಿ.ಎಸ್.ಶಿವರುದ್ರಪ್ಪನವರ ಭಾವಗೀತೆ ಮಾತ್ರವಲ್ಲದೆ ಹೊಸ ತಲೆಮಾರಿನ ಕೃಷ್ಣಮೂರ್ತಿ ಬಿಳಿಗೆರೆ, ಗಿರೀಶ್ ಹಂದಲಗೆರೆ, ಶ್ರೀನಿವಾಸ ಕಾರ್ಕಳರಂತವರ ಕವಿತೆಗಳು ಸೇರಿವೆ. ‘ನನ್ನ ಹಾಡುಗಳ ಸಾಹಿತ್ಯದ ಆಯ್ಕೆಗೆ ಹಳೆಯದು, ಹೊಸದು ಅಂತಿಲ್ಲ. ಶುದ್ದ ಸಾಹಿತ್ಯ, ಶ್ರೇಷ್ಟ ಸಾಹಿತ್ಯದ ಹಂಗಿಲ್ಲ. ನನ್ನ ಹಾಡುಗಳು ಸರಳ, ಸ್ಪಷ್ಟ. ಶಾಂತಿ, ಪ್ರೀತಿ, ಸೌರ್ಹಾದತೆ, ಮಾನವೀಯತೆ ಮತ್ತು ಮನುಷ್ಯತ್ವ ಸಾರುವುದೇ ನನಗೆ ಮುಖ್ಯ’ ಎಂದು ಪ್ರತಿಪಾದಿಸುತ್ತಾರೆ.

ಚಿಕಿತ್ಸಕ ಹಾಡು:

ಅಧುನಿಕತೆಯ ಶರವೇಗಕ್ಕೆ ವಿದ್ಯಾರ್ಥಿ ಯುವ ಸಮುದಾಯವನ್ನು ಪಳಗಿಸುವ ಈಗಿನ ಹಣ ವ್ಯಾಮೋಹಿ ಶಿಕ್ಷಣ ವ್ಯವಸ್ಥೆ ಪಾರಂಪರಿಕ ಜೀವನ ಮೌಲ್ಯಗಳನ್ನೇ ಧಿಕ್ಕರಿಸುತ್ತಿದೆ. ‘ಹಾಸಿಗೆಯಿದ್ದಷ್ಟು ಕಾಲು ಚಾಚು’ ಎಂಬ ಮೌಲ್ಯಾಧಾರಿತ ಗಾದೆಯನ್ನೇ ಲೇವಡಿ ಮಾಡಿ ‘ಕಾಲಿದ್ದಷ್ಟು ಹಾಸಿಗೆ ಹೊಲಿಸು’ ಎಂಬ ಭೋಗ ತತ್ವ ಪ್ರತಿಪಾದಿಸಲಾಗುತ್ತಿದೆ. ‘ಏಳು, ಏದ್ದೇಳು. ಗುರಿ ಮುಟ್ಟುವವರೆಗೂ ವಿರಮಿಸದಿರು..’ಎಂಬ ವಿವೇಕಾನಂದರ ವಿಶಾಲ ಅರ್ಥದ ವಾಣಿಯನ್ನು ಸಂಕುಚಿತಗೊಳಿಸಿ ಯುವಜನರನ್ನು, ವಿದ್ಯಾರ್ಥಿಗಳನ್ನು ಅನಾರೋಗ್ಯಕರ ಸ್ಫರ್ಧೆಗೆ ದೂಡುವ, ಸ್ಫರ್ಧೆಯಲ್ಲಿ ಹಿಂದೆ ಬಿದ್ದವರನ್ನು ಮಾನಸಿಕ ಖಿನ್ನರನ್ನಾಗಿಸುವ ವ್ಯವಸ್ಥೆ ಜಾರಿಯಲ್ಲಿದೆ. ಇಂಥದ್ದಕ್ಕೆ ವಿರುದ್ಧವಾಗಿ ಕೃಷ್ಣಮೂರ್ತಿ ಬಿಳಿಗೆರೆಯವರ ‘ಗೆಲ್ಲುವುದು ಗೆಲುವೇ ಅಲ್ಲ..’ ಗಿರೀಶ್ ಹಂದಲಗೆರೆಯವರ ‘ಏಕಾಂಗಿಯಾಗಿ ಹೊರಡು ಯಾರಾದರೂ ಸಿಕ್ಕಾರು..’ ಎಂಬ ಅರ್ಥಪೂರ್ಣ ಕವಿತೆಗಳನ್ನು ನಾದರವರು ಚಿಕಿತ್ಸಾಕಾರಿಯಾಗಿ ಹಾಡುತ್ತಾರೆ. ಹಾಗೆಯೇ ಮಹಿಳೆಯರ ಮುಟ್ಟಿನ ಬಗ್ಗೆ ಮೂಡನಂಬಿಕೆಯಿಂದ ನೋಡದೆ ಅದನ್ನು ತಾಯ್ತನದ ಕಾಣಿಕೆಯಾಗಿ ಪರಿಗಣಿಸುವಂತೆ ಸಾರುವ ಜರ್ನಾಧನ ಕೆಸರಗದ್ದೆಯವರ ‘ಮುಟ್ಟು’ ಕವಿತೆಯನ್ನು ಕೂಡ ನಾದ ಪರಿಣಾಮಕಾರಿಯಾಗಿ ಹಾಡುತ್ತಾರೆ.

ಅರಿವಿಗೆ ಉದ್ದೀಪಿಸುವ ಹಾಡು

ನಾದ ಹಾಡುಗಾರಿಕೆಯ ವಿಶೇಷತೆಯೆಂದರೆ ಸ್ಪಷ್ಟತೆ. ಬಹುತೇಕ ಜನಪ್ರಿಯ ಹಾಡುಗಾರರಲ್ಲಿ ಮಾಧುರ್ಯವಿರುತ್ತದೆ. ಆದರೆ ಸಾಹಿತ್ಯದ ಭಾಷೆಗೆ ಅರ್ಥದ ನಿಖರತೆಯಿರುವುದಿಲ್ಲ. ಇವುಗಳಲ್ಲಿ ತಾನಾಗಿಯೇ ಅರ್ಥ ಹೊಮ್ಮುತ್ತದೆ. ಅಲ್ಲದೆ ಅವರು ಸಾಹಿತ್ಯಸಾರವನ್ನು ಸತ್ವಃ ಅನುಭವಿಸಿ ಹಾಡುವುದರಿಂದ ಕೇಳಗರ ಅನುಭವಕ್ಕೂ ಅದು ದಕ್ಕುತ್ತದೆ. ಆ ಮೂಲಕ ಹಾಡಿನ ಆಶಯ ಕೇಳಗನ ಅಂತರಂಗ ತಲುಪಿ ಅರಿವಿಗೆ ಉದ್ದೀಪಿಸುತ್ತದೆ ಎಂದು ‘ಕತ್ತಲ ಹಾಡು’ ಕೇಳುಗರೊಬ್ಬರು ಅಭಿಪ್ರಾಯಪಡುತ್ತಾರೆ.

ಸಂಭಾವನೆ ಫಿಕ್ಸ್ ಇಲ್ಲ!

‘ಕತ್ತಲ ಹಾಡು’ ಕಾರ್ಯಕ್ರಮ ಆಯೋಜನೆಗೆ ಸಂಭಾವನೆ ಎಷ್ಟು? ಎಂದು ಕೇಳುವರೇ ಹೆಚ್ಚು! ಈ ಬಗ್ಗೆ ನಾದ ಅವರನ್ನು ಪ್ರಶ್ನಿಸಿದರೆ ‘ಇಷ್ಟೇ ಸಂಭಾವನೆ ಎಂದು ಫಿಕ್ಸ್ ಇಲ್ಲ. ಅವರು ಕೊಟ್ಟಷ್ಟು ನಾನು ಪಡೆದಷ್ಟು’ ಎಂದು ಮುಗುಳ್ನಗುತ್ತಾರೆ. ‘ಇದು ಹಣ ಸಂಪಾದನೆಗಿಂಥ ಅರಿವಿನ ಜಾಗೃತಿ ಯಾತ್ರೆ. ಜನರ ನಡುವೆ ಹಾಡುವುದು ನನಗಿಷ್ಟದ ಕಾಯಕ’ ಎನ್ನುತ್ತಾರೆ. ಹಾಗೆಂದು ಸಂಭಾವನೆ ಕೊಡದೆ ಕಳುಹಿಸುವುದು ಸೌಜನ್ಯವಲ್ಲ ಅಲ್ಲವೆ?

ಏಕಾಂಗಿ ... ಏಕವ್ಯಕ್ತಿ ಚಳವಳಿಕಾರ

ಏಕತಾರಿ ಹಿಡಿದು ಕರ್ನಾಟಕ ಯಾತ್ರೆ ಹೊರಟ ನಾದ ಏಕಾಂಗಿ ಹೌದು; ಆದರೆ ಒಂಟಿಯಲ್ಲ. ಸಾಹಿತ್ಯ, ಸಾಂಸ್ಕಂತಿಕ ಕಾರ್ಯಗಳಲ್ಲಿ ತೊಡಗಿರುವ ನಾಡಿನ ಸಂವೇದನಾಶೀಲರು ಅವರಿಗೆ ಸಾಥ್ ನೀಡುತ್ತಿದ್ದಾರೆ. ಇದರಿಂದ ಅವರು ಏಕವ್ಯಕ್ತಿ ಚಳವಳಿಕಾರನಂತೆಯೂ ಕಾಣುತ್ತಾರೆ. ಸಾಹಿತ್ಯ, ಸಾಂಸ್ಕಂತಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳಲ್ಲಿ ನಾದರವರ ಹಾಡುಗಾರಿಕೆಯಿದ್ದರೇ ಅದು ಅರ್ಥಪೂರ್ಣವೆಂದು ಅನೇಕರು ಭಾವಿಸುತ್ತಿದ್ದಾರೆ. ಅಲ್ಲದೆ ನಾದರವರ ಹಾಡುಗಾರಿಕೆಗಳು ಸಾಮಾಜಿಕ ಜಾಲತಾಣಗಳಲ್ಲೂ ವೈರಲ್ ಆಗುತ್ತಿವೆ.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !