ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿತಾನುಭವದ ಕೊಚ್ಚಿ

Last Updated 21 ನವೆಂಬರ್ 2018, 19:45 IST
ಅಕ್ಷರ ಗಾತ್ರ

ದೀಪಾವಳಿಯಂದು ಎರ್ನಾಕುಳಂನ ಮರೀನ್ ಡ್ರೈವ್‍ನಲ್ಲಿ ಓಡಾಡಿ, ಸುಭಾಷ್ ಪಾರ್ಕಿನಲ್ಲಿ ಸುತ್ತಾಡಿ ಅಲ್ಲೇ ಜೆಟ್ಟಿಯಲ್ಲಿ ಬೋಟು ಹತ್ತಿ ಹಿನ್ನೀರಿನ ಸೊಬಗಿನತ್ತ ಕಣ್ಣು ಹಾಯಿಸುತ್ತ ಮಾನವ ನಿರ್ಮಿತ ವಿಲ್ಲಿಂಗ್ಡನ್ ದ್ವೀಪ ದಾಟುವಷ್ಟರಲ್ಲಿ ಫೋರ್ಟ್ ಕೊಚ್ಚಿಯಲ್ಲಿ ಇಳಿದೆವು. ಕೆಲವೇ ನಿಮಿಷಗಳ ಪಯಣ. ಬೋಟಿನಿಂದಿಳಿದು ನೆಹರೂ ಮಕ್ಕಳ ಉದ್ಯಾನದತ್ತ ಹೆಜ್ಜೆ ಹಾಕಿದರೆ ರಸ್ತೆ ಬದಿಯ ಗೋಡೆಯಲ್ಲಿ ಚೆಂದದ ಕಲಾರಚನೆ; ಅದಕ್ಕೊಂದು ಶೀರ್ಷಿಕೆ: `ಕೊಚ್ಚಿ ನಗರವಲ್ಲ; ಅದೊಂದು ಅನುಭವ.’

ಸಾಮಾನ್ಯವಾಗಿ ಪ್ರವಾಸಿ ತಾಣಗಳಲ್ಲಿ ವ್ಯಾಪಾರಸ್ಥರು ಅದು ಬೇಕೇ, ಇದು ಬೇಕೇ ಎನ್ನುತ್ತ ಸುತ್ತುವರಿಯುತ್ತಾರೆ. ಆಟೊದವರು ‘ನಮ್ಮಲ್ಲಿಗೆ ಬನ್ನಿ, ಎಲ್ಲಿಗೆ ಹೋಗಬೇಕು ಸರ್’ ಎಂದು ದುಂಬಾಲು ಬೀಳುತ್ತಾರೆ. ಅಂಥವರಿಂದ ತಪ್ಪಿಸಿಕೊಳ್ಳುವುದರಲ್ಲೇ ಪ್ರವಾಸಿಗರು ಸುಸ್ತಾಗಿಬಿಡುತ್ತಾರೆ. ಆದರೆ ಕೊಚ್ಚಿಯಲ್ಲಿ ಅಂತಹ ಯಾವುದೇ ಲಕ್ಷಣಗಳು ಕಾಣಿಸಲಿಲ್ಲ. ಅಷ್ಟರಲ್ಲಿ ದೊಡ್ಡದೊಂದು ಬೋರ್ಡ್ ಗಮನ ಸೆಳೆಯಿತು. ಅದರಲ್ಲಿ ಫೋರ್ಟ್ ಕೊಚ್ಚಿಯಿಂದ ಕೇರಳದ ಬೇರೆಬೇರೆ ಪ್ರವಾಸಿ ತಾಣಗಳಿಗೆ ಇರುವ ಅಂತರ ಹಾಗೂ ಟ್ಯಾಕ್ಸಿ ಬಾಡಿಗೆಯನ್ನು ನಮೂದಿಸಿದ್ದರು. ಅಂದಹಾಗೆ, ಎರ್ನಾಕುಳಂ ಜಿಲ್ಲಾ ಕೇಂದ್ರವಾದರೆ, ಕೊಚ್ಚಿ ಮಹಾನಗರ ಪಾಲಿಕೆ. ಫೋರ್ಟ್ ಕೊಚ್ಚಿ ಅದರ ಒಂದು ಭಾಗ.
ಮಗನೊಂದಿಗೆ ನಾನು ಉಳಿದುಕೊಂಡಿದ್ದ ಹೋಟೆಲ್‌ ರೋಸ್ ಸ್ಟ್ರೀಟ್‍ನ ಒಂದು ಪಾರಂಪರಿಕ ಕಟ್ಟಡ. ಮೂರು ಶತಮಾನಗಳಷ್ಟು ಹಿಂದೆ ಡಚ್ ಕುಟುಂಬವೊಂದಕ್ಕೆ ಸೇರಿದ್ದಾಗಿತ್ತಂತೆ. ಬಹುತೇಕ ಮರದಿಂದಲೇ ನಿರ್ಮಿತವಾ ದುದು. ನಮ್ಮ ಮಲೆನಾಡಿನ ಹಳೆಯ ಮನೆಗಳನ್ನು ನೆನಪಿಸುವಂತಹ ರಚನೆ. ಒಳ ಪ್ರಾಂಗಣದ ಒಂದು ಬದಿ ಕೊಠಡಿಗಳು, ಇನ್ನೊಂದು ಬದಿ ರೆಸ್ಟೋರೆಂಟ್. ನಡುವೆ ಒಂದಿಷ್ಟು ಹಸಿರು. ಅಕ್ಷರಪ್ರೇಮಿಗಳಿಗಾಗಿ ಕಪಾಟಿನ ತುಂಬ ಪುಸ್ತಕಗಳು. ಒಂದಕ್ಕೊಂದು ಪೂರಕವಾಗಿರುವ ವಾತಾವರಣ.

ಕೊಚ್ಚಿ ಮಹಾರಾಜರ ಕಾಲದಲ್ಲಿ ಒಂದು ಮೀನುಗಾರಿಕಾ ಗ್ರಾಮವಾಗಿದ್ದ ಈ ಭೂಭಾಗ ಕ್ರಿ.ಶ.1503ರಲ್ಲಿ ಪೋರ್ಚುಗೀಸರ ಸುಪರ್ದಿಗೆ ಸೇರಿತು. ಅಲ್ಲಿ ಅವರು ನಿರ್ಮಿಸಿದ ಕೋಟೆಯಿಂದಾಗಿ ಫೋರ್ಟ್ ಕೊಚ್ಚಿ ಎಂಬ ಹೆಸರು ಬಂತು. ನಂತರ ಅದು ಡಚ್ಚರ ವಶವಾಗಿ ಆ ಬಳಿಕ ದೇಶ ಸ್ವಾತಂತ್ರ್ಯ ಪಡೆಯುವವರೆಗೂ ಬ್ರಿಟಿಷರ ನೆಲೆಯಾಗಿತ್ತು. ಮೂರೂ ಆಳ್ವಿಕೆಗಳು ಒಂದೊಂದು ಶತಮಾನಕ್ಕೂ ಅಧಿಕ ಅವಧಿಯಾಗಿದ್ದರಿಂದ ಆಯಾ ಸಂದರ್ಭದಲ್ಲಿ ಅವರವರಿಗೆ ಅನುಗುಣ ವಾದ ಕಟ್ಟಡಗಳು ನಿರ್ಮಾಣವಾದವು. ನಾವೀಗ ಅಲ್ಲಿನ ರಸ್ತೆಗಳಲ್ಲಿ ಓಡಾಡುತ್ತಿ ದ್ದರೆ ಅಲ್ಲಿನ ಇತಿಹಾಸದ ಚಿತ್ರಣ ಅನಾವರಣಗೊಳ್ಳುತ್ತದೆ.

ವಿವಿಧ ಆಕರ್ಷಣೆ
ಫೋರ್ಟ್ ಕೊಚ್ಚಿಯ ಪ್ರಧಾನ ಆಕರ್ಷಣೆ ಚೈನೀಸ್ ಫಿಶಿಂಗ್ ನೆಟ್. 14ನೇ ಶತಮಾನದಲ್ಲಿ ಚೀನಾದಿಂದ ಬಂದವರು ಈ ವಿಶಿಷ್ಟ ವಿಧಾನದಲ್ಲಿ ಮೀನು ಹಿಡಿಯುವುದನ್ನು ಪರಿಚಯಿಸಿದರು ಎನ್ನಲಾಗುತ್ತಿದೆ. ಒಂದು ರೀತಿಯಲ್ಲಿ ಇದು ಏತ ಮೀನುಗಾರಿಕೆ. 10 ಮೀಟರ್ ಎತ್ತರದ ವರೆಗಿನ ರಚನೆಗಳು. ಅವಕ್ಕೆ ದೊಡ್ಡ ಬಲೆ ಜೋಡಿಸಿ ನೀರಿನಲ್ಲಿ ಇಳಿಬಿಟ್ಟಿರುತ್ತಾರೆ. ನಾಲ್ಕರಿಂದ ಆರು ಜನರ ತಂಡ ಬಲೆಯನ್ನು ನೀರಿನಿಂದ ಎತ್ತಿ ಅದರಲ್ಲಿರುವ ಮೀನುಗಳನ್ನು ಸಂಗ್ರಹಿಸುತ್ತದೆ. ಪ್ರವಾಸಿಗರಿಗೆ ಇದು ಕುತೂಹಲ, ಆಸಕ್ತಿಯ ಸಂಗತಿ. ಅಲ್ಲೇ ತಾಜಾ ಮೀನನ್ನು ಖರೀದಿಸಬಹುದು. ಅದರಿಂದ ಬೇಕುಬೇಕಾದ ಖಾದ್ಯಗಳನ್ನು ತಯಾರಿಸಿ
ಕೊಡುವವರು ಪಕ್ಕದಲ್ಲೇ ಇದ್ದಾರೆ! ಸೂರ್ಯಾಸ್ತದ ವೇಳೆ ಫಿಶಿಂಗ್ ನೆಟ್ ಸೌಂದರ್ಯ ನೂರ್ಮಡಿಗೊಳ್ಳುತ್ತದೆ. ಕ್ಯಾಮೆರಾಗಳಿಗೆ ಬಿಡುವಿಲ್ಲದ ಕೆಲಸ.

ಸೈಂಟ್ ಫ್ರಾನ್ಸಿಸ್ ಚರ್ಚ್, ಡಚ್ ಸೆಮಿಟರಿ, ಬಿಷಪ್ಸ್ ಹೌಸ್, ಇಂಡೋ ಪೋರ್ಚುಗೀಸ್ ಮ್ಯೂಸಿಯಂ ಇವೆಲ್ಲವನ್ನೂ ಕಾಲ್ನಡಿಗೆಯಲ್ಲೇ ಸಂದರ್ಶಿಸಬಹುದು. ಬೇಕೆನಿಸಿದರೆ ಅಲ್ಲಲ್ಲಿ ಬಾಡಿಗೆ ಸೈಕಲ್‍ಗಳೂ ಲಭ್ಯ. ಅಲ್ಲಿಯ ರಸ್ತೆಗಳಲ್ಲಿ ವಾಹನಗಳು ಗಿಜಿಗುಡುವುದಿಲ್ಲ. ಹಳೆಯ ಮರಗಳೂ ಸಾಕಷ್ಟಿವೆ. ಆದ್ದರಿಂದ ಇಕ್ಕೆಲಗಳಲ್ಲಿರುವ ಪಾರಂಪರಿಕ ಕಟ್ಟಡಗಳನ್ನು ನೋಡುತ್ತ ಹಾಯಾಗಿ ಹೆಜ್ಜೆ ಹಾಕಬಹುದು. ಹೆಚ್ಚಿನ ಪುರಾತನ ಕಟ್ಟಡಗಳು ಹೋಟೆಲ್‌ಗಳಾಗಿಯೋ, ರೆಸ್ಟೋರೆಂಟ್‍ಗಳಾಗಿಯೋ ರೂಪಾಂತರಗೊಂಡಿವೆ.

ನೋಡಲೇಬೇಕಾದ ಮಹತ್ವದ ಸ್ಥಳವೆಂದರೆ ಮ್ಯಾರಿಟೈಮ್ ಮ್ಯೂಸಿಯಂ. ಭಾರತೀಯ ನೌಕಾಪಡೆಯ ದಕ್ಷಿಣ ಕಮಾಂಡ್ ಸ್ಥಾಪಿಸಿರುವ ಈ ಸಾಗರಸಂಬಂಧಿ ವಿಷಯಗಳ ವಸ್ತುಸಂಗ್ರಹಾಲಯ ದೇಶದಲ್ಲಿ ನೌಕಾಪಡೆಯ ವಿಕಾಸದ ವಿವಿಧ ಹಂತಗಳನ್ನು ಮನಗಾಣಿಸಿಕೊಡುತ್ತದೆ. ಹಡಗು ನಿರ್ಮಾಣದಲ್ಲಿ ದೇಶದ ಪ್ರಾವೀಣ್ಯವನ್ನೂ ಸಾದರಪಡಿಸುತ್ತದೆ. ಸ್ವಾತಂತ್ರ್ಯೋತ್ತರ ಸಂದರ್ಭದಲ್ಲಿ ನೌಕಾಪಡೆ ಸಾಧಿಸಿದ ಪ್ರಮುಖ ಗೆಲುವುಗಳನ್ನು ಬಿಂಬಿಸುವ ಪ್ರತ್ಯೇಕ ವಿಭಾಗವೂ ಈ ಮ್ಯೂಸಿಯಂನಲ್ಲಿದೆ.

ಅತ್ಯಾಕರ್ಷಕ ಕಲಾರಚನೆಗಳನ್ನೊಳಗೊಂಡ ಸಾಂತಾ ಕ್ರೂಸ್ ಬೆಸಿಲಿಕಕ್ಕೆ ಭೇಟಿನೀಡಿ ತುಸು ಮುಂದಕ್ಕೆ ಸಾಗಿದರೆ ಬಲಭಾಗದಲ್ಲಿದೆ ಕೇರಳ ಕಥಕ್ಕಳಿ ಕೇಂದ್ರ. ಅಲ್ಲಿ ಪ್ರತಿ ದಿನ ಬೆಳಿಗ್ಗೆ ಧ್ಯಾನ, ಯೋಗ ಶಿಬಿರ ಹಾಗೂ ಸಂಜೆಯ ವೇಳೆ ಕಲರಿಪಯಟ್ಟು, ಕಥಕ್ಕಳಿ ಪ್ರಾತ್ಯಕ್ಷಿಕೆ-ಪ್ರದರ್ಶನ ಮತ್ತು ಶಾಸ್ತ್ರೀಯ ಸಂಗೀತ ಕಾರ್ಯಕ್ರಮಗಳು ನಡೆಯುತ್ತವೆ. ಕಥಕ್ಕಳಿ ಮುಖವರ್ಣಿಕೆ ಸಿದ್ಧತೆಯನ್ನೂ ವೀಕ್ಷಿಸಬಹುದು.

ರಸಗ್ರಂಥಿಗಳಿಗೆ ಸವಾಲು!
ಫೋರ್ಟ್ ಕೊಚ್ಚಿಯ ರೆಸ್ಟೋರೆಂಟ್‍ಗಳದ್ದೇ ಒಂದು ಲೋಕ. ಒಂದಕ್ಕಿಂತ ಒಂದು ಭಿನ್ನ; ನವನವೀನ ಥೀಮ್‍ಗಳು. ಕಲಾಸ್ವಾದನೆಗೆ ಅವಕಾಶ ಕಲ್ಪಿಸುವ ಆರ್ಟ್ ಕೆಫೆಗಳು. ಸಾವಯವ ಆಹಾರ ಉಣಬಡಿಸುವ ಫಾರ್ಮರ್ಸ್ ಕೆಫೆ. ಒಟ್ಟಾರೆ ದೇಶವಿದೇಶಗಳ ಸಕಲ ತಿನಿಸುಗಳ ಅಪೂರ್ವ ಸಂಗಮ. ರಸಗ್ರಂಥಿಗಳಿಗೆ ಸವಾಲೆಸೆಯುವ ಭಕ್ಷ್ಯವೈವಿಧ್ಯ. ವಿಶೇಷವೆಂದರೆ ಎಲ್ಲಿ ಹೊಕ್ಕರೂ ಒಂದಿನಿತೂ ನೂಕುನುಗ್ಗಲು, ಧಾವಂತ ಇಲ್ಲ.

ಫೋರ್ಟ್ ಕೊಚ್ಚಿಯಿಂದ ಎರಡೂವರೆ ಕಿ.ಮೀ ಅಂತರದಲ್ಲಿರುವ ಮಟ್ಟಂಚೇರಿ ಕೂಡ ಪ್ರವಾಸಿ ತಾಣ. ಜತೆಗೆ ಸಂಬಾರ ಪದಾರ್ಥಗಳ ಮಾರಾಟ-ರಫ್ತು ಕೇಂದ್ರ ಕೂಡ. ಡಚ್ ಪ್ಯಾಲೇಸ್ ಮ್ಯೂಸಿಯಂ ನೋಡಿ ಜ್ಯೂ ಸ್ಟ್ರೀಟ್‍ನಲ್ಲಿ ಸಾಗಿದರೆ ಯಹೂದ್ಯರ ಆರಾಧನಾ ಮಂದಿರ - ಪರದೇಸಿ ಸಿನೆಗಾಗ್. ಕ್ರಿ.ಶ.1568ರಲ್ಲಿ ನಿರ್ಮಾಣಗೊಂಡ ಇದು ಕಾಮನ್ವೆಲ್ತ್ ದೇಶಗಳಲ್ಲೇ ಅತಿ ಪುರಾತನವಾದ ಸಿನೆಗಾಗ್. ಇತ್ತೀಚೆಗೆ, ಅಂದರೆ 1960ರಲ್ಲಿ ಸ್ಥಾಪನೆಯಾದ ಧರ್ಮನಾಥ ಜೈನ ಮಂದಿರಕ್ಕೂ ಪ್ರವಾಸಿಗರು ಭೇಟಿಕೊಡುತ್ತಾರೆ.

ಫೋರ್ಟ್ ಕೊಚ್ಚಿಯಲ್ಲೇ ಉಳಿದು ಒಂದು ದಿನ ನೆರೆಯ ವೈಪೀನ್ ದ್ವೀಪಕ್ಕೆ ತೆರಳಿ ಚೆರಾಯಿ ಬೀಚಲ್ಲಿ ಸಮುದ್ರದಲೆಗಳೊಂದಿಗೆ ಏರಿಳಿಯುತ್ತ ಆನಂದಿಸಿದೆವು. ಇನ್ನೊಂದು ದಿನ ವೈಕಂ ಬಳಿ ಹಿನ್ನೀರಿನಲ್ಲಿ ನಾಡದೋಣಿಯಲ್ಲಿ ಕುಳಿತು ಸುತ್ತಾಡುತ್ತ ರಮಣೀಯ ಗ್ರಾಮೀಣ ಸೌಂದರ್ಯವನ್ನು ಕಣ್ತುಂಬಿಕೊಂಡೆವು. ಜರ್ಮನಿ, ಜಪಾನಿನಿಂದ ಹಿಡಿದು ಮಹಾರಾಷ್ಟ್ರ, ಒಡಿಶಾದಿಂದ ಬಂದಿದ್ದ ಪ್ರವಾಸಿಗರನ್ನೊಳಗೊಂಡ ಆ ದೋಣಿ ಪುಟಾಣಿ ಪ್ರಪಂಚವನ್ನೇ ಪ್ರತಿನಿಧಿಸುತ್ತಿತ್ತು. ಯಾನದ ನಡುವೆ ತೆಂಗಿನ ನಾರು ಘಟಕಕ್ಕೂ ಹೊಕ್ಕೆವು; ಕೇರಳದ ಸಾಂಪ್ರದಾಯಿಕ ಭೋಜನವನ್ನೂ ಸವಿದೆವು.

ಜವಾಬ್ದಾರಿಯುತ ಪ್ರವಾಸೋದ್ಯಮಕ್ಕಾಗಿ ಸತತ ಎರಡು ಬಾರಿ ಜಾಗತಿಕ ಮಟ್ಟದ ಪ್ರಶಸ್ತಿ ಪಡೆದಿರುವ ಕೇರಳ ಈ ನಿಟ್ಟಿನಲ್ಲಿ ಸದಾ ಕ್ರಿಯಾಶೀಲವಾಗಿದೆ. ಟೂರಿಸಂ ಪೊಲೀಸ್ ಸಿಬ್ಬಂದಿ ಎಲ್ಲೆಡೆ ನಿಗಾ ಇಟ್ಟಿರುತ್ತಾರೆ. ಆಟೊ ರಿಕ್ಷಾ-ಟ್ಯಾಕ್ಸಿ-ಬೋಟು ಚಾಲಕರು, ಗೈಡುಗಳು ಹಾಗೂ ಹೋಟೆಲ್ ಸಿಬ್ಬಂದಿ ಪ್ರವಾಸಿಗರನ್ನು ಆತ್ಮೀಯತೆಯಿಂದ ಕಾಣುವುದರಿಂದ ನಮಗೆ ಎಲ್ಲೂ ಕಿರಿಕಿರಿಯೆನಿಸುವುದಿಲ್ಲ. ಕೊಚ್ಚಿಗೆ ಬಸ್ಸು, ರೈಲು, ವಿಮಾನ ಸಂಪರ್ಕ ಚೆನ್ನಾಗಿದೆ.

ಕೇರಳ ಪ್ರವಾಸೋದ್ಯಮ ಇಲಾಖೆಯ ಜಾಲತಾಣವನ್ನೊಮ್ಮೆ ಕ್ಲಿಕ್ ಮಾಡಿದರೆ ನೀವು ಬ್ಯಾಗ್ ಹೆಗಲಿಗೇರಿಸುವುದು ಖಂಡಿತ. ಜಾಲತಾಣದ ಕೊಂಡಿ: www.keralatourism.org

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT