ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಪಭಾಷೆಗಳು ಕನ್ನಡದ ಹೆಮ್ಮೆ

Last Updated 20 ಏಪ್ರಿಲ್ 2019, 19:32 IST
ಅಕ್ಷರ ಗಾತ್ರ

ಭಾಷೆ ಎಂಬುದು ಚಲನಶೀಲ ವ್ಯವಸ್ಥೆ. ಎಲ್ಲ ಭಾಷೆಗಳೂ ನಿರಂತರವಾಗಿ ಬದಲಾಗುತ್ತಿರುತ್ತವೆ. ಇತಿಹಾಸದ ಒಂದು ಘಟ್ಟದಲ್ಲಿ ನಿರ್ದಿಷ್ಟ ಅರ್ಥ ನೀಡುವ ಪದಗಳು, ಕಾಲ ಸರಿದಂತೆ ಬೇರೆ ಅರ್ಥವನ್ನು ಪಡೆದುಕೊಳ್ಳುತ್ತವೆ. ಕೆಲವು ಪದಗಳು ಚಲಾವಣೆಯಿಂದ ಹೊರನಡೆಯುತ್ತವೆ, ಹೊಸ ಪದಗಳು ನಿಘಂಟುಗಳಲ್ಲಿ ಜಾಗ ಪಡೆಯುತ್ತವೆ.

ಈ ಬದಲಾವಣೆಗಳಿಗೆ ಪ್ರಾಥಮಿಕ ಕಾರಣ ‘ಲೇಬರ್‌ ಪ್ರ್ಯಾಕ್ಟಿಸ್‌’ಗಳಲ್ಲಿನ ಬದಲಾವಣೆ– ಅವು ಆ ಕಾಲಘಟ್ಟದ ಬೌದ್ಧಿಕ ಉತ್ಪನ್ನಗಳಲ್ಲಿ ಪ್ರತಿಫಲನಗೊಳ್ಳುತ್ತವೆ. ಬದಲಾವಣೆಯ ಮೇಲ್ಮೈನಲ್ಲಿ ಇರುವುದು ಬೇರೆ ಭಾಷೆಗಳಿಂದ ಪದಗಳನ್ನು ಎರವಲು ಪಡೆಯುವುದು. ಇದನ್ನು ಕನ್ನಡದಲ್ಲಿ ‘ಕನ್ನಡದ ಪದಗಳಾಗಿ’ ಬಳಕೆಯಲ್ಲಿ ಇರುವ ಇಂಗ್ಲಿಷ್ ಪದಗಳ ಸಂಖ್ಯೆ ವಿವರಿಸಿ ಹೇಳಬಹುದು.

ಕಡ ತಂದ ಇಂತಹ ಪದಗಳನ್ನು ಗುರುತಿಸುವುದು ಸುಲಭ. ಭಾಷೆಯ ವಿಸ್ತರಣೆ ಹಾಗೂ ಪರಿವರ್ತನೆಯಲ್ಲಿ ಭಾಗಿಯಾಗುವ ಇನ್ನೊಂದು ಪ್ರಕ್ರಿಯೆಯನ್ನು ‘ಆಂತರಿಕವಾಗಿ ಕಡ ತೆಗೆದುಕೊಳ್ಳುವುದು’ ಎನ್ನಬಹುದು. ಉಪಭಾಷೆಗಳಿಂದ ನಾಣ್ನುಡಿಗಳನ್ನು ಪಡೆದುಕೊಳ್ಳುವುದು, ಹಿರಿಯಣ್ಣನ ಭಾಷೆಯಲ್ಲಿ ಅದಾಗಲೇ ಬಳಕೆಯಲ್ಲಿ ಇರುವ ಪದಗಳು ಹೊಸ ಅರ್ಥಗಳನ್ನು ಪಡೆದುಕೊಳ್ಳುವುದು ಕೂಡ ಈ ಪ್ರಕ್ರಿಯೆಯ ಭಾಗ. ಮನುಷ್ಯ ತನ್ನ ಸಮುದಾಯದ ನಡುವೆ ಸಂಪರ್ಕಕ್ಕೆ ಬಳಸುವ ಶಬ್ದಗಳ ಗುಚ್ಛ ‘ಭಾಷೆ’ಯಾಗಿ ಬೆಳೆದಾಗ, ಅಲ್ಲಿ ಶಿಷ್ಟ ಭಾಷೆ ಯಾವುದು ಎಂಬ ಪ್ರಶ್ನೆ ಇರುವುದಿಲ್ಲ. ಕಾಲ ಸರಿದಂತೆ, ಆ ಭಾಷೆಯ ಹಲವು ಪ್ರಾದೇಶಿಕ ರೂಪಗಳಲ್ಲಿ ಯಾವುದಾದರೂ ಒಂದು ‘ಶಿಷ್ಟ’ ರೂಪವೆಂಬ ಗುರುತು ಪಡೆದುಕೊಳ್ಳುತ್ತದೆ. ಚಲಾವಣೆಯಲ್ಲಿ ಇರುವ ಭಾಷೆಗಳಲ್ಲಿ ಯಾವುದು ಶಿಷ್ಟ ಎಂಬ ಸ್ಥಾನ ಪಡೆಯುತ್ತದೆ ಎಂಬುದು ರಾಜಕೀಯ, ಆರ್ಥಿಕ, ಧಾರ್ಮಿಕ ಕಾರಣಗಳನ್ನು ಆಧರಿಸಿರುತ್ತದೆ.

ಆಧುನಿಕ ಭಾರತದ ಬಹುತೇಕ ಭಾಷೆಗಳು ಶಿಷ್ಟವಾಗುವ ಪ್ರಕ್ರಿಯೆ ಆರಂಭವಾಗಿದ್ದಕ್ಕೆ ಪ್ರಾಥಮಿಕ ಕಾರಣ 19ನೆಯ ಶತಮಾನದ ಮುದ್ರಣ ತಂತ್ರಜ್ಞಾನ. ಕನ್ನಡದಲ್ಲಿಯಂತೂ ಅದೇ ಕಾರಣ. ನಮ್ಮಲ್ಲಿ ಮಾತಿನ ರೂಪದಲ್ಲಿ ಇದ್ದ, 19ನೇ ಶತಮಾನದ ಸಂದರ್ಭದಲ್ಲಿ ಪಠ್ಯಪುಸ್ತಕಗಳು, ನಿಯತಕಾಲಿಕೆಗಳು, ಪತ್ರಿಕೆಗಳಲ್ಲಿ ‘ಕನ್ನಡ’ ಎಂದು ಜಾಗ ಪಡೆದ ಭಾಷಾ ಬಗೆಯೇ ನಿಧಾನವಾಗಿ ಕನ್ನಡವೆಂದಾಯಿತು. ಇತರ ಬಗೆಯ ಭಾಷೆಗಳು ‘ಪ್ರಾದೇಶಿಕ’ ಭಾಷೆಗಳಾಗಿ, ‘ಸಮುದಾಯ’ಗಳ ಭಾಷೆಗಳಾಗಿ ಉಳಿದವು. ಕನ್ನಡ ಮಾತನಾಡುವ ಭೂಭಾಗ ತುಲನಾತ್ಮಕವಾಗಿ ದೊಡ್ಡದಾಗಿಯೇ ಇದೆ. ಆದರೆ, ಕನ್ನಡವನ್ನು ಬಳಸುತ್ತಿರುವ ಎಲ್ಲ ಸಾಮಾಜಿಕ ವರ್ಗಗಳು ಶಿಷ್ಟ ಸ್ವರೂಪದ ಬಗೆಯ ಒಳಗಿಲ್ಲ. ಹಾಗಾಗಿ, ಆಡುಮಾತಿನ ಹಲವು ಬಗೆಗಳು ಚಲಾವಣೆಯಲ್ಲಿ ಇವೆ. ಸಾಹಿತ್ಯಕ ಉತ್ಪನ್ನಗಳು ಸಮಾಜಶಾಸ್ತ್ರೀಯವಾಗಿ ಬದಲಾದಂತೆಲ್ಲ ಪ್ರಾದೇಶಿಕ ಹಾಗೂ ಸಾಮಾಜಿಕ ಭಾಷಾ ಬಗೆಗಳು ಶಿಷ್ಟ ಭಾಷೆಗೆ ‘ಸಾಲ’ ನೀಡಲು ಆರಂಭಿಸುತ್ತವೆ. ಕಳೆದ ಆರು ದಶಕಗಳಲ್ಲಿ ಇದೇ ಪ್ರಕ್ರಿಯೆಯು ಮರಾಠಿ, ಗುಜರಾತಿ, ಮಲಯಾಳ, ಹಿಂದಿ ಮತ್ತು ಪಂಜಾಬಿ ಭಾಷಾ ಸಾಹಿತ್ಯಕ್ಕೆ ಹೊಸ ಅಭಿವ್ಯಕ್ತಿ ಸಂಪನ್ಮೂಲ ತಂದುಕೊಟ್ಟಿದೆ.

ಉಪ ಭಾಷೆಗಳನ್ನು ಹೊಸ ಶಿಷ್ಟ ಭಾಷೆಗಳು ಎಂದು ಪರಿಗಣಿಸುವ ಅಗತ್ಯವನ್ನು ಮೊದಲು ಒಪ್ಪಿಕೊಂಡಿದ್ದು ತಮಿಳು ಭಾಷೆ. ಸಂಕೀರ್ಣ ಸಾಹಿತ್ಯಕ ಬಳಕೆಗಳಲ್ಲಿ ಉಪ ಭಾಷೆಗಳನ್ನು ಬಳಸಿಕೊಂಡು ಕನ್ನಡ ಬಹಳಷ್ಟನ್ನು ಪಡೆದಿದೆ. 2011ರ ಜನಗಣತಿಯು ಒಟ್ಟು 120 ಸ್ವೀಕೃತ ಭಾಷೆಗಳಲ್ಲಿ 19,569 ಭಾಷಾ ಸಮುದಾಯಗಳನ್ನು ಗುರುತಿಸಿರುವುದನ್ನು ಗಮನಿಸಿದರೆ ಭಾರತದಲ್ಲಿ ಉಪ ಭಾಷೆಗಳು ಎಷ್ಟು ವ್ಯಾಪಕವಾಗಿ ಬಳಕೆಯಲ್ಲಿವೆ ಎಂಬುದು ಗೊತ್ತಾಗುತ್ತದೆ.

ಅಂದರೆ, ಭಾರತದ ಎಲ್ಲ ಪ್ರಮುಖ ಭಾಷೆಗಳೂ ಹಲವಾರು ಡಜನ್‌ಗಳಷ್ಟು ಉಪಭಾಷೆಗಳನ್ನು ಹೊಂದಿವೆ; ಆ ಎಲ್ಲ ಉಪಭಾಷೆಗಳು ಶಿಷ್ಟ ಅಥವಾ ಪ್ರಮುಖ ಭಾಷೆಗೆ ‘ಕಡ’ ಕೊಡಬಲ್ಲವು. ದಲಿತ ಮತ್ತು ಗ್ರಾಮೀಣ ಸಾಹಿತ್ಯದ ಆರಂಭಿಕ ವರ್ಷಗಳಲ್ಲಿ ಗದ್ಯ ಮತ್ತು ಪದ್ಯಗಳಲ್ಲಿ ಉಪಭಾಷೆಗಳ ಬಳಕೆಯನ್ನು ವ್ಯಕ್ತಿಯ ಜಾತಿ– ರಾಜಕಾರಣದ ಅಥವಾ ಉಪ ಪ್ರಾದೇಶಿಕ ಅಸ್ಮಿತೆಯ ಉಕ್ತಿಯಾಗಿ ಮಾತ್ರ – ಮಾನವಶಾಸ್ತ್ರೀಯ ನೆಲೆಯಲ್ಲಿ – ಕಾಣಲಾಗುತ್ತಿತ್ತು. ಉಪ ಭಾಷೆಗಳ ಬಳಕೆಯನ್ನು ಶಿಷ್ಟ ಭಾಷೆಯ ಅನಿವಾರ್ಯ ಭಾಗವಾಗಿ ಕಂಡಿದ್ದು ಬಹಳ ಕಡಿಮೆ. ಉಪ ಭಾಷೆಗಳನ್ನು ನಾವು ನದಿಯ ಹರಿವನ್ನಾಗಿಯೂ, ಶಿಷ್ಟ ಭಾಷೆಯನ್ನು ನಾವು ಆ ನದಿಯ ದಂಡೆಯಾಗಿಯೂ ಕಾಣಬೇಕು ಎಂಬುದು ನನ್ನ ಆಲೋಚನೆ. ನದಿಯ ದಂಡೆಗಳು ಹರಿವಿಗೆ ಒಂದು ವ್ಯಾಖ್ಯಾನ ಕೊಡುತ್ತವೆ. ನೀರಿನ ಹರಿವು ನದಿಗೆ ಜೀವ ತಂದುಕೊಡುತ್ತದೆ. ದೇವನೂರ ಮಹಾದೇವ ಹಾಗೂ ಪೂರ್ಣಚಂದ್ರ ತೇಜಸ್ವಿ ಅವರ ಕೃತಿಗಳನ್ನು ಕನ್ನಡದ ಓದುಗರು, ಭಾಷೆಯ ಮಹಾನ್ ಪರಂಪರೆಗೆ ಜೀವಂತಿಕೆ ನೀಡಿದ ಕೃತಿಗಳನ್ನಾಗಿ ಕಾಣಬೇಕು. ಇವರಿಬ್ಬರೂ ಶಿಷ್ಟವಲ್ಲದ ಭಾಷೆಗಳನ್ನು ಬಳಸಿಕೊಳ್ಳುವ ಎರಡು ವಿಭಿನ್ನ ಮಾದರಿಗಳನ್ನು ತೋರಿಸಿದ್ದಾರೆ. ಸುದೀರ್ಘ ಇತಿಹಾಸ ಹೊಂದಿರುವ ಭಾಷೆಗಳ ವಿಚಾರದಲ್ಲಿ ಪ್ರಾದೇಶಿಕ ಭಿನ್ನತೆಗಳ ಬಗ್ಗೆ ಹೇಳುವಂಥದ್ದು ಇನ್ನಷ್ಟಿದೆ. ಭಾಷೆಯನ್ನು ಮಾತನಾಡುವ ಜನರ ಸಂಖ್ಯೆಯ ದೃಷ್ಟಿಯಿಂದ ಕನ್ನಡವು ವಿಶ್ವದಲ್ಲಿ 32ನೇ ಸ್ಥಾನದಲ್ಲಿ ಇದೆ ಎಂಬುದನ್ನು ನಾವು ಕನ್ನಡದ ಬಗ್ಗೆ ಮಾತನಾಡುವಾಗ ನೆನಪಿನಲ್ಲಿ ಇರಿಸಿಕೊಳ್ಳಬೇಕು.

ಆದರೆ, ಭಾಷೆಯ ಸುದೀರ್ಘ ಇತಿಹಾಸದ ದೃಷ್ಟಿಯಿಂದ ಮಾತನಾಡುವಾಗ, ಕನ್ನಡವು ಮೊದಲ 15 ಭಾಷೆಗಳ ಪಟ್ಟಿಯಲ್ಲಿ ಸ್ಥಾನ ಪಡೆಯುತ್ತದೆ. ಕನ್ನಡದ ಇತಿಹಾಸವನ್ನು ಪ್ರೊಟೊ–ದ್ರಾವಿಡಿಯನ್ ಕಾಲಘಟ್ಟದಿಂದಲೂ ಲೆಕ್ಕಕ್ಕೆ ತೆಗೆದುಕೊಳ್ಳಬಹುದು. ಹಾಗೆ ಲೆಕ್ಕ ಹಾಕಿದಾಗ, (ಇಂದು ನಾವು ನೋಡುತ್ತಿರುವ ಕನ್ನಡ ಆ ಕಾಲದಲ್ಲಿ ಕೂಡ ಹೀಗೇ ಇತ್ತು ಎಂದು ನಾನು ಹೇಳುತ್ತಿಲ್ಲ. ಕನ್ನಡದ ಅಸ್ಮಿತೆಯಲ್ಲಿ ಪ್ರಮುಖ ಬದಲಾವಣೆಗಳು ಆಗಿವೆ) ಇಂದು ನಾವು ‘ಕನ್ನಡ’ ಎಂದು ಹೇಳುತ್ತಿರುವ ಭಾಷೆಯು ಹಲವು ಪ್ರದೇಶಗಳ ಪದಗಳನ್ನು ತನ್ನೊಡಲಲ್ಲಿ ಸೇರಿಸಿಕೊಂಡಿದೆ ಎಂಬುದು ಗೊತ್ತಾಗುತ್ತದೆ.

ಭಾಷೆಯೊಂದು ತನ್ನೊಳಗೆ ಸೇರಿಸಿಕೊಳ್ಳುವ ಹಲವು ಅಂಶಗಳು ಅಲ್ಲೇ ಘನೀಕೃತಗೊಂಡಿರುತ್ತವೆ, ಕೆಲವು ನಿರ್ದಿಷ್ಟ ಉದ್ದೇಶಗಳಿಗೆ ಮಾತ್ರ ಅವು ಬಳಕೆಯಾಗುತ್ತಿರುತ್ತವೆ. ಹಾಗಾಗಿಯೇ, ರೈತ ಬಳಸುವ ಕನ್ನಡಕ್ಕೂ ಧಾರ್ಮಿಕ ಶಾಲೆಗಳಲ್ಲಿ ಮತ್ತು ಪವಿತ್ರ ಗ್ರಂಥಗಳಲ್ಲಿ ಬಳಕೆಯಾಗಿರುವ ಕನ್ನಡಕ್ಕೂ ತೀರಾ ವ್ಯತ್ಯಾಸಗಳಿವೆ. ವಚನ ಸಾಹಿತ್ಯದಲ್ಲಿ ಬಳಕೆಯಾಗಿರುವ ಕನ್ನಡ ಒಂದು ಶೈಲಿಯದ್ದು, 19ನೆಯ ಶತಮಾನದ ಪತ್ರಿಕೆಗಳಲ್ಲಿ ಬಳಕೆಯಾದ ಕನ್ನಡ ಇನ್ನೊಂದು ಬಗೆಯದ್ದು. ರಂಗಭೂಮಿಯಲ್ಲಿ ಬಳಕೆಯಾಗುವ ಕನ್ನಡ ಇವೆರಡರಿಂದಲೂ ಭಿನ್ನ. ಇಂಗ್ಲಿಷ್‌ನಂತಹ ಭಾಷೆಗಳಲ್ಲಿ ಪ್ರಾದೇಶಿಕ ಬಗೆಗಳು, ಸಾಮಾಜಿಕ ಬಗೆಗಳು, ಕೆಲವು ವಯಸ್ಸಿನವರಿಗೆ ಮಾತ್ರ ಸೀಮಿತವಾದ ಬಗೆಗಳ ಬಗ್ಗೆ ಆಲೋಚಿಸಬಹುದು. ಪರ್ಷಿಯನ್, ತಮಿಳು ಮತ್ತು ಅರೇಬಿಕ್ ಭಾಷೆಗಳ ವಿಚಾರದಲ್ಲಿ ವಿವಿಧ ಕಾಲಘಟ್ಟಗಳಲ್ಲಿ ಬಳಕೆಯಲ್ಲಿದ್ದ ಭಾಷಾ ಬಗೆಗಳ ಬಗ್ಗೆ ಆಲೋಚಿಸಬಹುದು. ತಮಿಳಿನಲ್ಲಿ ಸಂಗಂ ಸಾಹಿತ್ಯದಲ್ಲಿ ಬಳಕೆಯಾದ (ಅದು ನಮ್ಮ ಕಾಲಕ್ಕಿಂತ ಸರಿಸುಮಾರು ಎರಡು ಸಾವಿರ ವರ್ಷಗಳಷ್ಟು ಹಳೆಯದು) ಭಾಷೆಯು ತೀರಾ ವಿಶಿಷ್ಟ. ಇದು ಕನ್ನಡಕ್ಕೂ ಅನ್ವಯವಾಗುತ್ತದೆ.

ಈ ಸಂದರ್ಭದಲ್ಲಿ ನಾವು ಹೊಸ ಸಾಮಾಜಿಕ ವಿದ್ಯಮಾನವೊಂದನ್ನು ಕಾಣುತ್ತಿದ್ದೇವೆ: ರಾಜ್ಯದಲ್ಲಿ ಕನ್ನಡವೇ ಮಾತೃಭಾಷೆ ಆಗಿರುವ ಬಹುತೇಕ ಯುವಕರಿಗೆ ಕನ್ನಡದಲ್ಲಿ ಮಾತನಾಡಲು ಬರುತ್ತಿದೆ, ಬೇರೆಯವರು ಕನ್ನಡದಲ್ಲಿ ಮಾತನಾಡಿದ್ದು ಅರ್ಥವಾಗುತ್ತಿದೆ. ಆದರೆ, ಅವರಿಗೆ ಕನ್ನಡದಲ್ಲಿ ಅಷ್ಟೊಂದು ಆರಾಮವಾಗಿ ಓದಲು ಸಾಧ್ಯವಾಗುತ್ತಿಲ್ಲ. ಅಷ್ಟೇ ಅಲ್ಲ, ಕನ್ನಡದಲ್ಲಿ ಬರೆಯುವುದು ಅವರಿಗೆ ಕಷ್ಟವಾಗುತ್ತಿದೆ. ಆದರೆ, ಅವರು ಇಂಗ್ಲಿಷ್‌ನಲ್ಲಿ ಕನ್ನಡಕ್ಕಿಂತ ಹೆಚ್ಚು ಆರಾಮವಾಗಿ ಬರೆಯಬಲ್ಲರು, ಓದಬಲ್ಲರು. ಇಂಥವರ ಸಂಖ್ಯೆ ಗಮನ ಸೆಳೆಯಲು ಸಾಕಾಗುವಷ್ಟು ದೊಡ್ಡದಿದೆ. ಇದನ್ನು ನಿರ್ದಿಷ್ಟ ವೈಜ್ಞಾನಿಕ ಪರಿಭಾಷೆ ಬಳಸಿ ವಿವರಿಸುವುದು ಸುಲಭವಲ್ಲ. ಬಹುಬೇಗ ಇದು ಕೂಡ ‘ಶಿಷ್ಟ’ ಸಾಹಿತ್ಯದ ‘ಭಾಷೆ’ಯ ಜೊತೆ ಸೇರಿಕೊಳ್ಳುತ್ತದೆ. ನಂತರ, ಇತರ ಪ್ರಾದೇಶಿಕ ಉಪಭಾಷೆಗಳ, ಸಾಮಾಜಿಕ ಉಪಭಾಷೆಗಳ ಜೊತೆ ಸ್ಥಾನ ಪಡೆದುಕೊಳ್ಳುತ್ತದೆ.

ಸಾಹಿತ್ಯದ ಅಭಿವ್ಯಕ್ತಿಗೆ ಇಷ್ಟೊಂದು ಬಗೆಗಳು ಸಿಗುತ್ತಿರುವುದು ಕನ್ನಡ ಮಾತನಾಡುವ ಪ್ರತಿ ವ್ಯಕ್ತಿಯ ಪಾಲಿಗೂ ಹೆಮ್ಮೆಯ ವಿಚಾರ. ಚೈತನ್ಯ ಮಹಾಪ್ರಭು ಅವರ ಜೀವನದ ಬಗ್ಗೆ ಕಾದಂಬರಿ ಬರೆಯಲು ತಾವು 15ನೆಯ ಶತಮಾನದ ಬಾಂಗ್ಲಾ ಭಾಷೆಯನ್ನು ಬಳಸಿಕೊಂಡಿದ್ದಾಗಿ ಬಂಗಾಲಿ ಲೇಖಕಿ ಮಹಾಶ್ವೇತಾದೇವಿ ಅವರು ಒಮ್ಮೆ ನನ್ನಲ್ಲಿ ಹೇಳಿದ್ದರು. ಹಾಗೆಯೇ, ಝಾನ್ಸಿಯ ರಾಣಿಯ ಬಗ್ಗೆ ಕಾದಂಬರಿ ಬರೆಯಲು ಮಹಾಶ್ವೇತಾದೇವಿ ಅವರು 19ನೆಯ ಶತಮಾನದ ಬಾಂಗ್ಲಾ ಭಾಷೆಯನ್ನು ಬಳಸಿಕೊಂಡಿದ್ದರು.

ಅವರೇ ಮತ್ತೊಂದು ಸಂದರ್ಭದಲ್ಲಿ ‘ದಿ ಮದರ್ ಆಫ್ 1084’ ಬರೆಯುವಾಗ ಪ್ರೆಸಿಡೆನ್ಸಿ ಕಾಲೇಜಿನ ಅಶಿಷ್ಟ ಭಾಷೆಯನ್ನು ಬಳಸಿಕೊಂಡರು. ಸೃಜನಾತ್ಮಕ ಅಭಿವ್ಯಕ್ತಿಗೆ ಹೆಚ್ಚಿನ ಅವಕಾಶ ನೀಡುವ ಇಂತಹ ವೈವಿಧ್ಯಗಳು ಭಾಷೆಯನ್ನು ಶ್ರೀಮಂತಗೊಳಿಸುತ್ತವೆ. ಕನ್ನಡಿಗರು ಕನ್ನಡಿಗರಾಗಿರುವುದಕ್ಕಾಗಿ ಹೆಮ್ಮೆಪಡಬೇಕಾದ ಸಂಗತಿಗಳಲ್ಲಿ ಇದೂ ಒಂದು.

ಅನುವಾದ: ವಿಜಯ್ ಜೋಷಿ

(ಲೇಖಕ ಸಾಹಿತ್ಯ ವಿಮರ್ಶಕ ಮತ್ತು ಸಾಂಸ್ಕೃತಿಕ ಕಾರ್ಯಕರ್ತ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT