ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೀವ ತಳೆದ ಗೋಡೆಗಳು

Last Updated 28 ಜನವರಿ 2019, 19:30 IST
ಅಕ್ಷರ ಗಾತ್ರ

ಅದೊಂದು ಮಲೆನಾಡಿನ ಮೂಲೆ. ಆದರೆ ಅಲ್ಲಿ ದೇಶದ ಮೂಲೆ ಮೂಲೆಗಳಿಂದ ಬಂದ ಸುಮಾರು 15 ಕಲಾವಿದರು ಇದ್ದರು. ಅವರೆಲ್ಲಾ ಸೇರಿ ‘ಸಾರ ಕಲಾ ಕುಟೀರ ಸಂಸ್ಥೆ’ಯ ಗೋಡೆಗಳನ್ನು ಜೀವಂತಗೊಳಿಸುವ ಪ್ರಯತ್ನದಲ್ಲಿದ್ದರು. ಒಬ್ಬರು ‘ವರ್ಲಿ’ ಕಲೆಯಲ್ಲಿ ಜೀವಿವೈವಿಧ್ಯಗಳಿಂದ ತುಂಬಿದ ಮರವೊಂದನ್ನು ಬಿಡಿಸುತ್ತಿದ್ದರು. ಮತ್ತೊಬ್ಬರು ‘ಗೊಂಡ್‌’ ಕಲೆಯ ಹುಲಿಯ ಬೆನ್ನಟ್ಟಿದ್ದರು. ಇನ್ನೊಬ್ಬರು ‘ಮಧುಬನಿ’ಯ ಮಧುವಣಗಿತ್ತಿಯನ್ನು ಹೊತ್ತು ನಡೆಯುತ್ತಿರುವ ಚಿತ್ರವನ್ನೇ ನೋಡುತ್ತಿದ್ದರು. ಹಿತ್ತಿಲಿನಲ್ಲಿ ತೊನೆಯುತ್ತಿದ್ದ ಬಾಳೆಯ ಮರ ಎದುರಿನ ಗೋಡೆಯ ಮೇಲೆ ತಲೆದೂಗುತ್ತಿತ್ತು. ಮೊದಲ ದಿನ ಕೆಂಪಾದ ಗೋಡೆಗಳು ದಿನಗಳೆದಂತೆ ಜೀವ ಪಡೆಯ ತೊಡಗಿದ್ದವು.

ಶಿವಮೊಗ್ಗ ಜಿಲ್ಲೆಯ ಹೊಸನಗರ– ಸಾಗರ ರಸ್ತೆಯಲ್ಲಿ ಬಟ್ಟೆಮಲ್ಲಪ್ಪ ಎನ್ನುವ ಊರಿದೆ. ಆ ಊರಿನ ಸನಿಹದ ದೊಂಬೆಕೊಪ್ಪದಲ್ಲಿ ಈ ಕುಟೀರವಿದೆ. ಹೊಸ ವರ್ಷದ ಮೊದಲ ವಾರ ‘ಜೀವಂತ ದೇಸಿ ಸಂಪ್ರದಾಯ ಹಾಗೂ ಸಮಕಾಲೀನ ಕಲಾ ಪ್ರಕಾರಗಳ ಚಿತ್ರ ಶಿಬಿರ’ ಏರ್ಪಾಡಾಗಿತ್ತು. ಶಿಬಿರದ ಅಂಗವಾಗಿ ಗೋಡೆಗಳ ಮೇಲೆ ಚಿತ್ತಾರ ಬಿಡಿಸಲು ಮಹಾರಾಷ್ಟ್ರ, ಮಧ್ಯಪ್ರದೇಶ, ಅಸ್ಸಾಂ, ರಾಜಸ್ಥಾನ, ದೆಹಲಿ, ಗುಜರಾತ್, ಬಿಹಾರ ಮತ್ತು ನಮ್ಮ ಕರ್ನಾಟಕದ ಕಲಾವಿದರು ತಮ್ಮೆಲ್ಲಾ ಪರಿಕರಗಳೊಂದಿಗೆ ಆಗಮಿಸಿದ್ದರು. ಅವರೆಲ್ಲಾ ಗ್ರಾಮೀಣ ಕಲಾವಿದರು. ಅವರ ಜೊತೆ ಒಂದಿಷ್ಟು ಸಮಕಾಲೀನ ಕಲಾವಿದರೂ (Contemporary artists) ಇದ್ದರು. ಆ ಶಿಬಿರದ ಉದ್ದೇಶವಿಷ್ಟೇ; ಸುಸ್ಥಿರ ಬದುಕಿಗಾಗಿ ಕಲೆ, ಹೊಸ ತಲೆಮಾರಿಗೆ ಚಿತ್ತಾರಗಳ ಪರಿಕಲ್ಪನೆಯನ್ನು ಕಟ್ಟಿಕೊಡುವುದು ಹಾಗೂ ಹಸೆ ಚಿತ್ತಾರದ ಪ್ರಕಾರಕ್ಕೆ ಹೊಸ ಶೋಭೆ ತರುವುದು.

ಗ್ರಾಮೀಣ ಕಲಾವಿದರು ಮತ್ತು ಸಮಕಾಲೀನ ಕಲಾವಿದರ ಸಂಗಮವಾದ ಈ ಶಿಬಿರದ ಮೂಲಕ ಕಲಾವಿದರು ಸಾರಾ ಕಲಾ ಕುಟೀರದ ಕಟ್ಟಡದ ಗೋಡೆಗಳ ಮೇಲೆ ಗೊಂಡ್‌, ಭಿಲ್, ವರ್ಲಿ, ಕಾಮನ್‌ಗಾರಿ, ಮಧುಬನಿ, ಹಸೆ ಚಿತ್ರಗಳನ್ನು ಚಿತ್ರಿಸುತ್ತಾ ಹೊರಟರು. ಜನವರಿ 1 ರಿಂದ 7ರವರೆಗೆ ನಡೆದ ಈ ಕಲಾಶಿಬಿರದಲ್ಲಿ ಚಿತ್ರ ಬಿಡಿಸುತ್ತಾ, ಕಲೆ ಮತ್ತು ಬದುಕಿನ ಬಗ್ಗೆ ಚರ್ಚೆಗಳೂ ನಡೆದವು.

‘ವಿಜ್ಞಾನ ಹೇಗೆ ಹಳ್ಳಿಗೆ ಹಿಂದಿರುಗಲೇ ಬೇಕಾಯಿತೋ ಕಲೆಯೂ ಹಾಗೆ, ಉಳಿದೆಲ್ಲವೂ ಹಾಗೇ ಹಿಂದಿರುಗಲೇ ಬೇಕಾಗಿದೆ. ನಗರವನ್ನು ಬಯಸಿದಷ್ಟೂ ಅದು ದುಬಾರಿಯಾಗುತ್ತದೆ. ಒಂದೊಮ್ಮೆ ತ್ಯಜಿಸಿದರೆ ಅದು ನಮ್ಮ ಹಿಂದೆ ಬಂದು ಬೇಡಿಕೊಳ್ಳತೊಡಗುತ್ತದೆ’ ಇದು ಶಿಬಿರದಲ್ಲಿ ಪಾಲ್ಗೊಂಡಿದ್ದ ಮಧ್ಯಪ್ರದೇಶದ ಬುಡಕಟ್ಟು ಹಳ್ಳಿಯ ಚೋಟಿ ಟೀಕಮ್ ಎಂಬುವವರ ಅಭಿಪ್ರಾಯ.

ಒಂದು ಪುಟ್ಟ ಹಳ್ಳಿ ಕಲೆಯಿಂದಾಗಿ ಇಷ್ಟೆಲ್ಲಾ ವಿಸ್ತಾರಗೊಳ್ಳುವುದು ಅಚ್ಚರಿಯ ವಿಚಾರ. ಇದು ಎಲ್ಲಾ ಹಳ್ಳಿಗಳಲ್ಲೂ ಆಗಬೇಕಾಗಿದೆ. ಇದಕ್ಕೆ ಉತ್ತರವಾಗಿ ಶಿಬಿರದ ಆಯೋಜಕ ಎಚ್. ಜಿ. ಅರುಣ್‍ಕುಮಾರ್ ‘ಈ ಶಿಬಿರಕ್ಕೆ ನೆರವಾದದ್ದು ಆರ್ಟ್ ಫಾರ್ ಕನ್ಸರ್ನ್ (ART FOR CONCERN). ಇದರ ಕನ್ಸರ್ನ್‌ ಎಲ್ಲೆಡೆಗೂ ಗುರುತನ್ನು ಚಾಪಿಸಬೇಕಾಗಿದೆ’ ಎನ್ನುತ್ತಾರೆ.

ಚಿತ್ತಾರ ನೋಡಿದ ಮಕ್ಕಳು
ಕುಟೀರದ ಗೋಡೆಗಳ ಮೇಲೆ ಬರೆದ ವೈವಿಧ್ಯಮಯ ಚಿತ್ತಾರಗಳನ್ನು ನೋಡಲು ಸುತ್ತಲಿನ ಶಾಲೆಯ ಮಕ್ಕಳನ್ನು ಕರೆತರಲಾಗಿತ್ತು. ‘ಹಳ್ಳಿಯ ಜನ ತಮ್ಮ ಒರಟು ಕೈಗಳಿಂದ ಬಿಡಿಸುವ ಚಿತ್ತಾರಗಳಿಗೆ ಇಷ್ಟೆಲ್ಲಾ ಪ್ರಾಧಾನ್ಯವಿದೆಯಾ’ ಎನ್ನುವ ಅಚ್ಚರಿ ಮಕ್ಕಳದ್ದು. ಅವರಿಗೆ ನಿಜವಾದ ಕುದುರೆಗಿಂತ ಚಿತ್ತಾರದ ಕುದುರೆ, ಆನೆ, ಅದರ ಮರಿ, ಆಲದಮರ, ಹಲಸಿನಹಣ್ಣು, ಕೋಳಿ, ಬಾಳೆಮರ ಇವೆಲ್ಲಾ ಖುಷಿಕೊಡುತ್ತಿದ್ದವು. ಇವುಗಳನ್ನೆಲ್ಲಾ ನಾವೂ ಸುಲಭವಾಗಿ ಬಿಡಿಸಬಹುದಲ್ಲಾ ಎನಿಸುತ್ತಿತ್ತು.

ಬುಡಕಟ್ಟಿನ ಚಿತ್ತಾರ ಪ್ರಕಾರಗಳು ಅವರ ಬದುಕಿನ ಪ್ರತಿಬಿಂಬವಾಗಿರುತ್ತವೆ. ಅದು ಮಹರಾಷ್ಟ್ರವಿರಲಿ, ಬಿಹಾರ
ವಿರಲಿ ನಮ್ಮ ಹಸೆ ಚಿತ್ತಾರದಂತೆಯೇ ಭಾಸವಾಗುತ್ತದೆ.ಅಲ್ಲೂ ಇಲ್ಲೂ ಎಲ್ಲೆಲ್ಲೂ ಬದುಕೇ ಚಿತ್ತಾರವಾಗುತ್ತದೆ. ಚಿತ್ತಾರವೇ ಬದುಕಾಗುತ್ತದೆ. ನಾವೆಲ್ಲಾ ಒಂದೇ ಎನ್ನುವ ಭಾವ ಬಲವಾಗುತ್ತದೆ. ಇದು ಚಿತ್ತಾರ ವಿಸ್ತಾರವಾಗುವ ರೀತಿ. ಅದಕ್ಕಾಗಿಯೇ ಇಂಥ ಪರಸ್ಪರ ಸಮಾವೇಶ, ಕೊಡುಕೊಳ್ಳುವಿಕೆಗಳು ನಡೆಯುತ್ತಿರಬೇಕು. ಸಾರ ಸಂಸ್ಥೆ ಬದುಕನ್ನು ಕಟ್ಟಿಕೊಳ್ಳಲು ಸಹಾಯವಾಗುವ ಕಲೆಯನ್ನು ಇಲ್ಲಿ ಪ್ರಸ್ತುತಪಡಿಸುತ್ತಿದೆ.

ಸಾರಾ ಕಲಾ ಕುಟೀರ ನಾಲ್ಕು ವರ್ಷಗಳಿಂದ ಇಂಥ ಕಲಾತ್ಮಕ ಕಾರ್ಯಕ್ರಮವನ್ನು ಆಯೋಜಿಸುತ್ತಿದೆ. ಇಲ್ಲಿ, ಮಕ್ಕಳೊಂದಿಗೆ ಶಿಕ್ಷಕರು, ಬುದ್ದಿಜೀವಿಗಳೂ, ರೈತರು, ಕಲಾವಿದರು ಹೀಗೆ ಸಮುದಾಯದ ಪ್ರತಿಯೊಬ್ಬರೂ ಸಂಪರ್ಕ ಹೊಂದಿ ಸುಸ್ಥಿರ ಅಭಿವೃದ್ಧಿಗೆ ಸಂಬಂಧಿಸಿದ ಜ್ಞಾನವನ್ನು ಪರಸ್ಪರ ಹಂಚಿಕೊಳ್ಳುವ ವೇದಿಕೆಯೊಂದು ತೆರೆದುಕೊಳ್ಳುತ್ತಿದೆ. ‘ಮುಂದೆಯೂ ಇಲ್ಲಿ ಚಿತ್ತಾರಗಳ ಪ್ರದರ್ಶನ ಇರುತ್ತದೆ. ನಾಡಿನ ಎಲ್ಲಾ ಶಾಲಾ ಮಕ್ಕಳೂ ಇಲ್ಲಿಗೆ ಬರಬೇಕು’ ಎನ್ನುವುದು ಸಾರಾದ ಆಶಯ. ಸಾರಾ ಕುಟೀರ ಕೇಂದ್ರ ಸಂಪರ್ಕ ಸಂಖ್ಯೆ : 8277493346

**

ಕಲೆ ಮತ್ತು ಸುಸ್ಥಿರ ಬದುಕು

’ಕುಶಲಕರ್ಮಿಯೊಬ್ಬ ಕಾಲೇಜಿಗೆ ಹೋಗಿ ಕಲಿತರೆ ಆತ ಕಲಾವಿದ ಆಗುತ್ತಾನೆ. ಮುಂದೆ ಅವನದೆಲ್ಲಾ ಆರ್ಥಿಕ ಚಿಂತನೆ ಆಗುತ್ತದೆ. ನೀವು ಕುಶಲಕರ್ಮಿಗಳಾಗಿಯೇ ಉಳಿಯಬೇಕೆಂದರೆ ಬಡತನದಲ್ಲಿ, ಸ್ವಾತಂತ್ರ್ಯವಿಲ್ಲದೇ ಇರಬೇಕಾಗಿದೆ. ಇದನ್ನು ಮೀರುವ ಪ್ರಯತ್ನ ಶತಮಾನಗಳಿಂದ ನಡೆಯುತ್ತಿದೆ, ಸಾಧ್ಯವಾಗುತ್ತಿಲ್ಲ. ಗ್ರಾಮವನ್ನು ಅರ್ಥ ಮಾಡಿಕೊಳ್ಳುತ್ತಾ ನಗರದಲ್ಲಿರುವುದು, ನಗರ ಬಯಸುತ್ತಾ ಹಳ್ಳಿಗಳಲ್ಲಿ ಉಳಿಯುವುದು ಎರಡೂ ಸಮನ್ವಯವಾಗದು. ಈ ಎರಡೂ ಸಮತೋಲನಗೊಳ್ಳಬೇಕೆಂದರೆ ಅರಿವಿರುವವರು ಗುರುತನ್ನು ಕಳೆದುಕೊಳ್ಳಬೇಕು. ಗುರುತೇ ಇಲ್ಲದವರು ಅರಿವಿನ ಪರಿಧಿಗೆ ಬರಬೇಕು. ಇದು ಕಷ್ಟದ್ದಲ್ಲ. ಅನೇಕರಿಗೆ ಇದು ಸಾಧ್ಯವಾಗಿದೆ. ಉದಾಹರಣೆಗೆ ಫುಕುವೋಕಾ; ವಿಜ್ಞಾನಿ, ಆದರೆ ಗುರುತು ಕಳೆದುಕೊಳ್ಳಲು ಹಳ್ಳಿಗೆ ಬರುತ್ತಾರೆ. ಹಳ್ಳಿ ಅವರಿಗೆ ಅರ್ಥವಾದಂತೆ ಅನಿಸುತ್ತದೆ, ಆದರೆ ಆಗುತ್ತಿರುವುದಿಲ್ಲ. ಅನೇಕ ಸೋಲುಗಳ ಬಳಿಕ ಅವರು ಸಮತೋಲನ ಪಡೆಯುತ್ತಾರೆ. ಅದು ಇತಿಹಾಸವಾಗುತ್ತದೆ’ ಎಂದು ಮಾತು ಮುಗಿಸಿದರು. ಪ್ರಸನ್ನ ಅವರ ಈ ಮಾತುಗಳು ಶಿಬಿರದ ಚಿತ್ರಗಳಿಗೆ ಪೂರಕವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT