‘ಮುಕ್ತಿನಾಗ’ದಲ್ಲಿ ತುಳವಷಷ್ಠಿ

7

‘ಮುಕ್ತಿನಾಗ’ದಲ್ಲಿ ತುಳವಷಷ್ಠಿ

Published:
Updated:
Prajavani

ನಗರದ ಹೊರವಲಯದಲ್ಲಿರುವ ರಾಮೋಹಳ್ಳಿ ಬಳಿಯ ‘ಮುಕ್ತಿನಾಗ ಕ್ಷೇತ್ರ’, ಹೆಸರಿಗೆ ತಕ್ಕಂತೆ ನಾಗ ದೇವರ ಸಂಬಂಧಿತ ಎಲ್ಲ ದೋಷಗಳಿಗೆ ಮುಕ್ತಿ ದೊರಕಿಸಿಕೊಡುವ ತಾಣ. ನಾಗ ದೇವರಿಗೆ ಸಂಬಂಧಪಟ್ಟಂತಹ ಎಲ್ಲ ಪೂಜಾ ಕೈಂಕರ್ಯ ಇಲ್ಲಿ ನಡೆಯುತ್ತದೆ. ನಿತ್ಯವೂ ಸಾವಿರಾರು ಮಂದಿ ಇಲ್ಲಿಗೆ ಬಂದು ತಮ್ಮ ಇಷ್ಟಾರ್ಥಗಳನ್ನು ಈಡೇರಿಸಿಕೊಳ್ಳುತ್ತಿದ್ದಾರೆ. ತಮ್ಮ ಸಂಕಷ್ಟಗಳನ್ನು ತೋಡಿಕೊಂಡರೆ ಇಲ್ಲಿ ಪರಿಹಾರ ಸಿಗುತ್ತದೆ ಎಂಬುದು ಭಕ್ತರ ನಂಬಿಕೆ.

ವಿಜಯಾ ಕಾಲೇಜಿನಲ್ಲಿ ಪ್ರೊಫೆಸರ್ ಆಗಿದ್ದ ಸುಬ್ರಹ್ಮಣ್ಯ ಶಾಸ್ತ್ರಿ ಎಂಬುವರು ಈ ಕ್ಷೇತ್ರವನ್ನು 1999ರಲ್ಲಿ ಸ್ಥಾಪಿಸಿದರು. ಅಲ್ಲಿಂದ ಇಲ್ಲಿಯವರೆಗೆ ಕ್ಷೇತ್ರದ ಮಹಿಮೆ ದಿನೇ ದಿನೇ ಹೆಚ್ಚುತ್ತಿದೆ. ಇಲ್ಲಿನ ಮತ್ತೊಂದು ವಿಶೇಷವೆಂದರೆ 16 ಅಡಿಯ ಏಳು ಹೆಡೆಯುಳ್ಳ ನಾಗಮೂರ್ತಿ.

ಪ್ರಾರಂಭವಾದ ದಿನದಿಂದಲೇ ದೇಗುಲದ ಉಸ್ತುವಾರಿಯನ್ನು ಸುಬ್ರಹ್ಮಣ್ಯ ಶಾಸ್ತ್ರಿ ಅವರೇ ನೋಡಿಕೊಂಡಿದ್ದರು. ಪ್ರತಿಯೊಂದು ಪೂಜೆಯೂ ಅವರ ನೇತೃತ್ವದಲ್ಲಿ ಸಾಗುತ್ತಿತ್ತು. ಸುಬ್ರಹ್ಮಣ್ಯ ಶಾಸ್ತ್ರಿ ನಿಧನದ ಬಳಿಕ ಆ ಜವಾಬ್ದಾರಿಯನ್ನು ಅವರ ಪತ್ನಿ ಗೌರಿ ಹೊತ್ತುಕೊಂಡಿದ್ದು, ಮುಕ್ತಿ ನಾಗ ದೇವಸ್ಥಾನವನ್ನು ಅತ್ಯಂತ ವ್ಯವಸ್ಥಿತವಾಗಿ ಮತ್ತು ಅಚ್ಚುಕಟ್ಟಾಗಿ ನಡೆಸಿಕೊಂಡು ಬರುತ್ತಿದ್ದಾರೆ.

2004ರಲ್ಲಿ ದೇಗುಲದ ಆವರಣದಲ್ಲಿ ಕುಂಭಾಭಿಷೇಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಅದಾದ ಬಳಿಕ, ಪ್ರತಿ ವರ್ಷದ ಜೇಷ್ಠ ಮಾಸದ ಶುದ್ಧ ತ್ರಯೋದಶಿಯಲ್ಲಿ ಬ್ರಹ್ಮರಥೋತ್ಸವ ಹಾಗೂ ಪ್ರತಿ ಮಾಘ ಮಾಸದ ಶುದ್ಧ ಷಷ್ಠಿಯಲ್ಲಿ ರಥೋತ್ಸವ ಕಾರ್ಯಕ್ರಮವನ್ನು ತಪ್ಪದೇ ಆಯೋಜಿಸಲಾಗುತ್ತಿದೆ. ಪ್ರತಿವರ್ಷ ಷಷ್ಠಿಪೂಜೆ ಹಾಗೂ ಇನ್ನೀತರ ವಿಶೇಷ ಸೇವಾ ಕೈಂಕರ್ಯಗಳು ಇಲ್ಲಿ ಜರುಗುತ್ತಿವೆ. ಅಂತೆಯೇ ಈ ಬಾರಿಯೂ 15ನೇ ವರ್ಷದ ಷಷ್ಠಿಪೂಜಾ ಕಾರ್ಯಕ್ರಮ ಆಯೋಜಿಸಲಾಗಿದೆ.

ತುಳವ ಷಷ್ಠಿ ವಿಶೇಷ

‘ಜ.12ರ ತುಳವ ಷಷ್ಠಿ ಪ್ರಯುಕ್ತ ಬೆಳಿಗ್ಗೆಯಿಂದಲೇ ವಿಶೇಷ ಪೂಜೆ ಹಾಗೂ ರಥೋತ್ಸವ ಕಾರ್ಯಕ್ರಮಗಳು ನಡೆಯಲಿವೆ. ಬೆಳಿಗ್ಗೆ 5ರಿಂದ ಸಂಜೆ 5ರ ವರೆಗೆ ಆದಿಮುಕ್ತ ನಾಗನಿಗೆ ಕ್ಷೀರಾಭಿಷೇಕ ನಡೆಯುತ್ತದೆ. ಅಂದು ದೇಗುಲಕ್ಕೆ ಬರುವ ಭಕ್ತರಿಗೆ ಗರ್ಭಗುಡಿ ಪ್ರವೇಶಕ್ಕೆ ಅವಕಾಶ ನೀಡಿ, ಬೆಳ್ಳಿಚೆಂಬು ಮೂಲಕ ಹಾಲು ನೀಡಿ ಮೂಲ ನಾಗಮೂರ್ತಿಗೆ ಅಭಿಷೇಕ ಮಾಡಿಸುತ್ತೇವೆ. ಯಾರು ಬೇಕಾದರೂ ದೇಗುಲಕ್ಕೆ ಬಂದು ಸುಬ್ರಹ್ಮಣ್ಯನಿಗೆ ಹಾಲು ಅಭಿಷೇಕ ಮಾಡಬಹುದು’ ಎಂದು ಮಾಹಿತಿ ನೀಡಿದರು ಗೌರಿ.

‘ಪ್ರತಿವರ್ಷ ಎರಡನೇ ಷಷ್ಠಿಯಂದು ಬೃಹತ್ ನಾಗಮೂರ್ತಿಗೆ ನವನೀತ ಅಲಂಕಾರ (ಬೆಣ್ಣೆ ಅಲಂಕಾರ) ಮಾಡಲಾಗುತ್ತದೆ. ಈ ಅಲಂಕಾರಕ್ಕೆ ಹೆಚ್ಚು ಬೆಣ್ಣೆ ಬೇಕಾಗುತ್ತದೆ. ಬೆಣ್ಣೆ ಅಲಂಕಾರದಲ್ಲಿ ನಾಗಮೂರ್ತಿ ನೋಡಲು ಅದ್ಭುತವಾಗಿ ಕಾಣುತ್ತದೆ. ಬಳಿಕ ಮಧ್ಯಾಹ್ನ 12ಕ್ಕೆ ಗಜವಾಹನ ಉತ್ಸವ ಹಾಗೂ ವಲ್ಲಿದೇವ ಸೇವಾಸಮೇತ ಸುಬ್ರಹ್ಮಣ್ಯಸ್ವಾಮಿಯ ಉತ್ಸವ ನಡೆಯಲಿದೆ’ ಎನ್ನುತ್ತಾರೆ.

ಫೆಬ್ರವರಿ 10ರಂದು ಈ ಕ್ಷೇತ್ರದಲ್ಲಿ ಕುಮಾರ ಷಷ್ಠಿ ನಡೆಯಲಿದೆ. ಸ್ಕಂದ ಷಷ್ಠಿಯಂದು ಮಯೂರ ವಾಹನೋತ್ಸವ ಹಾಗೂ ಸ್ವಾಮಿಗೆ ಅರಿಶಿನ ಅಲಂಕಾರ ಇರುತ್ತದೆ. ಆದಿಮೂಲದಲ್ಲಿ ಭಕ್ತಾದಿಗಳ ಕೈಯಲ್ಲಿ ನೇರವಾಗಿ ಹಾಲಿನ ಅಭಿಷೇಕ ಮಾಡಿಸಲಾಗುತ್ತದೆ. ತುಳುವ ಷಷ್ಠಿ ಹಾಗೂ ಕುಮಾರ ಷಷ್ಠಿಯಲ್ಲೂ ನಾಗಮೂರ್ತಿಗಳಿಗೆ ಕ್ಷೀರಾಭಿಷೇಕಕ್ಕೆ ಅವಕಾಶವಿರುತ್ತದೆ.

ಅಭಿಷೇಕ ಮಾಡುವಾಗ ಭಕ್ತರು ತಮ್ಮ ಮನದಲ್ಲಿ ಇಚ್ಛಿಸಿದ ಎಲ್ಲ ಕಾರ್ಯಗಳು ನೆರವೇರುತ್ತದೆ ಎಂಬ ನಂಬಿಕೆ ಭಕ್ತರದ್ದು. ಹೀಗಾಗಿ, 9 ಮಂಗಳವಾರ ಅಥವಾ 9 ಭಾನುವಾರ ಭಕ್ತರು ಇಲ್ಲಿಗೆ ಬಂದು 9 ಪ್ರದಕ್ಷಿಣೆ ಹಾಕಿದರೆ ಮನೋಸಂಕಲ್ಪಗಳು ಈಡೇರುತ್ತವೆ. ರೋಗ ರುಜಿನಗಳು ನಿವಾರಣೆಯಾಗುತ್ತದೆ. ಹೀಗೆ ಬರುವ ಭಕ್ತರಿಗೆ ಪ್ರಸಾದದ ವ್ಯವಸ್ಥೆಯನ್ನೂಕಲ್ಪಿಸಲಾಗಿದೆ.

ಏನೆಲ್ಲ ಪೂಜೆ

ಸರ್ಪಸಂಸ್ಕಾರ, ಕಾಳಸರ್ಪ ಶಾಂತಿ, ಆಶ್ಲೇಷ ಬಲಿ, ನಾಗಪ್ರತಿಷ್ಠೆ, ನಾಗಬಲಿ, ಕುಜ ಮತ್ತು ಶನಿ ಶಾಂತಿ ಪೂಜಾ ಕಾರ್ಯಗಳನ್ನು ಇಲ್ಲಿ ಮಾಡಲಾಗುತ್ತದೆ. ನಾಗದೋಷ ಸಂಬಂಧಿತ ಹಲವಾರು ಸಮಸ್ಯೆಗಳನ್ನು ಇಲ್ಲಿ ಪರಿಹರಿಸಲಾಗುತ್ತದೆ.

ಸಂಪರ್ಕ: 9341250664 

ಕ್ಷೇತ್ರ ಸ್ಥಾಪನೆ ಹಿನ್ನೆಲೆ

ಸುಬ್ರಹ್ಮಣ್ಯಶಾಸ್ತ್ರಿ ಅವರಿಗೆ ಪದೇ ಪದೇ ಕನಸಿನಲ್ಲಿ ಕಾಣಿಸಿಕೊಳ್ಳುವ ನಾಗರೂಪದ ಸುಬ್ರಹ್ಮಣ್ಯಸ್ವಾಮಿ ದೇವರು ದೇಗುಲ ಸ್ಥಾಪಿಸುವಂತೆ ಸೂಚಿಸುತ್ತಾರೆ. ಅವರ ಮನೆಗೆ ಒಮ್ಮೆ ನಾಗಭೂಷಣ ಎಂಬುವರು ಬಂದು ತಮ್ಮ ಜಮೀನಿಗೆ ಕರೆದೊಯ್ದಿದ್ದರು. ಅಲ್ಲಿ 16 ಅಡಿಗೂ ಹೆಚ್ಚು ಉದ್ದದ ಹಾವು ಹೆಡೆ ನಿಂತಿರುವುದು ಕಾಣುತ್ತದೆ. ಅದೇ ದಿನ ಮತ್ತೆ ಕನಸಿನಲ್ಲಿ ಬಂದ ನಾಗರಹಾವು ‘ಇಂದು ನನ್ನನ್ನು ನೀನು ನೋಡಿದ ಜಾಗದಲ್ಲೇ ದೇಗುಲ ಸ್ಥಾಪಿಸು’ ಎಂದು ಸೂಚಿಸುತ್ತದೆ. ಕುಟುಂಬಸ್ಥರ ಜತೆ ಮಾತನಾಡಿ ನಾಗಭೂಷಣ ಅವರ ಆ ಜಮೀನು ಖರೀದಿಸಿ, ಅಲ್ಲಿ ದೇಗುಲ ಸ್ಥಾಪಿಸಿದರು ಎಂದು ಮಾಹಿತಿ ನೀಡಿದರು ಗೌರಿ.

ಬರಹ ಇಷ್ಟವಾಯಿತೆ?

 • 14

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !