ಕಲಾಕ್ಷೇತ್ರಕ್ಕಾಗಿ ಹೋರಾಟದ ನೆನಪು

7

ಕಲಾಕ್ಷೇತ್ರಕ್ಕಾಗಿ ಹೋರಾಟದ ನೆನಪು

Published:
Updated:
Prajavani

1973ರ ಕೊನೆ ಅಥವಾ 1974ರ ಮೊದಲ ಕಾಲ ಇರಬೇಕು. ಮಧ್ಯಾಹ್ನ ಆರ್. ನಾಗೇಶ್ ಸಿಕ್ಕಿದ್ದು ಸೆಂಟ್ರಲ್ ಕಾಲೇಜಿನಲ್ಲಿ. ‘ಸಾಯಂಕಾಲದ ಪ್ರತಿಭಟನೆಗೆ ನೀವು ಬರಬೇಕು’ ಎಂದರು. ‘ರವೀಂದ್ರ ಕಲಾಕ್ಷೇತ್ರದಲ್ಲಿ ಅಂದು ಪ್ರದರ್ಶನವಾಗಬೇಕಿದ್ದ ‘ಆ ಮನಿ’ ನಾಟಕವನ್ನು ಸರ್ಕಾರ ರದ್ದು ಮಾಡಿದೆ. ಅದರ ವಿರುದ್ಧದ ಪ್ರತಿಭಟನೆ’ ಎಂದರು.

‘ನೀವು ಬಂದರೆ ಪ್ರತಿಭಟನೆಗೆ ಮಜ’ ಎಂದು ಪಂಪು ಹೊಡೆದರು. ಆಗಲಿ ಎಂದು ಕಲಾಕ್ಷೇತ್ರದತ್ತ ನಮ್ಮ ಜೋಡಿ ಸಾಗಿತು. ಆಗೆಲ್ಲಾ ಸರ್ಕಾರಿ ಕಾರ್ಯಕ್ರಮಗಳಿಗೆ ಕಲಾಕ್ಷೇತ್ರ ಅಥವಾ ಟೌನ್‍ಹಾಲ್ ಬೇಕಿದ್ದರೆ, ಒಂದು ದಿನದ ನೋಟಿಸ್ ಕೊಟ್ಟು ಬುಕಿಂಗ್ ರದ್ದು ಮಾಡುವ ಸಂಪೂರ್ಣ ಹಕ್ಕು ಸರ್ಕಾರಕ್ಕಿತ್ತು. ಕಲಾಕ್ಷೇತ್ರದ ಹಿಡಿತ ಅಥವಾ ಆಡಳಿತ ಇದ್ದದ್ದು ಪಿಡಬ್ಲ್ಯುಡಿ ಇಲಾಖೆಯಡಿ. ಅದಕ್ಕೆ ಕಲಾಕ್ಷೇತ್ರ ಒಂದು ಕಟ್ಟಡವೇ ಹೊರತು, ಸಂಸ್ಕೃತಿಯ ಕೇಂದ್ರವಾಗಿರಲಿಲ್ಲ. ಬುಕಿಂಗ್ ಸಹ ಅದರ ಮರ್ಜಿಯಲ್ಲೇ. 

ಆ ಸಂಜೆಯ ರಂಗಸಂಪದದ ‘ಆ ಮನಿ’ ನಾಟಕ ರದ್ದಾದದ್ದು, ಬೆಂಗಳೂರು ಜಲಮಂಡಳಿಯ ಎಂಜಿನಿಯರ್‌ಗಳ ಯಾವುದೋ ಕಾರ್ಯಕ್ರಮಕ್ಕಾಗಿ. ಮಂತ್ರಿಗಳು, ಒಂದಿಬ್ಬರು ಅಧಿಕಾರಿಗಳು ಬರುವವರಿದ್ದರು.

ಇದು ಗುಪ್ತ ಸಂಚು ಆದ್ದರಿಂದ ಹೆಚ್ಚು ಜನಕ್ಕೆ ಹೇಳಿರಲಿಲ್ಲ. ಬಹಿರಂಗವಾದರೆ ಜಲಮಂಡಳಿಯವರು ಎಚ್ಚೆತ್ತುಕೊಳ್ಳುವರೆಂದು. ವಿಷಯ ಕಾರಂತರ ಕಿವಿಗೆ ತಲುಪಿಸಿದ್ದರಿಂದ ಅವರೂ ಬರುತ್ತೇನೆಂದಿದ್ದರು.

ಏಳೂವರೆಗೆ ಸಮಾರಂಭ ಶುರುವಾಗಿತ್ತು. ಕಾರಂತರ ಪತ್ತೆಯಿಲ್ಲ. ಟಿ.ಎಸ್. ರಂಗನೊಡನೆ ಆಟೊದಿಂದ ಇಳಿದರು ಬಿ.ವಿ. ಕಾರಂತ. ತಡವಾಗಿದ್ದರಿಂದ ಗೊಂದಲ, ಗಡಿಬಿಡಿಯಲ್ಲಿ ಕಾರಂತರು ‘ಬನ್ನಿ, ಬನ್ನಿ ಹೋಗೋಣ ಎಂದು ಕಲಾಕ್ಷೇತ್ರದ ಬಾಗಿಲಿನತ್ತ ನಡೆದರು. ಮುಂದೆ ಹೋದ ನಾಗೇಶ, ಕಾರಂತರು ಬಂದರು ದಾರಿ ಬಿಡಿ’ ಎಂದು ದಾರಿ ಮಾಡಿದರು. ನಾವೆಲ್ಲಾ ಅವರ ಹಿಂದೆ.

ಆಡಿಟೋರಿಯಂನ ಸೀಟುಗಳ ಮೊದಲನೆ ಸಾಲಿನ ಬಳಿ ಬಂದೊಡನೇ ಪ್ರತಿಭಟನೆ, ಕೂಗಾಟ, ಧಿಕ್ಕಾರಗಳ ಘೋಷಣೆ ಆರಂಭವಾಯಿತು. ‘ಕಲಾಕ್ಷೇತ್ರ ಇರುವುದು- ಕಲಾವಿದರಿಗಾಗಿ’, ‘ಕಲಾಕ್ಷೇತ್ರ ಇರುವುದು- ನಾಟಕಕ್ಕೆ ಮಾತ್ರ’, ‘ಸರ್ಕಾರದ ಕಲಾನೀತಿಗೆ ಧಿಕ್ಕಾರ’ ಎಂದಾಗ ಜಲಮಂಡಳಿಯವರು ಗಾಬರಿಯಾದರು. ಅವರಿಗೆ ಏನು ನಡೆಯುತ್ತಿದೆ, ಯಾಕೆ ಈ ಪ್ರತಿಭಟನೆ ಎಂಬುದೇ ತಿಳಿಯಲಿಲ್ಲ. ಭಾಷಣ ಅಲ್ಲಿಗೇ ನಿಂತಿತ್ತು. ಅಷ್ಟರಲ್ಲಿ ನಾಗೇಶ ನನ್ನನ್ನೆಳೆದುಕೊಂಡು ಸ್ಟೇಜಿಗೆ ಹೋದರು. ‘ಆ ಮನಿ’ ನಾಟಕದ ಹ್ಯಾಂಡ್‍ಬಿಲ್ ತೂರಿದರು. ಮೇಲಿಂದ ಎಳೆಎಳೆಯಾಗಿ ಬೀಳುತ್ತಿದ್ದ ಹ್ಯಾಂಡ್‍ಬಿಲ್ ನಿಧಾನವಾಗಿ ಸ್ಟೇಜ್ ಮುಂದೆ ಇಳಿಯುತಿತ್ತು. ನಮ್ಮ ಘೋಷಣೆ ಮುಂದುವರಿಯುತ್ತಲೇ ಇತ್ತು.

ಜಲಮಂಡಳಿಯವರು ನನ್ನನ್ನೆಳೆದು ಕೆಳಗೆ ನೂಕಿದರು. ಒಬ್ಬರು ಹೊಡೆಯಲು ಬಂದಾಗ ಕಾರಂತರು ‘ಯಾಕೆ ಹೊಡಿತೀರಿ’ ಅಂತ ನನಗೆ ಹೊಡೆದವನ ಕತ್ತುಪಟ್ಟಿ ಹಿಡಿದರು. ಅಷ್ಟರಲ್ಲಿ ಜಲಮಂಡಳಿಯ ಡ್ರೈವರ್‌, ಸಿಬ್ಬಂದಿ ಅಖಾಡಕ್ಕಿಳಿದು ನಮ್ಮನ್ನೆಲ್ಲಾ ಆಚೆ ನೂಕಿದರು. ಪೊಲೀಸರೂ ಬಂದರು. ಕಲಾಕ್ಷೇತ್ರದ ಫಾಯರ್‌ನಲ್ಲಿ ನಿಂತಿದ್ದ ನಮ್ಮನ್ನು ‘ಅರೆಸ್ಟ್ ಮಾಡಿದ್ದೇವೆ ನಡೆಯಿರಿ’ ಎಂದರು. ಶಿವಾಜಿ ಟಾಕೀಸ್ ಹಿಂಭಾಗದಲ್ಲಿರುವ ಸಿಲ್ವರ್ ಜ್ಯೂಬಿಲಿ ಪಾರ್ಕ್ ಪೊಲೀಸ್ ಸ್ಟೇಷನ್‍ಗೆ ಕರೆದೊಯ್ದರು.

ಆವತ್ತು ಬೆಂಗಳೂರು ವಿ.ವಿ ಘಟಿಕೋತ್ಸವ. ಸೆಕ್ಷನ್ 144 ಜಾರಿಗೆ ತಂದಿದ್ದರು. ಸ್ಟೇಷನ್‌ಗೆ ಬರುವಾಗ ಗುಂಪಾಗಿ ಬಂದಿದ್ದಕ್ಕೆ ರಸ್ತೆಯಲ್ಲಿ ಘೋಷಣೆ ಕೂಗಿದ್ದಕ್ಕೆ ನಿಷೇಧಾಜ್ಞೆ ಧಿಕ್ಕರಿಸಿದ್ದ ಕೇಸು ನಮ್ಮ ವಿರುದ್ಧ. ಇದು ಮುನ್ನುಡಿ ಅಷ್ಟೆ.

ಆಗ ಶುರು ನಾಟಕದವರ ನಾಟಕ. ‘ನಮ್ಮನ್ನು ಠಾಣೆಯ ಸೆಲ್ ಒಳಗೆ ಹಾಕಬೇಕು’ ಎಂದು ಕೂಗಾಟ. ಆಸ್ಪದವಿಲ್ಲವೆಂದರು ಪೊಲೀಸರು. ಸೆಲ್‍ಗೆ ಬೀಗ ಹಾಕಿರಲಿಲ್ಲ. ಬರೇ ಚಿಲಕ. ಕಳ್ಳ ರಾಮಚಂದ್ರ(ನಮ್ಮ ತಂಡದ) ಬಾಗಿಲು ತೆರೆದ. ಎಲ್ಲರೂ ಒಳ ಕೂತೆವು. ಸೆಲ್‍ನೊಳಗಡೆ ಕತ್ತಲೆ. ಹಾಲ್‍ನಲ್ಲಿ ಉರಿಯುತ್ತಿದ್ದ ಎರಡು ಬಲ್ಬುಗಳ ಪೈಕಿ ಒಂದನ್ನು ತೆಗೆದು ನಾಗೇಶ್‍ ಸೆಲ್‍ನಲ್ಲಿ ಹಾಕಿದರು. ಬೆಳಕು ಬಂದಿತು. ಪೊಲೀಸರು ಬೇಡವೆಂದು ಬೇಡಿಕೊಂಡರೂ ಕಾರಂತರೂ ಒಳ ಬಂದರು. ಗುರುತು ಹಿಡಿದ ಪೊಲೀಸಿನವನೊಬ್ಬ ಪರಿಪರಿಯಾಗಿ ಕೇಳಿಕೊಂಡಿದ್ದರಿಂದ ಕಾರಂತರು ಸೆಲ್‍ನಿಂದ ಆಚೆ ಬಂದರು. ಟಿ.ಎಸ್. ರಂಗನ ‘ರಘುಪತಿ ರಾಘವ ರಾಜಾರಾಂ...’ ಭಜನೆಗೆ ನಮ್ಮ ಕೋರಸ್. ಕಾರಂತರು ಪರಿತಪಿಸುತ್ತಿದ್ದರು. ಹಾರ್ಮೋನಿಯಂ ಇರದಿದ್ದಕ್ಕಾಗಿ!!

ಕಾರಂತರನ್ನು ಕುರಿತು ಅದೇ ತಾನೆ ಬಂದ ಇನ್‍ಸ್ಪೆಕ್ಟರ್, ‘ಕ್ಷಮಿಸಿ ಸರ್. ಇದೆಲ್ಲಾ ಆಗಬಾರದಿತ್ತು’ ಎಂದರು. ‘ಯೂನಿವರ್ಸಿಟಿ ಡ್ಯೂಟಿ ಸರ್. 144 ಸೆಕ್ಷನ್. ನಿಮ್ಮದು ಸೀರಿಯಸ್ ಕೇಸು ಸರ್. ನಿಷೇಧಾಜ್ಞೆ ಉಲ್ಲಂಘನೆ, ಸರ್ಕಾರಿ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿ, ಸರ್ಕಾರಿ ಆಸ್ತಿಗೆ ನಷ್ಟ ಮಾಡಿದ್ದು, ಅಧಿಕಾರಿಗಳ ಮೇಲೆ ಹಲ್ಲೆ, ಎಬ್ಬಿಸಿದ ದಾಂದಲೆ... ತುಂಬಾ ಸೀರಿಯಸ್ ಅಫೆನ್ಸ್ ಸರ್’ ಎಂದರು. ಕಾರಂತರನ್ನು ಕುರಿತು, ‘ನೀವು ಇದರಲ್ಲಿ ಯಾಕೆ ಸಿಕ್ಕಿ ಹಾಕಿಕೊಂಡಿರಿ ಸರ್?’ ಎಂದು ಅವರ ಮೇಲೆ ವಿಶೇಷ ಕಾಳಜಿ.

ಪೊಲೀಸ್ ರೈಟರ್ ಪೇಪರ್, ಪೆನ್ನು, ಪ್ಯಾಡು ಹಿಡಿದು ಬಂದು ಇನ್‍ಸ್ಪೆಕ್ಟರ್ ಕಿವಿಯಲ್ಲಿ ಏನೋ ಗುಸುಗುಟ್ಟಿದ. ಅವರು ಆಚೆ ಹೋದರು.

‘ನಿಮ್ಮ ಹೆಸರು?’

‘ಬಿ.ವಿ. ಕಾರಂತ’

‘ವಯಸ್ಸು?’

‘ನಲವತ್ತೈದು’

‘ತಂದೆಯ ಹೆಸರು?’

‘ಬಾಬಕೋಡಿ ನಾರ್ಣಪ್ಪ ಕಾರಂತ. ನಾರ್ಣಪ್ಪ ಅಂತ ಬರ್ಕೋಳಿ. ನಾರಾಯಣಪ್ಪ ಅಂತ ಅಲ್ಲ’

‘ಅಡ್ರೆಸ್?’

‘ಕೇರಾಫ್ ರವೀಂದ್ರ ಕಲಾಕ್ಷೇತ್ರ, ಜೆ.ಸಿ. ರಸ್ತೆ, ಬೆಂಗಳೂರು’

‘ಹೀಗೆ ಹೇಳಿದ್ರೆ ಹ್ಯಾಗೆ ಸರ್. ತಮಾಷೆ ಅಲ್ಲ. ನಿಮ್ಮ ಮನೆ ವಿಳಾಸ ಹೇಳಿ.’

‘ನನಗ್ಯಾವ ಮನೆಯಿದೆ? ನನಗೆ ಮನೆ, ಮಠ ಯಾವುದೂ ಇಲ್ಲ. ಹಾಗೆ ನೋಡಿದ್ರೆ ಊರು ಅಂತಾನೂ ಯಾವುದೂ ಇಲ್ಲ. ಯಾವೂರಿಗೆ ಹೋದ್ರೂ, ಅಲ್ಲಿನ ನಾಟಕದ ಜಾಗದ ಅಡ್ರಸ್ಸೇ ಕೋಡೋದು. ಕೇರಾಫ್ ಕಲಾಕ್ಷೇತ್ರ ಅಂತ ಬಂದಿರೋ ಬೇಕಾದಷ್ಟು ಲೆಟರ್ಸ್ ತೋರಿಸ್ತೀನಿ...’
ಇದ್ಯಾವುದೋ ಐಲು ಗಿರಾಕಿಯೆಂದು ಎರಡನೇ ವ್ಯಕ್ತಿ ವಿಚಾರಿಸಿದರು.

ಅರ್ಧ ಮುಕ್ಕಾಲು ಗಂಟೆ ಕಳೆದು ಇನ್‍ಸ್ಪೆಕ್ಟರ್ ಬಂದರು. ರೈಟರ್ ಕಿವಿಯಲ್ಲಿ ಏನೋ ಹೇಳಿದ. ಇನ್‍ಸ್ಪೆಕ್ಟರ್ ಮುಖ ಪೆಚ್ಚಾಯಿತು. ಸ್ಪಲ್ಪ ದೂರ ಹೋಗಿ ವೈರ್‌ಲೆಸ್‍ನಲ್ಲಿ ಏನೋ ಮಾತನಾಡಿ, ‘ಎಸಿಪಿ ಸಾಹೇಬರು ಬರುತ್ತಾರೆ. ಇನ್ನೇನು ಅಲ್ಲಿಯವರೆಗೆ ತಿಂಡಿ, ಕಾಫಿ ಆಗಲಿ’ ಎಂದರು.

ಅಷ್ಟರಲ್ಲಿ ಎಂಟ್ರಿ ಪಡೆದದ್ದು, ಉದ್ದನೆಯ ಬಿಳಿಗಡ್ಡ ಬಿಟ್ಟ ಉದ್ದ ಕೂದಲು, ಬಿಳಿಪಂಚೆ, ಬಿಳಿ ಜುಬ್ಬಾ, ಬರಿಗಾಲಿನ ನಿರ್ದೇಶಕ- ನಿರ್ಮಾಪಕ ಜಿ.ವಿ. ಅಯ್ಯರ್. ಗಾಬರಿಯಾದ ಪೊಲೀಸರ ಎದೆ ಬಡಿತ ಜೋರು. ಇನ್‍ಸ್ಪೆಕ್ಟರ್ ಎದ್ದು ನಿಂತು ಸಲ್ಯೂಟ್ ಹೊಡೆದರು.

ಇನ್‍ಸ್ಪೆಕ್ಟರ್, ‘ಸರ್, ತಮ್ಮಂಥವರನ್ನು ಭೇಟಿ ಮಾಡೋಕ್ಕೆ ಈ ಜಾಗ ಇರಬಾರದಿತ್ತು’. ಈ ಅಯ್ಯರ್‌ ಮಾತನಾಡಿದರೆ ಕೇಳಿ. ಬಾಯಿ ತುಂಬ ಎಲೆ ಅಡಿಕೆ, ತಂಬಾಕು ಇದ್ದದ್ದು ನೆಪ ಅಷ್ಟೇ. ಒಂದೈದು ನಿಮಿಷದ ನಂತರ ಬಾಯಲ್ಲಿದ್ದ ಎಲೆ ಅಡಿಕೆ ಕೆನ್ನೆಯ ಒಂದೆಡೆಗೆ ದಬ್ಬಿ ಕೇಳಿದರು.

‘ಅಲ್ಲಯ್ಯ, ಬೇಲ್ ಕೋಡೋಕೆ ಬಂದಿದ್ದೀನಿ. ಯಾವ ಅಫೆನ್ಸ್ ಹಾಕ್ತೀಯಪ್ಪ ಇವರ ವಿರುದ್ಧ?’

‘ಸರ್, ಹಾಕಿಲ್ಲ. ಡಿಸಿಪಿ ಸಾಹೇಬರು ಬಂದ ಮೇಲೆ ಗೊತ್ತಾಗುತ್ತೆ.’

‘ಅಲ್ಲಯ್ಯಾ, ಜಾಮೀನು ಬೇಕಿದ್ರೆ ಹೇಳು. ಬೇಕಿದ್ರೆ, ಇನ್ನೊಂದಿಬ್ಬರನ್ನ ಕರೆಸ್ತೀನಿ. ಜೊತೆಗೆ ನಂದೂ ಇರುತ್ತೆ.’ ಅಯ್ಯರ್‌ಗೆ ಆಸ್ತಿ ಇರಲಿಲ್ಲ. ಮೈತುಂಬಾ ಸಾಲ ಅಷ್ಟೇ. ಬಂದರು ಎಸಿಪಿಯೋ, ಡಿಸಿಪಿಯೋ. ಪೊಲೀಸರ ಸೆಲ್ಯೂಟ್‌ಗಳು ಬಿದ್ದವು. ಸಾಹೇಬರು ಕೂತುಕೊಳ್ಳಲು ಹಿಂಜರಿದರು. ಅವರಿಗೆ ‘ಕೂತ್ಕೊಳಿ ಸರ್’ ಎಂದರು. ನಾವೆಲ್ಲಾ ನಿಂತೇ ಇದ್ದೆವು. ಅಯ್ಯರ್ ಕೂತರು. ಸಾಹೇಬರೂ ಕೂತರು. ‘ಮುಂದೇನು’ ಎಂದರು. ‘ಏನೂ ಇಲ್ಲಾ ಸರ್. ಕಮಿಷನರ್, ಐಜಿ ಲೆವೆಲ್‍ನಲ್ಲಿ ತೀರ್ಮಾನ ಆಗಿದೆ. ಒಂದು ಅಪಾಲಜಿ ಬರಸ್ಕೊಂಡು ಬಿಟ್ಟುಬಿಡಿ ಅಂತ.’

ಅಷ್ಟರಲ್ಲಿ ಬಂದದ್ದು ಸಿ.ವಿ. ರಾಜಗೋಪಾಲ್‌. ಪ್ರಜಾವಾಣಿಯ ಮುಖ್ಯ ವರದಿಗಾರರು. ಜೆ. ಲೋಕೇಶ್ ಹೇಳಿದ್ದರಿಂದ ಬಂದಿದ್ದರು. ನಿಂತು ನಮಸ್ಕಾರ ಹೇಳುವ ಸರದಿ ಎಸಿಪಿ ಸಾಹೇಬರದು. ‘ಏನಿಲ್ಲ ಸರ್. ಇವರಿಗೆಲ್ಲಾ ವಾರ್ನಿಂಗ್ ಕೊಟ್ಟು ಬಿಡುತ್ತೇವೆ’ ಎಂದರು.

ರಾಜಗೋಪಾಲ್, ‘ಏನ್ರಿ... ಇವರು ಮಾಡಬಾರದ್ದು ಏನು ಮಾಡಿದ್ದಾರೆ. ಅನ್ಯಾಯದ ವಿರುದ್ಧ ಪ್ರತಿಭಟಿಸೋದು ಅವರ ಹಕ್ಕು’ ಎಂದರು. ‘ಇಲ್ಲಾ ಸರ್, ಇನ್ನೊಂದೆರಡು ನಿಮಿಷದಲ್ಲೇ ಬಿಡುತ್ತೇವೆ. ಕಮಿಷನರ್ ಸಾಹೇಬರೂ ಕ್ಲಿಯರೆನ್ಸ್ ಕೊಟ್ಟಿದ್ದಾರೆ’ ಎಂದು ಎಲ್ಲರಿಗೂ ಮತ್ತೊಮ್ಮೆ ಎಚ್ಚರಿಕೆ ಕೊಟ್ಟರು. ಎಲ್ಲರೂ ಆಚೆ ಬಂದೆವು.

ಬಂಧಿತ ಹನ್ನೆರಡೂ ಜನರ ಹೆಸರು ಮರುದಿನ ‘ಪ್ರಜಾವಾಣಿ’ಯ ವರದಿಯಲ್ಲಿತ್ತು.

‘ಆ ಮನಿ’ ನಾಟಕ ನಿರ್ದೇಶಕ ಹರಿಕೃಷ್ಣ ಫೋನ್ ಮಾಡಿ ಹೇಳಿದ– ‘ಘಟನೆ ನಡೆದದ್ದು. ಡಿ. 6, 1973. ಏಕೆಂದರೆ ಡಿ. 7, 1973ರಂದು ‘ಆ ಮನಿ’ ಪ್ರದರ್ಶನ ನಡೆಯಿತು. ‘ಪ್ರಜಾವಾಣಿ’ಯ ವಿಮರ್ಶೆಯಲ್ಲಿ ಪ್ರಸ್ತಾಪವಿದೆ’

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !