ಶನಿವಾರ, ಸೆಪ್ಟೆಂಬರ್ 19, 2020
22 °C

ದುಶಾಂಬೆಯಲ್ಲಿದ್ದಾನೆ ನಿರ್ವಾಣ ಬುದ್ಧ!

ಡಾ.ನಿರಂಜನ ವಾನಳ್ಳಿ Updated:

ಅಕ್ಷರ ಗಾತ್ರ : | |

Prajavani

ಭಾರತದಲ್ಲಿ ಹುಟ್ಟಿದ ಗೌತಮ ಬುದ್ಧ, ಬೌದ್ಧ ಧರ್ಮದ ಮೂಲ ಪುರುಷನಾದ. ಅವನ ಧರ್ಮ ಜಾಗತಿಕವಾಗಿ ಗೌರವಿಸಲ್ಪಟ್ಟಿತ್ತು. ಮಧ್ಯ ಏಷಿಯಾದಲ್ಲಿ ಇಸ್ಲಾಂ ಧರ್ಮ ದಾಳಿ ನಡೆಸುವ ಪೂರ್ವದಲ್ಲಿ ಬೌದ್ಧ ಧರ್ಮಅತ್ಯಂತ ಪ್ರಭಾವ ಶಾಲಿಯಾಗಿತ್ತು ಎಂಬುದನ್ನು ಹಲವು ಚಾರಿತ್ರಿಕ ಸ್ಥಳಗಳಲ್ಲಿ ನಡೆಸಿದ ಉತ್ಖನನಗಳು ಸಾಬೀತುಪಡಿಸಿವೆ.

ಇವುಗಳಲ್ಲಿ ಈಗಿನ ತಜಕಿಸ್ತಾನಕ್ಕೆ ಸೇರಿದ ಅಜಿನಾಟಿಪ್ಪೆಯಲ್ಲಿ ನಡೆದ ಉತ್ಖನನದ ವೇಳೆ ದೊರೆತ ನಿರ್ವಾಣದಲ್ಲಿರುವ ಬುದ್ಧನ ಪ್ರತಿಮೆ, ಜಗತ್ತಿನಲ್ಲೇ ಜೇಡಿಮಣ್ಣಲ್ಲಿ ಮಾಡಿದ ಬುದ್ಧನ ಪ್ರತಿಮೆಗಳಲ್ಲಿ ಬೃಹತ್ತಾದುದು. ಅತ್ಯಂತ ಪ್ರಾಚೀನವಾದುದು. ಈಗ ತಜಕಿಸ್ತಾನದ ರಾಜಧಾನಿ ದುಶಾಂಬೆಯಲ್ಲಿರುವ ಜನಾಂಗೀಯ ವಸ್ತು ಸಂಗ್ರಹಾಲಯದಲ್ಲಿ ಪ್ರಮುಖ ಆಕರ್ಷಣೆ ಈ ನಿರ್ವಾಣ ಬುದ್ಧ.

12.85 ಮೀಟರ್‌ ಉದ್ದ, ಐದು ಟನ್ ಭಾರವಿರುವ ಈ ಬೃಹತ್ ಬುದ್ಧನ ಮೂರ್ತಿ ಸುಮಾರು 1600 ವರ್ಷಗಳ ಹಿಂದಿನದ್ದಾಗಿದೆ. 1966ರಷ್ಟು ಹಿಂದೆಯೇ ಅಜಿನಿ ಟಿಪ್ಪೆಯಲ್ಲಿ ಪುರಾತತ್ವ ಶಾಸ್ತ್ರಜ್ಞ ಬಿ.ಎ. ಲಿಟ್ವಿನ್‍ಸ್ಕಿ ಅವರ ಮಾರ್ಗದರ್ಶನದಲ್ಲಿ ನಡೆದ ಉತ್ಖನನದ ವೇಳೆ ಈ ಮೂರ್ತಿ ಪತ್ತೆಯಾಯಿತು. ಆದರೆ, ಆಗ ಸೋವಿಯತ್‍ ಒಕ್ಕೂಟದ ಕಮ್ಯುನಿಸ್ಟ್‌ ಆಡಳಿತದಲ್ಲಿ ತಜಕಿಸ್ತಾನ ಪ್ರದೇಶವಿದ್ದುದರಿಂದ ಹಾಗೂ ಕಮ್ಯುನಿಸ್ಟರಿಗೆ ಈ ಬುದ್ಧನ ಪುನರ್ ನಿರ್ಮಾಣ ಅಂಥ ಪ್ರಮುಖ ವಿಚಾರವೆಂದು ಅನಿಸದ್ದರಿಂದ ಇದು 92 ತುಂಡುಗಳಾಗಿ ದುಶಾಂಬೆಯ ಅಕೆಡಾಮಿ ಆಫ್ ಸೈನ್ಸ್‌ ವಸ್ತುಸಂಗ್ರಹಾಲಯದ ಬುಡದಲ್ಲಿ ಅನಾಥವಾಗಿ ಬಿದ್ದಿತ್ತು.

1990ರ ದಶಕದಲ್ಲಿ ಪಕ್ಕದ ಅಫಘಾನಿಸ್ತಾನದಲ್ಲಿ ತಾಲಿಬಾನಿಗಳು ಜಗತ್ತಿನ ಚರಿತ್ರೆಯ ಹೆಮ್ಮೆಯಾಗಿದ್ದ ಎರಡು ಬೃಹತ್ ಬುದ್ಧನ ವಿಗ್ರಹಗಳನ್ನು ಜಾಗತಿಕ ವಿರೋಧವನ್ನೂ ಲೆಕ್ಕಿಸದೇ ಸ್ಫೋಟಿಸಿದಾಗ, ಪಕ್ಕದ ತಜಕಿಸ್ತಾನದಲ್ಲಿ ಆಗಷ್ಟೇ ಸ್ವತಂತ್ರಗೊಂಡಿದ್ದ ದೇಶಕ್ಕೆ ತನ್ನ ಅಸ್ಮಿತೆ ಸಾರುವ ಅವಕಾಶವೊಂದು ದೊರೆಯಿತು. ಆಗ ಒದಗಿಬಂದ ಜಾಗತಿಕ ಹಣಕಾಸು ನೆರವಿನಿಂದ ಅಳಿವಿನಂಚಿಗೆ ತಲುಪಿದ್ದ ನಿರ್ವಾಣ ಬುದ್ಧನನ್ನು ಮರುಜೋಡಿಸುವ ಕಾಯಕಕ್ಕೆ ಚಾಲನೆ ದೊರೆಯಿತು.

ಈ ಕ್ಷೇತ್ರದಲ್ಲಿ ಹೆಸರು ಮಾಡಿದ್ದ ವಿ ಫೊವಿನಿಕ್‍ ಅವರ ಮಾಗದರ್ಶನದಲ್ಲಿ 2000ದಲ್ಲಿ ಆರಂಭಗೊಂಡ ಮರುಜೋಡಣೆ ಕಾರ್ಯ 2001ರಲ್ಲಿ ತಜಕಿಸ್ತಾನದ ಸ್ವಾತಂತ್ರ್ಯದ ದಶಮಾನೋತ್ಸವದ ವೇಳೆಗೆ ಪೂರ್ಣಗೊಂಡು ಉದ್ಘಾಟನೆಗೊಂಡಿತು.

ಈಗ ತಜಕಿಸ್ತಾನಕ್ಕೆ ಯಾರೇ ವಿಐಪಿಗಳು ಬರಲಿ, ನಿರ್ವಾಣ ಬುದ್ಧನ ದರ್ಶನ ಅಧಿಕೃತ ಕಾರ್ಯದಲ್ಲಿ ಸೇರುವಷ್ಟು ಈ ಮಲಗಿರುವ ಬುದ್ಧ ಪ್ರಮುಖನೆನಿಸಿದ್ದಾನೆ (ನಮ್ಮದೇಶಕ್ಕೆ ಬರುವ ವಿಐಪಿಗಳು ರಾಜ್‍ಘಾಟ್‍ಗೆ ತಪ್ಪದೇ ಭೇಟಿ ನೀಡುವ ಹಾಗೆ).

ಕೆನ್ನೆಗೆ ಕೈಕೊಟ್ಟು ಬಲ ಪಾರ್ಶ್ವದಲ್ಲಿ ಮಲಗಿರುವ ಸ್ಥಿತಿಯಲ್ಲಿರುವ ಬುದ್ಧನ ವಿಗ್ರಹ ಬಲು ಅಪರೂಪದ್ದು. ಬಲಗೈ ಕೆನ್ನೆಯ ಕೆಳಗಿದ್ದರೆ ದಿಂಬುಗಳ ಮೇಲಿದೆ. ಗುಂಗುರು ಕೂದಲು, ಪ್ರಶಾಂತ ಮುಖಮುದ್ರೆ, ನಸುನಗುವ ತುಟಿ, ವಿಶಾಲ ಎದೆ, ನೀಳ ಕಾಲುಗಳು, ಈ ಬುದ್ಧ ವಿಗ್ರಹಕ್ಕೆ ಮೊದಲ ನೋಟದಲ್ಲಿ ಮನಸೋಲದವರಿಲ್ಲ.

ಬುದ್ಧನ ವಸ್ತ್ರದ ಮೇಲಿನ ನೆರಿಗೆ, ಕಾಲುಬೆರಳುಗಳ ಗಾತ್ರ ಅಚ್ಚರಿ ಎನಿಸುತ್ತದೆ. ದೇಹದ ಪ್ರತಿಯೊಂದು ವಿವರಗಳೂ ಸ್ಪಷ್ಟವಾಗಿವೆ. ವಾಸ್ತವವಾಗಿ ಇದು ನೆಲದಾಳದಲ್ಲಿ ಸಿಕ್ಕಿದಾಗ ಮೂರ್ತಿಯ ಮುಖ ಹಾಗೂ ಹೊಟ್ಟೆಯ ಭಾಗ ಮಣ್ಣಾಗಿತ್ತು. ಅದನ್ನು ಮರು ನಿರ್ಮಿಸಿರುವುದರಿಂದ ಬಣ್ಣದಲ್ಲಿ ವ್ಯತ್ಯಾಸ ಕಾಣುತ್ತದೆ. ಅದೇನೇ ಇರಲಿ, ಕಾಲನ ಗರ್ಭಕ್ಕೆ ಸೇರಿಹೋಗಿದ್ದ ಮಧ್ಯಏಷಿಯಾದ ಚರಿತ್ರೆಯ ಮಹತ್ವದ ಸಾಕ್ಷಿಯೊಂದು ಉತ್ಖನನಗೊಂಡ ನಲವತ್ತು ವರ್ಷಗಳ ಮೇಲಾದರೂ ಮರುಜೀವ ಪಡೆದು ದುಶಾಂಬೆಯ ಹೆಮ್ಮೆಗಳಲ್ಲಿ ಒಂದಾಗಿ ಉಳಿಯುವಂತಾದುದು ಸಮಾಧಾನದ ವಿಷಯ. ಈಗ ದುಶಾಂಬೆಗೆ ಬಂದವರೆಲ್ಲ ನಿರ್ವಾಣ ಸ್ಥಿತಿಯ ಬುದ್ಧನನ್ನು ನೋಡುತ್ತಾರೆ ಅಥವಾ ಮಲಗಿರುವ ಬುದ್ಧನನ್ನು ನೋಡಲಿಕ್ಕೇ ಬರುವವರೂ ಸಾಕಷ್ಟು ಸಂಖ್ಯೆಯಲ್ಲಿದ್ದಾರೆ!

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.