ಶುಕ್ರವಾರ, ಏಪ್ರಿಲ್ 16, 2021
22 °C

ದೇವರ ನಾಡಿನಲ್ಲೊಂದು ಓಚ್ಚಿರಕ್ಕಳಿ

ರಶ್ಮಿ ಕೆ. Updated:

ಅಕ್ಷರ ಗಾತ್ರ : | |

Prajavani

ಮೊಣಕಾಲವರೆಗೆ ನೀರು ತುಂಬಿದ ಗದ್ದೆಗಳಲ್ಲಿ ಕೋಲು ಮತ್ತು ಮರದ ಕತ್ತಿಗಳನ್ನು ಬಳಸಿ ನೂರಾರು ಜನರ ಮಧ್ಯೆ ‘ರಣೋತ್ಸಾಹದ ಯುದ್ಧ’ ನಡೆಯುತ್ತದೆ. ಗರ್ಭಗುಡಿಯೂ, ದೇವಮೂರ್ತಿಯೂ ಇಲ್ಲದ ದೇವಾಲಯದ ಮುಂದೆ ಸಾಮ್ರಾಜ್ಯವಿಲ್ಲದ ಯುದ್ಧ!

‘ಅಂಬಲಮಿಲ್ಲಾತ್ತೆ ಆಳ್ತರಯಿಲ್ ವಾಳುಂ... ಓಂಕಾರಮೂರ್ತಿ ಓಚ್ಚಿರಯಿಲ್...’ (ಓಚ್ಚಿರದಲ್ಲಿ ದೇವಾಲಯವಿಲ್ಲದೆ ಆಲದ ಮರಗಳ ಕಟ್ಟೆಯಲ್ಲಿ ನೆಲೆಸಿದ್ದಾನೆ ಓಂಕಾರಮೂರ್ತಿ) ಎಂಬುದು ಮೋಹನ್‌ಲಾಲ್ ನಟಿಸಿದ ‘ಪಾದಮುದ್ರಾ’ ಎಂಬ ಮಲಯಾಳ ಸಿನಿಮಾದ ಹಾಡು. ಈ ಹಾಡಿನಲ್ಲಿ ಹೇಳುವಂತೆ ಓಚ್ಚಿರದಲ್ಲಿರುವ ದೇವರಿಗೆ ದೇವಾಲಯವಿಲ್ಲ. ಗರ್ಭಗುಡಿಯಾಗಲೀ, ಪೂಜೆಯಾಗಲೀ ನಡೆಯುವುದಿಲ್ಲ. ಮೂರ್ತಿ ಪೂಜೆಗಿಂತ ಇಲ್ಲಿ ಅದೃಶ್ಯ ‘ದೈವಶಕ್ತಿ’ಯಲ್ಲಿ ಜನರು ನಂಬಿಕೆ ಇಟ್ಟಿದ್ದಾರೆ.

‘ದೇವರ ನಾಡು’ ಕೇರಳದ ಕೊಲ್ಲಂ ಜಿಲ್ಲೆಯ ಕರುನಾಗಪಳ್ಳಿ ತಾಲ್ಲೂಕಿನಲ್ಲಿರುವ ಒಂದು ಪುಟ್ಟ ಗ್ರಾಮವೇ ಓಚ್ಚಿರ. ಈಗ ಇದೊಂದು ಪುಟ್ಟ ಪಟ್ಟಣವಾಗಿ ಮಾರ್ಪಟ್ಟಿದೆ. ದಕ್ಷಿಣ ಕಾಶಿ ಎಂದೇ ಕರೆಯಲ್ಪಡುವ ಓಚ್ಚಿರದಲ್ಲಿರುವ ಪರಬ್ರಹ್ಮ ದೇವಾಲಯದಲ್ಲಿ ನಡೆಯುವ ವಾರ್ಷಿಕ ಜಾತ್ರೆ ಹಲವಾರು ವಿಶೇಷಗಳಿಂದ ಕೂಡಿದೆ. ಓಚ್ಚಿರ ಜಾತ್ರೆಯ ವಿಶೇಷ ಆಕರ್ಷಣೆ ಎಂದರೆ ಓಚ್ಚಿರಕ್ಕಳಿ. ಯುದ್ಧ ಸ್ಮರಣೆಯೊಂದಿಗೆ ನಡೆಯುವ ಓಚ್ಚಿರಕ್ಕಳಿ ಪ್ರತಿವರ್ಷ ಮಲಯಾಳ ತಿಂಗಳು ಮಿಥುನ ಮಾಸ 1 ಮತ್ತು 2ರಂದು (ಜೂನ್ 15 ಮತ್ತು 16) ನಡೆಯುತ್ತದೆ. ಈ ಬಾರಿ ಕೊರೊನಾ ಪಿಡುಗಿನಿಂದಾಗಿ ಇಲ್ಲಿಯ ಜಾತ್ರೆಯನ್ನು ರದ್ದು ಮಾಡಲಾಗಿದೆ.

ಏನಿದರ ವಿಶೇಷತೆ?

ಮೊಣಕಾಲಿನವರೆಗೆ ನೀರು ತುಂಬಿರುವ ಗದ್ದೆಗಳಿಗೆ ಇಳಿದು ಸಾಂಕೇತಿಕ ಯುದ್ಧ ನಡೆಸುವುದೇ ಓಚ್ಚಿರಕ್ಕಳಿ. ವೇಣಾಡ್ ರಾಜ ಮತ್ತು ಕಾಯಂಕುಳಂ ರಾಜರ ನಡುವಿನ ಯುದ್ಧದ ಸ್ಮರಣಾರ್ಥ ಈ ಹೋರಾಟ ನಡೆಯುತ್ತದೆ. ಕರುನಾಗಪಳ್ಳಿ, ಕಾರ್ತಿಗಪಳ್ಳಿ, ಮಾವೇಲಿಕ್ಕರ ತಾಲ್ಲೂಕುಗಳಲ್ಲಿರುವ 52 ಕರ (ಪ್ರದೇಶವೊಂದನ್ನು ಉಪ ವಿಭಾಗಗಳಾಗಿ ವಿಂಗಡಿಸಿರುವುದು) ಕಳರಿ ಶಾಲೆಗಳಿಂದ (ಸಮರಾಭ್ಯಾಸ ಶಾಲೆ) ಸಾವಿರದಷ್ಟು ಕಳರಿ ಆಶಾನ್ (ಕಳರಿ ಶಿಕ್ಷಕ) ಮತ್ತು ಶಿಷ್ಯರು ಈ ‘ಯುದ್ಧ’ದಲ್ಲಿ ಭಾಗವಹಿಸುತ್ತಾರೆ. ಸಮರ ಕಲೆಯಲ್ಲಿ ಪರಿಣತಿ ಪಡೆದ ಎಲ್ಲಾ ವಯಸ್ಸಿನ ಪುರುಷರು ಇದರಲ್ಲಿ ಭಾಗವಹಿಸಬಹುದು. ಇದರಲ್ಲಿ ಭಾಗಿಯಾಗುವವರಿಗೆ ಇಡವಂ (ವೃಷಭ) 1ರಂದು ವಿವಿಧ ಕಳರಿಗಳ ಕಳರಿ ಆಶಾನ್‌ಗಳು ತರಬೇತಿ ಆರಂಭಿಸುತ್ತಾರೆ.

ರಾಜರ ಆಳ್ವಿಕೆ ಕಾಲದಲ್ಲಿ ಸೈನಿಕರು ಯುದ್ಧಾಭ್ಯಾಸ ಮಾಡುತ್ತಿದ್ದುದು ವಿಶಾಲವಾದ ಮೈದಾನಗಳಲ್ಲಾಗಿತ್ತು. ಅವುಗಳನ್ನು ‘ಪಡನಿಲ’ (ಯುದ್ಧ ಭೂಮಿ) ಎಂದು ಕರೆಯಲಾಗುತ್ತಿತ್ತು. ಆ ರೀತಿಯ ಐತಿಹಾಸಿಕ ಕಾರ್ಯಗಳು ನಡೆದ ಸ್ಥಳವಾಗಿದೆ ಪರಬ್ರಹ್ಮ ದೇವಾಲಯವಿರುವ ಓಚ್ಚಿರ ಯುದ್ಧಭೂಮಿ. ವೇಣಾಡ್ ರಾಜ ಮತ್ತು ಕಾಯಂಕುಳಂ ರಾಜ ಹಲವು ಬಾರಿ ಯುದ್ಧ ಮಾಡಿದ್ದು ಇಲ್ಲಿಯೇ. ಇದಾದ ನಂತರ ಮಾರ್ತಾಂಡ ವರ್ಮ ರಾಜ ವೇಣಾಡ್  ಗೆದ್ದು, ಕಾಯಂಕುಳಂ ರಾಜನನ್ನು ಸೋಲಿಸಿದ್ದು ಇಲ್ಲಿಯೇ ಎಂದು ಹೇಳುತ್ತಾರೆ. ಆ ಯುದ್ಧದ ಸ್ಮರಣಾರ್ಥ ಪ್ರತಿವರ್ಷ ಇಲ್ಲಿ ಓಚ್ಚಿರಕ್ಕಳಿ ನಡೆಯುತ್ತದೆ. ಹಿಂದಿನ ಕಾಲದ ಮಾರಕಾಸ್ತ್ರಗಳಾದ ಖಡ್ಗ, ಶೂಲದ ಬದಲಾಗಿ ಈಗ ಯುದ್ಧದಲ್ಲಿ ಭಾಗವಹಿಸುವವರು ಮರದ ಕೋಲು, ಮರದಿಂದ ನಿರ್ಮಿಸಿದ ಖಡ್ಗಗಳನ್ನು ಬಳಸುತ್ತಾರೆ.

ಹೇಗೆ ನಡೆಯುತ್ತದೆ ಓಚ್ಚಿರಕ್ಕಳಿ

ಕರುನಾಗಪಳ್ಳಿ, ಕಾರ್ತಿಗಪಳ್ಳಿ, ಮಾವೇಲಿಕ್ಕರ ಪ್ರದೇಶದ ವ್ರತಾಚರಣೆ ಮಾಡಿಬರುವ ಕಳರಿ ಗುರು, ತಂಡದ ನಾಯಕ ಮತ್ತು ದೇವಾಲಯದ ಅಧಿಕಾರಿಗಳ ನೇತೃತ್ವದಲ್ಲಿ ವೃಷಭ ವಾಹನದಲ್ಲಿ ಶಿವನನ್ನು ಮೆರವಣಿಗೆ ಮಾಡುತ್ತಾರೆ. ಎಟ್ಟುಕಂಡಂ (ಎಂಟುಗದ್ದೆ)ಗೆ ಸುತ್ತು ಬಂದ ನಂತರ ಒಂಡಿಕ್ಕಾವ್, ಪಡಿಂಞಾರೆ ಆಲ್‌ತ್ತರ (ಪಶ್ಚಿಮದಲ್ಲಿರುವ ಆಲದ ಕಟ್ಟೆ), ಕಿಳಕ್ಕೇ ಆಲ್‌ತ್ತರ (ಪೂರ್ವದಲ್ಲಿರುವ ಆಲದ ಕಟ್ಟೆ)ಗೆ ಪ್ರದಕ್ಷಿಣೆ ಬಂದು ಹತ್ತಿರದಲ್ಲಿರುವ ಮಹಾಲಕ್ಷ್ಮಿ ದೇವಾಲಯ ಮತ್ತು ಶಾಸ್ತಾರ
ದೇವಾಲಯಕ್ಕೆ ನಮಸ್ಕರಿಸಿ ಗಣಪತಿ ಆಲದಕಟ್ಟೆ ದಾಟಿ ಎಟ್ಟ್ ಕಂಡಂ (ಎಂಟು ಗದ್ದೆ) ಮಧ್ಯೆ ಬರುತ್ತಾರೆ. ಅಲ್ಲಿ ಯೋಧರಾಗಿ ಬಂದಿರುವ ಜನರನ್ನು ಎರಡು ಗುಂಪಾಗಿ ವಿಂಗಡಿಸಲಾಗುತ್ತದೆ.

ಈ ಯೋಧರು ಯುದ್ಧಭೂಮಿಗೆ ಇಳಿಯುವ ಮುನ್ನ ದಡದಲ್ಲಿಯೇ ಸಮರ ಕಲೆ ಪ್ರದರ್ಶಿಸುತ್ತಾರೆ. ಎಟ್ಟುಕಂಡಂನಲ್ಲಿ ನಡೆಯುವುದೇ ತಕಿಡ ಕಳಿ. ದಕ್ಷಿಣ ಭಾಗದ ಗದ್ದೆಯಲ್ಲಿಯೂ, ಉತ್ತರ ಭಾಗದ ಗದ್ದೆಯ ದಡದಲ್ಲಿಯೂ ಈ ಸಮರ ಕಲೆಗಳು ನಡೆಯುತ್ತದೆ. ಆಕಾಶದಲ್ಲಿ ಬಿಳಿ ಗರುಡ ಕಾಣಿಸಿಕೊಂಡರೆ ಎರಡೂ ತಂಡದ ನಾಯಕರು ಕೈಕುಲುಕಿ ಯುದ್ಧ ಶುರು ಮಾಡಲು ಅಪ್ಪಣೆ ನೀಡುತ್ತಾರೆ.

ಹೀಗೆ ಅಪ್ಪಣೆ ನೀಡಿದ ಕೂಡಲೇ ಯುದ್ಧ ಆರಂಭವಾಗುವುದಿಲ್ಲ. ನಾಳೆ ನೋಡೋಣ ಎಂದು ಅವರು ಅಲ್ಲಿಂದ ಹೊರಡುತ್ತಾರೆ. ಮರುದಿನ ಓಚ್ಚಿರದಲ್ಲಿ ಯುದ್ಧಕ್ಕೆ ಸಿದ್ಧತೆಯಾಗುತ್ತದೆ. ಎರಡೂ ಬದಿಯಲ್ಲಿರುವ ತಂಡಗಳು ಘೋಷಣೆ ಕೂಗಿ ಯುದ್ಧಭೂಮಿಗೆ  ಇಳಿಯುತ್ತಾರೆ. ಅಲ್ಲಿ ರಣೋತ್ಸಾಹದಿಂದ ಈ ಸಾಂಕೇತಿಕ ಯುದ್ಧ ನಡೆಯುತ್ತದೆ. ಎರಡನೇ ದಿನ ಕಳಿ (ಆಟ) ಮುಗಿದು ಯೋಧರು ಆಲದ ಮರದ ಕಟ್ಟೆಗಳಿಗೆ ನಮಸ್ಕರಿಸಿ ಆಟ ಮುಗಿಸುತ್ತಾರೆ.

ಓಚ್ಚಿರ ಪರಬ್ರಹ್ಮ ದೇವಾಲಯ

ಓಚ್ಚಿರ ಪರಬ್ರಹ್ಮ ದೇವಾಲಯದ ವಿಶೇಷತೆ ಎಂದರೆ ಇಲ್ಲಿ ದೇವರ ವಿಗ್ರಹವಾಗಲೀ, ಗರ್ಭಗುಡಿ, ಪೂಜೆ ಇಲ್ಲದೇ ಇರುವುದು. ಪೂರ್ವ ಗೋಪುರದಿಂದ 22 ಎಕರೆ ಸ್ಥಳದಲ್ಲಿ ಎರಡು ಆಲದ ಮರದ ಕಟ್ಟೆ ಮತ್ತು ಬನಗಳು ಇದ್ದು ಇದುವೇ ದೇವಾಲಯ ಎಂದು ಪರಿಗಣಿಸಲಾಗಿದೆ.

ಸಾಕ್ಷಾತ್ ಪರಾಶಕ್ತಿಯ ಜತೆ ಶ್ರೀಪರಮೇಶ್ವರ ಇಲ್ಲಿ ನೆಲೆಸಿದ್ದಾನೆ ಎಂಬ ಪ್ರತೀತಿ ಇದೆ. ಮಲಯಾಳ ತಿಂಗಳು ವೃಶ್ಚಿಕ 1ರಿಂದ 12ರವರೆಗೆ ನಡೆಯುವ ವೃಶ್ಚಿಕ ವಿಳಕ್ಕ್(ದೀಪಾರಾಧನೆ) ಇಲ್ಲಿನ ಪ್ರಧಾನ ಉತ್ಸವ. ಇದಾದ ನಂತರ ಮಿಥುನಮಾಸ ಪುಲರಿ (ಮಿಥುನ ಮಾಸಾರಂಭ) ಮತ್ತು ಓಚ್ಚಿರಕ್ಕಳಿ ಇಲ್ಲಿನ ಪ್ರಮಖ ಆಕರ್ಷಣೆ.

ಓಚ್ಚಿರ ಪರಬ್ರಹ್ಮ ದೇವಾಲಯದಲ್ಲಿ ವೃಶ್ಚಿಕ ಮಾಸದಲ್ಲಿ ಮೊದಲ 12 ದಿನ- ರಾತ್ರಿಗಳಲ್ಲಿ ನಡೆಯುವ ದೀಪಾರಾಧನೆ ಪಂದ್ರಂಡ್ ವಿಳಕ್ಕ್ . ವೃಶ್ಚಿಕ 1ರಿಂದ ಆರಂಭವಾಗಿ 12 ದಿನಗಳ ಕಾಲ ನಡೆಯುವ ಈ ಹಬ್ಬದಲ್ಲಿ ಭಕ್ತರು ಗುಡಿಸಲುಗಳನ್ನು ನಿರ್ಮಿಸಿ ಅದರಲ್ಲಿ ಭಜನೆಗೆ ಕೂರುತ್ತಾರೆ. ನವೆಂಬರ್‌ನಲ್ಲಿ ಈ ದೀಪಾರಾಧನೆ ನಡೆಯುತ್ತದೆ. 

ಪರಬ್ರಹ್ಮನ ಐತಿಹ್ಯ

ವರ್ಷಗಳ ಹಿಂದೆ ಅಕವೂರ್ ಮನ (ನಂಬೂದಿರಿಗಳ ಮನೆ)ಯ ನಂಬೂದಿರಿಯೊಬ್ಬರ ದೇವರಾಗಿದ್ದರು ಪರಬ್ರಹ್ಮ. ಆ ನಂಬೂದಿರಿಗೆ ಒಬ್ಬ ಸೇವಕನಿದ್ದ. ನಂಬೂದಿರಿ ಪ್ರತಿದಿನವೂ ದೇವರಿಗೆ ಪೂಜೆ ಮಾಡುತ್ತಿದ್ದರು. ಹೀಗಿರುವಾಗ ಪರಬ್ರಹ್ಮ ಹೇಗಿರುತ್ತಾರೆ ಎಂದು ಸೇವಕ ಕೇಳಿದಾಗ ಪರಬ್ರಹ್ಮ ‘ಎತ್ತಿನಂತೆ’ ಇರುತ್ತಾನೆ ಎಂದು ನಂಬೂದಿರಿ ವ್ಯಂಗ್ಯವಾಗಿ ಉತ್ತರಿಸಿದ್ದರು. ಹಾಗೆ ಆ ಸೇವಕ 41 ದಿನಗಳ ಕಾಲ ಪರಬ್ರಹ್ಮನನ್ನು ಪ್ರಾರ್ಥಿಸಿದಾಗ ಪರಬ್ರಹ್ಮ ಎತ್ತಿನ ರೂಪದಲ್ಲಿ ಪ್ರತ್ಯಕ್ಷರಾಗುತ್ತಾರೆ. ಈ ಎತ್ತು ಆ ಸೇವಕನ ಕಣ್ಣಿಗೆ ಮಾತ್ರ ಕಾಣುತ್ತಿತ್ತು. ತನಗೆ ಕಾಣುತ್ತಿರುವ ಎತ್ತು ನಂಬೂದಿರಿ ಮನೆಯ ಎತ್ತು ಎಂದೇ ಭಾವಿಸಿ ಆ ಸೇವಕ ಅದಕ್ಕೆ ಹುಲ್ಲು, ನೀರು ಕೊಡುತ್ತಿದ್ದನು.
ಈಗಿರುವ ಓಚ್ಚಿರ ಪ್ರದೇಶದಲ್ಲಿ ನಂಬೂದಿರಿ ಬರುತ್ತಿದ್ದಾಗ ಅವರ ಹಿಂದೆ ಸೇವಕ, ಆತನ ಹಿಂದೆ ಎತ್ತು ಕೂಡ ಇರುತ್ತಿತ್ತು. ಅದು ಗದ್ದೆ ಪ್ರದೇಶ, ಹೋಗುವ ದಾರಿಯಲ್ಲಿ ಕಿರಿದಾದ ಬಾಗಿಲೊಂದು ಇತ್ತು. ನಂಬೂದಿರಿ ಮತ್ತು ಸೇವಕ ಆ ಕಿರಿದಾದ ಬಾಗಿಲು ಮೂಲಕ ಪ್ರವೇಶಿಸಿದರು. ಸೇವಕ ತಿರುಗಿ ನೋಡಿದಾಗ ತನ್ನೊಂದಿಗಿದ್ದ ಎತ್ತು ಅಲ್ಲೇ ನಿಂತಿದೆ. ಅದರ ದೊಡ್ಡ ಕೊಂಬು ಕಾರಣ ಒಳಗೆ ಪ್ರವೇಶಿಸಲು ಸಾಧ್ಯವಾಗುತ್ತಿರಲಿಲ್ಲ. ಆಗ ಸೇವಕನು ತಲೆ ಅಡ್ಡ ಮಾಡಿ ಒಳಗೆ ಬಾ ಎಂದು ಎತ್ತಿಗೆ ಹೇಳಿದಾಗ, ನೀನು ಯಾರಲ್ಲಿ ಮಾತಾಡುತ್ತಿದ್ದಿ ಎಂದು ನಂಬೂದಿರಿ ಕೇಳಿದರು. ನಮ್ಮ ಎತ್ತಿನ ಜತೆ ಎಂದ ಸೇವಕ. ನಂಬೂದಿರಿಗೆ ಆ ಎತ್ತು ಕಾಣಿಸುವುದಿಲ್ಲ! ಕೊನೆಗೆ ನಂಬೂದಿರಿ ಸೇವಕನ್ನು ಮುಟ್ಟಿದಾಗ ಅವರಿಗೆ ಎತ್ತು ಕಾಣಿಸುತ್ತದೆ. ತಕ್ಷಣವೇ ಆ ಎತ್ತು ರೂಪದಲ್ಲಿರುವ ಪರಬ್ರಹ್ಮ ಓಡಿ ಹೋಗಿ ಚಿರ (ದಿಬ್ಬ)ಕ್ಕೆ ಹಾರುತ್ತದೆ. ಹಾಗೆ, ಪೋತ್ತ್ (ಕೋಣ) ಹಾರಿದ ಚಿರ- ಪೋತ್ತಿನ್ಚಿರ ಎಂದು ಕರೆಯಲ್ಪಟ್ಟಿತು. ಪರಬ್ರಹ್ಮ ನಾದವಾದ ಓಂಕಾರದಿಂದ ಈ ಪ್ರದೇಶಕ್ಕೆ ಓಂ+ಚಿರ=ಓಚ್ಚಿರ ಎಂಬ ಹೆಸರು ಬಂತು ಎಂಬ ಐತಿಹ್ಯವಿದೆ.

‘ಬೌದ್ಧಮತ ಇಲ್ಲಿತ್ತು, ಹಾಗಾಗಿ ಮೂರ್ತಿ ಪೂಜೆ ಇಲ್ಲಿಲ್ಲ’ ಎಂಬ ಕತೆಯೂ ಓಚ್ಚಿರ ದೇವಾಲಯಕ್ಕೆ ಸಂಬಂಧಿಸಿದ ನಂಬಿಕೆಗಳಲ್ಲಿದೆ. ಈಗಿರುವ ಆಲದ ಮರದ ಕಟ್ಟೆಗಳು ರಾಜ ವೇಲುತಂಬಿ ದಳವ ನಿರ್ಮಿಸಿದ್ದಾಗಿದೆ. ವೇಲುತಂಬಿ ದಳ, ಕೊಲ್ಲಂ ಆನಂದವಲ್ಲೀಶ್ವಂ ದೇಗುಲ ನಿರ್ಮಿಸಿದ ನಂತರ ಓಚ್ಚಿರದಲ್ಲಿಯೂ ದೇವಾಲಯ ನಿರ್ಮಿಸಲು ಯೋಚಿಸಿದ್ದರು. ಆದರೆ ಅಲ್ಲಿ ದೇಗುಲ ನಿರ್ಮಿಸಬಾರದು ಎಂದು ‘ದೇವಪ್ರಶ್ನೆ’ಯಲ್ಲಿ ತಿಳಿದು ಬಂದ ನಂತರ ಆ ನಿರ್ಧಾರ ಕೈಬಿಟ್ಟರು ಎಂದು ಹೇಳಲಾಗುತ್ತಿದೆ.

ಓಚ್ಚಿರ ಕಾಳಕೆಟ್ಟು

ಓಣಂನ 28ನೇ ದಿನ ಪರಬ್ರಹ್ಮ ದೇವಾಲಯದಲ್ಲಿ ಓಚ್ಚಿರ ಕಾಳಕೆಟ್ಟು (ಎತ್ತಿನ ರೂಪಗಳನ್ನು ಪ್ರದರ್ಶನ) ನಡೆಯುತ್ತದೆ. ಶಿವನ ವಾಹನವಾದ ನಂದಿಯ ದೊಡ್ಡ ಪ್ರತಿಕೃತಿ ತಯಾರಿಸಿ ಅದನ್ನು ಅಲಂಕರಿಸಿ ಇಡಲಾಗುತ್ತದೆ. ಜೋಡಿ ಎತ್ತುಗಳ ಈ ಪ್ರತಿಕೃತಿಯನ್ನು ‘ಕೆಟ್ಟ್ ಕಾಳಗಳ್’ ಎಂದು ಕರೆಯುತ್ತಾರೆ. ಓಣಂ ತಿಂಗಳೆಂದರೆ ಹಸಿರು ಸಮೃದ್ಧಿಯ ತಿಂಗಳಾಗಿರುವುದರಿಂದ ಈ ಕಾಳಕೆಟ್ಟ್ ಕೃಷಿ ಸಂಬಂಧಿತ ಜಾತ್ರೆಯಾಗಿದೆ. ಮರದಿಂದ ನಿರ್ಮಿಸಿದ ಮುಖ, ಬಿದಿರಿನ ಕಾಲುಗಳು, ಬಟ್ಟೆಯಿಂದ ಸುತ್ತಿ ಅಲಂಕರಿಸಿದ ಬೃಹತ್ ಎತ್ತಿನ ಪ್ರತಿಕೃತಿಯನ್ನು ಇಲ್ಲಿ ಕಾಣಬಹುದು. ಓಣಾಟ್ಟುಕರದ 52 ಕರಗಳ ಜನರು ಈ ಜೋಡಿ ಎತ್ತುಗಳನ್ನು ಅಲಂಕರಿಸಿ ದೇವಾಲಯಕ್ಕೆ ತರುತ್ತಾರೆ. 52 ಕರಗಳ ಜನರು ವಿಧ ವಿಧ ರೀತಿಯಲ್ಲಿ ಎತ್ತುಗಳ ಪ್ರತಿಕೃತಿ ತಯಾರಿಸಿ ಅದನ್ನು ಪ್ರದರ್ಶನಕ್ಕಿಡುವುದು ಮಾತ್ರವಲ್ಲದೇ ಎತ್ತಿನ ಅಲಂಕಾರಕ್ಕೆ ಬಹುಮಾನವನ್ನೂ ನೀಡಲಾಗುತ್ತದೆ.

ಬೆಳೆ ಸಮೃದ್ಧಿಗಾಗಿ ಪ್ರಾರ್ಥಿಸುವ ಈ ಆಚರಣೆಯಲ್ಲಿ ರೈತರೇ ಹೆಚ್ಚಾಗಿ ಭಾಗವಹಿಸುತ್ತಾರೆ. ಬಡವರಿಗೆ ಮತ್ತು ಭಿಕ್ಷುಕರಿಗೆ ಇಲ್ಲಿ ಅನ್ನದಾನವಿರುತ್ತದೆ. ‘ಕಂಞಿಪಕರ್ಚ’ ಎಂದು ಕರೆಯುವ ಹರಕೆ ಸಲ್ಲಿಸುವ ಭಕ್ತರು, ಬಡವರಿಗೆ ಅನ್ನದಾನ ಮಾಡುತ್ತಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು