ಪ್ರೇಮಾ ಛಾಯಾಚಿತ್ರಗಾಥೆ

7

ಪ್ರೇಮಾ ಛಾಯಾಚಿತ್ರಗಾಥೆ

Published:
Updated:
Deccan Herald

ಅದಾಗಲೇ ಸಂಜೆ ಆಗಿತ್ತು. ಸೂರ್ಯ ಮೆಲ್ಲನೇ ತೆರೆ ಹಿಂದೆ ಸರಿಯುತ್ತಿದ್ದ. ದೂರದಲ್ಲಿ ನಾಲ್ಕು ಜಿರಾಫೆಗಳು ಒಂದು ದಿಕ್ಕಿನೆಡೆಗೆ ಹೆಜ್ಜೆ ಹಾಕುತ್ತಿದ್ದರೆ, ಅವುಗಳ ವಿರುದ್ಧವಾಗಿ ಮತ್ತೊಂದು ಜಿರಾಫೆ ಹೋಗುತ್ತಿತ್ತು. ಜಿರಾಫೆಗಳ ಹಿಂದೆ ಬೆಟ್ಟಗಳಿದ್ದವು. ಇಳಿಹೊತ್ತಾಗಿದ್ದರಿಂದ ಸೂರ್ಯನ ಬೆಳಕಿಗೆ ಜಿರಾಫೆಗಳು ತನ್ನ ಬಣ್ಣ ಕಳೆದುಕೊಂಡು ಕಪ್ಪು ಬಣ್ಣದಲ್ಲಿ ಕಾಣುತ್ತಿದ್ದವು. ಆಗಸ ಹಾಗೂ ಅಲ್ಲಿನ ಬೆಟ್ಟಗಳಿಗೆ ಸೂರ್ಯ ಕೆಂಬಣ್ಣ ಹೊದಿಸಿದ್ದ. ತಡಮಾಡದೇ ಕ್ಯಾಮೆರಾದಲ್ಲಿ ಆ ದೃಶ್ಯ ಬಂಧಿಸಿದೆ...

ತಾನು ಚಿತ್ರ ಸೆರೆಹಿಡಿದ ಕ್ಷಣಗಳನ್ನು ಹೀಗೆ ಬಿಚ್ಚಿಟ್ಟವರು ಪ್ರೇಮಾ ಕಾಕಡೆ. ಕೀನ್ಯಾದ ಮಸೈ ಮರಾ ಅರಣ್ಯ ಪ್ರದೇಶದಲ್ಲಿ ಅವರು ತೆಗೆದ ಚಿತ್ರವು ಯೂಥ್ ಫೋಟೊಗ್ರಫಿ ಸೊಸೈಟಿ (ವೈಪಿಎಸ್) ಆಯೋಜಿಸಿದ್ದ 10ನೇ ‘ಅಂತರರಾಷ್ಟ್ರೀಯ ಡಿಜಿಟಲ್ ಛಾಯಾಚಿತ್ರ ಸ್ಪರ್ಧೆ’ಯಲ್ಲಿ ಚಿನ್ನದ ಪದಕದೊಂದಿಗೆ ‘ಗೋಲ್ಡ್ ಟ್ರಾವೆಲ್ ಡಿಜಿಟಲ್ ಅವಾರ್ಡ್’ ದಕ್ಕಿಸಿಕೊಂಡಿದೆ.

ಪ್ರೇಮಾ ಕಾಕಡೆ, ವೃತ್ತಿಪರ ಛಾಯಾಗ್ರಾಹಕಿ ಅಲ್ಲ. ಕಲಾವಿದೆಯಾಗಿದ್ದ ಅವರು ವೃತ್ತಿಪರ ಛಾಯಾಗ್ರಾಹಕಿಯಾಗಬೇಕು ಎಂದೂ ಕನಸು ಕಂಡವರಲ್ಲ. ‘ಕ್ಯಾಮೆರಾ ಇದೆಯಲ್ಲ ಎಂಬ ಕಾರಣಕ್ಕೆ ಎಲ್ಲಾದರೂ ಹೊರಗಡೆ ಹೋದಾಗ ಅದರ ಬಟನ್ ಅನ್ನು ಪಟಪಟನೇ ಕ್ಲಿಕ್ಕಿಸುತ್ತಿದ್ದೆ’ ಎನ್ನುವ ಅವರು ಫೋಟೊಗ್ರಫಿಯನ್ನು ಹವ್ಯಾಸವಾಗಿ ಸ್ವೀಕರಿಸಿದ್ದು ಮೂರು ವರ್ಷಗಳ ಹಿಂದೆ. ದಿನದಿಂದ ದಿನಕ್ಕೆ ಫೋಟೊಗ್ರಫಿ ಬಗೆಗಿನ ಆಸಕ್ತಿ ಹೆಚ್ಚಿಸಿಕೊಂಡು, ಆ ಕಲೆಯನ್ನು ಕರಗತ ಮಾಡಿಕೊಳ್ಳುತ್ತಲೇ ಊರೂರು ಸುತ್ತಿ ಚೆಂದದ ಚಿತ್ರಗಳನ್ನು ಸೆರೆಹಿಡಿದಿದ್ದಾರೆ ಕ್ಯಾಮೆರಾದಲ್ಲಿ.

ಮಸೈ ಮರಾದ ಜಿರಾಫೆಗಳ, ಬೆಟ್ಟಗಳ ಹಾಗೂ ಸೂರ್ಯನ ಕಿರಣಗಳ ಇಡೀ ದೃಶ್ಯ ಮನಮೋಹಕವಾಗಿತ್ತು. ’ನಾನಿದ್ದ ಸಫಾರಿ ವಾಹನ ಚಲಿಸುತ್ತಲೇ ಇತ್ತು. ವಾಹನದಲ್ಲಿ ಟ್ರೈಪಾಡ್ ಬಳಸಿ ಫೋಟೊ ಕ್ಲಿಕ್ಕಿಸಲು ಆಗಲ್ಲ. ಹೀಗಾಗಿ, ಕ್ಯಾಮೆರಾವನ್ನು ಹಿಡಿದು ಚಿತ್ರ ಸೆರೆಹಿಡಿಯಲು ಮುಂಚೆಯೇ ಸಿದ್ಧವಾಗಿದ್ದೆ. ತಡಮಾಡದೇ ಆ ದೃಶ್ಯ ಸೆರೆಹಿಡಿದೆ. ಆ ಚಿತ್ರಕ್ಕೆ ಪ್ರಶಸ್ತಿ ಸಿಗುತ್ತದೆ ಎಂದೂ ಭಾವಿಸಿರಲಿಲ್ಲ. ಸ್ಪರ್ಧೆಗೆ ಆ ಫೋಟೊ ಕಳುಹಿಸಿದ್ದೆ. ಪ್ರಶಸ್ತಿ ಸಿಕ್ಕಿರುವುದು ನನ್ನಲ್ಲಿ ಇನ್ನಷ್ಟು ಉತ್ಸಾಹ ಮಾಡಿಸಿದೆ’ ಎನ್ನುತ್ತಾರೆ ಅವರು.

‘ಫೋಟೊಗ್ರಫಿಯಲ್ಲಿ ಹೇಳಿಕೊಳ್ಳುವಂತಹ ಅನುಭವ ನನಗಾಗಿಲ್ಲ. ಈ ಕ್ಷೇತ್ರದಲ್ಲಿ ನನ್ನವು ಈಗಿನ್ನೂ ಪುಟಾಣಿ ಹೆಜ್ಜೆಗಳು. ಆದರೂ, ವೈಪಿಎಸ್‌ ಆಯೋಜಿಸಿದ್ದ ಸ್ಪರ್ಧೆಯಲ್ಲಿ 16 ದೇಶಗಳ 3,639 ಅಧಿಕ ಮಂದಿ ಛಾಯಾಗ್ರಾಹಕರು ಭಾಗವಹಿಸಿದ್ದರು. ಅವರೆಲ್ಲರ ಚಿತ್ರಗಳ ಪೈಕಿ ನಾನು ಸೆರೆಹಿಡಿದ ಚಿತ್ರ ಆಯ್ಕೆಯಾಗಿದೆ ಎಂಬುದೇ ಹೆಮ್ಮೆಯ ಸಂಗತಿ. ತೀರ್ಪುಗಾರರೂ ಆ ಚಿತ್ರಕ್ಕೆ ಮನಸೋತಿದ್ದರಂತೆ’ ಎಂದು ಸಂತಸ
ವ್ಯಕ್ತಪಡಿಸುತ್ತಾರೆ.

ಫೋಟೊಗ್ರಫಿ ಎಂದರೆ ಕ್ಯಾಮೆರಾ ತೆಗೆದುಕೊಂಡು ಕ್ಲಿಕ್ಕಿಸುವುದಷ್ಟೇ ಅಲ್ಲ. ಅದೊಂದು ಕಲೆ, ಅದನ್ನು ಕರಗತ ಮಾಡಿಕೊಂಡಾಗಲೇ ಅದ್ಭುತ ಫೋಟೊಗಳನ್ನು ಸೆರೆಹಿಡಿಯಲು ಹಾಗೂ ಅವುಗಳಿಗೆ ಜೀವ ತುಂಬಲು ಸಾಧ್ಯ ಎಂದ್ಹೇಳುವ ಪ್ರೇಮಾ ಅವರಿಗೆ ದೇಶ–ವಿದೇಶ ಸುತ್ತಾಡಿ ಅಲ್ಲಿನ ಸೊಬಗನ್ನು ಕ್ಯಾಮೆರಾದಲ್ಲಿ ಸೆರೆಹಿಡಿಯುವುದೆಂದರೆ ಇಷ್ಟವಂತೆ.

‘ನನ್ನ ಮಗ ವೃಷಭ್. ‘ಅಮ್ಮ ನೀನು ತುಂಬಾ ಚೆನ್ನಾಗಿ ಫೋಟೊ ತೆಗೆಯುತ್ತೀಯಾ. ಇನ್ನೂ ಹೆಚ್ಚು ಆಸಕ್ತಿ ತೋರು, ಇದೇ ಕ್ಷೇತ್ರದಲ್ಲಿ ಮುಂದುವರೆ’ ಎನ್ನುತ್ತಿದ್ದ ಅವನು. ಅದರಿಂದ ಪ್ರೇರೇಪಿತಳಾಗಿ ಹಾಗೂ ಪತಿ ಎಂ.ಎಸ್.ಕಾಕಡೆ ಸಹಕಾರದಿಂದ ಫೋಟೊಗ್ರಫಿಯಲ್ಲಿ ತೊಡಗಿಕೊಂಡಿದ್ದೇನೆ’ ಎನ್ನುತ್ತಾರೆ ಅವರು.

ಈ ಕ್ಷೇತ್ರದಲ್ಲಿ ಮಹಿಳೆಯರ ಹೆಜ್ಜೆಗುರುತುಗಳು ಕಡಿಮೆ. ಹಿರಿಯ ಛಾಯಾಗ್ರಾಹಕರ ಮಾರ್ಗದರ್ಶನ ಸದಾ ಇದ್ದೇ ಇರುತ್ತದೆ. ಮಹಿಳೆಯರು ಈಗೀಗ ಈ ಕ್ಷೇತ್ರದತ್ತ ಹೆಚ್ಚಿನ ಸಂಖ್ಯೆಯಲ್ಲಿ ಮುಖ ಮಾಡುತ್ತಿದ್ದಾರೆ. ಎಲ್ಲ ಕ್ಷೇತ್ರದಲ್ಲಿದ್ದಂತೆ ಈ ಕ್ಷೇತ್ರದಲ್ಲೂ ಕೆಲ ಸವಾಲುಗಳಿವೆ. ಮನೆ ಮಠ ಬಿಟ್ಟು ಹೊರ ಪ್ರಪಂಚದೊಂದಿಗೆ ಬೆರೆತಾಗ ಅದ್ಭುತ ಫೋಟೊಗಳನ್ನು ಕೊಡಲು ಸಾಧ್ಯ. ಇನ್ನಷ್ಟು ಮಂದಿ ಮಹಿಳೆಯರು ಈ ಕ್ಷೇತ್ರಕ್ಕೆ ಬರಬೇಕು ಎಂದು ಬಯಸುತ್ತಾರೆ ಪ್ರೇಮಾ ಕಾಕಡೆ.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !