ಮಂಗಳವಾರ, ಫೆಬ್ರವರಿ 18, 2020
26 °C

ಗಣರಾಜ್ಯೋತ್ಸವ

ರೂಪಾ ಕೆ.ಎಂ Updated:

ಅಕ್ಷರ ಗಾತ್ರ : | |

Prajavani

* ನಿಮ್ಮ ದೃಷ್ಟಿಯಲ್ಲಿ ಗಣರಾಜ್ಯೋತ್ಸವವೆಂದರೆ? * ಬದಲಾದ ಪರಿಸ್ಥಿತಿಯಲ್ಲಿ ಸ್ವಾತಂತ್ರ್ಯ ಮತ್ತು ಸಮಾನತೆಗಳಿಗೆ ಅರ್ಥ ಸಿಕ್ಕಿದೆಯೇ? * ನಿಮ್ಮ ಕನಸಿನ ಗಣರಾಜ್ಯವನ್ನು ಹೇಗೆ ವಿಶ್ಲೇಷಿಸುತ್ತೀರಾ? ಗಣರಾಜ್ಯೋತ್ಸವದ ಹಿನ್ನೆಲೆಯಲ್ಲಿ ಕೇಳಿದ ಈ ಪ್ರಶ್ನೆಗಳಿಗೆ ಹಲವು ಸ್ತರದ ಮಹಿಳೆಯರು ವ್ಯಕ್ತಪಡಿಸಿದ ಅಭಿಪ್ರಾಯಗಳು ಇಲ್ಲಿವೆ.

ಮಾತನಾಡುವ, ಪ್ರಶ್ನಿಸುವ ಹಕ್ಕನ್ನು ಕೊಟ್ಟಿದೆ 

ಸ್ವಾತಂತ್ರ್ಯ ದಿನ ಭಾವನಾತ್ಮಕ ಕಾರಣಗಳಿಂದ ಮುಖ್ಯವಾದರೆ ಗಣರಾಜ್ಯ ದಿನ ರಚನಾತ್ಮಕ ಕಾರಣಗಳಿಂದ ಮುಖ್ಯವಾಗುತ್ತದೆ. ಸ್ವಾತಂತ್ರ್ಯದ ಸಾರ್ಥಕತೆ ಇರುವುದು ನಾವು ಅದನ್ನು ಹೇಗೆ ಬಳಸಿಕೊಳ್ಳುತ್ತೇವೆ ಎನ್ನುವುದರಲ್ಲಿ. ತರತಮವಿಲ್ಲದ ಸಮಾಜ ನಿರ್ಮಿಸುವ ಉದ್ದೇಶದಿಂದ ರೂಪಿತವಾದ ಭಾರತದ ಸಂವಿಧಾನಕ್ಕೆ ಅಧಿಕೃತ ಮಾನ್ಯತೆ ಸಿಕ್ಕಿದ್ದು ಜನವರಿ 26, 1950 ರಂದು.

ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ನೇತೃತ್ವದಲ್ಲಿ ರಚನೆಯಾದ ಸಂವಿಧಾನ ಇಂದು ನಮಗೆಲ್ಲಾ ಮಾತನಾಡುವ ಹಕ್ಕನ್ನು ಕೊಟ್ಟಿದೆ, ಪ್ರಶ್ನಿಸುವ ಹಕ್ಕನ್ನು ಕೊಟ್ಟಿದೆ, ಹಾಗಾಗಿ ಈ ದಿವಸ ಭಾರತೀಯರೆಲ್ಲರಿಗೂ ಮುಖ್ಯ. ಹೆಣ್ಣಾಗಿ ಇದು ನನಗೆ ಇನ್ನೂ ಮುಖ್ಯ.

ಮಹಿಳೆಯರ ದೃಷ್ಟಿಯಿಂದ ಸ್ವಾತಂತ್ರ್ಯ ಹಾಗೂ ಸಮಾನತೆಗಳಿಗೆ ಅರ್ಥ ಸಿಕ್ಕಿದೆಯೇ ಎಂದು ನೋಡುವಾಗ ನಿಜಕ್ಕೂ ನಿರಾಸೆಯೇ ಆಗುತ್ತದೆ. ಈ ವಿಷಯದಲ್ಲಿ ನಗರಗಳ ಮತ್ತು ಮೇಲ್ವರ್ಗಗಳ ಮಹಿಳೆಯರನ್ನು ಮಾದರಿಯಾಗಿ ತೆಗೆದುಕೊಳ್ಳುವುದು ತಪ್ಪಾಗುತ್ತದೆ, ಏಕೆಂದರೆ ವಾಸ್ತವ ಇರುವುದು ಮಿಕ್ಕ ಹಲವು ಹೆಣ್ಣುಮಕ್ಕಳ ಪರಿಸ್ಥಿತಿಯಲ್ಲಿ. 

ಸ್ವಾತಂತ್ರ್ಯ ಮತ್ತು ಸಮಾನತೆ ಈಗ ‘ಕೊಡುವ’ ಕಾಣಿಕೆಯಾಗಿ ಉಳಿದಿಲ್ಲ, ಗಳಿಸಿಕೊಳ್ಳಬೇಕಾದ ಘನತೆಯಾಗಿದೆ. ಅಂತಹ ಘನತೆಯನ್ನು ಪಡೆದುಕೊಳ್ಳಲು ಪೂರಕವಾಗಿ ನಿಲ್ಲುವ ಸಂವಿಧಾನದ ಮೇಲೆ ನನಗೆ ನಂಬಿಕೆ ಮತ್ತು ಭರವಸೆ.

– ಸಂಧ್ಯಾರಾಣಿ, ಲೇಖಕಿ

––––––––––––

ಏಕತೆ ಬದುಕಿನ ತಾತ್ವಿಕತೆಯಾಗಲಿ

ವಿವಿಧತೆಯಲ್ಲಿ ಏಕತೆ ಎನ್ನುವ ವಾಕ್ಯ ಬದುಕಿನ ತಾತ್ವಿಕತೆಯೂ ಆಗಬೇಕು. ಇದನ್ನು ನಾನು ಬಹುವಾಗಿ ಇಷ್ಟಪಡುತ್ತೇನೆ. ಸಂಸ್ಕೃತಿ, ಸಂಪ್ರದಾಯ, ಭಾಷೆ, ಎಲ್ಲವೂ ವಿಭಿನ್ನವಾಗಿದ್ದಾಗಲೂ ಅದರಲ್ಲಿಯೇ ಒಗ್ಗಟ್ಟು ತರುವುದಿದೆಯೆಲ್ಲ ಅದೇ ನಿಜವಾದ ಗಣರಾಜ್ಯ ಎಂದು ಭಾವಿಸುತ್ತೇನೆ. ಎಲ್ಲ ಭಾಷೆ, ಜನಾಂಗ, ಜಾತಿ, ಧರ್ಮವನ್ನು ಒಳಗೊಂಡು ಪರಸ್ಪರ ಗೌರವದ ಹಿನ್ನೆಲೆಯಲ್ಲಿ ಬದುಕುವುದೇ ಕನಸಿನ ಗಣರಾಜ್ಯ. 

ಸ್ವಾತಂತ್ರ್ಯ ಮತ್ತು ಸಮಾನತೆ ಸಿಕ್ಕೇ ಇಲ್ಲ ಅಂದರೆ ತಪ್ಪಾಗುತ್ತದೆ. ಪ್ರತಿ ಮಹಿಳೆಯು ತನ್ನಲ್ಲಿರುವ ಆಲೋಚನೆಯನ್ನು ನಿರೂಪಿಸಲು ಅವಕಾಶ ಸಿಕ್ಕರೆ ಅದು ಸ್ವಾತಂತ್ರ್ಯವೂ  ಹೌದು. ಈ ಆಲೋಚನೆಗಳಿಗೆ ಪುರುಷರಿಂದ ಬೆಂಬಲ ಸಿಗುತ್ತಾ ಹೋಗಬೇಕು. ಆಗ ಸಮಾನತೆ ಕಲ್ಪನೆಗೆ ಅರ್ಥ ಬರುತ್ತದೆ. 12 ಗಂಟೆ ರಾತ್ರಿಯಲ್ಲಿ ಹೆಣ್ಣು ಮಗಳೊಬ್ಬಳು ಒಂಟಿಯಾಗಿ ಓಡಾಡಲು ಸಾಧ್ಯವೇ? ಎಂಬ ಪ್ರಶ್ನೆಯೊಂದನ್ನು ಮುಂದು ಮಾಡಿಕೊಂಡರೆ, ಈ ಸ್ವಾತಂತ್ರ್ಯವೆಂಬುದಕ್ಕೆ ಮಿತಿ ಇದೆ. ಸಾರ್ವಜನಿಕ ಸ್ಥಳಗಳೆಲ್ಲವೂ ಮಹಿಳೆಯರ ಪರವಾಗಿ ವಿನ್ಯಾಸಗೊಂಡಿವೆಯೇ ಎಂಬ ಪ್ರಶ್ನೆಯನ್ನು ನಾವೀಗ ಕೇಳಿಕೊಳ್ಳಬೇಕಿದೆ. 

– ಅಕ್ಷತಾ ಪಾಂಡವಪುರ, ನಟಿ 

 –––––

ಬರೀ ಸಂಭ್ರಮವಲ್ಲ, ಜವಾಬ್ದಾರಿ ಕೂಡ 

ಗಣರಾಜ್ಯೋತ್ಸವೆಂದರೆ ಅದೊಂದು ಸಂಭ್ರಮಾಚರಣೆಯಷ್ಟೆ ಅಲ್ಲ. ಹಕ್ಕು ಮತ್ತು ಕರ್ತವ್ಯವನ್ನು ಅರಿಯಲು ಇರುವ ದಿನ. ನಾಗರಿಕಳಾಗಿ ಪ್ರತಿ ಹಂತದಲ್ಲಿಯೂ ತೋರ್ಪಡಿಸಬೇಕಾದ ಜವಾಬ್ದಾರಿ. ಇದನ್ನು ಅರಿತರೆ ಅದೇ ಗಣರಾಜ್ಯೋತ್ಸವ. 

ಹೆಣ್ಣಮಕ್ಕಳ ದೃಷ್ಟಿಕೋನದಿಂದ ಯೋಚಿಸುವುದನ್ನು ಈಗೀಗ ಕಲಿಯುತ್ತಿದ್ದೇವೆ. ಹಾಗಾಗಿ ಸ್ವಾತಂತ್ರ್ಯ ಮತ್ತು ಸಮಾನತೆಗಳು ಹೂವಿನ ಮೊಗ್ಗುಗಳಂತೆ ಇನ್ನಷ್ಟೇ ಅರಳಬೇಕಿದೆ. ಪ್ರತಿಯೊಬ್ಬರು ಯಾವ ಭೇದ ಭಾವವಿಲ್ಲದೇ ಬದುಕುವುದು ಗಣರಾಜ್ಯ. ಈ ಕಲ್ಪನೆ ತುಸು ಆದರ್ಶವೆನಿಸಿದರೂ ಅದನ್ನು ಸಾಕಾರಗೊಳಿಸುವ ಜವಾಬ್ದಾರಿ ಎಲ್ಲರ ಮೇಲೂ ಇದೆ. 

- ಪ್ರಿಯಾಂಕ, ಆರ್‌.ಜೆ. ರೇಡಿಯೋ ಆ್ಯಕ್ಟಿವ್‌

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು