ಪರಂಪರೆ ಸಂರಕ್ಷಣೆಗೆ ಯುವಪಡೆ

7

ಪರಂಪರೆ ಸಂರಕ್ಷಣೆಗೆ ಯುವಪಡೆ

Published:
Updated:

ಅದು ಸಮಾನ ಮನಸ್ಕರು ಹಾಗೂ ಕಾಲೇಜು ವಿದ್ಯಾರ್ಥಿಗಳಿಂದ ರೂಪುಗೊಂಡ ಸಂಸ್ಥೆ. ಅದರ ಸಾರಥಿ ಇತಿಹಾಸ ಉಪನ್ಯಾಸಕ. ವಿದ್ಯಾರ್ಥಿಗಳ ಹಾಗೂ ಸಾರಥಿಯ ಸಂಗಮದ ಪ್ರತಿಫಲವೇ ನಗರದ ಪರಂಪರೆಯನ್ನು ಸಾರುವ ವೀರಗಲ್ಲುಗಳು ಹಾಗೂ ಶಿಲಾ ಶಾಸನಗಳ ರಕ್ಷಣಾ ಕಾರ್ಯ.

ಹೌದು, ಜೆ.ಪಿ.ನಗರದ ಆಕ್ಸ್‌ಫರ್ಡ್ ಪಿಯು ಕಾಲೇಜಿನ ಉಪನ್ಯಾಸಕ ರಾಜೀವ್ ನೃಪತುಂಗ ಅವರ ನೇತೃತ್ವದಲ್ಲಿ ವಿದ್ಯಾರ್ಥಿಗಳಿಂದ ರೂಪುಗೊಂಡ ಸಂಸ್ಥೆ ‘ರಿವೈವಲ್ ಹೆರಿಟೇಜ್ ಹಬ್’. ‘ವಾಯ್ಸ್ ಟು ಸೇವ್ ಹೇರಿಟೇಜ್ ಅಂಡ್ ಕಲ್ಚರ್’ (ಪರಂಪರೆ ಮತ್ತು ಸಂಸ್ಕೃತಿ ಸಂರಕ್ಷಣಾ ಧ್ವನಿ) ಅದರ ಅಡಿಬರಹ. ಹೆಸರಿಗೆ ತಕ್ಕಂತೆ ಅದು, ನಗರದ ಪರಂಪರೆ ಉಳಿಸುವ ಕಾಯಕದಲ್ಲಿ ಸದ್ದಿಲ್ಲದೆ ತೊಡಗಿದೆ.

‘ಸಾಕಷ್ಟು ವೈಶಿಷ್ಟ್ಯ, ಕುತೂಹಲಕಾರಿ ಸಂಗತಿಗಳನ್ನು ತನ್ನೊಳಗೆ ಬಚ್ಚಿಟ್ಟುಕೊಂಡ ನಗರ ಬೆಂಗಳೂರು. ಈ ನಗರದ ಇತಿಹಾಸ ಕೆದುಕುತ್ತಾ ಹೊರಟರೆ ನಮ್ಮ ಕಣ್ಮುಂದೆ ಹತ್ತು ಹಲವಾರು ರೋಚಕ ಸಂಗತಿಗಳು ತೆರೆದುಕೊಳ್ಳುತ್ತವೆ. ರೋಚಕ ಅನುಭವ ಹಾಗೂ ಇತಿಹಾಸವನ್ನು ಮುಂದಿನ ಪೀಳಿಗೆಗೆ ದಾಖಲೆ ಸಮೇತ ಉಳಿಸುವ ಸಲುವಾಗಿ ಈ ಕಾಯಕದಲ್ಲಿ ತೊಡಗಿಕೊಂಡಿದ್ದೇವೆ’ ಎನ್ನುವ ರಾಜೀವ್, ಬಿಡುವಿನ ವೇಳೆ ಹಾಗೂ ರಜಾದಿನಗಳಲ್ಲಿ ವಿದ್ಯಾರ್ಥಿಗಳನ್ನು ಬೆನ್ನಿಗೆ ಕಟ್ಟಿಕೊಂಡು ನಗರದ ಪಾರಂಪರಿಕ ಸ್ಥಳಗಳಿಗೆ ಲಗ್ಗೆ ಇಟ್ಟು ಅಧ್ಯಯನಲ್ಲಿ ನಿರತರಾಗಿದ್ದಾರೆ.

ಪುಸ್ತಕದಲ್ಲಿರುವುದನ್ನು ತಲೆಗೆ ತುಂಬಿ, ತನ್ನ ಕೆಲಸ ಮುಗಿಯಿತೆಂದು ಕೈತೊಳೆದುಕೊಳ್ಳದ ರಾಜೀವ್, ಆಸಕ್ತ ವಿದ್ಯಾರ್ಥಿಗಳನ್ನು ಪಾರಂಪರಿಕ ಸ್ಥಳಗಳ ಅಧ್ಯಯನಕ್ಕೆ ಕರೆದೊಯ್ದು ಕ್ಷೇತ್ರ ಕಾರ್ಯದೊಂದಿಗೆ ವಾಸ್ತವದ ಪಾಠ ಮಾಡುತ್ತಿದ್ದಾರೆ. ನಗರದಲ್ಲಿನ ವೀರಗಲ್ಲುಗಳು ಹಾಗೂ ಶಿಲಾ ಶಾಸನಗಳು ಅವಸಾನದತ್ತ ಮುಖಮಾಡಿವೆ. ಅವುಗಳ ಮಹತ್ವದ ಬಗ್ಗೆ ಸ್ಥಳೀಯರಲ್ಲಿ ಜಾಗೃತಿ ಮೂಡಿಸುವ ಕಾಯಕವನ್ನು ಐದು ವರ್ಷಗಳಿಂದ ನಿರಂತರವಾಗಿ ಮಾಡಿಕೊಂಡು ಬಂದಿದೆ ಈ ಸಂಸ್ಥೆ.

‘ಇತಿಹಾಸ ಪಾಠ ಮಾಡುತ್ತಲೇ ಇತಿಹಾಸದ ಬಗ್ಗೆ ಆಸಕ್ತಿ ಬೆಳೆಸಿಕೊಂಡೆ. ವೀರಗಲ್ಲು ಹಾಗೂ ಶಾಸನಗಳ ಬಗ್ಗೆ ಅಧ್ಯಯನ ಮಾಡುವ ಆಸಕ್ತಿ ಮೂಡಿತು. ಒಬ್ಬನೇ ನಗರದ ಪಾರಂಪರಿಕ ಸ್ಥಳಗಳಿಗೆ ಭೇಟಿ ನೀಡಿ ಅಧ್ಯಯನ ಮಾಡತೊಡಗಿದೆ. ಬಳಿಕ, ಪಾಠ ಮಾಡುವುದರ ಜೊತೆಗೆ ವಿದ್ಯಾರ್ಥಿಗಳನ್ನು ಈ ಸ್ಥಳಗಳಿಗೆ ಕರೆದೊಯ್ದೆ. ಅದರಿಂದ ವಿದ್ಯಾರ್ಥಿಗಳ ಕಲಿಕೆಯ ಆಸಕ್ತಿಯೂ ಹೆಚ್ಚಿತು’ ಎನ್ನುತ್ತಾರೆ ರಾಜೀವ್.

ಜಯನಗರದ 9ನೇ ಹಂತದಲ್ಲಿರುವ ಎಸ್‌ಎಸ್ಎಂಆರ್‌ವಿ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕರೂ ಆದ ರಾಜೀವ್, ಅಲ್ಲಿ ‘ಪ್ರಾಚ್ಯ ಗ್ಯಾಲರಿ ಹಾಗೂ ಪಾರಂಪರಿಕ ಕೇಂದ್ರ’ವನ್ನು ಸ್ಥಾಪಿಸಿದ್ದಾರೆ. ‘ರಿವೈವಲ್ ಹೆರಿಟೇಜ್ ಹಬ್‌’ನ ಕಾರ್ಯದ ಚಿತ್ರಗಳು ಹಾಗೂ ನಗರದ ಇತಿಹಾಸ ಸಾರುವ ಕುತೂಹಲಕಾರಿ ಅಂಶಗಳು ಅಲ್ಲಿ ಸ್ಥಾನ ಪಡೆದಿವೆ.

ಸಂಶೋಧನೆಗೆ ಅರ್ಹವಾದ ಮಾಹಿತಿಯನ್ನು ಯಾರೇ ನೀಡಿದರೂ ಕೂಡಲೇ ಅಲ್ಲಿಗೆ ಹೋಗಿ ಪರಿಶೀಲನೆ ನಡೆಸುವುದು ಈ ತಂಡದ ವಿಶೇಷತೆ. ವೀರಗಲ್ಲುಗಳು ಹಾಗೂ ಕಲ್ಲಿನ ಶಾಸನಗಳ ಬಗ್ಗೆ ಸಂಶೋಧನೆ ಮಾಡಿ, ಸ್ಥಳೀಯರಿಗೆ ಅದರ ಮಾಹಿತಿ ನೀಡುವುದರ ಜೊತೆಗೆ ಅವುಗಳನ್ನು ಮುಂದಿನ ಪೀಳಿಗೆಗೆ ಉಳಿಸಲು ಸ್ಥಳೀಯರ ಸಹಕಾರದಿಂದ ಶಕ್ತಿ ಮೀರಿ ಶ್ರಮಿಸುತ್ತಿದೆ. ಈಚೆಗೆ ಹೆಬ್ಬಾಳದಲ್ಲಿ ದೊರೆತ ಶಾಸನವೊಂದನ್ನು ಪತ್ತೆ ಮಾಡಿದ್ದು ಇದೇ ತಂಡ.

ಈ ತಂಡವನ್ನು ಕಿರಿಯ ಸಂಶೋಧಕರ ಹಾಗೂ ಸಾಮಾಜಿಕ ಜಾಗೃತಿ ತಂಡ ಎಂದು ‘ವಂಡರ್ ಬುಕ್ಸ್ ಆಫ್ ರೆಕಾರ್ಡ್’ ಸಂಸ್ಥೆ ಗುರುತಿಸಿದೆ. ನಾಲ್ಕು ವರ್ಷಗಳಲ್ಲಿ 50 ಸಂಶೋಧನಾ ಸ್ಥಳಗಳ ಬಗ್ಗೆ ಅಧ್ಯಯನ ಮಾಡಿದ್ದಕ್ಕೆ ‘ಗ್ಲೋಬಲ್ ಬುಕ್ಸ್ ಆಫ್ ರೆಕಾರ್ಡ್’ ಹಾಗೂ ‘ಇಂಡಿಯನ್ ಅಚೀವರ್ ಬುಕ್ಸ್ ಆಫ್ ರೆಕಾರ್ಡ್’ ಸಂಸ್ಥೆಗಳೂ ‘ರಿವೈವಲ್ ಹೆರಿಟೇಜ್ ಹಬ್’ ಅನ್ನು ಗುರುತಿಸಿವೆ.

ನಗರದ 37 ಸ್ಥಳಗಳ ಕುರಿತ ‘ಪರಂಪರೆ’ ಕೃತಿಯನ್ನು ಈ ತಂಡ ಹೊರತಂದಿದೆ. ಪ್ರಶಾಂತ್, ಹರಿಹರ, ಸಂತೋಷ್, ದೇವರಾಜ್, ನಯನಾ ಸೇರಿದಂತೆ ಹಲವು ಮಂದಿ ಈ ತಂಡದಲ್ಲಿ ಸಕ್ರಿಯರಾಗಿದ್ದಾರೆ. ಐಟಿ– ಬಿಟಿ ಕಂಪನಿಗಳ ಉದ್ಯೋಗಿಗಳೂ ಅವರೊಂದಿಗೆ ಕೈಜೋಡಿಸಿದ್ದಾರೆ.

ಮಾರಮ್ಮನ ಕಲ್ಲಲ್ಲಿ ಶಾಸನ
ಕುಮಾರಸ್ವಾಮಿಲೇಔಟ್‌ನ ದಯಾನಂದ ಸಾಗರ್ ಕಾಲೇಜಿನ ಹಿಂಭಾಗದಲ್ಲಿ ‘ಮುನಿಯಪ್ಪನ ಕಾಂಪೌಂಡ್’ ಇದೆ. ಸ್ಥಳೀಯ ನಿವಾಸಿ ಚಿನ್ನಣ್ಣ ಹೆಸರಿನಲ್ಲಿದೆ ಆ ಜಾಗ. ಇಲ್ಲಿ ಸುಮಾರು 30 ವರ್ಷಗಳ ಹಿಂದೆ ಕಲ್ಲಿನ ಶಾಸನ ಪತ್ತೆಯಾಗಿತ್ತು. ಅದನ್ನು ದೇವರಕಲ್ಲು ಎಂದು ಭಾವಿಸಿದ್ದ ಸ್ಥಳೀಯರು, ಊರ ಮುಂದಿನ ದೇವಸ್ಥಾನದ ಬಳಿ ಪ್ರತಿಷ್ಠಾಪಿಸಿದ್ದರು. ಕ್ರಮೇಣ, ಅದನ್ನು ಮಾರಮ್ಮನ ಕಲ್ಲು ಎಂದು ಕರೆಯಲಾರಂಭಿಸಿದರು.

‘ನಾನೊಮ್ಮೆ ಆ ಕಲ್ಲನ್ನು ಸೂಕ್ಷ್ಮವಾಗಿ ಗಮನಿಸಿದ್ದೆ. ಅದರ ಮೇಲೆ ಲಿಪಿ ಕಾಣಿಸಿತು. ಆದರೆ, ಅದನ್ನು ಪರಿಶೀಲಿಸಲು ಸ್ಥಳೀಯರು ಅವಕಾಶ ಮಾಡಿಕೊಳ್ಳಲಿಲ್ಲ. ಆ ಭಾಗದ ಪ್ರಜ್ಞಾವಂತರ ನೆರವಿನಿಂದ ಅದನ್ನು ತಂಡದ ಸದಸ್ಯರೊಂದಿಗೆ ಹೊರತೆಗೆದೆವು’ ಎಂದರು ರಾಜೀವ್‌.

ಈ ಶಾಸನದ ಲಿಪಿಯನ್ನು ಲಿಪಿತಜ್ಞ ಡಾಪಿ.ವಿ.ಕೃಷ್ಣಮೂರ್ತಿ ಅವರ ನೆರವಿನಿಂದ ಓದಲಾಗಿದೆ. ಶಾಸನದಲ್ಲಿ ಯೆಲಚೇನಹಳ್ಳಿ ಬಳಿಯ ಅಣ್ಣೆಯಪ್ಪನಕೆರೆ ಕಟ್ಟಿಸಲು ಹಾಗೂ ತೂಬು ನಿರ್ಮಿಸಲು ಭೂಮಿಯನ್ನು ದಾನವಾಗಿ ನೀಡಿದ್ದರ ಉಲ್ಲೇಖ ಇದೆ. ಇದು ಕ್ರಿ.ಶ 1402ರ ಕಾಲದ ಶಾಸನವಾಗಿದೆ. ವಿಜಯನಗರದ ಇಮ್ಮಡಿ ಹರಿಹರರಾಯನ ಅಧಿಕಾರಿಗಳು ಇದನ್ನು ದಾನವಾಗಿ ನೀಡಿದ್ದರು ಎಂಬುದರ ಮಾಹಿತಿ ಇದರಲ್ಲಿದೆ.

ಸಂಪರ್ಕ: 8548992251

 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !