ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಾಗ್ರಾಮದ ಬಾಗಿಲು ತೆರೆಯಿರಪ್ಪೋ ತೆರೆಯಿರಿ!

Last Updated 29 ಡಿಸೆಂಬರ್ 2019, 19:30 IST
ಅಕ್ಷರ ಗಾತ್ರ

ಕಲಾಗ್ರಾಮದಲ್ಲಿ ಕತ್ತಲೆ! ನಾಟಕದ ಅಂತಃಸತ್ವ ರಂಗದ ಮೇಲೆ ಬಿಚ್ಚಿಕೊಳ್ಳುವುದು ಎಂದರೆ ಕಾಲವೊಂದರ ಸತ್ಯದ ಅನಾವರಣದಂತೆ. ಅಂಥ ರಂಗ ಪ್ರಯತ್ನಗಳನ್ನು ಕತ್ತಲಲ್ಲಿಡುವುದು ಸರಿಯೇ ಎನ್ನುವುದು ರಂಗಾಸಕ್ತರ ಖಾರವಾದ ಪ್ರಶ್ನೆ.

ಹೌದು ಇದನ್ನು ಖಾರವಾಗಿಯೇ ಪ್ರಶ್ನಿಸಬೇಕಾದ ಅನಿವಾರ್ಯತೆ ಇದೆ ಎನ್ನುತ್ತಾರೆ ನಗರದ ಬಹುತೇಕ ರಂಗಕರ್ಮಿಗಳು.

ವಿಷಯ ಇಷ್ಟೇ. ಮಲ್ಲತ್ತಹಳ್ಳಿಯಲ್ಲಿರುವ ಕಲಾಗ್ರಾಮ ಸಮುಚ್ಛಯದಲ್ಲಿ ಸಂಭವಿಸಿದ ಬೆಂಕಿ ಅವಘಡದಿಂದ ಆಡಿಟೋರಿಯಂನ ಬೆಳಕು ಮತ್ತು ಧ್ವನಿ ವ್ಯವಸ್ಥೆ ಸುಟ್ಟು ಕರಕಲಾಗಿತ್ತು. ಇದು ಘಟಿಸಿ ಆಗಲೇ ವರ್ಷ ಕಳೆದಿದೆ. ಈಗಲೂ ಅಲ್ಲಿ ಸಮರ್ಪಕ ದುರಸ್ತಿ ಕಾರ್ಯ ನಡೆದಿಲ್ಲ. ಇದಕ್ಕಾಗಿ ಹಲವು ಪ್ರತಿಭಟನೆ, ಒತ್ತಡ ತರುವಂಥ ಪ್ರಯತ್ನಗಳು ನಡೆದರೂ ಯಾವುದೇ ಪ್ರಯೋಜನ ಸಾಧ್ಯವಾಗುತ್ತಿಲ್ಲ ಎನ್ನುವ ಕೊರಗು ನಗರದ ರಂಗಾಸಕ್ತರದು.

ಇದೀಗ ರಂಗಲೋಕ ಭಿನ್ನ ಪ್ರತಿಭಟನೆಗೂ ಮುಂದಾಗುತ್ತಿದೆ. ಹೆಸರಾಂತ ಯುವ ಬೆಳಕು ವಿನ್ಯಾಸಗಾರ ಕಿರಣ್‌ ಸಿಜಿಕೆ ಮತ್ತು ಗೆಳೆಯರು ಕಲಾಗ್ರಾಮದ ಮೆಟ್ಟಿಲುಗಳ ಬಳಿ ಫೇಸ್‌ಬುಕ್‌ ಲೈವ್‌ನಲ್ಲಿ ವಿಭಿನ್ನ ಪ್ರತಿಭಟನೆ ನಡೆಸುವ ಸಿದ್ಧತೆಯಲ್ಲಿದ್ದಾರೆ. ಮತ್ತೋರ್ವ ಯುವ ರಂಗಕರ್ಮಿ ಗಣೇಶ್‌ ಶೆಟ್ಟಿ ಫೇಸ್‌ಬುಕ್‌ನಲ್ಲಿ ಸ್ಟೇಟಸ್‌ಗಳ ಮೂಲಕ ಈಗಾಗಲೇ ಪ್ರತಿಭಟನೆಯನ್ನು ಮುಂದುವರಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಹಲವು ರಂಗಕರ್ಮಿಗಳು ತಮ್ಮ ಪ್ರತಿಭಟನೆಯನ್ನು ವ್ಯಕ್ತಪಡಿಸುತ್ತಿದ್ದಾರೆ.

ಮತ್ತೊಂದೆಡೆ ಹಿರಿಯ ರಂಗಕರ್ಮಿಗಳು ಮತ್ತು ಸಾಂಸ್ಕೃತಿಕ ಲೋಕದ ಗಣ್ಯರು ಕೂಡ ಸಂಬಂಧಪಟ್ಟ ಇಲಾಖೆಗಳನ್ನು ಖುದ್ದಾಗಿ ಭೇಟಿ ಮಾಡಿ ಪರಿಸ್ಥಿತಿಯನ್ನು ವಿವರಿಸಿದ್ದಾರೆ. ಇಷ್ಟಾಗಿಯೂ ಆಗಬೇಕಾದ ದುರಸ್ತಿ ಕಾರ್ಯ ಆಗಿಲ್ಲ ಎನ್ನುವ ಅಸಮಾಧಾನ ರಂಗಕರ್ಮಿಗಳದು.

ಆಗಿದ್ದು ಇಷ್ಟು

ನಗರದ ಮಲ್ಲತಹಳ್ಳಿಯಲ್ಲಿ ರೂಪಿಸಿರುವ ಕಲಾಗ್ರಾಮ ಸಾಂಸ್ಕೃತಿಕ ಸಮುಚ್ಛಯದಲ್ಲಿ ವಿದ್ಯುತ್‌ ಶಾರ್ಟ್‌ ಸರ್ಕ್ಯೂಟ್‌ನಿಂದ ಬೆಂಕಿ ಅನಾಹುತ ಸಂಭವಿಸಿತ್ತು. ಅದಾಗಿ ಒಂದು ವರ್ಷವೇ(ಡಿ13, 2019) ಕಳೆದುಹೋಗಿದೆ. ಅಂದು ರಾತ್ರಿ ಕಲಾಗ್ರಾಮದ ಕಾವಲುಗಾರನ ಸಮಯ ಪ್ರಜ್ಞೆ ಸಂಭವಿಸಬಹುದಾಗಿದ್ದ ದೊಡ್ಡ ಅನಾಹುತವೊಂದನ್ನು ತಪ್ಪಿಸಿತ್ತು. ಈ ಅವಘಡದಿಂದ ಅಲ್ಲಿನ ಧ್ವನಿ ಮತ್ತು ಬೆಳಕಿನ ವ್ಯವಸ್ಥೆ ಸಂಪೂರ್ಣ ಸುಟ್ಟು ಕರಕಲಾಗಿತ್ತು. ವೈರಿಂಗ್ ವ್ಯವಸ್ಥೆ ಸಂಪೂರ್ಣವಾಗಿ ಸುಟ್ಟು ಬೂದಿಯಾಗಿತ್ತು. ಕನಿಷ್ಠ ₹30 ಲಕ್ಷ ಅಂದಾಜು ಹಾನಿಯಾಗಿತ್ತು.

ಸದಾ ವಿಭಿನ್ನ ರಂಗ ಚಟುವಟಿಕೆಗಳಿಂದ ಅತ್ಯಂತ ಜೀವಂತಿಕೆಯ ಭವನದಲ್ಲಿ ಈ ಅವಘಡದ ಕಾರಣ ಸುಟ್ಟ ವಾಸನೆ, ಸ್ಮಶಾನ ಮೌನವೇ ಆವರಿಸಿಕೊಂಡಿತ್ತು. ಘಟನೆ ನಡೆದು ತಿಂಗಳುಗಳು ಕಳೆದರೂ ಸರಿಪಡಿಸುವ ಕೆಲಸ ಆಗಲೇ ಇಲ್ಲ. ಸಂಬಂಧಪಟ್ಟವರಿಂದ ಸೂಕ್ತ ಸ್ಪಂದನೆ ಸಿಗದ ಕಾರಣ ಬೇಸತ್ತ ನಗರದ ರಂಗತಂಡಗಳು ಪ್ರತಿಭಟನೆಯ ಹಾದಿ ಹಿಡಿದು ಸಂಸ್ಕೃತಿ ಇಲಾಖೆಯ ಮೇಲೆ ತೀವ್ರ ಒತ್ತಡ ಹಾಕಿದವು. ಸಂಪೂರ್ಣ ರಿಪೇರಿ ಆಗುವತನಕ ರಂಗ ಚಟುವಟಿಕೆಗಳು ನಿಂತು ಆನಂತರದಲ್ಲಿ ಕಲಾಗ್ರಾಮದ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಇರುವ ಪ್ರೇಕ್ಷಕರನ್ನು ಕಳೆದುಕೊಳ್ಳುವ ಆತಂಕ ರಂಗಾಸಕ್ತರಲ್ಲಿತ್ತು.

ಅಂದಿನ ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ ಜೆ. ಲೋಕೇಶ್‌ ಕೂಡ ಇಲಾಖೆಯ ಮೇಲೆ ತೀವ್ರ ಒತ್ತಡ ತಂದಿದ್ದರು. ಇದರಿಂದ ಇಲಾಖೆಯ ನಿರ್ದೇಶಕರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ತಕ್ಷಣಕ್ಕೆ ರಂಗ ಚಟುವಟಿಕೆಗಳಿಗೆ ಮರುಚಾಲನೆ ನೀಡಲು ತಾತ್ಕಾಲಿಕ ವ್ಯವಸ್ಥೆಯೊಂದನ್ನು ಹದಿನೈದು ದಿನಗಳೊಳಗಾಗಿ ರೂಪಿಸುವ ಭರವಸೆ ನೀಡಿದರು. ಅದರಂತೆ ತಾತ್ಕಾಲಿಕ ವ್ಯವಸ್ಥೆಗೆ ತಯಾರಿಯೂ ನಡೆಯಿತು. ಆ ಸಂದರ್ಭದಲ್ಲಿ ಬಂದ ರಿಪೇರಿ ಕೆಲಸದ ಕಾಂಟ್ರ್ಯಾಕ್ಟರ್‌, ಈಗ ತಾತ್ಕಾಲಿಕವಾಗಿ ಶುರು ಮಾಡಿದರೆ ಮುಂದೆ ನಮ್ಮ ರಿಪೇರಿ ಕಾಮಗಾರಿ ನಡೆಯುವಾಗ ನಿಲ್ಲಿಸಬೇಕಾಗುತ್ತದೆ. ಅದಕ್ಕೆ ಬದಲಾಗಿ ನಾವು ಸಂಪೂರ್ಣ ರಿಪೇರಿ ಕೆಲಸ ಮುಗಿಸಿ ಒಮ್ಮೆ ಸಂಪೂರ್ಣ ಸಿದ್ಧಗೊಂಡ ಮೇಲೆ ನಿಮಗೊಪ್ಪಿಸುತ್ತೇವೆ ಎಂಬ ಭರವಸೆಯ ಮಾತುಗಳನ್ನು ಹೇಳಿದರು. ಅದರಂತೆ ತಾತ್ಕಾಲಿಕ ವ್ಯವಸ್ಥೆಯನ್ನು ಕೂಡ ಕೈಬಿಡಲಾಯಿತು.

ಆರಂಭದಲ್ಲಿ ತುಂಬ ಉತ್ಸಾಹದಿಂದ ವೈರಿಂಗ್‌ ಕೆಲಸ, ಸೌಂಡ್‌ ರೂಂ ಪುನರ್‌ನಿರ್ಮಾಣ ಕೆಲಸ ಶುರುವಿಟ್ಟುಕೊಂಡರು. ಆದರೆ ಅದು ಅಂದುಕೊಂಡಂತೆ ವ್ಯವಸ್ಥಿತವಾಗಿ ಮುಂದಕ್ಕೆ ಸಾಗಲೇ ಇಲ್ಲ. ಯಾವಾವುದೋ ಕಾರಣಕ್ಕೆ ವಿಳಂಬವಾಗುತ್ತಲೇ ಬಂದಿತು. ಇದೀಗ ಅಲ್ಲಿ ಹೊಸ ಉಪಕರಣಗಳು ಇನ್ನೂ ಬಂದಿಲ್ಲ. ಕೇವಲ ವೈರಿಂಗ್‌ ಕೆಲಸ ಮಾತ್ರ ಆಗಿದೆ. ಉಳಿದಂತೆ ಎಲ್ಲ ರೀತಿಯ ತಾಂತ್ರಿಕ ಕಾಮಗಾರಿ ಹಾಗೆಯೇ ಉಳಿದಿದೆ. ಡಿಮ್ಮರ್‌ ಆಗಲಿ ಅಥವಾ ಇನ್ನಿತರೇ ಉಪಕರಣಗಳಾಗಲಿ ಇನ್ನೂ ವ್ಯವಸ್ಥೆ ಮಾಡಿದಂತೆ ಕಾಣುವುದಿಲ್ಲ. ಹೀಗಾಗಿ ಕಲಾಗ್ರಾಮದ ಸ್ಥಿತಿ ವರ್ಷದಿಂದ ಅದೇ ಕತ್ತಲೆಯ ಕೂಪದಲ್ಲಿ ನರಳುವಂತಾಗಿದೆ ಎನ್ನುತ್ತಾರೆ ಒಬ್ಬ ಯುವ ರಂಗಕರ್ಮಿ (ಅವರು ಹೆಸರು ಹೇಳಲು ಇಚ್ಛಿಸಲಿಲ್ಲ).

ಒಂದೊಮ್ಮೆ ಕುವೆಂಪು ಅವರ ‘ಜಲಗಾರ’ ನಾಟಕ ಪ್ರದರ್ಶನದ ಸಂದರ್ಭದಲ್ಲಿ ಬೆಳಕು ನಿರ್ವಹಣೆ ಸಾಧ್ಯವೇ ಆಗಲಿಲ್ಲ. ಮೊಬೈಲ್‌ ಟಾರ್ಚ್‌ ಹಿಡಿದು ನಾಟಕ ಮುಗಿಸಬೇಕಾದ ಪರಿಸ್ಥಿತಿ ಇತ್ತು. ಇದಕ್ಕೆ ಇನ್ನೂ ಒಂದು ಸಮಸ್ಯೆ ಎಂದರೆ ಇಲ್ಲಿನ ಟ್ರಾನ್ಸ್‌ಫಾರ್ಮರ್‌ ಸಮಸ್ಯೆ ಇದೆ. ಅದು ಆಗಾಗ ಶಟ್‌ಡೌನ್‌ ಆಗುವುದಿದೆ. ಇದರ ಜೊತೆಗೆ ಇಡೀ ಕಲಾಗ್ರಾಮದ ಸುತ್ತ ಎಲ್ಲಿಯೂ ಬೀದಿ ದೀಪಗಳ ವ್ಯವಸ್ಥೆ ಇಲ್ಲ ಎನ್ನುತ್ತಾರೆ ರಂಗದ ಬೆಳಕು ನಿರ್ವಹಣೆಯಲ್ಲಿ ನಿಪುಣ ಎನಿಸಿಕೊಂಡ ಯುವ ರಂಗಕರ್ಮಿ.

ಹೆಸರಾಂತ ರಂಗನಿರ್ದೇಶಕ ಸಿ. ಬಸವಲಿಂಗಯ್ಯಕುವೆಂಪು ಅವರ ‘ಮಲೆಗಳಲ್ಲಿ ಮದುಮಗಳು’ ಕೃತಿಯನ್ನು ರಂಗಕ್ಕಿಳಿಸಿದ ಸಂದರ್ಭದಲ್ಲಿ ಮತ್ತು ಅದಕ್ಕೆ ಅಭೂತಪೂರ್ವ ಸ್ಪಂದನೆ ಸಿಕ್ಕು ರಾತ್ರಿಯಿಡೀ ಜನ ಜಮಾಯಿಸುತ್ತಿದ್ದ ಸಂದರ್ಭದಲ್ಲೂ ಕಲಾಗ್ರಾಮದ ಸುತ್ತ ಮುತ್ತ ಬೀದಿ ದೀಪಗಳಿರಲಿಲ್ಲ. ಇಲ್ಲಿಗೆ ಸಮೀಪದಲ್ಲಿ ರಾಷ್ಟ್ರೀಯ ನಾಟಕ ಶಾಲೆಯ ವಿದ್ಯಾರ್ಥಿಗಳ ಕಲಿಕಾ ಕಾರ್ಯವೂ ನಡೆಯುತ್ತದೆ. ರಂಗಚಟುವಟಿಕೆಯಿಂದ ತಡರಾತ್ರಿಯವರೆಗೂ ರಂಗಕರ್ಮಿಗಳ ಓಡಾಟ ಅನಿವಾರ್ಯವೂ ಆಗಿರುತ್ತದೆ.‘ಮಲೆಗಳಲ್ಲಿ ಮದುಮಗಳು’, ‘ಕುಸುಮ ಬಾಲೆ’ ಮತ್ತಿತರ ವಿಭಿನ್ನ ರಂಗ ಚಟುವಟಿಕೆಗಳಿಂದ ನಗರದ ಗಮನ ಸೆಳೆದ ಕಲಾಗ್ರಾಮ ಸುತ್ತಮುತ್ತಲಿನ ರಂಗಪರಿಸರ ಸಾಂಸ್ಕೃತಿಕವಾಗಿ ಅತ್ಯಂತ ಮಹತ್ವದ್ದು. ಅಷ್ಟು ದೀರ್ಘಕಾಲ ಇಂಥದೊಂದು ಸಾಂಸ್ಕೃತಿಕ ತಾಣವನ್ನು ಕತ್ತಲಲ್ಲಿ ಇಡುವುದರ ಹಿಂದಿನ ಉದ್ದೇಶವಾದರು ಏನು ಎನ್ನುವುದು ರಂಗಾಸಕ್ತರನ್ನು ಬಿಡದೇ ಕಾಡುತ್ತಿರುವ ಪ್ರಶ್ನೆಯಾಗಿದೆ.

ಕಲಾಗ್ರಾಮ ಸಜ್ಜಾಗಲಿ

ಸಚಿವರು ಸರ್ವೇ ಮಾಡಿ ಹೋದ ಮೇಲೆ ದುರಸ್ತಿ ಕಾಮಗಾರಿ ಮುಂದುವರಿದಿತ್ತು. ಆದರೆ ಈಗ ಅದು ಸ್ಥಗಿತಗೊಂಡಂತಿದೆ. ಜನವರಿಯಲ್ಲಿ ಕಲಾಗ್ರಾಮ ಸಜ್ಜುಗೊಳಿಸುವುದಾಗಿ ಸಂಬಂಧಪಟ್ಟವರು ಹೇಳಿದ್ದರು. ಆದರೆ ಅದು ಸಾಧ್ಯವಾಗುವ ಲಕ್ಷಣಗಳು ಇದೀಗ ಕಾಣಿಸುತ್ತಿಲ್ಲ.

ಭಿನ್ನ ರಂಗಪ್ರಯೋಗಗಳನ್ನು ಮಾಡುವ ನಗರದ ರಂಗತಂಡಗಳಿಗೆ ಕಲಾಗ್ರಾಮ ಒಂದು ಸೂಕ್ತ ವೇದಿಕೆಯಾಗಿತ್ತು. ರಂಗಾಸಕ್ತರಿಗೂ ಇದು ಆಪ್ತವಾದ ಸಾಂಸ್ಕೃತಿಕ ತಾಣವಾಗಿತ್ತು. ಇಷ್ಟು ದೀರ್ಘಾವಧಿಗೆ ಆಡಿಟೋರಿಯಂ ಮುಚ್ಚಿದ್ದರಿಂದ ರಂಗತಂಡಗಳಿಗೆ ತುಂಬ ಅಡ್ಡಿಯಾದಂತಾಗಿದೆ. ಕಲಾಗ್ರಾಮದ ಸಾವಿರಾರು ಪ್ರೇಕ್ಷಕರಿಗೂ ಇದು ತುಂಬ ಬೇಸರ ತರುವ ಸಂಗತಿ. ಇದು ಆದಷ್ಟು ಬೇಗ ಸಿದ್ಧವಾಗಬೇಕು.

ಕಲಾಗ್ರಾಮದ ಪರಿಸರದಲ್ಲಿಯೇ ಮತ್ತೆ ಕುವೆಂಪು ಅವರ ‘ಮಲೆಗಳಲ್ಲಿ ಮದುಮಗಳು’ ಕೃತಿಯ ರಂಗ ಪ್ರಯೋಗಗಳು ಆಯೋಜನೆಗೊಂಡಿವೆ. ಇಲ್ಲಿ ಈಗಲೂ ಸಮರ್ಪಕವಾದ ವಿದ್ಯುತ್‌ ವ್ಯವಸ್ಥೆ ಇಲ್ಲ. ಬೀದಿ ದೀಪಗಳು ಅಷ್ಟಾಗಿ ಇಲ್ಲ. ಸಾವಿರಾರು ರಂಗಾಭಿಮಾನಿಗಳು ನಾಟಕ ವೀಕ್ಷಣೆಗೆ ಇಲ್ಲಿ ಹಲವು ದಿನಗಳ ಕಾಲ ಓಡಾಡಲಿದ್ದಾರೆ. ಕಲಾಗ್ರಾಮ ಸಜ್ಜಾದರೆ ಇನ್ನೂ ಅನುಕೂಲ.

ಸಿ. ಬಸವಲಿಂಗಯ್ಯ, ರಾಷ್ಟ್ರೀಯ ನಾಟಕ ಶಾಲೆ ಬೆಂಗಳೂರು ಕೇಂದ್ರದ ನಿರ್ದೇಶಕ

***

ಸಂಬಂಧಪಟ್ಟ ಇಲಾಖೆಯ ಯಾರನ್ನೇ ಕೇಳಿದರೂ ಕಲಾಗ್ರಾಮದ ದುರಸ್ತಿ ಕಾರ್ಯ ಮಾಡಿಸುತ್ತೇವೆ ಅಂತಲೇ ಹೇಳುತ್ತಾರೆ. ಸಂಸ್ಕೃತಿ ಇಲಾಖೆಯ ಸಚಿವರೇ ಖುದ್ದಾಗಿ ನವೆಂಬರ್‌ ಅಂತ್ಯದಷ್ಟೊತ್ತಿಗೆ ಎಲ್ಲ ದುರಸ್ತಿ ಪೂರ್ಣಗೊಳಿಸುವಂತೆ ಸೂಚಿಸಿದ್ದರು. ಹಣ ಬಿಡುಗಡೆ ಆಗಿಲ್ಲ ಅಂತ ಸಬೂಬು ಹೇಳುತ್ತ ದುರಸ್ತಿ ಕಾರ್ಯವನ್ನು ಪೂರ್ಣಗೊಳಿಸಿಲ್ಲ. ಸುಟ್ಟಿರುವ ವೈರಿಂಗ್‌ ಎಲ್ಲ ಕಿತ್ತು ಹಾಕಿದ್ದಾರೆ. ಹೊಸದಾಗಿ ವೈರಿಂಗ್‌ ಕೆಲಸವನ್ನೇನೋ ಮಾಡಿದ್ದಾರೆ. ಮಿಕ್ಕುಳಿದ ಎಷ್ಟೋ ಕೆಲಸ ಇನ್ನೂ ಆಗಿಲ್ಲ. ಫಾಲ್‌ ಸೀಲಿಂಗ್‌ ಕೆಲಸ ಕೂಡ ಆಗಿಲ್ಲ.

ಬಿ ವಿಠಲ್‌ (ಅಪ್ಪಯ್ಯ)

***

ಇದು ಒಂದು ವರ್ಷ ಕಾಲ ಮಾಡುವ ಕೆಲಸ ಖಂಡಿತ ಅಲ್ಲ. ಜನವರಿಯಲ್ಲಿ ಕಲಾಗ್ರಾಮ ಸಂಪೂರ್ಣ ರೆಡಿ ಆಗುವ ಸಾಧ್ಯತೆ ಕಮ್ಮಿ. ಆಗಬೇಕಾದ ಕೆಲಸಕ್ಕೆ ಇನ್ನೆರಡು ತಿಂಗಳಾದರು ಬೇಕು ಎನ್ನುವುದು ಅಲ್ಲಿನ ಕಾಮಗಾರಿ ಗಮನಿಸಿದಾಗ ತಿಳಿಯುತ್ತದೆ. ತರಾತುರಿಯಲ್ಲಿ ಎಂಥದೋ ಒಂದನ್ನು ಮಾಡಿ ಮುಗಿಸುವಾಗ ಗುಣಮಟ್ಟದ ಕೆಲಸ ಆಗದಿರುವ ಸಾಧ್ಯತೆ ಇರುತ್ತದೆ. ಇಲಾಖೆ ಇದರ ಬಗ್ಗೆ ನಿಗಾವಹಿಸಬೇಕು. ಹೇಗೂ ಹೊಸದಾಗಿ ಎಲ್ಲವನ್ನು ಮಾಡುತ್ತಿರುವಾಗ ಗುಣಮಟ್ಟದ ಕೆಲಸವೇ ಆಗಲಿ.

ಶಶಿಧರ್‌ ಅಡಪ, ರಂಗವಿನ್ಯಾಸಕ

***

ಜನವರಿ ಮೊದಲ ವಾರದಲ್ಲೇ ಕಲಾಗ್ರಾಮ ರಂಗಾಸಕ್ತರಿಗೆ ದೊರೆಯುವಂತೆ ಮಾಡುತ್ತೇವೆ ಎಂದು ಭರವಸೆ ನೀಡಲಾಗಿತ್ತು. ಈಗ ಅದು ಆಗಿಲ್ಲ. ನಗರದ ರಂಗಾಸಕ್ತರೆಲ್ಲ ಒಂದಾಗಿ, ಒಗ್ಗಟ್ಟಾಗಿ ಎಲ್ಲ ಸೈದ್ಧಾಂತಿಕ ಭಿನ್ನಾಭಿಪ್ರಾಯ ಬದಿಗೊತ್ತಿ ಸಾಂಘಿಕವಾಗಿ ಕಲಾಗ್ರಾಮದ ದುರಸ್ತಿಗೆ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟವರ ಮೇಲೆ ಒತ್ತಡ ತರುವ, ಆಗ್ರಹಿಸುವ ಕೆಲಸವಾಗಬೇಕು.

ಜೆ. ಲೋಕೇಶ್‌, ನಿಕಟಪೂರ್ವ ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ

***

ಕಲಾಗ್ರಾಮದಲ್ಲಿ ದುರಸ್ತಿ ಕಾರ್ಯಕ್ಕೆ ಸರ್ಕಾರ ಒಂದು ವರ್ಷದತನಕ ಕಾಯಬಾರದಿತ್ತು. ನಗರದ ರಂಗಕರ್ಮಿಗಳನ್ನು ಸೇರಿಸಿ ಏನೇನು ವ್ಯವಸ್ಥೆ ಮಾಡಬೇಕು ಎನ್ನುವ ಬಗ್ಗೆ ಒಂದು ಸಣ್ಣ ಚರ್ಚೆಯನ್ನು ಸೌಜನ್ಯಕ್ಕಾದರೂ ನಡೆಸಬೇಕಿತ್ತು. ಜನವರಿಯಲ್ಲಿ ದುರಸ್ತಿ ಕಾರ್ಯ ಸಂಪೂರ್ಣ ಮುಗಿಸುವುದಾಗಿ ಸಂಬಂಧಪಟ್ಟವರು ಭರವಸೆ ನೀಡಿದ್ದರು. ಈಗಿನ ಕಾಮಗಾರಿಯ ವೇಗ ನೋಡಿದರೆ ಆ ಸಾಧ್ಯತೆ ತುಂಬ ಕಡಿಮೆ. ಹಾಗೊಂದು ವೇಳೆ ಜನವರಿಯಲ್ಲಿ ಕಲಾಗ್ರಾಮ ಲಭ್ಯವಾಗಿಸುವುದಾದರೆ ಆನ್‌ಲೈನ್‌ನಲ್ಲಿ ಬುಕಿಂಗ್‌ ವ್ಯವಸ್ಥೆಯನ್ನು ಈಗಾಗಲೇ ಪ್ರಾರಂಭಿಸಬಹುದಿತ್ತಲ್ಲ? ಸರ್ಕಾರ ರಂಗಭೂಮಿಗೆ ಸವಲತ್ತು ಒದಗಿಸುವುದಕ್ಕೆ ಸಂಬಂಧಿಸಿದಂತೆ ಈ ರೀತಿಯ ವಿಳಂಬ ನೀತಿ ಅನುಸರಿಸುತ್ತಿರುವುದು ಬೇಸರದ ಸಂಗತಿ.

ಗಣೇಶ್‌ ಶೆಟ್ಟಿ, ರಂಗಕರ್ಮಿ

***

ಸರ್ಕಾರ ರಚನೆಯ ಗುದ್ದಾಟದ ನಡುವೆ ಕಲಾಗ್ರಾಮ ಬಡವಾಯ್ತು. ಈಗ ಸರ್ಕಾರವೊಂದು ಅಸ್ತಿತ್ವಕ್ಕೆ ಬಂದ ಮೇಲೂ ಅದರ ಬಗ್ಗೆ ಸೂಕ್ತ ಕ್ರಮಗಳನ್ನು ಕೈಗೊಳ್ಳಲು ವಿಳಂಬ ನೀತಿ ಅನುಸರಿಸಲಾಗುತ್ತಿದೆ. ಕಲಾವಿದರ ಸಮಸ್ಯೆಯ ಕೂಗು, ಹಾಡು ಕೇಳಿಸಿಕೊಳ್ಳುವ ವ್ಯವಧಾನ ಕೂಡ ವ್ಯವಸ್ಥೆಗಿಲ್ಲ!

ಸರ್ವೇಶ, ರಂಗಕರ್ಮಿ

***

ಕಲಾಗ್ರಾಮದಲ್ಲಿ ದುರಸ್ತಿ ಕೆಲಸ ಮುಗಿಸಿಕೊಡಿ ಎಂದು ಎಷ್ಟೂಂತ ಅಂಗಲಾಚುವುದು? ಇಲಾಖೆ, ಸಂಬಂಧಪಟ್ಟ ಅಧಿಕಾರಿಗಳ ಸಂಪರ್ಕ, ಪ್ರತಿಭಟನೆ ಎಲ್ಲವೂ ಮಾಡಿ ಆಯ್ತು. ಏನೂ ಪ್ರಯೋಜ ಆಗಿಲ್ಲ. ಇನ್ನು ನಾವು ಕೈಕಟ್ಟಿ ಕುಳಿತುಕೊಳ್ಳಲು ಸಾಧ್ಯವಿಲ್ಲ. ಕಲಾಗ್ರಾಮ ದುರಸ್ತಿ ಕೆಲಸ ಪೂರ್ಣಗೊಳಿಸುವಂತೆ ಮತ್ತೆ ಮತ್ತೆ ಪ್ರತಿಭಟನೆ, ಒತ್ತಾಯ ಮಾಡಲೇಬೇಕಾದ ಅನಿವಾರ್ಯತೆ ಇದೆ. ವಿಶೇಷವಾಗಿ ಯುವರಂಗಕರ್ಮಿಗಳು ಈ ವಿಷಯದಲ್ಲಿ ಹಿರಿಯರ ಮಾರ್ಗದರ್ಶನದೊಂದಿಗೆ ಕಾರ್ಯೋನ್ಮುಖರಾಗಲಿದ್ದೇವೆ.

ಕಿರಣ್‌ ಸಿಜಿಕೆ, ರಂಗಕರ್ಮಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT