ಸೋಮವಾರ, ಆಗಸ್ಟ್ 2, 2021
28 °C

ಟಕ್ಲಾಕೋಟ್‍ನಲಿ ಬುದ್ಧನ ಧ್ಯಾನ

ಕೆ.ವಿ.ಬಾಲಸುಬ್ರಮಣ್ಯ Updated:

ಅಕ್ಷರ ಗಾತ್ರ : | |

Prajavani

ಕೈಲಾಸ –ಮಾನಸ ಸರೋವರದ ಯಾತ್ರೆ ಮುಗಿಸಿ ಟಕ್ಲಾಕೋಟ್‍ಗೆ ಹಿಂತಿರುಗುವಾಗ ಒಡಕು ನಿದ್ದೆ, ಆಯಾಸದ ನಡುವೆ ಕುಲುಕುತ್ತಾ, ತೂಗಾಡುತ್ತಾ ಬಸ್ಸು ಇಳಿಯುತ್ತಿತ್ತು. ಆ ಅರೆಬರೆ ಎಚ್ಚರದಲ್ಲಿ ನಾವೀಗ ‘ರಾಮರ್ ಟೆಂಪಲ್‌ಗೆ ಹೋಗ್ತಾ ಇದೀವಿ...’ ಅನ್ನೋ ಶಬ್ದ ಅಸ್ಪಷ್ಟವಾಗಿ ಕೇಳಿಸಿತು. ಚೀನಾ ಆಕ್ರಮಿತ ಟಿಬೆಟ್‍ನ ಬುರಾಂಗ್ ಪ್ರಾಂತ್ಯದ ಈ ಭಾಗದಲ್ಲೆಂಥಾ ರಾಮಮಂದಿರ ಅಂದುಕೊಳ್ಳುವಷ್ಟರಲ್ಲಿ ಬಸ್ಸು ಒಂದೆಡೆ ನಿಂತಿತು.

ಎಳೆ ಬಿಸಿಲು ಬಲಿತು ನಿಧಾನವಾಗಿ ಕಾವು ಮೆಲ್ಲ ಮೆಲ್ಲನೆ ಹರಡುತ್ತಿತ್ತು. ಆ ನಿರ್ಮಲ ಆಕಾಶ; ಪರಿಶುದ್ಧ ನೀಲಿಯದು. ಬೆಟ್ಟದ ಸಾಲು, ಕಣಿವೆಗಳ ಆಳದಲ್ಲಿ ಹರಿವ ಕರ್ನಾಲಿ ನದಿ (ಖೇಚರೀತೀರ್ಥ -ನವಿಲು ಮುಖದಿಂದ ಬಂದದ್ದು ಎಂದು ನಮ್ಮವರು ಕರೆವ ಹೆಸರು). ಎಲ್ಲ ಪರಿಶುದ್ಧತೆಯಲ್ಲಿ ಅದ್ದಿ ತೆಗೆದಂತೆ ಇತ್ತು. ಆ ವಿಶಾಲ ಆಕಾಶದ ಕೆಳಗೆ ಹೆಚ್ಚು ಕಡಿಮೆ ಒಂದು ಸಾವಿರ ವರ್ಷಗಳಿಂದ (996 ಕ್ರಿ.ಶ) ಗಾಳಿ, ಮಳೆ, ಮಂಜು, ಬಿಸಿಲಿಗೆ ಒಡ್ಡಿಕೊಂಡು ತನ್ನಷ್ಟಕ್ಕೆ ತಾನೇ ಧ್ಯಾನಕ್ಕೆ ಕುಳಿತಂತಿತ್ತು ಖೊರ್ಚಾಕ್ ಬೌದ್ಧಾಲಯ!

ವಯಸ್ಸು ಎಷ್ಟಾದರೇನಂತೆ. ಬಗ್ಗಿಹೋದ ನಡುವಿನೊಂದಿಗೆ, ಹೆಜ್ಜೆ ಮೇಲೆ ಹೆಜ್ಜೆ ಇಟ್ಟು, ನಡುಗುವ ಕೈಗಳಿಂದ ಪ್ರಾರ್ಥನೆಯ ರಾಟೆಗಳನ್ನು ಮೆಲ್ಲ ಮೆಲ್ಲಗೆ ತಿರುಗಿಸುತ್ತ ಮುದುಕಿ ಹಣ್ಣಾಗಿಬಿಟ್ಟಿತ್ತು. ಕೊನೆಯ ರಾಟೆಯ ಹೊತ್ತಿಗೆ ಸ್ವರ್ಗ ಮೂರೇ ಗೇಣು. ನಂತರ ಕಣ್ಣು ಮುಚ್ಚಿ ಕೈ ಜೋಡಿಸಿ, ದೈವವನ್ನು ಎದೆಯೊಳಗೆ ಇಳಿಸಿಕೊಂಡು ಸುಕ್ಕು ಸುಕ್ಕಿನ ಮುದುಕಿ ಒಂದೆಡೆ ಕುಳಿತುಕೊಂಡಿತು.

ಕೈಲಾಸ ಮಾನಸ ಸರೋವರದ ಯಾತ್ರೆಯ ಉದ್ದಕ್ಕೂ ನನ್ನೊಳಗೆ ಅದೇ ಪ್ರಶ್ನೆ ಮತ್ತೆ ಮತ್ತೆ ಕಾಡುತ್ತಿತ್ತು. ನಾವು ಕಾಣಲು ಹೋಗುತ್ತಿರುವ ಈ ಕೈಲಾಸ ಶಿಖರವು ಶಿವನ ನೆಲೆಯೇ? ನಮ್ಮ ಪುರಾಣ ನಂಬುಗೆಗಳಾಚೆಗೆ ಜನಪದ ಮಿಥ್‌ಗಳು ರೂಢಿಯ ಆಚರಣೆಗಳ ಕೊಂಡಿಗಳಲ್ಲಿ ಆ ಅಲೌಕಿಕದ ಸುಳಿವುಗಳು ಕಿವಿಗೆ ಬಿದ್ದಾವೆ? ಮಾತುಕತೆಗಳಲ್ಲಿ ಕಂಡಾವೆಯೇ?

ಈ ಖೊರ್ಚಾಕ್ ಬೌದ್ಧಾಲಯದಲ್ಲಿ ಅಂಥದೊಂದು ಕಥೆ ಸಿಕ್ಕಿತು. ಭರತ ಖಂಡದ ಕೆಲವು ಸಾಧುಗಳು ಕೈಲಾಸ ಕಾಣಲು ಹೊರಟರಂತೆ. ಟಿಬೆಟ್‍ನ ಈ ಭಾಗಕ್ಕೆ ಬಂದಾಗ ದಾರಿಕಾಣದೇ ಹಳ್ಳಿಗರನ್ನು ಕೇಳಿದರಂತೆ.

ಭಾಷೆ ಅರಿಯದೆಯೂ ಅವರು ಕೈಲಾಸದತ್ತ ತೋರಿದರಂತೆ. ಇವರು ಗಂಟುಗಳನ್ನು ಇಳಿಸಿ, ವಾರದೊಳಗೆ ನಾವು ಬಾರದಿದ್ದರೆ, ಇವುಗಳನ್ನು ನಿಮಗೆ ಹೇಗೆ ಬೇಕೋ ಹಾಗೆ ಬಳಸಿ ಎಂದು ಹೋದವರು ಬರಲೇ ಇಲ್ಲ. ತಿಂಗಳು, ವರ್ಷಗಳು ಕಾದು ಕಾದು ಅಲ್ಲಿಯ ರಾಜ ಏಳು ವರ್ಷಗಳ ನಂತರ ಗಂಟು ತೆಗೆದರೆ, ಬೆಳ್ಳಿಯ ಗಟ್ಟಿಗಳು. ಅವುಗಳನ್ನು ಬಳಸಿಯೇ ಈ ಮೂರ್ತಿಗಳನ್ನು ಮಾಡಿದರಂತೆ.

ರಾಮಮಂದಿರದಲ್ಲಿದ್ದ ಹಾಗೇ ಅಲಂಕೃತ ಸೀತಾ, ರಾಮ-ಲಕ್ಷ್ಮಣರಂತೆ ಕಾಣುವ ಆಳೆತ್ತರದ ಸುಂದರ ವಿಗ್ರಹಗಳು (ಜಬ್ಯಂಗ್, ಚೆನ್ರೆಸಿಗ್, ಛಾಗ್ನಾ ದೋರ್ಜೆ ಅಥವಾ ಮಂಜು ವಜ್ರ ಅವಲೋಕಿತೇಶ್ವರ, ವಜ್ರಪಾಣಿ). ಕಾವಿ ಬಣ್ಣದ ಮಂದ ಬೆಳಕೇ ಒಳಗೆಲ್ಲಾ. ಅಲ್ಲಿಯ ಮೌನದಲ್ಲಿ ನಮ್ಮ ಪಿಸುದನಿಗಳನ್ನು ಕೇಳಿಸಿಕೊಂಡಂತೆ ವಿಗ್ರಹಗಳ ಮುಖದ ಮೇಲೆ ಮಂದಹಾಸ. ದರ್ಶನದ ನಂತರ ಗರ್ಭಗುಡಿಯ ಹಿಂದಿನ ಸುರಂಗವನ್ನು ದಾಟಿ ಪ್ರದಕ್ಷಿಣೆ ಹಾಕಬೇಕಂತೆ. ಸಾವಿನ ನಂತರದ ಅಂಧಕಾರದ/ನರಕದರ್ಶನದ ಅನುಭವಕ್ಕೆ!

ಆ ಕಗ್ಗತ್ತಲೆಯ ಸುರಂಗದೊಳಗೆ ನಾಲ್ಕು ಹೆಜ್ಜೆ ಹಾಕುವುದರೊಳಗೆ ಉಸಿರು ಕ್ಷೀಣಿಸುತ್ತಿರುವ ಆತಂಕ. ಇನ್ನೆರಡೇ ಹೆಜ್ಜೆ! ಜೀವದ ಪುಗ್ಗೆ ಠುಸ್ಸೆಂದು ಬಿಡುವ ಭಯ ಹುಟ್ಟಿ ಕುಸಿಯುವಂತಾಯ್ತು. ಕೈಲಾಸ ದರ್ಶನ, ಯಾತ್ರೆಯ ದಿವ್ಯಾನುಭವ ಯಾವುದೂ ಧೈರ್ಯ ಕೊಡದೇ ಜೀವ ಉಳಿದರೆ ಸಾಕೆನ್ನುವಂತಾದಾಗ ಬೆನ್ನು ತಿರುಗಿತು. ಕ್ಷೀಣವಾದ ಬೆಳಕೂ ಕಂಡಿತು. ಮತ್ತೆ ಆ ವಾರಕ್ಕೆ ಬಂದು ನೀಳವಾಗಿ ಉಸಿರೆಳೆದು ಸಂಭ್ರಮಿಸಿದೆ. ಸುರಂಗ ದಾಟಿ ಹೊರಬಂದವರು ನರಕದರ್ಶನ ಬೇಡವಾಯ್ತ ಎಂದು ಕಿಚಾಯಿಸಿದವರಿಗೆ ‘ಉಸಿರಾಟವೇ ಸ್ವರ್ಗ’ ಎಂದು ಬಾಯಿ ಮುಚ್ಚಿಸಿದೆ. ನನಗಂತೂ ಆ ಶುದ್ಧ ನೀಲಿಯ ವಿಶಾಲತೆಯಲ್ಲಿ ಸ್ವರ್ಗವೆಲ್ಲೋ, ನರಕವೆಲ್ಲೋ.

ಅಲ್ಲೇ ಜಗುಲಿಯ ಮೇಲೆ ಕುಳಿತಿದ್ದ ಯುವ ಸನ್ಯಾಸಿಗಳು ಯಾಕ್ ಹಾಲಿನಲ್ಲಿ ಮಾಡಿದ ಬೆಣ್ಣೆಯ ಟೀಯನ್ನು ಕೊಟ್ಟರು. ನಮ್ಮೂರಿನ ಸೇಟುಗಳ ಅಂಗಡಿಯ ಮಸಾಲಾ ಚಾಕ್ಕೆ ಮನಸೋತಿದ್ದ ನನಗೆ ಅದು ಮೆಣಸಿನ ಸಾರಿನಂತೆ ಕಂಡಿತು.

ಟಕ್ಲಾಕೋಟ್‍ನ ವೀಸಾ ಕೇಂದ್ರದಲ್ಲಿದ್ದಾಗ ಮುಗುಳ್ನಗೆಯ ಸ್ಪರ್ಶವೂ ಇಲ್ಲವಾದ, ಒಂದು ಬಗೆಯ ಬಿಗುವು ತುಂಬಿದ ಭಾವ. ಸಾವಿರಾರು ಡಾಲರ್ ಆದಾಯದ ಪ್ರವಾಸಿಗರೆಂಬ ಕನಿಷ್ಠ ವ್ಯಾವಹಾರಿಕ ಸೌಜನ್ಯವೂ ಕಾಣದ ವಾತಾವರಣ. ಕೊಳಕು, ದುರ್ನಾತಗಳ ಆ ಶೌಚಾಲಯ ಪ್ರವಾಸಿಗರ ಬಗ್ಗೆ ಅವರಿಗಿದ್ದ ಗೌರವದ ಸೂಚಕ. ತನ್ನ ಮಹತ್ವಾಕಾಂಕ್ಷೆ, ಸ್ಪರ್ಧೆ, ಅನುಮಾನ ಅಸೂಯೆಗಳೇ ಆಧರಿಸಿದ ಗಡಿ ತಂಟೆಯ ಹಿನ್ನೆಲೆಯಲ್ಲಿ ಭಾರತದಿಂದ ಬಂದವರೆಂಬ ಅಸಡ್ಡೆಯೋ ಏನೋ, ಒಟ್ಟಾರೆ ವಾಕರಿಕೆಯ ಅನುಭವ.

ಟಕ್ಲಾಕೋಟ್‍ನ ಬೀದಿಗಳಲ್ಲಿ ಅಲೆಯುವಾಗಲೂ ಅಷ್ಟೆ. ಚಂದ ಕಂಡ ಬೆಟ್ಟ, ಗುಡ್ದಗಳ ದೃಶ್ಯಗಳತ್ತ ಕ್ಯಾಮೆರಾ ತಿರುಗಿಸಿದರೆ, ಸರ್ಕಾರ ಅಥವಾ ಮಿಲಿಟರಿಗೆ ಸಂಬಂಧಪಟ್ಟದ್ದೇನೋ ಅಡ್ಡ ಬಂದು ನಿರ್ಬಂಧದ ಅನುಭವ. ವ್ಯಾವಹಾರಿಕವಾಗಿ ಮುಗುಳ್ನಗೆ ತೋರದ, ಭಾಷೆ ಅರಿಯದ ಅಥವಾ ಅದಕ್ಕೂ ಮೀರಿದ ಮಾನವೀಯ ಸ್ಪಂದನೆಗಳಾವುವೂ ಕಾಣದ ಟಕ್ಲಾಕೋಟ್ ಪ್ರವಾಸಿಗರಲ್ಲಿ ಜೀವಂತಿಕೆ ಹೊಮ್ಮಿಸಲಿಲ್ಲ.

ಎಷ್ಟಾದರೂ ‘ರಿಲಿಜನ್ ಈಸ್ ಪಾಯ್ಸನ್’ ಎಂಬ ಆಳ್ವಿಕೆಯ ತಾತ್ವಿಕತೆ ಕಟ್ಟಿದ ಪುಟ್ಟ ಪಟ್ಟಣ ಅದು. ಕುತೂಹಲದ ವಿಷಯ ಎಂದರೆ ಅಲ್ಲಿ ಬೌದ್ಧ ಸನ್ಯಾಸಿಗಳು ಕಂಡದ್ದೂ ಇಲ್ಲವೆಂದರೂ ನಡೆದೀತು.

ಕ್ಷಣಹೊತ್ತು, ಚೀನಾ ಆಕ್ರಮಿತ ಪ್ರದೇಶ ಎಂಬುದನ್ನು ಮರೆಸುವ ಸ್ವಚ್ಛಂದ ನಿರ್ಮಲ ಸ್ವಾತಂತ್ರ್ಯದ ಭಾವ. ಮಿಲಿಟರಿ ಬೂಟುಗಳು ಸೋಕದ, ಸಮವಸ್ತ್ರದ ಮಾಲಿನ್ಯವಿಲ್ಲದ ಶುದ್ಧ ಶಾಂತ ವಾತಾವರಣ. ರುಚಿಸದಿದ್ದರೂ, ಪ್ರೀತಿ ತುಂಬಿದ ಟೀ ಬಟ್ಟಲು. ಆ ಮುಗುಳ್ನಗೆಯ ಶ್ರದ್ಧೆಯಲ್ಲಿ, ವಿನಯದಲ್ಲಿ, ಆಕ್ರಮಣಶೀಲತೆ, ರಾಜ್ಯ ವಿಸ್ತರಣೆ, ದಬ್ಬಾಳಿಕೆಯ ಅಧಿಕಾರಗಳೆಲ್ಲ ಮಣ್ಣು ಪಾಲಾದಂತೆ ಒಂದು ಬಗೆಯ ನೆಮ್ಮದಿ ಆ ತೆಳು ಬಿಸಿಲು ಹಾಗೂ ತಂಪುಗಾಳಿಯಲ್ಲಿ.

‘ಖೊರ್ಚಾಕ್’ ಎಂದರೆ ಪವಿತ್ರ ವಸ್ತು ಮತ್ತು ಅದರ ಪರಿಸರ ಎಂದು ಅರ್ಥವಂತೆ. ಇಂತಹ ಬೌದ್ಧಾಲಯ ದಿವ್ಯವಾದದ್ದಲ್ಲದೇ ಮತ್ಯಾವುದು?

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು