ಮಂಗಳವಾರ, ಡಿಸೆಂಬರ್ 1, 2020
19 °C

ಬಾನುಲಿದ ಕವಿ ಐರಸಂಗ

ಶಶಿಧರ ನರೇಂದ್ರ Updated:

ಅಕ್ಷರ ಗಾತ್ರ : | |

Prajavani

1985ರ ಒಂದು ದಿನ. ಖ್ಯಾತ ಗಾಯಕಿ ಅನುರಾಧಾ ಧಾರೇಶ್ವರ ಅವರೊಂದಿಗೆ ನಾನು ಧಾರವಾಡ ಆಕಾಶವಾಣಿ ಕೇಂದ್ರದ ಆವರಣದಲ್ಲಿ ಬರುತ್ತಿರುವಾಗ ಒಂದು ಹಳೆಯ ಸೈಕಲ್ಲಿನ ಮೇಲೆ ಸಣ್ಣ ಕುರುಚಲು ಗಡ್ಡದ, ಮುಖದ ತುಂಬಾ ನಗುವಿರುವ, ಒಂದು ಕಾಲಿನ ಪ್ಯಾಂಟಿಗೆ ಸೈಕಲ್‌ ಕ್ಲಿಪ್‌ ಹಾಕಿ ಮಡಿಚಿಕೊಂಡಿದ್ದ ಒಬ್ಬ ವ್ಯಕ್ತಿ ಕಾಣಿಸಿಕೊಂಡರು. ಸೈಕಲ್ಲಿನ ಹ್ಯಾಂಡಲ್‌ಗೆ ಪುಸ್ತಕಗಳ ಒಂದು ಕೈಚೀಲ ನೇತಾಡುತ್ತಿತ್ತು. ಆ ವ್ಯಕ್ತಿ ಬಂದು ಸೈಕಲ್‌ ನಿಲ್ಲಿಸುತ್ತಿರುವಂತೆಯೇ ಧಾರೇಶ್ವರಾದಿಯಾಗಿ ಸುತ್ತಲಿನ ಎಲ್ಲರೂ ‘ನಮಸ್ಕಾರ, ನಮಸ್ಕಾರ’ ಎಂದಾಗ ಆಗಷ್ಟೇ ಆಕಾಶವಾಣಿ ಸೇರಿದ್ದ ನನಗೆ ಕುತೂಹಲ. ನಂತರ ತಿಳಿದಿದ್ದು ಅವರೇ ಕವಿ ವೀರಭದ್ರಪ್ಪ ಚನ್ನಪ್ಪ ಐರಸಂಗ ಎಂಬುದು.

ದಶಕಗಳಿಂದ ಆಕಾಶವಾಣಿಯಲ್ಲಿ ಅವರ ಅನೇಕ ಭಾವಗೀತೆ, ಭಕ್ತಿಗೀತೆಗಳನ್ನು ಕೇಳುತ್ತಾ ಬಂದಿದ್ದ ನಮ್ಮಂತವರಿಗೆ ಐರಸಂಗ ಅವರದು ಒಂದು ಅಪರೂಪದ ವ್ಯಕ್ತಿತ್ವ. ಮುಂದೆ ನನಗೆ ತಿಳಿದದ್ದು ನಮ್ಮ ತಂದೆ ಮತ್ತು ಅವರು ಸಹಪಾಠಿಗಳಾಗಿದ್ದರು ಎನ್ನುವ ಮಾಹಿತಿ. ಇಬ್ಬರೂ ರೈಲ್ವೆ ಇಲಾಖೆಯಲ್ಲಿ ನೌಕರರಾಗಿದ್ದವರು. ಆಗಾಗ ಸಿಗುತ್ತಿದ್ದ ಅವರು ‘ಎನ್ನ ಶಾಕುಂತಲ’, ‘ದಾಹ’, ‘ಸುಮದರ ಸೃಷ್ಟಿ’ ಮೊದಲಾದ ನಾಲ್ಕಿಂಚು ದಪ್ಪ, ಐದಿಂಚು ಉದ್ದದ 30–40 ಪುಟಗಳ ಪುಟ್ಟ, ಪುಟ್ಟ ಸಂಕಲನಗಳನ್ನು ಕೈಗಿಡುತ್ತಿದ್ದರು. ಮಾರುತಿ ಪ್ರಕಾಶನದಿಂದ ಪ್ರಕಟವಾದ ಕೃತಿಗಳು ಅವುಗಳಾಗಿದ್ದವು. ಪುಸ್ತಕ ಕೈಗಿಟ್ಟು, ಮಿತವಾಗಿ ಮಾತನಾಡಿ ಹೊರಟು ಬಿಡುತ್ತಿದ್ದರು.

ಸ್ವತಃ ಹಾಡುಗಾರರಾಗಿದ್ದ ಸೂಕ್ಷ್ಮ ಮನಸ್ಸಿನ ಕವಿ ಐರಸಂಗರು, ತಬಲಾ ಬಾರಿಸುತ್ತಿದ್ದರು. ಕೊಳಲು ನುಡಿಸುತ್ತಿದ್ದರು. ತುಂಬಾ ಸಂಕೋಚ ಸ್ವಭಾವದವರಾದ ಈ ಕವಿಯ ಕವನಗಳನ್ನು ಆಕಾಶವಾಣಿಯಲ್ಲಿ ಹಾಡಿಸಿದವರು ಎನ್ಕೆಯವರು. ಅರವತ್ತರ ದಶಕದಲ್ಲಿ ಇವರ ಕವನಗಳನ್ನು ಕೇಶವಕುಮಾರ್‌ ಗುರಮ್‌, ವಸಂತ ಕನಕಾಪುರ ಅವರಂತಹ ಘಟಾನುಘಟಿಗಳಿಗೆ ನೀಡಿ, ಸಂಗೀತ ಸಂಯೋಜನೆ ಮಾಡಿಸಿ, ಅನುರಾಧಾ ಧಾರೇಶ್ವರ, ಲತಾ ಜಾಗೀರದಾರ್‌, ಈಶ್ವರಪ್ಪ ಮಿಣಚಿ ಮೊದಲಾದ ಕಲಾವಿದರಿಂದ ಹಾಡಿಸಿದರು. ಆಗ ಐರಸಂಗರ ಕಾವ್ಯ ಪರಿಮಳ ನಾಡಿನ ತುಂಬಾ ಪಸರಿಸತೊಡಗಿತು.

ಆಕಾಶವಾಣಿ ಸಂಗೀತ ಸಂಯೋಜಕ ಶ್ರೀಕಾಂತ ಕುಲಕರ್ಣಿ ಅವರು ‘ಸುಂದರ ಸೃಷ್ಟಿ’ ಕವನಗಳ ಕುರಿತು ಹೀಗೆ ಅಭಿಪ್ರಾಯಪಟ್ಟಿದ್ದರು: ಐರಸಂಗ ಅವರು ಜೀವನದ ಎಲ್ಲ ಅನುಭವಗಳನ್ನು ಕಾವ್ಯದಲ್ಲಿ ಸೊಗಸಾಗಿ ಹೆಣೆಯುತ್ತಾ, ಗೇಯತೆಯ ಚೌಕಟ್ಟಿನಲ್ಲಿ ಭಾವವನ್ನು ಹೊನಲಿನಂತೆ ಹರಿಸುವ ಅಪರೂಪದ ಕಾವ್ಯಶಿಲ್ಪಿ. ಸಂಗೀತ ಸಂಯೋಜಕನಾಗಿ ನಾನು ಇಷ್ಟನ್ನು ಹೇಳಬಲ್ಲೆ– ಅವರ ಕಾವ್ಯದಲ್ಲಿ ಗೇಯತೆ–ಪ್ರಾಸಗಳ ಹೊಳೆಯೇ ಹರಿದಿದೆ. ಯಾವ ಹಾಡುಗಾರನೇ ಆಗಲಿ, ಸುಲಲಿತವಾದ ಅವರ ಪದ್ಯಗಳನ್ನು ಹಾಡಲು ಹಾತೊರೆಯದೇ ಇರಲಾರ’.

ಐರಸಂಗರಿಗೆ ತಾಳ, ಲಯದ ಜ್ಞಾನವಿದ್ದಿದ್ದರಿಂದ ಪುರಂದರ ದಾಸರು, ಕನಕದಾಸರ ಪದಗಳಂತೆ ತಮ್ಮ ಕವನಗಳ ಶೀರ್ಷಿಕೆ ಜತೆಗೆ ರೂಪಕ, ದಾದ್ರಾ, ಝಪ್‌ತಾಲ... ಹೀಗೆ ತಾಲದ ಆಸರೆ ಕೊಡುವ ಮೂಲಕ ಹಾಡುಗಾರರ ಕೆಲಸ ಹಗುರ ಮಾಡುತ್ತಿದ್ದರು. ಹೀಗಾಗಿ ಈ ಕವಿಯೆಂದರೆ ಎಲ್ಲ ಹಾಡುಗಾರರಿಗೂ ಅಚ್ಚುಮೆಚ್ಚು. ಅಂತೆಯೇ ಖ್ಯಾತ ಗಾಯಕ ಈಶ್ವರಪ್ಪ ಮಿಣಚಿ, ‘ನಿಮ್ಮ ಕಾವ್ಯಗಳು ತುಂಬಾ ಚೆನ್ನಾಗಿವೆ. ಅಷ್ಟೇ ಸರಳವಾಗಿವೆ. ಜನಸಾಮಾನ್ಯರಿಗೂ ಸುಲಭವಾಗಿ ಅರ್ಥವಾಗುತ್ತವೆ. ಹಾಡುವವರು ಸಹ ಖುಷಿಯಿಂದ ಹಾಡುವಂತಿವೆ. ಈ ಹಿಂದೆಯೂ ನಿಮ್ಮ ಕವಿತೆಗಳನ್ನು ಹಾಡಿದ್ದೇನೆ. ಮುಂದೆಯೂ ಹಾಡುತ್ತೇನೆ’ ಎಂದು ಈ ಕವಿಗೆ ಪ್ರೀತಿಯಿಂದ ಹೇಳಿದ್ದರು. ದೊಡ್ಡ ಗಾಯಕನಿಂದ ಇಂತಹ ಪ್ರೀತಿಯನ್ನು ಗಿಟ್ಟಿಸಿದ್ದರು ಐರಸಂಗರು.

ಆಕಾಶವಾಣಿಯ ಅಪ್ಪಟ ಅಭಿಯಾನಿಯಾಗಿದ್ದ ಐರಸಂಗರು ಮಲ್ಲಕಂಬದ ಗಟ್ಟಿಗರು. ಇಳಿವಯಸ್ಸಿನಲ್ಲೂ ಅವರು ಮಲ್ಲಕಂಬ ಪ್ರದರ್ಶನ ನೀಡಿದ್ದುಂಟು. ತಮ್ಮ ಸಹೋದ್ಯೋಗಿ, ನಟ ಆರ್‌.ಜಿ. ಚಿಲಕವಾಡರ ನೆರವನ್ನು ಅವರು ಸದಾ ಸ್ಮರಿಸುತ್ತಿದ್ದರು. ಸುಪ್ರಭಾತ, ಭಾವ ಭಾಸ್ಕರ, ಕಾವ್ಯಶ್ರೀ ಪಯಣ, ನವರಸ, ಶೃಂಗಾರಕಾವ್ಯ, ಗೀತಮಂಜರಿ... ಹೀಗೆ 40ಕ್ಕೂ ಹೆಚ್ಚು ಕವನ ಸಂಕಲನಗಳನ್ನು ಅವರು ಹೊರತಂದಿದ್ದಾರೆ. ಭಕ್ತಿಗೀತೆ, ಭಾವಗೀತೆ, ದೇಶ ಭಕ್ತಿಗೀತೆ, ಜಾನಪದ ಗೀತೆ, ಗಜಲ್‌, ಪ್ರೇಮಗೀತೆ, ಲಾವಣಿ... ಹೀಗೆ ಅವರ ಕಾವ್ಯದ ಹರವು ಬಲುದೊಡ್ಡದು. ಸುಮಾರು ನಾಲ್ಕು ಸಾವಿರ ಕವಿತೆಗಳನ್ನು ಕನ್ನಡ ಸಾಹಿತ್ಯಕ್ಕೆ ನೀಡಿದ ಈ ಅಪರೂಪದ ಕವಿಗೆ ಕರ್ನಾಟಕ ವಿಶ್ವವಿದ್ಯಾಲಯವು ಗೌರವ ಡಾಕ್ಟರೇಟ್‌ ನೀಡಿ ಗೌರವಿಸಿದೆ. ಹತ್ತು–ಹಲವು ಪ್ರಶಸ್ತಿ, ಪುರಸ್ಕಾರಗಳು ಸಹ ಅವರಿಗೆ ಸಂದಿವೆ.

ತಂದೆ ಚನ್ನಪ್ಪ ಮನೆಯಲ್ಲಿ ಭಜನೆ, ಮಗಳಾರತಿ, ದೇವರನಾಮ ಹೇಳುತ್ತಿದ್ದರು. ಆಗಿನಿಂದಲೇ ನನಗೆ ಕಾವ್ಯದ ಕಡೆಗೆ ಒಲವು. ಮೊದಲ ಸಲ ಅಂದರೆ 1947ರಲ್ಲಿ ಸುಪ್ರಭಾತ ಎಂಬ ಕವನ ಸಂಕಲನ ಬರೆದೆ. ನನ್ನ ಕಾವ್ಯಕೃಷಿಯನ್ನು ಪ್ರೋತ್ಸಾಹಿಸಿದವರು ಗೆಳೆಯ ಚಿಲಕವಾಡ. ನೀವು ನೂರು ಕವನ ಬರೀರಿ ಅಂತಾ ಹೇಳಿ ಹುರಿದುಂಬಿಸಿದರು ಎಂದು ಅವರು ಹೇಳುತ್ತಿದ್ದರು. ‘ಇವತ್ತಿನ ಕಾವ್ಯದೊಳಗ ಛಂದಸ್ಸು ಇಲ್ರಿ. ಲಯವಂತೂ ಕೇಳಲೇ ಬೇಡಿ. ಕವನಗಳು ಯಾವುದೇ ಅರ್ಥವಿಲ್ಲದೇ ಅಸಂಬದ್ಧವಾಗಿ ಸಮಾಪ್ತಿಯಾಗ್ತಾವ್ರಿ…’ ಎಂದು ಅವರೊಮ್ಮೆ ಸಂದರ್ಶನವೊಂದರಲ್ಲಿ ಹೇಳಿದ್ದ ನೆನಪು.

ಮಕ್ಕಳೊಂದಿಗೆ ಮಕ್ಕಳಾಗಿ ಬೆರೆಯುತ್ತಿದ್ದ ಅವರು ಬಡ ವಿದ್ಯಾರ್ಥಿಗಳಿಗೆ ಉಚಿತ ಪಾಠವನ್ನೂ ಹೇಳುತ್ತಿದ್ದರು. ಸೈಕಲ್ ಹಾಗೂ ಗಡಿಯಾರ ರಿಪೇರಿ ಕೆಲಸಗಳೂ ಅವರಿಗೆ ಗೊತ್ತಿದ್ದವು. ಕಾವ್ಯ ಶ್ರೀಮಂತಿಕೆ, ಭಾವ ಶ್ರೀಮಂತಿಕೆ, ಹೃದಯ ಶ್ರೀಮಂತಿಕೆಯೇ ಅವರ ದೊಡ್ಡ ಸಂಪತ್ತು ಆಗಿತ್ತು.

ಮೃದು ಮನಸಿನ, ಶಾಂತ ಸ್ವಭಾವದ ಕವಿ ಐರಸಂಗ. ಅವರ ಕವಿತೆಗಳಲ್ಲೂ ಇದೇ ಸ್ವಭಾವವನ್ನು ನಾವು ಕಾಣಬಹುದು. ಧಾರವಾಡದ ಅನೇಕ ಗಣ್ಯರಂತೆ ಇವರೂ ಉಪೇಕ್ಷೆಗೆ ಒಳಗಾಗಿದ್ದ ಕವಿ. ಪ್ರಶಸ್ತಿ, ಸಮ್ಮಾನಗಳಿಗೆ ಎಂದೂ ಹಂಬಲಿಸಿದವರಲ್ಲ. ಆದರೆ, ಕರ್ನಾಟಕ ವಿಶ್ವವಿದ್ಯಾಲಯ ಅವರ ಸಾಧನೆಯನ್ನು ಗುರುತಿಸುವ ಕೆಲಸ ಮಾಡಿದೆ. ನಾಡಿನ ಹಲವು ಪ್ರಮುಖ ಗಾಯಕರು ಐರಸಂಗರ ಕಾವ್ಯಕ್ಕೆ ದನಿಯಾಗಿದ್ದಾರೆ.

‘ಮಾತು ಬೆಳ್ಳಿ, ಮೌನ ಬಂಗಾರ’ ಎಂಬಂತೆ ಕಡಿಮೆ ಮಾತಿನ, ಸಂಕೋಚ ಸ್ವಭಾವದ ಹಿರಿಯ ಜೀವ ಐರಸಂಗರು ಕೊನೆಯವರೆಗೆ ಸದ್ದಿಲ್ಲದೆ ತಮ್ಮ ಸೈಕಲ್ಲಿನ ಪೆಡಲ್‌ ತುಳಿಯುತ್ತಾ, ಕಾವ್ಯಕೃಷಿ ಮಾಡಿದವರು. ಹಾಡುಗಾರರು ಬಾಯಿ ಚಪ್ಪರಿಸಿ ಹಾಡುವಂತೆ ಮಾಡಿದವರು. ಈಗ ಈ ಕವಿಯ ಲೇಖನಿ ಟೇಬಲ್‌ ಮೇಲೆ ಅನಾಥವಾಗಿದೆ. ಸದಾ ಅವರು ಬಳಸುತ್ತಿದ್ದ ಸೈಕಲ್‌ ಮೂಲೆಯಲ್ಲಿ ಏಕಾಂಗಿಯಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು