ಸೋಮವಾರ, ಆಗಸ್ಟ್ 2, 2021
25 °C

ಭೋಗ, ಯೋಗ ಮತ್ತು ನಾಶ

ಹಾರಿತಾನಂದ Updated:

ಅಕ್ಷರ ಗಾತ್ರ : | |

ಅಪಯ್ಯದೀಕ್ಷಿತರ ‘ವೈರಾಗ್ಯಶತಕ’ದಲ್ಲಿಯ ಶ್ಲೋಕವೊಂದು ಹೀಗಿದೆ: 
ಭೋಗಾಯ ಪಾಮರಾಣಾಂ ಯೋಗಾಯ ವಿವೇಕಿನಾಂ ಶರೀರಮಿದಂ । 
ಭೊಗಾಯ ಚ ಯೋಗಾಯ ಚ ನ ಕಲ್ಪತೇ ದುರ್ವಿದಗ್ಭಾನಾಮ್‌ ।। 
‘ಈ ಶರೀರವು ಪಾಮರರಿಗೆ ಭೋಗಕ್ಕಾಗಿ; ವಿವೇಕಿಗಳಿಗೆ ಯೋಗಕ್ಕಾಗಿ; ವಿಚಾರಹೀನರಾದ ದುರಹಂಕಾರಿಗಳಿಗೆ ಭೋಗಕ್ಕೂ ಆಗುವುದಿಲ್ಲ, ಯೋಗಕ್ಕೂ ಆಗುವುದಿಲ್ಲ.’ ಇದು ಈ ಶ್ಲೋಕದ ಅರ್ಥ.

ನಮ್ಮ ಶರೀರದ ಸಾರ್ಥಕತೆಯ ಮಾರ್ಗಗಳು ಏನು ಎನ್ನುವುದನ್ನು ಈ ಶ್ಲೋಕ ನಿರೂಪಿಸಲು ಹೊರಟಿದೆ; ಅದಕ್ಕೆಂದು ಮೂರು ವಿಧದ ಜನರನ್ನು ಆರಿಸಿಕೊಳ್ಳಲಾಗಿದೆ. ಹೆಚ್ಚು ಕಡಿಮೆ ನಾವೆಲ್ಲರೂ ಈ ಮೂರು ಗುಂಪಿನಲ್ಲಿ ಯಾವುದೋ ಒಂದಕ್ಕೆ ಸೇರುತ್ತೇವೆಯೆನ್ನಿ!

ಮೊದಲನೆಯ ಗುಂಪು ಪಾಮರರ ಗುಂಪು. ಪಾಮರರು ಎಂದರೆ ವಿದ್ವಾಂಸರಲ್ಲದವರು, ಸಾಮಾನ್ಯರು. ಅವರಿಗೆ ಶಿಕ್ಷಣದ ಪರಿಚಯ ಅಷ್ಟಾಗಿ ಇರದು; ಅಂದಂದಿನ ಜೀವನವನ್ನು, ಆಯಾ ಕ್ಷಣದ ಅಗತ್ಯಗಳಿಗೆ ತಕ್ಕಂತೆ ತೋಗಿಸಿಕೊಂಡುಹೋಗುವುದನ್ನೇ ಜೀವನದ ಗುರಿಯೆಂದು ತಿಳಿದವರು. ಹೀಗೆಂದು ಇದೇನೂ ಅವರು ಯೋಚಿಸಿ ತೆಗೆದುಕೊಂಡ ನಿರ್ಧಾರ ಎಂದೂ ಹೇಳುವಂತಿಲ್ಲ. ಏಕೆಂದರೆ ಅವರಿಗೆ ಹೀಗೆಲ್ಲ ತಾರ್ಕಿಕವಾಗಿ ಯೋಚಿಸಿ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಿಲ್ಲ; ಆದುದರಿಂದಲೇ ಅವರಿಗೆ ‘ಪಾಮರರು’ ಎಂಬ ಒಕ್ಕಣೆ. ಹೀಗಾಗಿ ಯಾವುದು ಸುಖ ಎನಿಸುತ್ತದೆಯೋ, ಯಾವುದು ತಮಗೆ ಇಷ್ಟವಾಗುತ್ತದೆಯೋ – ಅದನ್ನು ಪಡೆದು ಸುಖಿಸುವುದಷ್ಟೆ ಅವರಿಗೆ ಗೊತ್ತಿರುವಂಥದ್ದು. ಇದನ್ನೇ ಭೋಗ ಎನ್ನುವುದು; ಕೇವಲ ಸುಖವನ್ನು ಮಾತ್ರವೇ ಬಯಸುವುದು. ನಾವು ಹುಟ್ಟಿರುವುದೇ ಸುಖ ಪಡಲು ಎನ್ನುವುದು ಅಂಥವರ ಸಿದ್ಧಾಂತ.

ಎರಡನೆಯ ಗುಂಪು ಎಂದರೆ ಅದು ವಿವೇಕಿಗಳ ಗುಂಪು. ಇಲ್ಲಿ ವಿವೇಕ ಎಂದಿರುವುದನ್ನು ಗಮನಿಸಬೇಕು. ವಿವೇಕ ಎಂದರೆ ಕೇವಲ ಅಕ್ಷರಜ್ಞಾನವಲ್ಲ; ಯಾವುದು ಹಿತ, ಯಾವುದು ಅಹಿತ – ಎಂದು ತೂಗಿನೋಡಬಲ್ಲ ಬುದ್ಧಿಯೇ ವಿವೇಕ ಎನಿಸಿಕೊಳ್ಳುತ್ತದೆ. ಹೊಟ್ಟೆ ಎನ್ನುವುದು ಭಕ್ಷ್ಯಭೋಜ್ಯಗಳನ್ನು ತುಂಬಿಸಿಕೊಳ್ಳುವ ಗುಡಾಣ ಎಂಬ ಲೆಕ್ಕಾಚಾರ ಇವರದ್ದಲ್ಲ. ಶರೀರಕ್ಕೆ ಶಕ್ತಿ ಬೇಕು; ಆ ಶಕ್ತಿಯ ಸಂಪಾದನೆಗೆ ಆಹಾರಸೇವನೆಯೇ ದಾರಿ. ಹೀಗಾಗಿ ಶರೀರಕ್ಕೆ ಯಾವುದು ಹಿತಕಾರಿಯೋ ಅದೇ ನಿಜವಾದ ಆಹಾರ ಎಂದು ಎಣಿಸಿ, ಅದರಂತೆ ನಡೆದುಕೊಳ್ಳುವವರು. ಅಂಥ ವಿವೇಕಿಗಳು ಅವರ ಶರೀರವನ್ನು ಯೋಗಕ್ಕಾಗಿ ಮುಡಿಪಾಗಿರಿಸಿಕೊಳ್ಳುತ್ತಾರೆ, ಎನ್ನುತ್ತಿದೆ ಸುಭಾಷಿತ. ಯೋಗ ಎನ್ನುವುದಕ್ಕೆ ವಿಶಾಲವಾದ ಅರ್ಥವೇ ಇದೆ. ಇಂದು ಯೋಗ ಎನ್ನುವುದು ಕೇವಲ ವ್ಯಾಯಾಮ, ಎಂದರೆ ಆಸನಗಳಿಗೆ ಮಾತ್ರವೇ ಸೀಮಿತವಾಗಿ ವ್ಯವಹರಿಸಲ್ಪಡುತ್ತಿದೆ. ಆದರೆ ನಮ್ಮ ಮಾನಸಿಕ ಹಾಗೂ ದೈಹಿಕ ಆರೋಗ್ಯವನ್ನು ಕಾಪಾಡುವ ಎಲ್ಲ ವಿಧಿ–ವಿಧಾನಗಳೂ ‘ಯೋಗ’ದಲ್ಲಿ ಸೇರಿಕೊಳ್ಳುತ್ತದೆ. ಯೋಗ ತಪಸ್ಸಿನ ಒಂದು ಭಾಗವೂ ಹೌದು. ತಪಸ್ಸು ಎಂದರೆ ಪರಿಶ್ರಮದಿಂದ ಪಡೆಯುವ ಸಂತೋಷ ಎಂದೂ ಹೇಳಬಹುದು. ಹೀಗಾಗಿ ಜೀವನದ ಎಂಥ ಸಂದರ್ಭದಲ್ಲಿ ನಾವು ಹೇಗೆ ನಡೆದುಕೊಳ್ಳಬೇಕು ಎಂದು ವಿವೇಚಿಸಿ, ಅದರಂತೆ ನಡೆದುಕೊಳ್ಳುವುದು ’ಯೋಗ’’ ಅದನ್ನು ಆಚರಿಸುವವನು ವಿವೇಕಿ.

ಇನ್ನು ಮೂರನೆಯ ಗುಂಪು. ಇತ್ತ ವಿಚಾರಶಕ್ತಿಯೂ ಇಲ್ಲ, ಅತ್ತ ಒಳ್ಳೆಯ ನಡೆವಳಿಕೆಯೂ ಇಲ್ಲ; ಅಂಥ ದುರಹಂಕಾರದಿಂದ ಕೂಡಿದ ದಡ್ಡರು ತಮ್ಮ ಶರೀರವನ್ನು ನೋಡುವ ಬಗೆಯೇ ಬೇರೆಯಾಗಿರುತ್ತದೆ. ಅವರ ಅಹಂಕಾರದಿಂದ ಜೀವನದ ಸುಖವನ್ನೂ ನಾಶ ಮಾಡಿಕೊಳ್ಳುತ್ತಾರೆ; ಜೀವನದ ಅರ್ಥದಿಂದಲೂ ಅವರು ವಂಚಿತರಾಗುತ್ತಾರೆ. ಅಹಂಕಾರ ಇರುವುದರಿಂದ ಅವರು ಬೇರೊಬ್ಬರ ಮಾತನ್ನು ಕೇಳುವುದಿಲ್ಲ; ದಡ್ಡತನದ ಅವತಾರವೇ ಅವರಾಗಿರುವುದರಿಂದ ಸ್ವಂತಬುದ್ಧಿಯೂ ಇರುವುದಿಲ್ಲ. ಹೀಗಾಗಿ ಅವರು ಭೋಗಕ್ಕೂ ಸಲ್ಲುವುದಿಲ್ಲ; ಯೋಗಕ್ಕೂ ಸಲ್ಲುವುದಿಲ್ಲ. ’ದಾನ, ಭೋಗ ಮತ್ತು ನಾಶ ಎಂದು ಹಣಕ್ಕೆ ಮೂರು ಗತಿಗಳು. ಯಾವನು ದಾನ ಮಾಡುವುದಿಲ್ಲವೋ, ಭೋಗಿಸುವುದಿಲ್ಲವೋ ಅವನ ಹಣಕ್ಕೆ ಮೂರನೆಯ ಗತಿ, ಎಂದರೆ ನಾಶವೇ ಉಂಟಾಗುವುದು’ ಎನ್ನುತ್ತದೆ, ಇನ್ನೊಂದು ಸುಭಾಷಿತ. ಇದು ಈ ಮೂರನೆಯ ಗುಂಪಿಗೆ ಚೆನ್ನಾಗಿಯೇ ಹೊಂದುತ್ತದೆಯೆನ್ನಿ! 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು