ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಂಜಾನ್ ಕಾಲದ ಅಭ್ಯಾಗತರು

Last Updated 1 ಮೇ 2021, 19:30 IST
ಅಕ್ಷರ ಗಾತ್ರ

ಉದ್ದವಾದ ಬಣ್ಣ ಮಾಸಿದ ಜೋಳಿಗೆ, ಹಳೆಯ ಮರಕಟ್ಟಿನ ಚರ್ಮದ ಧಪ್ ಹಿಡಿದು ಬರುತ್ತಿದ್ದ ಸೂಫಿ, ಅತ್ತರು ಮಾರುವ ಹಾಜಿಕ್ಕ, ಹೊಸಬಟ್ಟೆ ಹೊತ್ತು ಹೊರೆವ್ಯಾಪಾರ ಮಾಡುತ್ತಿದ್ದ ಪೊನ್ನುಚಾಮಿ ಅಣ್ಣಾಚ್ಚಿ… ಅಬ್ಬಬ್ಬಾ! ರಂಜಾನ್‌ ಬಂತೆಂದರೆ ಮಲೆನಾಡಿನ ಈ ಹಳ್ಳಿಗಳಿಗೆ ಹಿಂದೆ ಎಷ್ಟೊಂದು ಅಭ್ಯಾಗತರು ಬರುತ್ತಿದ್ದರಲ್ಲ. ಈಗ ಅವರೆಲ್ಲ ಎಲ್ಲಿ ಕಾಣೆಯಾದರೋ?!

ದಟ್ಟ ಮಲೆಕಾಡುಗಳ, ನದಿ ಗುಡ್ಡಗಳ ಅಂಚಿನಲ್ಲಿರುವ, ಕಾಫಿತೋಟಗಳಿಂದ ಆವೃತವಾದ ಸಣ್ಣ ಊರು ನನ್ನದು. ಅಲ್ಲೊಂದು ಮಸೀದಿ. ರಂಜಾನ್ ತಿಂಗಳ ಕೊನೆಯ ಹತ್ತು ದಿನಗಳ ರಾತ್ರಿಗಳಲ್ಲಿ ಆ ಮಸೀದಿಯು ಆರಾಧನೆಯ ತತ್ವಮಸಿಯನ್ನು ಪರವಶಗೊಳಿಸಲು ಸಜ್ಜಾಗುತ್ತಿತ್ತು. ಲೈಲತುಲ್ ಕದರಿನ ಫಲವನ್ನು ಬಯಸಿ ಆ ರಾತ್ರಿಗಳಲ್ಲಿ ಮಸೀದಿ ಜನರಿಂದ ತುಂಬಿರುತ್ತಿತ್ತು. ಎಂದೂ ಕಂಡರಿಯದ, ಕೇಳಿ ಮಾತ್ರ ಗೊತ್ತಿರುವ ದ್ವೀಪದಿಂದ ಪವಾಡಿಗ ದೀಬಿನ ಸೂಫಿಯೊಬ್ಬ ನಮ್ಮೂರಿಗೆ ಬರುತ್ತಿದ್ದ. ಕಡಲು ಕಾಲುವೆ, ರಸ್ತೆ, ರಹದಾರಿ, ನದಿ, ಬೆಟ್ಟ, ನಗರ, ಗ್ರಾಮಗಳ ದಾಟಿ ಮೊಯ್ಯದ್ಧೀನ್ ಜುಮ್ಮಾ ಮಸೀದಿಗೆ ಒಂದು ವರ್ಷವೂ ತಪ್ಪಿಸದೆ ರಂಜಾನ್ ಕಾಲದಲ್ಲಿ ಆತ ಹಾಜರಾಗುತ್ತಿದ್ದ.

ವರ್ಷಪೂರ್ತಿ ಕಂಡಕಂಡ ಕಡೆಯಲ್ಲಿ ಠಿಕಾಣಿ ಹೂಡುವ ಆ ಸೂಫಿಯನ್ನು ಜನ ತಂಙಳ್ ಎಂದು ಗೌರವದಿಂದ ಕರೆಯುತ್ತಿದ್ದರು. ಆತನ ಹೆಸರು ಊರಿನಲ್ಲಿ ಯಾರಿಗೂ ಗೊತ್ತಿರಲಿಲ್ಲ. ತಂಙಳ್ ಎಂದಷ್ಟೇ ಪರಿಚಿತನಾದ ಆತನ ಪ್ರಯಾಣದ ಬಗ್ಗೆ ಮಕ್ಕಳ ಗುಂಪಿನಲ್ಲಿ ಚರ್ಚೆಗೆ ಬರವಿರಲಿಲ್ಲ. ಮುಸಲ್ಲಾದಲ್ಲಿ ಕುಳಿತರೆ ಸಾಕು, ತಂಙಳ್ ಹೇಳಿದ ಜಾಗಕ್ಕೆ ಗಾಳಿಯಲ್ಲಿ ವೇಗವಾಗಿ ಹಾರುತ್ತಲೇ ಮುಸಲ್ಲಾ ತಂಙಳರನ್ನು ತಂದು ಎಲ್ಲಿಗೆ ಬೇಕು ಅಲ್ಲಿಗೆ ಸೇರಿಸುತ್ತದೆ ಎಂದೂ; ಪ್ರವಾದಿ ನೂಹನಂತೆ ದೊಡ್ಡ ಹಡಗು ಕಟ್ಟಿ ದ್ವೀಪದಿಂದ ಇಲ್ಲಿಗೆ ಬರುತ್ತಾರೆ ಎಂದೂ; ತಂಙಳ್‍ಗೆ ಪವಾಡ ಮಾಡುವ ಶಕ್ತಿ ಇರೋದ್ರಿಂದ ಅವರು ಇಷ್ಟಪಟ್ಟ ಜಾಗಕ್ಕೆ ಹೋಗಿ ಬರಲು ಕರಾಮತ್ತಿನ ಶಕ್ತಿಯನ್ನು ಬಳಸುತ್ತಿದ್ದರು ಎಂದೂ ತರಹೇವಾರಿ ಚರ್ಚೆಗಳು ನಡೆಯುತ್ತಿದ್ದವು. ಅಷ್ಟರಮಟ್ಟಿಗೆ ತಂಙಳ್‍ಗೆ ಕರಾಮತ್ತು ಸಿದ್ಧಿಸಿತ್ತು ಎಂದು ಮಕ್ಕಳಾಗಿದ್ದ ನಾವು ಬಹುವಾಗಿ ನಂಬಿದ್ದೆವು.

ಆದರೆ ತಂಙಳ್ ಆ ಮಸೀದಿಗೆ ಬರುವಾಗ ಅವರ ಬಳಿ ಹಾರುವ ಮುಸಲ್ಲಾವಾಗಲಿ, ನೂಹನ ಹಡಗು ಹೋಗಲಿ ನಮ್ಮೂರಿನ ನದಿಯಲ್ಲಿ ತೇಲುವ ಹಾಯಿದೋಣಿಯೂ ಇರುತ್ತಿರಲಿಲ್ಲ. ಒಂದು ಉದ್ದವಾದ ಬಣ್ಣ ಮಾಸಿದ ಜೋಳಿಗೆ, ಅದರಲ್ಲೊಂದಿಷ್ಟು ಹಳೆಯ ಬಟ್ಟೆ, ಒಂದು ಹಳೆಯ ಮರಕಟ್ಟಿನ ಚರ್ಮದ ಧಪ್, ಒಂದಿಷ್ಟು ಸೊಪ್ಪು, ಬೇರು, ನಾರು, ಎಣ್ಣೆ, ಬಿಟ್ಟರೆ ಬೇರೇನೂ ಇರುತ್ತಿರಲಿಲ್ಲ. ಮದರಂಗಿ ಹಾಕಿ ಕೆಂಪಿಸಿದ ಉದ್ದವಾದ ಗಡ್ಡವನ್ನು ನೀವುತ್ತಾ; ತಲೆಗೆ ಬಿಗಿಯಾಗಿ ರುಮಾಲು ಕಟ್ಟಿ; ನೀಳವಾದ ಹಸಿರು ಜುಬ್ಬಾ, ಕಳ್ಳಿ ಪಂಚೆ ತೊಟ್ಟು; ಧುತ್ತನೆ ನಶೆ ಏರಿಸಿ, ಅತ್ತರನ್ನೂ ಪೂಸಿ; ಉರಿಯಂತಹ ಸುರ್ಮಾ ಹಚ್ಚಿದ ಕಣ್ಣುಗಳ ಜ್ವಲಿತ ರೂಪವನ್ನು ಪ್ರದರ್ಶಿಸುತ್ತಾ ಅರಬೀಮಿಶ್ರಿತ ಮಲಯಾಳಂನ ವಿಶಿಷ್ಟ ಭಾಷಾಶೈಲಿಯಲ್ಲಿ ಮಾತನಾಡುವಾಗ ಭಯಮಿಳಿತ ಕೌತುಕ ಎಲ್ಲರ ಕಣ್ಣುಗಳಲ್ಲೂ ಎದ್ದು ಕಾಣುತ್ತಿತ್ತು. ಅರೇಬಿಯಾದಿಂದ ಹಡಗಿನಲ್ಲಿ ಕೇರಳದ ಕಡಲತಡಿಗೆ ಇಸ್ಲಾಂ ಪ್ರಚಾರಕ್ಕೆ ಬಂದ ಸಂತರ ಕುಟುಂಬ ವರ್ಗಕ್ಕೆ ಸೇರಿದವರು ಈ ತಂಙಳ್ ಎಂದೂ ಅವರ ಕರಾಮತ್ತಿನ ಬಗೆಗಿನ ತೋಂಡಿಮಾತು ಊರಿನ ತುಂಬ ಕಥೆಯಾಗಿ ಜೀವ ಪಡೆದಿದ್ದವು. ಇನ್ನೂ ಕೆಲವರು ಬಾಗ್ದಾದಿನ ಸೂಫಿಸಂತನ ಪರಂಪರೆಗೆ ಸೇರಿದವರು ಈ ತಂಙಳ್, ಅದರಿಂದ ಅವರು ಸಹ ‘ಶೇಖ್’ ಎಂದು ಗತಕಾಲದ ಕುರುಹುಗಳಿಲ್ಲದ ಕಥೆಗೆ ಜೀವತುಂಬಿ ಜನ, ಮಕ್ಕಳಾದ ನಮಗೆ ಹೇಳುತ್ತಿದ್ದರು.

ತಂಙಳ್ ಊರಿನಲ್ಲಿ ಇದ್ದಷ್ಟು ದಿನವೂ ಇಸ್ಮ್‌ ಮಾಡಿ ಶಿರ್ಕ್‍ ಕಿತ್ತೆಸೆಯೂದು, ಜಿನ್‍ಗಳ ಜೊತೆಗೆ ಮಾತನಾಡಿ ಜನರ ಸಮಸ್ಯೆಗೆ ಪರಿಹಾರ ಕೊಡುವುದು, ಪಿಂಗಾಣಿಯ ಪಾತ್ರೆಗೆ ಬರಕತ್‍ಗಾಗಿ ಕಪ್ಪುಮಸಿಯಲ್ಲಿ ಅರಬಿಯಲ್ಲಿ ಸೂರತ್ ಬರೆದುಕೊಡುವುದು, ಕಾಡುಮೇಡು ಅಲೆದು ತಂದ ಬೇರನ್ನು ಕಾಯಿಸಿ ಕಷಾಯ ಮಾಡಿ ಕೊಡೋದನ್ನು ಮುಖ್ಯ ಕಾಯಕವನ್ನಾಗಿ ಮಾಡಿಕೊಂಡಿದ್ದರು. ಮಕ್ಕಳ ತಲೆಯ ಮೇಲೆ ಕೈ ಇಟ್ಟು ನೀವುತ್ತಲೇ ‘ಅಲ್ಲ್ಹಾವು ನಲ್ಲದೇ ಬರುತ್ತುಂ’ (ದೇವರು ಒಳ್ಳೆದು ಮಾಡ್ತಾನೆ ನಿಮಗೆ) ಎಂದು ಹಾರೈಸುತ್ತಿದ್ದರು. ಈಗಲೂ ಅರ್ಥವಾಗದ ವಿಚಾರ ಎಂದರೆ ತಂಙಳ್ ಎಂದಿಗೂ ಯಾರಿಂದಲೂ ಹಣ ಬೇಡುತ್ತಿರಲಿಲ್ಲ. ಅವರ ಖರ್ಚು ಊರಿನವರು ನೀಡುವ ಅನ್ನ ಆಹಾರ ಮಾತ್ರವಾಗಿತ್ತು.

ರಂಜಾನ್‌ನ ಲೈಲತುಲ್ ಕದರಿನ ರಾತ್ರಿಗಳಲ್ಲಿ ನಮ್ಮೂರ ಹಳೆಯ ಹಂಚಿನ ಮಸೀದಿಯ ತುಂಬ ತರಾವಿ, ತಸ್ಬೀ, ತಹಜ್ಜುದ್ ನಮಾಜ್‌ಗಳ ಜೊತೆಗೆ ಸ್ವಲಾತ್, ದಿಕ್ರ್, ಕುರ್‍ಆನ್ ಪಾರಾಯಣ ಧಾರಾಳವಾಗಿ ನಡೆಯುತ್ತಿದ್ದವು. ಮೈಮರೆತ ಭಂಗಿಯಲ್ಲಿ ಎಲ್ಲವನ್ನೂ ಆ ರಾತ್ರಿ ನುಂಗಿ ಬೆಳಕಾಗುವ ಮೊದಲು ಅತ್ತಾಳ (ಸಹರಿ) ಉಣ್ಣುವ ಸಮಯದವರೆಗೂ ಆರಾಧನೆ ನಡೆಯುತ್ತಿತ್ತು. ಈ ಎಲ್ಲಾ ಇಬಾದತ್‍ನಲ್ಲೂ ದ್ವೀಪದ ತಂಙಳ್ ಸಂತನಂತೆ ಸವೆಯುತ್ತಾ ಸವೆಯುತ್ತಾ ಚರ್ಮದಿಂದ ಮಾಡಿದ ಧಪ್‍ನಲ್ಲಿ ದಾಯಿರದ ಶಬ್ದವನ್ನು ಮೊಳಗಿಸಿ ಹಾಡುತ್ತಾ ತನ್ಮಯನಾಗಿ ಏನೋ ಒಂದನ್ನು ಗಳಿಸಲು ತಡವರಿಸುತ್ತಲೇ ಇರುವುದು ನನ್ನ ಸ್ಮೃತಿಪಟಲದಲ್ಲಿ ಈ ಕ್ಷಣದವರೆಗೂ ಮಾಸದಂತೆ ಅಚ್ಚೊತ್ತಿದೆ.

ಊರಿನ ಕೆಲವರಿಗೆ ತಂಙಳರನ್ನು ಕಂಡರೆ ಅಷ್ಟಕ್ಕಷ್ಟೆ. ‘ತಂಙಳ್ ನಾವಂದುಕೊಂಡಷ್ಟು ಸುಭಗನಲ್ಲ. ಆತನ ಜೋಳಿಗೆಯಲ್ಲಿ ಗಾಂಜಾದಂತಹ ಅಮಲು ಬರಿಸುವ ವಸ್ತು ಯಾವಾಗ್ಲೂ ಇರುತ್ತೆ. ಒಣಗಿದ ಗಾಂಜಾ ಸೊಪ್ಪನ್ನು ಬೀಡಿಯಂತೆ ಸುರುಟಿ ಎರಡು ಕೈಗಳಲ್ಲಿ ಬಲವಾಗಿ ಹಿಡಿದು ಆ ಚುಟ್ಟಾವನ್ನು ಪೂರ್ತಿಯಾಗಿ ಸೇದೋದನ್ನ ನಾವೇ ನೋಡಿದ್ದೇವೆ! ಆ ಚುಟ್ಟಾದ ಹೊಗೆಯ ಜೊತೆಗೆ ಬರೋ ಘಾಟು ಜನರನ್ನು ತಾಕಿದ್ರೆ ಸಾಕು ವಶೀಕರಣಕ್ಕೆ ಒಳಗಾಗುತ್ತಾರೆ. ನೀವು ಮಕ್ಕಳು, ಆತನ ಜೊತೆ ಜಾಸ್ತಿ ಸೇರಬೇಡಿ. ತೊಡೆಸಂದಿಗೆ ಕೈಹಾಕುವ ಮನುಷ್ಯ ಆತ! ಅದು ಇದು ಎಂದು ಕಥೆ ಹೇಳಿ ಮಕ್ಕಳಿಗೆ ಮಂಕುಬರಿಸಿ ಅವನ ಜೊತೆಯಲ್ಲಿ ಕರ್ಕೊಂಡ್‌ ಹೋಗ್ತಾನೆ ಆ ಮಾಯಾವಿ’, ಎಂದು ಹೆದರಿಸುತ್ತಿದ್ದರು.

ಜೊತೆಗೆ ಘಾಟಿ ಮುದುಕ. ಸಂತನಂತೆ ವೇಷ ಹಾಕಿಕೊಂಡಿದ್ದಾನೆ. ಸುರ್ಮಾ ಹಾಕಿರುವ ಅವನ ಉರಿಯಂತಹ ಕಣ್ಣುಗಳನ್ನು ಬಲಕ್ಕೂ ಎಡಕ್ಕೂ ಆಡಿಸಿದ್ರೆ ಸಾಕು, ನಮಗೆ ನಮ್ಮ ಹೆಂಡತಿಯರು ಇರಲ್ಲ, ನಮ್ ಮಕ್ಕಳಿಗೆ ತಾಯಿನೂ ಇರಲ್ಲ. ಇಲ್ಲಿಂದ ಕಣ್‍ಕಟ್ಟು ಮಾಡಿ ಹೆಂಗಸರನ್ನು, ಮಕ್ಕಳನ್ನು ದ್ವೀಪಕ್ಕೆ ಹಾರಿಸಿಕೊಂಡು ಹೋಗುವ ಈ ತಂಙಳ್, ದ್ವೀಪದಲ್ಲಿ ಅವರನ್ನು ಆಳವಲ್ಲದ ಕಡಲಿನಲ್ಲಿ ಚಿಪ್ಪು ಹೆಕ್ಕುವ ಕೆಲಸಕ್ಕೆ ನಿಯೋಜಿಸುತ್ತಾನೆ. ಬೇಕಾದಾಗ ಬೇಕಾದ ಹಾಗೆ ಬಳಸುತ್ತಾನೆ. ಆದ್ದರಿಂದ ಈತ ಸಂತನಲ್ಲ. ಸಂತನ ವೇಷ ತೊಟ್ಟಿರುವ ಮಾಟಗಾರ ಫಕೀರ. ಆದಷ್ಟೂ ಆ ಮಾಟಗಾರ ಮುದುಕನಿಂದ ಮಕ್ಕಳು ಹೆಂಗಸರು ದೂರ ಇರಬೇಕು, ಎಂಬ ಕೆಲವರ ಗಾಳಿ ಮಾತುಗಳು ಆ ಕಾಲಕ್ಕೆ ನನ್ನ ಮನದಲ್ಲಿ ಸದಾ ಎಚ್ಚರಿಕೆಯ ಭಾವವನ್ನು ಉಂಟು ಮಾಡಿದ್ದಂತೂ ಸುಳ್ಳಲ್ಲ. ಆದರೆ ತಂಙಳ್ ಯಾರನ್ನೋ ಅಪಹರಿಸಿಕೊಂಡು ಹೋದ ಇಲ್ಲವೆ ಜನರು ಹೇಳುವಂತೆ ಆತ ಕೆಟ್ಟದಾಗಿ ನಡೆದುಕೊಂಡ ಘಟನೆಗಳು ಘಟಿಸಿದ್ದು ನನ್ನ ಅರಿವಿಗಂತೂ ಬಂದಿಲ್ಲ.

ಇನ್ನು ರಂಜಾನ್ ತಿಂಗಳ ಮುಂಜಾನೆಯ ಆಝಾನ್‍ಗೂ ಮೊದಲು ನನ್ನೂರಿನ ರಸ್ತೆಗಳಲ್ಲಿ ಧಪ್ ಎಂಬ ಚರ್ಮವಾದ್ಯವನ್ನು ಬಡಿಯುತ್ತಾ ಸುಶ್ರಾವ್ಯವಾಗಿ ಹಾಡುತ್ತಾ ನಿದ್ರೆಯಲ್ಲಿ ಮೈಮರೆತ ಉಪವಾಸಿಗರನ್ನು ಸಹರಿಯ (ಅತ್ತಾಳ) ಊಟಕ್ಕಾಗಿ ಎಬ್ಬಿಸುವ ಸಂಪ್ರದಾಯವನ್ನು ಕಾಣುವ ಅವಕಾಶವನ್ನು ಬಾಲ್ಯಕಾಲ ಕರುಣಿಸಿತ್ತು. ಮುರುಗಮಲ್ಲ, ಎರ್ವಾಡಿ, ಜಾವಗಲ್‍ನಂತಹ ದರ್ಗಾಗಳಿಂದ ರಂಜಾನ್ ಕಾಲಕ್ಕೆ ಬರುವ ಈ ಅತ್ತಾಳ ಕೊಟ್ಟಿಗಳು ಅಥವಾ ದಾಯಿರಾದವರು ಮಸೀದಿಯ ಪಕ್ಕದಲ್ಲೇ ತಮ್ಮ ಠಿಕಾಣಿಯನ್ನು ಹೂಡುತ್ತಿದ್ದರು. ವೇಷಭೂಷಣದಲ್ಲಿ ದ್ವೀಪದ ತಂಙಳ್‍ರನ್ನೇ ಹೋಲುತ್ತಿದ್ದರು. ತಂಙಳ್ ಮಲಯಾಳಂ ಮಾತನಾಡಿದರೆ ಈ ದಾಯಿರಾದವರು ತಮಿಳು, ಉರ್ದು ಮಾತನಾಡುತ್ತಿದ್ದರು. ಹಗಲು ಹೊತ್ತಿನಲ್ಲಿ ದಾಯಿರಾದವರು ಹಾಡುತ್ತಾ ಹಾಡುತ್ತಾ ಅಂಗಡಿ, ರಸ್ತೆ, ಮನೆಗಳಿಗೆ ತೆರಳಿ ಅಕ್ಕಿ, ತೆಂಗಿನಕಾಯಿ, ಹಣವನ್ನು ಜನರಿಂದ ಝಕಾತ್ ರೂಪದಲ್ಲಿ ಪಡೆಯುತ್ತಿದ್ದರು. ಉಪವಾಸ ವ್ರತವನ್ನು ಮುರಿಯುವ ಹೊತ್ತಿಗೆ ಮಸೀದಿಯ ಪ್ರಾಂಗಣದಲ್ಲಿ ಇಫ್ತಾರ್‌ನ ಆಯೋಜನೆಗಳು ಭರದಿಂದ ಸಾಗುತ್ತಿದ್ದವು. ಈಗ ಇರುವಂತೆ ಯಾವ ಐಷಾರಾಮಿ ತಿಂಡಿಗಳು ಇಫ್ತಾರ್‌ನಲ್ಲಿ ಇರುತ್ತಿರಲಿಲ್ಲ. ಅಬುಚ್ಚಾಕ ಮಾಡುವ ಜೀರಿಗೆ, ತೆಂಗಿನಕಾಯಿ, ಕೊತ್ತಂಬರಿ ಹಾಕಿ ಮಾಡಿದ ಗಂಜಿ ಕಾಲದ ಅತ್ಯಂತ ಸ್ವಾದಿಷ್ಟ ಭಕ್ಷ್ಯವಾಗಿ ನಮ್ಮ ಉಪವಾಸದ ಸಂಭ್ರಮವನ್ನು ಹೆಚ್ಚಿಸುತ್ತಿದ್ದವು. ತಂಙಳ್ ಮತ್ತು ದಾಯಿರಾದವರು ಮಕ್ಕಳಾದ ನಮ್ಮ ಜೊತೆಯಲ್ಲಿ ಕುಳಿತು ಉಪವಾಸ ವ್ರತ ಪೂರ್ಣಗೊಳಿಸುತ್ತಿದ್ದರು.

ಈ ಇಬ್ಬರು ಅತಿಥಿಗಳಂತೆ ನನ್ನೂರಿಗೆ ರಂಜಾನ್‌ನ ಕೊನೆಗೆ ಬರುವ ಅತಿಥಿಗಳೆಂದರೆ ಅತ್ತರು ಮಾರುವ ಹಾಜಿಕ್ಕ ಮತ್ತು ತಮಿಳುನಾಡಿನಿಂದ ಹೊಸಬಟ್ಟೆ ಹೊತ್ತು ಹೊರೆವ್ಯಾಪಾರ ಮಾಡುವ ಪೊನ್ನುಚಾಮಿ ಅಣ್ಣಾಚ್ಚಿ. ಹಾಜಿಕ್ಕಾನ ಅತ್ತರು ತುಂಬಿದ ಪೆಟ್ಟಿಗೆಯು ಮಸೀದಿಯ ಮುಂದಿರುವ ಗೂಡಂಗಡಿ ಪಕ್ಕದಲ್ಲಿ ವಿರಾಜಮಾನಗೊಳ್ಳುತ್ತಿತ್ತು. ಜನ್ನಾತುಲ್ ಫಿರ್ದೌಸ್‍ನಂತಹ ಸುಗಂಧಭರಿತ ಅತ್ತರಿನ ಜೊತೆಗೆ ಬಣ್ಣಬಣ್ಣದ ಕಸವಿನ ಟೊಪ್ಪಿಗಳು, ಬೆರಳಿಗೆ ತೊಡುವ ಹವಳದ ಕಲ್ಲಿನ ಉಂಗುರಗಳು, ತಸ್ಬಿಮಾಲೆಗಳು ಮಕ್ಕಳಾದ ನಮಗೆ ಮುಂಬರುವ ಈದ್‍ನ ಮೊಹಬ್ಬತ್ತನ್ನು ಪಸರಿಸುತ್ತಿದ್ದವು. ಬಾಪನಲ್ಲಿ ಕಾಡಿಬೇಡಿ ಸಣ್ಣಸೀಸೆಯ ಅತ್ತರನ್ನು ಖರೀದಿ ಮಾಡಿ ಈದ್‍ನ ಮುಂಜಾವಿಗಾಗಿ ಕಾಯುವ ಸ್ಥಿತಿ ನನ್ನದಾಗಿತ್ತು. ಇನ್ನೂ ಪೊನ್ನುಚಾಮಿ ಅಣ್ಣಾಚ್ಚಿ ಮನೆಮನೆಗೆ ತೆರಳಿ ರಂಜಾನಿನ ಕೊಡಿಬಟ್ಟೆಗಳ ವ್ಯಾಪಾರವನ್ನು ಭರದಿಂದ ಮಾಡುತ್ತಿದ್ದರು. ಕಂತು ವ್ಯಾಪಾರ, ಸಾಲದ ವ್ಯಾಪಾರಗಳನ್ನು ವರ್ಷದಿಂದ ವರ್ಷಕ್ಕೆ ಅಣ್ಣಾಚ್ಚಿ ಮತ್ತು ಊರಿನಮಂದಿ ಪ್ರಾಮಾಣಿಕವಾಗಿ ನಡೆಸಿಕೊಂಡು ಹೋಗುತ್ತಿದ್ದರು.

ಉಪವಾಸ ಕಾಲ ಮುಗಿದು ಈದ್ ಬಂದಿತೆಂದರೆ ಸಾಕು ಎಲ್ಲಾ ಅಭ್ಯಾಗತರು ನನ್ನೂರಿನಿಂದ ಕಣ್ಮರೆ ಆಗುತ್ತಿದ್ದರು. ಕಾಲ ಬದಲಾದಂತೆ ಊರು ಬದಲಾಗಿದೆ, ಮನಸ್ಸುಗಳು ಬದಲಾಗಿವೆ. ತಂಙಳ್, ದಾಯಿರಾದವರು, ಅತ್ತರು ಹಾಜಿಕ್ಕ, ಪೊನ್ನುಚಾಮಿ ಅಣ್ಣಾಚ್ಚಿ, ಅಬುಚ್ಚನ ಗಂಜಿ ಎಲ್ಲವೂ ಊರಿನಿಂದ ಮರೆಯಾಗಿದೆ. ಕೋವಿಡ್‍ನ ದುರಿತ ಸಂದರ್ಭದಲ್ಲಿ ಅವರ ನೆನಪುಗಳು ನನ್ನ ಈಗಿನ ರಂಜಾನನ್ನು ಹಾಗೇ ಜೀವಂತವಾಗಿಟ್ಟಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT