ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂಗಿನ ಕೂಸಿಗೆ ಕುಲಾವಿ

Last Updated 2 ಜನವರಿ 2021, 19:30 IST
ಅಕ್ಷರ ಗಾತ್ರ

ಇಂಗು ಭಾರತದ ಅದರಲ್ಲೂ ಮುಖ್ಯವಾಗಿ ಪಂಜಾಬ್‌ ಮತ್ತು ದಕ್ಷಿಣ ಭಾರತದ ರಾಜ್ಯಗಳ ಅಡುಗೆಮನೆಯ ಅತಿಅವಶ್ಯ ಪದಾರ್ಥಗಳಲ್ಲಿ ಒಂದು. ಅಡುಗೆ ತಯಾರಿಕೆಯ ಕೊನೆಯ ಘಟ್ಟದ ಒಗ್ಗರಣೆಯೊಳಗಿಂದೆದ್ದು ಅಂತಿಮ ಓವರ್‌ಗಳಲ್ಲಿ ಬಂದು ಹಾರ್ದಿಕ್ ಪಾಂಡ್ಯ ಆಟದ ರೂಪುರೇಷೆಯನ್ನೇ ಬದಲಿಸುವಂತೆ ಅಡುಗೆಯ ರುಚಿಗೆ ಒಂದು ಹೊಸತಿರುವನ್ನು ನೀಡಬಲ್ಲ ಧಾತುವಿದು.

ನಮ್ಮಲ್ಲಂತೂ ಸಾಂಬಾರ್, ರಸಂ, ಚಟ್ನಿ, ಹಪ್ಪಳ, ಉಪ್ಪಿನಕಾಯಿ ಹೀಗೆ ಊಟದ ತಾಟಿಗೊಳಗಿನ ಹೆಚ್ಚು ಕಡಿಮೆ ಎಲ್ಲ ಪದಾರ್ಥಗಳ ತಯಾರಿಕೆಯಲ್ಲೂ ತನ್ನ ಇರುವಿಕೆಯನ್ನು ತೋರುವ ಇಂಗಿನ ಚಿಟಿಕೆಯು ಅನಾದಿ ಕಾಲದಿಂದಲೂ ನಮ್ಮ ಹೆಂಗಳೆಯರ ಪಾಲಿನ ಮಂತ್ರದಂಡ. ದಕ್ಷಿಣದಲ್ಲಿ ಹೆಚ್ಚಾಗಿ ಶಾಖಾಹಾರಿ ಅಡುಗೆಯಲ್ಲಿ ಬಳಸಲ್ಪಡುವ ಇಂಗನ್ನು ಉತ್ತರದಲ್ಲಿ ಶಾಖಾಹಾರದ ಅಡುಗೆಯ ತಡ್ಕಾದ (ಒಗ್ಗರಣೆ) ಜೊತೆಗೆ ಮುರ್ಗ ರೋಗನ್ ಜೋಶ್‌ನಂತಹ ಮಾಂಸಾಹಾರಿ ಅಡುಗೆಯ ತಯಾರಿಯಲ್ಲೂ ಬಳಸಲಾಗುತ್ತದೆ.

ಇಷ್ಟೆಲ್ಲ ಖ್ಯಾತಿವೆತ್ತ ಇಂಗು ಅಸಲಿಗೆ ಫೆರುಲಾ ಎಂಬ ಜಾತಿಯ ಗಿಡಗಳ ಕಾಂಡದಿಂದ ಜಿನುಗುವ ಅಂಟಿನಿಂದ ತಯಾರಾಗುತ್ತದೆ. ಇರಾನ್ ಮತ್ತು ಅಫ್ಗಾನಿಸ್ತಾನದ ಪರ್ವತಗಳಲ್ಲಿ ಬೆಳೆಯುವ ಈ ಗಿಡಗಳು ಸುಮಾರು ನಾಲ್ಕು ವರ್ಷಗಳ ಪ್ರಾಯದಲ್ಲಿ ಒಂದೂವರೆ ಮೀಟರ್ ಎತ್ತರಕ್ಕೆ ಬೆಳೆಯುತ್ತವೆ. ಹೀಗೆ ಬೆಳೆದ ಅವುಗಳ ಕಾಂಡವನ್ನು ಮೇಲಿನ ಭಾಗದಲ್ಲಿ ಕತ್ತರಿಸಿ ಅಲ್ಲಿಂದ ಸುರಿಯುವ ಅಂಟನ್ನು ಸಂಗ್ರಹಿಸಿ ಎಲ್ಲೆಡೆ ರಫ್ತು ಮಾಡಲಾಗುತ್ತದೆ.

ಮರದಿಂದ ಜಿನುಗುವಾಗ ಬೂದುಬಣ್ಣದಲ್ಲಿರುವ ಇಂಗಿನ ಅಂಟು ನಂತರ ಗಟ್ಟಿಯಾಗಿ ತಿಳಿಗೆಂಪು ಬಣ್ಣಕ್ಕೆ ತಿರುಗುತ್ತದೆ. ಹೆಚ್ಚು ಕಡಿಮೆ ಹರಳಿನಷ್ಟು ಗಟ್ಟಿಯಾಗಿರುವ ಈ ಅಂಟನ್ನು ಕಲ್ಲುಗಳ ನಡುವೆ ಇಟ್ಟು ಪುಡಿಮಾಡಿ ಪ್ಯಾಕ್ ಮಾಡಲಾಗುತ್ತದೆ. ಈ ರೂಪದಲ್ಲಿರುವ ಹರಳುಪುಡಿಯು ಸ್ವಲ್ಪ ತುಟ್ಟಿಯಾಗಿರುವುದರಿಂದ ದಿನಬಳಕೆಗಾಗಿ ಇದನ್ನು ಮೈದಾ ಅಥವಾ ಅಕ್ಕಿಹಿಟ್ಟಿನ ಜೊತೆಗೆ ಸೇರಿಸಿ ಮಾರುಕಟ್ಟೆಗೆ ಕೆಲ ಕಂಪನಿಗಳು ಪರಿಚಯಿಸಿವೆ. ಉಪ್ಪಿನಕಾಯಿ, ಹಪ್ಪಳದಂತಹ ಖಾದ್ಯಗಳ ತಯಾರಿಕೆಗೆ ಹರಳು ಅಥವಾ ದೇಸಿಭಾಷೆಯಲ್ಲಿ ಹೇಳುವಂತೆ ಮಡ್ಡಿ ಇಂಗು ಬಳಕೆಯಾದರೆ, ಹಿಟ್ಟುಮಿಶ್ರಿತ ಇಂಗನ್ನು ಸಾಂಬಾರ್, ರಸಂನಂತಹ ದಿನಬಳಕೆಯ ಅಡುಗೆಯ ತಯಾರಿಕೆಯಲ್ಲಿ ಉಪಯೋಗಿಸಲಾಗುತ್ತದೆ. ವಾಯುಬಾಧೆ, ಆಸ್ತಮಾ, ಅಜೀರ್ಣಕ್ಕೆ ಆಯುರ್ವೇದ, ಯುನಾನಿ ಪದ್ಧತಿಯಲ್ಲಿ ಔಷಧಿಯಾಗಿಯೂ ಬಳಸಲ್ಪಡುವ ಇಂಗನ್ನು ಅಫೀಮಿನ ಮತ್ತನ್ನು ಇಳಿಸುವ ಮೂಲಿಕೆಯಾಗಿಯೂ ಕೆಲವೆಡೆ ಪ್ರಯೋಗಿಸುವುದುಂಟು.

ಇಂಗಿನ ನಿಯಮಿತ ಬಳಕೆ ಕೊಲೆಸ್ಟ್ರಾಲ್ ಮತ್ತು ರಕ್ತದೊತ್ತಡವನ್ನು ಹದ್ದುಬಸ್ತಿನಲ್ಲಿಡಲು ರಾಮಬಾಣವೆಂಬ ಖ್ಯಾತಿಯನ್ನು ಹೊಂದಿದೆ. ಇರಾನ್‍ನಲ್ಲಿ ಗಿಡಗಳಿಂದ ಒಸರುವ ಅಂಟನ್ನು ಬಿಸಿನೀರಿನ ಜೊತೆ ಸೇರಿಸಿ ಕೆಮ್ಮಿನ ಔಷಧಿಯಾಗಿ ಬಳಸಲಾಗುತ್ತದೆ. ಚೀನಿ ಔಷಧೀಯ ಪದ್ಧತಿಯಲ್ಲಿ ಇಂಗಿನ ಗಿಡಗಳ ಬೇರನ್ನು ಕುದಿಸಿ ಜಂತುನಾಶಕವಾಗಿ ಬಳಸಲಾಗುತ್ತದೆ. ಮಧ್ಯಯುಗದಲ್ಲಿ ಜನರು ದುಷ್ಟಶಕ್ತಿಯನ್ನೋಡಿಸುವ ಸಾಧನವೆಂದು ಇಂಗಿನ ಅಂಟಿನ ಚೆಂಡನ್ನು ಕತ್ತಿಗೆ ಕಟ್ಟಿಕೊಳ್ಳುತ್ತಿದ್ದರೆಂದು ದಾಖಲೆಗಳು ಹೇಳುತ್ತವೆ. ಪಾಶ್ಚಿಮಾತ್ಯ ದೇಶಗಳಲ್ಲಿ ಕೆಲವೆಡೆ ಇಂಗಿನಿಂದ ಪರಿಮಳ ದ್ರವ್ಯಗಳನ್ನೂ ತಯಾರಿಸುವುದುಂಟು.

ಇಂತಿಪ್ಪ ಇಂಗಿಗೆ ಪರ್ಷಿಯನ್ ಭಾಷೆಯಲ್ಲಿ ಬದಿಯಾನ್ ಎಂಬ ಹೆಸರು. ಅಂದಹಾಗೆ ಬದಿಯಾನ್ ಎಂದರೆ ಆ ಭಾಷೆಯಲ್ಲಿ ವಾಯು ಎಂದರ್ಥ. ಆಂಗ್ಲಭಾಷೆಯಲ್ಲಿ ಅಸಫೋಟಿಡಾ ಎಂಬ ಹೆಸರು ಪರ್ಷಿಯನ್ ಮತ್ತು ಲ್ಯಾಟಿನ್ ಭಾಷೆಗಳ ಸಂಯುಕ್ತವಾಗಿದ್ದು ಘಾಟಿನ ಅಂಟೆಂಬ ಅರ್ಥವನ್ನು ನೀಡುತ್ತದೆ.

ಭಾರತಕ್ಕೆ ಇಂಗು ಪರಿಚಯವಾಗಿದ್ದುದು ಒಂದು ಆಕಸ್ಮಿಕವೇ. ನಾಲ್ಕನೆಯ ಶತಮಾನದಲ್ಲಿ ದೊರೆ ಅಲೆಕ್ಸಾಂಡರನು ಭಾರತಕ್ಕೆ ಬರುವ ದಾರಿಯಲ್ಲಿ ಹಿಂದುಕುಶ್‌ ಪರ್ವತಗಳ ಮೂಲಕ ಹಾದುಹೋಗುವಾಗ ಅಲ್ಲಿ ಕಂಡುಬಂದ ಇಂಗಿನ ಗಿಡಗಳನ್ನು ಅದೇ ರೀತಿ ಕಾಣುವ ಸಿಲ್ಫಿಯಮ್ ಎಂಬ ಗಿಡಗಳೆಂದು ತಪ್ಪು ಕಲ್ಪನೆಯಿಂದ ದೊರೆಯ ಸೈನಿಕರು ಹೊತ್ತು ತಂದರಂತೆ. ಆ ಕಾಲದಲ್ಲಿ ಸಿಲ್ಪಿಯಮ್ ಅವರ ಮಾಂಸದಡುಗೆಯಲ್ಲಿ ಬಳಸುವ ಒಂದು ಬಲು ಬೆಳೆಬಾಳುವ ಮತ್ತು ಅಪರೂಪದ ಗಿಡವಾಗಿತ್ತು. ಇಲ್ಲಿಗೆ ಬಂದನಂತರ ಆ ಗಿಡದ ಅಸಲಿಯತ್ತು ತಿಳಿದು ನಿರಾಶರಾದ ಅವರು ಅದನ್ನಿಲ್ಲಿಯೇ ಎಸೆದು ಹೋದರು.

ಭಾರತೀಯ ಅಡುಗೆಯಲ್ಲಿ ಇಂಗಿನ ಬಳಕೆ ವ್ಯಾಪಕವಾಗಿ ಬಳಕೆಯಾಗಿದ್ದುದು ಹದಿನಾಲ್ಕನೆಯ ಶತಮಾನದ ಮೊಘಲ್‌ರ ಸಮಯದಲ್ಲಿ. ತದನಂತರ ಇಲ್ಲೇ ಗಟ್ಟಿನೆಲೆಯನ್ನು ಕಂಡುಕೊಂಡಿರುವ ಈ ಅಂಟು ಉಳಿದ ದೇಶಗಳಲ್ಲಿದೀಗ ಬಳಸಲ್ಪಡುವುದು ಅಷ್ಟಕ್ಕಷ್ಟೆ. ಅದಕ್ಕೆ ಕಾರಣಗಳೂ ಇಲ್ಲದಿಲ್ಲ. ಯಾವ ಘಾಟುವಾಸನೆಗೆ ನಾವಿದನ್ನಿಲ್ಲಿ ಬಳಸುತ್ತಿದ್ದೇವೆಯೋ ಅದೇ ಕಾರಣಕ್ಕೆ ಈ ಇಂಗನ್ನು ದ್ವೇಷಿಸುವವರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಅದಕ್ಕೆ ಪೂರಕವೆಂಬಂತೆ ಜರ್ಮನ್, ಫ್ರೆಂಚ್ ಭಾಷೆಗಳಲ್ಲಿ ಇಂಗಿನ ಹೆಸರನ್ನು ಅನುವಾದಿಸಿದರೆ ದೆವ್ವದ ಮಲ ಎಂಬರ್ಥ ಕೊಡುತ್ತದೆ.

ಅಚ್ಚರಿಯ ವಿಷಯವೇನೆಂದರೆ ಇಷ್ಟೆಲ್ಲ ಖ್ಯಾತಿವೆತ್ತ ಇಂಗನ್ನು ಇದುವರೆಗೆ ಭಾರತದಲ್ಲಿ ಬೆಳೆದೇ ಇಲ್ಲ. ಸದ್ಯದ ಮಟ್ಟಿಗೆ ಇಂಗನ್ನು ಹೆಚ್ಚು ಬಳಸಿ ಬೆಳೆಯುವ ರಾಷ್ಟ್ರಗಳಾದ ಇರಾನ್‌ ಮತ್ತು ಅಫ್ಗಾನಿಸ್ತಾನದ ಹೊರಗೆ ಜಾಗತೀಕವಾಗಿ ಭಾರತವೇ ಅತಿದೊಡ್ಡ ಮಾರುಕಟ್ಟೆಯಾಗಿದ್ದು ಅಪಘಾನಿಸ್ತಾನ ಮತ್ತು ಉಜ್ಬೇಕಿಸ್ತಾನದಿಂದ ಆಮದಾಗುವ ಇಂಗಿಗಾಗಿ ನಾವು ಅವಲಂಬಿತರಾಗಿದ್ದೇವೆ. ಭಾರತವು ಪ್ರತಿವರ್ಷ ಸುಮಾರು ಒಂದುವರೆ ಸಾವಿರ ಟನ್ ಇಂಗನ್ನು ಆಮದು ಮಾಡಿಕೊಳ್ಳುವುದರಿಂದ ಅದರ ಬಾಬ್ತೇ 950 ಕೋಟಿ ರೂಪಾಯಿಗಳಷ್ಟಾಗುತ್ತದೆ.

ಹಿಮಾಚಲ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ ಜಂಟಿಯಾಗಿ ಸ್ಥಳೀಯವಾಗಿ ಇಂಗನ್ನು ಬೆಳೆಯುವ ಯೋಜನೆ ಹಾಕಿಕೊಂಡಿವೆ. ಈ ಯೋಜನೆಯ ಮೊದಲ ಭಾಗವಾಗಿ ಇಂಗಿನ ಮೂಲಸ್ಥಾನವಾದ ಇರಾನ್ ಮತ್ತು ಅಫ್ಗಾನ್‌ನಂತೆ ಹವಾಮಾನವುಳ್ಳ ಹಿಮಾಚಲದ ಲಾಹುಲ್‍ಸ್ಪಿತಿ ಕಣಿವೆಯ ಆಯ್ದ ಗದ್ದೆಯೊಂದರಲ್ಲಿ ಸ್ಥಳೀಯ ರೈತರ ಸಹಾಯದಿಂದ ಕಳೆದ ಅಕ್ಟೋಬರ್‌ನಲ್ಲಿ 800 ಸಸಿಗಳನ್ನು ನೆಡಲಾಗಿದೆ. ಪರಿಣತರ ತಂಡವು ಗಮನಿಸಿದಂತೆ ಲಡಾಖ್, ಅರುಣಾಚಲ ಮತ್ತು ಉತ್ತರಾಖಂಡದಲ್ಲೂ ಇಂಗನ್ನು ಬೆಳೆಸುವ ಸಾಧ್ಯತೆಯಿದ್ದು ಆ ನಿಟ್ಟಿನಲ್ಲೂ ಅವರ ಪ್ರಯತ್ನ ಸಾಗಿದೆ.

ಮುಂದಿನ ದಿನಗಳು ಸವಾಲಿನದ್ದಾಗಿದ್ದು ಲಾಹುಲ್ ಗದ್ದೆಯಲ್ಲಿ ಬೆಳೆಯುತ್ತಿರುವ ಸಸಿಗಳು ಇಂಗಿನ ಅಂಟನ್ನು ಜಿನುಗಿಸುವಷ್ಟು ಸಮರ್ಥವಾಗಲು ಇನ್ನೂ ನಾಲ್ಕೈದು ವರ್ಷ ಕಾಯಬೇಕಾಗಿದೆ. ಎಲ್ಲ ಬೆಳೆಗಳಂತೆಯೇ ಇಂಗಿನ ಘಮಲಿಗೂ ಪ್ರದೇಶದಿಂದ ಪ್ರದೇಶಕ್ಕೆ ವ್ಯತ್ಯಾಸವಿದ್ದು ಇರಾನಿನ ಇಂಗು ಅಫ್ಗಾನಿಸ್ತಾನದ ಇಂಗಿಗಿಂತ ಕಡಿಮೆ ಘಾಟು ಹಾಗೂ ಕೊಂಚ ಹುಳಿಯಾಗಿರುತ್ತದೆ. ಅಫ್ಗಾನಿಸ್ತಾನದಲ್ಲಿ ಬೆಳೆಯುವ ಇಂಗಿನಲ್ಲೂ ಹಲವು ವಿಧಗಳಿದ್ದು ಕಂದಹಾರದ ಇಂಗು ಜಾಗತಿಕವಾಗಿ ಅತ್ಯಂತ ಉತ್ಕೃಷ್ಟ ದರ್ಜೆಯದೆಂದು ಹೆಸರು ಗಳಿಸಿದರೆ ಹೆರಾತದ ಇಂಗಿಗೆ ಅದರ ನಂತರದ ಸ್ಥಾನವಿದೆ.

ನಾಲ್ಕು ವರ್ಷಗಳ ನಂತರ ಜಿನುಗುವ ಭಾರತದ ಮಣ್ಣಿನ ಪ್ರಥಮ ಇಂಗಿನ ಅಂಟು ಯಾವ ಮಟ್ಟಿನ ಘಾಟನ್ನು ನೀಡಬಲ್ಲದು ಎಂಬುದರ ಮೇಲೆ ಈ ಎಲ್ಲ ಪ್ರಯತ್ನದ ಯಶಸ್ಸು ನಿರ್ಧಾರವಾಗಲಿದೆ. ಈ ಪ್ರಯತ್ನ ಫಲಕೊಟ್ಟು ಮೊದಲ ಇಂಗಿನ ಘಾಟು ಜೋರಾಗಿಯೇ ಹೊರಹೊಮ್ಮಿದರೆ ನಮ್ಮ ನಿಮ್ಮ ಮನೆಯ ಸಾಂಬಾರಿನಿಂದ ಆತ್ಮನಿರ್ಭರತೆಯ ಒಗ್ಗರಣೆಯ ಘಾಟು ಹೊರಹೊಮ್ಮಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT