ಭಾನುವಾರ, ನವೆಂಬರ್ 17, 2019
20 °C

ಮಹಿಳೆಯರ ಅಚ್ಚುಮೆಚ್ಚಿನ ಆಭರಣ ‘ಕೈ ಬಳೆ’ ನಾದಕೆ...

Published:
Updated:
Prajavani

ಕಾಲ ಬದಲಾದಂತೆ ಬಳೆಯಲ್ಲೂ ಅನೇಕ ರೀತಿಯ ಬದಲಾವಣೆಗಳಾಗಿದ್ದು, ಹೊಸ ಮಾದರಿ, ಹೊಸ ವಿನ್ಯಾಸ ಪಡೆದು ಮಾರುಕಟ್ಟೆಗೆ ಲಗ್ಗೆ ಇಡುತ್ತಿವೆ. ಮಹಿಳೆಯರ ಅಲಂಕಾರ ಪೂರ್ಣವಾಗಲು ಬಳೆ ಸಹ ಪ್ರಮುಖ ಪಾತ್ರ ವಹಿಸುತ್ತದೆ. ಅದಕ್ಕಾಗಿಯೇ ಬಳೆಗಳು ಮಹಿಳೆಯರ ಅಚ್ಚುಮೆಚ್ಚಿನ ಆಭರಣ. ಆಧುನಿಕ ಕಾಲದಲ್ಲೂ ಸಹ ಹುಡುಗಿಯರು ಬಳೆ ತೊಡದೆ ಇರಲಾರರು. ಮದುವೆ, ನಿಶ್ಚಿತಾರ್ಥ, ಹಬ್ಬ-ಹರಿದಿನಗಳಂತ ಸಮಾರಂಭಗಳಲ್ಲಂತೂ ಮಹಿಳೆಯರ ಕೈ ಬಳೆಗಳ ಘಲ್ ಘಲ್ ಶಬ್ದ ಕೇಳಲು ಖುಷಿ ಎನಿಸುತ್ತದೆ. ಕೆಲವು ಮಹಿಳೆಯರು ಬಳೆಯನ್ನು ಭಾರ, ಕೆಲಸದ ವೇಳೆ ಕಿರಿಕಿರಿ ಎನಿಸುತ್ತದೆ ಎಂದರೂ, ವಿಶೇಷ ಸಮಾರಂಭಗಳಲ್ಲಿ ಬಳೆ ತೊಟ್ಟು ಕೈಗಳ ಅಂದವನ್ನು ಹೆಚ್ಚಿಸಿಕೊಳ್ಳುವಲ್ಲಿ ಹಿಂಜರಿಯುವುದಿಲ್ಲ.

ಹಳೆಯ ಕಾಲದ ಗಾಜಿನ ಬಳೆಗಳು
ಅಮ್ಮ, ಅಜ್ಜಿ ಹಾಕುತ್ತಿದ್ದ ಬಳೆಗಳು ಸಾಮಾನ್ಯವಾಗಿ ಒಂದೇ ಬಣ್ಣದ, ಸರಳವಾದ ಗಾಜಿನ ಬಳೆಗಳಾಗಿರುತ್ತಿದ್ದವು. ಕೆಂಪು, ನೀಲಿ, ಹಸಿರು, ನೇರಳೆ, ಕಿತ್ತಳೆ.. ಹೀಗೆ ಎಲ್ಲಾ ಬಣ್ಣದ ಬಳೆಗಳು ಪ್ಲೇನ್‌ ವಿನ್ಯಾಸದಲ್ಲಿ ಲಭ್ಯವಿದ್ದವು. ಕಾಲ ಬದಲಾದಂತೆ ಬಳೆಗಳು ವಿನ್ಯಾಸದಲ್ಲಿ, ಬಣ್ಣದಲ್ಲಿ ಹಲವು ಬದಲಾವಣೆಗಳನ್ನು ಪಡೆದುಕೊಂಡವು. ಬರಬರುತ್ತಾ ಬಳೆಗಳಲ್ಲಿ ಚುಕ್ಕಿ, ಸಣ್ಣ ಕುಸುರಿ ಇರುವಂತಹ ಬಳೆಗಳು ಮಾರುಕಟ್ಟೆಯಲ್ಲಿ ಸ್ಥಾನ ಪಡೆದು ಹೆಂಗಳೆಯರು ಹೆಚ್ಚು ಇಷ್ಟಪಡುವಂತೆ ಮಾಡಿದವು. ವಿವಿಧ ಸಿನಿಮಾ ಹೆಸರಿನಲ್ಲಿಯೂ ಖ್ಯಾತಿ ಪಡೆದವು. ಸದ್ಯಕ್ಕೆ ಮರ, ಲೋಹ, ದಾರ, ಕಲ್ಲು, ಅರಗು, ದಂತ, ಪ್ಲಾಸ್ಟಿಕ್‌, ಮುತ್ತು, ಹರಳಿನ ಬಳೆಗಳು ಬಂದರೂ ಸಾಂಪ್ರಾದಾಯಕ ಶೈಲಿಯ ಗಾಜಿನ ಬಳೆಗಳ ಸ್ಥಾನವನ್ನು ಈಗಿನ ಬಳೆಗಳು ತುಂಬಲಾರವು. ಆಧುನಿಕ ಕಾಲಕ್ಕೆ ಹಾಗೂ ಹೆಣ್ಣು ಮಕ್ಕಳ ಅಭಿರುಚಿಗೆ ತಕ್ಕಂತೆ ಬಳೆಗಳಲ್ಲೂ ಅನೇಕ ರೀತಿಯಲ್ಲಿ ಬದಲಾವಣೆಗಳಾಗಿವೆ.

ರೇಷ್ಮೆ ದಾರದ ಬಳೆಗಳು
ಸರಳವಾದ ಗಾಜಿನ ಬಳೆಗಳಿಗೆ ವಿವಿಧ ಬಣ್ಣದ ರೇಷ್ಮೆ ದಾರವನ್ನು ಸುತ್ತಿ ಅಂದವಾಗಿ ಕಾಣುವಂತೆ ತಯಾರಿಸಲಾಗುತ್ತದೆ. ಈ ಬಳೆಗಳು ಆಧುನಿಕ ಮತ್ತು ಸಾಂಪ್ರದಾಯಕ ಶೈಲಿಯ ಉಡುಪುಗಳಿಗೆ ಹೇಳಿ ಮಾಡಿಸಿದಂತೆ ಇರುತ್ತವೆ. ರೇಷ್ಮೆ ದಾರದ ಬಳೆಗಳೂ ಸಾಂಪ್ರದಾಯಕ ನೋಟ ನೀಡುತ್ತವೆ.

ಯುವತಿಯರು ಇಷ್ಟಪಡುವ ಮರದ ಬಳೆಗಳು
ಕಾಲೇಜಿಗೆ, ನೌಕರಿಗೆ ಹೋಗುವ ಯುವತಿಯರು ಹೆಚ್ಚಾಗಿ ಶಬ್ದ ಮಾಡದ ಹಾಗೂ ಭಾರವೆನಿಸದ ಮರದ ಬಳೆಗಳನ್ನು ತೊಡುವುದು ಹೆಚ್ಚು. ಅದರಲ್ಲೂ ಮರದ ಬಳೆಗಳು ಯಾವುದೇ ರೀತಿಯಲ್ಲೂ ಕಿರಿ ಕಿರಿ ಎನಿಸುವುದಿಲ್ಲ. ನಿರ್ವಹಿಸುವುದು ಸುಲಭ ಹಾಗೂ ಕೈಗಳ ಸೌಂದರ್ಯವನ್ನು ಹೆಚ್ಚಿಸುವುದರಿಂದ ಈ ಬಳೆಗಳು ಹುಡುಗಿಯರ ಅಚ್ಚುಮೆಚ್ಚಿನ ಬಳೆಗಳಾಗಿವೆ. ಮರದ ಬಳೆಗಳು ಗಾಜಿನ ಬಳೆಯಂತೆ ಕಾಣುವುದರಿಂದ ಸಾಂಪ್ರದಾಯಿಕ ಲುಕ್ ಹೊಂದಿದ್ದು ಆಧುನಿಕ ಬಟ್ಟೆಗಳಿಗೂ ಇವು ಮ್ಯಾಚ್ ಆಗುತ್ತವೆ. ಮರದ ಬಳೆಗಳಲ್ಲೂ ಅನೇಕ ವಿಧಗಳಿವೆ. ವಿವಿಧ ಬಗೆಯ ವಿನ್ಯಾಸ, ಬಣ್ಣ, ಆಕಾರಗಳನ್ನು ಹೊಂದಿರುತ್ತವೆ. ವೈಟ್ ವುಡನ್ ಬಳೆಗಳು, ಹ್ಯಾಂಡ್ ಪೇಂಟೆಡ್ ವುಡನ್ ಬಳೆಗಳು, ಕರ್ವ್ಡ್‌ ವುಡನ್ ಬಳೆಗಳು, ಸಿಲಿಂಡ್ರಿಕಲ್ ಬಳೆಗಳು, ಪಾಲಿಶ್‌ ಆದ ವುಡನ್ ಬಳೆಗಳು, ಹರಳುಗಳು ಇರುವ ಬಳೆಗಳು ಬಳೆ ಅಂಗಡಿಗಳಲ್ಲಿ ವಿಶೇಷ ಸ್ಥಾನ ಪಡೆದುಕೊಂಡಿವೆ.

ಆಧುನಿಕ ಬ್ರೇಸ್ಲೆಟ್‌ಗಳು
ಹೆಣ್ಣುಮಕ್ಕಳು ಒಂದೇ ತರಹದ ಬಳೆಗಳನ್ನು ಹೆಚ್ಚಾಗಿ ಬಳಸಲು ಇಷ್ಟಪಡುವುದಿಲ್ಲ. ಹಾಗಾಗಿ ಮಾರುಕಟ್ಟೆಯಲ್ಲಿ ಬಳೆಯನ್ನೇ ಹೋಲುವ ವಿಶೇಷ ಆಕಾರ, ಶೈಲಿ, ಬಣ್ಣವನ್ನು ಹೊಂದಿರುವ ಬ್ರೇಸ್ಲೆಟ್‌ಗಳು ಬಂದಿವೆ. ಇವು ಕೂಡಾ ಫ್ಯಾಷನ್ ಪ್ರಿಯರಿಗೆ ಇಷ್ಟವಾಗುತ್ತವೆ. ವಿವಿಧ ಬಣ್ಣದ ಮಣಿ, ಲೋಹ, ಕಲ್ಲು, ಹರಳು, ಬಂಗಾರ, ಬೆಳ್ಳಿ, ಪಚ್ಚೆ, ತಾಮ್ರ, ಗಾಜು, ಮರ, ರಬ್ಬರ್, ಚರ್ಮ, ದಂತದ ಬ್ರೇಸ್ಲೆಟ್‌ಗಳು ಇಂದು ಮಹಿಳೆಯರ ಅಚ್ಚುಮೆಚ್ಚು.

ಕಾಲಕ್ಕೆ ತಕ್ಕಂತೆ ಫ್ಯಾಷನ್ ಲೋಕದಲ್ಲಾಗುವ ಬದಲಾವಣೆಗಳೊಂದಿಗೆ ಬಳೆಯ ವಿನ್ಯಾಸ, ಬಣ್ಣ ಎಲ್ಲದರಲ್ಲೂ ಬದಲಾವಣೆ ಕಾಣುತ್ತಿದೆ. ವೃತ್ತಾಕಾರ, ಅಂಡಾಕಾರ, ಚೌಕ, ನಕ್ಷತ್ರ ಹೀಗೆ ಬಗೆಬಗೆಯಲ್ಲಿ ವಿನ್ಯಾಸಗೊಳ್ಳುತ್ತಿರುವ ಬಳೆಗಳನ್ನು ಮಕ್ಕಳು, ಹುಡುಗಿಯರು, ಮಧ್ಯವಯಸ್ಕ ಮಹಿಳೆಯರು, ವೃದ್ಧೆಯರು ಇಷ್ಟಪಡುತ್ತಾರೆ. ಅದರಲ್ಲೂ ಈ ರೀತಿಯ ಆಕರ್ಷಣೀಯ ಬಳೆಗಳು, ಬ್ರೇಸ್ಲೆಟ್‌ಗಳು ವಿದೇಶಿಯರೂ ಧರಿಸುವಂತೆ ಮಾಡುತ್ತಿರುವುದು ವಿಶೇಷ.

ಬಣ್ಣದ ಬಳೆಗಳ ವಿಶೇಷತೆ
ಹೆಂಗಳೆಯರು ಧರಿಸುವ ಬಳೆಗಳ ಬಣ್ಣಗಳಿಗೆ ಅನೇಕ ವಿಶೇಷತೆಗಳಿವೆ. ಅಂದ ಹೆಚ್ಚಿಸುವುದರ ಜೊತೆಗೆ ಸಂಪ್ರದಾಯವನ್ನು ಪ್ರತಿನಿಧಿಸುವ ಈ ಬಳೆಗಳ ಬಣ್ಣದ ವಿಶೇಷತೆ, ಅರ್ಥವನ್ನು ತಿಳಿದುಕೊಳ್ಳೋಣ.

ಬಿಳಿ ಬಣ್ಣ - ಶುಭ್ರತೆಯ ಪ್ರತೀಕ, ನೇರಳೆ ಬಣ್ಣ- ಸ್ವಾತಂತ್ರ್ಯವನ್ನು ಪ್ರತಿನಿಧಿಸುತ್ತದೆ. ಹಸಿರು ಬಣ್ಣ- ಸಮೃದ್ಧಿ, ಅದೃಷ್ಟದ ಸಂಕೇತ, ಹಳದಿ ಬಣ್ಣ- ಸಂತೋಷ, ಕಿತ್ತಳೆ ಬಣ್ಣ- ಯಶಸ್ಸು, ಕಪ್ಪು ಬಣ್ಣ- ಶಕ್ತಿ ಮತ್ತು ಅಧಿಕಾರ, ಚಿನ್ನದ ಬಣ್ಣ- ಭಾಗ್ಯವನ್ನು ನೀಡುತ್ತದೆ ಎನ್ನುವ ನಂಬಿಕೆ ಇದೆ.

ಬಳೆಗಳಲ್ಲಾದ ಆಧುನಿಕ ಬದಲಾವಣೆ
ಬಳೆಗಳ ವಿನ್ಯಾಸ, ಆಕಾರ, ಸ್ವರೂಪದಲ್ಲಿ ಬದಲಾವಣೆಯಾಗಿವೆ. ಗಾಜಿನ ಬಳೆಗಳ ಬದಲು ವಿವಿಧ ಲೋಹಗಳ ಬಳೆಗಳು ಬಂದವು. ಹಿಂದಿನ ಕಾಲದ ಹೆಣ್ಣುಮಕ್ಕಳು ಪ್ರತಿದಿನ ಕೈ ತುಂಬಾ ಗಾಜಿನ ಬಳೆಗಳನ್ನು ತೊಡುತ್ತಿದ್ದರು. ಆದರೆ ಈಗ ಕೈತುಂಬಾ ಬಳೆಗಳು ಕೇವಲ ಹಬ್ಬ-ಹರಿದಿನಗಳಲ್ಲಿ ಮಾತ್ರ ಕಾಣಬಹುದಾಗಿದೆ.

ಎಚ್ಚರಿಕೆ ಕ್ರಮಗಳು
ಸಾಮಾನ್ಯವಾಗಿ ಗಾಜಿನ ಬಳೆಗಳನ್ನು ಹಾಕುವಾಗ ಸೀಳುವ ಅಥವಾ ಒಡೆಯುವ ಸಂಭವವಿರುತ್ತದೆ. ಇದರಿಂದ ಕೈಗೆ ಗಾಯವಾಗುತ್ತದೆ. ಆದ್ದರಿಂದ ಕೈಗೆ ಬಳೆಗಳನ್ನು ಹಾಕುವ ಮುನ್ನ ಯಾವುದಾದರೂ ಲೋಷನ್ ಹಚ್ಚಿ ಗಾಜಿನ ಬಳೆಗಳನ್ನು ಧರಿಸುವುದು ಉತ್ತಮ.

ಪ್ರತಿಕ್ರಿಯಿಸಿ (+)