ಮಂಗಳವಾರ, ಮಾರ್ಚ್ 9, 2021
26 °C

ಜಾತಿ ಸಂಕೋಲೆಯೊಳಗೆ ಪ್ರಜಾಪ್ರಭುತ್ವ

ಎಚ್.ಎಚ್. ನದಾಫ ಹತ್ತಿಮತ್ತೂರು Updated:

ಅಕ್ಷರ ಗಾತ್ರ : | |

Prajavani

ಬಹುಪಾಲು ಜಾತಿಗಳು ಮಠಮಾನ್ಯಗಳನ್ನು ಕಟ್ಟಿಕೊಂಡಿವೆ. ಅವುಗಳು ಪ್ರಜಾಪ್ರಭುತ್ವದ ಬೇರುಗಳನ್ನು ಅಲುಗಾಡಿಸುತ್ತಿವೆ. ಪ್ರಾಕೃತಿಕ, ಸಾಮಾಜಿಕ ಮತ್ತು ಆರ್ಥಿಕ ಸಂಕಷ್ಟಗಳ ನಿರ್ವಹಣೆಗಳಿಗಿಂತ ಜಾತಿ ಮೇಲಾಟಗಳ ನಿರ್ವಹಣೆಯೇ ಸರ್ಕಾರ ನಡೆಸುವವರಿಗೆ ದೊಡ್ಡ ಸವಾಲು. ಈ ಆಟ ಪ್ರಜಾಪ್ರಭುತ್ವವನ್ನು ಯಾವ ದಾರಿಯಲ್ಲಿ ಕರೆದೊಯ್ಯಬಹುದು?

ನಮ್ಮ ಸಂವಿಧಾನ ಜಾರಿಗೆ ಬಂದು ಏಳು ದಶಕಗಳಾಗಿವೆ. ನಮ್ಮ ಹಿರಿಯರು ಅಪೇಕ್ಷೆಪಟ್ಟಂತಹ ಪ್ರಜಾಪ್ರಭುತ್ವವನ್ನು ಕಟ್ಟುವಲ್ಲಿ ಇಂದಿನ ಪೀಳಿಗೆ ಸೋತಂತೆ ಭಾಸವಾಗುತ್ತದೆ. ಈಗೀಗ ನಮ್ಮ ಪ್ರಜಾಪ್ರಭುತ್ವ ಎನ್ನುವುದು ಜಾತಿ ಪ್ರಭುತ್ವವಾಗಿ ಹೊರಹೊಮ್ಮುತ್ತಿದೆ. ಯಾವುದೇ ತರಹದ ಪ್ರಜಾಸತ್ತಾತ್ಮಕ ಚುನಾವಣೆಗಳು ನಡೆಯಲಿ, ಅಲ್ಲಿ ಜಾತಿಯೆಂಬ ಪೆಡಂಭೂತ ನುಸುಳಿಕೊಂಡು ತನ್ನ ವಿರಾಟ ಸ್ವರೂಪವನ್ನು ತೋರಿಸುತ್ತಿದೆ. ಈಗಿನ ಯುವಕರಂತೂ ಜಾತಿ-ಸಮುದಾಯವನ್ನೇ ಮುಂದುಮಾಡಿಕೊಂಡು ಚುನಾವಣೆಗೆ ನಿಲ್ಲುವುದನ್ನು ಕಾಣುತ್ತೇವೆ.

ಹಿಂದೆಂದಿಗಿಂತ ಇಂದು ಜಾತಿಯ ಅಂಧಾಭಿಮಾನ ವಿಪರೀತವಾಗಿದ್ದು, ಗ್ರಾಮಗಳ ಹಿರಿಯರ ಮತ್ತು ಸಮಚಿತ್ತಜ್ಞಾನಿಗಳ ಕೈಗೆ ನಿಲುಕಲಾರದಷ್ಟೂ ದೂರ ಹೋಗುತ್ತಿದೆ. ಯುವಕರ ಈ ಗುಂಪುಗಾರಿಕೆಯ ರಭಸಕ್ಕೆ ಗ್ರಾಮದ ಹಿರಿಯ ಜೀವಗಳು, ಸಮಾಜದ ಹಿತೈಷಿಗಳು, ಗ್ರಾಮದ ದಾನಿಗಳು, ಎಲ್ಲಾ ಸಮುದಾಯಕ್ಕೆ ಬೇಕಾಗಿದ್ದ ನಂಬಿಕಸ್ಥರು ಹಿಂದೆ ಸರಿದಿದ್ದಾರೆ. ಏಕೆ ಚುನಾವಣೆಯಿಂದ ದೂರ ಸರಿದಿರಿ ಎಂದು ಕೇಳಿದರೆ, ‘ನಮ್ಮಂತವರು ನಿಂತು ಆರಿಸಿ ಬರುವಂತಹ ಕಾಲವಲ್ಲವಿದು, ನೀತಿಬಿಟ್ಟು ಜಾತಿ ಹಿಡಿದು ಮತಹಾಕುವವರ ಕಾಲವಿದು. ಹಣ–ಹೆಂಡ, ಜಾತಿ-ಧರ್ಮಗಳೇ ಈಗಿನ ರಾಜಕೀಯ ಮಾನದಂಡಗಳಾಗಿವೆ’ ಎಂಬ ಉತ್ತರವನ್ನು ನೀಡುತ್ತಾರೆ.

ಬಹುಪಾಲು ಜಾತಿಗಳು ತಮ್ಮದೇ ಆದಂತಹ ಮಠಮಾನ್ಯಗಳನ್ನು ಕಟ್ಟಿಕೊಂಡಿವೆ. ಅವುಗಳು ಪ್ರಜಾಪ್ರಭುತ್ವದ ಬೇರುಗಳನ್ನು ಅಲುಗಾಡಿಸುತ್ತಿವೆ. ಏಕೆಂದರೆ, ಅವುಗಳ ಮೂಲಕ ಜಾತಿ ಭ್ರಮೆ ಮತ್ತಷ್ಟು ಗಟ್ಟಿಯಾಗಿ ಬೇರೂರುತ್ತಿದೆ. ಜಾತಿರಹಿತ ಪ್ರಜಾಪ್ರಭುತ್ವ ಕಟ್ಟಬೇಕೆನ್ನುವ ಮಹನೀಯರ ಆಶಯಕ್ಕೆ ಈ ಬೆಳವಣಿಗೆ ತದ್ವಿರುದ್ಧವಾಗಿದೆ. ಇನ್ನು ಆ ಮಠಗಳ ಪೀಠಾಧ್ಯಕ್ಷರು ತಮ್ಮ ಜಾತಿಯ ಸಮುದಾಯಕ್ಕಷ್ಟೇ ಮೀಸಲಾಗಿ ಗುರುಪೀಠದ ಸ್ಥಾನವನ್ನು ಕುಬ್ಜಗೊಳಿಸಿದ್ದಾರೆ. ವಿಶ್ವ ಮಾನವತ್ವದ ಕಲ್ಪನೆ ಹಲವು ಸ್ವಾಮೀಜಿಗಳಲ್ಲಿ ಮರೆಯಾಗಿ ಸ್ವಜಾತಿ ಪ್ರೇಮ ಹೆಮ್ಮರವಾಗಿ ಬೆಳೆಯುತ್ತಿದೆ.

ತಮ್ಮ ಜಾತಿಯವರೇ ನಿಲ್ಲಬೇಕು, ತಮ್ಮ ಜಾತಿಯವರೇ ಆರಿಸಿ ಬರಬೇಕು, ತಮ್ಮ ಜಾತಿಯವರಿಗೇ ಅಧಿಕಾರ ಸಿಗಬೇಕು ಎನ್ನುವ ಭ್ರಮೆ ಆಯಾ ಮಠಗಳ ನೇತಾರರ ಮಿದುಳಿನಲ್ಲಿ ಅಚ್ಚೊತ್ತಿದೆ. ಹಾಗಾಗಿ ಚುನಾವಣೆಗಳು ಬಂದಾಗ ಮಠಮಾನ್ಯಗಳ ಸ್ವಾಮೀಜಿಗಳಿಗೆ ಎಲ್ಲಿಲ್ಲದ ಬೇಡಿಕೆ. ತಮ್ಮ ಜಾತಿಯ ಭಕ್ತರನ್ನು ಒಟ್ಟುಗೂಡಿಸುವ ಹಲವು ಸ್ವಾಮೀಜಿಗಳು ಒಂದೊಂದು ಪಕ್ಷದ ನೇತಾರರೊಂದಿಗೆ ಸಂಬಂಧ ಬೆಳೆಸಿಕೊಂಡು ಆ ಪಕ್ಷಕ್ಕೆ ಬದ್ಧರಾಗಿ ನಡೆದುಕೊಳ್ಳುತ್ತಾರೆ. ತಮ್ಮ ಬದ್ಧತೆಯ ಪಕ್ಷ ಅಧಿಕಾರಕ್ಕೆ ಬಂದರೆ, ತಮ್ಮ ತಮ್ಮ ಜಾತಿಯ ಪ್ರಾಧಾನ್ಯವನ್ನು ಪ್ರತಿಪಾದಿಸಿ ಬೇಡಿಕೆಗಳ ಪಟ್ಟಿಯನ್ನು ನೀಡುತ್ತಾರೆ. ಸಾಮಾಜಿಕ ಸ್ವಾಸ್ಥ್ಯ ಕಾಪಾಡಬೇಕಾದ ಸ್ವಾಮೀಜಿಗಳೇ ಜಾತಿ ಅಸ್ತ್ರವನ್ನು ಬಳಸಿದರೆ ಜಾತಿ ಸಾಮರಸ್ಯ ಉಳಿಯುವುದಾದರೂ ಹೇಗೆ? ಸಣ್ಣ ಸಣ್ಣ ಅಸಂಘಟಿತ ಜಾತಿ ಸಮುದಾಯಗಳಿಗೆ ರಕ್ಷಣೆಯಾಗಬೇಕಾಗಿದ್ದ ದೊಡ್ಡ ಜಾತಿಗಳು ತಿಮಿಂಗಲಗಳಾದರೆ ಅವು ಬದುಕುವುದಾದರೂ ಹೇಗೆ?

ಈಗಿನ ಪ್ರಜಾಪ್ರಭುತ್ವದ ರಾಜಕಾರಣಿಗಳಿಗೆ ಜಾತಿ ಪ್ರಾಧಾನ್ಯವೇ ಹೊರತು ಪ್ರತಿಭೆ ಅಲ್ಲ. ಅವರ ಆಲೋಚನೆಯ ಬಗೆಯನ್ನು ನೋಡಿದರೆ ಅವರಿಗೆ ಜಾತಿ ಅಭಿಮಾನ ಮುಖ್ಯವಾಗಿದೆ ಹೊರತು ತಮ್ಮನ್ನು ಆರಿಸಿ ತಂದ ಕ್ಷೇತ್ರದ ಅಭಿಮಾನ ಅಲ್ಲವೇ ಅಲ್ಲವೆನಿಸುತ್ತದೆ. ಹೀಗೆಯೇ ಮುಂದುವರಿದರೆ ಕ್ಷೇತ್ರದ ಅಭಿವೃದ್ಧಿಗಿಂತ ಜಾತಿ ಅಭಿವೃದ್ಧಿಯೇ ಪ್ರವರ್ಧಮಾನಕ್ಕೆ ಬರುತ್ತದೆ. ಈಗ ಜಾತಿಗೊಂದು ನಿಗಮ ಸ್ಥಾಪನೆ ಮೂಲಕ ಅದನ್ನು ಆಗುಮಾಡಿಕೊಳ್ಳುತ್ತಿದ್ದಾರೆ.

ರಾಜ್ಯ ಎದುರಿಸುತ್ತಿರುವ ಪ್ರಾಕೃತಿಕ, ಸಾಮಾಜಿಕ ಮತ್ತು ಆರ್ಥಿಕ ಸಂಕಷ್ಟಗಳ ನಿರ್ವಹಣೆಗಳಿಗಿಂತ ಜಾತಿ ಮೇಲಾಟಗಳ ನಿರ್ವಹಣೆಯೇ ಸರ್ಕಾರದ ನೇತೃತ್ವ ವಹಿಸಿದವರಿಗೆ ದೊಡ್ಡ ಸವಾಲಾಗಿದೆ. ಜಾತಿ ಹಣೆಪಟ್ಟಿ ರಾಜಕೀಯ ಜೀವನದ ಒಂದು ಅವಿಭಾಜ್ಯ ಅಂಗವಾಗಿದೆ. ರಾಜಕೀಯ ವ್ಯಕ್ತಿಗಳು ಬದುಕಿನಲ್ಲಿ ತೆಗೆದುಕೊಳ್ಳುವ ನಿರ್ಧಾರಗಳು ಜಾತಿ ಕೇಂದ್ರಿತವಾಗಿದ್ದು, ಅವರು ಗುರುತಿಸಿಕೊಳ್ಳುವ ಬಗೆಯು ಇದೇ ಆಗಿದೆ.

ಜಾತಿಯ ಹೆಸರಿನಲ್ಲಿ ಅಧಿಕಾರವನ್ನು ಪಡೆಯುವವರು ಹಾಗೂ ಜಾತಿಯನ್ನು ಮುಂದಿಟ್ಟುಕೊಂಡು ಅಧಿಕಾರ ಕೇಳುವ ಮತ್ತು ಸ್ವಜಾತಿ ನಾಯಕರಿಗೆ ಬೆಂಬಲವನ್ನು ನೀಡುವ ಪ್ರಕ್ರಿಯೆ ಜೋರಾಗಿದೆ. ಅವಕಾಶ ಸಿಕ್ಕರೆ ಪಕ್ಷ ಮತ್ತು ತತ್ವ-ಸಿದ್ಧಾಂತಗಳನ್ನಾದರೂ ಕಡೆಗಣಿಸಿ ತಮ್ಮ ಸ್ವಜಾತಿಯ ಬಾಂಧವರೊಡನೆ ಸೇರಿಕೊಂಡು ಸರ್ಕಾರ ರಚಿಸುವ ಹಂತಕ್ಕೆ ಬರುತ್ತಾರೆ. ನಮ್ಮ ಸಂವಿಧಾನ ಜಾತಿಮಾನದಂಡವನ್ನು ಅಲ್ಲಗಳೆದರೆ, ನಮ್ಮ ರಾಜಕೀಯ ಪಕ್ಷಗಳು ಜಾತಿ ಮಾನದಂಡವನ್ನು ಪ್ರಬಲವಾಗಿ ಬಲಪಡಿಸುತ್ತಿವೆ. ಹೀಗಾಗಿಯೇ ಅನೇಕ ರಾಜ್ಯಗಳಲ್ಲಿ, ರಾಜಕೀಯ ಅಧಿಕಾರ ಆ ಪ್ರದೇಶದ ಪ್ರಬಲ ಜಾತಿಗಳ ಕೈಯಲ್ಲಿರುವುದು ಸ್ಪಷ್ಟ. ಸಂಖ್ಯಾಬಲ, ಭೂ ಒಡೆತನ, ಆರ್ಥಿಕ ಪ್ರಾಬಲ್ಯಗಳು ಪ್ರಬಲ ಜಾತಿಗಳ ಸೊತ್ತಾಗಿರುವುದರಿಂದ ರಾಜಕೀಯ ಅಧಿಕಾರವನ್ನು ಪಡೆಯಲು ಮತ್ತು ಅದನ್ನು ಉಳಿಸಿಕೊಳ್ಳಲು ಅವರಿಗೆ ಸುಲಭವಾದ ಮಾರ್ಗವಾಗಿದೆ. ಈ ದೃಷ್ಟಿಯಿಂದ ನಮ್ಮ ದೇಶದ ಅನೇಕ ರಾಜ್ಯಗಳಲ್ಲಿ ಆಳುವ ಪಕ್ಷ ಬದಲಾದರೂ ಆಳುವ ಜಾತಿ ಒಂದೇ ಆಗಿರುತ್ತದೆ.

ರಾಜಕೀಯ ಅಧಿಕಾರವನ್ನು ಪಡೆಯಲು ಎಲ್ಲ ಜಾತಿಗಳ ವ್ಯಕ್ತಿಗಳಿಗೆ ಪ್ರಜಾಪ್ರಭುತ್ವದಲ್ಲಿ ಅಧಿಕಾರ
ವಿದೆ. ಹಾಗೆಂದೇ ಪ್ರಬಲ ಜಾತಿಗಳ ವಿರುದ್ಧ ಸೆಣಸಾಡ
ಲಾಗದ ಸಮಾಜದ ಕಟ್ಟಕಡೆಯ ಜಾತಿಗಳಿಗೆ ಸಂವಿಧಾನದಲ್ಲಿ ಮಿಸಲಾತಿಯನ್ನು ಬಿ.ಆರ್ ಅಂಬೇಡ್ಕರ್ ಒದಗಿಸಿದರು. ಮೀಸಲಾತಿ ಅವಲಂಬಿತ ಜಾತಿಗಳು ಪ್ರವರ್ಧಮಾನಕ್ಕೆ ಬಂದಂತೆ ಜಾತಿ ವ್ಯವಸ್ಥೆ ಹೊರಟು ಹೋಗುತ್ತದೆ ಎಂದು ಆಶಿಸಿದ್ದರು. ಆದರೆ ಈಗಾಗುವುದನ್ನು ನೋಡಿದರೆ ಆಶ್ಚರ್ಯವಾಗುತ್ತದೆ. ಅವರಿಗೆ ಮೀಸಲಾತಿ ಇದ್ದರೂ ಪ್ರಬಲ ಜಾತಿಯವರು ತಮ್ಮ ಮಾತನ್ನು ಕೇಳುವಂತಹ, ತಮಗೆ ಅಧೀನ
ನಾಗಿರುವಂತಹ, ತಮ್ಮ ಕಾಲಬುಡದಲ್ಲಿ ಕುಳಿತುಕೊಳ್ಳು
ವಂತಹ ವ್ಯಕ್ತಿಗೆ ಟಿಕೆಟ್ ಕೊಡಿಸಿ ಅವನನ್ನು ಆರಿಸಿ ತಂದು ತಮ್ಮ ಬೇಳೆಯನ್ನು ಬೇಯಿಸಿಕೊಳ್ಳುತ್ತಿದ್ದಾರೆ.

ಇಂದು ರಾಜಕೀಯ ಸ್ಪರ್ಧೆ ನಡೆಯುತ್ತಿರುವುದು ತತ್ವಾಧಾರಿತ, ಸರ್ವರ ಹಿತದ ಸಾಮಾಜಿಕ ಮಾನದಂಡಗಳಿಂದಲ್ಲ. ಇದರ ಬದಲಾಗಿ ಬಹುತೇಕ ಕ್ಷೇತ್ರಗಳಲ್ಲಿ ಜಾತಿ ಕೇಂದ್ರಿತವಾಗಿದ್ದು, ಆ ಕ್ಷೇತ್ರದಲ್ಲಿ ಯಾವ ಜಾತಿಯವರು ಅಧಿಕವಾಗಿದ್ದಾರೆಯೋ ಆ ಜಾತಿಯ ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತಿರುವುದು ಸರ್ವೇಸಾಮಾನ್ಯವಾಗಿಬಿಟ್ಟಿದೆ. ಆರಿಸಿಬಂದ ನಮ್ಮ ಪ್ರತಿನಿಧಿಗಳು ಸಾರ್ವಜನಿಕ ವೇದಿಕೆಗಳಲ್ಲಿಯೇ ತಮ್ಮ ಜಾತಿಯ ಜೊತೆ ಗುರುತಿಸಿಕೊಂಡು, ಯಾರಾದರೂ ತಮ್ಮ ಅಧಿಕಾರವನ್ನು ಕಬಳಿಸಲು ಹೊಂಚುಹಾಕಿದರೆ ಅವರು ತಮ್ಮ  ಜಾತಿ ಸಮುದಾಯದ ಜನರ ಕೋಪಕ್ಕೆ ತುತ್ತಾಗಬೇಕಾಗುತ್ತದೆ ಎಂಬ ಭಯವನ್ನು ಸೃಷ್ಟಿಸುತ್ತಾರೆ. ಅಂದರೆ ನಮ್ಮ ಜಾತಿಯವರು ಮುನಿದರೆ ನೀವು ಅಧಿಕಾರಕ್ಕೆ ಬರಲು ಸಾಧ್ಯವೇ ಇಲ್ಲ ಎನ್ನುವ ಬೆದರಿಕೆಯೂ ಇದರಲ್ಲಿ ಇರುತ್ತದೆ.

ಇವತ್ತಿನ ಅನೇಕ ನಾಯಕರು ಸ್ವಜಾತಿಯವರು ಚಲಾಯಿಸುವ ಮತಗಳೇ ಶ್ರೀರಕ್ಷೆ ಎಂಬಂತೆ ಮಾತನಾಡುತ್ತಿದ್ದು, ಉಳಿದ ಸಣ್ಣ ಪುಟ್ಟ ಜಾತಿಗಳವರ ಮತಗಳಿಗೆ ಬೆಲೆಯೇ ಇಲ್ಲದಂತೆ ನಡೆದುಕೊಳ್ಳುತ್ತಿದ್ದಾರೆ. ಭಾರತೀಯ ಸಮಾಜವನ್ನು ಜಾತಿಯ ಹೆಸರಿನಲ್ಲಿ ಹೋಳುಮಾಡಿ, ಜಾತಿ ಜಾತಿಗಳ ನಡುವೆ ಪರಸ್ಪರ ದ್ವೇಷ, ಅಸೂಯೆಯನ್ನು ಸೃಷ್ಟಿಮಾಡಿ, ಸಣ್ಣ ಜಾತಿಯ ಮತದಾರರು ಸದಾ ಪ್ರಬಲ ಜಾತಿಗಳ ನೆರಳಿನಲ್ಲಿ ಬದುಕುವಂತಹ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಸೃಷ್ಟಿಮಾಡುತ್ತಿರುವುದು ಇಂದಿನ ರಾಜಕಾರಣದ ಹುನ್ನಾರವಾಗಿದೆ. ಹೀಗಾದರೆ ಅಸಮರ್ಥ ಮತ್ತು ಅಸಂಘಟಿತ ಸಣ್ಣ ಸಣ್ಣ ಸಮುದಾಯದ ನಾಯಕರು ಮುಂಚೂಣಿಗೆ ಬಂದು ಅಧಿಕಾರ ಹಿಡಿಯಲು ಸಾಧ್ಯವೇ? ಬಸವಣ್ಣನವರ ಕರ್ಮಭೂಮಿಯಲ್ಲಿಯೇ ಹೀಗಾಗುತ್ತಿದೆ ಎಂದರೆ ಆಶ್ಚರ್ಯವಲ್ಲವೇ?

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು